ತೆರೆದ ಗಾಯ – ಯುದ್ಧದ 731 ನೇ ದಿನ..

-ಗಿಲಿ ಹೈಮೋವಿಚ್, ಸಂಕಲನದ ಸಂಪಾದಕಿ
ಅಕ್ಟೋಬರ್ 7, ಇಂದು ಹಮಾಸ್ ನಡೆಸಿದ ಹತ್ಯಾಕಾಂಡವಾಗಿ ಒಂದು ವರ್ಷವಾಯಿತು. ಒಂದು ವರ್ಷದ ಹಿಂದೆ, ನಾನು ಸಂಪಾದಿಸಿದ್ದ ಮತ್ತು ನನ್ನ ಅನುವಾದವೂ ಒಳಗೊಂಡಿದ್ದ ಒಂದು ಕವನ ಸಂಕಲನ ಹೊರಬಂದಿತ್ತು. ಇದು ಫ್ರೆಂಚ್ – ಇಂಗ್ಲಿಷ್ ದ್ವಿಭಾಷಾ ಸಂಕಲನವಾಗಿದ್ದು, ಸಂಘರ್ಷದ ಸಂಬಂಧಿತ ದೇಶಗಳಾದ ಇಸ್ರೇಲಿಗಳ ಕವಿಗಳ ಹತ್ಯಾಕಾಂಡ ಮತ್ತು ಯುದ್ಧವನ್ನು ಪ್ರತಿಬಿಂಬಿಸುತ್ತದೆ. ಇದರ ಶೀರ್ಷಿಕೆ “ಅಂಡರ್ ಅವರ್ ರಪ್ಚರ್ಡ್ ಸ್ಕೈ” ಅಥವಾ ಫ್ರೆಂಚ್ ಭಾಷೆಯಲ್ಲಿ “ಸೌಸ್ ನೊಟ್ರೆ ಸಿಯೆಲ್ ಬ್ರೈಸ್”.
ಪ್ರಾರಂಭದಲ್ಲಿ ತೀವ್ರ ಭಯಾನಕ ಅನುಭವಗಳು ಮತ್ತು ಆಶ್ರಯಗಳಲ್ಲಿ ಅಡಗಿಕೊಂಡು ಜೀವ ಉಳಿಸಿಕೊಳ್ಳಬೇಕಾದ ದಿನಗಳ ನಂತರ, ನನಗೆ ನಿಧಾನವಾಗಿ ಭರವಸೆ ಮರುಕಳಿಸಿತು ಮತ್ತು ಮಾನವನಾಗಿರುವುದರ ಮೌಲ್ಯವನ್ನು ನೆನಪಿಸಿತು. ಅಂದಿನಿಂದ ನಾನಕ್ ವಿಭಿನ್ನ ಅನುಭವಗಳನ್ನು ಎದುರಿಸಿದೆ, ಕೆಲವು ಭಯಾನಕ, ಯೆಹೂದ್ಯ ವಿರೋಧಿ, ಮತ್ತು ಈ ವಿಷಯದ ಬಗ್ಗೆ ಏನನ್ನಾದರೂ ಹೇಳಬೇಕೆಂಬ ನನ್ನ ಪ್ರಚೋದನೆಗೆ ಬಹುತೇಕ ವಿಷಾದಿಸುವಂತೆ ಮಾಡಿತು.

ಸಂಕಲನದ ಹಲವಾರು ಕವಿತೆಗಳನ್ನು ಮತ್ತು ಅದರ ಮುನ್ನುಡಿಯ ಉಲ್ಲೇಖವನ್ನು ನಾನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.ಯುದ್ಧದ 140 ನೇ ದಿನದ ಸುಮಾರಿಗೆ ಇದನ್ನು ಬರೆಯಲಾಗಿದೆ ಎಂದು ನಂಬುವುದು ಕಷ್ಟ. ನಾವು ಈಗ 731 ನೇ ದಿನದಲ್ಲಿದ್ದೇವೆ. ಇದನ್ನೆಲ್ಲಾ ಸಹಿಸಿಕೊಳ್ಳುವುದು ಕಷ್ಟವಾಗಿತ್ತು ಎಂದು ಮಾತ್ರ ಹೇಳಿದರೆ ವಾಸ್ತವದ ಪೂರ್ಣ ಅರಿವಾಗುವುದಿಲ್ಲ.
ಈ ಸಂಕಲನವು ಕಾವ್ಯವು ಈ ತೆರೆದ ಗಾಯವನ್ನು ಹೇಗೆ ಪ್ರತಿಬಿಂಬಿಸುತ್ತದೆ ಮತ್ತು ನಿರಂತರ ಅಸಹನೀಯ ವಾಸ್ತವವನ್ನಲ್ಲ ಎಂಬುದಕ್ಕೆ ಸಾಕ್ಷಿಯಾಗಬೇಕೆಂದು ನಾನು ಬಯಸುತ್ತೇನೆ. ಸಂಕಲನದ ಎಲ್ಲಾ ಕವಿಗಳು ಮತ್ತು ಅನುವಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು. ನಾನು ಇದನ್ನು ಬರೆಯುತ್ತಿರುವಂತೆಯೇ ಕಿಟಕಿಯಾಚೆ ಕಾಣುತ್ತಿರುವ ಆಕಾಶದಲ್ಲಿ ಯುದ್ಧ ವಿಮಾನಗಳು ಹಾರುತ್ತಿವೆ.
ಮರುಕ್ಷಣ ಗಾಳಿಯಲ್ಲಿ ಒಂದು ಸ್ಫೋಟ ಗಡಚಿಕ್ಕುತ್ತದೆ. ಗಾಜಾದಲ್ಲಿ ಇನ್ನೂ ನೂರಾ ಅರವತ್ತಾರು ಜನರನ್ನು ಹಿಡಿದಿಟ್ಟುಕೊಂಡಿದ್ದಾರೆ. ಸಾವಿರಾರು ಜನರು ಸತ್ತಿದ್ದಾರೆ. ಇದೊಂದು ಮುಗಿಯದ ಕ್ರೌರ್ಯವಾಗಿದೆ. ಮಾನವೀಯತೆಯ ತುರ್ತು ಅಗತ್ಯದ ಬಗ್ಗೆ ಹೇಳಿ ಮುಗಿಸಲಾಗುವುದಿಲ್ಲ. ಮುಂದಿನ ವಾರ ನಾವು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸಂಕಲನದ ಆನ್‌ಲೈನ್ ಪ್ರಸ್ತುತಿಯನ್ನು ಏರ್ಪಡಿಸುತ್ತಿದ್ದೇವೆ. ಅಷ್ಟೊತ್ತಿಗೆ ಒತ್ತೆಯಾಳುಗಳಿಗೆ, ಗಾಜಾ ನಾಗರಿಕರಿಗೆ, ನಮಗೂ ಪರಿಹಾರ ಸಿಗುವ ಅವಕಾಶ ಸಿಗುತ್ತದೆ ಎಂದು ನಾವು ಆಶಿಸಬಹುದೇ?
ಗಾಜಾ ಕವನಗಳು
ಅನುವಾದ: ಪ್ರತಿಭಾ ನಂದಕುಮಾರ್
1.ಯಾರೋ ತೀರ್ಮಾನಿಸಿದರು
ಮೂಲ – ಅಯತ್ ಅಬು ಶ್ಮಿಸ್
ಯಾರೋ ತೀರ್ಮಾನಿಸಿದರು,
ನನ್ನ ಪರವಾಗಿ,
ಈ ಜಾಗ ನನಗಲ್ಲ.
ಯಾರೋ ನನ್ನನ್ನು ಹಿಡಿದೆತ್ತಿ
ಪ್ರವೇಶದಲ್ಲೋ ನಿರ್ಗಮನದಲ್ಲೋ ಇಳಿಸಿದರು
ಯಾರೋ ನನ್ನ ರನ್ನಿಂಗ್ ಶೂಗಳನ್ನು ಕಿತ್ತುಕೊಂಡು
ಓಡು ಎಂದರು.
ಯಾರೋ ತಮ್ಮ ಶೀತಲ ಕೈಗಳನ್ನು
ನನ್ನ ತುಟಿಗಳ ಮೇಲಿಟ್ಟು ಒತ್ತಿ
ಈಗ ಮಾತಾಡು ಎಂದರು.
ಯಾರೋ ನನಗೆ ಇಲ್ಲಿಂದ ಹೊರಟುಹೋಗು ಎಂದರು
ಎಲ್ಲಿಗೆ ಎಂದು ಹೇಳಲಿಲ್ಲ ಜೊತೆಗೆ
ನನ್ನ ರನ್ನಿಂಗ್ ಶೂಗಳನ್ನೂ ಕಿತ್ತುಕೊಂಡರು.
2.ಸುರಕ್ಷಿತ ಕೋಣೆ
ಮೂಲ – ಅಗಿ ಮಿಶೋಲ್
ಸುತ್ತೆಲ್ಲಾ ಸಾವು ಆವರಿಸುತ್ತಿದೆ
ಪೀಕಾನ್ ಬೀಜಗಳು ಸಿಡಿಯುತ್ತಿವೆ
ನಾನು ಹೀಬ್ರು ಭಾಷೆಯೊಳಗೆ ಅಡಗಿಕೊಳ್ಳುತ್ತೇನೆ.
ಮುಗ್ಧ ಬರಹಗಳಲ್ಲಿ ನನಗೇನೂ ಆಗುವುದಿಲ್ಲ
ಅಕ್ಷರಗಳಲ್ಲಿ ಹುದುಗಿ
ಸಾಲು ಬಿಟ್ಟು ಆಚೀಚೆ ಸರಿಯದಿದ್ದರೆ
ನನಗೇನೂ ಆಗುವುದಿಲ್ಲ.
ಸಣ್ಣ ಚುಕ್ಕಿಯೊಳಗೆ ಅಡಗಿ
ಒಂದು ಓ ಒಳಗೆ ತುರುಕಿಕೊಂಡು
ಅಥವಾ ಒಂದು ಸಿಯ ಗರ್ಭದಲ್ಲಿ
ಸೆಮಿಕೋಲನ್ ಕಣ್ಣೀರು ಹರಿಸುತ್ತಿರುವಾಗ
ಖೈದಿಯಂತೆ
ನನ್ನೊಲವಿನ ಪವಿತ್ರ ನುಡಿಯೇ
ಎಲ್ಲವೂ ತಾನೇ ತಾನಾಗಿ ಘಟಿಸುತ್ತಿದ್ದು
ಎಲ್ಲವೂ ರೌದ್ರವಾಗಿರುವಾಗ
ತೋಟ ವಿಸ್ತರಿಸಿ
ನೆಲ ಉಳುವಾಗ
ರಿಲ್ಕೆ ಹೇಳಿದಂತೆ ನಡೆದುಕೊಳ್ಳುತ್ತೇನೆ:
ಸೌಂದರ್ಯ ಮತ್ತು ರೌದ್ರತೆ ನನಗೆ ಸಂಭವಿಸಲಿ
ಇದೇ ನನ್ನ ಅಂತ್ಯ ಎಂದು ತಿಳಿಯದಂತೆ.
3.ಮೂಳೆಯ ಮಜ್ಜೆ
ಮೂಲ – ಗಿಲಿ ಹಾಮೋವಿಚ್
ನೋವು ಅನುಭವಿಸಿದಂತೆಲ್ಲಾ ಮೂಳೆಗಳು ಮೆತ್ತಗಾಗುತ್ತವೆ
ರಾತ್ರಿಯ ಕತ್ತಲಲ್ಲಿ ಕರಗಿಹೋಗುತ್ತವೆ ಹರಡುತ್ತವೆ.
ಛಿದ್ರಗೊಂಡ ಆಕಾಶ ಕರಾಳತೆಯ ಮಳೆ ಸುರಿಸುತ್ತದೆ
ನಮ್ಮನ್ನು ರಕ್ಷಿಸುವ ಕ್ಷಿತಿಜವಿಲ್ಲ
ಮರೆಮಾಚಲು, ಅಡಗಿಸಿಡಲು
ಸಾಧ್ಯವಾಗುವಷ್ಟು ದೊಡ್ಡ ಹಸ್ತವಿಲ್ಲ
ನನ್ನಿಂದ ನನ್ನನ್ನೇ ಕಿತ್ತೊಗೆಯುವ
ಕಾಫರ್ ಆಜಾದ ಮಗುವಿನಿಂದ ಬೇರ್ಪಡಿಸಿ
ಅದು ನಾನೇ ನಾನೇ
ನನ್ನದೇ ರಕ್ತ ಮಾಂಸ
ಈಗ ಮೂಳೆಗಳು ಬಹಳ ಮೃದು
ಈಗ ಅವು ಎಷ್ಟು ಬೇಗ ಪುಡಿಪುಡಿಯಾಗುತ್ತವೆ
ಎಲುಬುಗಳಿಂದ ಬೇರ್ಪಡೆಯಾಗಿ
ಎಲ್ಲಿಗೋ ಎಳೆದೊಯ್ಯುವಾಗ
ಯಾರಿಗೆ ಗೊತ್ತು ಗಾಜಾದಲ್ಲಿ ಎಲ್ಲೆಂದು
ಎಷ್ಟು ಸುಲಭ ಅವನ್ನು ಮರೆತುಬಿಡುವುದು
ನಮ್ಮನ್ನು ಮರೆತುಬಿಡುವುದು
ಓಡಿಹೋಗಲು ಆಶ್ರಯವಿರುವ ಕಡೆ
ಟೆಲ್ ಅವಿವ್ ಇರುವಂತೆ
ಹೀಬ್ರು ನಲ್ಲಿ ಅದರರ್ಥ ವಸಂತದ ದಿಬ್ಬ
ಅಲ್ಲಿ ಅಪ್ಪಿಕೊಳ್ಳಲು ಈಗಲೂ
ಹೆಣ್ಣುಮಕ್ಕಳು ಬದುಕಿದ್ದಾರೆ.
4.ದುಃಖದ ಭಾಷೆ
ಮೂಲ – ದಾರಾ ಬರ್ನಾಟ್
ಬದುಕಿನುದ್ದಕ್ಕೂ ಕಂಡ ಸಾವುಗಳಿಂದ ಪಾರಾಗಲು
ಇದ್ದಬದ್ದದ್ದನ್ನೆಲ್ಲ ಕಟ್ಟಿಕೊಂಡು ದೇಶ ಬಿಟ್ಟೆ
ಇನ್ನೊಂದು ದೇಶದಲ್ಲಿ ಹೊಸ ಭಾಷೆ ಕಲಿತು
ಕೆಫೆಗಳಲ್ಲಿ ಅಡಗಿಕೊಂಡೆ
ಗುಂಪಿನಲ್ಲಿ ಗುರುತಿಸಲಾಗದ ಕಡೆ.
ಆದರೆ ದುಃಖ ಗಡಿಗಳನ್ನು ದಾಟಿ ಬರುತ್ತದೆ
ದೇಶಗಳ ನಡುವೆ ಭಾಷೆಗಳ ನಡುವೆ
ಅಲ್ಲಿ ದುಃಖ ನನ್ನ ಭುಜ ತಟ್ಟಿ
ಹೀಬ್ರುನಲ್ಲಿ ಹೇಳಿತು ಸಲಾಂ
ಇನ್ನು ನನ್ನಿಂದ ವೇಷ ಮರೆಸಿಕೊಳ್ಳಲಾಗಲಿಲ್ಲ
ಅಥವಾ ದುಃಖಕ್ಕೆ ನನ್ನನ್ನು ಹಿಂಬಾಲಿಸಬೇಡಾ
ಎಂದು ಬೇಡಲಾಗಲಿಲ್ಲ
ನಾನೀಗ ದುಃಖದ ಜೊತೆ ಮಾತನಾಡಲು ತೊಡಗಿದ್ದೇನೆ
ಸಾಧ್ಯವಿರುವ ಎಲ್ಲ ಭಾಷೆಗಳಲ್ಲಿ ಕೆಲವೊಮ್ಮೆ
ನಾವು ನಗುತ್ತೇವೆ ಕೂಡಾ.






0 Comments