ರಾಜಕೀಯ ಬಂಡವಾಳ -ಸೆಕ್ಯುಲರಿಸಂ
ಭಾರತದ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಸೆಕ್ಯುಲರಿಸಂ ಎಂದರೆ ಧುತ್ತನೆ ಎದುರಾಗುವುದು ಮತೀಯ ಮೂಲಭೂತವಾದ, ಹಿಂದುತ್ವ, ಇಸ್ಲಾಮಿಕ್ ಜಿಹಾದ್ ಇತ್ಯಾದಿ ಇತ್ಯಾದಿ. ಒಂದೆಡೆ ಹಿಂದುತ್ವವಾದಿಗಳು ಭಾರತೀಯ ಮೂಲ ಸಂಸ್ಕೃತಿಯನ್ನೇ ಸೆಕ್ಯುಲರ್ ಎಂದು ಬಣ್ಣಿಸಿದರೆ ಮತ್ತೊಂದೆಡೆ ಮತೀಯವಾದವನ್ನೇ ತಮ್ಮ ರಾಜಕೀಯ ಬಂಡವಾಳವನ್ನಾಗಿ ಮಾಡಿಕೊಂಡಿರುವ ದೇಶದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಸೆಕ್ಯುಲರಿಸಂ ಎಂಬ ವಿದ್ಯಮಾನವನ್ನು ತಾತ್ವಿಕ ಚೌಕಟ್ಟಿನಿಂದ ಹೊರಗಿಟ್ಟು ತಮ್ಮದೇ ಆದ ರಾಜಕೀಯ ಚೌಕಟ್ಟಿನೊಳಗೆ ಬಂಧಿಸಿವೆ. ಒಂದು ಭ್ರಾತೃಘಾತುಕ ಘಟನೆಯನ್ನು ಸಮರ್ಥಿಸಲು ಮತ್ತೊಂದು ವಿಧ್ವಂಸಕ ಕೃತ್ಯವನ್ನು ಪ್ರತಿಯಾಗಿ ಮುಂದಿಡುವ ಒಂದು ಪರಂಪರೆ ರಾಜಕೀಯ ಕ್ಷೇತ್ರದಲ್ಲಿ, ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇರುತ್ತದೆ.
ತಮ್ಮ ಹತ್ತು ನಿಮಿಷಗಳ ವ್ಯಾಖ್ಯಾನದ ಮೂಲಕ ತಮ್ಮ ವಾದಸರಣಿಯನ್ನೇ ಅಂತಿಮ ಸತ್ಯ ಎಂದು ಬಿಂಬಿಸುವ ರಾಜಕೀಯ ಪಕ್ಷಗಳ ಅಧಿಕೃತ ವಕ್ತಾರರು ಮತ್ತು ಅನಧಿಕೃತ ‘ ಸ್ವಾಯತ್ತ ‘ ವಿದ್ವಾಂಸರುಗಳು ತಮ್ಮ ಸೈದ್ಧಾಂತಿಕ ನಿಲುವಿಗೆ ಅನುಸಾರವಾಗಿ ಸೆಕ್ಯುಲರಿಸಂ ತತ್ವವನ್ನು ವ್ಯಾಖ್ಯಾನಿಸುತ್ತಾ, ದೇಶದ ಜನತೆಯನ್ನು ಸದಾ ಗೊಂದಲದ ಗೂಡಿನಲ್ಲೇ ಉಳಿಸಲು ಯತ್ನಿಸುತ್ತಿರುತ್ತಾರೆ.
ಹಾಗಾಗಿಯೇ 2002ರ ಹತ್ಯಾಕಾಂಡ ಮತ್ತು ಗೋದ್ರಾ, 1993ರ ಮುಂಬೈ ಕೋಮು ಗಲಭೆ-ಬಾಬ್ರಿ ಮಸೀದಿ ಧ್ವಂಸ, ಇಂದಿರಾಗಾಂಧಿ ಹತ್ಯೆ- ಸಿಖ್ ವಿರೋಧಿ ಗಲಭೆ ಹೀಗೆ ಜಂಟಿ ಘಟನೆಗಳ ಸರಣಿ ಬೆಳೆಯುತ್ತಲೇ ಹೋಗುತ್ತದೆ. 2002ರ ಗುಜರಾತ್ ಹತ್ಯಾಕಾಂಡವನ್ನು ಖಂಡತುಂಡವಾಗಿ ಖಂಡಿಸುವವರಿಗೆ ಕೆಲವೊಮ್ಮೆ ಗೋದ್ರಾ ದುರಂತ ಗೋಚರಿಸುವುದಿಲ್ಲ. ಗೋದ್ರಾ ಘಟನೆಯನ್ನು ಸಮರ್ಥಿಸುವವರಿಗೆ ಗುಜರಾತ್ ಹತ್ಯಾಕಾಂಡ ಒಂದು ಚರ್ಚೆಯ ವಿಷಯವೇ ಆಗುವುದಿಲ್ಲ. ಇದು ಸ್ವಾಭಾವಿಕ ಪ್ರತಿಕ್ರಿಯೆಗಳಾಗಿಬಿಡುತ್ತವೆ. ಸಮಕಾಲೀನ ಸಂದರ್ಭದಲ್ಲಿ ನೋಡುವುದಾದರೆ ನರೇಂದ್ರ ಮೋದಿಗೆ ಅಮೆರಿಕ ಸರ್ಕಾರ ವೀಸಾ ನೀಡುವ ಪ್ರಕ್ರಿಯೆಯೂ ಸೆಕ್ಯುಲರಿಸಂ ಸುತ್ತಲಿನ ವಾದಕ್ಕೆ ಬಳಕೆಯಾಗುತ್ತದೆ.
ಮೋದಿ ಸೆಕ್ಯುಲರ್ ರಾಜಕಾರಣಿಯೋ ಅಲ್ಲವೋ ಎಂದು ನಿರ್ಧರಿಸುವುದು ಈ ದೇಶದ ಸಾರ್ವಭೌಮ ಪ್ರಜೆಗಳೇ ಹೊರತು ಪೂರ್ವಗ್ರಹ ಪೀಡಿತ ರಾಜಕೀಯ ಪಕ್ಷಗಳಲ್ಲ. ಹಿಂದುತ್ವ ಸಿದ್ಧಾಂತದಲ್ಲೇ ಮುಳುಗಿ ತೇಲುತ್ತಿರುವ ಮೋದಿಯನ್ನು ಸೆಕ್ಯುಲರ್ ಎಂದು ಬಣ್ಣಿಸುವ ಹಕ್ಕೂ ರಾಜಕೀಯ ಪಕ್ಷಗಳಿಗೆ ಇರುವುದಿಲ್ಲ. ವಿಪರ್ಯಾಸವೆಂದರೆ ಈ ದೇಶದ ಸಾರ್ವಭೌಮ ಪ್ರಜೆಗಳ ಅಭಿಪ್ರಾಯಗಳನ್ನು ಚುನಾವಣೆಗಳ ಸೂಕ್ಷ್ಮ ದರ್ಶಕ ಯಂತ್ರದಿಂದಲೇ ನೋಡಲಾಗುತ್ತದೆ. ಈ ದೇಶದ ಚುನಾವಣೆಗಳ ಆಂತರ್ಯವನ್ನು ಬಲ್ಲವರಾರೂ ಈ ದೃಷ್ಟಿಕೋನವನ್ನು ಒಪ್ಪಲಾಗುವುದಿಲ್ಲ.
ಹಾಗಾಗಿ ನರೇಂದ್ರ ಮೋದಿಯನ್ನು ದೇಶದ ಬಹುಪಾಲು ಜನತೆ ಪ್ರಧಾನಿ ಅಭ್ಯರ್ಥಿಯಾಗಿ ಸಮ್ಮತಿಸುತ್ತಾರೆ ಎಂದು ಮಾಧ್ಯಮ-ಕಾರ್ಪೊರೇಟ್ ಜೋಡಿಯ ಸಮೀಕ್ಷೆಯೊಂದು ಪ್ರತಿಪಾದಿಸಿದರೆ ಅದು ಅರ್ಧಸತ್ಯ ಮಾತ್ರವಾಗುತ್ತದೆ. ಇದರ ವ್ಯತಿರಿಕ್ತ ಅಭಿಪ್ರಾಯವೂ ಅರ್ಧಸತ್ಯವೇ ಆಗುತ್ತದೆ. ಏಕೆಂದರೆ ನಮ್ಮ ದೇಶದ ಜನತೆ ಪರಿಭಾವಿಸುವ ಸೆಕ್ಯುಲರಿಸಂ ತತ್ವಗಳಿಗೂ ರಾಜಕೀಯ ಪಕ್ಷಗಳು ಮತ್ತು ಕಾರ್ಪೊರೇಟ್ ನಿಯಂತ್ರಿತ ಮಾಧ್ಯಮಗಳು ಪ್ರತಿಪಾದಿಸುವ ಸೆಕ್ಯುಲರ್ ತತ್ವಗಳಿಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ನರೇಂದ್ರ ಮೋದಿಗೆ ಅಮೆರಿಕ ಸರ್ಕಾರ ವೀಸಾ ನೀಡುವುದನ್ನು ವಿರೋಧಿಸುವ ಹಲವು ರಾಜಕಾರಣಿಗಳು ತಮ್ಮ ಸೆಕ್ಯುಲರ್ ಸ್ವರೂಪವನ್ನು ಹೊರಗೆಡಹುವ ತವಕದಿಂದ ವಾಸ್ತವ ರಾಜಕಾರಣವನ್ನು ಮರೆಮಾಚುತ್ತಿರುವುದು ಸ್ಪಷ್ಟ. ಒಂದು ಶಾಶ್ವತ ಸತ್ಯ ಎಂದರೆ ಭಾರತದಲ್ಲಿ ಕೆಲವು ಎಡಪಕ್ಷಗಳನ್ನು ಹೊರತುಪಡಿಸಿದರೆ (ಕೆಲವೊಂದು ಸಂದರ್ಭಗಳಲ್ಲಿ ಇದೂ ಸಹ ಚರ್ಚಾಸ್ಪದವಾಗುತ್ತದೆ ) ಯಾವುದೇ ರಾಜಕೀಯ ಪಕ್ಷವೂ ಸೆಕ್ಯುಲರ್ ಎಂದು ಎದೆ ತಟ್ಟಿ ಹೇಳಿಕೊಳ್ಳಲಾಗುವುದಿಲ್ಲ. ಕಾರಣ 1976ರಲ್ಲಿ ಸಂವಿಧಾನದ ಮೂಲ ತತ್ವವಾಗಿ ಸೇರ್ಪಡೆಯಾದ ಸೆಕ್ಯುಲರಿಸಂ ಎಂಬ ರಾಜಕೀಯ ಪರಿಕಲ್ಪನೆಯೇ ದೋಷಪೂರಿತವಾಗಿದೆ. ಎರಡು ಸಮುದಾಯಗಳನ್ನು ಅಥವಾ ಎರಡು ಸಮುದಾಯಗಳ ಮತೀಯವಾದಿಗಳನ್ನು ಪರಸ್ಪರ ಎದುರಾಗಿಟ್ಟು ವ್ಯಾಖ್ಯಾನಿಸಲಾಗುವ ವಿದ್ಯಮಾನವನ್ನು ಸೆಕ್ಯುಲರಿಸಂ ಎನ್ನಲಾಗುವುದಿಲ್ಲ.

ಮೂಲತಃ ಜಾಗತಿಕ ಇತಿಹಾಸದ ಅವಲೋಕನ ಮಾಡಿದಾಗ ಸೆಕ್ಯುಲರಿಸಂ ಎಂದರೆ ರಾಜಕಾರಣದಿಂದ ಅಥವಾ ಆಡಳಿತ ವ್ಯವಸ್ಥೆಯಿಂದ ಧರ್ಮ ಅಥವಾ ಧಾರ್ಮಿಕತೆಯನ್ನು ದೂರ ಇರಿಸುವುದೇ ಆಗಿದೆ. ಭಾರತದ ಸಂದರ್ಭದಲ್ಲಿ ಧರ್ಮದೊಡನೆ ಜಾತಿಯನ್ನೂ ಸೇರಿಸಬೇಕಾಗುತ್ತದೆ. ಮತೀಯವಾದಕ್ಕಿಂತಲೂ ಹೆಚ್ಚು ಅಪಾಯಕಾರಿಯಾದ ಜಾತಿವಾದವನ್ನು ಪೋಷಿಸುವುದೇ ಅಲ್ಲದೆ, ಜಾತಿವಾದದ ಆಧಾರದ ಮೇಲೆಯೇ ತಮ್ಮ ರಾಜಕೀಯ ಮೆಟ್ಟಿಲುಗಳನ್ನು ನಿರ್ಮಿಸಿಕೊಳ್ಳುವ ಪಕ್ಷಗಳು ಸೆಕ್ಯುಲರ್ ತತ್ವಗಳನ್ನು ಕುರಿತು ಮಾತನಾಡುವ ನೈತಿಕ ಹಕ್ಕನ್ನೇ ಕಳೆದುಕೊಳ್ಳುತ್ತವೆ. ಸೆಕ್ಯುಲರಿಸಂ ತತ್ವವನ್ನು ರಾಜಕೀಯ ಮತ್ತು ಚುನಾವಣಾ ಪರಿಧಿಯಿಂದ ಹೊರಗಿಟ್ಟು ವ್ಯಾಖ್ಯಾನಿಸಿದಾಗ ಇದು ಸ್ಪಷ್ಟವಾಗುತ್ತದೆ. ತನ್ನ ರಾಜಕೀಯ ಅಧಿಕಾರ ಉಳಿಸಿಕೊಳ್ಳಲು ಒಂದು ಸಮುದಾಯದ ಹಲವು ಮತೀಯವಾದಿಗಳನ್ನು ಓಲೈಸಲು ಮತ್ತೊಂದು ಸಮುದಾಯದ ಮತೀಯವಾದಿಗಳಿಗೆ ರಾಜಕೀಯ ಅಧಿಕಾರದ ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟ ಕಾಂಗ್ರೆಸ್ ಪಕ್ಷವನ್ನು ಸೆಕ್ಯುಲರ್ ಎಂದು ಪರಿಗಣಿಸುವುದನ್ನು ಈ ದೃಷ್ಟಿಯಿಂದಲೇ ವಿಶ್ಲೇಷಿಸಬೇಕಾಗುತ್ತದೆ. ಅದೇ ವೇಳೆ ಸೌಹಾರ್ದತೆಯ ಅರ್ಥವನ್ನೇ ಗ್ರಹಿಸದ ಒಂದು ಸಂಸ್ಕೃತಿಯನ್ನು, ಧರ್ಮದ ಚೌಕಟ್ಟಿನಲ್ಲಿ ಬಂಧಿಸಿ ಅದನ್ನೇ ನಿಜವಾದ ಸೆಕ್ಯುಲರಿಸಂ ಎಂದು ಬಣ್ಣಿಸುವ ಬಿಜೆಪಿಯ ವಿತಂಡವಾದವನ್ನೂ ಪರಾಮರ್ಶಿಸಬೇಕಾಗುತ್ತದೆ.
ಭಾರತದ ದುರಂತವೆಂದರೆ ಇಲ್ಲಿ ಮತ ಧರ್ಮ, ಜಾತಿ ಮತ್ತು ರಾಜಕಾರಣ ಒಂದರೊಳಗೊಂದು ಹಾಸು ಹೊಕ್ಕಾಗಿದ್ದು ಇಡೀ ದೇಶದ ಆಡಳಿತ ವ್ಯವಸ್ಥೆಯನ್ನು ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಿದೆ. ಪ್ರಾಥಮಿಕ ಶಾಲೆಯ ಪ್ರವೇಶಾತಿಯಿಂದ ರಾಷ್ಟ್ರಪತಿ ಚುನಾವಣೆಗಳವರೆಗೂ ಪ್ರತಿ ಹಂತದಲ್ಲೂ, ಪ್ರತಿ ಕ್ಷೇತ್ರದಲ್ಲೂ, ಪ್ರತಿಯೊಂದು ಆಯಾಮದಲ್ಲೂ ಇಲ್ಲಿನ ಆಡಳಿತ ವ್ಯವಸ್ಥೆ ಮನುಕುಲವನ್ನು ಜಾತಿ, ಮತ, ಧರ್ಮ ಮತ್ತು ಭಾಷಿಕ ಅಸ್ಮಿತೆಗಳಲ್ಲೇ ಬಂಧಿಸಿಡುತ್ತದೆ. ಹಾಗಾಗಿಯೇ ನರೇಂದ್ರ ಮೋದಿ ಗುಜರಾತ್ ಹತ್ಯಾಕಾಂಡದ ನಂತರವೂ ಅಲ್ಲಿನ ದಲಿತ ಸಮುದಾಯಗಳಿಗೆ ಪ್ರಿಯರಾಗುತ್ತಾರೆ. ಕೋಮುವಾದಿ , ಫ್ಯಾಸಿಸ್ಟ್ ಪಕ್ಷ ಎಂದೇ ಕರೆಯಲ್ಪಡುವ ಬಿಜೆಪಿಯೊಡನೆ ಒಡನಾಟ ಹೊಂದಿದ್ದ/ಹೊಂದಿರುವ ನೀತಿಶ್ ಕುಮಾರ್ ಹಿಂದುಳಿದ ವರ್ಗಗಳಿಗೆ ಪ್ರಿಯರಾಗುತ್ತಾರೆ. ಅಂಬೇಡ್ಕರ್ವಾದವನ್ನು ಪ್ರತಿಪಾದಿಸುವ ಪಕ್ಷಗಳು ಸೆಕ್ಯುಲರ್ ಅಲ್ಲದ ಬಿಜೆಪಿಯೊಡನೆ ಸಂಬಂಧ ಬೆಳೆಸುತ್ತವೆ. ಇಲ್ಲಿ ರಾಜಕೀಯ ಅನಿವಾರ್ಯತೆಗಳಿಗಿಂತಲೂ ಜಾತಿ ರಾಜಕಾರಣದ ಒತ್ತಡಗಳು ಮತ್ತು ಕಾರ್ಪೊರೇಟ್ ಪ್ರೇರಿತ ಆಡಳಿತ ವ್ಯವಸ್ಥೆಯ ಒತ್ತಾಸೆಗಳು ಪ್ರಮುಖವಾಗಿ ಕಾಣುತ್ತವೆ.
ಈ ವಿದ್ಯಮಾನಗಳ ಅಡ್ಡ ಪರಿಣಾಮ ಎಂದರೆ ಈ ದೇಶದ ಸಾಮಾಜಿಕ, ರಾಜಕೀಯ, ಮಾಧ್ಯಮ ವಲಯಗಳಲ್ಲಿ ಸೆಕ್ಯುಲರಿಸಂ ತತ್ವವನ್ನು ವ್ಯಾಖ್ಯಾನಿಸುತ್ತಿರುವುದು ನವ ಉದಾರವಾದದ ಮೂಲಕ ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ ಕಾರ್ಪೊರೇಟ್ ಸಂಸ್ಕೃತಿ ಮತ್ತು ಇದನ್ನು ಪೋಷಿಸುವ ಅಧಿಕಾರದಾಹಿ ರಾಜಕಾರಣ. ಚುನಾವಣೆಗಳಿಂದಾಚೆಗೂ ಸಾರ್ವಭೌಮ ಪ್ರಜೆಗಳ ಅಭಿಪ್ರಾಯವೊಂದಿದೆ ಎಂಬ ಸತ್ಯ ಇಲ್ಲಿ ಗೌಣವಾಗುವುದರಿಂದಲೇ ರಾಜಕೀಯ ಪ್ರಣೀತ ಸೆಕ್ಯುಲರಿಸಂ ಎಂಬ ಅರ್ಧಸತ್ಯ ರಾರಾಜಿಸುತ್ತದೆ. ರಾಜಕೀಯ ಬಂಡವಾಳದ ರೂಪದಲ್ಲಿ.





What a title!! It takes so long for an intellectual to realize!! Common people like us know this from the first day of independence. So, would the pseudo-intellectuals come out with their premonitions? NO. They hang on to political parties for personal gains and not to enlighten the common person. Such people are as detestable as political parties.
Sorry mr Kiran It is not late realisation. We know for sure who is secular and very well know that no political party is truly secular. But The secularism of congress is a farce and that of a “BJP is deciet. To fignt fascist BJP one need not hang on to congress variety of secularism. True secularism has remained undefined in India because of the strangle hold of Religion on masses and society.
ಶಾಶ್ವತ ಸತ್ಯ ಎಂದರೆ ಭಾರತದಲ್ಲಿ ಕೆಲವು ಎಡಪಕ್ಷಗಳನ್ನು ಹೊರತುಪಡಿಸಿದರೆ (ಕೆಲವೊಂದು ಸಂದರ್ಭಗಳಲ್ಲಿ ಇದೂ ಸಹ ಚರ್ಚಾಸ್ಪದವಾಗುತ್ತದೆ ) ಯಾವುದೇ ರಾಜಕೀಯ ಪಕ್ಷವೂ ಸೆಕ್ಯುಲರ್ ಎಂದು ಎದೆ ತಟ್ಟಿ ಹೇಳಿಕೊಳ್ಳಲಾಗುವುದಿಲ್ಲ.