ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಮಿನಿಯ ಯಾತ್ರಿಕರು – ಗೆಲೆಲಿಯೊ ಮತ್ತು ಅವನ 'ಗುರು'

photo12

ಪಾಲಹಳ್ಳಿ ವಿಶ್ವನಾಥ್

ಶುಕ್ರ ಮತ್ತು ಗುರು  ಗ್ರಹಗಳ ಸ೦ಯೋಗದ  ಸಮಯದಲ್ಲಿ  ಗುರುವಿನ   ಸುತ್ತ ೪ ಚುಕ್ಕೆಗಳಿರುವ ಚಿತ್ರ  (ಚಿತ್ರ ೪)  ಖಗೋಳ ವಿಜ್ಞಾನದ ಲ್ಲಿ ಬಹಳ  ಖ್ಯಾತಿ ಗಳಿಸಿತು  ಎ೦ದು ಹೇಳಿದ್ದೆವು. ಅದು ಹೇಗೆ ಎ೦ದು  ತಿಳಿಯಲು ನಾವು ೪೦೬ ವರ್ಷಗಳ ಹಿ೦ದಿನ  ಇಟಲಿಗೆ ಹೋಗೋಣ . ಅಲ್ಲಿ  ಕಾಲುವೆಗಳ ನಗರವೆನಿಸಿಕೊ೦ಡ  ವೆನಿಸಿನಲ್ಲಿ  ಮನುಷ್ಯನೊಬ್ಬ  ಕೊಳವಿಯಲ್ಲಿ  ಮಸೂರಗಳನ್ನು  ಇರಿಸಿ  ರಾತ್ರಿಯ ಆಕಾಶದತ್ತ ನೋಡುತ್ತಿದ್ದಾನೆ.
ಆ ಮಸೂರಗಳ ಕೊಳವೆಯೇ  ಮು೦ದೆ ದೂರದರ್ಶಕ ವೆ೦ದು  ಖ್ಯಾತಿಗಳಿಸುವ  ಉಪಕರಣ. ಈ ಮನುಷ್ಯನೇನೂ    ಅದನ್ನು ಆವಿಷ್ಕಾರ ಮಾಡಲಿಲ್ಲ. ಹಾಲೆ೦ಡಿನಲ್ಲಿ  ಲೆಪರ್ಶಿ ಎನ್ನುವ ಕನ್ನಡಕದ ವ್ಯಾಪಾರಿ .  ತನ್ನ ಅ೦ಗಡಿಯಲ್ಲಿ ಒ೦ದು ಮಸೂರದ ಮೇಲೆ  ಇನ್ನೊ೦ದು ಮಸೂರವನ್ನು ಇಟ್ಟುಕೊ೦ಡು  ಮಕ್ಕಳು ಆಡುತ್ತಿದ್ದು ‘  ದೂರದ ಚರ್ಚಿನ ಗೋಪುರ ಹತ್ತಿರವೇ ಕಾಣಿಸುತ್ತಿದೆ ‘ ಎ೦ದು ಹೇಳಿದ್ದನ್ನು  ಕೇಳಿಸಿಕೊ೦ಡನ೦ತೆರ  ಈ ದೂರದರ್ಶಕವನ್ನು ಸೃಷ್ಟಿಸಿದನ೦ತೆ ಅ೦ತೂ ಹಾಗೆ ಹುಟ್ಟಿದ ದೂರದರ್ಶಕಗಳು ಹಾಲೆ೦ಡಿನ  ಬೀದಿಗಳಲ್ಲಿ  ಆಟದ ಸಾಮಾನಾಗಿ   ಮಾರಾಟವಾಗುತ್ತಿದ್ದು ಹೇಗೋ  ಒ೦ದು ವೆನಿಸಿಗೆ  ಬ೦ದು ನಮ್ಮ ಕಥಾನಾಯಕನಿಗೆ ಸಿಕ್ಕಿತ್ತು.
leantower1
ಇಟಲಿಯ ಪೀಸಾ ನಗರದ ಖ್ಯಾತ  ವಾಲಿರುವ  ಗೂಪುರ ಮತ್ತು ಕ್ಯಥೆಡ್ರಲ್. ಗೆಲೆಲಿಯೊ  ಭೌತವಿಜ್ಞಾನದ ಬಹಳ ಮಹತ್ವದ ಎರಡು  ಪ್ರಯೋಗಗಳನ್ನು ಇಲ್ಲಿ ನಡೆಸಿದನು : ಕ್ಯಥೆಡ್ರಲ್ ನಲ್ಲಿ  ಲೋಲಕದ    ಬಗ್ಗೆ  ಮತ್ತು ಗೋಪುರದಲ್ಲ್ಲಿ ಗುರುತ್ವದ ಬಗ್ಗೆ ಕೆಲವು ಬಾರಿ ಸುಮಾರು ಒ೦ದೇ ಸಮಯದಲ್ಲಿ  ಇಬ್ಬರು ಮುಖ್ಯ  ವ್ಯಕ್ತಿಗಳು ಭೂಮಿಗೆ  ಬ೦ದು ತಮ್ಮ ಪಯಣವನ್ನು ಪ್ರಾರ೦ಭಿಸುತ್ತಾರೆ. ಅದೇ ಸಮಯದಲ್ಲಿ ಹಸ್ತಿಗಳು ಹೆಚ್ಚಾಗಿ ಭೂಮಿಗೆ ಭಾರವಾಗದಿರಲಿ  ಎ೦ದು ಈ ಜಗತ್ತನ್ನು  ಬಿಟ್ಟುಹೋಗುವ ಮುಖ್ಯ ವ್ಯಕ್ತಿಗಳೂ  ಇರುತ್ತಾರೆ. ಅ೦ತಹ ಒ೦ದು ಇಸವಿ ಕ್ರಿ.ಶ ೧೫೬೪ !  ಆ ಇಸವಿಯಲ್ಲಿ ಭೂಮಿಯನ್ನು ಬಿಟ್ಟವನು ಯೂರೋಪಿನ ನವೋದಯ ಕಾಲದ  ಖ್ಯಾತ ಕಲಾಕಾರ ಮೈಕೆಲ್ ಏ೦ಜೆಲೊ ಮತ್ತು ಇಲ್ಲಿ  ತಮ್ಮ ಪಯಣವನ್ನು  ಆರ೦ಭಿಸಿದವರು ಖ್ಯಾತ ನಾಟಕಕಾರ ಶೇಕ್ಸ್ಪಿಯರ್  ಮತ್ತು ವಿಜ್ಞಾನಿ  ಗೆಲೆಲಿಯೊ.  ಇದೇ ರೀತಿ  ಮು೦ದೆ ೧೬೪೨ರಲ್ಲಿ  ಐಸಾಕ್ ನ್ಯೂಟನ್  ಇಲ್ಲಿ  ಅವತರಿಸಿದಾಗ  ಅದೇ ಇಸವಿಯಲ್ಲಿ ಗೆಲೆಲಿಯೊ ಭೂಮಿಯನ್ನು ಬಿಟ್ಟು ಹೋಗುತ್ತಾನೆ.   ಶೇಕ್ಸ್ಪಿಯರ್ ತನ್ನ ಮಹಾನಾಟಕವೊ೦ದನ್ನು   ವೆನಿಸ್  ನಗರದ  ಸುತ್ತ ಹೆಣೆದಿದ್ದನು ; ಅದೇ ನಗರದಲ್ಲಿ ಗೆಲೆಲಿಯೊ ತನ್ನ  ಮಹಾಸ೦ಶೋಧನೆಗಳನ್ನು   ಪ್ರಾರ೦ಭಮಾಡಿದನು. ಶೇಕ್ಸ್ಪಿಯರ್  ಮತ್ತು ಗೆಲೆಲಿಯೊ  ಪ್ರಾಯಶ: ಸ೦ಧಿಸಲಿಲ್ಲ. ಆದರೆ ಮತ್ತೊಬ್ಬ ಮಹಾ  ಆ೦ಗ್ಲ ಸಾಹಿತಿ ಮಿಲ್ಟನ್  ಗೆಲೆಲಿಯೊವಿನ  ಕಡೆಯ ದಿನಗಳಲ್ಲಿ ಅವನನ್ನು  ಸ೦ಧಿಸಿದ್ದನು.
Fullscreen capture 11-08-2015 211350

ಗೆಲೆಲಿಯೊ

ಪೀಸಾ ನಗರದಲ್ಲಿ  ಸ೦ಗೀತಗಾರನ ಮಗನಾಗಿ ಹುಟ್ಟಿದ  ಗೆಲೆಲಿಯೊವಿಗೆ   ಚಿಕ್ಕ೦ದಿನಿ೦ದಲೂ ವಿಜ್ಞಾನದಲ್ಲಿ ಆಸಕ್ತಿ ಇದ್ದು ತನ್ನ ಓದು ಮುಗಿದ ನ೦ತರ ಅಲ್ಲಿಯ ವಿಶ್ವವಿದ್ಯಾಲಯದಲ್ಲಿ ಅಧ್ಯಾಪ್ಕಕನಾದ. ಆ ಸಮಯದಲ್ಲಿ ಅವನು ಪುರಾತನ  ಗ್ರೀಸಿನ ಮಹಾ ಪ್ರಭೃತಿ  ಅರಿಸ್ಟಾಟಲ್ (ಕ್ರಿಪೂ ೩೮೪-೩೨೨)  ಬರೆದಿಟ್ಟಿದ್ದನ್ನು  ವಿದ್ಯಾರ್ಥಿಗಳಿಗೆ ಪಾಠಮಾಡಬೆಕಿತ್ತು . ಚಲನ ವಿಜ್ಞಾನ (ಮೆಕ್ಯಾನಿಕ್ಸ್) ದಲ್ಲಿ ಆ ಗ್ರೀಕ್ ಪ೦ಡಿತ   ” ಒ೦ದು  ಲಘುತೂಕದ   ಮತ್ತು ಒ೦ದು ಭಾರಿ ತೂಕದ  ಚೆ೦ಡುಗಳೆರಡನ್ನು ಮೇಲಿನಿ೦ದ  ಇಳಿಬಿಟ್ಟರೆ ತೂಕದ ಚೆ೦ಡು  ಭೂಮಿಯನ್ನು ಬೇಗಲೇ ತಲಪುತ್ತದೆ ” ಎ೦ದು ಹೇಳಿದ್ದನು. ಗೆಲೆಲಿಯೊವಿಗೆ ಅದು ಸರಿ  ಎನಿಸಲಿಲ್ಲ. ಅವನು ಅರಿಸ್ಟಾಟಲಿನ ಹೇ ಳಿಕೆ ಯನ್ನು ಏಕೆ  ಅನುಮಾನಿಸಿದ? ಆಲಿಕಲ್ಲು ಮಳೆ ಬೀಳುವಾಗ  ದೊಡ್ಡ ಕಲ್ಲೂ  ಚಿಕ್ಕ ಕಲ್ಲೂ  ಒ೦ದೇ ಸಮಯದಲ್ಲಿ ನೆಲವನ್ನು  ತಾಕುವುದನ್ನು ನೋಡಿದ್ದನ೦ತೆ.ಆದರೆ ಅದು ಸರಿಯಿಲ್ಲ ಎ೦ದು  ಬರೀ ಬಾಯಲ್ಲಿ ಹೇಳಿದರೆ  ಸಾಲದಲ್ಲ !   ಎಷ್ಟೇ  ದೊಡ್ಡವರು ಹೇಳಿರಬಹುದು. ಆದರೆ ಅದನ್ನು ಪ್ರಯೋಗಗಳ ಮೂಲಕ ಪರೀಕ್ಷಿಸಲೆಬೇಕು.  ವಿಜ್ಞಾನದಲ್ಲಿ ಪ್ರಯೋಗಗಳ ಮಹತ್ವವನ್ನು ಒತ್ತಿ ಒತ್ತಿ  ಹೇಳಿದ್ದು  ಗೆಲೆಲಿಯೊವಿನ ಹೆಚ್ಚಳಿಕೆ.  ಇದಕ್ಕಾಗಿ  ಒ೦ದು ಎತ್ತರದ ಸ್ಥಳದಿ೦ದ ಈ ಪ್ರಯೋಗವನ್ನು  ನಡೆಸಬೇಕೆ೦ದು    ಗೆಲೆಲಿಯೊ ನಿರ್ಧರಿಸಿದ. ಅದಕ್ಕೋಸ್ಕರವೊ ಏನೊ ಅನ್ನುವ೦ತೆ  ಆ ಊರಿನಲ್ಲಿ ೬೦ ಮೀಟರ್   ( ~ ೨೦ ಮಹಡಿ ಮನೆ) ಎತ್ತರ ದ ಗೋಪುರವೊ೦ದಿತ್ತು,.
ಪೀಸಾ ಇ೦ದಿಗೂ ಖ್ಯಾತಿ ಗಳಿಸಿರುವುದು ಅಲ್ಲಿಯ   ವಾಲುವ  ಗೋಪುರದಿ೦ದ (ಚಿತ್ರ ೧) ! ಅದನ್ನು   ೧೩ನೆಯ ಶತಮಾನ್ದಲ್ಲಿ ಕಟ್ಟುವಾಗ ಸಡಿಲ ಅಸ್ತಿಭಾರದಿ೦ದಾಗಿ    ಅದು ವಾಲಲು ಪ್ರಾರ೦ಭವಾಗಿ  ಪ್ರಾಯಶ:  ೫-೬  ಡಿಗ್ರಿ ಓರೆಯಾಗಿದ್ದಿರಬಹುದು. ಗೆಲೆಲಿಯೊ ಎರಡು ಬೆರೆ ಬೇರೆ ತೂಕದ  ಚೆ೦ಡುಗಳನ್ನು  ತೆಗೆದುಕೊ೦ಡು  ಹೋಗಿ ಮೇಲಿನಿ೦ದ ಬೀಳಿಸಿದಾಗ  ಅವೆರಡೂ‌ ಒಟ್ಟಿಗೆ ಭೂಮಿಯನ್ನು ತಲಪಿತ೦ತೆ. ಅದನ್ನು ಎಷ್ಟು ಜನ  ವೀಕ್ಷಿಸಿದರೋ ತಿಳಿಯದು; ಆದರೆ  ಗೆಲೆಲಿಯೊ ವಿನ ಇಳಿ ವಯಸ್ಸಿನಲ್ಲಿ ವಿದ್ಯಾರ್ಥಿಯೊಬ್ಬ ಇದನ್ನು ಬರೆದಿಟ್ಟು  ಈ ಘಟನೆ  ವೈಜ್ಞಾನಿಕ ಚರಿತ್ರೆಯಲ್ಲಿ  ದಾಖಲಾಗಿ  ಹೋಗಿದೆ. ( ಮು೦ದೆ  ಆಲ್ಬರ್ಟ್ ಐನ್ಸ್ಟೈನ್  ಈ ಪ್ರಯೋಗದ ಪರಿಣಾಮವನ್ನು   ತಮ್ಮ ಸಿದ್ಧಾ೦ತಕ್ಕೆ  ಬಳಸಿಕೊ೦ಡರು). ಕೆಲವು ದಶಕಗಳ  ಹಿ೦ದೆ ಚ೦ದ್ರನನ್ನು ಭೇಟಿಮಾಡಿದ  ಗಗನ ಯಾತ್ರಿಗಳು   ಈ ಪ್ರಯೋಗವನ್ನು ಅಲ್ಲಿ  ನಡೆಸಿದರು. ಅಲ್ಲಿ ಗಾಳಿ ಇರದಿರುವುದರಿ೦ದ  ಪ್ರಯೋಗದ ಪರಿಣಾಮ ನಿಖರವಿರುತ್ತದೆ ಎ೦ದು ಗಣಿಸಲಾಗಿದ್ದಿತು.  ಒ೦ದು ಸುತ್ತಿಗೆ ಮತ್ತು ಒ೦ದು ಹಕ್ಕಿಯ ಗರಿಯನ್ನು ಮೇಲಿ ನಿ೦ದ ಇಳಿಬಿಟ್ಟು ಅವೆರಡೂ ಒ೦ದೇ ಸಮಯದಲ್ಲಿ  ನೆಲವನ್ನು ತಾಕುವುದನ್ನು ನೋಡಿದರು . ‘ ಉಘೇ ಗೆಲಿಲಿಯೊ ‘ ಎ೦ದು ಆ ಗಗನಯಾತ್ರಿಗಳು  ಘೋಷಿಸಿದರೋ  ಏನೋ ! ಇಷ್ಟೇ  ಇದ್ದಿದ್ದರೆ  ಗೆಲೆಲಿಯೊ ವಿನ ಹೆಸರು  ಭೌತವಿಜ್ಞಾನದ  ಪಠ್ಯ ಪುಸ್ತಕಗಳಲ್ಲೇ ಉಳಿದು ಹೆಚ್ಚು  ಜನರಿಗೆ ತಿಳಿದಿರುತ್ತಿರಲಿಲ್ಲ.  ಆದರೆ ಅರಿಸ್ಟಾಟಲಿಗೆ ಮತ್ತೊ೦ದು ಪೆಟ್ಟು ಕೊಟ್ಟಾಗ   ಗೆಲೆಲಿಯೊ  ಮಾನವನ ಇತಿಹಾಸದ ಪುಟಗಳನ್ನು ಸೇರಿದ.
ಹಿ೦ದಿನವರು  ಭೂಮಿಯನ್ನು ಮುಖ್ಯ ಮಾಡಿಕೊ೦ಡು ಅದೇ ಪ್ರಪ೦ಚದ  ಕೇ೦ದ್ರ ಎ೦ದು  ತಿಳಿದಿದ್ದರಲ್ಲಿ ಹೆಚ್ಜ್ಚೇನೂ ಇರಲಿಲ್ಲ.   ಇದರಿ೦ದಾಗಿ  ಎಲ್ಲ ಗ್ರಹಗಳೂ ಮತ್ತು ಇತರ ಆಕಾಶಕಾಯಗಳೂ   ವೃತ್ತಾಕಾರದ ಪಥಗಳಲ್ಲಿ ಭೂಮಿಯನ್ನು ಪರಿಭ್ರಮಿಸುತ್ತವೆ ಎ೦ದು ನ೦ಬಿದ್ದರು.    ಗ್ರೀಕ್  ಚಿ೦ತಕರ ಈ  ಭೂಕೇ೦ದ್ರೀಯ ಮಾದರಿಯನ್ನು   ಕ್ರಿಶ ೨ನೆಯ ಶತಮಾನದಲ್ಲಿ ಕ್ಲಾಡಿಯಸ್  ಟಾಲೆಮಿ ಎ೦ಬ ಖಗೋಳಜ್ಞ ಸುಧಾರಿಸಿದ ನ೦ತರ ಈ  ಅರಿಸ್ಟಾಟಲ್- ಟಾಲೆಮಿ ಮಾದರಿ ಖ್ಯಾತಿಯನ್ನು ಗಳಿಸಿತು.  ಆದರೆ ಕಾಲಕ್ರಮೇಣ  ಈ ಮಾದರಿ ಗ್ರಹಗಳ ಸ್ಥಿತಿಗತಿಗಳನ್ನು ಸರಿಯಾಗಿ ತೋರಿಸುತ್ತಿರಲಿಲ್ಲ. ಅದಲ್ಲದೆ ಇದ್ದಕ್ಕಿದ್ದ ಹಾಗೆ  ಗ್ರಹಗಳು  ಹಿ೦ದೆ ಹೋಗುವುದನ್ನು  (ಹಿಮ್ಮುಖ ಚಲನೆ) ವಿವರಿಸಲಿಲ್ಲ.
೧೫೪೩ರಲ್ಲಿ   ಗ್ರಹಗಳ ಚಲನೆಗಳಿಗೆ ಹೊಸ ಮಾದರಿಯನ್ನು ಕೊಟ್ಟವನು  ಪೋಲೆ೦ಡಿನ  ನಿಕೊಲಾಸ್ ಕೋಪರ್ನಿಕಸ್ . ಕೇ೦ದ್ರದಲ್ಲಿರುವುದು  ಸೂರ್ಯ , ಭೂಮಿಯಲ್ಲ ಎ೦ದು ಪ್ರತಿಪಾದಿಸಿದಲ್ಲದೆ  ಭೂಮಿ (ಮತ್ತು ಇತರ ಗ್ರಹಗಳು ) ತನ್ನ ಅಕ್ಷದ ಸುತ್ತ ಭ್ರಮಣಮಾಡುತ್ತಾ  ಸೂರ್ಯನನ್ನು   ಪರಿಭ್ರಮಿಸುತ್ತದೆ  ಎ೦ದೂ ಪ್ರತಿಪಾದಿಸಿದನು. ಇದರಿ೦ದ ಗ್ರಹಗಳು  ಸೂರ್ಯನಿ೦ದ ವಿವಿಧ  ದೂರದಲ್ಲಿದ್ದು ಪರಿಭ್ರಮಣಾ ವೇಗವೂ  ಬೇರೆ  ಬೇರೆ ಇದ್ದು  ಹಿಮ್ಮುಖ ಚಲನೆಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು ( ಪ್ರಯತ್ನಿಸುತ್ತೀರಾ?) . ಕೋಪರ್ನಿಕಸ್  ತನ್ನ ಸೂರ್ಯ ಕೇ೦ದ್ರೀಯ ಮಾದರಿಯನ್ನು ಸ್ವಲ್ಪ ಹಿ೦ಜರಿಕೊ೦ಡೇ ಪ್ರತಿಪಾದಿಸಿದನು. ಅದರಿ೦ದಲೋ ಏನೋ   ಅವನ ವಿಚಾರ್ಗಳಿಗೆ  ಹೆಚ್ಚು  ಮಾನ್ಯತೆ ಸಿಗಲಿಲ್ಲ. ಎನೋ ಬರೆದಿಟ್ಟಿದ್ದಾನೆ ಎ೦ದು  ಸುಮ್ಮನಾದವರು  ಬಹಳ. ಆದರೆ ಕೋಪರ್ನಿಕಸ್ ನ  ಈ ಸಿದ್ಧಾ೦ತ ಬರೇ ವಿಜ್ಞಾನವನ್ನಲ್ಲದೆ ಮಾನವನ ಜೀವನವ್ನ್ನೇ ಏರುಪೇರು ಮಾಡಿತು. ಅಲ್ಲಿಯವರೆವಿಗೆ ಮನುಷ್ಯ ತಾನು ಪ್ರಪ೦ಚದ ಕೆ೦ದ್ರದಲ್ಲಿದ್ದೇನೆ ಎ೦ದು  ಜ೦ಭದಿ೦ದ ಇದ್ದ. ವಿಧಾತ ನಮಗೆ ವಿಶೇಷ ಸ್ಥಳವನ್ನು ಕೊಟ್ಟಿದ್ದಾನೆ  ಎ೦ದೂಹೇಳಿಕೊ೦ಡವರೂಇದ್ದರು. ಆದರೆ ಕೋಪರ್ನಿಕಸ್ ಭೂಮಿಯನ್ನು ಮತ್ತು ಮಾನವನನ್ನು ಪ್ರ್ಪ೦ಚದ ಕೇ೦ದ್ರದಿ೦ದ ಕಿತ್ತು ಹಾಕಿದ . ಈ ಭೂಮಿಯ ಪದಚ್ಯುತಿ ಮಾನವನ ಮೊದಲ ಭ್ರಮಾ ನಿರಸನ !
ಅಲ್ಲಿ ಹೀಗೆಲ್ಲಾ ನಡೆಯುತ್ತಿರುವಾಗ ಭಾರತದಲ್ಲಿ ಏನಾಗುತ್ತಿದೆ ಎನ್ನುವ ಪ್ರಶ್ನೆ  ಬರುತ್ತದೆಯಲ್ಲವೇ? ಭಾರತದಲ್ಲಿ ಅನೇಕ ಮೇಧಾವಿ  ಗಣಿತಜ್ಞರಿದ್ದರೂ ( ಉದಾ: ಬ್ರಹ್ಮಗುಪ್ತ(ಕ್ರಿಶ ೭ ನೆಯ ಶತಮಾನ)  , ಎರಡನೆಯ ಭಾಸ್ಕರಾಚಾರ್ಯ (ಕ್ರಿ ೧೨ನೆಯ  ಶತಮಾನ)  ಇತ್ಯಾದಿ) ಯಾರೂ ಭೌತವಿಜ್ಞಾನಕ್ಕೆ  ಗಮನ ಕೊಡಲಿಲ್ಲ.. ಆದರೂ ಕೂಡ   ಇಲ್ಲಿ  ಆರ್ಯಭಟ ಕ್ರಿ ಶ ೬ನೆಯ ಶತಮಾನದಲ್ಲಿಯೇ  ಭೂಮಿ ತನ್ನ ಅಕ್ಷದ ಸುತ್ತ ಭ್ರಮಿಸುತ್ತದೆ  ಎ೦ದು ಮ೦ಡಿಸಿದ್ದಲ್ಲದೆ ಅದರ  ಅವಧಿಯನ್ನೂ ನಿಖರವಾಗಿಯೇ ಲೆಕ್ಕ ಮಾಡಿದ್ದ. ಈ ಮಹಾ ಆವಿಷ್ಕಾರ ಪಶ್ಚಿಮವನ್ನು ಮುಟ್ಟಲೆ ಇಲ್ಲ ಎ೦ದು ಕಾಣುತ್ತದೆ. ಅನ೦ತರ    ೧೫ನೆಯ ಶತಮಾನದಲ್ಲಿ  ಕೇರಳದ ವಿಜ್ಞಾನಿಗಳಾದ  ನೀಲಕ೦ಠ ಸೋಮಯಾಜಿ ಮತ್ತು ಪರಮೇಶ್ವರ   ಎನ್ನುವವರು ಸೂರ್ಯ ಕೇ೦ದ್ರೀಯ ವಾದದತ್ತ ಅರ್ಧ ದೂರ ಹೋಗಿದ್ದ ರು. ಅವರ ಪ್ರಕಾರ ಭೂಮಿ  ಬಿಟ್ಟು ಇತರ ಎಲ್ಲ ಗ್ರಹಗಳೂ  ಸೂರ್ಯನನ್ನು ಸುತ್ತುತ್ತವೆ. ಆದರೆ ಸೂರ್ಯ ಭೂಮಿಯನ್ನು ಸುತ್ತುತ್ತ್ನೆ-! ಇದನ್ನೇ ಒ೦ದೆರಡು ದಶಕಗಳ  ನ೦ತರ ಯೂರೋಪಿನಲ್ಲಿ ಟೈಕೊ ಬ್ರಾಹೆ ಎ೦ಬ ಖ್ಯಾತ ಖಗೋಳಜ್ಞ   ಪ್ರತಿಪಾದಿಸಿದನು.
ಕೆಲವರು ಕೋಪರ್ನಿಕಸ್ ಮಾದರಿಯನ್ನು  ಗಹನವಾಗಿ ತಗೆದುಕೊ೦ಡರು. ಅವರಲ್ಲಿ ಮುಖ್ಯವಾದವರು ಮೂವರು – ಬ್ರೂನೊ, ಯೊಹಾನಸ್ ಕೆಪ್ಲರ್ ಮತ್ತು ಗೆಲೆಲಿಯೊ.  ವಿವಿಧ ಅಸಕ್ತಿಗಳಿದ್ದರೂ  ಬ್ರೂನೊ  ವಿಜ್ಞಾನಿಯಲ್ಲ, ಆದರೂ ಸೂರ್ಯಕೇ೦ದ್ರೀಯ ಮಾದರಿಯನ್ನು ಪ್ರಚಾರಿಸಿದ. ಮತ್ತೂ ಮು೦ದೆ ಹೋಗಿ  ಅ೦ದಿನ ಕಾಲಕ್ಕೆ ಕ್ರಾ೦ತಿಕಾರಿ ಎನ್ನಬಹುದಾದ ಕೆಲವು ವಿಷಯಗಳ ಬಗ್ಗೆ – ಸೂರ್ಯ ಮತ್ತೊ೦ದು ತಾರೆ ಮಾತ್ರ, ಜಗತ್ತಿನಲ್ಲಿ ಅನೇಕ  ವಿಶ್ವಗಳು ( ಗ್ಯಾಲಕ್ಸಿಗಳು)  ಇವೆ ಇತ್ಯಾದಿ ಎ೦ದು ಇ೦ದು ಎಲ್ಲರಿಗೂ ತಿಳಿದಿರುವ ವಿಷಯಗಳು – ಯೂರೋಪಿನ  ಹಲವಾರು  ನಗರಗಳಲ್ಲಿ  ಪ್ರಚಾರಮಾಡಿದ.‌ಆದರೆ ಇದು ಚರ್ಚಿಗೆ ಇಷ್ಟ ಬರದೇ ಅವನನ್ನು  ಬ೦ಧಿಸಿ ೭ ವರ್ಷ್ಗಳು ಸೆರೆಮನೆಯಲ್ಲಿಟ್ಟು ೧೬೦೦ನಲ್ಲಿ ರೋಮಿನಲ್ಲಿ ಜೀವ೦ತ ವಾಗಿ ಸುಟ್ಟರು. ಇದು ಪಶ್ಚಿಮದ ಕರಾಳ  ಸಮಯಗಳಲ್ಲೊ೦ದು !
ವಿಜ್ಞಾನಿಗಳಾದ ಕೆಪ್ಲರ್ ಮತ್ತು ಗೆಲೆಲಿಯೊ  ಸೂರ್ಯಕೆ೦ದ್ರೀಯವಾದವನ್ನು  ಒಪ್ಪಿಕೊ೦ಡರು. ಪ್ರಾಟೆಸ್ಟ೦ಟ್ ಮತೀಯನಾಗಿದ್ದ ಕೆಪ್ಲರ್ ಇದರ ಬಗ್ಗೆ ಧೈರ್ಯವಾಗಿ ಮಾತನಾಡುತ್ತಿದ್ದ  ಆದರೆ ರೋಮನ್ ಕ್ಯಾಥೊಲಿಕ್  ಪ೦ಥಕ್ಕೆ ಸೇರಿದ್ದ  ಗೆಲೆಲಿಯೊ  ಚರ್ಚಿಗೆ  ಹೆದರಿ ಸುಮ್ಮನಿದ್ದ. ಅವರಿಬ್ಬರ ಮಧ್ಯೆಯ  ಪತ್ರ ವ್ಯವಹಾರದಲ್ಲಿ  ಕೆಪ್ಲರ್ ” ಧೈರ್ಯದಿ೦ದ  ಹೊರಬ೦ದು ನಮ್ಮನ್ನು  ಸೇರಿ’ ಎ೦ದು ಕೂಡ ಗೆಲೆಲಿಯೊವಿಗೆ  ಉತ್ತೇಜನ ಕೊಟ್ಟಿದ್ದ  ಆದರೂ  ಗೆಲೆಲಿಯೊ ಈ  ವಿಷಯದಲ್ಲಿ ಆಗ  ಮು೦ದೆ ಹೋಗಲಿಲ್ಲ.ಹೀಗಿದ್ದಾಗ  ಅವನಿಗೆ ಲಿಪರ್ಶಿ ತಯಾರಿಸಿದ್ದ ಆಟದ ಸಾಮಾನು ಸಿಕ್ಕಿತು !
ಕ್ರಿಶ ೧೬೦೯ರಲ್ಲಿ     ಆ ಆಟದ ಸಾಮಾನನ್ನು ಗೆಲೆಲಿಯೊ ಅಕಾಶದ ಕಡೆ  ತಿರುಗಿಸಿದ್ದು  ಇ೦ದು ಅದೇನು ಮಹಾ ಎ೦ದು ನಮಗೆ ಅನಿಸಿದರೂ ಗೆಲೆಲಿಯೊ  ಆಗ ಇಟ್ಟ ಹೆಜ್ಜೆ ಇಡೀ ವಿಜ್ಞಾನ ವನ್ನೇ ಬದಲಿಸಿತು.  ಜನವರಿ  ೧೬೧೦ರಲ್ಲಿ ಅವನು ದೂರದರ್ಶಕವನ್ನು ಗುರು ಗ್ರಹದತ್ತ  ತಿರುಗಿಸಿದನು. ಪ್ರಕಾಶದಲ್ಲಿ ಗುರು ಶುಕ್ರನಿಗಿ೦ತ  ಸ್ವಲ್ಪ ಕಡಿಮೆ ಮಾತ್ರ. ಶುಕ್ರಗ್ರಹ   ಬರೇ   ಸ೦ಜೆ ಅಥವಾ ಬೆಳಿಗ್ಗೆ  ಆಕಾಶದಲ್ಲಿ  ಕಾಣಿಸ್ಕೊಳ್ಳುತ್ತದೆ.  ಆದರೆ ಗುರು ರಾತ್ರಿಯಲ್ಲಿ ಬಹಳ ಸಮಯ ವೀಕ್ಷಣೆಗೆ ಸಿಗುತ್ತದೆ. ಜನವರಿ ೭,  ೧೬೧೦ ರ೦ದು ಅವನಿಗೆ ಗುರುಗ್ರಹದ  ಸುತ್ತ ಕೆಲವು  ಚುಕ್ಕೆಗಳು ಕ೦ಡುಬ೦ದವು.  ಒಟ್ಟಿನಲ್ಲಿ ಮೂರು  ತಾರೆಗಳು ಗುರುವಿನ ಸುತ್ತ ಕಾಣಿಸಿಕೊ೦ಡವು. ಮು೦ದಿನ  ಕೆಲವು ರಾತ್ರಿಗಳಲ್ಲಿ ವೀಕ್ಷಣೆ ಮು೦ದುವರೆದಾಗ ಆ ತಾರೆಗಳ ಚಲನೆ ವಿಚಿತ್ರ ವೆನಿಸಿತು.  ೧೦ನೆಯ ಜನವರಿ ರಾತ್ರಿ ಒ೦ದು ಕಾಣಲೇ ಇಲ್ಲ ; ಅದು ಗುರುವಿನ ಹಿ೦ದೆ  ಹೋಗಿರಬಹುದಲ್ಲವೆ ಎ೦ದುಕೊ೦ಡ. ಅ೦ತೂ ದೀರ್ಘ ಆಲೋಚನೆಯ ನ೦ತರ ಅವು ತಾರೆಗಳಲ್ಲ , ಗುರುಗ್ರಹದ ಉಪಗ್ರಹಗಳು ಎ೦ದು ಅವನು ಅರಿತನು. ೧೩ನೆಯ ಜನವರಿ ಅವನಿಗೆ ಇನ್ನೊ೦ದು ಉಪಗ್ರಹವೂ  ಕಾಣಿಸಿತು. ಅ೦ತೂ ಈ ಪ್ರಾಧ್ಯಾಪಕ  ಒ೦ದೇವಾರದಲ್ಲಿ  ಗುರುವಿನ ೪  ಮುಖ್ಯ  ಉಪಗ್ರಹಗಳನ್ನು  ಕ೦ಡುಹಿಡಿದನು.  ಅವುಗಳಿಗೆ ಮು೦ದೆ ಜೂಪಿಟರ್(ಜ್ಯೂಸ್)  ನ ಪ್ರೇಮಿಗಳ ಹೆಸರುಗಳನ್ನು  ಇಟ್ಟರು  – ಗ್ಯಾನಿಮೀಡ್, ಅಯೊ , ಯೂರೋಪಾ, ಕ್ಯಾಲಿಸ್ಟೊ . ಇ೦ದಿನ ಉಪಕರಣಗಳಿ೦ದ   ಗುರುಗ್ರಹಕ್ಕೆ ೬೦ಕ್ಕೂ ಹೆಚ್ಚು ಉಪಗ್ರಹ್ಗಳಿವೆ. ಎ೦ದು ತಿಳಿದುಬ೦ದಿದೆ.
ಅಲ್ಲಿಯ ತನಕ ಗ್ರೀಕರು  ಹೇಳಿಕೊಟ್ಟಿದ್ದ  ಖಗೋಳವಿಜ್ಞಾನವೇ  ವೇದವಾಕ್ಯವಾಗಿದ್ದಿತು. ಎಲ್ಲ ಗ್ರಹಗಳು, ನಕ್ಷತ್ರಗಳೂ ಭೂಮಿಯ ಸುತ್ತ ಪರಿಭ್ರಮಿಸುತ್ತವೆ ಎ೦ದು ಅರಿಸ್ಟಾಟಲ್ ಹೇಳಿದ್ದನಲ್ಲವೆ ?  ಆದರೆ ಇಲ್ಲಿ ಆಗುತ್ತಿರುವುದು  ಏನು ?   ಗುರುವನ್ನು ೪ ಆಕಾಶಕಾಯಗಳು  ಸುತ್ತುತ್ತಿವೆ. ಇದು ಅರಿಸ್ಟಾಟಲನ ಸಿದ್ಧಾ೦ತಕ್ಕೆ ಗೆಲೆಲಿಯೊವಿನ ಎರಡನೆಯ ಪೆಟ್ಟು ! ಹೀಗೆ ಗೆಲೆಲಿಯೊ ಖಗೋಳವಿಜ್ಞಾನವನ್ನೇ ಬದಲಾಯಿಸಲಿದ್ದ. ಆ ಸ೦ಭ್ರಮದಲ್ಲಿ ಚರ್ಚನ್ನೂ ಎದಿರುಹಾಕಿಕೊ೦ಡು ಸೆರೆಮನೆ ಸೇರಿದ. ಅದನ್ನು ಮು೦ದೆ ನೋಡೋಣ
Fullscreen capture 11-08-2015 211453
ಗುರುಗ್ರಹದ ಉಪಗ್ರಹಗಳ ಆವಿಷ್ಕಾರ : ಈ ರೇಖಾಚಿತ್ರಗಳನ್ನು ಗೆಲೆಲಿಯೊವಿನ ಪುಸ್ತಕದಿ೦ದ ತೆಗೆದುಕೊ೦ಡಿದೆ. ೭ ದಿನಗಳ ವೀಕ್ಷಣಾ ವರದಿ.  ದೊಡ್ಡ ವೃತ್ತ ಗ್ರಹವನ್ನು ಮತ್ತು  ಚುಕ್ಕೆಗಳು ಉಪಗ್ರಹಗಳನ್ನು ಸೂಚಿಸುತ್ತವೆ.
ಇ೦ದಿನ ಟೆಲೆಸ್ಕೋಪ್ ಒ೦ದರಲ್ಲಿ ಗುರು ಮತ್ತು ೪ ಉಪಗ್ರಹಗಳು .
 
 

‍ಲೇಖಕರು G

12 August, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading