ಸುಜಾತಾ ವಿಶ್ವನಾಥ್
ದಿನಗಳುರುತ್ತಿದ್ದಂತೆ ನಾವೆಲ್ಲ ಎಷ್ಟೊಂದು ಯಾಂತ್ರಿಕ ಜೀವನವನ್ನು ಮಾಡುತ್ತಿದ್ದೇವೆ ಎನಿಸುತ್ತದೆ. ನಾವು ಬೆಳಿಗ್ಗೆಯಿಂದ ಸಂಜೆಯವರೆಗೂ, ಒಂದು ನಿಮಿಷವೂ ಪುರುಸತ್ತಿಲ್ಲದೆ ಓಡುತ್ತಿದ್ದೇವೆ. ಆದರೆ ಕೆಲವೊಮ್ಮೆ, ಎಲ್ಲವನ್ನು, ಎಲ್ಲರನ್ನು ಬಿಟ್ಟು ಯಾವುದೋ ಲೋಕಕ್ಕೆ ಹೋಗಿಬಿಡಬೇಕೆಂಬ, ಹಂಬಲ ನಮ್ಮನ್ನು ಕಾಡತೊಡಗುತ್ತದೆ. ಆದರೆ ಇದಾವುದು ನಮ್ಮಿಂದ ಆಗದು ಎಂಬ ಸತ್ಯವಂತೂ ನಮಗೆ ಗೊತ್ತಿರುತ್ತದೆ.
ಪುಟ್ಟ ವಯಸ್ಸು, ಶಾಲೆಯ ದಿನಗಳು, ಆ ಸ್ನೇಹ, ಆ ಗೆಳೆಯರು, ಎಲ್ಲೋ ನಮ್ಮ ಒಂದು ಹೃದಯದ ಕವಾಟಿನೊಳಗೆ, ಹಾಗೆ ಬಂದು ಹಾಗೆ ಹೋದ ಪ್ರೀತಿ-ಪ್ರೇಮಗಳೆಲ್ಲ, ಬೇಡವೆಂದರೂ ನೆನಪಾಗುತ್ತವೆ. ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣದ ಆ ದಿನಗಳು, ಎಷ್ಟೊಂದು ನೆನಪುಗಳನ್ನು ಹೊತ್ತು ನಮ್ಮೊಂದಿಗೆ ಇರುತ್ತವೆಯಲ್ಲವೆ. ಅದರಲ್ಲೂ ಹಳ್ಳಿಯಲ್ಲಿ ಹುಟ್ಟಿ ಬೆಳೆದವರಿಗಂತೂ ಬಾಲ್ಯದ ದಿನಗಳು ಅತಿ ಮಧುರ. ಗೆಳೆಯರೊಟ್ಟಿಗೆ ದನ, ಕರುಗಳು, ಕುರಿ-ಮೇಕೆಗಳನ್ನು ಕಾಯುವುದು, ಕಾಯುವ ಆ ಸಮಯದಲ್ಲಿನ ಆಟವಾಡಿದ ಆ ನೆನಪುಗಳಂತೂ ನಮ್ಮ ಹೃದಯದ ಅಂತರಾಳದಲ್ಲಿ ಹಚ್ಚಳಿಯದೇ ಉಳಿದಿರುತ್ತವೆ. ಗೋಲಿ, ಬುಗುರಿ, ಕುಂಟೆಬಿಲ್ಲೆ, ಮರಕೋತಿಯಾಟ, ಚಿನ್ನಿದಾಂಡು, ಬೇಸಿಗೆ ಬಿಸಿಲಿಗೆ ತಾಳದೆ ಬಾವಿಯಲ್ಲಿ ಜಿಗಿದು ಈಜುವುದು, ಬುಗುರಿ ಆಟದಲ್ಲಿ ಸೋತಾಗ, ಸೋತವರು ಗೆದ್ದವರಿಗೆ ಕಾಣದಂತೆ ತಲೆಗೆ ಗುನ್ನವಿಟ್ಟು ಓಡಿದ ಆ ಕ್ಷಣಗಳಂತೂ ಮರೆಯಲಾಗದು.
ಅಲ್ಲದೆ ಊರ ಹಿರಿಯರು, ನಾವು ಚಿಕ್ಕವರಿರುವಾಗ ಅವರುಗಳು ಪಂಚೆಗಳನ್ನೆ ದರಿಸುತ್ತಿದ್ದರು. ಈ ಪಂಜೆಗಳೂ ಸಹ ಒಮ್ಮೊಮ್ಮೆ ನಮಗೆ ಆಟಿಕೆಗಳಾಗಿದ್ದು ಉಂಟು. ಕೆಲಮೊಮ್ಮೆ ಆ ಹಿರಿಯರ ಪಂಚೆಗಳನ್ನು ಎಳೆದುಕೊಂಡು ಓಡುತ್ತಿದ್ದೆವು. ಅವರು ಹಿಂದೆಯೂ ಹೋಗಲಾಗದೆ, ಮುಂದೆಯೂ ಹೋಗಲಾಗದೆ ಪೆಚ್ಚಾಗಿ ನಿಂತುಬಿಡುತ್ತಿದ್ದರು. ಆದನ್ನು ನೋಡಲು ನಮಗೆಲ್ಲ ಬಹಳ ಖುಷಿ, ಆದರೆ ಅವರಿಗೆ ಮಾತ್ರ ಪ್ರಾಣ ಸಂಕಟ. ಆ ಸಮಯದಲ್ಲಿ ಅವರಿಗೆ ಇನ್ನೊಬ್ಬ ಊರ ಹಿರಿಯರು ಬಂದು ಸಹಾಯ ಮಾಡುತ್ತಿದ್ದರು, ಅಲ್ಲದೆ ಎಲ್ಲರೂ ಸೇರಿ ನಮ್ಮ ಮನೆಗಳಿಗೆ ಹೋಗಿ, ನಿಮ್ಮ ಮಕ್ಕಳು ಈ ರೀತಿ ಕೆಲಸ ಮಾಡುತ್ತಿದ್ದಾರೆ, ಅವರಿಗೆ ಭಯವಿಡಿ ಎಂದು ಹೇಳಿದಾಗ, ನಮ್ಮ ಮನೆಯ ಹಿರಿಯರು, ನೀವೆ ಅವರಿಗೆ ಏನಾದರೂ ಮಾಡಿ, ನಾವಂತೂ ಅವರಿಗೆ ಬುದ್ದಿ ಹೇಳಿ ಹೇಳಿ ಸಾಕಾಗಿದೆ, ಎಂದು ಕೈ ಚೆಲ್ಲಿದಾಗ, ಆ ಹಿರಿಯರೆಲ್ಲ ಬಕ ಪಕ್ಷಿಗಳಂತೆ ನಾವು ಬರುವುದನ್ನೇ ಕಾಯ್ದುಕೊಂಡಿದ್ದು, ಎಲ್ಲರನ್ನು ಹಿಡಿದು ಊರ ಮುಂದಿನ ಅರಳಿ ಮರಕ್ಕೆ ಕಟ್ಟಿ ಹಾಕಿ, ನಮ್ಮ ಸುತ್ತಲೂ ನಾವು ಗೆದ್ದೆವೆಂಬದಂತೆ, ನಮ್ಮನ್ನು ಅಣಗಿಸುತ್ತ ಕುಣಿಯುತ್ತಿದ್ದ ಆ ದೃಶ್ಯವಂತೂ ಇನ್ನೂ ನಮ್ಮ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಈಗಲೂ ಈ ನೆನಪಿನ ಬುತ್ತಿಯನ್ನು ಆಗಾಗ ಬಿಚ್ಚಿಟ್ಟುಕೊಂಡು ಉಣುತ್ತಿರುತ್ತೇವೆ. ಒಬ್ಬರೇ ಕುಳಿತಾಗ, ಮನಸ್ಸಿಗೆ ನೋವಾದಾಗ ಈ ನೆನಪುಗಳ ಪುಸ್ತಕದ ಪುಟಗಳನ್ನು ತಿರುವಿ ಹಾಕಿದಾಗ, ಏನೋ ಮೈ ಮನಕ್ಕೆ ಮುದ ನೀಡಿದಂತಹ ಅನುಭವ. ಈ ಯಾಂತ್ರಿಕ ಜೀವನದಲ್ಲಿ ಏನೋ ಸ್ವಲ್ಪ ರಿಲೀಪ್ ಆದ ಹಾಗೆ, ಮನಸ್ಸಿಗೆ ಹಾಯ್ ಎನಿಸುತ್ತದೆ.
ಆ ವಯಸ್ಸಿನಲ್ಲಿ ನಮಗೆ ಬಡವ-ಬಲ್ಲಿದ, ಮೇಲ್ಜಾತಿ-ಕೆಳಜಾತಿ, ಗಂಡು-ಹೆಣ್ಣು ಎಂಬ ಯಾವ ಬೇದ-ಭಾವವಿಲ್ಲದೆ ಬೆರೆಯುತ್ತಿದೆವು. ಉಪ್ಪು, ಹುಣಸೇಹಣ್ಣು, ಜೀರಿಗೆ, ಬೆಲ್ಲ, ಮೆಣಸಿನಕಾಯಿ ಈ ಎಲ್ಲಾ ಪದಾರ್ಥಗಳನ್ನು ಒಬ್ಬೊಬ್ಬರೂ ಒಂದೊಂದನ್ನು ತಮ್ಮ ತಮ್ಮ ಮನೆಗಳಿಂದ ಕದ್ದು ತಂದು, ಎಲ್ಲವನ್ನು ಸೇರಿಸಿ ಕುಟ್ಟಿ ಲಾಲಿಪಪ್ ಮಾಡಿ ತಿನ್ನುತ್ತಿದ್ದ ಆ ನೆನಪಂತೂ ಈಗಲೂ ಬಾಯಲ್ಲಿ ನೀರು ತರಿಸುತ್ತದೆ. ಆದರೆ ಇಂದು ಆ ಸ್ನೇಹ, ಆ ಆತ್ಮೀಯತೆಯಲ್ಲವೂ, ಎಲ್ಲಿಯೋ ಕಳೆದು ಹೋಗಿಬಿಟ್ಟಿವೆ. ನಮ್ಮಲ್ಲಿರುವ ಭಾವನೆಗಳನ್ನು ಹಂಚಿಕೊಳ್ಳಲು ಸ್ನೇಹತರಿಲ್ಲದೆ ನಾವೆಲ್ಲರೂ ಯಂತ್ರಗಳಾಗಿ ಮಾರ್ಪಟ್ಟಿದ್ದೇವೆ. ನಾವು ಒಮ್ಮೆ ಹಿಂದಿನ ನೆನಪಿಗೆ ಕಾಲಿಟ್ಟರೆ ಎಷ್ಟು ಖುಷಿ, ಸಂತೋಷ, ಆನಂದ ತರುವ ಮಧುರ ಅತಿ ಮಧುರ ನೆನಪುಗಳು ಇಂದಿಗೂ ಉಳಿದಿವೆ.

ಆದರೆ ಕಾಲೇಜು ದಿನಗಳು ಮಾತ್ರ, ನಮ್ಮ ಯುವಕ ಯುವತಿಯರಿಗೆ ಮರೆಯಲಾಗದ ಮಧುರ ನೆನಪುಗಳು. ಆದರೆ ಜೀವನಕ್ಕೆ ಒಂದು ಗಟ್ಟಿ ದಾರಿಯನ್ನು ಕಂಡುಕೊಳ್ಳುವ ಸಮಯದಲ್ಲಿಯೆ ಎಡವಿಬಿಡುತ್ತಾರೆ. ಹರೆಯದ ವಯಸ್ಸು, ಹುಚ್ಚು ಮನಸ್ಸು, ಈ ಬಣ್ಣ ಬಣ್ಣದ ಕನಸುಗಳಿಗೆ ವೇಧಿಕೆಯಾಗಿಬಿಡುತ್ತದೆ. ಎಷ್ಟೇ ಸ್ವಾಭಿಮಾನದಿಂದ ಬದುಕುತ್ತಿದ್ದರು, ಈ ಪ್ರೀತಿ-ಪೇಮದ ಸುಳಿಯಲ್ಲಿ ಸಿಕ್ಕಿದಾಗ ಎಲ್ಲವೂ ಮಾಯವಾಗಿಬಿಟ್ಟಿರುತ್ತವೆ. ಇದರಿಂದ ಹೊರಬರಲಾರದೆ ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಂಡ ಪ್ರಸಂಗಗಳೂ ಇವೆ.
ಹೆಣ್ಣು ಪ್ರೀತಿಯೆಂಬ ಸುಳಿಗೆ ಸಿಕ್ಕು, ಪ್ರೀತಿಸಿದವನನ್ನು ಮದುವೆಯಾಗಲು ಎಲ್ಲವನ್ನು, ಎಲ್ಲರನ್ನು ತೊರೆದು ಯಾವುದೋ ಒಂದು ಬಂಧಕ್ಕೆ ಅಂಟಿಕೊಂಡು, ಮನೆಯಿಂದ ಮನೆಯವರಿಂದ ಹೊರಬಂದು, ಜೀವನ ಸಾಗಿಸಲು ಮುಂದಾಗುತ್ತಾಳೆ. ಹೆಣ್ಣಾದವಳು ಮತ್ತೆ ವಾಪಾಸ್ಸು ಆ ಮನೆಗೆ ಹೋಗಲಾರಳು, ಒಂದು ವೇಳೆ ಹೋದರೂ ಕಳೆದುಕೊಂಡು ಆ ಮನೆಯ ಹೆತ್ತವರ, ಒಡಹುಟ್ಟಿದವರ ಅಂದಿನ ಪ್ರೀತಿ, ಮಮತೆ, ಅನುರಾಗ, ಇದಾವುದೂ ಮತ್ತೆ ಎಂದೆಂದಿಗೂ ಸಿಗದು. ಅಲ್ಲಿ ಮನಸ್ಸು ವಿಲವಿಲ ಒದ್ದಾಡುತ್ತದೆ. ಕಾರಣ ಪ್ರೀತಿಯ ಹೆಸರಿನಲ್ಲಿ ಹೆತ್ತವರಿಗೂ, ಒಡಹುಟ್ಟಿದವರಿಗೂ ಮೋಸ, ಅವಮಾನ ಮಾಡಿ ಮನೆಯಿಂದ ಹೊರಬಂದಿರುತ್ತಾಳೆ. ಪ್ರೀತಿಸುವುದು ತಪ್ಪು ಎಂದು ಹೇಳುವುದಿಲ್ಲ. ಇಲ್ಲಿ ಗಂಡು-ಹೆಣ್ಣು ಇಬ್ಬರೂ ಒಬ್ಬರನ್ನೊಬ್ಬರು ಅರಿತು, ಅರ್ಥಮಾಡಿಕೊಂಡು ನಡೆಯಬೇಕು. ಆದರೆ ಹೆಣ್ಣು ಮದುವೆ ಎಂಬ ಮೂರು ಗಂಟಿನ ಬಂಧನಕ್ಕೆ ಮೂರ್ಖಳಂತೆ ಬಲಿಯಾಗಿಬಿಡುತ್ತಾಳೆ. ಈ ಮದುವೆ ಎಂಬ ಬಂಧನಕ್ಕೆ ಸಿಲುಕುವ ಮುನ್ನವೇ ಪ್ರೀತಿಯೆಂಬ ಬಂಧಕ್ಕೆ ದಾಸಿಯಾಗಿಬಿಟ್ಟಿರುತ್ತಾಳೆ. ಹೆಣ್ಣು ಈ ಬಂಧನದಿಂದ ಹೊರಬರಲಾಗದಂತಹ ಒಂದು ಕೊಂಡಿಯನ್ನು ಬೆಸೆದುಕೊಂಡಿರುತ್ತಾಳೆ. ಅದುವೇ ಪ್ರೀತಿಯೆಂಬ ಕೊಂಡಿ.
ಇನ್ನೂ ಮದುವೆಯಾದ ಮೂರೇ ಮೂರು ತಿಂಗಳಲ್ಲಿಯೇ, ಇವರ ಪ್ರೀತಿ, ಪೇಮ ಒಬ್ಬರಿಗೊಬ್ಬರು ಪ್ರಾಣಕೊಡುವುದು, ಎಲ್ಲವೂ ಮಾಯವಾಗಿ ಜೀವನವೇ ಮುಗಿದ ಪುಟವಾಗಿಬಿಡುತ್ತದೆೆ. ಇಲ್ಲಿ ಇಬ್ಬರೂ ಪೆಟ್ಟು ತಿಂದರೂ, ಆದರೆ ಹೆಣ್ಣು ಮಾತ್ರ ತನ್ನ ಸ್ವಾಭಿಮಾನವನ್ನೇ ಕಳೆದುಕೊಂಡಿರುತ್ತಾಳೆ. ಇವನನ್ನು ನಿರಾಕರಿಸಿ ಹೋಗಲಾರಳು, ಹೋದರೂ, ಎಲ್ಲಿಗೆ ಹೋಗಬೇಕೆಂಬ ಪ್ರಶ್ನೆ ಅತಿಯಾಗಿ ಕಾಡುತ್ತಿರುತ್ತದೆ. ಆದರೆ ಗಂಡು ಹೇಗೂ ಗೆಳೆಯರ ಜೊತೆ ಒಂದು ಮೂರು ದಿನ ಮನೆ ಸೇರದೆ ಎಲ್ಲವನ್ನು ಮರೆತು ನೆಮ್ಮದಿಯಾಗಿರುತ್ತಾನೆ. ಆದರೆ ಹೆಣ್ಣಾದವಳು ಇದನ್ನೆಲ್ಲ ಮಾಡುವುದು ಕಷ್ಟಸಾಧ್ಯ.
ಹೆಣ್ಣು ಇಪ್ಪತ್ತು ವರ್ಷ ಅತಿ ಪ್ರೀತಿಯಿಂದ ಸಾಕಿ ಸಲುಹಿದ, ಹೆತ್ತವರನ್ನು, ಒಡಹುಟ್ಟಿದವರನ್ನು ಬಿಟ್ಟು, ಮನೆಯಿಂದ ಹೊರಬಂದಿರುತ್ತಾಳೆ. ಆ ನೋವನ್ನೇ ಸಹಿಸದ ಎಷ್ಟೋ ತಂದೆ-ತಾಯಿಯಂದರು ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳೂ ಇವೆ. ಆ ಅವಮಾನವನ್ನೆ ಆ ತಂದೆ-ತಾಯಿ, ಒಡಹುಟ್ಟಿದವರು ಮರೆತಿರುವುದಿಲ್ಲ. ಅಂತಹ ಸಮಯದಲ್ಲಿ ಇವಳು, ಬಾಳಲಾಗದೆ ಬಂದಳೆಂದರೆ ಆ ನೋವನ್ನು ಇನ್ನೂ ಸಹಿಸರೆಂಬ ಯಾತನೆ. ಅಲ್ಲದೆ ಮೊದಲಿನ ಆ ಪ್ರೀತಿ, ಮಮತೆ, ಅನುರಾಗ ನನಗಿನ್ನೂ ಸಿಗದೆಂಬ ಬಾವನೆ ಅವಳಿಗೆ. ಇಂಥ ಸಂದರ್ಭದಲ್ಲಿ ಅವಳು ತನ್ನ ಸ್ವಾಭಿಮಾನವನ್ನು ಕಳಚಿ, ಗಂಡಿನ ಕಾಲಡಿ ಹಾಕಿಬಿಡುತ್ತಾಳೆ. ಜೀವನದ ಪ್ರತಿನಿಮಿಷದಲ್ಲೂ ಸೋಲು, ಬದುಕಿಗಾಗಿ, ಮಕ್ಕಳಿಗಾಗಿ ಪ್ರತಿಯೊಂದು ಹಂತದಲ್ಲಿಯೂ ಬಿಟ್ಟುಕೊಟ್ಟು ನಡೆಯಲು ಸಿದ್ದಳಾಗುತ್ತಾಳೆ. ಅವಳು ಬಿಟ್ಟುಕೊಟ್ಟ ಕಾರಣಕ್ಕೆ ಅವನು ಗೆದ್ದಿರುತ್ತಾನೆ, ಆದರೆ ಈ ಪುರುಷ ಪ್ರಧಾನ ಸಮಾಜದಲ್ಲಿ ಗಂಡಿಗೆ ಎಷ್ಟು ಹಂ ಇರುತ್ತದೆ ಎಂದರೆ, ಅವಳು ನನ್ನ ಗುಲಾಮಳು, ನಾನು ಹೇಳಿದಂತೆ ಕೇಳಿಕೊಂಡು, ಹೇಳಿದ ಕೆಲಸ ಮಾಡಿಕೊಂಡು ಬಿದ್ದಿರುತ್ತಾಳೆ ಎಂದು ಬೀಗುತ್ತಾರೆ. ಅಲ್ಲದೆ ನನ್ನ ಬಿಟ್ಟರೆ ಅವಳಿಗೆ ಗತಿಯಾರು? ಎಲ್ಲಿ ಹೋಗುತ್ತಾಳೆ? ಅವಳಿಗಿನ್ನು ನಾನೆ ಗತಿ ಎಂಬ ದುರಾಹಂಕಾದಿಂದ ಮೆರೆಯುತ್ತಾನೆ.
ಅವನು ಅವಳನ್ನು ಸೋಲಿದಿದೆ ಎಂದು ಬೀಗುತ್ತಿದ್ದರೆ, ಅದು ಅವನ ಮೂರ್ಖತನ. ಅದು ಅವಳು ಬಿಟ್ಟುಕೊಟ್ಟಿದ್ದರಿಂದ ಅವನು ಗೆದ್ದಿದ್ದು. ಅವನಂತೆ ಇವಳೂ ಸೆಟೆದು ನಿಂತರೆ ಮಕ್ಕಳ ಗತಿಯೇನು? ಎಂಬ ಚಿಂತೆ ಅವಳಲ್ಲಿ ಕಾಡುತ್ತಿರುತ್ತದೆ. ಎಂದಾದರು ಇವಳು ನನ್ನ ನನ್ನವಳು, ನನ್ನ ನಂಬಿ ಬಂದವಳು, ಇವಳನ್ನು ಸುಖವಾಗಿ ನೋಡಿಕೊಳ್ಳುವುದು ನನ್ನ ಕರ್ತವ್ಯ ಎಂಬ ಭಾವ ಅವನಲ್ಲಿ ಬರುವುದಿಲ್ಲ. ಇಲ್ಲಿ ಅವನು ಅವಳನ್ನು ಅವನ ಬೇಕು ಬೇಡಗಳನ್ನು ತೀರಿಸುವ ಯಂತ್ರವಾಗಿ ಉಪಯೋಗಿಸಿಕೊಳ್ಳುತ್ತಾನೆ. ಅವಳ ಯಾವುದೆ ಆಸೆ, ಬೇಡಿಕೆ, ಕನಸುಗಳಿಗೆ ಅವನ ಮನದ ಮೂಲೆಯಲ್ಲಿ ಜಾಗವಿರುವುದಿಲ್ಲ ಏಕೆ?. ಯಾಕೆ ಹೀಗೆ ಮಾಡುತ್ತಿರುವೆ, ನೀನು ಇಲ್ಲದಿದ್ದರೆ ನಾನು ಸಾಯುತ್ತೇನೆಂದು, ನೀನು ಹೇಳಿದ್ದಕ್ಕೆ ತಾನೆ ನಾನು ಎಲ್ಲವನ್ನೂ, ಎಲ್ಲರನ್ನೂ ತೊರೆದು ಬಂದದ್ದು. ಹೀಗೆ ಗುಲಾಮ ಗಿರಿಯ ಜೀವನ ಕೊಡುತ್ತೀಯೆಂದು ನನಗೆ ತಿಳಿದಿದ್ದರೆ, ಖಂಡಿತ ನಾನು ಮನೆಯ ಹೊಸಿಲು ದಾಟುತ್ತಿರಲಿಲ್ಲ. ಈಗ ಅವಳ ಈ ನೋವಿಗೆ ಸ್ಪಂದಿಸುವವರಾರು ಇಲ್ಲ. ಧೈರ್ಯ ತುಂಬುವವರಿಲ್ಲ, ಯಾರಲ್ಲಿ ಹೇಳಲಿ ಈ ಯಾತನೆಯನ್ನ ಅವಳು. ಹೆಜ್ಜೆ ಹೆಜ್ಜೆಗೂ ಕೊರಗುವುದನ್ನು ಬಿಟ್ಟರೆ ಬೇರೆನು ಮಾಡುವಳು.
ಹೆಣ್ಣು ತನ್ನ ಹರೆಯದ ವಯಸ್ಸಿನಲ್ಲಿ ತನ್ನ ಮನಸ್ಸು ಹೃದಯವನ್ನು, ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದರೆ, ಇದಾವುದು ಅವಳ ಹತ್ತಿರವೂ ಸುಳಿಯುತ್ತಿರಲಿಲ್ಲ. ಆದರೆ ಈಗ ನಮ್ಮ ಹೆಚ್ಚಿನ ಯುವಕ ಯುವತಿಯರು, ಈ ಪ್ರೀತಿಯೆಂಬ ಮಾಯೆಗೆ ಸಿಕ್ಕಿಕೊಳ್ಳುತ್ತಿದ್ದಾರೆ. ಇದಕ್ಕೆ ಬಲಿಯಾದ ಎಷ್ಟೋ ಹೆಣ್ಣು ಮಕ್ಕಳು ಕತ್ತಲೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಪ್ರೀತಿ ಮಾಡಿ ತಪ್ಪಲ್ಲ. ಆ ಪ್ರೀತಿಗೆ ನಿಮ್ಮ ಹೃದಯದಲ್ಲಿ ಜಾಗ ಕೊಡಿ ತಪ್ಪ್ಪಿಲ್ಲ, ಆದರೆ ಅದರೆ ಹೊಡೆತನವನ್ನು ಮಾತ್ರ ಎಂದಿಗೂ ಬಿಟ್ಟುಕೊಡಬೇಡಿ. ನಿಮ್ಮತನ, ನಿಮ್ಮ ಹೃದಯ, ನಿಮ್ಮ ಸ್ವಾಭಿಮಾನದರಮನೆಯ ಹೊಡೆಯರು ನೀವೇ ಆಗಿದ್ದಲ್ಲಿ ಮಾತ್ರ ನಿಮ್ಮ ಈ ಜೀವನ ಎಂದಿಗೂ ಸುಖಮಯವಾಗಿರುತ್ತದೆ.
ಇಲ್ಲಿ ಹೆಣ್ಣು-ಗಂಡು ಎಂಬ ಬೇಧ-ಭಾವವಿರುವುದಿಲ್ಲ. ಪ್ರೀತಿ-ಪ್ರೇಮದ ಅಮಲಿಗೆ ಬಲಿಯಾಗಿ ನಿಮ್ಮ ಭವಿಷ್ಯವನ್ನು ನೀವೇ ಅಳಿಸಿಕೊಳ್ಳಬೇಡಿ. ಹೆತ್ತವರಿಗೂ-ಒಡಹುಟ್ಟಿದವರಿಗೂ ನೋವು ಕೊಡಬೇಡಿ. ಪ್ರೀತಿಸಿದವನ ಕಾಲಡಿಯಲ್ಲಿ ಹಾಕುವ ನಿಮ್ಮ ಸ್ವಾಭಿಮಾನವನ್ನ, ನಿಮ್ಮ ಹೆತ್ತವರ ಕಾಲಲ್ಲಿ ಒಂದೇ ಒಂದು ಕ್ಷಣ ಇಟ್ಟು ನೋಡಿ, ಅದರ ಅನುಭವಕ್ಕೂ ಈ ಅನುಭವಕ್ಕೂ ಅಜಗಜಾಂತರ ವ್ಯತ್ಯಾಸ. ಹರೆಯದ ವಯಸ್ಸಿನಲ್ಲಿ ತಪ್ಪು ಮಾಡಿ ಜೀವನವನ್ನು ಮುಳ್ಳಿನ ಹಾಸಿಗೆ ಮಾಡಿಕೊಳ್ಳಬೇಡಿ. ನಿಮ್ಮ ಭಾವನೆಗಳಿಗೆ ಸ್ಪಂಧಿಸುವ, ನಿಮ್ಮನ್ನು ಕೊನೆಯವರೆಗೂ ತನ್ನ ಬೆಚ್ಚನೆಯ ಹೃದಯದ ಗೊಡಲ್ಲಿಟ್ಟು, ಬೆಚ್ಚಗೆ ಇಟ್ಟುಕೊಂಡು, ಕಾಪಾಡುವ ಗೆಳೆಯನನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಕಾಲೇಜು ದಿನಗಳನ್ನು ಒಮ್ಮೆ ಮೆಲುಕು ಹಾಕಿದರೆ ಅಲ್ಲಿ ಖುಷಿ ಕಾಣಬೇಕೇ ವಿನಃ. ಈ ರೀತಿಯ ಸೋತ ಜೀವನ ನಿಮ್ಮದಾಗಬಾರದು. ನಿಮ್ಮ ಹೃದಯವನ್ನು ಕೈಬಿಟ್ಟು, ಅದು ಬೇರೆಯವರ ಹೊಡೆತನ ಸಾದಿಸಿದ ಮೇಲೆ, ಎಲ್ಲಿ ಕಳೆದು ಹೋಯ್ತು ನನ್ನ ಮನಸ್ಸು, ಹೃದಯವೆಂದು ಹುಡುಕುವುವ ಮುನ್ನವೇ ಎಚ್ಚೆತ್ತುಕೊಳ್ಳಿ. ನಿಮ್ಮ ಮನಸ್ಸು ಹೃದಯಗಳೆರಡು ನಿಮ್ಮಲ್ಲೆ ಇರಲಿ, ಅದರೆ ಹೊಡೆತನವೂ ನಿಮ್ಮದಾಗಿರಲಿ.






ಪ್ರೀತಿ-ಪ್ರೇಮದ ಅಮಲಿಗೆ ಬಲಿಯಾಗಿ ನಿಮ್ಮ ಭವಿಷ್ಯವನ್ನು ನೀವೇ ಅಳಿಸಿಕೊಳ್ಳಬೇಡಿ. ಹೆತ್ತವರಿಗೂ-ಒಡಹುಟ್ಟಿದವರಿಗೂ ನೋವು ಕೊಡಬೇಡಿ. ಪ್ರೀತಿಸಿದವನ ಕಾಲಡಿಯಲ್ಲಿ ಹಾಕುವ ನಿಮ್ಮ ಸ್ವಾಭಿಮಾನವನ್ನ, ನಿಮ್ಮ ಹೆತ್ತವರ ಕಾಲಲ್ಲಿ ಒಂದೇ ಒಂದು ಕ್ಷಣ ಇಟ್ಟು ನೋಡಿ etc…… are an eye catching lines… this article indeed shows the thoughts from a matured mind.
Badukina haadi savesidanthellaa…..manasu pakkva gollutte helikollalaarada enthado ondu anubhava matthu jaagruti moodibidutthe. aanthahaa one pakkva gonda manasige ee preeti prema matthu badukina ithare bhaandvyagala ore haacchi aksharagalannagisidare mooduvudu inthahan ondu sundara saalugalu.
Nimba prabudda baravanigege abhinandanegalu.
dhanyavaadagalu nandhu avare…
tumba uttama baraha, best of luck sujatha