ಪ್ರೊ. ಎಂ.ಡಿ. ನಂಜುಂಡಸ್ವಾಮಿ : ಒಂದು ನೆನಪು
ಡಿ ಎಸ್ ನಾಗಭೂಷಣ
ಇತ್ತೀಚೆಗೆ ಎಂ.ಡಿ. ನಂಜುಂಡಸ್ವಾಮಿಯವರ ಪುತ್ಥಳಿಯೊಂದನ್ನು ಅನಾವರಣ ಮಾಡಿದ ಸುದ್ದಿ ಓದಿದೆ. ಜೊತೆಗೆ ಫೇಸ್‌ಬುಕ್‌ನಲ್ಲಿ ನನ್ನ ಕೆಲ ಗೆಳೆಯರೂ ಇವರ ಬಗ್ಗೆ ಮಾತುಕತೆ ನಡೆಸುತ್ತಿರುವುದನ್ನೂ ಓದಿದೆ. ಈ ಹಿನ್ನೆಲೆಯಲ್ಲಿ ನನ್ನ ಹಳೇ ಬರಹವೊಂದನ್ನು ಇಲ್ಲಿ ಹಾಕುತ್ತಿದ್ದೇನೆ. ಈಗಾಗಲೇ ಇದನ್ನು ಓದಿರುವವರು ನನ್ನನ್ನು ಕ್ಷಮಿಸಲಿ
ನಂಜುಂಡಸ್ವಾಮಿಯವರನ್ನು ನಾನು ಮೊದಲು ಭೇಟಿಯಾದದ್ದು ೧೯೭೭ರಲ್ಲಿ, ಲಂಕೇಶರ ಮನೆಯಲ್ಲಿ.
ಆಗ ನಾನು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದು, ತುರ್ತು ಪರಿಸ್ಥಿತಿ ಸಮಯದಲ್ಲಿ ಮೈಸೂರಿನಿಂದ ರಾಜಶೇಖರ ಕೋಟಿಯವರು ಹೊರತರುತ್ತಿದ್ದ ‘ಆಂದೋಲನ’ ವಾರಪತ್ರಿಕೆಗೆ ಲೇಖನ-ಪತ್ರಗಳನ್ನು ಬರೆಯುತ್ತಿದ್ದೆ. ಅವುಗಳಲ್ಲಿ ಗಾಂಧಿ ಕುರಿತ ಒಂದು ಪತ್ರ ಲಂಕೇಶರಿಗೆ ಇಷ್ಟವಾಗಿ ಅವರು ನನ್ನನ್ನು ಕಾಣಲು ಬಯಸಿದ್ದಾರೆಂದು ಗೆಳೆಯರೊಬ್ಬರು (ಬಹುಶಃ ನೆಲಮನೆ ದೇವೇಗೌಡರು) ತಿಳಿಸಿದ್ದರಿಂದಾಗಿ ನಾನು ಲಂಕೇಶರ ಮನೆಗೆ ಹೋಗಿದ್ದೆ.
ಅಲ್ಲಿ ಲಂಕೇಶ್ ಇಬ್ಬರು ವ್ಯಕ್ತಿಗಳ ಜೊತೆ ಕೂತು ಮಾತನಾಡುತ್ತಿದ್ದರು. ಅವರಲ್ಲಿ ಒಬ್ಬರನ್ನು ಲಂಕೇಶ್ ಎಂ.ಡಿ. ನಂಜುಂಡಸ್ವಾಮಿ ಎಂದು ಪರಿಚಯಿಸಿದಾಗ (ಇನ್ನೊಬ್ಬರು ಖ್ಯಾತ ಪೆರಿಯಾರ್‌ವಾದಿ ಪ್ರೊ. ಧರ್ಮಲಿಂಗಂ) ನಾನು ದಂಗಾಗಿ ಹೋದೆ. ನಾನು ದಂಗಾಗಲು ಇದ್ದ ಕಾರಣ ಕೇಳಿ ಲಂಕೇಶರು ತಮ್ಮ ಕಿಕ್ಕೀಕೀ ಶೈಲಿಯಲ್ಲಿ ಬಿದ್ದು ಬಿದ್ದು ನಗಲಾರಂಭಿಸಿದರು.
ಆ ನನ್ನ ಕಾರಣ ಹೀಗಿತ್ತು:
ಹಿಂದಿನ ವಾರ ತಾನೇ ನಂಜುಂಡಸ್ವಾಮಿಯವರು ‘ಆಂದೋಲನ’ದಲ್ಲಿ ಖಾದಿ ವಸ್ತ್ರ ಧಾರಣೆಯನ್ನು ರಾಷ್ಟ್ರಾದ್ಯಂತ ಕಡ್ಡಾಯ ಮಾಡಬೇಕೆಂದು ಲೇಖನ ಬರೆದಿದ್ದರು. ಇಲ್ಲಿ ನೋಡಿದರೆ ಅವರನ್ನು ಕುರಿತ ನನ್ನ ಕಲ್ಪನೆಯೇ ತಲೆಕೆಳಗಾಗುವಂತೆ ತ್ರೀ ಪೀಸ್ ಸೂಟ್‌ಧಾರಿಯಾಗಿ ಬೋ ಟೈ ಕಟ್ಟಿ ಠಾಕೂಠೀಕಾಗಿ ಕೂತಿದ್ದಾರೆ! ಲಂಕೇಶರ ಅಸ್ಖಲಿತ ನಗುವಿನಿಂದ ಅಪ್ರತಿಭರಾದ ನಂಜುಂಡಸ್ವಾಮಿಯವರು ‘ಅದು ಸರ್ಕಾರಕ್ಕೆ ನನ್ನ ಸಲಹೆ. ಅದನ್ನು ಸರ್ಕಾರ ಮಾನ್ಯ ಮಾಡಿದ ಮರುದಿನವೇ ನಾನು ಸಂಪೂರ್ಣ ಖಾದಿಧಾರಿಯಾಗುವೆ. ಸಂದೇಹ ಬೇಡ’ ಎಂದು ನನಗೆ ತಮ್ಮ ನಿಲುವನ್ನು ವಿವರಿಸಿದರು. ಅದು ಅವರ-ನನ್ನ ಮೊದಲ ಭೇಟಿಯಾದುದರಿಂದ ಆ ಮಾತು ಅಲ್ಲಿಗೇ ನಿಂತಿತು. ಆದರೆ ಮುಂದೆ ಹಲವು ಏರಿಳಿತಗಳನ್ನು ಕಂಡ ನನ್ನ ಮತ್ತು ನಂಜುಂಡಸ್ವಾಮಿಯವರ ಸ್ನೇಹ ಅಲ್ಲಿ ಆಗ ಸ್ಥಾಪಿತವಾಯಿತು.
ಎಂಡಿಎನ್ ಯುವಜನರನ್ನು ಸೆಳೆಯುವುದರಲ್ಲಿ ನಿಸ್ಸೀಮರಾಗಿದ್ದರು. ಅವರು ಆಗಲೇ ಕರ್ನಾಟಕದ ಯುವಜನರ ಪಾಲಿಗೆ ಸೂಜಿಗಲ್ಲಾಗಿದ್ದರು. ಮೈಸೂರಿನ ಪ್ರತಿಷ್ಠಿತ ವಕೀಲರೂ, ಜಮೀನ್ದಾರರೂ ಮತ್ತು ಮೈಸೂರು ಸಂಸ್ಥಾನದ ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರೂ ಆಗಿದ್ದ ಮಹಂತದೇವರು ಅವರ ಮಗನಾಗಿದ್ದ ಎಂ..ಡಿ. ನಂಜುಂಡಸ್ವಾಮಿ, ಅರವತ್ತರ ದಶಕದ ಆರಂಭದ ವರ್ಷಗಳಲ್ಲಿ ಜರ್ಮನಿಯಲ್ಲಿ ಉನ್ನತ ಕಾನೂನು ಶಿಕ್ಷಣವನ್ನು ಪೂರ್ತಿಯೋ ಅರ್ಧವೋ ಮುಗಿಸಿ ಅಲ್ಲಿನ ಸಮಾಜವಾದಿ ಚಳುವಳಿಯಿಂದ ಪ್ರಭಾವಿತರಾಗಿ ಮೈಸೂರಿಗೆ ಬಂದು ಯುವ ಸಮಾಜವಾದಿಗಳ ಮಧ್ಯೆ ತಮ್ಮ ಕಾನೂನು ತಿಳುವಳಿಕೆ ಮತ್ತು ಕ್ರಿಯಾಶೀಲತೆಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಲಂಕೇಶ್, ತೇಜಸ್ವಿ, ಚಂಪಾ, ಮಹಾದೇವ, ಶ್ರೀಕೃಷ್ಣ ಆಲನಹಳ್ಳಿ, ಬೆಸಗರಹಳ್ಳಿ ರಾಮಣ್ಣ, ಕಾಳೇಗೌಡ ನಾಗವಾರ ಇತ್ಯಾದಿ ಆ ಕಾಲದ ಘಟಾನುಘಟಿ ಲೇಖಕರಲ್ಲದೆ, ಪ. ಮಲ್ಲೇಶ್, ಕೆ. ರಾಮದಾಸ್, ಬಿ.ಎನ್. ಶ್ರೀರಾಂ ಮುಂತಾದ ಚಳುವಳಿಕಾರರೂ ಅವರ ಗರಡಿ ಸೇರಿದ್ದರು. ಅವರು ಅಧಿಕೃತ ಸಮಾಜವಾದಿ ಪಕ್ಷದ ಹಿರಿಯರ ಜಡತೆಯ ವಿರುದ್ಧ ಸಮಾಜವಾದಿ ಯುವಜನ ಸಭಾ ಮೂಲಕ ಬಂಡಾಯ ಸಾರಿದ್ದರು. ಸಮಾಜವಾದಿಗಳಿಗೆ ಸಿದ್ಧಾಂತವೇ ನಾಯಕ; ಯಾವುದೇ ವ್ಯಕ್ತಿಯಲ್ಲ ಎಂದು ಸಾರಿ ಗೋಪಾಲಗೌಡರನ್ನೂ ರೇಗಿಸಿದ್ದರು. ಅವರು ತೇಜಸ್ವಿಯವರೊಡಗೂಡಿ ಸಿದ್ಧಪಡಿಸಿದ್ದ ಲೋಹಿಯಾ ‘ಕೆಂಪು ಪುಸ್ತಕ’ ಯುವಜನರಲ್ಲಿ ಹೊಸ ವಿಚಾರ ತರಂಗಗಳನ್ನೇ ಎಬ್ಬಿಸಿತು.
ತಮ್ಮ ಈ ಪಟಾಲಂ ಕಟ್ಟಿಕೊಂಡು ನಂಜುಂಡಸ್ವಾಮಿಯವರು ಮೈಸೂರಿನಲ್ಲಿ ಬ್ರಿಟಿಷ್ ಆಳ್ವಿಕೆಯ ಪಳೆಯುಳಿಕೆಗಳಂತಿದ್ದ ಬ್ರಿಟಿಷ್ ಅಧಿಕಾರಿಗಳ ಪ್ರತಿಮೆಗಳನ್ನು ಉರುಳಿಸುವುದು, ಪ್ರತಿಷ್ಠಿತ ಹೋಟೆಲುಗಳಿಗೆ ಹೋಗಿ ಬೇಕಾದ್ದನ್ನು ತಿಂದು ಸಾಮಾನ್ಯ ಹೋಟೆಲಿನ ಬೆಲೆಯಷ್ಟನ್ನೇ ನೀಡುವ ಹಠ ಮಾಡಿ ಅವುಗಳ ಪ್ರತಿಷ್ಠೆಯನ್ನು ಧಿಕ್ಕರಿಸುವುದು, ಬೆಂಗಳೂರಿನಲ್ಲಿ ಮೊದಲ ವೀರಶೈವ ಸಮ್ಮೇಳನ ನಡೆದಾಗ ಅದರ ವಿರುದ್ಧ ಪ್ರತಿಭಟನೆ ನಡೆಸುವುದು (ಈ ಪಟಾಲಂನಲ್ಲಿ ಜಿಎಸ್ಸೆಸ್, ಚಿದಾನಂದಮೂರ್ತಿ ಮುಂತಾದವರೂ ಸೇರಿದ್ದರು.) ಪ್ರಧಾನಿ ಇಂದಿರಾ ಗಾಂಧಿ ಬೆಂಗಳೂರಿಗೆ ಬಂದಾಗ ಅವರ ಭದ್ರತೆಯನ್ನೂ ಭೇಧಿಸಿ ಅವರ ಆಡಳಿತ ನೀತಿ ವಿರುದ್ಧ ಯುವಜನರಿಂದ ಘೋಷಣೆ ಕೂಗಿಸುವುದು..
..ಘಟಿಕೋತ್ಸದಲ್ಲಿ ಪಾಶ್ಚಿಮಾತ್ಯ ದಿರಿಸುಗಳ ವಿರುದ್ಧ ಪ್ರತಿಭಟಿಸುವುದು, ಕ್ಷಾಮ ಪರಿಹಾರ ಕಾರ್ಯಕ್ರಮಗಳು ಸರಿಯಾಗಿ ನಡೆಯುತ್ತಿಲ್ಲವೆಂದು ವಿಧಾನಸಭೆಯಲ್ಲಿ ಕರಪತ್ರ ತೂರುವುದು, ಕ್ಷಾಮ ಪರಿಹಾರ ನಿಧಿ ಕೂಡಿಸಲು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಬೂಟ್ ಪಾಲಿಷ್ ಮಾಡಿ ಹಣ ಸಂಗ್ರಹಿಸುವುದು, ಕೊನೆಗೆ ನವ ನಿರ್ಮಾಣ ಕ್ರಾಂತಿ ಸಮಿತಿಯ ಮೂಲಕ ತಮ್ಮ ಪಟಾಲಮ್ಮನ್ನು ಜೆಪಿ ಚಳುವಳಿಯಲ್ಲಿ ತೊಡಗಿಸಿದ್ದು ಇತ್ಯಾದಿ ಚಟುವಟಿಕೆಗಳ ಮೂಲಕ ವಿದ್ಯಾರ್ಥಿ ದೆಸೆಯಲ್ಲೇ ನನ್ನ ಕುತೂಹಲಕ್ಕೆ ಕಾರಣರಾಗಿದ್ದರು.
ಇದಲ್ಲದೆ ಬೂಸಾ ಚಳುವಳಿ, ಜಾತಿ ವಿನಾಶ ಸಮ್ಮೇಳನ ಮತ್ತು ನವ್ಯ ಸಾಹಿತ್ಯ ಚಳುವಳಿಯು ವೈದಿಕ ರಾಜಕಾರಣದ ಮುಖವಾಣಿ ಎಂದು ವಿಶ್ಲೇಷಿಸಿ ಅದರ ವಿರುದ್ಧ ದೊಡ್ಡ ಬಂಡಾಯವನ್ನೇ ಸಾರಿದ ‘ಅಖಿಲ ಕರ್ನಾಟಕ ಲೇಖಕರ ಮತ್ತು ಕಲಾವಿದರ ಒಕ್ಕೂಟ’ದ ಮೊದಲ ಸಮ್ಮೇಳನದ ರೂವಾರಿ ಆಗಿದ್ದರಂಬ ಸಂಗತಿ ಮತ್ತು ಸ್ವತಃ ಅವರು ಮೇಲ್ಜಾತಿಗೆ ಸೇರಿದ್ದರೂ, ಹಾವನೂರರ ಮಿತ್ರರಾಗಿ ಅವರ ಆಯೋಗದ ವರದಿಯ ಹಿಂದಿನ ಸ್ಫೂರ್ತಿಯಾಗಿದ್ದುದರ ಮೂಲಕ ಸಾಮಾಜಿಕ ನ್ಯಾಯ ಕುರಿತು ಅವರು ತೋರಿದ್ದ ಕಾಳಜಿ; ಅವರದು ಬರಿ ತಂಟೆಕೋರ ವ್ಯಕ್ತಿತ್ವವಲ್ಲ, ಅವರ ಕಾರ್ಯಕ್ರಮಗಳ ಹಿಂದೆ ಒಂದು ಗಾಢವಾದ ತತ್ವಚಿಂತನೆಯೂ ಇದೆ ಎಂಬ ಅರಿವಾಗಿ ಅವರ ಬಗ್ಗೆ ಗೌರವವೂ ಮೂಡಿತ್ತು.
ನನ್ನ ವಿದ್ಯಾರ್ಥಿ ದೆಸೆಯಲ್ಲಿ ಮನೆಯವರ ದಿಗ್ಬಂಧನಗಳಿಂದಾಗಿ ಈ ಚಟುವಟಿಕೆಗಳ ಮೂಕ ಪ್ರೇಕ್ಷಕ ಮಾತ್ರನಾಗಿದ್ದ ನಾನು ಈಗ ಈ ಎಲ್ಲ ದಿಗ್ಬಂಧನಗಳಿಂದ ಮುಕ್ತನಾಗಿದ್ದುದರಿಂದ ಬಹು ಬೇಗನೆ ಅವರ ಅನುಯಾಯಿಯಾದೆ. ಅಷ್ಟೇಕೆ, ಅವರ ಆಪ್ತ ಬಳಗಕ್ಕೂ ಸೇರಿದವನಾದೆ. ನಾನು ದೆಹಲಿಯಿಂದ ಬೆಂಗಳೂರಿಗೆ ಬಂದಾಗಲೆಲ್ಲ ಅವರು ಊಟ-ತಿಂಡಿ-ಬೀರ್‌ಗಳೊಡನೆ ಆತ್ಮೀಯತೆಯಿಂದ ನನ್ನನ್ನು ಉಪಚರಿಸುತ್ತಿದ್ದರು.
ಒಮ್ಮೆ ಹೈದರಾಬಾದ್‌ನಲ್ಲಿ ಪ್ರೊ. ಕೇಶವರಾವ್ ಜಾಧವ್ ಅವರು ಆಯೋಜಿಸಿದ್ದ ಲೋಹಿಯಾ ವಿಚಾರ ಮಂಚ್ನ ಸಮಾವೇಶದಲ್ಲಿ ಒಟ್ಟಿಗೆ ಎರಡು ಮೂರು ದಿನ ಇದ್ದಾಗ (ಅಲ್ಲಿಗೆ ಕಿಷನ್ ಪಟ್ನಾಯಕ್, ರವಿವರ್ಮ ಕುಮಾರ್, ಕೆ.ಟಿ.ಶಿವಪ್ರಸಾದ್ ಕೂಡ ಬಂದಿದ್ದರು) ಅವರು ನನ್ನನ್ನು ಲೋಹಿಯಾರ ಪೋಷಕರಲ್ಲೊಬ್ಬರಾಗಿದ್ದ ಬದ್ರಿ ವಿಶಾಲ್ ಪಿಟ್ಟಿ ಅವರ ಅಂಗಡಿಗೆ ಕರೆದುಕೊಂಡು ಹೋಗಿ ಹಳೆಯ ‘ಮ್ಯಾನ್‌ಕೈಂಡ್’ ಸಂಪುಟಗಳನ್ನು ನನಗೆ ಕೊಡಿಸಿದರು. ಅವು ಮತ್ತು ಅದಕ್ಕಿಂತ ಹೆಚ್ಚಾಗಿ ಅವರು ಮುಂದೊಂದು ದಿನ ತಮ್ಮ ಹಸ್ತಾಕ್ಪರಗಳೊಂದಿಗೆ ನೀಡಿದ ‘ಲೋಹಿಯಾ ಅಂಡ್ ಅಮೆರಿಕಾ ಮೀಟ್’ ಪುಸ್ತಕ ಅವರ ನೆನಪಿನಲ್ಲಿ ಭದ್ರವಾಗಿ ನನ್ನ ಬಳಿ ಇದೆ.
ಈ ಸಂಬಂಧ ಇದ್ದಕ್ಕಿದ್ದಂತೆ ಕಡಿದುಹೋದದ್ದು ೧೯೭೭ರ ಜೆಪಿಯವರ ಜನತಾ ಪಕ್ಷದ ಪ್ರಯೋಗ ವಿಫಲವಾಗಿ ಕಿಷನ್ ಪಟ್ನಾಯಕ್‌ರ ಮುಂದಾಳತ್ವದಲ್ಲಿ ೧೯೮೦ರಲ್ಲಿ ಹೊಸದೊಂದು ಸಮಾಜವಾದಿ ಪಕ್ಷ ಕಟ್ಟಲು ಬೆಂಗಳೂರಿನಲ್ಲಿ ನಾವೆಲ್ಲ ಸೇರಿ ಸಂಘಟಿಸಿದ್ದ ‘ಸಮತಾ ಸಮ್ಮೇಳನ’ದ ಸಂದರ್ಭದಲ್ಲಿ.
ಸಮ್ಮೇಳನದ ಕೊನೆಯಲ್ಲಿ ಹೊಸ ಪಕ್ಷದ ಸಂಘಟನೆಗಾಗಿ ರಾಜ್ಯ ಸಂಚಾಲಕರನ್ನು ನೇಮಿಸುವ ವಿಷಯ ಬಂದಾಗ ನಾನು ನನ್ನೆಲ್ಲ ಯುವ ಗೆಳೆಯರೊಂದಿಗೆ ಸಮಾಲೋಚಿಸಿ ರವಿವರ್ಮ ಕುಮಾರ್‌ರ ಹೆಸರನ್ನು ಸೂಚಿಸಿದೆ. ಇದು ನನ್ನ ನಿರೀಕ್ಷೆಗೆ ವಿರುದ್ಧವಾಗಿ ಎಂಡಿಎನ್‌ರನ್ನು ಎಷ್ಟು ಸಿಟ್ಟಿಗೆಬ್ಬಿಸಿತೆಂದರೆ, ಸಮ್ಮೇಳನನ ಮುಕ್ತಾಯ ಕಂಡು ನಾನು ಅಲ್ಲಿಂದ ಹೊರಡುವ ಮುನ್ನ ಅವರಿಗೆ ವಿದಾಯ ಹೇಳಲು ಹೋದರೆ ಅವರು ನನ್ನನ್ನು ದೂರ ತಳ್ಳಿ, ನನ್ನ ನಿಮ್ಮ ಸಂಬಂಧ ಇಲ್ಲಿಗೆ ಮುಗಿಯಿತು ಎಂದು ಘೋಷಿಸಿಬಿಟ್ಟರು.
ಆಘಾತಗೊಂಡು ಪೆಚ್ಚಾದ ನಾನು ಮತ್ತೆ ಅವರ ಸುದ್ದಿಗೆ ಹೋಗಲಿಲ್ಲ. ಅವರೂ ನಂತರ ಸಮಾಜವಾದಿ ಚಳುವಳಿಯ ಸುದ್ದಿಯನ್ನು ಬಿಟ್ಟು ರೈತ ಚಳುವಳಿಯ ಕಡೆ ಗಮನ ಹರಿಸಿದರು. ಅದನ್ನೇ ಸಮಾಜವಾದಿ ಚಳುವಳಿಯಾಗಿ ಬೆಳೆಸುವುದಾಗಿ ಹೇಳಿಕೊಂಡು ನನ್ನ ಕೆಲ ಯುವ ಸಮಾಜವಾದಿ ಗೆಳೆಯರನ್ನೂ ಅತ್ತ ಕಡೆ ಸೆಳೆದುಕೊಂಡರು.
ನಂಜುಂಡಸ್ವಾಮಿ ಯುವಜನರನ್ನು ಆಕರ್ಷಿಸಿ ಪ್ರೀತಿಯಿಂದ ಬೆಳೆಸುವರು ಎಂಬ ಪ್ರತೀತಿ ಇದ್ದಂತೆಯೇ, ಅವರು ತಮ್ಮನ್ನು ಪ್ರಶ್ನಿಸುವ, ಮೀರಿ ಬೆಳೆಯುವ ಸೂಚನೆ ತೋರಿದವರನ್ನು ಅಷ್ಟೇ ಕಠೋರವಾಗಿ ಹತ್ತಿಕ್ಕುವರೆಂಬ ಪ್ರತೀತಿಯೂ ಇತ್ತು.. ಆದರೆ ನನ್ನನ್ನು ಹಾಗೆ ಹತ್ತಿಕ್ಕಲು ಅವರಿಗೆ ಅವಕಾಶವೇ ಕೊಡದಂತೆ ನಾನು ಅವರಿಂದ ದೂರ ಸರಿದೆ. ಅವರ ಈ ಪ್ರವೃತ್ತಿಯನ್ನು ನಾನು ಅವರು ನಡೆಸಿದ್ದ ಸಮಾಜವಾದಿ ಅಧ್ಯಯನ ಶಿಬಿರಗಳಲ್ಲೂ ನೋಡಿದ್ದೆ. ಪ್ರಶ್ನೆ ಕೇಳಿದವರಿಗೆ ಅಸಂಬದ್ಧ ಮರುಪ್ರಶ್ನೆ ಹಾಕಿ ಅವರು ಉತ್ತರಿಸಲಾಗದೆ ತಡವರಿಸುವಂತೆ ಮಾಡಿ ಕೂರಿಸುತ್ತಿದ್ದರು.
ಹೊಸಬರನೇಕರು ಇವರ ಸಹವಾಸವೇ ಬೇಡವೆಂದು ಚಳುವಳಿಯನ್ನೇ ಬಿಟ್ಟು ಹೋಗುತ್ತಿದ್ದರು. ಇದು ರೈತ ಅಧ್ಯಯನ ಶಿಬಿರಗಳಲ್ಲಿಯೂ ಮುಂದುವರೆಯಿತೆಂದೂ ಕೇಳಿರುವೆ. ಆದರೆ ಅಲ್ಲಿ ಪ್ರತಿಭಟಿಸುವವರು ಕಡಿಮೆ ಇದ್ದರು. ರೈತರು ತೀರಾ ಸಂಕಷ್ಟದಲ್ಲಿದ್ದುದರಿಂದ ಮತ್ತು ಎಂಡಿಎನ್ ತಮ್ಮ ಸಮಾಜವಾದಿ ಸಾಹಸ ಅಪೂರ್ಣವಾದುದರ ಅತೃಪ್ತಿಯಿಂದಲೋ ಏನೋ ಅರ್ಪಣಾ ಮನೋಭಾವದಿಂದ ಸಂಘಟನೆಗಾಗಿ ದುಡಿಯತೊಡಗಿದ್ದರಿಂದ ರೈತರು ಅವರ ವ್ಯಕ್ತಿತ್ವದಲ್ಲಿಯೇ ಅಡಕವಾಗಿದ್ದ ಕಠೋರತೆಯನ್ನು ಸಹಿಸಿದರು.
ನಾನೊಮ್ಮೆ ಅವರ ರೈತ ಅಧ್ಯಯನ ಶಿಬಿರಕ್ಕೆ ‘ಲಂಕೇಶ್ ಪತ್ರಿಕೆ’ಯ ಪರವಾಗಿ ವರದಿ ಮಾಡಲು ಹೋಗಿ ಅವರ ಕಠೋರತೆ ಇನ್ನೂ ತೀವ್ರವಾಗಿರುವುದನ್ನು ಖಚಿತಪಡಿಸಿಕೊಂಡು ಬಂದಿದ್ದೆ. ಅಂದು ಸುಂದರೇಶರು ಮಧ್ಯೆ ಪ್ರವೇಶಿಸದಿದ್ದಲ್ಲಿ ನಂಜುಂಡಸ್ವಾಮಿಯವರ ಪ್ರಚೋದನೆಯಿಂದ ರೈತರು ನನ್ನ ಮೇಲೆ ದೈಹಿಕ ದಾಳಿಯನ್ನೇ ನಡೆಸುತ್ತಿದ್ದರೇನೋ! ಅವರ ಅರ್ಧ ಕೋಪ ನನ್ನ ಮೇಲಿದ್ದರೆ ಇನ್ನರ್ಧ ಕೋಪ ಲಂಕೇಶರ ಮೇಲೆ ಇತ್ತು! ಪತ್ರಿಕೆ ರೈತ ಚಳುವಳಿಯ ಬಗ್ಗೆ ಸಲ್ಲದ ಅಪಪ್ರಚಾರ ಮಾಡುತ್ತಿದೆಯೆಂಬುದು ಅವರ ಈ ಕ್ರೋಧಕ್ಕೆ ಕಾರಣವಾಗಿತ್ತು. ಇದಕ್ಕೆ ಪ್ರತಿಯಾಗಿ ರೈತಸಂಘದಿಂದಲೇ ‘ನಮ್ಮ ನಾಡು’ ಎಂಬ ಪತ್ರಿಕೆ ಆರಂಭಿಸಿದ ಅವರು ಅದರ ಹಣದ ಲೆಕ್ಕದ ಗೋಜಲಿನಲ್ಲಿ ಸಿಕ್ಕಿಹಾಕಿಕೊಂಡು ಅದನ್ನು ನಿಲ್ಲಿಸಬೇಕಾಯಿತು ಎಂಬುದು ಬೇರೆ ವಿಚಾರ.
ಆದರೆ ಆಶ್ಚರ್ಯವೆಂದರೆ ಇದೆಲ್ಲ ಆದ ನಂತರ ಒಮ್ಮೆ ೧೯೮೧ರಲ್ಲಿ ಅವರು ಸುಂದರೇಶರೊಂದಿಗೆ ಯಾವುದೋ ಮಾತುಕತೆಗೆಂದು ದೆಹಲಿಗೆ ಬಂದಾಗ ನನಗೆ ಕರೆ ಕಳಿಸಿದರು! ನಾನೂ ಲಂಕೇಶರೊಂದಿಗೆ ಬಾಳಲಾರದವನಾಗಿ ದೆಹಲಿ ಆಕಾಶವಾಣಿ ಹುದ್ದೆಗೆ ವಾಪಸಾಗಿದ್ದ ಕಾರಣದಿಂದಲೋ ಏನೋ ನನ್ನ ಮೇಲಿನ ಅವರ ಸಿಟ್ಟು ಇಳಿದಿತ್ತು.
ಕರ್ನಾಟಕ ಭವನದಲ್ಲಿ ಅವರ ಸುಖ ವಾಸ. ದಿನವೂ ಕೋಳಿಯ ಊಟ! ಸವಿ ಮಾತುಕತೆ, ಶತ್ರುಗಳ ಮೇಲೆ ಕಟು ವ್ಯಂಗ್ಯ ಬಾಣಗಳ ಪ್ರಯೋಗ! ಮತ್ತೆ ನನಗೆ ಅವರ ಆ ಹಳೆಯ ಉಪಚಾರದ ದಿನಗಳು ನೆನಪಿಗೆ ಬಂದವು. ಆದರೆ ಅದೇ ಒಂದು ದಿನ ದುದ್ದದಲ್ಲಿ ರೈತರ ಪ್ರತಿಭಟನೆಯ ಮೇಲೆ ಗುಂಡೂರಾಯರ ಸರ್ಕಾರ ಗೋಲೀಬಾರ್ ಮಾಡಿ ಇಬ್ಬರೋ ಮೂವ್ವರೋ ರೈತರನ್ನು ಕೊಂದಿತ್ತು. ಆ ಸುದ್ದಿಯನ್ನು ನಾನೇ ಅಂದು ಮಧ್ಯಾಹ್ನದ ವಾರ್ತೆಗಳಲ್ಲಿ ಬಿತ್ತರಿಸಿ ಬಂದು ಇವರಿಗೂ ಹೇಳಿದೆ. ಸುಂದರೇಶ್ ಗೊಳೋ ಎಂದು ಅಳಲು ಶುರು ಮಾಡಿದರೆ ಎಂಡಿಎನ್ ತಲೆ ತಗ್ಗಿಸಿ ಯೋಚನಾಮಗ್ನರಾಗಿದ್ದರು. ಇದ್ದಕ್ಕಿದ್ದಂತೆ ಯಾರೊಂದಿಗೋ ಮಾತನಾಡಿ ಬಟ್ಟೆ ಬರೆ ಕಟ್ಟಿಕೊಂಡು ಬೆಂಗಳೂರ ಕಡೆ ಹೊರಟೇಬಿಟ್ಟರು.
ಇದಾದ ನಂತರದಲ್ಲೇ ನಾನು ಕರ್ನಾಟಕಕ್ಕೆ ಬಂದೆ. ಕಾರ್ಯ ನಿರ್ವಾಹಕ ಹುದ್ದೆ ಭದ್ರಾವತಿಯಲ್ಲಿದ್ದುದರಿಂದ ರೈತ ಸಂಘದ ಕ್ರಿಯಾಕೇಂದ್ರ ಶಿವಮೊಗ್ಗಕ್ಕೆ ಹತ್ತಿರವಾಗಿ ಅದನ್ನು ಆಸಕ್ತಿ-ಕುತೂಹಲಗಳಿಂದ ಗಮನಿಸುತ್ತಿದ್ದೆ. ಸಂಘಟನೆ ಬೆಳೆಯುತ್ತಿದ್ದಂತೆ, ಅದು ಸರ್ಕಾರಕ್ಕೆ ಸವಾಲು ಹಾಕುವ ತಾಕತ್ತು ಗಳಿಸಿಕೊಳ್ಳುತ್ತಿದ್ದಂತೆ, ಎಂಡಿಎನ್ ಅವರಲ್ಲಿದ್ದ ಮಾನವತೆಯ ತೇವಾಂಶ ಒಣಗಿ ಹೋಗತೊಡಗಿತ್ತು.
ಆಗಲೇ ರೈತ ಸಂಘದಲ್ಲಿ ಒಡಕುಗಳು ಕಾಣತೊಡಗಿ, ಅದು ತೋರಿಕೆಗಾಗಿಯಾದರೂ ಇದ್ದ ತನ್ನ ಸಮಾಜವಾದಿ ದೃಷ್ಟಿ ಕೇಂದ್ರವನ್ನು ಕಳೆದುಕೊಂಡು ನಂಜುಂಡಸ್ವಾಮಿಯವರ ವೈಯುಕ್ತಿಕ ಸಂಘಟನೆಯಾಗತೊಡಗಿತ್ತು. ನಂಜುಂಡಸ್ವಾಮಿಯವರಿಗೆ ರೈತಸಂಘವನ್ನು ಒಂದು ಸಮಾಜವಾದಿ ಸಂಘಟನೆಯಾಗಿ, ಸಮಾನತೆಗೆ ತುಡಿವ ಜಾತ್ಯತೀತ ಕಾರ್ಯಪಡೆಯನ್ನಾಗಿ ರೂಪಿಸುವ ಉದ್ದೇಶವಿದ್ದಿರಬಹುದು. ಆದರೆ ರೈತ ಸಂಘದ ನಾಯಕರಾದ ಮೇಲೆ ಅವರು ತಮ್ಮ ಆಧುನಿಕ ಉಡುಪು ಬದಲಿಸಿ ಹೊರನೋಟಕ್ಕೆ ದೇಸಿಯಾದರಾದರೂ, ಒಳಗೆ ಎಲ್ಲ ದೃಷ್ಟಿಗಳಿಂದಲೂ ಆಧುನಿಕರಾಗಿದ್ದ ಕಾರಣ ಅವರು ರೈತ ಸಮುದಾಯವನ್ನು ಸಹಾನುಭೂತಿಯಿಂದ ಅರ್ಥ ಮಾಡಿಕೊಳ್ಳುವಲ್ಲಿ ಸೋತರೆಂದೇ ಹೇಳಬೇಕು.
ನಿಜ ಅವರ ನೇತೃತ್ವದಲ್ಲಿ ರಾಜ್ಯ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಂಡರಿಯದಂತಹ ಲೋಕಶಕ್ತಿಯ ಪ್ರದರ್ಶನ, ಸರ್ಕಾರಕ್ಕೆ ಸವಾಲು, ಪ್ರತಿಭಟನೆ, ಪ್ರತಿ-ಕಾರ್ಯಕ್ರಮಗಳನ್ನು ಕಂಡಿತು. ಕರ್ನಾಟಕದಲ್ಲಿ ಸಮಾಜವಾದಿ ಕ್ರಾಂತಿಯಗುವ ಕಾಲ ದೂರವಿಲ್ಲ ಎನ್ನಿಸಿಯೂ ಬಿಟ್ಟಿತ್ತು. ಹಾಗಾಗಿಯೇ ನಾವು ಕೆಲವು ಗೆಳೆಯರು ದಲಿತ ಚಳುವಳಿ ಮತ್ತು ರೈತ ಚಳುವಳಿಯ ನಾಯಕರನ್ನು ಒಟ್ಟುಗೂಡಿಸಿ ಒಂದು ಐಕ್ಯ ರಾಜಕೀಯ ಶಕ್ತಿಯ ಉದಂಯದ ಪ್ರಯತ್ನ ಮಾಡಿದೆವು. ಆದರೆ ಎಂಡಿಎನ್ ಆ ಹೊತ್ತಿಗೆ ಯಾರನ್ನೂ ನಂಬದ ಆಕ್ರಾಂತ ಸ್ಥಿತಿ ತಲುಪಿದ್ದರು. ಅವರು ವಿಶ್ವ ರೈತನಾಯಕರಾಗುವ ಹವಣಿಕೆಯಲ್ಲಿದ್ದರು. ಇದರ ಅಂತಿಮ ಪರಿಣಾಮವಾಗಿಯೇ ರೈತ ಸಂಘ ಒಡೆಯಿತು. ಅವರ ಅನುಯಾಯಿಗಳನೇಕರು ಭ್ರಮನಿರಸನ ಹೊಂದಿದ್ದರು ಅಥವಾ ದೂರ ಸರಿದಿದ್ದರು. ನಂಜುಂಡಸ್ವಾಮಿ ಒಂಟಿಯಾಗಿದ್ದರು.
ಆ ನಂತರದ ಸ್ವಲ್ಪ ಕಾಲದಲ್ಲೇ-೧೯೮೯ರಲ್ಲಿ-ನಾನು ಅವರನ್ನು ನಾನಿದ್ದ ಬೆಂಗಳೂರು ಆಕಾಶವಾಣಿಗಾಗಿ ಸಂವಿಧಾನ ಕುರಿತ ಭಾಷಣ ಮಾಲಿಕೆಗಾಗಿ ಆಹ್ವಾನಿಸಿದೆ. ಅವರು ಬಂದರು. ಆದರೆ ಸುಸ್ತಾಗಿದ್ದರು. ಮತ್ತೆ ಅದೇ ಪ್ರೀತಿಯಿಂದ ಮಾತಾಡಿದರು. ಪಕ್ಕದ ಪರಾಗ್ ಹೋಟೆಲ್ಲಿಗೆ ಕರೆದುಕೊಂಡು ಹೋಗಿ ನೆನಪಿಟ್ಟು ನನಗಿಷ್ಟವಾದ ರವೆ ಇಡ್ಲಿ ಕೊಡಿಸಿದರು. ನಮ್ಮ ನಿಲಯ ನಿರ್ದೇಶಕರನ್ನು ಭೇಟಿಯಾಗಿ ನನ್ನ ಬಗ್ಗೆ ನಾಲ್ಕು ಒಳ್ಳೆಯ ಮಾತನಾಡಿದರು. ಲಂಕೇಶರನ್ನು ಶಪಿಸಿದರು. ಪತ್ನಿ ಸಮೇತ ಮನೆಗೆ ಬರುವಂತೆ ಆಹ್ವಾನಿಸಿದರು. ಅದೇ ನನ್ನ ಅವರ ಕೊನೆಯ ಭೇಟಿ.
ನಂತರ ಅವರನ್ನು ನೋಡಿದ್ದು ಶವವಾಗಿ, ೨೦೦೪ರಲ್ಲಿ. ಅಂತಿಮ ಯಾತ್ರೆಯ ಭಾಗವಾಗಿ ಅದು ಮೈಸೂರಿಗೆ ಬಂದಾಗ. ನಾನೂ ನನ್ನ ಪತ್ನಿ ಇಬ್ಬರೂ ರಾಜಶೇಖರ ಕೋಟಿಯವರ ಜೊತೆ ಹೋಗಿ ಚಾಮರಾಜನಗರ ಸಮೀಪದಲ್ಲಿನ ಭವಿಷ್ಯದ ಅಂತಾರಾಷ್ಟ್ರೀಯ ಕೃಷಿ ಕ್ಷೇತ್ರವೆಂದು ಹೇಳಲಾದ ಅಮೃತಭೂಮಿಯಲ್ಲಿ ನಡೆದ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿ ಬಂದೆವು.
ಮತ್ತೆ ಮೊನ್ನೆ ತಾನೇ ನಾವು ಕೆಲವು ಗೆಳೆಯರು ನಮ್ಮ ಕುಟುಂಬಗಳೊಂದಿಗೆ ಚಾಮರಾಜನಗರದ ಕಡೆ ಹೋಗಿದ್ದಾಗ ನೆನಪಿಟ್ಟು ‘ಅಮೃತಭೂಮಿ’ಗೆ ಹೋಗಿ ಅವರ ಸಮಾಧಿಗೆ ಗೌರವ ಸಲ್ಲಿಸಿ ಬಂದೆವು. ಒಂದು ಕ್ಷಣ ತೀವ್ರ ಬೇಸರವೂ ಅನಿಸಿತು. ಯಾವಾಗಲೂ ಜನಮಧ್ಯವಿದ್ದ ಎಂಡಿಎನ್ ಇಲ್ಲೇಕೆ ಜನಸಂಪರ್ಕವೇ ಇಲ್ಲದ ದೂರದ ಈ ವಿಶಾಲ ಬಿಸಿಲು ಬಯಲಲ್ಲಿ ತಲೆ ಮೇಲೆ ಸೂರಿಲ್ಲದೆ ಒಂಟಿಯಾಗಿ ಅನಾಥರಂತೆ ಮಲಗಿದ್ದಾರೆ ಎಂದು. ವಿಶ್ವ ರೈತ ನಾಯಕರಾಗುವ ಹಂಬಲವೇ ಅವರನ್ನು ದಾರಿ ತಪ್ಪಿಸಿತೇ? ಗೊತ್ತಿದ್ದವರು ಹೇಳಬೇಕು.
। ’ಭೂಮಿಯನ್ನು ಹಂಚಿಕೊಳ್ಳುವ ಬಗೆಗಳು’ ಪುಸ್ತಕದಿಂದ ।






0 Comments