ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಜ್ಞಸೇನಿ ಕಾದಂಬರಿಯ ಆಯ್ದ ಭಾಗ…

ಅಜಯ್ ವರ್ಮಾ ಅಲ್ಲೂರಿ

ತೆಲುಗು ಮಾತೃಭಾಷೆಯವರಾದ ಅಜಯ್ ವರ್ಮಾ ಅಲ್ಲೂರಿ ದ್ವಿಭಾಷಾ ಲೇಖಕ‌ ಮತ್ತು ಅನುವಾದಕ. ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಜನಸಿಸಿದ್ದಾರೆ. ‘ಗಗನ ಸಿಂಧು’ (ಕಾವ್ಯ), ‘ಡಯಾನಾ ಮರ’, ‘ಕಲಲ ಕನ್ನೀಟಿ ಪಾಟ’, ‘ವಿಮುಕ್ತೆ’, ‘ನಾಲ್ಕನೇ ಎಕರೆ’, ‘ನಳನ ದಮಯಂತಿ’, ‘ಆರ್.ಎಸ್‌.ಎಸ್: ಲೋತುಪಾತುಲು’ (ಅನುವಾದ) ಇವರ ಇದುವರೆಗಿನ ಪ್ರಕಟಿತ ಕೃತಿಗಳು.

ಕ್ರೈಸ್ಟ್ ಯೂನಿವರ್ಸಿಟಿಯ ದ. ರಾ. ಬೇಂದ್ರೆ ಕಾವ್ಯ ಬಹುಮಾನ, ಅ. ನ. ಕೃ ಕಥಾ ಬಹುಮಾನ, ಪ್ರಹ್ಲಾದ ಅಗಸನಕಟ್ಟೆ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಹೈದ್ರಾಬಾದಿನ ಇಂಗ್ಲಿಷ್ ಆಂಡ್ ಫಾರಿನ್ ಲ್ಯಾಂಗ್ವೇಜಸ್ ಯೂನಿವರ್ಸಿಟಿಯಲ್ಲಿ ಅನುವಾದ ಅಧ್ಯಯನದಲ್ಲಿ ಪಿಎಚ್.ಡಿ ಕೈಗೊಂಡಿದ್ದಾರೆ. ಜೊತೆಗೆ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ಸಿನಲ್ಲಿ ಕನ್ನಡ ಸಂಪಾದಕರಾಗಿ, ಅಶೋಕ ವಿಶ್ವವಿದ್ಯಾಲಯದಲ್ಲಿ ರೀಸರ್ಚ್ ಫೆಲೋ ಆಗಿ ಕೆಲಸ ಮಾಡುತ್ತಿದ್ದಾರೆ.

ಈ ಅನುವಾದ ಸಂಚಿಕೆಗಾಗಿ ಪ್ರತಿಭಾ ರಾಯ್ ಅವರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಒಡಿಯಾ ಕಾದಂಬರಿ ‘ಯಾಜ್ಞಸೇನಿ’ಯ ಒಂದು ಅಧ್ಯಾಯವನ್ನು ಅನುವಾದಿಸಿದ್ದಾರೆ.

ಒಡಿಯಾ ಭಾಷೆಯ ಪ್ರತಿಭಾ ರಾಯ್ ಭಾರತದ ಅಗ್ರಗಣ್ಯ ಲೇಖಕಿಯರಲ್ಲೊಬ್ಬರು. ಒಡಿಶಾದ ಕಟಕ್ ಜಿಲ್ಲೆಯ ಜಗತಸಿಂಗ್ಪುರದಲ್ಲಿ 1944ರಲ್ಲಿ ಜನಸಿದ್ದಾರೆ. ‘ಬರ್ಸ ಬಸಂತ ಬೈಸಾಖ’, ‘ಉಲ್ಲಂಘನ’, ‘ಯಾಜ್ಞಸೇನಿ’, ‘ಮೋಕ್ಯ’, ‘ಮಹಾಮೋಹ’, ‘ಪದ್ಮ ಪತ್ರರೇ ಜೀಬನ’ ಇವರ ಪ್ರಮುಖ ಕೃತಿಗಳು. ‘ಉಲ್ಲಂಘನ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ, ‘ಯಾಜ್ಞಸೇನಿ’ ಕೃತಿಗಾಗಿ ಜ್ಞಾನಪೀಠ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇವಲ್ಲದೆ ಭಾರತ ಸರ್ಕಾರದ ಪದ್ಮಶ್ರೀ ಹಾಗೂ ಪದ್ಮಭೂಷಣ ಪುರಸ್ಕಾರಗಳನ್ನು ಪಡೆದಿದ್ದಾರೆ. ತಮ್ಮ ಬಹುತೇಕ ಕೃತಿಗಳು ಮಹಿಳಾಪರವಾಗಿಯೇ ಇದ್ದರೂ ತಮ್ಮನ್ನು ತಾವು ಸ್ತ್ರೀವಾದಿ ಎಂದು ಕರೆದುಕೊಳ್ಳದೆ, ಮಾನವತಾವಾದಿ ಎಂದು ಕರೆದುಕೊಳ್ಳುವ ಪ್ರತಿಭಾ ಸದ್ಯ ಭುವನೇಶ್ವರದಲ್ಲಿ ನೆಲಸಿದ್ದಾರೆ. 

ಕೃಷ್ಣನೆಂದರೆ ಯಾರೇ?

ನಿತಂಬಿನಿ ನನ್ನ ಜೀವದ ಗೆಳತಿ. ಅದೊಂದು ದಿನ ಇಳಿಸಂಜೆಯ ಹೊತ್ತು ತಂಗಾಳಿಯ ಸವಿಯುತ್ತಾ ಉದ್ಯಾನದೊಳಗೆ ನಾವಿಬ್ಬರೇ ಕುಳಿತಿದ್ದೆವು. “ಕೃಷ್ಣನೆಂದರೆ ಯಾರೇ?” ಕೇಳಿದೆ ನಾನವಳನ್ನು.

ನನ್ನತ್ತ ಓರೆನೋಟ ಬೀರಿ, ತುಂಟತನದಲ್ಲಿ ಹುಬ್ಬು ಹಾರಿಸುತ್ತಾ ಕೇಳಿದಳು “ಓ! ಕೃಷ್ಣೆಗೇಕೆ ಕೃಷ್ಣನ ಬಗ್ಗೆ ?”

ನಾನು ನಿರ್ಮಲವಾಗಿ ನಕ್ಕೆ. “ತಂದೆ ಹೇಳುವಾಗ ಕೇಳಿದ್ದೆ. ಕೃಷ್ಣೆಗಷ್ಟೇ ಅಲ್ಲ, ಕೃಷ್ಣನು ಎಲ್ಲರಿಗೂ ಬೇಕಾದವನೆಂದು.”

“ಆದರೆ ಕೃಷ್ಣೆಗೆ ಪ್ರತ್ಯೇಕವಾಗಿ ಬೇರೇನೋ ಬೇಕೆನಿಸುತ್ತದೆ. ಅಲ್ಲವೇನು!” ನಿತಂಬಿನಿ ಚೆಲುನಗು ಬೀರುತ್ತಾ ಕೇಳಿದಳು.

“ಹಾಗಲ್ಲ ಕಣೇ! ಕೃಷ್ಣನು ಲೋಕಕಲ್ಯಾಣಕ್ಕಾಗಿ ಭೂಮಿಯ ಮೇಲೆ ಬಂದಿರುವನೆಂದು ಕೇಳಿದ್ದೆ” ಎಂದೆ ಮೆಲುದನಿಯಲ್ಲಿ.

ನಿತಂಬಿನಿ ನನ್ನ ಗಲ್ಲವನ್ನು ಹಿಡಿದು ಗಂಭೀರವಾಗಿ ಹೇಳಿದಳು- “ಕೃಷ್ಣೇ! ಕೃಷ್ಣನನ್ನು ಮರೆತುಬಿಡು” 

“ಏಕೆ?” ಕೇಳಿದೆ ಆರ್ದ್ರದನಿಯಲ್ಲಿ.

“ಹೌದು ಕೃಷ್ಣೆ! ನನ್ನ ಮಾತು ಕೇಳು. ಕೃಷ್ಣನ ಬಳಿ ಪ್ರಜ್ಞಾಶೌರ್ಯಗಳಿವೆ. ನಿಜಕ್ಕೂ ಆತ ದೂರದರ್ಶಿ, ರಾಜನೀತಿಗಳ ಬಲ್ಲ ಚತುರ, ಶಕ್ತಿಶಾಲಿ, ಕರ್ಮವೀರ. ಅರಳಿದ ನೀಲಿಕಮಲದಂಥ ಸುಂದರಾಂಗ, ನಿರ್ಮಲಸ್ವಭಾವಿ. ಬೇಡಿದ್ದನ್ನು ಕೊಡುತ್ತಾನೆ, ಗೆಳೆತನವನ್ನು ಗೌರವಿಸುತ್ತಾನೆ. ಒಂದು ಕೈಯಿಂದ ಪಡೆದುಕೊಂಡರೆ, ಎರಡು ಕೈಗಳಿಂದ ದಾನಮಾಡುತ್ತಾನೆ. ವಿಶಾಲಹೃದಯಿ, ಅದ್ವಿತೀಯ ವೀರ, ಪರಮಪುರುಷ. ಆದರೆ- ”

“ಆದರೆ?” ನಾನು ಥಟ್ಟನೆ ಕೇಳಿದೆ. 

“ಆದರೆ- ಹದಿನಾರುಸಾವಿರ ಗೋಪಿಕೆಯರು ಆತನ ಪ್ರೇಯಸಿಯರು. ಹೆಣ್ಣಿನ ಹೃದಯವನ್ನು ದೋಚುವಲ್ಲಿ ಆತ ಅದೆಷ್ಟು ಪಾರಂಗತನೆಂದರೆ ಗಂಡನನ್ನೂ, ಮಕ್ಕಳನ್ನೂ ಸಂಸಾರವನ್ನೂ ತೊರೆದು ಆ ಗೋಪಿಕೆಯರೆಲ್ಲಾ ಆತನ ಮೋಹನಮುರಳಿಗೆ ಮನಸೋತು ಯಮುನಾ ತೀರದಲ್ಲಿ ಅಭಿಸಾರಿಕೆಯರಾಗಿದ್ದಾರೆ. ಆದರೆ ಇದು ಕೃಷ್ಣನ ಕಿಶೋರಪ್ರಾಯದಾಗಿನ ಮಾತು. ಈಗ ಆತ ಪ್ರಜಾಪಾಲಕ, ಧರ್ಮಪಾಲಕ, ದ್ವಾರಕಾಧಿಪತಿ.”

ಇಷ್ಟೆಲ್ಲಾ ಶ್ರೇಷ್ಠ ಗುಣಗಳಿವೆ ಅಂದಮೇಲೆ ಹೆಂಗಸರು ಗಂಡನನ್ನೂ, ಮಕ್ಕಳನ್ನೂ, ಸಂಸಾರವನ್ನೂ ತೊರೆದು ಆತನನ್ನೇ ಹಿಂಬಾಲಿಸುವುದು ಸಹಜವೇ ಅನಿಸಿತು. ಕೇವಲ ಹದಿನಾರುಸಾವಿರವಲ್ಲ ನೂರುಸಾವಿರದಷ್ಟು ಗೋಪಿಕೆಯರು ಕೃಷ್ಣನ ಪ್ರೀತಿಗೆ ಸಿಲುಕಿ ತನ್ಮಯಗೊಂಡರೆ ಆತನದೇನು ತಪ್ಪು? ಆ ಪುರುಷಶ್ರೇಷ್ಠ ಕೃಷ್ಣನನ್ನು ನೋಡಬೇಕೆನಿಸುತ್ತಿದೆ. ಹೇಗಿರುವುದೋ ಅವನ ರೂಪ? ನಿತಂಬಿನಿಯನ್ನು ಕೇಳಿದರೆ ಆಕೆ ಖಂಡಿತಾ ಅಪಹಾಸ್ಯ ಮಾಡುತ್ತಾಳೆ. ಈ ವಿಷಯವನ್ನೇ ದೊಡ್ಡದು ಮಾಡಿ ಬೇರೆಲ್ಲಾ ಗೆಳತಿಯರಿಗೆ ಡಂಗೂರ ಸಾರುತ್ತಾಳೆ. ಅವರೆಲ್ಲಾ ಪರಿಹಾಸ್ಯವಾಡಿ ನನ್ನ ಜೀವತಗೆಯುತ್ತಾರೆ. ಅದೆಲ್ಲಾ ಬೇಡವೆಂದು ನೇರವಾಗಿ ಕೇಳದೆ- “ಕೃಷ್ಣನ ವಂಶ ವೃತ್ತಾಂತವೆಲ್ಲಾ ನಿನಗೆ ಗೊತ್ತೇನೇ ನಿತಂಬಿನೀ!” ಎಂದೆ.

ನಿತಂಬಿನಿ ನಕ್ಕಳು, “ವಂಶವನ್ನು ತಂದೆ-ತಾಯಿ ನೋಡುತ್ತಾರೆ. ಕನ್ಯೆಯರು ರೂಪವನ್ನಷ್ಟೇ ನೋಡುತ್ತಾರೆ. ಕೃಷ್ಣನ ರೂಪವನ್ನು ನಾನು ವರ್ಣಿಸಲು ಹೊರಟರೆ ನೀನು ಮೂರ್ಛೆಬೀಳುತ್ತಿ. ಪ್ರಜ್ಞೆ ಬಂದ ಮೇಲೆ ಕೃಷ್ಣನಿಲ್ಲದ ಜೀವನ ವ್ಯರ್ಥವೆನ್ನುತ್ತಿ. ‘ಈಗಲೇ ಕೃಷ್ಣನನ್ನು ಕರೆದುಕೊಂಡು ಬಾ, ಇಲ್ಲದಿದ್ದರೆ ನಾನು ಈ ದೇಹವನ್ನು ತ್ಯಜಿಸುತ್ತೇನೆ’ ಎಂದರೆ ನಾನೇನು ಮಾಡಲಿ!”

ನಾನು ಕನಸಿನ ಸಾಗರಕೆ ಜಾರಿ ಕೃಷ್ಣನ ರೂಪ ಕಲ್ಪನೆಯಲ್ಲಿ ಮುಳುಗಿ ಹೋದೆ. ನನ್ನ ಈ ಪ್ರಾಯದಲ್ಲಿ ಕಲ್ಪನೆಯೊಂದೇ ನನ್ನ ಸಂಗಾತಿ. ನನ್ನ ಪ್ರಾಯದವರು ಕಲ್ಪನೆಯಿಲ್ಲದೆ ಇರಬಲ್ಲರೇ? ಕಲ್ಪನೆಯೊಳಗಿನ ಸುಖವನ್ನು ಸವಿಯದೇ ಇರಬಲ್ಲರೇ? ಆದರೆ ಎಲ್ಲರ ಕಲ್ಪನೆಗಳು ಎಲ್ಲ ವೇಳೆಯೂ ನಿಜವಾಗಲಾರವು. ಹಾಗೆಂದು ತಿಳಿದರೂ ಕಲ್ಪನೆಯಿಲ್ಲದೆ ನಾವೆಲ್ಲಾ ಬದುಕಲಾರೆವು.

ನಾನು ಕೃಷ್ಣನ ಕುರಿತ ಕಲ್ಪನೆಯಲ್ಲಿ ಮೈಮರೆತು ಹೋದೆ- 

ನೀಲಿಹೂವಿನ ಲತೆಗಳ ನಡುವೆ ನಾವಿಬ್ಬರೇ ಕುಳಿತಿದ್ದೆವು. ಮುಳುಗುತ್ತಿರುವ ಸೂರ್ಯನ ಬಂಗಾರದ ಬಣ್ಣವನ್ನೆಲ್ಲಾ ತನ್ನ ಮೈಗೆ ಬಳಿದುಕೊಂಡು ನನ್ನ ಮದರಂಗಿಯಲ್ಲಿ ಪ್ರತಿಫಲಿಸುತ್ತಿತ್ತು ನೀಲಿ ಬಾನು. ಸ್ವಚ್ಛವಾಗಿ, ನಿಶ್ಚಲವಾಗಿ ಕೊಳದಲ್ಲಿ ನೀಲಿ ಕಮಲಗಳು ಸದ್ದಿಲ್ಲದೇ ಅರಳುತ್ತಿದ್ದವು. ಅಭಿಸಾರಿಕೆಯ ನಿಶಬ್ದ ಹೆಜ್ಜೆಗಳಂತೆ ಚಂದ್ರಿಕೆಯನ್ನು ಹುಡುಕುತ್ತಾ ಕಮಲ ದಳಗಳು ಒಂದೊಂದಾಗಿ ಬಿರಿಯುತ್ತಿದ್ದವು. ಸಂಜೆಯಾಗಸದಲ್ಲಿ ಕೆಲ ನೀಲಿ ಮೋಡಗಳು ಚಂದ್ರಿಕೆಗೆ ಅಡ್ಡ ಬಂದು ನೀಲಿ ಕಮಲಗಳೊಂದಿಗೆ ಕಣ್ಣಮುಚ್ಚಾಲೆಯಾಡುತ್ತಿದ್ದವು. ಇತ್ತ ಆಗಸದಲ್ಲಿ ನೀಲಿ ಮೋಡಗಳನ್ನು ನೋಡಿದ್ದೇ ತಡ ನನ್ನೆರಡು ಸಾಕು ನವಿಲುಗಳು ಗರಿ ಬಿಚ್ಚಿ ಕುಣಿಯಲು ಸಜ್ಜಾದವು. 

ನಿತಂಬಿನಿ ಕೃಷ್ಣನನ್ನು ವರ್ಣಿಸಲು ಶುರುಮಾಡಿದಳು. ಮಯೂರ ಲಯದಿಂದ ಏಕೋ ನನ್ನ ಮನವೂ ಸಹ ಲಾಸ್ಯವಾಡತೊಡಗಿತು.

ಕೃಷ್ಣನು ಹೇಗಿರಬಹುದೆಂದು ಯೋಚಿಸಿದೆ. ಆತನ ಶರೀರದ ಛಾಯೆ ನೀಲ ತಮಾಲ ವೃಕ್ಷದಂತಿರುವುದೇ? ಇಲ್ಲವೇ ನೀಲಿ ಮೋಡದಂತಿರುವುದೇ? ನೀಲಿ ಕಮಲದಂತೆ ನಿರ್ಮಲವಾದ ಕಣ್ಣು, ನೋಟ, ನೀಲಿ ಬೆಳಕು ಚೆಲ್ಲುವ ನವಿಲುಗರಿಯಂಥಾ ಕೂದಲು, ಎಲ್ಲವೂ ನೀಲ ನೀಲ. ಮತ್ತವನ ಅಧರಗಳು? ಹೂಗಳಂತೆ ಚೆಲುವಾಗಿ ಬಳುಕುತ್ತವೆಯೇ? ತಾವರೆಯ ಮೊಗ್ಗಿನಂಥಾ ಕೈಕಾಲುಗಳು, ನೀಲಿ ಆಗಸದಂಥಾ ವಿಶಾಲವಾದ ಎದೆ, ವಸಂತ ಮಾರುತದಂಥಾ ಮಂದ್ರ ಮಧುರವಾದ ಕಂಠಸ್ವರ, ಮದರಂಗಿ ಹೂನಿನಂಥಾ ಪರಿಮಳವನ್ನು ಸೂಸುವ ಶರೀರ, ಕೆಂಡ ಸಂಪಿಗೆಯಂತೆ ಶ್ಯಾಮಲ, ಕೋಮಲ ಶಕ್ತವಾದ ದೀರ್ಘಕಾಯ.

ನಿತಿಂಬಿನಿ ಕೃಷ್ಣನ ರೂಹನ್ನು ಬಣ್ಣಿಸುತ್ತಿರಲು ಸಮ್ಮೋಹಿತಳಾಗಿ ಕೇಳುತ್ತಿದ್ದೆ.

ನಿತಂಬಿನಿ ನನ್ನತ್ತ ತೀಕ್ಷ್ಣ ನೋಟ ಬೀರಿ ನಗುವನ್ನು ಒಳನುಂಗಿ ಅತ್ತ ತಿರುಗಿ ಮತ್ತೆ ಹೇಳತೊಡಗಿದಳು- “ಇನ್ನೂ ಮಧುರಪಾನದಂಥಾ ಕೃಷ್ಣನ ಬಾಹುಬಂಧನ… ಕೃಷ್ಣನ ಪ್ರೇಮದೊಳಗಿನ ನಶೆ…!”

ನಶೆಯೇರಿದಂತೆಯೇ ಆಗಿ ನಾನು ನಿತಂಬಿನಿಯ ಮಡಿಲಿಗೆ ಜಾರಿದೆ. ನನ್ನಿಡೀ ದೇಹ ತಿಳಿಯದ ಪುಳಕದಿಂದ ತಣಿಯುತಿತ್ತು. ಇಂಥಾ ಅನುಭವ ಇದೇ ಮೊದಲು. ಏನಿದರ ಅರ್ಥ? ಏಕೆ ಹೀಗಾಗುತ್ತಿದೆ?

 ನಿತಂಬಿನಿ ಕಿವಿಯಲ್ಲಿ ಪಿಸುನುಡಿದಳು- “ಕೃಷ್ಣ ಪ್ರೇಮ…ಇದೇ ಅದರ ಲಕ್ಷಣ. ಹೇ ಪ್ರಭು!  ಏನು ಮಾಡುವುದು ನಾನೀಗ!”

 ಹೂಪೊದೆಗಳ ಬಳಿ ನನ್ನ ಮಲಗಿಸಿ, ಮುಖದ ಮೇಲೆ ಚಿಮುಕಿಸಲು ನೀರು ತರಲೆಂದು ಕೊಳದ ಬಳಿಗೆ ಹೋದಳು ನಿತಂಬಿನಿ. ನನಗೆ ಪ್ರಜ್ಞೆ ತಪ್ಪಲಿಲ್ಲ. ಎಲ್ಲವೂ ತಿಳಿಯುತ್ತಲೆಯಿದೆ. ಆದರೆ ಯಾವುದೋ ಕನಸಿನ ಲೋಕದಲ್ಲಿ ವಿಹರಿಸಿದಂತೆನಿಸುತ್ತಿದೆ. ಸುತ್ತಲೆಲ್ಲಾ ನೀಲಿ ನೀಲಿ, ಕೃಷ್ಣತೆ, ಈ ಪ್ರಪಂಚವೆಲ್ಲಾ ಕೃಷ್ಣಮಯ, ಪ್ರೇಮಮಯ, ಮಧುರಮಯ! ನಾನಿಲ್ಲಿ ವಿಶ್ವಮಯವಾದ ಕೃಷ್ಣನನ್ನು ಕಾಣುತ್ತಿದ್ದೇನೆ. ಕೃಷ್ಣಮಯವಾದ ವಿಶ್ವವನ್ನು!

ನಿತಂಬಿನಿ ನನ್ನ ಮುಖದ ಮೇಲೆ ನೀರು ಚಿಮುಕಿಸುವ ಮುನ್ನವೇ ನೀಲಿ ಮೋಡಗಳಿಂದ ನೀರ ಹನಿ ನನ್ನ ಮೇಲೆ ಉದುರಿದವು. ಕಂಪಿಸುವ ನನ್ನ ದೇಹದ ಮೇಲೆ ಕೃಷ್ಣ ತಮಾಲ ಹೂಗಳು ಮೆಲ್ಲಮೆಲ್ಲನೆ ಒಂದೊಂದೇ ಉದುರುತ್ತಿದ್ದವು. ನನ್ನನ್ನು ಮತ್ತಷ್ಟು ರೋಮಾಂಚನಗೊಳಿಸುತ್ತಾ ನನ್ನ ಸಾಕು ನವಿಲು ನನ್ನ ಸುತ್ತಾ ತಿರುಗುತ್ತಾ ತನ್ನ ಗರಿಗಳಿಂದ ನನಗೆ ಗಾಳಿ ಬೀಸುತಿತ್ತು. ನಾನು ನಿತ್ಯದ ಲೋಕಕ್ಕೆ ಬರಲು ಮರಳಿ ನಾಚಿ ನೀರಾದೆ. ಛೀ! ನಿತಂಬಿನಿ ಏನೆಂದುಕೊಂಡಾಳು!

 ನಿತಂಬಿನಿ ಬೊಗಸೆಯಲಿ ನೀರು ತುಂಬಿಕೊಂಡು ನನ್ನ ಬಳಿಗೆ ಬರುವವರೆಗೂ ನಾನು ಕಣ್ಣು ತೆರೆಯಲೇಯಿಲ್ಲ. ಆದರೆ ಅದಾಗಲೇ ಬಿರಿದ, ಇಬ್ಬನಿ ಚೆಲ್ಲಿದ ಎರಡು ನೀಲಿಗಮಲಗಳನ್ನೂ ತಂದಿರುವುದು ನಾನು ಗಮನಿಸಿದೆ. ಛೇ! ಆ ಹೂಗಳನ್ನೇಕೆ ಕೀಳಬೇಕು ಈ ನಿತಂಬಿನಿ. ಇಡೀ ಇರುಳು ಚಂದ್ರಕಿರಣಗಳ ಮಧುಪಾನ ಸವಿಯುತ್ತಾ ಸಂತಸದಲ್ಲಿ ನಲಿಯುತ್ತಿದ್ದವಲ್ಲವೇ ಆ ನೀಲಿ ಕಮಲಗಳು. ನಿತಂಬಿನಿಯ ಈ ನಿರ್ದಯ ನಡೆಗೆ ನನಗೆ ಸಿಟ್ಟು ಬಂತು. ನಿತಂಬಿನಿ ನನ್ನ ಮುಖದ ಮೇಲೆ ನೀರು ಚಿಮುಕಿಸಿದಳು. ನಾನು ಎದ್ದು ಕುಳಿತೆ, ಆದರೆ ಕಣ್ಣು ತೆರೆಯಲಿಲ್ಲ. ನಾಚಿಕೆ ಒಂದು ಕಡೆಯಾದರೆ, ಹೂಗಳು ಕಿತ್ತು ತಂದಳೆಂದು ನಿತಂಬಿನಿಯ ಮೇಲೆ ಸಿಟ್ಟು ಬೇರೆ.

ನಿತಂಬಿನಿ ನೀಲಿ ಕಮಲ ದಳಗಳಿಂದ ಮೆಲ್ಲನೆ ನನ್ನ ಮುಖವನ್ನು ತಾಕಿದಳು. ತುಟಿ ಬಿಗಿದು, ಮೆತ್ತನೆಯ ದನಿಯಲ್ಲಿ, ನನ್ನ ಕಿವಿಯಲ್ಲಿ ಹೇಳಿದಳು- “ನನಗೆ ಗೊತ್ತು, ಕೃಷ್ಣನ ಸಂಜೀವಿನಿಯ ಹೊರತು ಈ ರೋಗಕ್ಕೆ ಬೇರೆ ಮದ್ದಿಲ್ಲ. ಆದರೆ, ಸಖೀ! ದ್ವಾರಕಾ ನಿವಾಸಿ ಗೋವಿಂದನನ್ನು ಕೂಡಲೇ ನಾನು ಕರೆತರಬಲ್ಲೆನೇ? ಅದಕ್ಕೆ ಕೃಷ್ಣನಾಮವನ್ನು ಸ್ಮರಿಸಿ ಈ ಎರಡೂ ನೀಲಿ ಕಮಲಗಳನ್ನು ನಿನ್ನೆದೆಯ ಮೇಲೆ ಇಡುತ್ತಿದ್ದೇನೆ. ಈಗಲೂ ನಿನಗೆ ವಾಸಿಯಾಗಿಯಾಗದಿದ್ದರೆ ನಿನ್ನ ತಂದೆ ರಾಜವೈದ್ಯನನ್ನು ಕರೆದುಕೊಂಡು ಇಲ್ಲಿಗೆ ಬರುತ್ತಾರೆ. ನೀಲಾಂಜನೆ ಈಗಾಗಲೇ ದೃಪದರಾಜನಿಗೆ ಸುದ್ದಿ ಮುಟ್ಟಿಸಿರಬೇಕು. ನಿನ್ನ ಈ ಅಸ್ವಸ್ಥತೆಗೆ ಕಾರಣವೇನೆಂದು ಮಹಾರಾಜರು ಕೇಳಿದರೆ ನಾನೇನು ಹೇಳಲಿ !”

 ಆ ಮಾತು ಹೇಳುತ್ತಲೇ ನಿತಂಬಿನಿ ನೀಲಿ ಕಮಲಗಳೆರಡನ್ನೂ ನನ್ನ ಮೊಲೆಗಳ ಮೇಲಿರಿಸಿದಳು. ನಾನು ಆ ಹೂಗಳನ್ನು ಎದೆಗೊತ್ತಿಕೊಂಡು, “ಈ ಹೂಗಳನ್ನೇಕೆ ಕಿತ್ತೆ ನೀನು?” ಎಂದು ಎರಡೂ ಹೂಗಳನ್ನು ನಾಜೂಕಾಗಿ ಸರಿಸುತ್ತಾ ಎದ್ದು ಕುಳಿತೆ.

ನಿತಂಬಿನಿಯೂ ತರಾತುರಿಯಲ್ಲಿ ಎದ್ದು ನಿಂತಳು. ಮೆಲ್ಲನೆ ಹೇಳಿದಳು -“ಮಹಾರಾಜರು ಬರುತ್ತಿದ್ದಾರೆ. ಅರೇ! ಅವರ ಹಿಂದೆ ಬರುತ್ತಿರುವವರು ಯಾರು ?”

 ಇದು ನೀಲಾಂಜನೆಯ ಕೆಲಸವೇ ಎಂದು ನನಗೆ ತಿಳಿಯಿತು. ನನ್ನ ಅಸ್ವಸ್ಥತೆಯ ಬಗ್ಗೆ ತಂದೆಗೆ ಸುದ್ದಿ ತಲುಪಿಸಿದವಳು ನೀಲಾಂಜನೆ. ಅದನ್ನು ಕೇಳಿದ್ದೇ ತಡ ನನ್ನ ತಂದೆ ರಾಜವೈದ್ಯರನ್ನು ಕರೆದುಕೊಂಡು ಬರುತ್ತಿದ್ದಾರೆ. ನನಗೆ ಎಂಥಾ ಸಣ್ಣ ತೊಂದರೆಯಾದರೂ ತಂದೆ ಸಹಿಸುವುದೇ ಇಲ್ಲ. ಈಗೇನು ಹೇಳಬೇಕು? ಕೃಷ್ಣನ ವರ್ಣನೆಯನ್ನು ಕೇಳುತ್ತಾ ನಾನು ಮೂರ್ಛೆಹೋದೆನೆಂದು ನಿತಂಬಿನಿ ಹೇಳಿಬಿಟ್ಟರೆ, ತಂದೆಗೆ ನನ್ನ ಮುಖವನ್ನು ಹೇಗೆ ತೋರಿಸುವುದು?

ನಾನು ನಾಚಿಕೆಯಿಂದ ತೆಲೆ ತಗ್ಗಿಸಿ ಕುಳಿತೆ. ನೀಲಾಂಜನೆಯ ಬಗ್ಗೆ ಇನ್ನಿಲ್ಲದ ಸಿಟ್ಟು ಬರುತ್ತಿತ್ತು. ಇಷ್ಟು ಸಣ್ಣ ವಿಷಯವನ್ನು ತಂದೆಗೆ ಹೇಳುವ ಅಗತ್ಯವಾದರೂ ಏನಿತ್ತು? ಮನಸ್ಸಿನಲ್ಲೇ ಕೋಪಿಸಿಕೊಂಡೆ. ಔಷಧಿಯೆಂದರೆ ನನಗೆ ಅಸಹ್ಯ. ಹೀಗಾಗಿ ರಾಜವೈದ್ಯರ ಬಗ್ಗೆಯೂ ಕೋಪವೇ. ರೋಗಶಯ್ಯೆಯಿಂದ ರಾಜವೈದ್ಯರನ್ನು ನೋಡಲೂ ಬೇಸರವೆನಿಸುತ್ತದೆ. ನನಗೆ ಔಷಧಿ ತಿನ್ನಿಸಲು ಏನೆಲ್ಲಾ  ಹರಸಾಹಸ ಪಡುತ್ತಾರವರು!

ನನ್ನ ತಂದೆ ಪ್ರೀತಿಯಿಂದ ಹೇಳಿದರು- “ಸರ್ವರೋಗಗಳನ್ನೂ ವಾಸಿಮಾಡಬಲ್ಲ ಶ್ರೀಕೃಷ್ಣನು ಇರುವಲ್ಲಿ ರಾಜವೈದ್ಯನೇಕೆ? ನೀನು ಚಿಂತಿಸದಿರು ಮಗಳೇ!”

ಮದರಂಗಿಯ ಪರಿಮಳ ಉದ್ಯಾನವನದ ತುಂಬೆಲ್ಲಾ ಹರಿಡಿಕೊಂಡಿತು. ಗಾಳಿಯ ಸೆರಗಲ್ಲಿ ತೇಲಿ ಬಂದ ಕೆಲ ತಮಾಲ ಪುಷ್ಪಗಳು ಅದೇತಕೋ ನನ್ನ ಮೇಲುದುರಿದವು. ಆ ಗಾಳಿಯೊಡನೆಯೇ ನವಿಲುಗರಿಯೊಂದು ಹಾರಿಬಂದು ನನ್ನ ಮಡಿಲು ಸೇರಿತು. ನನ್ನ ಮೈಯೆಲ್ಲಾ  ಪುಳಕಗೊಂಡಿತು. ನನ್ನೆರಡೂ ನವಿಲುಗಳು ಇಲ್ಲಿಂದ ಅದೆಂದೋ ಹೊರಟುಹೋದಾಗ, ಎಲ್ಲಿಂದ ಬಂದು ಬಿತ್ತು ಈ ನವಿಲಗರಿ? 

 ನನ್ನ ತಂದೆ ಪ್ರೀತಿಯಿಂದ ಹೇಳಿದರು- “ಕೃಷ್ಣನ ಆಶೀರ್ವಾದವನ್ನು ಸ್ವೀಕರಿಸು ಮಗಳೇ! ನಿನಗೆ ಸೌಭಾಗ್ಯವು ಪ್ರಾಪ್ತವಾಗಲಿದೆ. ಇದೇ ಅದಕ್ಕೆ ನಿದರ್ಶನ.”

 ನವಿಲುಗರಿಯನ್ನು ತಾಕಿದರೆ ಮರಳಿ ಮೂರ್ಛೆ ಹೋಗುತ್ತೇನೆಂಬ ಭಯದಿಂದ ನಾನದನ್ನು ತಾಕಲೇಯಿಲ್ಲ. ನಿತಂಬಿನಿ ನನ್ನ ಮನವನ್ನು ಓದಿದಳೋ ಏನೋ, ಆ ನವಿಲುಗರಿಯನ್ನು ನಯವಾಗಿ ತಗೆದುಕೊಂಡು- “ನಿನ್ನ ಕವಿತೆಗಳ ಪುಸ್ತಕದಲ್ಲಿಡುತ್ತೇನೆ” ಎಂದಳು. ʼಛೇ! ತಲೆಯೇ ಇಲ್ಲ ಈ ನಿತಂಬಿನಿಗೆ. ನಾನು ಕವಿತೆ ಬರೆಯುತ್ತೇನೆಂದು ಕೃಷ್ಣನೆದುರಿಗೆ ಹೇಳಿಬಿಡಬಹುದೇ ಹೀಗೆ? ಯಾರ ಪಾದಧೂಳಿ ತಾಕಿದರೆ ಈ ಲೋಕವೇ ಕಾವ್ಯಮಯವಾಗುವುದೋ, ಅಂಥವನು ಏನೆಂದುಕೊಳ್ಳಬಹುದು ನನ್ನ ಕವಿತೆಗಳ ಬಗ್ಗೆ? ತಂದೆ ಏನೆಂದುಕೊಂಡಾರು?ʼ 

ತಂದೆ ಪ್ರೀತಿಯಿಂದ ಆಡಿದ ಮಾತು ನನ್ನ ಕಿವಿದುಂಬಿದವು- “ಕೃಷ್ಣನ ಪಾದಗಳಿಗೆ ನಮಿಸು ತಾಯಿ. ಇದೀಗ ತಾನೆ ದ್ವಾರಕೆಯಿಂದ ಬಂದಿದ್ದಾರೆ. ನೀನು ಅಸ್ವಸ್ಥಳಾಗಿರುವುದನ್ನು ಕೇಳಿ ಈ ಉದ್ಯಾನವನಕ್ಕೆ ಬಂದಿದ್ದಾರೆ.”

ನನ್ನ ಕೈಯಲ್ಲಿ ತಾಜಾತನದಿಂದ ಕೂಡಿದ ಎರಡು ಚೆಲುವಾದ ನೀಲಿಗಮಲಗಳು. ನನ್ನ ಕಣ್ಣೆದುರಿಗಿನ ತಂದೆಯ ಪಾದಗಳ ಬಳಿ ಎರಡು ನೀಲಿಗಮಲಗಳಂಥಾ ಪಾದಪದ್ಮಗಳು. ಜಗದೊಳಗಿನ ಯಾವ ಶ್ರೇಷ್ಠ ಕವಿಗಳೂ ಆ ಪಾದಗಳನ್ನು ಬಣ್ಣಿಸಲಾರರು, ಹಾಗಿರುವಾಗ ನಾನೆಷ್ಟರವಳು! ಆ ಪಾದಗಳಿಗೆ ಅದಾವ ಸಮ್ಮೋಹಕ ಶಕ್ತಿಯಿದೆಯೋ ಕಾಣೆ, ನಾನು ಆ ನೀಲಿ ಕಮಲಗಳನ್ನು ಆ ಪಾದಗಳ ಮೇಲಿರಿಸಿ ಅಶ್ರುಗಳಿಂದ ತೊಳೆದೆ.

ಮೊದಲಿಗೆ ನಾನು ಕೃಷ್ಣನ ಪಾದಗಳನ್ನೇ ನೋಡಿದ್ದೆ. ನನ್ನ ತಂದೆಯೊಡನೆ ಕೃಷ್ಣನು ಅರಮನೆಗೆ ಹೊರಟುಹೋದನು. ಆತ ಕಣ್ಮರೆಯಾಗುವವರೆಗೂ ನೋಡುತ್ತಾ ನಿಮಗ್ನಳಾಗಿ ಕುಳಿತೇ ಇದ್ದೆ. ನಿತಂಬಿನಿ ನನ್ನನ್ನು ಹಿಡಿದು ಅಲುಗಾಡಿಸಿ ಕೇಳಿದಳು- “ಸಖಿ! ಅದೇನು ಹಾಗೆ ಮಾಡಿಬಿಟ್ಟೆ! ನಿನ್ನ ವಕ್ಷೋಜಗಳ ಮೇಲಿರಿಸಿದ ನೀಲಿಕಮಲಗಳನ್ನು ಕೃಷ್ಣನ ಪಾದಗಳಿಗೆ ಅರ್ಪಿಸಿದ್ದೀಯ. ಈಗೇನು ಮಾಡುವುದು?”

 ನಾನು ತಡಬಡಿಸುತ್ತಾ ಕೇಳಿದೆ, “ಏ ನು ಮಾ ಡು ವು ದು?”

 ರಾತ್ರಿಯಿಡೀ ಆ ಪಾದಗಳನ್ನೇ ನೆನೆಯುತ್ತಾ ಅನೇಕ ಕವಿತೆ ಬರೆದೆ. ಆದರೆ ಯಾವ ಕವಿತೆಯೂ ಮನಸ್ಸಿಗೆ ನೆಮ್ಮದಿ ನೀಡಲೇ ಇಲ್ಲ. ಆತನ ಪಾದಗಳನ್ನೇ ಬಣ್ಣಿಸುವ ಶಕ್ತಿ ಇಲ್ಲದಿರುವಾಗ, ಇನ್ನು ಆತನ ಮುಖ, ಕಣ್ಣು, ತುಟಿ, ವ್ಯಕ್ತಿತ್ವಗಳನ್ನು ಬಣ್ಣಿಸುತ್ತಾ ಕವಿತೆ ಬರೆಯುವುದಾದರೂ ಹೇಗೆ? ಹಾಗೆ ಬರೆಯಲಾಗದಿರುವಾಗ ಇನ್ನೇಕೆ ಈ ಕವಿತೆಗಳು?

ಎಲ್ಲರೊಳಗೂ ಕವಿತೆಗಳಿರುತ್ತವೆ. ಕೆಲವರು ಬರೆಯುತ್ತಾರೆ. ಕೆಲವರು ಬರೆಯುವುದಿಲ್ಲ. ನಾನು ಬರೆಯುತ್ತೇನೆ. ನನ್ನ ಮನದೊಳಗೆ ಭೋರ್ಗರೆಯುವ ಭಾವನೆಗಳನ್ನೆಲ್ಲಾ ಕವಿತೆಯಲ್ಲಿ ತುಂಬುತ್ತೇನೆ. ನನಗೆ ಸರಿಯಾದ ಶಿಕ್ಷಣವನ್ನು ಕೊಡಿಸಲು ನನ್ನ ತಂದೆ ಎಲ್ಲ ಏರ್ಪಾಡುಗಳನ್ನೂ ಮಾಡಿದ್ದಾರೆ. ನಾನು ವಿದೂಷಿಯೆಂದು, ನನ್ನಲ್ಲಿ ಜ್ಞಾನಪಿಪಾಸೆ ಇದೆಯೆಂದು ನನ್ನ ಗುರುಗಳು ತಂದೆಗೆ ಹೇಳಿದ್ದಾರೆ. ನಾನು ಅನೇಕ ಶಾಸ್ತ್ರಗಳನ್ನು ಅಭ್ಯಾಸ ಮಾಡಿ ಬಹುಬೇಗನೆ ರೂಢಿಸಿಕೊಂಡಿದ್ದೇನೆ. ಗಣಿತಶಾಸ್ತ್ರ, ಗೃಹವಿಜ್ಞಾನ, ಚಿತ್ರಕಲೆ, ಪಾಕಶಾಸ್ತ್ರ, ಪುಷ್ಪಾಲಂಕಾರ, ಅತಿಥಿಸತ್ಕಾರ ಸೇರಿದಂತೆ ಹಲವಾರು ಶಾಸ್ತ್ರಗಳಲ್ಲಿ ನಾನು ಪಾರಂಗತಳಾಗಿದ್ದೇನೆ. ಪ್ರತಿ ಶಾಸ್ತ್ರವನ್ನೂ ಕಲಿಸಲು ತಂದೆ ಬೇರೆ ಬೇರೆ ಗುರುಗಳನ್ನು ನೇಮಿಸಿದ್ದಾರೆ. ಕಾವ್ಯ ರಚನೆಗೆ ಮಾತ್ರ ಯಾವ ಗುರುವನ್ನೂ ನೇಮಿಸಿರಲಿಲ್ಲ. ನನ್ನ ಮನವೇ ನನ್ನನ್ನು ಕವಿತೆ ಬರೆಯಲು ಪ್ರೇರೇಪಿಸಿತು. ನನ್ನ ಕಲ್ಪನಾಶಕ್ತಿಯೇ ನನಗೆ ಕವಿತೆ ಬರೆಯುವುದನ್ನು ಕಲಿಸಿತು. ಹಾಗಾಗಿ ಈ ವಿದ್ಯೆ ನನ್ನ ಸ್ವಂತ ಕಲೆ. ಈ ವಿಷಯ ನನ್ನ ತಂದೆಗೆ ಅದು ಹೇಗೆ ಅರ್ಥವಾದೀತು!

ನಮ್ಮ ಮನೆಯಲ್ಲಿ ಸದಾ ಯಾವುದೋ ಒಂದು ಶಾಸ್ತ್ರದ ಕುರಿತ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಹಲವಾರು ಪಂಡಿತರು, ಕವಿಗಳು, ವಿದ್ವಾಂಸರು ನನ್ನ ತಂದೆಯ ಆಹ್ವಾನದ ಮೇರೆಗೆ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ. ಇವೆಲ್ಲಾ ನನಗಾಗಿಯೇ ನಡೆಯುತ್ತವೆ. ನೃತ್ಯ, ಸಂಗೀತ, ಹಾಡು, ಹರಟೆಗಳಿಗಿಂತಲೂ ಇವೇ ನನಗೆ ಇಷ್ಟವೆಂದು ತಂದೆಗೆ ಚೆನ್ನಾಗಿ ಗೊತ್ತು. ನಾನೂ ಸಹ ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇನೆ. ನನ್ನ ಅನೇಕ ಸಂದೇಹಗಳಿಗೆ ಪಂಡಿತರಿಂದ ಉತ್ತರ ಪಡೆಯುತ್ತೇನೆ. ನನ್ನ ಜ್ಞಾನ ಪಿಪಾಸೆಯನ್ನು  ತೀರಿಸಿಕೊಳ್ಳುತ್ತೇನೆ. ನನ್ನ ಜ್ಞಾನ ಪಿಪಾಸೆಯು ಅನಂತವಾದದು. ಅದಕ್ಕೆ ಅಂತ್ಯವಿಲ್ಲ.

ಒಮ್ಮೆ ವೇದವ್ಯಾಸ ಕೃಷ್ಣದ್ವೈಪಾಯನರು ಯಾವುದೋ ಶಾಸ್ತ್ರದ ವಿಚಾರವಾಗಿ ಮಾತಾಡುತ್ತಿದ್ದಾಗ ಅವರ ಮಾತಿನ ಪ್ರವಾಹಕೆ ಸೋತು ಪ್ರಶ್ನಿಸಿದೆ- “ಮಹಾಶಯಾ, ಸೃಷ್ಟಿಯೊಳಗಿನ ಎಲ್ಲಾ ಶಾಸ್ತ್ರಗಳನ್ನೂ, ಗ್ರಂಥಗಳನ್ನೂ, ಜ್ಞಾನವನ್ನೂ ಪಡೆಯಲು ಒಂದು ಜೀವನ ಸಾಲದೆಂದರೆ ನಾನೇನು ಮಾಡುವುದು ?”

ವೇದವ್ಯಾಸರು ನಗುತ್ತಾ ಹೇಳಿದರು- “ನಿನ್ನ ಹೆಸರು ಕೃಷ್ಣೆ ಎಂದಲ್ಲದೆ ತೃಷ್ಣೆ ಎಂದಿರಬೇಕಿತ್ತು. ತೃಷ್ಣೆಯು ಕೊನಗೂ ದುಃಖವನ್ನೇ ಕೊಡುತ್ತದೆ. ಜ್ಞಾನದ ತೃಷ್ಣೆಯೊಂದೇ ಆನಂದವನ್ನು ಕೊಡುತ್ತದೆ. ಜ್ಞಾನ ತೃಷ್ಣೆಯನ್ನು ತೀರಿಸಿಕೊಳ್ಳಲು ಒಂದು ಜನ್ಮವೇನು, ನೂರು ಜನ್ಮಗಳನು ಪಡೆದರೂ ಸಾಲದು. ಜಲಪಾನದಿಂದ ತೃಷ್ಣೆ ತೀರುತ್ತದೆ. ಆದರೆ ಜ್ಞಾನಪಾನದಿಂದ ತೃಷ್ಣೆ ಮತ್ತಷ್ಟು ಬೆಳೆಯುತ್ತದೆ, ಬಲಗೊಳ್ಳುತ್ತದೆ. ತೃಷ್ಣೆ ತೀರಿದರೆ ಜ್ಞಾನದ ಹಾದಿ ಕಣ್ಮರೆಯಾಗುತ್ತದೆ. ಕಾಲದ ಅನಂತ ತೀರಗಳ ಬಳಿ ಬಣ್ಣಬಣ್ಣದ ಕಡಲುಚಿಪ್ಪುಗಳನ್ನು ಆರಿಸುತ್ತಾ ಜೀವನವೆಲ್ಲಾ ಕಳೆದರೆ ಆ ಜೀವನ ಸಾರ್ಥಕವಾಗುತ್ತದೆ.”

ನಾನು ಸಂತಸದಿಂದ ಮತ್ತೊಮ್ಮೆ ಕೇಳಿದೆ, “ಗುರುಗಳು ನೀಡಿದ ಗ್ರಂಥಗಳನ್ನೆಲ್ಲಾ ಓದಿಯಾಯಿತು. ಈಗೇನು ಓದಲಿ? ವೇದವ್ಯಾಸರು ನಗುತ್ತಾ ಮತ್ತೊಮ್ಮೆ ಮಾತಿಗಿಳಿದರು – “ಜ್ಞಾನಾರ್ಜೆನೆಗೆ ಗ್ರಂಥಗಳೇನು ಕಡಿಮೆ? ಈ ವಿಶಾಲ ವಿಶ್ವವೇ ಒಂದು ಸರ್ವಶ್ರೇಷ್ಠ ಗ್ರಂಥಾಲಯ. ಆ ಸೃಷ್ಟಿಕರ್ತನು ಸೃಜಿಸಿದ ಕೀಟಾನುಗಳಿಂದ ಮೊದಲುಗೊಂಡು ಗ್ರಹನಕ್ಷತ್ರಗಳೆಲ್ಲವೂ ಈ ಗ್ರಂಥಾಲಯದೊಳಗಿನ ಒಂದೊಂದು ಗ್ರಂಥದ ಪುಟಗಳು. ಜೀವನದಲ್ಲಿಯ ಪ್ರತಿಯೊಂದು ಅನುಭವವೂ ಅಧ್ಯಯನದ ವಸ್ತುವೇ ಆಗಿದೆ.  ಲೋಕದೊಳಗಿನ ಪಂಡಿತರು, ಕವಿಗಳು, ಋಷಿಮುನಿಗಳು ಮೊದಲಾದವರು ತಮ್ಮ ಜೀವನಡೀ ಅಧ್ಯಯನ ಮಾಡಿದರೂ ಅವುಗಳ ರಹಸ್ಯವನ್ನು ಕಂಡುಕೊಳ್ಳದೆ ಸೋತರು. ಕೃಷ್ಣೇ! ನೀನಿನ್ನು ಗ್ರಂಥಗಳನ್ನು ಓದಬೇಕಾಗಿಲ್ಲ. ಜೀವನವನ್ನು ಓದು. ಈ ಲೋಕದೊಳಗೆ ಎಲ್ಲಾ ಜೀವಿಗಳಲ್ಲೂ ಒಂದು ಮಹತ್ತರವಾದ ಜನ್ಮದುದ್ದೇಶವಿದೆ. ಆದರೆ ಎಲ್ಲರಂತೆ ಸಾಧಾರಣವಾಗಿ ಜೀವನ ಸವೆಸುವುದು ನಿನ್ನ ಜನ್ಮದುದ್ದೇಶವಲ್ಲ. ಮುಂದೆ ಘಟಿಸಲಿರುವ ಅನೇಕ ವಿಚಿತ್ರ ಘಟನೆಗಳು ನಿನಗಾಗಿ ಕಾದು ಕುಳಿತಿವೆ. ಅವುಗಳನ್ನೇ ನೀನು ಅಧ್ಯಯನ ಮಾಡಿ ಎಲ್ಲದರ ಎದುರು ಈಜಬೇಕು”

ಮಹಾಮುನಿ ವೇದವ್ಯಾಸರು ಭವಿಷ್ಯವನ್ನು ಗ್ರಹಿಸಬಲ್ಲರು. ನನ್ನ ಭವಿಷ್ಯದ ಕುರಿತಾದ ಅವರ ಮಾತುಗಳೆಲ್ಲಾ ನಿಜವೇ ಎನ್ನುವುದರಲ್ಲಿ ಅನುಮಾನವಿಲ್ಲ‌. ನಾನು ಜೀವನದ ಬಗೆಗಿನ ಕಲ್ಪನೆಯಲ್ಲಿ ತೇಲಿಹೋದೆ. ಆ ಕಲ್ಪನೆಯನ್ನೆಲ್ಲಾ ಕವಿತೆಯಾಗಿಸಿ ತೃಪ್ತಿಗೊಂಡೆ. 

ಆದರೆ ಈಗಿನ ಈ ಅನುಭವಕ್ಕೆ ಕಾವ್ಯರೂಪ ಕೊಡುವುದು ನನ್ನಿಂದ ಸಾಧ್ಯವಾಗುತ್ತಿಲ್ಲ. ಎದೆಯಲ್ಲಿ ಅಳಿಸಲಾಗದ ಅಕ್ಷರಗಳು ಅಚ್ಚೊತ್ತಿದ ಅನುಭವವೊಂದನ್ನು ಅನ್ಯರಿಗಾಗಿ ಹೇಗೆ ತಾನೆ ಬರೆಯಲಿ! ನಾನು ಹಾಗೆ ಬರೆಯಲಾರೆ. ಅದಕ್ಕೆ ಕಾರಣ ಕವಿತೆಯ ಒಂದೊಂದು ಸಾಲಲ್ಲಿ ಅವಿತಿರುವ ಹೃದಯದ ಪಿಸುಮಾತು. ಅದು ನನ್ನದು. ಕೇವಲ ನನಗೆ ಸೇರಿದ್ದು.

ನಾನೇಕೆ ಅನುವಾದಿಸುತ್ತೇನೆ

ನಮ್ಮಲ್ಲಿ ಒಂದು ಮಾತಿದೆ – ‘ಸ್ವಂತ ಬರಯಲಿಕ್ಕೆ ಬಾರದವರು ಅನುವಾದ ಮಾಡುತ್ತಾರೆ’ ಎಂದು. ಇದು ಎಷ್ಟು ಸರಿ ಎಂದು ಗೊತ್ತಿಲ್ಲ. ನಾನು ಮೊದಲು ಕವಿತೆಗಳನ್ನು ಬರೆಯಲು ಶುರುಮಾಡಿದೆ. ಬಳಿಕ ಕವಿತೆಗಳನ್ನು ಅನುವಾದಿಸತೊಡಗಿದೆ. ನಂತರ ಕಥೆಗಳನ್ನು ಬರೆಯತೊಡಗಿದೆ, ಆ ಬಳಿಕ ಕಥೆಗಳನ್ನು ಅನುವಾದಿಸತೊಡಗಿದೆ. ನನ್ನ ಕಥೆ, ಕವಿತೆಗಳು ನನಗೇ ಅತೃಪ್ತಿ ಎನಿಸಿ ಅನುವಾದಕ್ಕೆ ಇಳಿದೆನೇ ? ಗೊತ್ತಿಲ್ಲ. ಇದೆಲ್ಲಾ ಶುರುವಾದದ್ದು ಹತ್ತು ವರ್ಷಗಳ ಹಿಂದೆ. ನಾನಾಗ ಹತ್ತನೇ ತರಗತಿ ಓದುತ್ತಿದ್ದೆ.

ಇಂಗ್ಲಿಷ್ ಪಠ್ಯಪುಸ್ತಕದ ಬಹುತೇಕ ಎಲ್ಲ ಕವಿತೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲೆಂದು ನಾನು ಅವುಗಳನ್ನು ಕನ್ನಡಕ್ಕೆ ಅನುವಾದಿಸಿದೆ. ಮೊದಲು ಅನುವಾದಿಸಿದ್ದು ಪಠ್ಯಪುಸ್ತಕದ ಪದ್ಯಗಳ ಪೈಕಿ ನನಗೆ ತುಂಬಾ ಮೆಚ್ಚುಗೆಯಾದ ಎಮಿಲಿ ಡಿಕನ್ಸ್‌ನ್ನಳ ‘ಬಿಕಾಸ್ ಐ ಕುಡ್ ನಾಟ್ ಸ್ಟಾಪ್ ಫರ್ ಡೆಥ್’ ಎಂಬ ಕವಿತೆಯನ್ನು. ಎಲ್ಲ ರೀತಿಯಿಂದ ಅದೇ ನನ್ನ ಮೊದಲ ಅನುವಾದ. ಮುಂದೆ ಪಿ.ಯೂ.ಸಿ ನಲ್ಲೂ ಹೀಗೇ ಮಾಡಿದೆ. ಬಹುತೇಕ ಇಂಗ್ಲಿಷ್ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದೆ. ಬಳಿಕ ಪಠ್ಯಪುಸ್ತಕದಲ್ಲಿದ್ದ ನನಗೆ ತೀರಾ ಇಷ್ಟವಾದ ಕವಿಗಳ ಬೇರೆ ಕವಿತೆಗಳನ್ನೂ ಸಂಗ್ರಹಿಸಿ ಅನುವಾದಿಸತೊಡಗಿದೆ.

ಆಗಷ್ಟೇ ಅನಿಸಿದ್ದು ನಾನು ತೆಲುಗಿನಿಂದಲೂ ಅನುವಾದಿಸಬಲ್ಲೆನೆಂದು. ತೆಲುಗು ನನ್ನ ಮಾತೃಭಾಷೆ. ಕೆಲ ಕವಿತೆಗಳನ್ನು ತೆಲುಗಿನಿಂದ ಅನುವಾದಿಸಲು ಶರುಮಾಡಿದೆ. ಯಾವುದು ಅನುವಾದಿಸಲು ಸುಲಭವಿತ್ತೋ ಅದನ್ನೆಲ್ಲಾ ಅನುವಾದಿಸಿಬಿಡುತ್ತಿದ್ದೆ ಮೊದಮೊದಲು. ಆದರೆ ಆ ಕವಿತೆಗಳು ತೀರಾ ಸಾಮಾನ್ಯವಾಗಿದ್ದವು ಎಂದು ಅರ್ಥವಾಗಲು ತುಂಬ ಸಮಯವೇನೂ ಹಿಡಿಯಲಿಲ್ಲ. ಹೀಗೆ ಅನುವಾದಿಸುವುದು ಬೇಡವೆನಿಸಿತು.‌ ಆದರೆ ತೆಲುಗಿನಿಂದ ಅನುವಾದಿಸಲು ಆ ಕವಿತೆಗಳು ಒಳ್ಳೆಯ ಅಭ್ಯಾಸವನ್ನು ಒದಗಿಸಿದ್ದಂತೂ ಸುಳ್ಳಲ್ಲ. ಆಯ್ಕೆಯ ಸೂಕ್ಷ್ಮಗಳು ಮೆಲ್ಲಮೆಲ್ಲನೆ ತಿಳಿದುಬಂದವು. ಶಾಲೆಯಲ್ಲಿರುವಾಗಲೇ ಹಿಂದಿಯೂ ಕಲಿತೆ, ಇತ್ತೀಚಿಗೆ ಒಡಿಯಾ ಭಾಷೆ ಕಲಿತೆ. ಕಲಿಯಬೇಕಾದ ಭಾರತೀಯ ಭಾಷೆಗಳು ಇನ್ನು ಸಾಕಷ್ಟು ಉಳಿದಿವೆ. ಸದ್ಯ ಈ ಐದೂ ಭಾಷೆಗಳ ನಡುವೆ ನಾನು ಪದಗಳ ಆಟ ಆಡುತ್ತಿದ್ದೇನೆ. ಭಾರತೀಯ ಸಾಹಿತ್ಯವನ್ನು ಸಾಧ್ಯವಾದಷ್ಟು ಮಟ್ಟಿಗೆ ಆಯಾ ಭಾಷೆಗಳಿಂದ ನೇರವಾಗಿ ಅನುವಾದಿಸಿ ಕನ್ನಡಿಗರಿಗೆ ತಲುಪಿಸುವುದು ನನ್ನ ಮುಖ್ಯ ಕಾಳಜಿ.

‍ಲೇಖಕರು Admin

29 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading