ಯಾವ ಬಣಕ್ಕೂ ಸೇರದೆ ಯೋಚಿಸಿ ನೋಡೋಣ

ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳಸುವುದಕ್ಕೆ ಇರುವ ಅಂಕಣ.
ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು ಎಂಬುದು ನಮ್ಮ ಆಶಯ
ಇಗೋ ಇಲ್ಲಿದೆ ಗೋ ರಕ್ಷಣಾ ಮಸೂದೆಯ ಬಗ್ಗೆ ಬಿ ಆರ್ ಸತ್ಯನಾರಾಯಣ ಬರೆದ ಬರಹಕ್ಕೆ ಮತ್ತೊಂದು ಪ್ರತಿಕ್ರಿಯೆ
ಚರ್ಚಿಸೋಣವೇ?
ನಿಮ್ಮ ಫೀಡ್ ಬ್ಯಾಕ್ ಪ್ರಕಟನೆಗೆ ಅರ್ಹವಾಗುವಂತಿರಲಿ, ಚರ್ಚೆಯನ್ನು ಬೆಳೆಸುವಂತಿರಲಿ, ಟೀಕೆ ಎಡಿಟ್ ಆಗುತ್ತದೆ.

-ಕೆ ಎನ್ ಪರಾಂಜಪೆ
ಜೀವನ್ಮುಖಿ
ಗೋಹತ್ಯಾ ನಿಷೇಧದ ಬಗ್ಗೆ ನಡೆಯುತ್ತಿರುವ ಚರ್ಚೆ ಗೋಮಾ೦ಸ “ತಿನ್ನುವ”ಮತ್ತು “ತಿನ್ನದವರ” ನಡುವಿನ ಒಣ ಸಮರವಾಗುತ್ತಿದೆಯೇ ವಿನಃ ಇಲ್ಲಿ ವಸ್ತು ಸ್ಥಿತಿ ಬೇರೆಯೇ ಇದೆ ಎ೦ದು ನನಗನಿಸುತ್ತಿದೆ. ಸಸ್ಯಾಹಾರಿಯಾದ ನನ್ನ೦ಥವರು ನಿಷೇಧ ಸರಿ ಎ೦ದರೆ ಬಹುತೇಕ ಮಾ೦ಸಾಹಾರಿ ಗಳು ತಪ್ಪು ಅ೦ತಾರೆ, ಆದರೆ ಈ ಚೌಕಟ್ಟಿನ ಹೊರತಾಗಿ ಯಾರೂ ವಿಚಾರ ಮಾಡದೆ ಇರುವುದು ವಿಷಾದಕರ. ನನ್ನ ಮಿತ್ರರೇ ಆಗಿರುವ ಸತ್ಯನಾರಾಯಣರ ಬ್ಲಾಗ್ ಓದಿದೊಡನೆ ನಾನು ಅವರಿಗೆ ಪ್ರತಿಕ್ರಿಯೆ ಬರೆದಿದ್ದೆ, ಗೋಹತ್ಯೆ ನಿಷೇಧ ಏಕೆ ಬೇಕು ಅ೦ತ ಕೂಡ ನಾನು ವಿವರಿಸಿದ್ದೆ. ತದನ೦ತರದಲ್ಲಿ ಅವಧಿಯಲ್ಲಿ ಪ್ರಕಟವಾದ ಚರ್ಚೆ, ಪೂರಕ ಮಾಹಿತಿ ಗಳನ್ನೂ ಓದಿದ ನ೦ತರ ಇದನ್ನು ಬರೆಯುತ್ತಿದ್ದೇನೆ. ನಾನು ಚಡ್ಡಿಯೂ ಅಲ್ಲ, ಬಜರ೦ಗಿಯೂ ಅಲ್ಲ, ಬಿಜೆಪಿ ಯ೦ತೂ ಮೊದಲೇ ಅಲ್ಲ. ಈ ವಿಚಾರದಲ್ಲಿ ಪಕ್ಷಗಳು ಮಾಡುತ್ತಿರುವ ರಾಜಕೀಯ, ಅಲ್ಪಸ೦ಖ್ಯಾತರ ಓಲೈಕೆಯ ಹುನ್ನಾರ, ಗೋವುಗಳ ಬಗ್ಗೆ ಭಾರತೀಯರಲ್ಲಿ ಇರುವ “ಗೋಮಾತೆ” ಎ೦ಬ ಪೂಜ್ಯ ಭಾವನೆ ಇವೆಲ್ಲವನ್ನೂ ಬದಿಗೊತ್ತಿ, ನಿಷ್ಪಕ್ಷಪಾತವಾಗಿ ಯಾವ ಬಣಕ್ಕೂ ಸೇರದೆ ಯೋಚಿಸಿ ನೋಡೋಣ.
ನಾನು ಬೆ೦ಗಳೂರಿನಲ್ಲಿ ತ೦ಪು ಕೋಣೆಯೊಳಗೆ ಕೂತು ಕ೦ಪ್ಯೂಟರ್ ಮು೦ದೆ ಕುಟ್ಟುವ ಮತ್ತು ಕಣ್ಕಾಪು ಕಟ್ಟಿಕೊ೦ಡು ಯೋಚನಾಲಹರಿ ಹರಿಯಬಿಡುವ ಮ೦ದಿಯ ಪೈಕಿ ಅಲ್ಲ. ನಾನು ಅಪ್ಪಟ ರೈತಜೀವನ ನಡೆಸಿದವನು. ಹತ್ತಿಪ್ಪತ್ತು ಎಕರೆ ಕೃಷಿ ಭೂಮಿ, ಹಟ್ಟಿ ತು೦ಬಾ ಗೋವುಗಳನ್ನು ಇಟ್ಟುಕೊ೦ಡು ರೈತರ ನಿಜ ನೋವು, ಕಷ್ಟ ಅರಿತವನು. ನೊಗ ಕಟ್ಟಿ ನೇಗಿಲು ಹಿಡಿದು ಜಾನಪದ ಹಾಡು ಹೇಳಿಕೊ೦ಡು ಸ್ವತಹ ಉಳುಮೆ ಮಾಡಿದ್ದೇನೆ, ತಲೆಗೆ ಮುಟ್ಟಾಳೆ ಇಟ್ಟು ಗೊಬ್ಬರ, ಮಣ್ಣು ಹೊತ್ತಿದ್ದೇನೆ, ಬಿಸಿಲಿಗೆ ಬಿದ್ದು ಹೊಲಗದ್ದೆ ತೋಟದಲ್ಲಿ ದುಡಿದು ನನಗೆ ಸ್ವತಹ ಗೊತ್ತು. ಮಾ೦ಸಾಹಾರಿಯಾದ ರೈತ ತಾನು ಸಾಕಿದ ಕುರಿ, ಕೋಳಿ, ಮೊಲ ತಿನ್ನಬಹುದು. ಆದರೆ, ನನಗೆ ತಿಳಿದ ಮಟ್ಟಿಗೆ ಯಾವನೇ ಒಬ್ಬ ನಿಜವಾದ ರೈತ ತಾನು ಸಾಕಿದ ಜಾನುವಾರನ್ನು (ದನ, ಎತ್ತು, ಎಮ್ಮೆ,ಕೋಣ) ಸ್ವತಹ ಕಡಿದು ತಿನ್ನುವುದಿಲ್ಲ, ಜಾನುವಾರು ತನ್ನ ಜೀವಿತಕ್ಕೆ ಸಹಕಾರಿಯಾಗಿ ಕೆಲಸ ಮಾಡುತ್ತಿರುವುದರಿ೦ದ ಅದರ ಬಗ್ಗೆ ಬೇರೆಯದೇ ಆದ ಭಾವನೆ ಇರುತ್ತದೆ. ಮಿತ್ರ ಸತ್ಯನಾರಾಯಣರು ಹೇಳಿದ೦ತೆ, ಹತ್ತು ವರುಷ ಗಳ ಹಿ೦ದೆ ಅವರ ಊರಮನೆಯಲ್ಲಿ ನಲವತ್ತು ಜಾನುವಾರು ಗಳಿದ್ದರೆ ಈಗ ಒ೦ದು ಇದೆ ಅ೦ತಾರೆ, ಅ೦ದರೆ ಇಲ್ಲಿ ಒ೦ದು ಮಾತು ಸ್ಪಷ್ಟ. ಗೋವಿನ ಸ೦ತತಿ ಕಡಿಮೆಯಾಗುತ್ತಿದೆ, ಅಳಿಯುತ್ತಿದೆ. ಇದು ಅವರಿ೦ದಲೇ ವ್ಯಕ್ತವಾಗಿದೆ. ಇದಕ್ಕೆ ಗೋಮಾ೦ಸ ಭಕ್ಷಣೆ ಯೊ೦ದೇ ಕಾರಣ ಅ೦ತ ನನಗೆ ಅನ್ನಿಸುವುದಿಲ್ಲ. ಇದು ಇ೦ದು ಎಲ್ಲ ಮನೆಗಳ ಕಥೆ. ವಾಣಿಜ್ಯವಾಗಿ ಹಾಲಿನ ಡೈರಿ ಉದ್ಯಮ ನಡೆಸುವವರ ಹೊರತಾಗಿ ಉಳಿದೆಲ್ಲರ ಮನೆಗಳಲ್ಲಿ ಗೋ ಸ೦ತತಿ ಗಣನೀಯವಾಗಿ ಕಡಿಮೆಯಾಗಿದೆ.
ಇಲ್ಲೊ೦ದು ಸ್ವಂತ ಅನುಭವದ ಕಥೆ ಹೇಳುತ್ತೇನೆ, ಕೇಳುವ೦ಥವರಾಗಿ. ನಮ್ಮ ಊರಿನಲ್ಲಿ ನಮ್ಮಮ್ಮ ಬಹಳ ಪ್ರೀತಿಯಿ೦ದ ಸಾಕಿ ಬೆಳೆಸಿದ್ದ ಮನೆ ಮಗಳ೦ತಿದ್ದ ನಮ್ಮ ಮನೆಯ ಹಸು “ಕೆ೦ಪಿ” ಕರುಹಾಕಿತ್ತು. ನಮ್ಮ ಊರಿನವರೇ ಆದ ಒಬ್ಬ ಮುಸಲ್ಮಾನ ಬಾ೦ಧವರೊಬ್ಬರು ಹಸು-ಕರುವನ್ನು ಮೇವಿಗೆ ಬಿಟ್ಟಲ್ಲಿ೦ದ ಅನಾಮತ್ತು ಲಾರಿಗೆ ತು೦ಬಿ ಕಸಾಯಿಖಾನೆಗೆ ಸಾಗಿಸಿಕೊ೦ಡು ಹೋದ ವಿಚಾರ ನಮಗೆ ತಡವಾಗಿ ತಿಳಿಯಿತು. ಆ ಮೂಕಪ್ರಾಣಿಯೊ೦ದಿಗೆ ನಮ್ಮಮ್ಮನಿಗೆ ಇದ್ದ ಭಾವನಾತ್ಮಕ ಸ೦ಬ೦ಧ, ಅದರ ಹತ್ಯೆಯಾಯಿತೆ೦ದು ತಿಳಿದಾಗ ಅವರು ಪಟ್ಟ ವೇದನೆ, ನೋವು, ಆ ಗೋವಿನ ಮಾ೦ಸ ತಿನ್ನುವ ಮ೦ದಿಗೆ ಅರಿವಿರುವುದಿಲ್ಲ. ಇ೦ತಹ ಘಟನೆಗಳು ಅದೆಷ್ಟೋ ಪ್ರತಿನಿತ್ಯ ನಡೆಯುತ್ತಿವೆ. ಈ ಘಟನೆ ನಡೆದಾಕ್ಷಣ ನನಗೆ ಅನ್ನಿಸಿದ್ದು ಗೋಹತ್ಯೆಗೆ ನಿಷೇಧ “ಬೇಕು” ಅ೦ತ.
ಹುಲಿಸ೦ತತಿ ಅಳಿವಿನ೦ಚಿನಲ್ಲಿದೆ, ಹುಲಿ ಬೇಟೆ ನಿಷೇಧ ಇದೆ, ಅದನ್ನು ಒಪ್ಪುವ ನಮ್ಮ ಜನ ಗೋಹತ್ಯೆ ನಿಷೇಧ ಯಾಕೆ ಒಪ್ಪುವುದಿಲ್ಲ? ಹುಲಿ ಕ್ರೂರ ಪ್ರಾಣಿ ಅದರ ತ೦ಟೆಗೆ ಹೋದರೆ ಸಾವು ಖಚಿತ. ಸುಲಭವಾಗಿ ಹುಲಿಕೊ೦ದು ಮಾ೦ಸ ತಿನ್ನುವ೦ತಿದ್ದರೆ ಅದಕ್ಕೂ ವಿರೋಧ ವ್ಯಕ್ತವಾಗುತ್ತಿತ್ತು. ಬಡಪಾಯಿ ಗೋವನ್ನು ಕೊ೦ದು ತಿನ್ನುವುದು ಸುಲಭ, ಆದ್ದರಿ೦ದ ಅದರ ಹತ್ಯೆ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ.
ಇನ್ನು ವೇದಕಾಲದ ಮಾತಿಗೆ ಬರೋಣ, ಆವಾಗ ಗೋಮಾ೦ಸ ಭಕ್ಷಣೆ ಇತ್ತು, ಬ್ರಾಹ್ಮಣರೂ ತಿನ್ನುತ್ತಿದ್ದರು, ಇರಬಹುದು, ಆವಾಗ ಬಹುಶಃ ಗೋಸ೦ತತಿ ಧ೦ಡಿಯಾಗಿ ಇದ್ದಿರಬಹುದು. ಅದನ್ನು ಈಗ ಉದಾಹರಣೆಯಾಗಿ ಹೇಳುವುದು ಸಮ೦ಜಸವಲ್ಲ, ಆಗ ನಾಗರಿಕತೆ ಇಷ್ಟು ಬೆಳೆದಿರಲಿಲ್ಲ, ಜನ ಬಟ್ಟೆ ಇಲ್ಲದೆ ಮೈಗೆ ಸೊಪ್ಪು ಕಟ್ಟಿಕೊ೦ಡು ಪ್ರಾಣಿಗಳ೦ತೆ ಜೀವನ ನಡೆಸುತ್ತಿದ್ದರು. ಹಸಿಮಾ೦ಸ ತಿನ್ನುತ್ತಿದ್ದರು, ಈಗ ಹಾಗೆ ಮಾಡುತ್ತಿಲ್ಲ, ಅಲ್ಲವೇ ? ನಾಗರಿಕತೆ ವಿಕಾಸಗೊ೦ಡ೦ತೆ ವಿಚಾರ ಗಳು ಕೂಡ
ಬದಲಾಗಿವೆ. ಆಗ ಇದ್ದ ಆಚರಣೆ ಗಳಲ್ಲಿ ಕೆಲವನ್ನು ಮಾತ್ರ ಉಲ್ಲೇಖಿಸುತ್ತಾ ಇ೦ದಿನ ದಿನಮಾನಕ್ಕೆ ಅವನ್ನು ಸಮೀಕರಿಸುವುದು ಅರ್ಥಹೀನ ಮತ್ತು ಅಸಮ೦ಜಸ.
ಇನ್ನು ದಲಿತರು, ಬಡವರು ದುಬಾರಿ ಬೆಲೆ ತೆತ್ತು, ಕುರಿ-ಕೋಳಿ ಮಾ೦ಸ ತಿನ್ನಲಾಗುತ್ತಿಲ್ಲ, ಅವರಿಗೆ ಅಗ್ಗಕ್ಕೆ ಸಿಗುವ ಗೋಮಾ೦ಸವೇ ಮೂಲ ಆಹಾರ ಅ೦ತ ಹೇಳಲಾಗಿದೆ. ಹೌದು, ಇ೦ದಿನ ಪರಿಸ್ಥಿತಿ ಗಮನಿಸಿದರೆ, ಇನ್ನು ಕೆಲವರ್ಷಗಳಲ್ಲಿ ಗೋಮಾ೦ಸ ಕೂಡ ದುಬಾರಿ ಯಾಗುತ್ತದೆ ಆವಾಗ ನರಮಾ೦ಸ ಭಕ್ಷಣೆ “ಅಗ್ಗ” ಅನಿಸಬಹುದು, ಹಾಗ೦ತ ಆ ಬಗ್ಗೆ ಸಮ್ಮತಿ ಸೂಚಿಸಲು ಸಾಧ್ಯವೇ ? ಸ್ವಲ್ಪ ಯೋಚಿಸೋಣ. — ಪರಾ೦ಜಪೆ K.N

‍ಲೇಖಕರು avadhi

March 25, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಅರಕಲಗೂಡು ಜಯಕುಮಾರ್

    ಅಯ್ಯಾ ಪರಾಂಜಪೆ,
    ನಾನು ಮೊದಲಿಗೆ ಹೇಳಿ ಬಿಡುತ್ತೇನೆ, ನಾನು ಗೋ ಮಾಂಸ ಭಕ್ಷಕ ಸಂಸ್ಕೃತಿಯವನಲ್ಲ ,
    ನೀವು ಪ್ರಸ್ಥಾಪಿಸಿರುವ ವಿಚಾರಗಳು ಬಾಲಿಶವೆನಿಸುತ್ತದೆ. ಗೋಮಾಂಸ ಭಕ್ಷಣೆ ಎಂಬುದು ಒಂದು ಆಹಾರ ಕ್ರಮ, ಅದರಲ್ಲೂ ಜಗತ್ತಿನ ಬಹುಸಂಖ್ಯಾತ ಮಂದಿಯ ಆಹಾರದ ಕ್ರಮ! ಗೋವಿಗೆ ಧೈವತ್ವದ ಸ್ಥಾನವನ್ನು ನೀಡಲಾಗಿದೆ. ಬರೀ ಗೋವು ಯಾಕೆ ಜಗತ್ತಿನ ಸಕಲ ಮೂಕಜೀವಿಗಳು ಮತ್ತು ಪ್ರಕೃತಿಯಲ್ಲೂ ದೇವರ ಭಾವವನ್ನು ಕಾಣುವ ಸಂಸ್ಕೃತಿ ನಮ್ಮದು. ಈ ನಿಟ್ಟಿನಲ್ಲಿ ಗೋಹತ್ಯೆ ನಿಷೇಧ ಜಾರಿಗೆ ತರಲು ಸರ್ಕಾರ ಹೊರಟಿದೆ ಎಂಬುದು ಮೇಲ್ನೋಟಕ್ಕೆ ಕಾಣುವ ಅಂಶವೆನಿಸಿದರೂ ಇದು ಒಂದು ವರ್ಗವನ್ನು ವಿರೋಧಿಸುವ ಹಿಡನ್ ಅಜೆಂಡಾದ ಒಂದು ರೂಪ. ಇರಲಿ ಆ ವಿಚಾರಕ್ಕಿಂತ ಗೋ ಹತ್ಯೆ ನಿಷೇದ ಕುರಿತಂತೆ ಚರ್ಚೆ ಬೆಳೆಸಬಹುದಾದರೆ ಇವತ್ತು ಜಾಗತಿಕವಾಗಿ ಗೋವು/ಎಮ್ಮೆ ಯತಹ ಜಾನುವಾರುಗಳ ಸಂತತಿ ದಿನೇ ದಿನೇ ಕಡಿಮೆಯಾಗುತ್ತಿದೆ, ಇದಕ್ಕೆ ನಮ್ಮ ಜನರ ಮನೋಧರ್ಮ ಹಾಗೂ ಸರ್ಕಾರಗಳ ನೀತಿ ಮಾರಕವಾಗಿ ಪರಿಣಮಿಸಿದೆ. ಜಾಗತೀಕರಣದ ಫಲವಾಗಿ ಕೃಷಿ ನಂಬಿ ಬದುಕುತ್ತಿದ್ದ ರೈತ ನಗರ ಪ್ರದೇಶಗಳಲ್ಲಿ ಕೂಲೀಕಾರ್ಮಿಕನಾಗಿದ್ದಾನೆ, ಹಸು ಸಾಕಾಣಿಕೆಗೆ ಮೀಸಲಿದ್ದ ಅಮೃತ ಮಹಲ್ ಗಳು, ಬೀಳು ಪ್ರದೇಶಗಳು, ಪಂಚಾಯಿತಿ ವ್ಯಾಪ್ತಿಯ ಮೀಸಲು ಜಾಗಗಳು ಅತಿಕ್ರಮಣಕ್ಕೆ ಒಳಗಾಗಿವೆ. ಇಲ್ಲೀಗ ಆಹಾರದ ಕೊರತೆ ಇದೆ. ಅಂದರೆ ಕಳೆದ 10ವರ್ಷಗಳಿಂದ ಸಾವಿರಾರು ಎಕರೆ ಕೃಷಿ ಭೂಮಿ ಕಡಿಮೆಯಾಗಿದೆ, ಕೃಷಿಯಿಂದ ವಿಮುಖರಾಗುವವರ ಸಂಖ್ಯೆಯೂ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಜಾನುವಾರು ಸಾಕಾಣಿಕೆಯೂ ಕೂಡ ಹೊರೆಯಾಗಿ ಪರಿಣಮಿಸಿದೆ. ಹಸುಗಳನ್ನು ಸಾಕುವ ಪರಿಸ್ಥಿತಿಯಲ್ಲಿಲ್ಲದ ರೈತ ಗೊಡ್ಡು ಹಸುಗಳನ್ನು ಮತ್ತು ಸಾಕಲು ಭಾರ ಎನಿಸಿದ ಗೋವುಗಳನ್ನು ಒಲ್ಲದ ಮನಸ್ಸಿನಿಂದಲೇ ಕಸಾಯಿ ಖಾನೆಗೆ ಸಾಗಿಸುತ್ತಿದ್ದಾನೆ. ರಾಜ್ಯಾಧ್ಯಂತ ಎಷ್ಟೋ ಕೆರೆಕಟ್ಟೆಗಳು ಅತಿಕ್ರಮಣಕ್ಕೆ ಒಳಗಾಗಿದೆ/ಮುಚ್ಚಲ್ಪಟ್ಟಿದೆ ಹೀಗಾಗಿ ಜಾನುವಾರುಗಳ ಕುಡಿಯುವ ನೀರಿಗೆ, ಹಸಿರು ಹುಲ್ಲಿಗೆ ಸಂಚಕಾರ ಒದಗಿದೆ ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತು ರೈತರೇ ವಿಮುಖವಾದಾಗ ಹಸುಗಳ ರಕ್ಷಣೆ ಮಾಡುವವರು ಯಾರು? ಗೋಹತ್ಯೆ ನಿಷೇಧ ಮಾಡಲು ಸರ್ಕಾರಕ್ಕೆ ಯಾವ ಯೋಗ್ಯತೆ ಇದೆ. ಅಂದ ಮಾತ್ರಕ್ಕೆ ಅವುಗಳನ್ನು ಕಡಿದು ತಿನ್ನ ಬೇಕೆಂದು ಹೇಳುತ್ತಿಲ್ಲ, ಻ವುಗಳ ಸಂರಕ್ಷಣೆಗೆ ಸೂಕ್ತ ಪರಿಹಾರೋಪಾಯ ಕಂಡುಕೊಳ್ಳಬೇಕು ಅದು ಬಿಟ್ಟು ಗೋ ಹತ್ಯೆ ನಿಷೇಧ ಮಸೂದೆ ಮಂಡಿಸಿದರೆ ಇದರ ಹಿಂದಿನ ಮನಸ್ತತ್ವವನ್ನು ಯಾರಾದರೂ ಒಪ್ಪಿಕೊಳ್ಳಲು ಸಾಧ್ಯವೇ? ನೀವೇ ಹೇಳಿ??

    ಪ್ರತಿಕ್ರಿಯೆ
    • ಶಿವ

      —ಜಗತ್ತಿನ ಬಹುಸಂಖ್ಯಾತ ಮಂದಿಯ ಆಹಾರದ ಕ್ರಮ!—
      ಗೋಹತ್ಯೆ ಜಗತ್ತಿನಲ್ಲೆಲ್ಲಾ ನಿಷೇದಿಸಲು ಯಾರೂ ಹೊರಟಿಲ್ಲ. ಕರ್ನಾಟಕ/ಭಾರತದಲ್ಲಿ ಮಾತ್ರಕ್ಕೆ
      ಈ ಚರ್ಚೆ ಸೀಮಿತ.

      ಪ್ರತಿಕ್ರಿಯೆ
      • ಅರಕಲಗೂಡುಜಯಕುಮಾರ್

        @ಶಿವ ಶಿವಾ, ಒಂದು ವಿಚಾರದ ಚರ್ಚೆಗೆ ಪೂರಕವಾಗಿ ಅದನ್ನು ಪ್ರಸ್ತಾಪಿಸಲಾಗಿದೆ ಅಷ್ಟ್ಏ. ಗೋಹತ್ಯೆ ನಿಷೇಧ ಅಂದರೆ ಏನು? ಅದರ ಅಡ್ಡ ಪರಿಣಾಮಗಳು ಜಾನುವಾರುಗಳ ಮೇಲೆ ಮತ್ತು ಸಮಾಜದ ವಿವಿಧ ಜನರ ಮೇಲೆ ಆಗುತ್ತದೆ ಎಂಬುದು ಸಂಕೀರ್ಣವಾಗಿಲ್ಲ, ಒಳಗನ್ಣಿಗೆ ಮತ್ತು ಪ್ರಜ್ಞಾ ಪೂರ್ವಕ ಮನಸ್ಥಿತಿಗೆ ಮಾತ್ರವೇ ಅದು ಅರಿವಾಗ ಬಲ್ಲದು. ಇದಕ್ಕಿಂತ ಹೆಚ್ಚು ಇನ್ನೇನು ಹೇಳಲಯ್ಯ ಶಿವ ಶಿವಾ

        ಪ್ರತಿಕ್ರಿಯೆ
  2. udayadharmasthala

    ಎರಡು ಚರ್ಚೆಗಳ ಆಚೆ ನಿಂತು ನೋಡಿದರೆ ಅನಿಸುವುದು ವಾದಗಳು ವಾಸ್ತವಗಳಲ್ಲ ಎಂದು.
    ಅಂದು ಇದ್ದಂತೆ ಇಂದಿಲ್ಲವಾದರೂ ಮನಸ್ಸುಗಳು ತಂಪಾಗಲು ಕೆಂಪು ಬೇಕಾಗುವುದಿಲ್ಲ.
    ಬುದ್ಧನನ್ನು ಒಪ್ಪುವಾಗ ಆತನ ವಾದಗಳನ್ನು ಒಪ್ಪಿದಾಗ ಮಾತ್ರ ಪ್ರಾಮಾಣಿಕ. ಯಾವುದೇ ’ವಧೆ’ಯ ಹಿಂದೆ ’ಹಸಿವು’ಇರುತ್ತದೆ. ಎಂತಹ ಹಸಿವು ಅನ್ನುವುದು ತಿಳಿದರೆ ಸಾಕು. ರೋಗವಿದ್ದಾಗಲೂ ಅತಿಸಾರವಾದಾಗಲೂ ಬೇಡದವುಗಳ ಭಕ್ಷಣೆ ಬೇಕೆನಿಸುತ್ತವೆ. ಇಲ್ಲಿ ಸಧ್ಯ ಆಗುತ್ತಿರುವ ಚರ್ಚೆ ಜೀವಸಂಕುಲದುಳಿವಿಗೆ ಪೂರಕವಾದರೆ ಸಂತೋಷ.ದೇವತ್ವವೊ,ಪೈಶಾಚಿಕತ್ವವೋ ನಿರ್ಧಾರವನ್ನು ಹೊರಗಿನಿಂದ ಮಾಡಬೇಕು.ಆವೇಶ ಬಂದಾಗ ಕೋಳಿ-ಕುರಿಗಳನ್ನು ಕಚ್ಚಿ ರಕ್ತ ಕುಡಿಯುವ ಭೂತಕಟ್ಟುವವರು ಕೂಡಾ ವೇಷ ತೆಗೆದಿರುವಾಗ ಹಾಗೆ ಮಾಡಲು ಅಶಕ್ಯ.
    ಒಂದು ಸರ್ತಿ ಹೀಗಾಯ್ತು. ರಾತ್ರಿ ಊರಿನಿಂದ ಟೆಂಪೊದಲ್ಲಿ ಡ್ರೈವರ್ ಪಕ್ಕದಲ್ಲಿ ಕೂತು
    ಬರುತ್ತಿದೆ. ಚಾರ್ಮಾಡಿ ಘಾಟ್ನನ ಒಂದು ತಿರುವು. ಅದೂ ನಮ್ಮ ಪಯಣ ಏರುಮುಖವಾಗಿತ್ತು. ನಿಧಾನವಾಗಿಯೇ ಗಾಡಿ ಓಡಿಸುತ್ತಿದ್ದ ಡ್ರೈವರ್. ಇದ್ದಕ್ಕಿದ್ದಂತೆ ಒಮ್ಮೆ ಸಡನ್ನಾಗಿ ಬ್ರೇಕ್ ಹಾಕಿದ.
    ನನ್ನ ಹಣೆ ಎದುರಿಗಿದ್ದ ಗಾಜಿಗೆ ತಾಗಿತು. ನಿಧಾನವಾರೂ ಚಲನೆಯಲ್ಲಿ ಬ್ರೇಕ್ ಹಾಕಿದಾಗ ಮುಂದಕ್ಕೆ ಎತ್ತಿಒಗೆಯುತ್ತದೆ. ’ಏನಾಯ್ತು ?’ ಕೇಳಿದೆ.’ಒಂದು ಮೊಲ ಅಡ್ಡಹೋಯ್ತು’ಅಂದ. ತಕ್ಷಣಾವೆ ಆತ ಇನ್ನೊಂದು ಪ್ರತಿಕ್ರಿಯೆಯನ್ನೂ ಹರಿಬಿಟ್ಟ. ’ಛೇ, ಮೇಲೇರಿಸಿದ್ದರೆ ರಾತ್ರಿ ಊಟಕ್ಕೆ ಆಗುತ್ತಿತು.
    ನನಗನಿಸಿದ್ದು ಹೀಗೆ ಈ ಘಟನೆಯಿಂದ.”ಯಾವುದೆ ಮನಸ್ಸಿನ ಒಳ ಹರಿವು ಬದುಕನ್ನು ಉಳಿಸಲು ಬಯಸುತ್ತದೆ. ಅನಿವಾರ್ಯ ಮತ್ತು ’ಹಸಿವು’ಗಳು ಅಳಿಸಬಯಸುತ್ತದೆ” ಎಂಬುದಾಗಿ. ಮೂಲ ಸ್ವಾಬಹಾವೆ ಶಾಂತ-ಸುಭದ್ರ ಬದುಕಿನ ಆಶಯ. ಜಾಗ ಬೇಕು ಎಂದು ಕಾಡು ಕಡಿಯುತ್ತಿದ್ದೇವೆ. ಭೋಗ ಬೇಕು ಬೇಕು ಎಂದು ಸಂಬಂದಗಳನ್ನು ಕಡಿಯುತ್ತಿದ್ದೇವೆ. ಯೋಗ ಬಿಟ್ಟು ರೋಗ ಪಡೆಯುತ್ತಿದ್ದೇವೆ.
    ’ಹಸಿರು ಮತ್ತು ಉಸಿರು ಉಳಿಸುವ’ ಘೋಷಣೆ ನಮ್ಮದಾಗಲಿ. ’ಜೈ ಜಗತ್ತ್’
    ’ಜೈ ಜೀವ’.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: