ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಯಾವ ಉದ್ದಿಶ್ಯವೂ ಇಲ್ಲದೇ ಪ್ರೀತಿಸುವುದಿದೆಯಲ್ಲ…?’, ಶ್ರೀದೇವಿ ಕೆರೆಮನೆ

ಸುತ್ತಲ ಅಕಾರಣ ಪ್ರೀತಿಯೊಂದಿಗೆ…

ಶ್ರೀದೇವಿ ಕೆರೆಮನೆ ಸೂರ್ವೆ
( ಒಂದು ಕಾರಣವಿಟ್ಟು ಪ್ರೀತಿಸುವುದು ಬೇರೆ ಮಾತು. ಕೊಟ್ಟು ಪಡೆಯುವ ವ್ಯವಹಾರವಾದ ಪ್ರೀತಿಯೂ ಇದೆ. ತನ್ನ ಸಂಸಾರ, ಮನೆ ಮಕ್ಕಳು, ತನ್ನದೇ ವಲಯ ಎಂಬ ಪ್ರೀತಿಯೂ ಕಾಣಸಿಗುತ್ತದೆ. ಆದರೆ ಏನೂ ಲಾಭವಿಲ್ಲದೇ, ಯಾವ ಉದ್ದಿಶ್ಯವೂ ಇಲ್ಲದೇ ಪ್ರೀತಿಸುವುದಿದೆಯಲ್ಲ….? ಅಂತಹ ಪ್ರೀತಿಗೊಂದು ಹ್ಯಾಟ್ಸ ಆಫ್ ಹೇಳಲೇ ಬೇಕು. ಕೇವಲ ಮಾನವೀಯ ಕಾರಣಗಳಿಗಾಗಿ ಮನುಷ್ಯ ಮನುಷ್ಯನನ್ನು ಪ್ರೀತಿಸುವಷ್ಟು ನಿರಾಳತೆ ಮತ್ತೆಲ್ಲೂ ದೊರಕಲಾರದು)
‘ತಂಗಿ ಇತ್ತಾ’ ಗೇಟಿನ ಹೊರಗೆ ರಸ್ತೆಯ ಮೇಲೆ ನಿಂತು ಯಾರೋ ಕೇಳುತ್ತಿದ್ದರು. ನನ್ನ ಮಗನಿಗೆ ಎಷ್ಟು ಅರ್ಥ ಆಯ್ತೋ ದೇವರೇ ಬಲ್ಲ. ನನಗೆ ತಂಗಿ ಇಲ್ಲ. ನನಗಿರೋದು ತಮ್ಮ ಮಾತ್ರ ತುಂಬಾ ರಾಜಗಾಂಭೀರ್‍ಯದಿಂದ ಉತ್ತರಿಸಿದ. ನಿಂಗಲ್ವೋ ಕೂಸಾ.. ನಿಮ್ಮವ್ವಿ ಇತ್ತಾ? ಮತ್ತೆ ಆತನಿಗೆ ಅರ್ಥವಾಗದ ಪ್ರಶ್ನೆ. ಒಳಗಡೆ ಏನೋ ಕೆಲಸದಲ್ಲಿದ್ದ ನಾನು ಇವರ ಮಾತು ಕೇಳಿ ಹೊರಗೆ ಬರುವಷ್ಟರಲ್ಲಿ ಮಗ ಒಳಗೆ ಓಡಿ ಬಂದ. ‘ಅಮ್ಮಾ ಮೀನು ಮಾರೋಳು ಬಂದಿದ್ದಾಳೆ. ನನಗೆ ತಂಗಿ ಇದ್ದಾಳಾ ಅಂತಾಳೆ.. ಏನು ಹೇಳಿದ್ರೂ ಅವಳಿಗೆ ಅರ್ಥವೇ ಆಗ್ತಿಲ್ಲ. ಏನೋ ಆಗಿ ಹೋಗಿದೆ ಎನ್ನುವ ಆತಂಕದಲ್ಲಿ ನುಡಿದ. ಅವಳು ಸೋಮಿ ಇರಬೇಕು. ನೋಡೋಣ ಬಾ ನಾನು ಹೊರ ಬರುವಷ್ಟರಲ್ಲಿ ಅಮ್ಮನಿಗೆ ಆತಂಕವಾಗಿತ್ತು. ಬೇಡ ನೀನೀಗ ಅವಳ ಜೊತೆ ಮಾತಾಡ್ತಾ ಕುಳಿತರೆ ತಾಸಾದ್ರೂ ಏಳೋದಿಲ್ಲ.’ ಎನ್ನುತ್ತ ಹೊರಗೆ ಹೋಗಿ, ಸೋಮಿ ಕಲ್ಗಾ ಬೇಡ್ವೆ, ರಾತ್ರಿದಲ್ಲಾ? ಉಬ್ಬಿ ಹೋಗಿರ್‍ತದೆ ಎಂದು ಕಳಿಸಿ ಬಿಡುವ ಎಂಬಂತೆ ಮಾತನಾಡಿದರು. ಆದರೆ ಆಕೆ ` ಅಮ್ಮಾ ಕಲ್ಗಾಕ್ಕಲ್ಲ. ತಂಗಿ ಬಂದೀತೆ? ಎಂದು ಸೀದಾ ಸಾದಾ ಕೇಳುವುದನ್ನು ನೋಡಿ ತಡೆಯಲಾಗಲಿಲ್ಲ. ಹೊರಗೆ ಹೋಗಿ ಗೇಟ್ ಹಿಡಿದು ನಿಂತವಳನ್ನು ಬಾರೆ ಒಳಗೆ, ಹೊರಗೇ ನಿಂತ್ಯಲ್ಲೇ? ಎಂಬ ಒಂದು ಆತ್ಮೀಯ ಧ್ವನಿಯೇ ಸಾಕಾಯಿತು. ಇಷ್ಟಗಲ ಬಾಯಿ ತೆಗೆದು, ಕವಳದಿಂದ ಕೆಂಪಾಗಿದ್ದ ತನ್ನ ಹಲ್ಲುಗಳನ್ನು ತೋರಿಸುತ್ತ, ಹೆಂಗಿವೆ ಮೊಗಾ? ನೋಡ್ದೇ ಎಟ್ಟೆಲ್ಲಾ ದಿನ ಆಯ್ತೆಲ್ಲ? ಬರ್‍ನೇ ಇಲ್ಲೆ ನೀನ್ ಥೇಟ್ ಪುಟ್ಟ ಮಗುವನ್ನು ಮಾತನಾಡಿಸುವಂತೆ ಕೇಳುತ್ತ ಬಂದವಳ ಆತ್ಮೀಯತೆಗೆ ನಾನು ಕರಗಿ ಹೋಗಿದ್ದೆ. ಆದರೆ ಮಕ್ಕಳಿಬ್ಬರೂ ಬಿಟ್ಟ ಬಾಯಿ ಬಿಟ್ಟಂತೆ ನೋಡುತ್ತಿದ್ದರು… ಯಾವುದೋ ಬೇರೆ ಲೋಕದ ಜೀವಿಯೊಂದು ತಮ್ಮ ಅಮ್ಮನನ್ನು ಹೊತ್ತುಕೊಂಡು ಹೋಗುತ್ತದೆಯೋ ಎಂಬಂತೆ…..
ಇವತ್ತಿಗೂ ನಾನು ಹಿರೇಗುತ್ತಿಗೆ ಹೋದಾಗ ಕೇವಲ ನೋಡಲೆಂದೇ ಬರುವ ಹಲವು ಮೀನುಗಾರ್ತಿಯರಿದ್ದಾರೆ. ಹಳ್ಳಿ ಹೆಂಗಸರಿದ್ದಾರೆ. ಕೆಲಸಕ್ಕೆ ಬರುವವರಿದ್ದಾರೆ, ನಾಲ್ಕೈದು ತಿಂಗಳ ಹಿಂದೆ ಬೆಟ್ಕುಳಿಯ ಫಾತೀಮ ಬಾಯಿ ನಾನು ಬಂದಿದ್ದೇನೆ ಎಂದೇ ಬಂದಿದ್ದಳು. ಹಿರೇಗುತ್ತಿಯ ಆಸ್ಪತ್ರೆಗೆಂದು ಬಂದವಳು ನಿಮ್ಮ ಮನೆಯಲ್ಲಿ ಜನರಿವ್ರು ಅಂದ್ಕೂಂಡೆ ಬಂದ್ವೆ, ನೀನೇ ಬಂದಿ ಅನ್ಸೀತು ಎಂದವಳೇ ಕೈ ಹಿಡಿದು ಅಳಲಾರಂಭಿಸಿದ್ದಳು. ನಾನು ಕಕ್ಕಾಬಿಕ್ಕಿಯಾಗಿದ್ದೆ.. ‘ಏನಾಯ್ತೆ ಬಾಯೀ? ಹಂಗ್ಯಾಕೆ ತೀಡ್ತೀಯೆ? ನಾನು ಒಂದಿಷ್ಟು ಕಳಕಳಿ ತೊರಿಸಿದ್ದೆ. ‘ತಂಗಿ ನನ್ನ ಮಗಳು ಸತ್ತೋಯ್ತ. ನಾ ಈಗ್ಗೆ ಒಬ್ಳೆ ಆಗಿಂವೆ.’ ಎಂದು ಬಿಕ್ಕಿದ್ದಳು. ಆಕೆಗೆ ಒಬ್ಬ ಅಂಗವಿಕಲ, ಬುದ್ಧಿಮಾಂದ್ಯ ಮಗಳಿದ್ದಳು. ತನ್ನ ಐದು ಗಂಡು ಮಕ್ಕಳು, ಮೂರು ಹೆಣ್ಣು ಮಕ್ಕಳನ್ನು ಚೆನ್ನಾಗಿ ಬೆಳೆಸಿದ್ದಳು. ಗಂಡು ಮಕ್ಕಳನ್ನಂತೂ ಅಲ್ಹಾನ ವರಪ್ರಸಾದ ಎಂದೇ ತಿಳಿದು ಕೊಂಡಿದ್ದಳು. ದೊಡ್ಡವನ ಮದುವೆ ಆಯಿತು, ಆತ ಹೆಂಡತಿಯನ್ನು ಕರೆದುಕೊಂಡು ದೂರದ ಕೇರಳಕ್ಕೆ ಹೋಗಿ ನೆಲೆನಿಂತ, ಎರಡನೆಯವನು ಕೂಡ ಮದುವೆ ಆಗಿ ಅಲ್ಲೇ ಹತ್ತಿರದಲ್ಲೊಂದು ಮನೆ ಮಾಡಿ ದೂರ ಸರಿದ. ಮೂರನೆಯ ಹಾಗೂ ನಾಲ್ಕನೆಯವರು ಮಂಗಳೂರಿನ ಕಡೆ ಹೋದವರು ಅಲ್ಲಿಯೇ ಮದುವೆಯಾಗಿ ಊರಿನ ಕಡೆ, ಒಂಟಿಯಾಗಿ ತಮ್ಮನ್ನು ಬೆಳೆಸಿದ ಅಮ್ಮಿಯ ನೆನಪೂ ಇರದವರಂತೆ ದೂರಸರಿದು ಬಿಟ್ಟರೆ ಕೊನೆಯವನು ಮಾತ್ರ ತನ್ನ ಅಮ್ಮಿಯನ್ನು ಹಾಗೂ ಬುದ್ಧಿಮಾಂದ್ಯ ತಂಗಿಯನ್ನು ಸಾಕುವುದು ತನ್ನ ತಲೇ ಮೇಲೆಯೇ ಬರುತ್ತದೇನೋ ಎಂಬಂತೆ ಮದುವೆಗೆ ಮೊದಲೇ ಬೇರೆ ಮನೆ ಮಾಡಿಕೊಂಡು ಅಲ್ಲಿಯೇ ಅನ್ಯಕೋಮಿನ ಹುಡುಗಿಯೊಬ್ಬಳನ್ನು ಮದುವೆ ಆಗಿ, ಅವಳಿಗೆ ನಮ್ಮ ರೀತಿ ರಿವಾಜು ಸರೀ ಬರೂದಿಲ್ಲ’ ಎಂದು ದೂರವೇ ಉಳಿದ.
ಮಗನನ್ನು ಅವಲಂಬಿಸುವ ಮನಸ್ಸೂ ಆಕೆಗಿರಲಿಲ್ಲ. ಅಷ್ಟರಲ್ಲಾಗಲೇ ಮದುವೆ ಆಗಿದ್ದ ಉಳಿದಿಬ್ಬರು ಹುಡುಗಿಯರಿಗೆ ಅವರ ಸಂಸಾರದ್ದೇ ಹಾಸಿ ಹೊದೆಯುವಷ್ಟು ಸಮಸ್ಯೆಗಳಿದ್ದರಿಂದ ಅವರ ಸಮಸ್ಯೆಯ ಒಳಗೆ ತನ್ನದೊಂದು ಸಮಸ್ಯೆಯನ್ನೂ ಅವರ ಎದುರು ಹೇಳುವುದೇಕೆ ಎಂದು ಆಕೆ ಸುಮ್ಮನಾಗಿದ್ದಳು. ತಾನೇ ಬೋಟಿಗೆ ಹೋಗಿ ಮೀನು ತಂದು, ಮಾರಿಕೊಂಡು ಬಂದು ಸಂಸಾರ ನಡೆಸುತ್ತಿದ್ದ ಫಾತೀಮಾ ಬಾಯಿಗೆ ಬುದ್ಧಿಮಾಂದ್ಯ ಮಗಳನ್ನು ನೋಡಿಕೊಳ್ಳಲು ಅಕ್ಕಪಕ್ಕದ ಮನೆಯವರ ಸಹಕಾರವೇ ಒಂದು ಆಧಾರ. ಬುದ್ದಿಮಾಂದ್ಯ ಮಗಳದ್ದು ಹೆಚ್ಚು ದಿನದ ಬದುಕಲ್ಲ ಎಂಬುದು ಗೊತ್ತಿದ್ದರೂ ಆಕೆ ಅಷ್ಟು ಬೇಗ ಸಾಯುತ್ತಾಳೆಂಬ ಕಲ್ಪನೆಯೂ ಫಾತಿಮ ಬಾಯಿಗಿರಲಿಲ್ಲ. ಒಂದು ದಿನ ಥಂಡಿ,ಜ್ವರ ಎಂದು ಮಲಗಿದಾಕೆ ಮಾರನೇ ದಿನವೇ ಖಬರಸ್ಥಾನ ಸೇರಿದ್ದಳು. ಬಂದಾಗಲೆಲ್ಲ ತಂಗಿ, ನಿಂದೊಂದು ಹಳೇ ಅಗಿ ಇದ್ರೆ ಕೊಡೇ, ನಂದು ಮಗ್ಳಿಗೆ ಆತೀದು ಎನ್ನುತ್ತ ತನ್ನ ಮಕ್ಕಳ ಸುದ್ದಿಯನ್ನೆಲ್ಲ ಹೇಳಿ ಗಂಡು ಮಕ್ಕಳಿಗಿಷ್ಟು ಶಾಪ ಹಾಕಿ, ತಾನು ಸತ್ತು ಹೋದರೆ ತನ್ನ ಮಗಳನ್ನು ನೋಡಿಕೊಳ್ಳುವವರಾರು ಎನ್ನುವ ಆತಂಕದ ಹುಳುವನ್ನು ನನ್ನ ತಲೆಗೂ ಬಿಟ್ಟು ಹೋಗುತ್ತಿದ್ದ ಫಾತಿಮಾ ಬಾಯಿ ಬಂದರೆ ಮಗಳು ಓದುವುದನ್ನೆಲ್ಲ ಬಿಟ್ಟು ಅವಳ ಜೊತೆ ಮಾತಿಗೆ ತೊಡಗುತ್ತಾಳೆ ಎನ್ನುವ ಆತಂಕ. ತಂಗಿ ಎಲ್ಲೋಯ್ತು? ಆ ಮಗೂಗೆಂದೇ ಬಣಗು ತಂದಿ, ದೊಡ್ಡದು.. ಎನ್ನುತ್ತ ನನ್ನ ಮದುವೆ ಆದ ಮೇಲೂ ಮೀನು ತಂದುಕೊಡುತ್ತಿದ್ದ ಫಾತೀಮಾ ಬಾಯಿ ಈಗ ಮೀನು ಮಾರುತ್ತಿಲ್ಲ. ಆದರೂ ಹಿರೇಗುತ್ತಿಯ ಕಡೆ ಬಂದರೆ ತಂಗಿ ಬಂದೀತೇ ಎಂದು ಮನೆಗೆ ಬಂದು ವಿಚಾರಿಸಿಕೊಂಡು ಹೋಗುವುದನ್ನು ಮರೆತಿಲ್ಲ. ಸಮಾಧಾನದಿಂದ ಅವಳ ಮಾತು ಕೇಳುತ್ತಿದ್ದ ಒಂದೇ ಒಂದು ಕಾರಣಕ್ಕಾಗಿ ಆಕೆ ಸಾಗರದಷ್ಟು ಪ್ರೀತಿ ವಿಶ್ವಾಸ ತೋರುವುದನ್ನು ಕಂಡಾಗ ನಿಜಕ್ಕೂ ನನ್ನ ಮಾತು ಮೂಕವಾಗುತ್ತದೆ.
ಸ್ವಲ್ಪಾನೂ ತನ್ನ ಬದಿಗೆ ಲಕ್ಷ ಕೊಡೂದಿಲ್ಲ ಎನ್ನುತ್ತ ಮನೆಯಿಡೀ ತಕಧೀಂ ಎಂದು ಸುತ್ತುವ ನನ್ನನ್ನು ಹಿಡಿದು ಕುಳ್ಳಿರಿಸಿ, ಇಬ್ಬರು ಮಕ್ಕಳಾದ್ರೂ ನಮ್ ತಂಗಿ ಇನ್ನೂ ಸಣ್ಣ ಮಗೂನೇ. ಎಂದು ತಲೆಗಿಷ್ಟು ಎಣ್ಣೆ ಒತ್ತಿ, ಬಿಸಿನೀರು ಕಾಯಿಸಿ ಪುಟ್ಟ ಮಗುವನ್ನು ಆರೈಕೆ ಮಾಡುವಂತೆ ಮಾಡುವ ಬೇಬಕ್ಕ ಯಾವತ್ತೂ ಅಮ್ಮನ ಪ್ರೀತಿ ನೀಡಿದವಳು. ನನ್ನ ಬಸಿರು, ಬಾಣಂತನಗಳನ್ನೆಲ್ಲ ತಾನೇ ತಲೆ ಮೇಲೆ ಹೊತ್ತುಕೊಂಡು ನಿಭಾಯಿಸಿದ ಬೇಬಕ್ಕೂ ಎಂದೂ ಬೇರೆ ಮನೆಯಲ್ಲಿದ್ದಾಳೆ ಎಂದೇ ಅರಿವಾಗದಷ್ಟು ಬೆರೆತು ಹೋದವಳು. ಸಣ್ಣ ತಲೆ ನೋವಿಗೂ ‘ಬೇಬಕ್ಕ ತಲೆ ತಿಕ್ಕೊಡೇ’ ಎಂದು ಅವಳ ಕೆಲಸವನ್ನೆಲ್ಲ ಹಾಳು ಮಾಡುವ ನನ್ನ ಮೇಲೆ ಯಾವತ್ತೂ ಬೇಸರಿಸಿಕೊಳ್ಳದ ಅವಳ ಪ್ರೀತಿಗೆ ನನ್ನದೊಂದು ಹಾಟ್ಸ ಆಪ್. ಹಿಂದಿನ ತಿಂಗಳು ಕದಂಬೋತ್ಸವಕ್ಕೆ ಬನವಾಸಿಗೆ ಹೋಗಿದ್ದೆ. ಶ್ರೀ.. ಶ್ರೀ ಎಂದು ಕರೆಯುತ್ತ ಬಂದವರನ್ನು ನೋಡಿದರೆ ನನ್ನ ಬಾಲ್ಯ ಸ್ನೇಹಿತ ಸಂತೋಷ ಗೌಡರ್. ಹಿಂದೊಂದು ಸಣ್ಣ ಗುಂಪು. ಏನೋ ಇದು ರೌಡಿಗಳ ಹಾಗೆ ಗುಂಪು ಕಟ್ಟಿಕೊಂಡು ಓಡಾಡ್ತಿ? ನನ್ನ ಪಿಸುಗುಟ್ಟುವಿಕೆ ಹಿಂಬಾಲಕನೊಬ್ಬನಿಗೆ ಕೇಳಿ, ಮೇಡಂ ಅವರು ಈಗ ತಾಲೂಕಾ ಪಂಚಾಯತ್ ಉಪಾಧ್ಯಕ್ಷರು. ಎಂಬ ಗುಂಪಿನ ಗುಟ್ಟನ್ನು ಬಿಚ್ಚಿಟ್ಟಿದ್ದ. ‘ಮನೆಗೆ ಬಂದು ಹೋಗು’ ಎಂದು ಒತ್ತಾಯಿಸಿದಾತನನ್ನು ನಿಮ್ಮ ಮನೆಯ ಆಲೆಮನೆಗೆ ಕರಿ. ಎಲ್ಲಿದ್ದರೂ ಬರ್‍ತೇನೆ ಎಂದಾಗ ಮುಖ ಚಿಕ್ಕದು ಮಾಡಿಕೊಂಡು ಆಲೆಮನೆ ಈಗ ಆಗೋದಿಲ್ಲ. ತಿನ್ನೋಕೂ ಕೂಡ ಕಬ್ಬಿಲ್ಲದಂತೆ ಆಗಿದೆ. ನಾವು ಚಿಕ್ಕವರಿದ್ದಾಗ ಹೇಗಿರ್‍ತಿತ್ತು ಅಲ್ವಾ? ಎಂದಾತನ ಮುಖದಲ್ಲಿ ಬಾಲ್ಯದ ನೆನಪಿತ್ತು.
ಆಲೆಮನೆ ನಡೆಯುವಷ್ಟು ದಿನವೂ ಬಹುತೇಕ ಅವರ ಮನೆಯಲ್ಲಿಯೇ ಟಿಕಾಣಿ ಹೂಡುತ್ತಿದ್ದ ನಮ್ಮ ಗುಂಪನ್ನು ಸುಧಾರಿಸುವಲ್ಲಿ ಅವರಮ್ಮ  ಹೈರಾಣಾಗಿಬಿಡುತ್ತಿದ್ದರು. ಅಕ್ಕ ಬಾರೆ ಎಂದು ಕರೆಯಲು ಬರುತ್ತಿದ ಆತನ ತಮ್ಮ್ದ ಸಂಪತ್ತು ಮತ್ತು ಅವರ ತಂದೆ ಚಾಮರಾಜ ಗೌಡರ್‌ರಿಗೆ ನಾನು ಬರದೇ ಹೊದರೆ ಅದು ಆಲೆಮನೆಯೂ ಅಲ್ಲ, ಚೌತಿ ಎಂದರೆ ಹಬ್ಬವೂ ಅಲ್ಲ ಎಂಬಂತಾಗಿತ್ತು. ಅಲ್ಲಿಯವರೆಗೆ ಅಪ್ಪನ ಕಣ್ಣು ತಪ್ಪಿಸಿ ಸೈಕಲ್ ಹೊಡೆದುಕೊಂಡು ಸುತ್ತುತ್ತಿದ್ದ ನನಗೆ ಪಿ.ಯು.ಸಿ. ಮುಗಿದದ್ದೇ  ಬೈಕ್ ಕಲಿಯುವ ಉಮ್ಮೇದಿ ಹುಟ್ಟಿ ಬಿಟ್ಟಿತ್ತು. ಬೈಕ್ ಹುಡುಕುವ ಯಾವ ಕಷ್ಟವನ್ನೂ ತೆಗೆದುಕೊಳ್ಳದೇ ನನಗೆ ಬೈಕ್ ಕಲಿಸು ಎಂದು ಸಂತೋಷನ ಬೆನ್ನು ಬಿದ್ದಿದ್ದೆ. ಬಾಲ್ಯ ಸ್ನೇಹಿತೆ ಎಂಬ ಮುಲಾಜಿಗೆ ಬಿದ್ದಿದ್ದಕ್ಕೋ. ಅಥವಾ ತನ್ನ ಪ್ರೀತಿಯ ಮೇಷ್ಟ್ರ ಮಗಳು ಎಂಬ ಕಾರಣಕ್ಕೋ ಏನನ್ನೂ ಹೇಳಲಾಗದೇ ತನ್ನ ಟಿ.ವಿ.ಎಸ್.ನ್ನು ನನ್ನ ಕೈಗಿಟ್ಟು ರೈಡಿಂಗ್ ಹೇಳಿಕೊಡುವ ಪ್ರಯತ್ನ ಮಾಡಿದ್ದ. ಕೊನೆಗೆ ಏನೂ ತೋಚದೇ ಬೈಕನ್ನು ನನ್ನ ಸುಪರ್ದಿಗೆ ಒಪ್ಪಿಸಿ ಹೋದಾತನ ಕೈಗೆ ಬೈಕ್ ಹಿಂದಿರುಗಿದಾಗ ಅದನ್ನು ಗುಜರಿಯವರಾದರೂ ಕೊಂಡರೋ ಇಲ್ಲವೋ ಎನ್ನುವ ನನ್ನ ಅನುಮಾನ ಈಗಲೂ ಹಾಗೆಯೇ ಉಳಿದಿದೆ. ಒಂದು ಕ್ಷಣ ಬಾಲ್ಯದ ನೆನಪುಗಳೆಲ್ಲ ಕಣ್ಣ ಮುಂದೆ ಹಾದು ಹೋಗಿ ಸಂತೋಷ ಮತ್ತು ಅವರ ಮನೆಯವರೆಲ್ಲರ ಅಕಾರಣ ಪ್ರೀತಿ ಮನಸ್ಸನ್ನು ಮುದಗೊಳಿಸಿತ್ತು.
ಶ್ರೀದೇವಿ ಇದೊಂದು ಪುಸ್ತಕ ಓದಲೇ ಬೇಕು ಎಂದು ಅಂಕೋಲಾಕ್ಕೆ ಬರುವ, ನಾನು ಸಿಗುವ ಸಂದರ್ಭಗಳಲ್ಲೆಲ್ಲ ಬೇರೆ ಬೇರೆ ಪುಸ್ತಕಗಳನ್ನು ತಂದು ಓದಲು ಹಚ್ಚುವ ಹಿರಿಯರಾದ ಗೌತಮ್ ಗಾಂವಕರ್‌ರವರ ಪ್ರೀತಿಗೆ ಎಣೆಯಿಲ್ಲ. ನನಗಿಷ್ಟು ಗ್ರಾಮರ್ ಕಲಿಸುವುದನ್ನು, ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಹೇಳಿಕೊಡುವ ಮೆಥಡ್‌ನ್ನು ಹೇಳಿಕೊಡಿ ಎಂಬ ನನ್ನ ಬೇಡಿಕೆಗೆ ತಮ್ಮಲ್ಲಿದ್ದ ಗ್ರಾಮರ್ ಪುಸ್ತಕಗಳನ್ನೇ ನೀಡಿದವರು ಅವರು. ನಾನು ಸಿಕ್ಕಾಗಲೆಲ್ಲ ವಿವಿಧ ವಿಷಯಗಳ ಬಗ್ಗೆ ನನ್ನ ಗಮನ ಸೆಳೆದು ನನ್ನ ಸೀಮಿತ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಲು ಸಹಕಾರಿಯಾದವರು ಅವರು. ಇಂಗ್ಲೀಷ್ ಹಾಗೂ ಕನ್ನಡದ ಅದ್ಭುತ ಜ್ಞಾನಭಂಡಾರವಾದ ಅವರೊಂದಿಗೆ ಮಾತನಾಡುವುದೆಂದರೆ ಅದೊಂದು ಎನ್‌ಸೈಕ್ಲೋಪೀಡಿಯಾವನ್ನು ಓದಿದ ಅನುಭವ. ಈ ವಿಷಯವನ್ನು ಹೀಗೆ ಪ್ರಸ್ತಾಪಿಸಬಹುದು, ಈ ವಿಷಯವನ್ನು ಹೀಗೆ ವಿಷದೀಪಡಿಸಬಹುದು’ ಎನ್ನುವ ಅವರ ಮಾತುಗಳು ತುಂಬಾ ಮೌಲಿಕವಾಗಿರುತ್ತದೆ. ಕೇವಲ ಕನ್ನಡದ್ದಷ್ಟೇ ಅಲ್ಲ, ಭಾರತೀಯ ಭಾಷೆಗಳ ಜೊತೆ ಜೊತೆಗೆ ಜಗತ್ತಿನ ಹಲವಾರು ಭಾಷೆಗಳ ಸಮೃದ್ದ ಸಾಹಿತ್ಯವನ್ನು ನನ್ನ ಓದಿಗೆ ನಿಲುಕಿಸಿದವರು ಗೌತಮ್ ಗಾಂವಕರ್‌ರವರು.
‘ಈ ಪುಸ್ತಕವನ್ನು ನಿನಗೋಸ್ಕರ ಫ್ಲಿಫ್ ಕಾರ್ಡನಲ್ಲಿ ಆರ್ಡರ್ ಮಾಡಿದ್ದೇನೆ. ಪುಸ್ತಕ ತಗೋ’ ಎನ್ನುವ ‘ಈ ಲಿಂಕ್ ನೋಡು, ನಿನ್ನ ಬರೆಹಕ್ಕೆ ಅನುಕೂಲ ಆಗುತ್ತದೆ’ ಎಂದು ಇಂಟರ್‌ನೆಟ್‌ನಿಂದ ಡೌನ್‌ಲೋಡ್ ಮಾಡಿಯೂ ನನಗೆ ವಿಷಯ ಕಳುಹಿಸುವ ಹಲವಾರು ಸ್ನೇಹಿತರು, ‘ಯಾಕೆ ಯೋಚನೆ? ನಾನು ಕೂಡ ಆ ಫಂಕ್ಷನ್‌ಗೆ ಹೋಗ್ತೇನೆ, ಬನ್ನಿ’ ಎಂದು ಹಲವಾರು ಕಾರ್‍ಯಕ್ರಮಗಳಿಗೆ ಕರೆದೊಯ್ಯುವ ಹರಪನಹಳ್ಳಿ, ಹಾಗೂ ತಂದೆ ಪ್ರೀತಿ ನೀಡುವ ನನ್ನ ಕಾವ್ಯಗುರುಗಳಾದ ವಿಷ್ಣು ನಾಯ್ಕರಂತಹ ಹಿರಿಯರು ಎಲ್ಲರ ಪ್ರೀತಿಯಲ್ಲಿ ನಾನು ನಿರಾಳವಾಗಿದ್ದೇನೆ. ಪುಟ್ಟ ಮಗುವಾಗಿದ್ದಾಗಿಂದ ನಾನು ಹೈಸ್ಕೂಲ್ ಮೆಟ್ಟಿಲು ಏರುವವರೆಗೂ ಎತ್ತಿಕೊಂಡೇ ಓಡಾಡುತ್ತಿದ್ದ ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿದ್ದ ಗಣಪಿ ಹಾಗೂ ಆಕೆಯ ಗಂಡ ನಾಗಪ್ಪ, ನೀನು ಓದಿ ಮುಗಿಸು. ಅಲ್ಲಿಯವರೆಗೆ ಟಿ.ವಿ. ಹಚ್ಚೋದಿಲ್ಲ ಎಂದು ನನ್ನ ಪರೀಕ್ಷೆ ಸಮಯದಲ್ಲಿ ತಾವೂ ಟಿ.ವಿ. ನೋಡದೆ ಓದಿಗೆ ಅನುಕೂಲ ಮಾಡಿಕೊಡುತ್ತಿದ್ದ ಅಮ್ಮಿನಳ್ಳಿಯ ನಮ್ಮ ಬಾಡಿಗೆ ಮನೆಯ ಓನರ್, ನೀನು ಸಾಧಿಸ್ತೀಯ ಎಂದು ಬೆನ್ನು ತಟ್ಟಿದ ಸ್ನೇಹಿತರು, ಗುರುಗಳು ಎಲ್ಲರೂ ನನ್ನ ಸುತ್ತಲೂ ಒಂದು ಪ್ರೀತಿಯ ಅಗೋಚರ ಕೋಟೆ ಕಟ್ಟಿದವರು. ಸುತ್ತಲ ಪ್ರೀತಿ ಜಗತ್ತನ್ನೇ ಗೆಲ್ಲುವ ಶಕ್ತಿ ನೀಡುತ್ತದೆ ಎಂಬುದು ಇದೇ ಕಾರಣಕ್ಕಾಗಿ. ಇಂತಹ ಪ್ರೀತಿ ಹೊಳೆದಂಡೆಯಲ್ಲಿರುವ ಗರಿಕೆಯಂತಾಗಲಿ.

‍ಲೇಖಕರು avadhi

6 February, 2014

5 Comments

  1. Santosh

    Good 🙂

  2. bharathi

    Loved this article …

  3. Anonymous

    Intaha nisvartha priti indagiye baduku belaguvudu.. adannella nenesuva nimma dodda gunavu mechhuvantaddu..

  4. lakshmishankarjoshi.

    Entha chanda baradiye marayti.uttara kannada nee teedada.jayanta kaykini haadu nenapaytu.

  5. Kavya Nagarakatte

    ಅಕ್ಕ, ಈ ಲೇಖನದ ಮೊದಲರ್ಧ ತುಂಬಾ ಹಿಡಿಸಿತು. ನೀವು ಮುಂದೊಮ್ಮೆ ಬರೆಯಬಹುದಾದ ಕಾದಂಬರಿಯ ಪುಟಗಳಂತಿವೆ ಇವು. ಸೋಮಿ ಮತ್ತು ಫಾತಿಮಾ ಬಾಯಿಯರ ಸಂಗತಿಗಳು ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ. ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading