ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರಿಗೂ ಯಹೂದೀಯರು ಮುಖ್ಯವಾಗಿರಲೇ ಇಲ್ಲ…

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ.

। ಕಳೆದ ಸಂಚಿಕೆಯಿಂದ ।

ಕರ್ಸ್ಕಿ ಪೋಲೆಂಡ್‌ನಲ್ಲಿ 1914ರಲ್ಲಿ ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಹುಟ್ಟಿದರು. ಅವರು ಹುಟ್ಟಿನಿಂದ ಕ್ಯಾಥೊಲಿಕ್ ಆದರೂ ಬೆಳೆದದ್ದು ಎಲ್ಲ ಜಾತಿ, ಧರ್ಮಗಳ ಜನರ ನಡುವಿನಲ್ಲಿ. ಎಲ್ಲರ ಜೊತೆ ಆಡಿ ಬೆಳೆದಿದ್ದರಿಂದ ಕರ್ಸ್ಕಿಗೆ ಎಲ್ಲರ ಮೇಲೂ ಪ್ರೀತಿ. ದೊಡ್ಡವರಾದ ನಂತರ ಅವರು ಮಿಲಿಟರಿ ತರಬೇತಿ ಪಡೆಯುತ್ತಾರೆ. ಆ ನಂತರ 1936ರಲ್ಲಿ polish ministry of external affairs ನಲ್ಲಿ ಕೆಲಸಕ್ಕೆ ಸೇರುತ್ತಾರೆ.

1939ರಲ್ಲಿ ಎರಡನೆ ಮಹಾಯುದ್ದ ಶುರುವಾಗುತ್ತದೆ. 1940ರಲ್ಲಿ ಕರ್ಸ್ಕಿ ಕೊರಿಯರ್ ಆಗಿ ನೇಮಿಸಲ್ಪಡುತ್ತಾರೆ. ಕೊರಿಯರ್ ಅಂದರೆ ಜರ್ಮನ್ ಆಕ್ರಮಿತ ಪೋಲ್ಯಾಂಡ್ ಒಳಗೆ ನಡೆಯುತ್ತಿರುವ ವಿದ್ಯಮಾನಗಳನ್ನು, ಗಡಿಪಾರಾಗಿ ಫ್ರಾನ್ಸ್‌ನಲ್ಲಿ ನೆಲೆಯೂರಿದ್ದ ಪೋಲಿಷ್ ಸರಕಾರ, ಹಾಗೂ ಬ್ರಿಟನ್ ಮತ್ತು ಅಮೆರಿಕಾ ದೇಶಗಳಿಗೆ ತಲುಪಿಸುವ ಹೊಣೆಗಾರಿಕೆ.

ಆ ಕೆಲಸದ ಸಲುವಾಗಿ ಅವರು ಅನೇಕ ಸಲ ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳಿಗೆ ರಹಸ್ಯವಾಗಿ ಓಡಾಡುತ್ತ ಇರುವಾಗ ಒಂದು ಸಲ ಗೆಸ್ಟಾಪೋಗಳ ಕೈಯಲ್ಲಿ ಸಿಕ್ಕಿ ಬೀಳುತ್ತಾರೆ. ಗೆಸ್ಟಾಪೋಗಳೆಂದರೆ ಜರ್ಮನ್ ಪೋಲೀಸರು. ಅವರ ಕೈಲಿ ಸಿಕ್ಕಿಬಿದ್ದರೆ ಸುಮ್ಮನೆ ಬಿಡುತ್ತಾರಾ? ಅತ್ಯಂತ ಕ್ರೂರವಾಗಿ ಹಿಂಸಿಸುತ್ತಾರೆ.

ಆ ನೋವು ತಡೆಯುವುದು ಕಷ್ಟವಾದ ಕರ್ಸ್ಕಿ, ಅದನ್ನು ತಡೆಯಲಾರದೇ ತಾನೇನಾದರೂ ರಹಸ್ಯಗಳನ್ನು ಬಾಯಿಬಿಟ್ಟರೆ ಎಂದು ಹೆದರಿ ಮಣಿಕಟ್ಟಿನ ನರವನ್ನು ಕುಯ್ದುಕೊಂಡು ಬಿಡುತ್ತಾರೆ. ಆ ಕೂಡಲೇ ಆಸ್ಪತ್ರೆಗೆ ಸಾಗಿಸಲ್ಪಡುತ್ತಾರೆ. ಆಸ್ಪತ್ರೆಯಲ್ಲಿ ಸುಧಾರಿಸಿಕೊಳ್ಳುತ್ತಿರಬೇಕಾದರೆ ನಡೆದ ರಹಸ್ಯ ಕಾರ್ಯಾಚರಣೆಯಲ್ಲಿ ಅವರನ್ನು ಅಲ್ಲಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಲಾಗುತ್ತದೆ (ಹಾಗೆ ಸಹಾಯ ಮಾಡಿದ ಅನುಮಾನದ ಮೇಲೆ ನಾಜ಼ಿಗಳು 30 ಜನರನ್ನು ಗುಂಡಿಕ್ಕಿ ಕೊಲ್ಲುತ್ತಾರೆ). ಆ ನಂತರ ಸ್ವಲ್ಪ ದಿನ ಸುಧಾರಿಸಿಕೊಂಡ ಕರ್ಸ್ಕಿ, ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.

ನೂರೆಂಟು ವಿವರಗಳ ಸಂಗ್ರಹಣೆಯ ಕೆಲಸ ಮತ್ತೊಮ್ಮೆ. ಲಂಡನ್‌ನಲ್ಲಿ ನೆಲೆಯೂರಿದ್ದ ಪೋಲೆಂಡ್ ಪ್ರಧಾನಿಯನ್ನು ಭೇಟಿಯಾಗಲು ಹೋರಾಡುವ ತಯಾರಿ ನಡೆಸುವಾಗಲೇ ಒಂದು ದಿನ ಇಬ್ಬರು ಅಪರಿಚಿತ ವ್ಯಕ್ತಿಗಳು ರಹಸ್ಯವಾಗಿ ಕರ್ಸ್ಕಿಯನ್ನು ಭೇಟಿಯಾಗಿ ಯಹೂದೀಯರ ಬಗ್ಗೆ ಹೇಳಲು ತೊಡಗುತ್ತಾರೆ…

‘ಯುದ್ದದಲ್ಲಿ ಹಿಟ್ಲರ್ ಸೋಲುತ್ತಾನೆ. ಮಿತ್ರ ರಾಷ್ಟ್ರಗಳು ಗೆಲ್ಲುತ್ತಾರೆ. ಅದೆಲ್ಲ ಸರಿ ಆದರೆ ಇಲ್ಲಿನ ಜ್ಯೂಗಳ ಕಥೆಯೇನು? ಯುದ್ದದ ಬಗ್ಗೆ ಮಾತನಾಡುವಾಗ ಎಲ್ಲರಿಗೂ ದೇಶಗಳ ಬಗ್ಗೆ ಮಾತ್ರ ಚಿಂತೆ, ಅವರವರ ಪ್ರಜೆಗಳ ಬಗ್ಗೆ ಮಾತ್ರ ಚಿಂತೆ. ಆದರೆ ನಮ್ಮನ್ನು ಲಕ್ಷಗಟ್ಟಳೆ ಸಂಖ್ಯೆಯಲ್ಲಿ ಎಕ್ಸ್‌ಟರ್ಮಿನೇಷನ್ ಕ್ಯಾಂಪ್‌ಗಳಿಗೆ ಸಾಗಿಸುತ್ತಿದ್ದಾರೆ.

ಗ್ಯಾಸ್ ಛೇಂಬರ್‌ನಲ್ಲಿ ನಮ್ಮನ್ನೆಲ್ಲ ದಾರುಣವಾಗಿ ಕೊಲ್ಲುತ್ತಿದ್ದಾರೆ. ಅದರ ಬಗ್ಗೆ ಯಾರಿಗೂ ಚಿಂತೆಯಿಲ್ಲ. ಅಸಲಿಗೆ ಜ್ಯೂಗಳು ಯಾರಿಗೂ ಸೇರಿದವರೆಂದು ಯಾರೂ ಎಣಿಸುತ್ತಲೇ ಇಲ್ಲ. ನಮಗೆ ಯಾವ ದೇಶವಿಲ್ಲ, ನಾವು ಯಾರಿಗೂ ಸೇರಿದವರಲ್ಲ, ನಮ್ಮ ಪರವಾಗಿ ಯೋಚಿಸುವವರೂ ಯಾರಿಲ್ಲ.

ಈಗ ನಾವೇನು ಮಾಡಬೇಕು ಹಾಗಿದ್ದರೆ? ಎಲ್ಲರಿಗೂ ರಾಜಕೀಯ ನಡೆಗಳು, ಮಿಲಿಟರಿ ಅಂಕಿ ಅಂಶಗಳು, ಪ್ಲ್ಯಾನುಗಳು ಇವುಗಳ ಕಡೆಗಷ್ಟೇ ಗಮನ. ಅವರ ಪ್ಲ್ಯಾನುಗಳಲ್ಲಿ ಎಲ್ಲಿಯೂ ನಮಗೆ ಜಾಗವಿಲ್ಲ. ನಮ್ಮ ಒಳಿತಿನ ಬಗ್ಗೆ ಯಾರಿಗೂ ಗಮನವಿಲ್ಲ. ಹೀಗಾದರೆ ನಾವು ಜಗತ್ತಿನಿಂದ ಪೂರ್ತಿಯಾಗಿ ಅಳಿಸಿ ಹೋಗುತ್ತೇವೆ.

ನಮ್ಮ ವಿಷಯವನ್ನು ಯಾರಾದರೂ ಜಗತ್ತಿಗೆ ತಿಳಿಸಬೇಕು. ಇಲ್ಲಿ ಏನು ನಡೆಯುತ್ತಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಜರ್ಮನ್ನರಿಗೆ ಕೂಡಾ ಗೊತ್ತಿಲ್ಲದಿರಬಹುದು. ಹೇಗಾದರೂ ಮಾಡಿ ಆ ವಿಷಯವನ್ನು ಜಗತ್ತಿನೆದುರು ಹೇಳಲಾಗುತ್ತದಾ. ನೀವು ಇದರ ಬಗ್ಗೆ ಕಣ್ಣಾರೆ ನೋಡಬೇಕೆಂದರೆ ನಾವು ನಿಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತೇವೆ…’  ಕರ್ಸ್ಕಿಯದ್ದು ಕೇವಲ ರಾಜಕಾರಣದ ಜಗತ್ತು.

ಯುದ್ದದಲ್ಲಿ ಜರ್ಮನ್ ಸೋಲಬೇಕು, ಪೋಲೆಂಡ್ ಬಿಡುಗಡೆ ಹೊಂದಿ ಮತ್ತೆ ಪೋಲಿಷ್ ಸರಕಾರ ದೇಶದಲ್ಲಿ ಆಡಳಿತ ನಡೆಸಬೇಕು ಇವುಗಳ ಕಡೆಗೆ ಮಾತ್ರ ಗಮನ. ‘ಆವರೆಗೆ ನಾನು ನನಗೆ ವಹಿಸಿದ ಕೆಲಸವನ್ನಷ್ಟೇ ಮಾಡುತ್ತಿದ್ದೆ. ಆದರೆ ಜ್ಯೂಗಳ ಸ್ಥಿತಿ ಅಷ್ಟು ಕೆಟ್ಟದಾಗಿರಬಹುದು ಎಂದು ಊಹೆ ಕೂಡಾ ಮಾಡಿರಲಿಲ್ಲ. ನನ್ನದೇ ಮೂಗಿನಡಿಯಲ್ಲಿ ಅವರ ಸ್ಥಿತಿ ಅಷ್ಟು ಹೀನಾಯವಾಗಿದೆ ಎಂಬುದು ನನಗೆ ಗೊತ್ತೇ ಇರಲಿಲ್ಲ’ ಎನ್ನುತ್ತಾರೆ ಕರ್ಸ್ಕಿ.

ಇಂಥ ಸತ್ಯ ತಿಳಿದ ನಂತರ ಆಘಾತಕ್ಕೊಳಗಾಗಿ. ತಾನು ಅದನ್ನು ಜಗತ್ತಿಗೆ ತಿಳಿಸುತ್ತೇನೆ ಎಂದು ಒಪ್ಪಿಕೊಳ್ಳುತ್ತಾರೆ. ಆಗ ಅವರು ಹೇಳುತ್ತಾರೆ ‘ನೀನು ಬಾಯಿ ಮಾತಿನಲ್ಲಿ ಹೇಳುವುದಕ್ಕಿಂತ, ಅದೆಲ್ಲವನ್ನೂ ಕಣ್ಣಾರೆ ಕಂಡು, ಸಾಕ್ಷಿ ಸಮೇತ ಅವರ ಮುಂದಿಟ್ಟರೆ ಅದು ಹೆಚ್ಚು ಪರಿಣಾಮ ಬೀರುತ್ತದೆ. ನೀನು ಒಪ್ಪುತ್ತೀಯಾದರೆ ನಿನ್ನನ್ನು ಗೆಟ್ಟೋದೊಳಗೆ ಕರೆದುಕೊಂಡು ಹೋಗುವ ಜವಾಬ್ದಾರಿ ನಮ್ಮದು’ ಎಂದು. ಕರ್ಸ್ಕಿಗೆ ಕೂಡಾ ಅದು ಸರಿ ಎನ್ನಿಸಿ ಗೆಟ್ಟೋಗಳ ಒಳಗೆ ಹೋಗಲು ಒಪ್ಪುತ್ತಾರೆ. ಅದು ಅತ್ಯಂತ ಕಷ್ಟವಾದ ಕೆಲಸವಾಗಿರುತ್ತದೆ. ಸಿಕ್ಕಿಬಿದ್ದರೆ ಉಳಿಯುವ ಸಾಧ್ಯತೆಯೇ ಇರುವುದಿಲ್ಲ. ಆದರೂ ಕರ್ಸ್ಕಿ ಅಲ್ಲಿಗೆ ಹೋಗುವ ನಿರ್ಧಾರ ಮಾಡುತ್ತಾರೆ.

ಯುಕ್ರೇನಿಯನ್ ಗಾರ್ಡ್‌ಗಳ ಯೂನಿಫಾರ್ಮ್ ಧರಿಸಿ ಅವರಿಬ್ಬರ ಜೊತೆ ಸುರಂಗ ಮಾರ್ಗವೊಂದರ ಮೂಲಕ ವಾರ್ಸಾ ಗೆಟ್ಟೋದೊಳಗೆ ನುಸುಳಿದ ಕರ್ಸ್ಕಿಗೆ ಅಲ್ಲಿ ನಡೆಯುವ ಘೋರಗಳು ಅರಿವಿಗೆ ಬರುತ್ತದೆ.

ಬೇಲಿ ಹಾಕಿದ್ದ ಗೆಟ್ಟೋಗಳ ಒಳಗೆ ಎಲ್ಲೆಲ್ಲಿಯೂ ಜನ, ಕೊಳಕು, ಅಸಹ್ಯ
ರಸ್ತೆ ರಸ್ತೆಗಳ ಮೇಲೆ ಬಿದ್ದ ಬೆತ್ತಲೆ ದೇಹಗಳು
ಹಸಿವಿನಿಂದ ಕಂಗೆಟ್ಟ ಜನರು
ರಸ್ತೆಯ ತುಂಬ ಕೇಳುವವರಿಲ್ಲದೇ ಅಲೆಯುತ್ತಿದ್ದ ಮಕ್ಕಳು
ಅದನ್ನೆಲ್ಲ ನೋಡಿಯೂ ಯಾವ ಭಾವವನ್ನೂ ವ್ಯಕ್ತಪಡಿಸದೇ ಸಾಗಬೇಕು. ಸ್ವಲ್ಪ ಭಾವುಕರಾದರೂ ಸಿಕ್ಕಿಬೀಳುತ್ತಾರೆ. ಜೊತೆಯಲ್ಲಿದ್ದ ಆ ಇಬ್ಬರೂ ‘ಇದನ್ನೆಲ್ಲ ಗಮನಿಸು, ಇದನ್ನು ನೆನಪಿಟ್ಟುಕೋ, ಅದನ್ನು ನೆನಪಿಟ್ಟುಕೋ’ ಎಂದು ಪಿಸುಗುಟ್ಟುವುದಲ್ಲದೇ ಇವರ ನಡುವೆ ಹೆಚ್ಚು ಮಾತುಕತೆಯಿಲ್ಲ.

ಬೆತ್ತಲೆ ಬಿದ್ದ ದೇಹಗಳನ್ನು ನೋಡಿದಾಗ ತಡೆಯಲಾರದೇ ಕರ್ಸ್ಕಿ ‘ಯಾಕೆ ಅವರೆಲ್ಲ ಹಾಗೆ ಅಲ್ಲಲ್ಲಿಯೇ ಬಿದ್ದಿದ್ದಾರೆ?’ ಎಂದು ಪಿಸುಗುಟ್ಟುತ್ತಾರೆ
‘ಅವರೆಲ್ಲ ಇನ್ನೇನು ಸಾಯುತ್ತಾರೆ. ಮನೆಯಲ್ಲಿಯೇ ಸತ್ತರೆ ಅವರ ಹೆಣ ಹೂಳುವುದಿಕ್ಕೆ ಟ್ಯಾಕ್ಸ್ ಕಟ್ಟಬೇಕು. ಅದಕ್ಕೆ ಸಾಯುತ್ತಾರೆ ಎಂದು ತಿಳಿದ ಮೇಲೆ ಬೇರೆ ದಾರಿಯಿಲ್ಲದೇ ಅವರನ್ನು ಬೀದಿಗೆ ಬಿಸಾಕಿ ಬಿಡುತ್ತಾರೆ. ಹಾಗೆ ಬಿಸಾಕುವ ಮೊದಲು ಅವನ ಮೈಮೇಲಿನ ಬಟ್ಟೆಗಳನ್ನು ತೆಗೆದಿಟ್ಟುಕೊಳ್ಳುತ್ತಾರೆ. ಆ ಚಳಿಗೆ ಎಷ್ಟು ಬಟ್ಟೆ ಇದ್ದರೂ ಸಾಲದು. ಹಾಗಾಗಿ ಬದುಕುವವರಿಗಾದರೂ ಸ್ವಲ್ಪ ಬೆಚ್ಚಗಿರಲಿ ಎಂದು ಬಟ್ಟೆಗಳನ್ನು ತೆಗೆದಿಟ್ಟುಕೊಳ್ಳುತ್ತಾರೆ.’

35 ವರ್ಷಗಳ ನಂತರವೂ ಇದರ ಬಗ್ಗೆ ಹೇಳುವಾಗ ಕರ್ಸ್ಕಿ ‘ತಬ್ಬಲಿ ಮಕ್ಕಳು, ಎದೆ ಬತ್ತಿದ್ದರೂ ಹಾಲೂಡಿಸುತ್ತಿದ್ದ ತಾಯಂದಿರು, ಬರೀ ನೋವು ಸಾವು… ಅಲ್ಲಿ ಮಾನವೀಯತೆಯ ಕುರುಹೂ ಇರಲಿಲ್ಲ’ ಎಂದು ಅಳುತ್ತಾರೆಂದರೆ ಅಲ್ಲಿನ ಘೋರಗಳು ಹೇಗಿದ್ದಿರಬೇಕು….

ಇಂಥ ಘೋರ ನರಕಕ್ಕೆ ಹೋಗಿ, ನೋಡಬಾರದ್ದನ್ನೆಲ್ಲ ನೋಡಿ ಬಂದ ಕರ್ಸ್ಕಿಗೆ ಇದನ್ನೆಲ್ಲ ಮಿತ್ರ ದೇಶಗಳಿಗೆ ತಲುಪಿಸುವುದು, ಪೋಲೆಂಡ್ ದೇಶವನ್ನು ಮುಕ್ತಗೊಳಿಸುವಷ್ಟೇ ಮುಖ್ಯವಾಗಿ ಬಿಡುತ್ತದೆ. ಆದರೆ ಅದು ಅತ್ಯಂತ ರಿಸ್ಕಿನ ಕೆಲಸ.

ಎಲ್ಲಕ್ಕಿಂತ ಮುಖ್ಯವಾಗಿ ಆ ದಾಖಲೆಗಳನ್ನು ಒಯ್ಯುವುದು ಮತ್ತಿಷ್ಟು ಅಪಾಯಕಾರಿ ಕೆಲಸ. ಹಾಗಾಗಿ ಅದಕ್ಕೆ ಬೇಕಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಾರೆ. ಎಲ್ಲ ದಾಖಲೆಗಳ ಮೈಕ್ರೊಫಿಲ್ಮ್‌ಗಳನ್ನು ಕೀಲಿಕೈನ ಹಿಡಿಕೆಯೊಳಗಿಟ್ಟು ಸಾಲ್ಡರ್ ಮಾಡಿ ಭದ್ರಮಾಡುತ್ತಾರೆ.

ನಂತರ ಜರ್ಮನ್ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಮಾತನಾಡುವಾಗ ಇವರ ಆಕ್ಸೆಂಟ್‌ನಲ್ಲಿ ಗೊತ್ತಾಗಿ ಬಿಡುತ್ತದೆ. ಅದು ಗೊತ್ತಾಗಬಾರದು ಎಂದರೆ ಮಾತೇ ಆಡಲು ಆಗಬಾರದು! ಅದಕ್ಕೊಂದು ಉಪಾಯ ಮಾಡಿ ಒಂದಿಷ್ಟು ಹಲ್ಲುಗಳನ್ನು ಕೀಳಿಸಿಕೊಂಡು ಬಿಡುತ್ತಾರೆ. ದವಡೆಯೆಲ್ಲ ಊದಿಕೊಳ್ಳುತ್ತದೆ, ಆ ನಂತರವೇ ಕರ್ಸ್ಕಿ ಪ್ರಯಾಣ ಶುರುಮಾಡುತ್ತಾರೆ.

ಆಗ ಪೋಲ್ಯಾಂಡ್‌ನಿಂದ ಜರ್ಮನ್ನರ ಕಣ್ಣು ತಪ್ಪಿಸಿ ಲಂಡನ್ನಿಗೆ ಹೋಗುವುದು ಹೆಚ್ಚುಕಡಿಮೆ ಆರೇಳು ವಾರಗಳ ಪ್ರಯಾಣ. ಅದೆಷ್ಟೋ ಸುಳ್ಳು ಹೆಸರುಗಳನ್ನು ಇಟ್ಟುಕೊಂಡು, ಅದಕ್ಕೆ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು, ಅಂತೂ ಒದ್ದಾಡಿಕೊಂಡು ಪೋಲೆಂಡ್‌ನಿಂದ ಬರ್ಲಿನ್‌ಗೆ ಹೋಗುತ್ತಾರೆ.

ಅಲ್ಲಿಂದ ಫ್ರಾನ್ಸ್‌ಗೆ, ಅಲ್ಲಿಂದ ಸ್ಪೇನ್‌, ಅಲ್ಲಿಂದ ಜಿಬ್ರಾಲ್ಟರ್ ಮಾರ್ಗವಾಗಿ ಅಂತೂ ಲಂಡನ್ ತಲುಪುತ್ತಾರೆ!  

ಅಷ್ಟೆಲ್ಲ ಕಷ್ಟಪಟ್ಟು ಗಡಿಪಾರಾದ ಪೋಲೆಂಡ್ ಪ್ರಧಾನಿಯನ್ನು ಭೇಟಿಯಾಗುತ್ತಾರೆ. ಎಲ್ಲ ವಿಷಯಗಳನ್ನು ದಾಖಲೆ ಸಮೇತ ತಲುಪಿಸಿದ ನಂತರ ಅವರಿಗೆ ತಿಳಿಯುತ್ತದೆ ಜಗತ್ತಿನಲ್ಲಿ ಯಾರಿಗೂ ಯಹೂದೀಯರ ಹೀನ ಸ್ಥಿತಿ-ಗತಿ, ಅವರ ಹೀನಾತಿಹೀನ ಬದುಕು-ಸಾವು ಯಾವುದೂ ಮುಖ್ಯವಾಗಿರಲೇ ಇಲ್ಲ ಎನ್ನುವುದು…

|ಮುಂದಿನ ವಾರಕ್ಕೆ|

‍ಲೇಖಕರು ಬಿ ವಿ ಭಾರತಿ

17 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading