ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರಿಗಿದೆ ಸ್ವಾಮಿ ಪುರುಸೊತ್ತು?

ಪುರಸೊತ್ತು

ಮಹೇಶ ಶ್ರೀ ದೇಶಪಾಂಡೆ

ಬಹಳ ದಿನಗಳ ಮೇಲೆ ಪುರಸೊತ್ತು ಮಾಡಿಕೊಂಡು ಏನಾದರೂ ಬರೆಯಬೇಕೆಂದು ಛಲದಿಂದ ಕೈಗೆ ಪೆನ್ನೆತ್ತಿಕೊಂಡೆ. ಊಹೂಂ! ಏನೂ ಬರೆಯಲು ತೋಚುತ್ತಿಲ್ಲ. ತಲೆಯೆಲ್ಲಾ ಖಾಲಿ ಖಾಲಿ! ಆದರೂ ಏನಾದರೂ ಬರೆಯಲೇಬೇಕೆಂಬ ಹಠದಿಂದ ಪಟ್ಟಾಗಿ ಕುಳಿತೆ. ಹತ್ತು ನಿಮಿಷ ಆಯ್ತು. ಇಪ್ಪತ್ತು ನಿಮಿಷ ಮುಗಿಯಿತು. ಅರ್ಧಗಂಟೆಯೂ ಕಳೆದು ಹೋಯಿತು. ಎದುರಿಗಿದ್ದ ಪೇಪರ ಮೇಲೆ ಒಂದು ಚುಕ್ಕೆಯನ್ನೂ ಇಡಲು ಸಾಧ್ಯವಾಗಲಿಲ್ಲ. ಅರೆ! ನಾನಿವತ್ತು ಪೆನ್ನು ಹಿಡಿದದ್ದು ಪುರಸೊತ್ತು ಮಾಡಿಕೊಂಡು. ಈ ‘ಪುರಸೊತ್ತು’ ಎಂಬ ವಿಷಯದ ಬಗ್ಗೆ ಯಾಕೆ ಒಂದಷ್ಟು ಹೆಕ್ಕಿ ತೆಗೆಯಬಾರದು. ಪುರಸೊತ್ತು ಮಾಡಿಕೊಂಡು ಒಂಚೂರು ಹರಟೆ ನಿಮ್ಮೊಟ್ಟಿಗೆ ಯಾಕೆ ಹೊಡೆಯಬಾರದು. ಹಾಂ! ನೀವೂ ಪುರಸೊತ್ತು ಮಾಡಿಕೊಂಡು ಬನ್ನಿ. ಒಂದು ಕಪ್ಪು ಕಾಫಿ ಕುಡಿಯುತ್ತಾ ಮಾತಾಡೋಣ. ಏನಂತೀರಿ?
ಇಂದಿನ ನಗರ ಜೀವನ ನಮ್ಮೆಲ್ಲರ ಬದುಕುವ ಪರಿಯನ್ನು ಬದಲಾಯಿಸಿಬಿಟ್ಟಿದೆ. ಎಲ್ಲವೂ ಯಾಂತ್ರಿಕ. ನಿಗದಿತ ವೇಳಾಪಟ್ಟಿಯನ್ನು ಎಲ್ಲರೂ ರೂಢಿಸಿಕೊಂಡುಬಿಟ್ಟಿದ್ದೇವೆ. ಒಂಚೂರು ಆಚೀಚೆ ಆದರೆ ದಿನಪೂತರ್ಿ ಎಡವಟ್ಟು. ದಿನ ಬೆಳಗಾದರೆ ಓಡು……… ಓಡು……… ಓಡು. ಎಲ್ಲಿ ಓಡುತ್ತಿದ್ದೇವೆ? ಯಾಕೆ ಓಡುತ್ತಿದ್ದೇವೆ? ಎಂಬುದೆ ಎಷ್ಟೊಸಲ ಮರೆತು ಹೋಗುತ್ತದೆ. ಓಡುವ ಕ್ರಿಯೆ ಅರ್ಥಕಳೆದು ಕೊಳ್ಳುವಷ್ಟರ ಮಟ್ಟಿಗೆ ನಾವಿಂದು ಕುರುಡಾಗಿ ಹೋಗಿದ್ದೇವೆ. ಎಲ್ಲದರಲ್ಲೂ ಆತುರ ಗಡಿಬಿಡಿ. ನಾಳೆ ಆಗೋ ಕೆಲಸ ಇಂದೇ ಆಗಿಬಿಡಬೇಕು ಎಂಬ ಧಾವಂತದಲ್ಲಿ ನಾಳೆಯ ಕೆಲಸ ನಿನ್ನೆಯ ಮುಗಿಸಿ ಇವತ್ತು ಏನು ಮಾಡಬೇಕು ಎಂಬ ಚಿಂತೆಯಲ್ಲಿ ಮಾನಸಿಕವಾಗಿ ಸತ್ತುಹೋಗುತ್ತೇವೆ.

ಇಂದಿನ ಪೀಳಿಗೆಯ ಯುವಜನಾಂಗ ಆದ್ಯಾಕಷ್ಟು ತರಾತುರಿಯಲ್ಲಿರುತ್ತಾರೋ ಗೊತ್ತಿಲ್ಲ! ದಿನಬೆಳಗಾದರೆ ಖ್ಯಾತ ಗಾಯಕರಾಗುವ ಕನಸು ಕಾಣುತ್ತಾರೆ. ಸ ರಿ ಗ ಮ ಪ ದ ನಿ ಸ ಸ್ವರಗಳನ್ನು ಶಾಸ್ತ್ರೀಯವಾಗಿ ಅಭ್ಯಸಿಸುವ ಅವಶ್ಯಕತೆಯನ್ನೇ ಮರೆಯುತ್ತಾರೆ. ಇನ್ನು ಕೆಲವರಿಗೆ ದಿಢೀರ್ ಶ್ರೀಮಂತರಾಗುವ ಬಯಕೆ. ಆದರೆ ಯಾವ ಕೆಲಸ ಮಾಡಬೇಕು. ಯಾವ ವ್ಯಾಪಾರ ಮಾಡಬೇಕು. ತಮ್ಮ ಸಾಮರ್ಥ್ಯ ಯಾವುದರಲ್ಲಿದೆ. ಏನು ಮಾಡಿದರೆ ಸೂಕ್ತ ಎಂಬ ಬಗ್ಗೆ ಆತ್ಮವಿಮಶರ್ೆ ಮಾಡಿಕೊಳ್ಳುವುದಿಲ್ಲ. ಆತುರದ ನಿಧರ್ಾರ ತೆಗೆದುಕೊಳ್ಳುವ ಇಂಥವರು ಕೆಲವೊಮ್ಮೆ ಎದ್ದು ನಿಲ್ಲಲೂ ಬಾರದ ರೀತಿಯಲ್ಲಿ ಎಡವಿ ಬೀಳುತ್ತಾರೆ. ಸಮಾಧಾನ ಚಿತ್ತದಿಂದ ಕುಳಿತು ಯೋಚಿಸುವಷ್ಟು ಪುರಸೊತ್ತು ಇವರಿಗಿಲ್ಲ.
ಇನ್ನು ನಮ್ಮ ಬಂಧು ಬಳಗ ಗೆಳೆಯರ ಸಮೂಹ ಹಾಗೂ ಸಾಮಾಜಿಕ ಚಟುವಟಿಕೆಗಳತ್ತ ಒಂದಷ್ಟು ಗಮನ ಹರಿಸೋಣ. ನಗರೀಕರಣದ ಹೊಡೆತದಿಂದ ಒಟ್ಟು ಕುಟುಂಬಗಳು ಬಹುತೇಕ ಮಾಯವಾಗಿಬಿಟ್ಟಿವೆ. ನಾನು ನನ್ನ ಗಂಡ ಅಥವಾ ಹೆಂಡತಿ ನನ್ನ ಮಕ್ಕಳು ಇಷ್ಟೆ ಪ್ರಪಂಚ. ಬೇರೆ ಇನ್ಯಾರೂ ಈ ಪ್ರಪಂಚದಲ್ಲಿ ಕಾಲಿಡುವ ಹಾಗೇಯೇ ಇಲ್ಲ. ಒಂದು ಸಮಯ ಕಾಲಿಟ್ಟರೋ ಆ ಮನೆಯ ನೆಮ್ಮದಿ ಹಾಳು. ಈ ರೀತಿಯ ಮನಸ್ಥಿತಿಗೆ ನಾವಿಂದು ತಲುಪಿಬಿಟ್ಟಿದ್ದೇವೆ. ಎದುರು ಸಿಕ್ಕಿದವರಿಗೆ ಮುಗುಳ್ನಕ್ಕು ನಾಲ್ಕು ಮಾತಾಡಲೂ ನಮ್ಮಲ್ಲಿ ಪುರಸೊತ್ತಿಲ್ಲ. ಒಂದೆರಡು ನಿಮಿಷದ ಕುಶಲೋಪರಿ ಶಾಸ್ತ್ರಮಾಡಿ ಇನ್ನೊಂದು ದಿನ ಸಿಗೋಣ ಮನೆಗೆ ಬನ್ನಿ ಪುರಸೊತ್ತು ಮಾಡಿಕೊಂಡು ಎಂಬ ಡೈಲಾಗು ಹೊಡೆಯುತ್ತೇವೆ. ಆ ಡೈಲಾಗು ನಾಟಕೀಯ ಅಂತ ಹೇಳಿದವರಿಗೂ ಗೊತ್ತು. ಕೇಳಿಸಿಕೊಳ್ಳುವವರಿಗೂ ಗೊತ್ತು. ದೇಶಾವರಿ ನಗೆಯಲ್ಲಿ ಭೇಟಿ ಮುಕ್ತಾಯ ಕಾಣುತ್ತದೆ. ಎದುರಿಗೆ ಸಿಕ್ಕಾಗಲೇ ಮನೆಗೆ ಕರೆಯದವರು ಇನ್ನೊಮ್ಮೆ ಕರೆಯುವ ದಿನ ಯಾವತ್ತು ಬರುವುದೋ ಗೊತ್ತಿಲ್ಲ! ಮನೆಗೆ ಬಾ ಅಂತ ಹೇಳುವವರು ಅವರ ಮನೆ ಅಡ್ರೆಸ್ಸು……… ಹಾಳಾಗಿ ಹೋಗಲಿ! ಕನಿಷ್ಠ ಫೋನ್ನಂಬರೂ ವಿನಿಮಯ ಮಾಡಿಕೊಳ್ಳುವುದಿಲ್ಲ. ಇನ್ನು ನಿಮ್ಮನ್ನು ಮನೆಗೆ ಕರೆದು ಉಪಚರಿಸುವುದೆಲ್ಲಿಂದ ಬಂತು! ಇದರಿಂದಲೇ ಗೊತ್ತಾಗುತ್ತೆ ಅವರು ಕರೆಯುತ್ತಿರುವುದು ಕಾಟಾಚಾರಕ್ಕೆ. ಅದನ್ನು ತಿಳಿದು ತಿಳಿದು ಕೆಲವರು ಒತ್ತಾಯ ಪೂರ್ವಕವಾಗಿ ಫೋನ್ನಂಬರು ಕೇಳಿ ಪಡೆಯುತ್ತಾರೆ. ಕೊಡಲೋ ಬೇಡವೋ ಎಂಬ ದ್ವಂದ್ವದಲ್ಲಿ ಅರೆಮನಸ್ಸಿನಿಂದ ಫೋನ್ನಂಬರು ಕೊಟ್ಟಮೇಲೂ ಕೆಲವರು ಬಂಡತನ ಮೆರೆಯುತ್ತಾರೆ. ಇಂಥ ಸಮಯದಲ್ಲೆ ಫೋನ್ ಮಾಡಬೇಕೆಂದು ತಾಕೀತು ಮಾಡುತಾರೆ. ಇದರರ್ಥ ಇಷ್ಟೆ, ನೀವು ಅವರ ಮನೆಗೆ ಹೋಗುವುದು ಅವರಿಗೆ ಇಷ್ಟವಿಲ್ಲ. ಇಂಥ ಮುಖವಾಡದ ಬದುಕು ಯಾಕೆ? ಯಾವ ಪುರುಷಾರ್ಥಕ್ಕಾಗಿ?
ಇದ್ದುದರಲ್ಲಿ ತೃಪ್ತಿ ಪಟ್ಟುಕೊಳ್ಳುವ ಗುಣವನ್ನು ನಾವು ಎಂದೋ ಗಾಳಿಗೆ ತೂರಿ ಬಿಟ್ಟಿದ್ದೇವೆ. ಅದುಬೇಕು! ಇದುಬೇಕು! ಕಂಡದ್ದೆಲ್ಲಬೇಕು. ಈ ಬೇಕುಗಳ ನಿರಂತರ ಪಟ್ಟಿ ನಮ್ಮ ಪುರಸೊತ್ತನ್ನು ಕಸಿದುಕೊಂಡು ಬಿಟ್ಟಿದೆ. ಸಣ್ಣಸಣ್ಣ ವಿಷಯಗಳಲ್ಲಿ ಆನಂದ ಪಡುವ ಎಷ್ಟೊ ಸಮಾಚಾರಗಳಿವೆ. ಆದರೆ ನಮಗೆಲ್ಲಿದೆ ಪುರಸೊತ್ತು. ಚಿಕ್ಕಮಗುವಿಗೆ ಒಂದು ಚಾಕಲೇಟ್ ಕೊಟ್ಟು ಆ ಮಗುವಿನ ಮುಖದಲ್ಲಿ ಮೂಡುವ ಖುಷಿ, ಮಿಂಚುವ ಕಣ್ಣುಗಳನ್ನು ಎಷ್ಟುಜನ ನೋಡಿ ಅನುಭವಿಸಿದ್ದಾರೆ? ಹೆಜ್ಜೆ ಹೆಜ್ಜೆಗೂ ಲೆಕ್ಕಾಚಾರ ಹಾಕುತ್ತ ಸುತ್ತಲೂ ನಡೆಯುವ ಪ್ರಸಂಗಗಳಿಂದ ಕೆಲವರು ಸಂತೋಷದಿಂದ ವಂಚಿತರಾಗುತ್ತಾರೆ. ಪುರಸೊತ್ತು ಮಾಡಿಕೊಳ್ಳುವುದೆಂದರೆ ಕೆಲವರಿಗೆ ವ್ಯರ್ಥ ಕಾಲಹರಣ ಮಾಡಿದಂತೆ. ಪುರಸೊತ್ತಿಗೂ ಕಾಲಹರಣಕ್ಕೂ ವ್ಯತ್ಯಾಸವನ್ನೆ ತಿಳಿಯದವರಿದರು. ಕೆಲಸದ ಒತ್ತಡದಿಂದ ಕೆಲಕಾಲ ವಿಮುಖರಾಗಿ ತಮಗಿಷ್ಟವಾದ ಸಿನಿಮಾ ನೋಡುವುದೋ, ರಸ್ತೆಬದಿಯಲ್ಲಿ ನಿಂತು ಪಾನಿಪುರಿ ತಿನ್ನುವುದೋ ಅಥವಾ ಪ್ರವಾಸ ಕೈಗೊಳ್ಳುವುದೋ ಮುಂತಾದ ಚಟುವಟಿಕೆಗಳು ವ್ಯರ್ಥ ಕಾಲಹಾರಣದ ಪಟ್ಟಿಯಲ್ಲಿ ಸೇರುವುದಿಲ್ಲ. ಕೆಲಸವನ್ನೆ ಮಾಡದವರಿಗೆ ಇದು ಅನ್ವಯಿಸುವುದಿಲ್ಲ. ಮಾತು ಮಾತಿಗೂ ನನಗೆ ಪುರಸೊತ್ತಿಲ್ಲ, ಸಿಕ್ಕಾಪಟ್ಟೆ ಕೆಲಸ ಎಂದು ಅಲವತುಕೊಳ್ಳುವವರಿಗೆ ಒಂದೋ ದುಡ್ಡಿನ ಬೇತಾಳ ಬೆನ್ನು ಬಿದ್ದಿರಬೇಕು. ಇಲ್ಲ ಪ್ರಸಿದ್ಧಿ ಅಧಿಕಾರದ ಗೀಳಿಗೆ ಅಂಟಿಕೊಂಡಿರಬಹುದು.
ಇಷ್ಟೊತ್ತು ನನ್ನೊಂದಿಗೆ ಹರಟೆಯಲ್ಲಿ ಪುರಸೊತ್ತು ಮಾಡಿಕೊಂಡ ನಿಮಗೆಲ್ಲ ನಾನು ಆಭಾರಿಯಾಗಿದ್ದೇನೆ. ಕೊನೆಯದಾಗಿ ಒಂದು ಮಾತು. ನಾಳೆಯ ಬದುಕಿಗೆ ನಿನ್ನೆಯೆ ಸತ್ತು ಇಂದು ಜೀವಂತವಾಗಿರುವ ಪ್ರಯತ್ನ ನಾವೆಲ್ಲ ಮಾಡುತ್ತಿದ್ದೇವೆ. ಇನ್ನಾದರೂ ಪುರಸೊತ್ತು ಮಾಡಿಕೊಂಡು ನಿನ್ನೆಯೂ ಬದುಕಿ, ಇಂದೂ ಬದುಕಿ ನಾಳೆಯೂ ಬದುಕಿ ಜೀವನಕ್ಕೊಂದು ಅರ್ಥ ಸಾರ್ಥಕತೆ ಕಂಡುಕ್ಕೊಳ್ಳೋಣ.
 
ಏನಂತೀರಿ! ನಮಸ್ಕಾರ.
 

‍ಲೇಖಕರು G

23 June, 2015

3 Comments

  1. Asha

    Chennagi odiskondu hoytu.

  2. Shashikala M

    ನಾಳೆ ಆಗೋ ಕೆಲಸ ಇಂದೇ ಆಗಿಬಿಡಬೇಕು ಎಂಬ ಧಾವಂತದಲ್ಲಿ ನಾಳೆಯ ಕೆಲಸ ನಿನ್ನೆಯ ಮುಗಿಸಿ ಇವತ್ತು ಏನು ಮಾಡಬೇಕು ಎಂಬ ಚಿಂತೆಯಲ್ಲಿ ಮಾನಸಿಕವಾಗಿ ಸತ್ತುಹೋಗುತ್ತೇವೆ.
    – So true

  3. Anonymous

    Ee Facebook watsapp bittu swalpa purusottu madkondu obbarannobbaru face to face nodi mataaduvantagabeku.aag jeevan jeevantvagiruttade.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading