ಯಾಕೋ ನನಗೆ ಈ ಚಿತ್ರ ನೆನಪಾಯಿತು..

“Letters from Prague” – ಈ ಸಲದ ಬೆಂಗಳೂರು ಚಲನ ಚಿತ್ರೋತ್ಸವದಲ್ಲಿ ನಾನು ನೋಡಿದ ಮೊದಲ ಚಿತ್ರ. ಚಿತ್ರೋತ್ಸವದ ಸಂಭ್ರಮ ನನ್ನಲ್ಲಿ ಹನಿಹನಿಯಾಗಿ ಇಳಿದು ಸೋನೆ ಸುರಿದದ್ದು ಈ ಚಿತ್ರ ನೋಡುವಾಗಲೇ.

ಈ ಚಿತ್ರದಲ್ಲಿ ಬರುವ ಒಂದು ಸಾಲು, “Celebrating what is there With what is not there” – ನಾನಿಲ್ಲಿ ಈ ಸಾಲನ್ನು ಅನುವಾದ ಮಾಡಲು ಹೊರಟೆ, ಆದರೆ ಹಾಗೆ ಅನುವಾದ ಮಾಡಿದ ತಕ್ಷಣ ಆ ಸಾಲಿನ ಸಾಧ್ಯತೆಯನ್ನು ನಾನು ಕಟ್ಟಿಹಾಕುತ್ತಿದ್ದೇನೆ ಅನ್ನಿಸಿತು, ಅದನ್ನು ಹಾಗೇ ಬಿಡುತ್ತಿದ್ದೇನೆ. ನಮ್ಮ ನಮ್ಮ ರೆಕ್ಕೆ ಬೀಸಿದಷ್ಟೂ ವಿಶಾಲ ನಮ್ಮ ಬಾನು.

ಚಿತ್ರ ಶುರುವಾಗುವುದು ಆಸ್ಪತ್ರೆಯಲ್ಲಿನ ಒಂದು ದೃಶ್ಯದ ಮೂಲಕ, ಮಧ್ಯ ವಯಸ್ಕ ಹೆಣ್ಣೊಬ್ಬಳು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಳೆ. ಆಕೆಯ ಗಂಡ ತೀರಿಕೊಂಡಿದ್ದಾನೆ. ದೂರವಾಗಿದ್ದ ಮಗಳ ಮದುವೆ ಮುರಿದುಬಿದ್ದು, ಆಕೆ ವಿಚ್ಛೇದನಕ್ಕೆ ಸಿದ್ಧಳಾಗಿದ್ದಾಳೆ. ವಿಚ್ಛೇದನದ ಖರ್ಚಿಗೆ ಅವಳಿಗೆ ಅವರ ಮನೆಯ ಕಾಗದ ಪತ್ರಗಳು ಬೇಕು, ಅದನ್ನು ಕೇಳಲು ಬಂದಿದ್ದಾಳೆ.

ಆ ಒಂದು ದೃಶ್ಯದಲ್ಲಿ, ಕೆಲವೇ ಸಾಲುಗಳಲ್ಲಿ, ಕ್ಯಾಮೆರಾದ ಫ್ರೇಮುಗಳಲ್ಲಿ ಎಷ್ಟು ಚೆನ್ನಾಗಿ ಮೂರು ಜೀವಗಳ ಕಥೆಗಳನ್ನು ಹೇಳಿಬಿಡುತ್ತಾರೆ…. ಕಿಟಕಿಯ ಗಾಜಿನ ಆಚೆ ಕಾಣುವ ಅದ್ಭುತವಾದ ಬೆಟ್ಟ, ಗುಡ್ಡ, ಪ್ರಕೃತಿ, ಅಲ್ಲಿ ಎಲ್ಲವೂ ಪೂರ್ಣ. ಕಿಟಕಿಯ ಈಚೆ ಎಲ್ಲಾ ಮುರಿದುಬಿದ್ದವುಗಳೇ, ಮನುಷ್ಯರು, ಮನಸ್ಸುಗಳು, ಸಂಬಂಧಗಳು…ಎಲ್ಲವೂ.

ಮದುವೆ ಯಾಕೆ ಮುರಿಯಿತು ಅಂತಾದರೂ ಹೇಳು ಅನ್ನುವ ಅಮ್ಮನ ಪ್ರಶ್ನೆಗೆ ಮಗಳು, ’ಗರ್ಭಿಣಿ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳ ಹತ್ತಿರ ಹೋದವನನ್ನು ಹೇಗೆ ಕ್ಷಮಿಸಲಿ? ಅದರಿಂದಾಗಿ ನಾನು ಮಗುವನ್ನು ಕಳೆದುಕೊಂಡೆ’ ಎನ್ನುತ್ತಾಳೆ.

ನಮ್ಮ ಹೃದಯ ಅಮ್ಮನಿಗಾಗಿ, ಮಗಳಿಗಾಗಿ, ಹುಟ್ಟದ ಆ ಮಗುವಿಗಾಗಿ ಮರುಗುವಷ್ಟರಲ್ಲೇ ಆಕೆ ಇನ್ನೊಂದು ಮಾತು ಸಿಡಿಸುತ್ತಾಳೆ, ’ಎಲ್ಲವನ್ನೂ ಸಹಿಸಿಕೊಂಡು ಕಡೆಗೆ ನನ್ನ ಅಪ್ಪನಂತೆ ಸಾಯುವುದು ನನಗೆ ಇಷ್ಟವಿರಲಿಲ್ಲ’, ಥಟ್ಟನೆ ನಮ್ಮ ನೋಟ ಹಾಸಿಗೆಯಲ್ಲಿ ಮಲಗಿರುವ ಅಮ್ಮನ ಕಡೆ ತಿರುಗುತ್ತದೆ. ’ಅಂದರೆ…..?’, ಅಮ್ಮ ನೋವಿನಿಂದ ಮುಖ ಹಿಂಡಿಕೊಂಡು ಸುಮ್ಮನೆ ಬದಿಗೆ ತಿರುಗಿ ಮಲಗಿಬಿಡುತ್ತಾಳೆ.

ಅವಳ ಕಣ್ಣುಗಳಲ್ಲಿ ಇನ್ನಿಲ್ಲದ ನೋವು. ಮುಂದಿನ ದೃಶ್ಯದಲ್ಲಿ ಗೊತ್ತಾಗುವುದು ಅಂದೇ ಅಮ್ಮನ ಆಪರೇಷನ್ ಇರುತ್ತದೆ, ಮಗಳಿಗೆ ಅದೂ ಸಹ ಗೊತ್ತಿರುವುದಿಲ್ಲ, ಆಪರೇಷನ್ ನಲ್ಲಿ ಅಮ್ಮ ಸಾಯುತ್ತಾಳೆ. ಚಿತ್ರ ಒಂದು ಸಾವಿನಿಂದ ಶುರುವಾಗುತ್ತದೆ, ಅಲ್ಲಿ ನಂಬಿಕೆ ಇಲ್ಲ, ಭರವಸೆ ಇಲ್ಲ, ಪ್ರೇಮ ಇಲ್ಲ…

ಅಮ್ಮನ ಮನೆ ಮಾರಿ, ವಿಚ್ಛೇದನ ತೆಗೆದುಕೊಂಡು ಹೊಸದಾಗಿ ಬದುಕು ಕಟ್ಟಿಕೊಳ್ಳುತ್ತೇನೆ ಎನ್ನುವ ಹುಡುಗಿಗೆ ಅಮ್ಮನ ಉಯಿಲು ಸಿಗುತ್ತದೆ. ಅದರಲ್ಲಿ ಒಂದೇ ಕಂಡೀಷನ್, ಆಕೆಯ ಅಲಮಾರಿನಲ್ಲಿರುವ ಪುಟ್ಟ ಪೆಟ್ಟಿಗೆಯಲ್ಲಿರುವ ಪತ್ರಗಳನ್ನು, ಅದರ ಜೊತೆಯಲ್ಲಿರುವ ವಿಳಾಸಕ್ಕೆ ಹುಡುಗಿ ತಲುಪಿಸಿ, ತಲುಪಿದ ಬಗ್ಗೆ ಒಂದು ಪತ್ರ ತಂದರೆ ಮಾತ್ರ ಆಸ್ತಿ ಅವಳಿಗೆ ಸಿಗುತ್ತದೆ.

ಮೊದಮೊದಲಿಗೆ ಹುಡುಗಿಗೆ ಇದು ಅರ್ಥವೇ ಆಗುವುದಿಲ್ಲ, ಕೊರಿಯರ್ ಮಾಡುವುದು ಬಿಟ್ಟು, ತನ್ನ ಎಲ್ಲಾ ಕೆಲಸಗಳನ್ನೂ ಬಿಟ್ಟು ತಾನು ಏಕೆ ಅದನ್ನು ಹೊತ್ತುಕೊಂಡು ಹೋಗಬೇಕು ಎನ್ನುವುದು ಅವಳ ಪ್ರಶ್ನೆ. ಕಡೆಗೂ ಅವಳು ಇದಕ್ಕಾಗಿ ಇಂಡೋನೇಶಿಯಾದಿಂದ ಪ್ರೇಗ್ ಗೆ ಹೋಗಬೇಕಾಗುತ್ತದೆ.

ಆಗ ಅವಳ ಮನಸ್ಥಿತಿ ಹೇಗಿದೆ? ಅವಳು ಯಾರನ್ನೂ ನಂಬಲಾರಳು, ಇದುವರೆಗಿನ ಅವಳ ಜೀವನದಲ್ಲಿ ಅವಳಿಗೆ ಪೂರ್ಣ ನಂಬಿಕೆ, ಪೂರ್ಣ ಭರವಸೆ, ಪೂರ್ಣ ಪ್ರೀತಿಯನ್ನಿತ್ತ ಯಾವ ಸಂಬಂಧವೂ ದಕ್ಕಿಲ್ಲ. ಅಪ್ಪ ಅವಳೆದುರಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಸತ್ತವನು. ಅಮ್ಮ ಅವಳ ಲೋಕದಲ್ಲಿ, ಅವಳ ಕೋಣೆಯಲ್ಲಿ ಬಂಧಿ. ಅವಳ ಆ ಒಂಟಿತನದ ಕೋಟೆಯನ್ನು ದಾಟಿ ಅವಳನ್ನು ಸ್ಪರ್ಶಿಸುವುದು ಗಂಡನಿಗಿರಲಿ, ಮಗಳಿಗೂ ಸಾಧ್ಯವಿರುವುದಿಲ್ಲ.

ಪ್ರೀತಿಸಿ ಮದುವೆಯಾದ ಗಂಡ ಇವಳಿಗೆ ಮೋಸ ಮಾಡಿ ಇನ್ನೊಬ್ಬಳ ಜೊತೆ ಸಂಬಂಧ ಬೆಳೆಸಿಕೊಂಡಿದ್ದಾನೆ, ಮಗು ಹುಟ್ಟುವ ಮೊದಲೇ ಸತ್ತಿದೆ. ಇಡೀ ಜಗತ್ತನ್ನು ಎದುರಿಸಲು ಒಂಟಿಯಾಗಿ ನಿಂತಿದ್ದಾಳೆ. ಗೆಳತಿಯಲ್ಲಿ ಸಹ ಮನಸ್ಸು ಬಿಚ್ಚಿ ಮಾತನಾಡಲಾರಳು, ಅವಳ ಮಾತು, ಮನಸ್ಸು, ನಡವಳಿಕೆ ಎಲ್ಲವೂ ಶೀತಲ, ಒರಟು.

ಅಲ್ಲಿ ಪ್ರೇಗ್ ನಲ್ಲಿ ಇನ್ನೊಂದು ಜೀವ ಇದೆ. ಆತ ಒಂದು ಸಂಗೀತ ಗೃಹದಲ್ಲಿ ಸ್ವಚ್ಛಮಾಡುವ ಕರ್ಮಚಾರಿಯಾಗಿ ಕೆಲಸ ಮಾಡುತ್ತಿದ್ದಾನೆ. ಅವನದೇ ಒಂದು ನಿನ್ನೆಯ ಬದುಕಿದೆ. ಅವನೊಬ್ಬ ಇಂಡೋನೇಶಿಯಾದಲ್ಲಿ ಪರಮಾಣು ವಿಜ್ಞಾನ ಓದುತ್ತಿದ್ದ ವಿದ್ಯಾರ್ಥಿ.

ಅಲ್ಲಿ ನಡೆದ ರಾಜಕೀಯ ವಿಪ್ಲವದ ಸಂದರ್ಭದಲ್ಲಿ ಸರ್ವಾಧಿಕಾರಿ ಸುಹಾರ್ತೋ ತನ್ನ ಆಡಳಿತವನ್ನು ಒಪ್ಪಿಕೊಳ್ಳದವರ ಪಾಸ್ಪೋರ್ಟ್ ಗಳನ್ನು ಅಮಾನ್ಯಗೊಳಿಸಿಬಿಡುತ್ತಾನೆ. ಅವರ ನಾಗರೀಕತ್ವವನ್ನು ರದ್ಧು ಮಾಡಲಾಗುತ್ತದೆ. ಆಗ ನೂರಾರು ಜನ ಯುವಕರು ದೇಶಭ್ರಷ್ಟರಾಗುವುದಷ್ಟೇ ಅಲ್ಲ, ದೇಶರಹಿತರೂ ಆಗಿಬಿಡುತ್ತಾರೆ. ಹಾಗೆ ದೇಶವನ್ನಷ್ಟೇ ಅಲ್ಲ, ತನ್ನ ಬದುಕು, ಪ್ರೇಮ, ಕನಸು, ವೃತ್ತಿ, ಪ್ರಿಯತಮೆ ಎಲ್ಲರನ್ನೂ ಕಳೆದುಕೊಂಡವ ಈ ಜಯ. ಈಗ ಅವನ ಸಂಗಾತಿಯಾಗಿ ಇರುವುದು ಒಂದು ಮುದ್ದಾದ ನಾಯಿ. ಅದು ಅವನ ಸಂಗಾತಿಯೋ, ಬೆನ್ನುಬಿಡದ ನೆನಪೋ, ಅವನ ಬದುಕಿಗೆ ಆಧಾರವಾಗಿರುವ ಭೂತಕಾಲವೋ ಗೊತ್ತಾಗುವುದಿಲ್ಲ.

ಹೀಗೆ ಬದುಕಿನ ಹೋರಾಟದಲ್ಲಿ ಗಾಯಗೊಂಡ, ಆದರೆ ಸೋಲೊಪ್ಪದ ಹೋರಾಟಗಾರನ ಮನೆಗೆ ಒಂದು ರಾತ್ರಿ ಈ ಹುಡುಗಿ ಲಾರಸಾಟಿ ಪತ್ರಗಳ ಪುಟ್ಟ ಪೆಟ್ಟಿಗೆ ಹಿಡಿದು ಬರುತ್ತಾಳೆ. ಆದರೆ ಆತ ಆ ಪತ್ರಗಳನ್ನು ತೆಗೆದುಕೊಳ್ಳಲು ಬಿಲ್ಕುಲ್ ಒಪ್ಪುವುದಿಲ್ಲ. ಅವಳನ್ನು ಮನೆಯಿಂದ ಹೊರಗೆ ಹಾಕುತ್ತಾನೆ. ಸಿಟ್ಟಾಗಿ ಅಲ್ಲಿಂದ ಹೊರಟ ಅವಳನ್ನು ಅವಳ ಟ್ಯಾಕ್ಸಿಯ ಚಾಲಕನೇ ದೋಚುತ್ತಾನೆ, ಕೈಲಿರುವ ಪತ್ರಗಳ ಪೆಟ್ಟಿಗೆ ಬಿಟ್ಟು ಎಲ್ಲವನ್ನೂ ಅವಳು ಕಳೆದುಕೊಳ್ಳುತ್ತಾಳೆ.

ವಿಧಿಯಿಲ್ಲದೆ ಅವಳು ಮತ್ತೆ ಈ ವೃದ್ಧನ ಮನೆಗೆ ಹಿಂದಿರುಗುತ್ತಾಳೆ. ಅಲ್ಲಿಂದ ಪ್ರಾರಂಭವಾಗುತ್ತದೆ ಇಬ್ಬರ ತಿಕ್ಕಾಟ ಮತ್ತು ಪಯಣ…. ಅವನ ಪಯಣ ಭೂತದಿಂದ ವರ್ತಮಾನದೆಡೆಗೆ, ಇವಳದು ಅಪನಂಬಿಕೆಯಿಂದ ನಂಬಿಕೆಯೆಡೆಗೆ, ವಿಶ್ವಾಸದೆಡೆಗೆ, ಪ್ರೇಮದೆಡೆಗೆ.

ಈ ಪಯಣವನ್ನು ಸಣ್ಣಸಣ್ಣ ಘಟನೆಗಳ ಮೂಲಕ, ಅತ್ಯಂತ ಪರಿಣಾಮಕಾರಿ ಸಂಭಾಷಣೆ ಮತ್ತು ಅಭಿನಯದ ಮೂಲಕ ನಿರ್ದೇಶಕ Angga Dwimas Sasongko ಕಟ್ಟಿಕೊಡುತ್ತಾರೆ.

ಅವಳ ಹೊಸ ಪಾಸ್ಪೋರ್ಟ್ ಆಗಬೇಕು, ಅವಳು ಊರಿಂದ ಹಣ ತರಿಸಿಕೊಳ್ಳಬೇಕು, ಅದಕ್ಕೆ ಆತನ ಅಕೌಂಟ್ ನಂಬರ್ ಬೇಕು, ಹೀಗೆ ಅವನಿಗೆ ಬೇಕಿಲ್ಲದಿದ್ದರೂ ಅವಳನ್ನು ಮನೆಯಲ್ಲಿ ಇರಿಸಿಕೊಳ್ಳಲೇಬೇಕಾಗುತ್ತದೆ. ಮನೆಯಲ್ಲಿ ಒಬ್ಬಳೇ ಇದ್ದ ಅವಳು ಸಮಯ ಹೋಗದೆ ಆ ಪತ್ರಗಳಲ್ಲಿ ಏನಿದೆ, ಅದು ಯಾರ ಪತ್ರಗಳು ನೋಡೋಣ ಎಂದು ಕೊಂಡು ಒಂದು ಪತ್ರ ತೆಗೆದು ಓದುತ್ತಾಳೆ.

’ಪ್ರಿಯ ಸುಲಾಸ್ತ್ರಿ….’ ಎಂದು ಶುರುವಾಗುವ ಪತ್ರ, ಅಂದರೆ ಅದು ಅವಳ ಅಮ್ಮನ ಹೆಸರು, ಅವಳು ಇನ್ನೊಂದು ಪತ್ರ ತೆಗೆಯುತ್ತಾಳೆ, ಆಮೇಲೆ ಮತ್ತೊಂದು, ಮಗದೊಂದು, ಅವಳು ಓದುತ್ತಾ ಹೋಗುತ್ತಾಳೆ, ಅಮ್ಮನಿಗೆ ಇನ್ಯಾರೋ ಬರೆದ ಪ್ರೇಮಪತ್ರ, ಒಂದೆಡೆ ಅವಳಲ್ಲಿ ಅದಮ್ಯ ಸಿಟ್ಟು ಉಕ್ಕುತ್ತದೆ, ಇನ್ನೊಂದೆಡೆ ಆ ಪತ್ರಗಳಲ್ಲಿರುವ ಪ್ರೇಮದ ತೀವ್ರತೆ ಅವಳನ್ನು ಆರ್ದ್ರವಾಗಿಸುತ್ತಿರುತ್ತದೆ. ಯಾವುದೇ ಹೆಣ್ಣು ಸೋತು, ತನ್ನ ಜೀವವನ್ನೇ ಅರ್ಪಿಸುವ ಪ್ರೇಮ ಅದು. ಆದರೆ ಅದೇ ಪ್ರೇಮ ಅವಳ ಅಮ್ಮನನ್ನು ತನ್ನ ಬದುಕಲ್ಲಿ ಎಂದೂ ಭಾಗಿಯಾಗದ ಹಾಗೆ ಮಾಡಿರುತ್ತದೆ.

ಹತ್ತು ವರ್ಷಗಳ ಅವಧಿಯಲ್ಲಿ ಬರೆದ 136 ಪತ್ರಗಳು ಅವು. ಅಲ್ಲಿ ಎರಡು ಜೀವಗಳ ಪ್ರೀತಿಯ ಕಥೆ ಇರುತ್ತದೆ, ಎರಡು ಬದುಕುಗಳು ಕಾಲದ ಹೊಡೆತಕ್ಕೆ ಸಿಕ್ಕು ಒದ್ದಾಡಿದ ಕಥೆ ಇರುತ್ತದೆ, ಅದು ಆ ಕಾಲಘಟ್ಟದ ರಾಜಕೀಯ, ಸಾಮಾಜಿಕ ಚರಿತ್ರೆ. ಆ ಯಾವ ಪತ್ರಗಳಿಗೂ ಅವಳ ಅಮ್ಮ ಉತ್ತರ ಬರೆದಿರುವುದಿಲ್ಲ ಎನ್ನುವುದು ಗೊತ್ತಾಗುತ್ತದೆ. ಓದುತ್ತಿದ್ದಂತೆಯೇ ಇವಳ ಸಿಟ್ಟು ಉಕ್ಕೇರುತ್ತದೆ. ತನ್ನ ಬಾಲ್ಯ ಕೊಂದವನು ಇವನು, ತನ್ನ ಮನೆಯನ್ನು ನಾಶಮಾಡಿದವನು ಇವನು, ತನ್ನ ತಂದೆ-ತಾಯಿಯರ ನಡುವಿನಲ್ಲಿ ಸದಾ ಇದ್ದ ಕಬ್ಬಿಣದ ತೆರೆ ಇವನು ಎಂದು ಗೊತ್ತಾಗುತ್ತಿದ್ದಂತೆಯೇ ಸಿಡಿದು ಬೀಳುತ್ತಾಳೆ.

ಆಗ ಮನೆಗೆ ಬಂದ ಅವನನ್ನು ತನ್ನ ಮಾತುಗಳಿಂದ ಇನ್ನಿಲ್ಲದಂತೆ ಘಾಸಿಗೊಳಿಸುತ್ತಾಳೆ. ಇವರಿಬ್ಬರ ನಡುವಿನ ಸಮತೋಲನದ ತಕ್ಕಡಿ ಮೊದಲು ಪಲ್ಲಟವಾಗುವುದು ಇಲ್ಲಿ. ಇವಳ ಮಾತುಗಳ ಧಾಳಿಗೆ ಆತ ಕುಸಿಯುತ್ತಾನೆ, ತನ್ನ ಸಮತೋಲನ ಕಳೆದುಕೊಳ್ಳುತ್ತಾನೆ, ಸೋಲೊಪ್ಪುತ್ತಾನೆ, ಅವಳ ಮಾತುಗಳ ಬಾಣ ತಪ್ಪಿಸಿಕೊಳ್ಳಲು ’ಕೊಡು ಪತ್ರಕ್ಕೆ ಸಹಿ ಮಾಡುತ್ತೇನೆ’ ಎಂದವನ ದನಿ ಒಡೆದು, ಕಣ್ಣೀರು ಕಣ್ಣುಗಳ ತುಂಬಾ.

ತನ್ನ ಮಾತುಗಳ ನಡುವೆ ಅವಳು ಹೇಳಿದ ಒಂದು ಮಾತು ಅವನ ಇಷ್ಟು ಕಾಲದ ಹತಾಶೆಗೆ ಒಂದು ನೆಮ್ಮದಿಯನ್ನು ಕೊಡುತ್ತದೆ. ಅವಳು ಉತ್ತರ ಬರೆದು, ತನ್ನ ಬದುಕಿನ ಬಗ್ಗೆ ಹೇಳಿದ್ದರೆ ನಾನು ಪತ್ರ ಬರೆಯುವುದನ್ನು ಮುಂದುವರೆಸುತ್ತಿರಲಿಲ್ಲ ಎಂದಾಗ  ಅವಳು, ’ಇನ್ನೂ ನಿನಗೆ ಅರ್ಥವಾಗಲಿಲ್ಲವೇ,  ಅವಳು ಉತ್ತರ ಬರೆದಿದ್ದರೆ, ತನ್ನ ಬದುಕಿನ ಬಗ್ಗೆ ಹೇಳಿದ್ದರೆ ಕೂಡಲೇ ನೀನು ಪತ್ರಗಳನ್ನು ಬರೆಯುವುದುದನ್ನು ನಿಲ್ಲಿಸುತ್ತಿದ್ದೆ, ಅದಕ್ಕೇ ಅವಳು ಉತ್ತರಿಸಲಿಲ್ಲ. ಅವಳ ಇಡೀ ಜೀವನ ಇದ್ದದ್ದು ಪೋಸ್ಟ್ ಮ್ಯಾನ್ ತರುತ್ತಿದ್ದ ಪತ್ರಗಳಲ್ಲಿ’ ಎಂದಾಗ ಅವನ ವರ್ಷಗಳ ಕಾಯುವಿಕೆಗೂ ಒಂದು ತಂಗಾಳಿಯ ನೇವರಿಕೆ.

ಇಲ್ಲಿಂದ ಅವರಿಬ್ಬರ ನಡುವಿನ ಈಕ್ವೇಶನ್ ಬದಲಾಗುತ್ತದೆ. ಅವಳು ಅವನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ, ಅವನ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಾಳೆ. ಅವನ ಸಂಗೀತ, ಅವನ ಸ್ನೇಹಿತರು, ಅವನು ತನ್ನ ತಾಯಿಗಾಗಿ ಬರೆದ ಕವನಗಳು, ಕಳೆದ ಪ್ರೇಮದ ನೆನಪಿನಲ್ಲಿ ಒಂಟಿಯಾಗಿಯೇ ಬದುಕುತ್ತಿರುವ ಅವನ ಬದುಕು… ಎಲ್ಲವೂ ಅವಳಿಗೆ ವಿಸ್ಮಯ.

ಮತ್ಯಾಕೆ ನೀನು ಮದುವೆ ಆಗಲಿಲ್ಲ ಎಂದು ಕೇಳುವ ಅವಳ ಪ್ರಶ್ನೆಗೆ ಅವನ ಉತ್ತರ, ’ನಾನು ನಿನ್ನಮ್ಮನಿಗೆ ಎರಡು ಮಾತುಗಳನ್ನು ಕೊಟ್ಟಿದ್ದೆ, ಒಂದು ಹಿಂದಿರುಗಿ ಅವಳನ್ನು ಮದುವೆ ಆಗುತ್ತೇನೆ ಎಂದು, ಇನ್ನೊಂದು ಸಾಯುವವರೆಗೂ ಅವಳನ್ನೇ ಪ್ರೀತಿಸುತ್ತೇನೆ ಎಂದು. ಜಗತ್ತು ನನ್ನ ಮೊದಲನೆಯ ಭಾಷೆಯನ್ನು ಉಳಿಸಿಕೊಡುವ ಅವಕಾಶ ಕೊಡಲಿಲ್ಲ, ಎರಡನೆಯ ಭಾಷೆಯನ್ನಾದರೂ ನಾನು ಉಳಿಸಿಕೊಳ್ಳಬೇಕು’ ಎನ್ನುವಾಗ ಅವಳು ಮೂಕಳಾಗುತ್ತಾಳೆ.

ಅವನ ಅಕೌಂಟಿಗೆ ಅವಳ ದುಡ್ಡು ಬಂದಿದೆ, ಈಗ ಬೇಕಾದರೆ ನೀನು ಹೋಟೆಲ್ ನಲ್ಲಿರಬಹುದು ಎನ್ನುವ ಅವನ ಮಾತನ್ನು ಆಕೆ ನಿರಾಕರಿಸುತ್ತಾಳೆ. ಆ ಕ್ಷಣದಿಂದ ಅವನು ಅವಳನ್ನು ತನ್ನ ಜೀವನದಲ್ಲಿ ಸೇರಿಸಿಕೊಳ್ಳುತ್ತಾನೆ, ಅವಳ ಜೊತೆ ಅವಳ ಜೀವನದ ಬಗ್ಗೆ ಮಾತನಾಡುತ್ತಾನೆ. ಸ್ವಂತ ಅಮ್ಮನ ಬಳಿಯೂ ಶಿಲೆಯಾಗಿ ಉಳಿಯುವ ಅವಳು ಇವನೆದುರಲ್ಲಿ ಹೆಣ್ಣಾಗುತ್ತಾಳೆ.

ನಂತರ ಇವರಿಬ್ಬರ ಸಂಬಂಧ ತೆಗೆದುಕೊಳ್ಳುವ ತಿರುವನ್ನು ನಿರ್ದೇಶಕರು ಅಸ್ಪಷ್ಟವಾಗಿಯೇ ಉಳಿಸುತ್ತಾರೆ. ಅವನೆಡೆಗಿನ ಅವಳ ನೋಟದಲ್ಲಿ ಈಗ ಪ್ರೇಮ ಇದೆ, ಅವನಿಗೂ ಇವಳು ಆಗಾಗ ತನ್ನ ಸುಲಾಸ್ತ್ರಿಯಂತೆ ಕಾಣುತ್ತಿದ್ದಾಳೆ. ಆದರೆ ಚಿತ್ರದಲ್ಲಿ ಅದಕ್ಕೆ ಯಾವುದೇ ಸ್ವರೂಪ ಕೊಟ್ಟಿಲ್ಲ. ಅದೊಂದು Open End possibility ಯಾಗಿಯೇ ಉಳಿದಿದೆ.

ಜಯಾನೊಡನೆ ಮಾತನಾಡುತ್ತಾ ಲಾರಸ್ ತನ್ನ ಕವಿತೆಯ ಬಗ್ಗೆ ಹೇಳುತ್ತಾಳೆ. ಪ್ರೀತಿಯ ಬಗ್ಗೆ ನಂಬಿಕೆಯೇ ಇಲ್ಲದಿದ್ದ ಇವಳು ಈಗ ಎರಡು ಜೀವಗಳನ್ನು ಏಕರೂಪಗೊಳಿಸಿಕೊಂಡ ಕವಿತೆ ಬರೆದಿದ್ದಾಳೆ.

You and I are like a prayer I whisper
before every step I take I utter your name

ಆದರೆ ಅದು ಅಪೂರ್ಣ ಕವಿತೆ. ಅದನ್ನು ಹೇಗೆ ಪೂರ್ತಿ ಮಾಡುವುದು ಎಂದು ತನಗೆ ಗೊತ್ತಿಲ್ಲ ಎನ್ನುತ್ತಾಳೆ. ಆ ಕವಿತೆ ಪೂರ್ತಿ ಮಾಡಲು ಕೂರುವ ಅವನು ಆ ಎರಡು ಸಾಲುಗಳ ನಂತರ ತನ್ನ ಸಾಲು ಸೇರಿಸುವುದಿಲ್ಲ, ಅವುಗಳ ಮೊದಲಿಗೆ ತನ್ನ ಸಾಲುಗಳನ್ನು ಸೇರಿಸುತ್ತಾನೆ, ಆ ಸಾಲುಗಳು ನಂತರ ಈಕೆ ಬರೆದ ಸಾಲುಗಳನ್ನು ಸೇರಿದಾಗ ಅದೊಂದು ಅದ್ಭುತ ಕವಿತೆಯಾಗುತ್ತದೆ.

ನಮ್ಮ ’ಇಂದು’ ಸಂಪೂರ್ಣವಾಗಬೇಕಾದರೆ ಅದಕ್ಕೆ ’ಇಂದು’ ಅಥವಾ ’ನಾಳೆ’ಗಳಷ್ಟೇ ಅಲ್ಲ, ಕಳೆದುಹೋದ ’ನಿನ್ನೆ’ಯ ಸಾಲುಗಳು ಸಹ ರೆಕ್ಕೆಗಳಾಗುತ್ತವೆ ಎನ್ನುವ ಮಾತುಗಳನ್ನು ಚಿತ್ರ ಸುಂದರವಾಗಿ ಕಟ್ಟಿಕೊಡುತ್ತದೆ.

ಲಾರಾಸ್ ಗೆ ಭೂತಕಾಲವನ್ನು ಮುಗಿಸಬೇಕಿದೆ, ಇನ್ನಾದರೂ ಇಂಡೋನೇಶಿಯಾಗೆ ಬಾ ಎಂದು ಕರೆಯುತ್ತಾಳೆ. ಅವನು ಇಂಡೋನೇಶಿಯಾವನ್ನು ನಿರಾಕರಿಸುವುದರಲ್ಲಿ ಅವನ ಜೀವನದ ಕಥೆಯಿದೆ. ಅದಕ್ಕಾಗಿ ಅವನು ತೆತ್ತ ಬೆಲೆ ದೊಡ್ಡದು, ಹಾಗಾಗಿಯೇ ಅದರ ಮೌಲ್ಯ ಸಹ ಹೆಚ್ಚು. ಅವನು ಹಿಂದಿರುಗಲು ನಿರಾಕರಿಸುತ್ತಾನೆ. ಸಿಟ್ಟಿನಿಂದ ಲಾರಸ್ ಊರಿಗೆ ಹೊರಡಲು ಮನೆಯಿಂದ ಹೊರಗೆ ಹೆಜ್ಜೆಯಿಡುತ್ತಾಳೆ. ಈಗ ಅವಳ ಹಿಂದೆ ಹಿಂದೆ ಆ ಸಾಕುನಾಯಿ ಮತ್ತು ನೆನಪು. ಅದನ್ನು ಬೈದು ಹಿಂದಕ್ಕಟ್ಟುತ್ತಾಳೆ. .

ಚಿತ್ರದ ಕೊನೆಯ ದೃಶ್ಯ : ಲಾರಸ್ ತಂದ ಪತ್ರಗಳ ಜೊತೆ ಇನ್ನೊಂದು ಪತ್ರವೂ ಇದೆ. ಅದು ಜಯಾನಿಗಾಗಿ ಸುಲಾಸ್ತ್ರಿ ಬರೆದ ಒಂದೇ ಒಂದು ಪತ್ರ, ಕಡೆಯ ಪತ್ರ. ಅದನ್ನು ಆತ ಆಗ ತೆರೆದು ಓದುತ್ತಾನೆ. ಅವಳ ಮಾತುಗಳು ಅವನ ಆತ್ಮವನ್ನು ನೇವರಿಸುತ್ತವೆ. ಅವನು ತಮ್ಮಿಬ್ಬರಿಗೂ ಹೆಣ್ಣುಮಗುವಾದರೆ ಇಡಬೇಕು ಎಂದುಕೊಂಡಿದ್ದ ಹೆಸರನ್ನೇ ಮಗಳಿಗಿಟ್ಟಿದ್ದಾಗಿ ಹೇಳಿರುತ್ತಾಳೆ. ಮಗಳು ಒಮ್ಮೆಯಾದರೂ ಅವನನ್ನು ನೋಡಬೇಕು, ಅವನು ಅವಳನ್ನು ನೋಡಬೇಕು, ಅದಕ್ಕಾಗಿಯೇ ಅವಳನ್ನು ಕಳಿಸಿದ್ದೇನೆ ಎಂದು ಬರೆದಿರುತ್ತಾಳೆ.

ಅವನ ಮನಸ್ಸೀಗ ಶಾಂತ. ಊರಿಗೆ ಹೊರಟ ಲಾರಸ್ ಳನ್ನು ಹುಡುಕಿಕೊಂಡು ಬರುತ್ತಾನೆ. ಅವಳನ್ನು ಕರೆದು ನಿಲ್ಲಿಸುತ್ತಾನೆ, ರಸ್ತೆಯಾಚೆಗೆ ಅವರು, ರಸ್ತೆಯ ಮೇಲೆ ವೇಗವಾಗಿ ಚಲಿಸುತ್ತಿರುವ ಬಸ್ ಗಳು. ವೇಗವಾಗಿ ಸಾಗುತ್ತಿರುವ ಗಾಡಿಗಳ ನಡುವಿನಲ್ಲಿ ಅವರಿಬ್ಬರೂ ಅಪ್ಪಿಕೊಂಡು ನಿಂತ ದೃಶ್ಯ ಕಾಣುತ್ತದೆ.

ಯಾವುದನ್ನೂ ಹೇಳದೆಯೇ ಚಿತ್ರ ಅಲ್ಲಿಗೆ ಮುಗಿಯುತ್ತದೆ. ಹೇಳಲು ಹೋದರೆ ಏನೂ ವಿಶೇಷವಿದೆ ಅನ್ನಿಸದ, ಆದರೆ ಅನುಭವಿಸುವಾಗ ಅತ್ಯಂತ ಆರ್ದ್ರವಾಗಿ ನಮ್ಮನ್ನು ತಾಕುವ ಚಿತ್ರ ಇದು. ಮೊನ್ನೆ ಅಚಾನಕ್ ಆಗಿ ಚದುರಂಗರ ಒಂದು ಕವಿತೆ ಕಣ್ಣಿಗೆ ಬಿತ್ತು,

ಆಳದ
ಬಾವಿಯಿಂದ
ನೀರು ಸೇದುವ
ಗರ್ಭಿಣಿ
ಹೆಂಗಸು

ನೀರು ತುಂಬಿ
ದುಮುದುಮಿಸುವ
ಕಣ್ಣಿನ
ಕೊಡಗಳು

ಯಾಕೋ ನನಗೆ ಈ ಚಿತ್ರ ನೆನಪಾಯಿತು…

‍ಲೇಖಕರು avadhi

March 31, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. ಭಾರತಿ ಬಿ ವಿ

    ಈ ಚಿತ್ರ ನೋಡಿದ ನಂತರದ ಸ್ತಬ್ಧತೆ ನನಗಿನ್ನೂ ನೆನಪಿದೆ …
    ತುಂಬ ಇಷ್ಟವಾದ ಚಿತ್ರದ ಬಗೆಗಿನ ಬರಹ ಕೂಡಾ ಅಷ್ಟೇ ಇಷ್ಟವಾಯ್ತು

    ಪ್ರತಿಕ್ರಿಯೆ
  2. ರೋಹಿತ್.ಎಸ್.ಹೆಚ್.

    ಈ ಸಲ, ಚಿತ್ರೋತ್ಸವ ಮಿಸ್ ಮಾಡಿಕೊಂಡೆ ಅಂತ ತುಂಬಾ ಬೇಜಾರಿತ್ತು. ನಿಮ್ಮ ಬರಹಗಳಿಂದ ಬೇರೆಯದೇ ರೀತಿಯಲ್ಲಿ ಚಿತ್ರೋತ್ಸವವನ್ನ ಮತ್ತೆ ಕಾಣಬಹುದು ಅಂತ ಸಮಾಧಾನ ಆಗ್ತಾ ಇದೆ ಮೇಡಂ. ತುಂಬಾ ಇಷ್ಟಾವಾದ ಬರಹ. ಸೂಪರ್!

    ಪ್ರತಿಕ್ರಿಯೆ
  3. ಚಲಂ

    ’ಇನ್ನೂ ನಿನಗೆ ಅರ್ಥವಾಗಲಿಲ್ಲವೇ, ಅವಳು ಉತ್ತರ ಬರೆದಿದ್ದರೆ, ತನ್ನ ಬದುಕಿನ ಬಗ್ಗೆ ಹೇಳಿದ್ದರೆ ಕೂಡಲೇ ನೀನು ಪತ್ರಗಳನ್ನು ಬರೆಯುವುದುದನ್ನು ನಿಲ್ಲಿಸುತ್ತಿದ್ದೆ, ಅದಕ್ಕೇ ಅವಳು ಉತ್ತರಿಸಲಿಲ್ಲ. ಅವಳ ಇಡೀ ಜೀವನ ಇದ್ದದ್ದು ಪೋಸ್ಟ್ ಮ್ಯಾನ್ ತರುತ್ತಿದ್ದ ಪತ್ರಗಳಲ್ಲಿ’

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: