ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಯಾಕೆ ಕೇಳ್ತೀರಿ ನಮ್ ಜಾಗರಣೆ ಕಥೆ’ – ಸ್ಮಿತಾ ಹೇಳ್ತಾರೆ

ಸ್ಮಿತಾ ಅಮೃತರಾಜ್

ಶಿವಪ್ಪಾ.. ಕಾಯೋ ತಂದೆ ಮೂರು ಲೋಕದ ಸ್ವಾಮಿ ನೀನು..ಶಿವ ಶಿವ ಎಂದರೆ ಭಯವಿಲ್ಲ..ಶಿವ ನಾಮಕೆ ಸಾಟಿ ಬೇರಿಲ್ಲಾ..ಹೀಗೆ ಒಂದರ ಮೇಲೊಂದು  ಶಿವನನ್ನು ಸ್ತುತಿಸುತ್ತಾ, ತಳ್ಳು ಗಾಡಿಯಲ್ಲಿ ಎರಡೂ ಕಾಲಿಲ್ಲದ ಬಿಕ್ಷುಕನೊಬ್ಬ ಪ್ರತಿನಿತ್ಯ ಭಾವಪರವಶತೆಯಿಂದ ಹಾಡುತ್ತಾ ಬಿಕ್ಷೆ ಯಾಚಿಸುತ್ತಿದ್ದ. ಹೈಸ್ಕೂಲಿಗೆ ಬಸ್ಸಿನಲ್ಲಿ ಹೋಗ್ತಾ ಇರಬೇಕಾದ್ರೆ ಬಸ್ಸು ನಿಲ್ದಾಣದಲ್ಲಿ, ಪ್ರತೀ ಬೆಳಗು ಸಂಜೆ ಆ ಹಾಡು ಕೇಳಿ ಕೇಳಿ ನನಗೆ ಬಾಯಿ ಪಾಠ ಆಗಿಬಿಟ್ಟಿತ್ತು. ಮತ್ತು ಆ ಪದ್ಯ ನನ್ನನ್ನ ಎಷ್ಟು ಆವರಿಸಿ ಬಿಟ್ಟಿತ್ತೆಂದರೆ, ಒಂದು ದಿನ ಆ ಪದ ಕೇಳದೇ ಹೋದರೂ ಏನೋ ಕಳಕ್ಕೊಂಡ ಭಾವ. ಅವನೋ ಎಷ್ಟು ಸುಶ್ರಾವ್ಯವಾಗಿ ಹಾಡ್ತಾ ಇದ್ದ ಅಂದ್ರೆ, ಆ ಹಾಡು ಕೇಳಿಯಾದರೂ ಶಿವನೇ ಅವನಿಗೆರಡು ಕಾಲಾದರೂ ದಯಪಾಲಿಸಬಾರದಾ? ಅಂತ ನಾನು ಅದೆಷ್ಟೋ ಬಾರಿ ಮನದೊಳಗೆ ನೆನೆದುಕೊಳ್ಳುತ್ತಿದ್ದೆ. ಇವತ್ತಿಗೂ ಅಷ್ಟೆ, ಯಾವುದಾದರೊಂದು ಹಾಡು ಗುನುಗುವಾಗ ಸಾಮಾನ್ಯವಾಗಿ ಹೆಚ್ಚಾಗಿ ಗುನುಗುಟ್ಟೋದು ಇದೇ ಹಾಡನ್ನ. ಮುಂದೆ ಮಕ್ಕಳಿಗೆ ಜೋಗುಳ ತೂಗುವಾಗ ಕೂಡ ಅದೇ ಪದ್ಯ ಪದೇ ಪದೇ ಹಾಡಿ ನಗೆ ಪಾಟಲಿಗೀಡಾಗಿದ್ದೆ. ಇವತ್ತಿಗೂ ಆ ಪದ್ಯ ಕೇಳುವಾಗಲೆಲ್ಲಾ ಶಿವನ ರೂಪ ಕಣ್ಣೆದಿರು ಬರುವ ಬದಲು, ತಳ್ಳು ಗಾಡಿ ಮತ್ತು ಕಾಲಿಲ್ಲದ ಬಿಕ್ಷುಕನ ಮುಖವೇ ಕಂಡಂತಾಗುತ್ತದೆ. ಶಿವರಾತ್ರಿ ಹಬ್ಬ ಸಮೀಪಿಸುತ್ತಿದೆ.. ತಟ್ಟನೆ ಈ ಪದ್ಯ ನೆನಪಾಗಿಬಿಟ್ಟಿತು.

ಹಬ್ಬ ಹತ್ತಿರಬಂದತೆಲ್ಲಾ, ದೇವಸ್ಥಾನಗಳಲ್ಲಿ ಶಿವನಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಶುರುವಾಗುವ ಸಂಭ್ರಮ ಕೇಳುತ್ತಿದ್ದಂತೆ, ಇಷ್ಟು ದಿನ ಮರೆತೇ ಹೋದಂತಿದ್ದ ಶಿವನನ್ನು ಮತ್ತೆ ಒಂದಷ್ಟು ದಿನ ಇನ್ನಿಲ್ಲದ ಭಯ ಭಕ್ತಿ ಭಾವದಿಂದ ನೆನಪಿಸಿಕೊಳ್ಳುತ್ತಾ ಪೂಜಿಸಲು ತೊಡಗುತ್ತೇವೆ. ಭಾರತೀಯ ಹಬ್ಬಗಳ ಮಹಿಮೆಯೆ ಅಂತದ್ದು. ಶಿವರಾತ್ರಿ ಹಬ್ಬ ಬಂದಾಗ ಹೀಗೆ ಒಂದಷ್ಟು ಹೆಚ್ಚಿಗೆ ನೆನಪುಗಳು ಜಮೆಯಾಗುವುದಕ್ಕೆ ನನಗೆ ಇನ್ನೂ ಬೇಕಾದಷ್ಟು ಕಾರಣಗಳಿವೆ. ಶಿವರಾತ್ರಿ ದಿನ ಜಾಗರಣೆ ಮಾಡಿದರೆ ಬದುಕಿನಲ್ಲಿ ಬಾರೀ ಒಳ್ಳೆದಾಗುತ್ತೆ ಅನ್ನೋ ಭಾವನೆ ಇವತ್ತಿಗೂ ಇದೆ. ಬರೇ ಒಂದು ದಿನ ನಿದ್ದೆ ಕೆಟ್ಟು  ಬದುಕನ್ನು ಹಸನು ಮಾಡಿಕೊಳ್ಳಲ್ಲಿಕ್ಕೆ ಯಾರಿಗೆ ತಾನೇ ಇಷ್ಟವಾಗೊಲ್ಲ? ಹಾಗಾಗಿ ಎಲಿಮೆಂಟರಿ ಶಾಲೆಗೆ ಹೋಗುವಾಗ , ನಾವು ಮಕ್ಕಳೆಲ್ಲರೂ ಸೇರಿ ಜಾಗರಣೆ ಮಾಡಬೇಕೆಂದು ತೀರ್ಮಾನಿಸಿಕ್ಕೊಂಡಿರುತ್ತಿದ್ದೆವು. ಉಪವಾಸ ಮಾಡಿ, ಶಿವ ನಾಮಸ್ಮರಣೆ ಮಾಡುತ್ತಾ ಕುಳಿತುಕೊಳ್ಳುವ ವಯಸ್ಸು ಅದಾಗಿರಲಿಲ್ಲ. ಜೊತೆಗೆ ಅದಕ್ಕೆ ಬೇಕಾದ ಮನಸ್ಸು ಕೂಡ ಪಕ್ವವಾಗಿರಲಿಲ್ಲ. ಉಪವಾಸ, ಧ್ಯಾನ ಬಿಟ್ಟು ಉಳಿದಂತೆ ಜಾಗರಣೆ ಮಾಡಲು ನಾವು ತಯಾರಿದ್ದೆವು. ಆಗ ತಾನೇ ನಮ್ಮ ಹಳ್ಳಿಯಲ್ಲಿ ಹೊಸದಾಗಿ ನಿರ್ಮಾಣಗೊಂಡ ಒಂದೇ ಒಂದು ಶಿವ ದೇವಸ್ಥಾನ ಇತ್ತು. ಶಿವರಾತ್ರಿ ದಿನ ಅಲ್ಲಿ ಭಜನೆ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ಅದೊಂದು ಕಾರಣ ಕಟ್ಟಿಕ್ಕೊಂಡು ಅಲ್ಲಿನ ಡಾನ್ಸ್ ಪ್ರೋಗ್ರಾಮ್ಗೆ ನಮ್ಮದೇ ದಂಡು. ಆ ನೆಪದಲ್ಲೊಂದು ನಮ್ಮ ಜಾಗರಣೆ ಜರುಗಿಬಿಡುತ್ತಿತ್ತು. ಮತ್ತೆ ನಾಳೆ ಶಾಲೆಯಲ್ಲಿ ತರಗತಿಯೊಳಗೆ ನಿದ್ದೆ ತೂಗಿದರೆ, ಜಾಗರಣೆಯ ಮಹಿಮೆ ಎಲ್ಲರಿಗೂ ತಿಳಿದು ಪಾಠವೂ ರದ್ದಾಗಿಬಿಡುತ್ತಿತ್ತು. ಶಿವರಾತ್ರಿಯ ಮಾರನೇ ದಿನವೇ ಶಿವನ ಕೃಪಕಟಾಕ್ಷ ನಮ್ಮ ಮೇಲೆ ಬಿದ್ದಿದೆಯೆಂಬುದಕ್ಕೆ ಮೊದಲ ಸಾಕ್ಷಿಯೇ ಸಾಕಾಗಿತ್ತು!

ಇನ್ನು ನಾವು ಬಾಲ್ಯದಲ್ಲಿ, ಶಿವರಾತ್ರಿ ದಿನ ವೇಷ ಕಟ್ಟಿಕ್ಕೊಂಡು, ಮನೆ ಮನೆಗೆ ಹೋಗಿ ಹಾಡಿ, ನರ್ತಿಸಿ, ನಗಿಸಿ ಬರುವ ಪರಿಪಾಠ ಇತ್ತು. ಹಾಗೇ ಹೋಗಿ ಅಷ್ಟೆಲ್ಲಾ ಮಾಡಿ ಬಂದದಕ್ಕೆ ನಮ್ಮನ್ನು ಯಾವ ಮನೆಯವರೂ ಪುಕ್ಕಟೆ ಕಳಿಸುತ್ತಿರಲಿಲ್ಲ. ಅಸಲಿಗೆ  ನಾವು ವೇಷ ಕಟ್ಟಿಕ್ಕೊಂಡು ಅಣಿಯಾಗುತ್ತಿದ್ದ ಮುಖ್ಯ ಕಾರಣವೂ ಇದೆ. ಹೋಗುವಾಗ ಒಂದು ಜೋಳಿಗೆಯಂತಹ ಚೀಲವೂ ಬಿಗಿಯಾಗಿ ಜಿಪ್ ಇರುವ ಪರ್ಸನ್ನೂ ಜೊತೆಗೇ ಕೊಂಡೊಯ್ಯುತ್ತಿದ್ದೆವು. ಜೋಳಿಗೆಗೆ ಒಂದಷ್ಟು ಅಕ್ಕಿ, ಬೆಲ್ಲ ಮತ್ತು ಹತ್ತೋ ಇಪ್ಪತ್ತೋ ಪೈಸೆ ಬೀಳುತ್ತಿತ್ತು. ಅಕ್ಕಿಯೊಳಗೆ ಬಿದ್ದ ಚಿಲ್ಲರೆಯನ್ನ ಆಗಲೇ ಮುತುವರ್ಜಿವಹಿಸಿ ಜಿಪ್ಪ್ ಇರುವ ಪರ್ಸ್ ಗೆ ರವಾನಿಸಿ ಬಿಡುತ್ತಿದ್ದೆವು. ಹೆಚ್ಚು ಪೈಸೆ ಕೊಟ್ಟ ಮನೆಯವರ ಗುಣಗಾನ ದಾರಿಯುದ್ದಕ್ಕೂ ಸಾಗುತ್ತಿತ್ತು. ಶಿವರಾತ್ರಿ ಹಬ್ಬಕ್ಕೆ ಇನ್ನೊಂದೆರಡು ದಿನ ಬಾಕಿ ಇದೆ ಅನ್ನುವಾಗಲೇ ನಮ್ಮ ಸಿದ್ಧತಾ ಕಾರ್ಯ ಜಾರಿಗೊಳ್ಳುತ್ತಿತ್ತು. ಮನೆಯಿಂದ, ಅಕ್ಕಪಕ್ಕದವರಿಂದ ಕಾಡೀ ಬೇಡಿ ಸೀಮೆ ಎಣ್ಣೆ ಗಿಟ್ಟಿಸಿಕ್ಕೊಂಡು, ಒಂದು ಸೀಮೆ ಎಣ್ಣೆ ದೀಪದ ಬುಡ್ಡಿ ತಯಾರು ಮಾಡುತ್ತಿದ್ದೆವು. ಆಮೇಲೆ  ಆ ನಡುರಾತ್ರಿಯಲ್ಲಿ ದಾರಿಯಲ್ಲಿ ಎಲ್ಲಾದರೂ ಎಣ್ಣೆ ಮುಗಿದೀತು ಎಂಬ ಮುಂಜಾಗುರುಕತೆಯಿಂದ ಮತ್ತೊಂದು ಕುಪ್ಪಿಯಲ್ಲಿ ತುರ್ತು ಸಂಧರ್ಭ ಬಂದಾಗ ಇರಲೆಂದು ಚೀಲದ ಮೂಲೆಯಲ್ಲಿ  ಬಚ್ಚಿಡುತ್ತಿದ್ದೆವು. ಹಬ್ಬದ ದಿನ ಇನ್ನೇನು ಕತ್ತಲು ಕವಿಯಿತು ಅನ್ನುವಾಗಲೇ ಮನೆಯವರ ಕೂಡೇ ಬರೇ ನಾಲ್ಕು ಮನೆ ಸುತ್ತಿಕ್ಕೊಂಡು ಬರುತ್ತೇವೆ ಅಂತ ಹೇಳಿ ಹೊರಡುವುದು ಬರೇ ಬಾಯಿ ಮಾತಿಗಷ್ಟೆ. ಮತ್ತೆ ಸುತ್ತಿ ಸುಳಿದು ಬಸವಳಿದು ಹಿಂದಿರುಗುವುದು ಬೆಳಗಿನ ಮೊದಲ ಜಾವಕ್ಕೆ ಅಂತ ನಮಗೂ ಗೊತ್ತಿತ್ತು. ಜೊತೆಗೆ ಮನೆಯವರಿಗೂ ಕೂಡ.

ಹೊರಡುವಾಗ ಧೈರ್ಯಕ್ಕೆಂದು ಆರು ಮಂದಿ ಗುಂಪಿನಲ್ಲಿ ಹೊರಡುವ ನಾವುಗಳು, ಪ್ರತೀ ಮನೆಯಂಗಳಕ್ಕೆ ಕಾಲಿಡುವಾಗ ಮೂರು ಮೂರು ಮಕ್ಕಳಂತೆ ವಿಂಗಡಿಸಿಕ್ಕೊಂಡು ನರ್ತಿಸಿ ಬರುತ್ತಿದ್ದೆವು. ಕಾರಣ ಇಷ್ಟೆ. ಆರು ಜನ ಒಮ್ಮೆಗೇ ಡಾನ್ಸ್ ಮಾಡಿದರೆ ಸಿಗುವ ದಾನ ದಕ್ಷಿಣೆ, ಹಂಚಿಕ್ಕೊಂಡು ಮಾಡಿದರೆ ಅದರ ಎರಡು ಪಾಲು ದೊರೆಯುತ್ತದೆಯೆಂಬ ನಮ್ಮ ಗುಳ್ಳೆ ನರಿ ಯೋಚನೆ. ಯಾರೂ ಕೂಡ ಇಂತವರ ಮನೆ ಮಕ್ಕಳು ಅಂತ ಸುಲಭದಲ್ಲಿ ಪತ್ತೆ ಹಚ್ಚದಂತೆ, ಮುಖಕ್ಕೆ ಮಸಿಯ ಮೇಕಪ್ಪು ಬಳಿದುಕ್ಕೊಂಡು ಹೊಸ ವೇಷದಲ್ಲಿ ಸಿದ್ಧಗೊಳ್ಳುತ್ತಿದ್ದೆವು. ಹೊಳೆ ದಾಟಿ, ಕಾಡು ಹೊಕ್ಕಿ, ಬೆಟ್ಟದಾರಿ ಹತ್ತಿ ಇಳಿದು ನಮ್ಮ ದಂಡು ದಿಗ್ವಿಜಯಕ್ಕೆ ಹೊರಡುತ್ತಿತ್ತು. ಹೀಗೆ ನಮ್ಮಂತೆ ದಿಗ್ವಿಜಯಕ್ಕೆ ಹೊರಟ ದಂಡುಗಳು ನಮಗೆ ಇದಿರಾಗುತ್ತಿದ್ದರೂ, ಆ ಕತ್ತಲ ಹಾದಿಯಲ್ಲಿ ನಮ್ಮ ವೇಷದ ಮಹಿಮೆಯಿಂದ ನಮ್ಮ ಗುರುತು ಹತ್ತುತ್ತಿರಲಿಲ್ಲ. ಆದರೆ  ಹೀಗೆ  ಪದ ಹೇಳುತ್ತಾ ನರ್ತಿಸುತ್ತಾ ಸಹಪಾಠಿ ಹುಡುಗಿಯ ಅಂಗಳಕ್ಕೆ ನುಗ್ಗಿದಾಗ , ಏಕ್ ದಂ ಅವಳು ಒಮ್ಮೆಗೇ ನನ್ನ ಪತ್ತೆ ಹಚ್ಚಿ, ಇವಳೇ ನಾನು ಸಣ್ಣಗೆ ಮಾತಾಡಿದ್ದಕ್ಕೆ ಬೋರ್ಡ್ ನಲ್ಲಿ ದೊಡ್ಡದಾಗಿ ನನ್ನ ಹೆಸರು ಬರೆದು ಟೀಚರ್ ಕೈಯಿಂದ ಪೆಟ್ತು ತಿನ್ನಿಸಿದ್ದು ಅಂತ ಅಮ್ಮನ ಜೊತೆ ಪಿಸಿ ಪಿಸಿ ಚಾಡಿ ಹೇಳಿ, ಅಷ್ಟಕ್ಕೆ ಅವಳಮ್ಮನ ಕರಳು ಚುರುಕ್ ಎಂದು, ನನಗೆ ಜೋರು ಮಾಡಿ ಜೋಳಿಗೆಗೆ ಏನೂ ಹಾಕದೆ ಹಾಗೇ ಓಡಿಸಿಬಿಟ್ಟಿದ್ದರು.

ಸಾಮಾನ್ಯವಾಗಿ ಫೆಬ್ರವರಿ ತಿಂಗಳ ಕೊನೇಯ ಹೊತ್ತಿಗೆ ಈ ಹಬ್ಬ ಬರುವುದರಿಂದ, ನಮಗೆ ಹೆಚ್ಚಿನದಾಗಿ ಯಾವುದೇ ತಯಾರಿ ನಡೆಸುವ ಪ್ರಮೇಯ ಬರುತ್ತಿರಲಿಲ್ಲ. ಅದಾಗಲೇ ಕಳೆದ ಡಿಸೆಂಬರ್ನಲ್ಲಿ ಸ್ಕೂಲ್ ಡೇ ಗೆ ಮಾಡಿದ ಪ್ರಾಕ್ಟೀಸೇ ಇನ್ನೂ ನೆನಪಿರುತ್ತಿತ್ತು. ಹಾಡಿದ ಹಾಡನ್ನೇ ಹಾಡಿ ಗಂಟಲು ಬಿದ್ದು ಹೋದರೂ, ಮಾಡಿದ ಡಾನ್ಸನ್ನೇ ಮಾಡಿ ಕಾಲು ಸೋತು ಹೋದರೂ ಇದ್ಯಾವುದರ ಕಡೆಗೆ ನಮ್ಮ ಗಮನವೇ ಇಲ್ಲ. ಆದರೆ ಪ್ರತೀ ಮನೆಗೂ ಮಕ್ಕಳ ಸೈನ್ಯ ಠಳಾಯಿಸಿ ಅದೇ ತಾಳಕ್ಕೆ ಅದೇ ಹೆಜ್ಜೆ ಕೂಡಿಸಿ ಎಷ್ಟು ಬೋರು ಹೊಡೆಸಿತೋ ಗೊತ್ತಿಲ್ಲ, ಆದರೂ ಇದೊಂದು ಮಾಮೂಲಿ ಪದ್ಧತಿ ಆದಕಾರಣ  ಅವರ್ಯಾರೂ ಇನಿತೂ ಬೇಸರಿಸಿಕೊಳ್ಳದೆ, ಚೆಂದ ಮಾಡಿದವರಿಗೆ ಹತ್ತು ಪೈಸೆ ಹೆಚ್ಚಿಗೆ ದಕ್ಷಿಣೆ ಅವರ ಕೈಗೇ ಬಂದು ಬೀಳುತ್ತಿತ್ತು. ಆಗೆಲ್ಲಾ ನನ್ನಿಂದಾಗಿಯೇ ಇವತ್ತು ಹೆಚ್ಚು ಕಲೆಕ್ಷನ್ ಆದದ್ದು ಅಂತ ನಮ್ಮ ಸಣ್ಣವರೊಳಗೆ ಇಂತ ದೊಡ್ದತನಗಳು ಗೋಚರಿಸಿ ಅಹಂ ಪಟ್ಟುಕೊಳ್ಳುತ್ತಿದ್ದೆವು. ಒಮ್ಮೆ ಶಿವರಾತ್ರಿಯಂದು ತಿರುಗುತ್ತಾ ತಿರುಗುತ್ತಾ ನಮ್ಮ ಶಾಲೆಯ  ಮುಖ್ಯೋಪಧ್ಯಾಯಿನಿಯವರ ಮನೆ ಅಂಗಳಕ್ಕೇ  ಬಂದು ನಿಂತು ಭತ್ತಾ..ಭತ್ತಾ..ಅಂತ  ನರ್ತಿಸಲು ಶುರುಮಾಡಿಬಿಟ್ಟೆವು. ಟೀಚರಮ್ಮನಿಗೆ ಗುರುತು ಹತ್ತಿ , ಸ್ಕೂಲ್ ಡೇ ಪ್ರೋಗ್ರಾಮ್ಗಿಂತ ಚೆಂದ ಮಾಡಿರುವೆ ಅಂತ ಶಹಭಾಶ್ಗಿರಿ ಕೊಟ್ಟು ಅವತ್ತಿನ ದೊಡ್ಡ ಪೈಸೆ  ಒಂದು ರೂಪಾಯಿಯನ್ನು ಕೊಟ್ಟದ್ದು ನೆನೆದರೆ, ಅವತ್ತಿಗೂ ಇವತ್ತಿಗೂ ದೊಡ್ದ ವಿಶೇಷವೇ.

ಇದರ ನಡುವೆ ನಮ್ಮದು ಇನ್ನಷ್ಟು ಕಿತಾಪತಿಗಳೂ ಇರುತ್ತಿದ್ದವು. ಕೆಲವೊಮ್ಮೆ ಕೊಟ್ಟ ಚಿಲ್ಲರೆ ತೀರಾ ಕಡಿಮೆ ಆಯಿತು ಅಂತಲೋ, ಅಥವ ಕುಪ್ಪಿಯಲ್ಲಿ ಸೀಮೆಣ್ಣೆ ಮುಗಿದು ಹೋಗಿದೆ ಅಂತಲೋ ಸುಳ್ಳು ಸುಳ್ಳೇ ನಾಟಕವಾಡಿ ಅವನ್ನೆಲ್ಲಾ ತಕ್ಕಷ್ಟು ಮಟ್ಟಿಗೆ ಗಿಟ್ಟಿಸಿಕೊಳ್ಳುತ್ತಿದ್ದೆವು. ಹಾಗೆಲ್ಲಾ ಡೋಂಗಿ ಮಾಡಿದರೂ ಆ ದಿನ ನಮಗೆ ಅಪರಾಧಿ ಪ್ರಜ್ನೆ ಕಾಡುತ್ತಲೇ ಇರಲಿಲ್ಲ. ಯಾಕೆಂದರೆ ಆ ದಿನ ಕಳ್ಳತನ ಮಾಡಿದರೂ ದೇವರು ಮನ್ನಿಸಿಬಿಡುತ್ತಾನೆ ಅಂತ ನಂಬಿಕೆ ಇರುವಾಗ, ಇನ್ನು ನಾವು ಹೇಳುವ ಚಿಲ್ಲರೆ ಸುಳ್ಳಿನಿಂದ ಅಂತಹ ಅನಾಹುತವೇನೂ ಆಗಲಾರದು ಅಂತ ಗಟ್ಟಿ ಧೈರ್ಯ ನಮಗೆ. ಊರೆಲ್ಲಾ ಪ್ರದಕ್ಷಿಣೆ ಹಾಕಿ ಬೆಳಗಿನ ಜಾವಕ್ಕೆ ಮನೆ ಸೇರುವಾಗ ಮಾತ್ರ ತೆಂಗಿನ ಮರ ಹತ್ತಿ ಎಳನೀರು ಕುಡಿದಿರುವುದು, ಗಿಡದಲ್ಲಿ ತುಂಬಿ ತುಳುಕುತ್ತಿದ್ದ ಹಣ್ಣುಗಳು ಒಂದೂ ಬಿಡದೆ ಖಾಲಿಯಾಗಿರುವುದು, ಚೆಂದದ ಹೂವಿನ ಗಿಡಗಳ ಟೊಂಗೆ ಮುರಿದಿರುವುದು  ಕಾಣುವಾಗಲೆಲ್ಲಾ, ನಮ್ಮ ತಪ್ಪುಗಳೆಲ್ಲಾ ಮೂಲೆ ಸೇರಿ ಅವರನ್ನೆಲ್ಲಾ ಮನಸ್ಸಿನಲ್ಲೇ ಶಪಿಸುತ್ತಾ ನಿದ್ದೆಗೆ ಜಾರಿಬಿಡುತ್ತಿದ್ದೆವು. ಒಂದು ಕೋಳಿ ನಿದ್ದೆ ಮಾಡಿ ಎದ್ದೊಡನೇ ಎಲ್ಲ ಮರೆತವರಂತೆ ಎದ್ದು ಸ್ನಾನ ಮಾಡಿ ಹೊಳೆ ಬದಿಯಲ್ಲಿ ಒಲೆ ಹಾಕಿ, ಸಿಕ್ಕ ಅಕ್ಕಿ ಬೆಲ್ಲದಿಂದ ಪಾಯಸ ಮಾಡಿ ತಿಂದು, ಸಿಕ್ಕ ಚಿಲ್ಲರೆ ಹಣವನ್ನು ಎಣಿಸಿ ಎಣಿಸಿ ಪಾಲು  ಹಂಚಿಕೊಳ್ಳುತ್ತಿದ್ದ ನೆನಪು ಈ ಶಿವರಾತ್ರಿಯವರೆಗೂ ಬಂದು  ಸುತ್ತಿ ಸುಳಿದು ಹೋಗುತ್ತಿದೆ.

ಆಗೆಲ್ಲಾ ನಾವು ಅಷ್ಟೊಂದು ಹೆಣ್ಣ್ಮಕ್ಕಳು, ರಾತ್ರೆಯಿಡೀ ಊರು ಕೇರಿ ಸುತ್ತಿ ಬಂದರೂ ಸುರಕ್ಷಿತವಾಗಿ ಮನೆ ತಲುಪಿದ್ದು ನೆನೆದರೆ ಈಗ  ಆಶ್ಚರ್ಯ ಚಿಹ್ನೆ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಮೋಜಿಗಾಗಿ, ತಮಾಷೆಗಾಗಿ ನಡೆಯುತ್ತಿದ್ದ ಸಣ್ಣಪುಟ್ಟ ಕಳ್ಳತನಗಳು ಬಿಟ್ಟರೆ, ಉಳಿದಂತೆ ಯಾವುದೇ ಅಪರಾಧ, ಅನಾಹುತಗಳು ನಡೆಯದೇ ಇರುತ್ತಿದ್ದದ್ದು ಅವತ್ತಿನ ಜಾಗರಣೆಯ ಮಹಿಮೆಯೆ ಏನೋ? ಈಗ ಈ ರೀತಿಯಾದ ಒಂದು ಸನ್ನಿವೇಷ ಮತ್ತು ವಾತಾವರಣ ನಮಗೆ ಎದುರಾಗಬಹುದೇ? ಅಥವಾ ನಾವು ಸಂಭ್ರಮಿಸಿದ ಸಂಭ್ರಮದ ಪರಂಪರೆಯನ್ನು ನಮ್ಮ ಮಕ್ಕಳೂ ಮುಂದುವರಿಸಿಕೊಂಡು ಹೋಗಲಿ ಅಂತ ತೀರ್ಮಾನಿಸುವಷ್ಟು ಧೈರ್ಯ ಇವತ್ತು ನಮ್ಮ ಪಾಲಿಗಿದೆಯಾ? ಇಡೀ ರಾತ್ರೆ ಕಾರ್ಟೂನ್ ನೆಟ್ವರ್ಕ್ ಹಾಕೊಂಡು ಟಿ.ವಿ.ಮುಂದೆ ಕುಕ್ಕರು ಬಡಿದರೂ ಪರವಾಗಿಲ್ಲ. ಶಿವರಾತ್ರೆಗೆ ವೇಷ ಕಟ್ಟಿಸಿ ತಯಾರು ನಡೆಸುವ ದೈರ್ಯ ಮತ್ತು ಇರಾದೆ ಯಾರಿಗೂ  ಈ ಹೊತ್ತಿನಲ್ಲಿ ಇರಲಿಕ್ಕಿಲ್ಲ ಅಂತ ಅನ್ನಿಸುತ್ತದೆ.

‍ಲೇಖಕರು avadhi

27 February, 2014

4 Comments

  1. Badarinath Palavalli

    ಶಿವರಾತ್ರಿಯ ಜಾಗರಣೆಯ ಸುಲಲಿತ ಅನಾವರಣ!

  2. Anonymous

    gud article

  3. mmshaik

    ballyada nenapugaLondige indina vishamaya khasNagaLnnu kattikottu vasatavada shtitiyannu bimbisiddu naavenu kaLedukoLLuttiddeve ennuvudannu tumba chennaagi manana madisiddiri..ollyeya baraha smita..!!!

  4. Sumi

    good……..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading