ಗೋವಿಂದಾ ಗೋವಿಂದ…!
ಕೇಶವರೆಡ್ಡಿ ಹಂದ್ರಾಳ
” ಅರಾಸ ತಪ್ಪಿ ಅದೆಲ್ಲಿ ಮಲ್ಗವ್ನೊ ಎಳ್ಕಬರ್ರಲೇ ಅವುನೈನ್ ದಾಸಯ್ಯನ್ನ ಬಡುದ್ರು . ಎಲೆಮ್ಯಾಗ್ಳ್ ಪಾಯ್ಸ ಹೆಪ್ ಕಟ್ತಾ ಐತೆ , ಕರ್ಳ್ ಕೂಗ್ಕಮ್ತ ಅವ್ವೆ..” ನಮ್ಮ ಬಾಲ್ಯದ ಬಯಲು ಸೀಮೆಯ ಹಳ್ಳಿಗಳಲ್ಲಿ ಮದುವೆ ,ತಿಥಿ ,ಜಾತ್ರೆ ಟೈಮುಗಳಲ್ಲಿ ಪಂಕ್ತಿಗೆ ಊಟ ಬಡಿಸಿ ದಾಸಯ್ಯ ‘ ಗೋವಿಂದ ‘ ಹೇಳಲು ಲೇಟಾದರೆ ಇಂಥಾ ಮಾತುಗಳು ಕೇಳಿಬರುತ್ತಿದ್ದದ್ದು ಸಾಮಾನ್ಯವಾಗಿರುತ್ತಿತ್ತು . ನಮ್ಮ ಬಯಲುಸೀಮೆಯ ಹಳ್ಳಿಗಳಲ್ಲಿ ಮದುವೆ , ಜಾತ್ರೆ ,ತಿಥಿ ಮುಂತಾದ ಕಾರ್ಯ ಕ್ರಮಗಳಲ್ಲಿ ಅತಿ ಮುಖ್ಯವಾದ ಘಟ್ಟ’ ಊಟ ‘ . ಊಟದ ಪಂಕ್ತಿಯಲ್ಲಿ ಎಲ್ಲಾ ಐಟಂ ಗಳನ್ನು ಬಡಿಸಿದ ಮೇಲೆ , ಬಾಯಿಗಿಟ್ಟುಕೊಳ್ಳುವ ಮೊದಲು ದಾಸಪ್ಪ ಎಡೆ ಪೂಜೆ ಮಾಡಿ ” ಗೋವಿಂದ ಗೋವಿಂದಾ ” ” ಶ್ರೀ ಆಂಜನೇಯ ವರದ ಗೋವಿಂದಾ ಗೋವಿಂದ ”
” ಶ್ರೀರಂಗನಾಥ ಸ್ವಾಮಿ ಪಾದವೇ ಗತಿ ಗೋವಿಂದಾ ಗೋವಿಂದ ” ಮುಂತಾಗಿ ಗೋವಿಂದಗಳನ್ನು ಹೇಳುತ್ತಿದ್ದ .ಪಂಕ್ತಿಯಲ್ಲಿ ಕುಂತವರು ಗೋವಿಂದ ಎಂದು ಧ್ವನಿ ಸೇರಿಸುತ್ತಿದ್ದರು . ಕಡೆಗೆ ದಾಸಪ್ಪ ಅಪ್ಪಣೆ ಆಯ್ತು ಎಂದ ಮೇಲೆ ಕೈ ಬಾಯಿಗೆ ಯುದ್ಧ ಶುರುವಾಗುತ್ತಿತ್ತು . ಈ ಪದ್ಧತಿ ನಮ್ಮ ಕಡೆ ಕಂಪಲ್ಸರಿಯಾಗಿತ್ತು .
ಅಪರೂಪದ ಅಡುಗೆ ಪದಾರ್ಥಗಳನ್ನು ಎಲೆ ಮೇಲೆ ಬಡಿಸುತ್ತಿದ್ದರೆ ನಾಲಿಗೆ ಮೇಲೆ ನೀರೂರಿ ಮಕ್ಕಳು ಮತ್ತು ಯುವಕರು ಅಪ್ಪಳ , ಸಂಡಿಗೆಗಳನ್ನು ಕಾಣದಂತೆ ಬಾಯಿಗಿಟ್ಟುಕೊಂಡು ನಮುಲುತ್ತಿದ್ದೆವು .ದೊಡ್ಡವರೇನಾದರೂ ನೋಡಿದರೆ
” ಗೋವಿಂದ ಹೇಳೋವರ್ಗೂ ಬಾಯಿಗೆ ಇಟ್ಕಬಾರ್ದಲೇ .ಎಂಥ ವಚ್ ಬಾಯಿಗ್ಳೊ ನಿಮ್ಮವು..” ಎಂದು ಅವರೂ ಜೊಲ್ಲು ಸೋರಿಸಿಕೊಂಡು ಗದರುತ್ತಿದ್ದರು . ಮಾಮೂಲಿಯಾಗಿ ಬರುತ್ತಿದ್ದಾಗ ಈ ದಾಸಪ್ಪಗಳಿಗೆ ಅಷ್ಟೇನೂ ಕೇರ್ ಮಾಡದವರು ಇಂಥ ಕಾರ್ಯಕ್ರಮಗಳ ಸಮಯಗಳಲ್ಲಿ ತುಂಬಾ ಗೌರವದಿಂದ ಕಾಣುತ್ತಿದ್ದರು .
ನಮ್ಮೂರಿಗೆ ಇಬ್ಬರು ದಾಸಯ್ಯಗಳು ಪರ್ಮನೆಂಟಾಗಿ ಬರುತ್ತಿದ್ದರು . ದೊಡ್ಡಸಳ್ಳಿಯ ದಾಸಯ್ಯ ಪ್ರತಿ ಶನಿವಾರದಂದು ತಪ್ಪದೆ ಬರುತ್ತಿದ್ದ . ಹಾಗಾಗಿ ಆತನನ್ನು ವಾರದ ದಾಸಯ್ಯ ಎಂದೇ ಕರೆಯುತ್ತಿದ್ದೆವು . ತನ್ನ ಹಣೆಗೇ ಅಲ್ಲದೆ ಗರುಡಗಂಬ , ಬನವಾಸಿಗೂ ದೊಡ್ಡ ದೊಡ್ಡ ಬಿಳಿ ಕೆಂಪು ನಾಮಗಳನ್ನು ಬಳಿದುಕೊಂಡು , ಲಯಬದ್ಧವಾಗಿ ಜಾಗಟೆ ಬಡಿದುಕೊಂಡು ಬರುತ್ತಿದ್ದ . ಗರುಡಗಂಬದ ಮಸಿಯನ್ನು ತಾನೇ ಎಲ್ಲರ ಹಣೆಗಳಿಗೂ ಬಳಿಯುತ್ತಿದ್ದ . ಸಾಮಾನ್ಯವಾಗಿ ಊರಿನ ಎಲ್ಲಾ ಹೆಂಗಸರೂ ರಾಗಿ ಹಸಿಟ್ಟನ್ನು ಬನವಾಸಿಗೆ ಹಾಕುತ್ತಿದ್ದರು . ಅಕ್ಕಿ ಬೇಳೆ ಕಾಳು ಹಾಕಿದರೆ ಇರಲೆಂದು ದಾಸಯ್ಯ ಜೋಳಿಗೆಯನ್ನೂ ನೇತಾಕಿಕೊಂಡು ಬರುತ್ತಿದ್ದ . ದಾಸಯ್ಯನಿಗೆ ಮೆಳ್ಳೆಗಣ್ಣು ಇದ್ದುದ್ದರಿಂದ ಮಳ್ಗಣ್ ದಾಸಯ್ಯ ಎಂದೂ ಕರೆಯಲಾಗುತ್ತಿತ್ತು . ಇನ್ನು ಪಕ್ಕದ ಹನುಮಂತಪುರದಿಂದ ಬರುತ್ತಿದ್ದ ದಾಸಯ್ಯ ಯಾವಾಗಂದರೆ ಆವಾಗಲೇ ಬರುತ್ತಿದ್ದ . ಬನವಾಸಿಗೆ ಹಿಟ್ಟು ಸಾರು ಹಾಕಿಸಿಕೊಳ್ಳುತ್ತಿದ್ದ . ಒಂದೊಂದು ಸಾರಿ ಗರುಡಗಂಬ ತರುತ್ತಲೇ ಇರುತ್ತಿರಲಿಲ್ಲ . ಆತನನ್ನು ಹೊಟ್ಟೆ ಪಾಡಿನ ದಾಸಯ್ಯ ಎನ್ನುತ್ತಿದ್ದರು .
ಈ ತಿಂಗಳ ಹಿಂದೆ ಊರಿಗೆ ಹೋದಾಗ ಕೋಡಗದಾಲದ ಹತ್ತಿರ ಹೋಗುತ್ತಿರಬೇಕಾದರೆ ರಸ್ತೆ ಪಕ್ಕದ ಮರದ ಕೆಳಗೆ ದಾಸಯ್ಯನೊಬ್ಬ ಬುಡಕ್ಕೊರಗಿ ಕುಳಿತಿದ್ದ .ಬವನಾಸಿ ,ಗರುಡಗಂಬ ಎರಡೂ ಮುಂದಿಟ್ಟುಕೊಂಡಿದ್ದ . ದಾಸಯ್ಯನನ್ನು ನೋಡಿ ತುಂಬಾ ದಿನವಾದ್ದರಿಂದ ಕಾರು ನಿಲ್ಲಿಸಿದ್ದೆ .” ಯಾವೂರ್ ದಾಸಯ್ಯ ” ಎಂದು ಕೇಳಿದ್ದೆ . ದಾಸಯ್ಯ ತಟ್ಟಾಡುತ್ತಾ ಎದ್ದು ನಿಂತು ” ಮಧುಗಿರಿ ಕಣಣ್ಣ .. ಎಲ್ಲಿ ಒಂದತ್ ರೂಪಾಯಿ ಇದ್ರೆ ಕೊಡಣ್ಣ..” ಎಂದಿದ್ದ . ದಾಸಯ್ಯನ ಬಾಯಿಂದ ಘಮ್ಮೆಂದು ವಾಸನೆ ಬರುತ್ತಿತ್ತು . ಅಲ್ಲೆ ಎಮ್ಮೆ ಮೇಯಿಸುತ್ತಿದ್ದ ಹೆಂಗಸರು ” ಅಣ್ಣಯ್ಯೊ ಜಾಸ್ತಿ ಕೊಟ್ಗಿಟ್ಟೀಯ . ಆಮ್ಯಾಕೆ ಉಯ್ಕೊಂಡು ರಾತ್ರಿ ಪೂರ ಇಲ್ಲೆ ಬಿದ್ಕಂಬ್ತಾನೆ . ದಿನಾ ಕುಡ್ಯೋಕ್ ಸಂಪಾದ್ನೆ ಮಾಡೋಕೆ ಈಯಪ್ಪ ದಾಸಯ್ಯನ ವೇಷ ಹಾಕ್ಕೊಂಡ್ ಬತ್ತಾನೆ . ಈಯಪ್ಪನ ಹೆಂಡ್ತಿ ಮಕ್ಳ್ ಹೊಟ್ಟೆ ಮೇಲೆ ತಣ್ಣೀರು ಬಟ್ಟೆನೇ ಗತಿ..” ಎಂದಿದ್ದರು .ಐವತ್ತು ರೂಪಾಯಿ ಕೊಡಲು ತೆಗೆದಿದ್ದವನು ಒಳಗಿಟ್ಟುಕೊಂಡು ಇಪ್ಪತ್ತು ರೂಪಾಯನ್ನು ಬಗ್ಗಿ ಬವನಾಸಿಗೆ ಹಾಕಿದ್ದೆ . ದಾಸಪ್ಪ ಖಷಿಯಿಂದ ” ಗೋವಿಂದಾ ಗೋವಿಂದ ..” ಎಂದಿದ್ದ .
ನಾನು ಕಾರು ಹತ್ತಿ ಹೊರಟಾಗ ದಾಸಯ್ಯನೂ ಎದ್ದು ಹೊರಟಿದ್ದು ಕಾರಿನ ಮಿರರ್ ನಲ್ಲಿ ಕಾಣುತ್ತಿತ್ತು
'ಯಾವೂರ್ ದಾಸಯ್ಯ'ಎಂದು ಕೇಳಿದ್ದೆ..
ನಿಮಗೆ ಇವೂ ಇಷ್ಟವಾಗಬಹುದು…





0 Comments