-ಯಶಸ್ವಿನಿ ಶ್ರೀಧರ ಮೂರ್ತಿ
ಮಧುರಾನುಭೂತಿಯ ಅನುರಾಗ
ಉಸಿರ ಹಾಡಿನಲೆಯಲಿ ತೇಲಿ ಬರುವ ಪರಾಗ
ಚಿತ್ತ ಭಿತ್ತಿಯಲಿ ಲಯ ಲಾಸ್ಯ ಶೃಂಗಾರ ರಾಗ
ಬಿಟ್ಟೂ ಬಿಡದೆ ಕಾಡುವ ಲೆಕ್ಕಗಳ ಚುoಗು
ಹೊತ್ತು ವೇಳ್ಯದ ಪರಿವೆಯಿರದೆ ನಶೆಯೇರಿಸುವ ಗುಂಗು
ಫಕ್ಕನೆ ಹೊಳೆವ ಉತ್ತರದ ಮಿನುಗು
ಗಣಿತದ ನಂಟು ಜನುಮಕಂಟಿದ ಬ್ರಹ್ಮಗಂಟು
ಬಾಳ ವರ್ತುಲದಿ ತಳುಕುಗೊಂಡ ನವಿರು ತಂತು
ನೋವಿಗೂ ನಲಿವಿಗೂ ನೇವರಿಸುವ ಆಪ್ತ ಸ್ಪರ್ಶದ ಬೆರಳು
ಗಣಿತ ಪಯಣ ಅಂಕ ಗಳಿಕೆಯ ಹೋರಾಟವಲ್ಲ
ಸೋಲು ಗೆಲುವಿನ ಜಿದ್ದಾ ಜಿದ್ದಿಯೂ ಅಲ್ಲ
ಅದು ಜೀವನ ವಿಧಾನ ಆತ್ಮಾನುಸಂಧಾನ
ಮನದ ಜಗುಲಿಯಲಿ ಪ್ರೀತಿಯ ರಂಗೋಲಿ ಬಿಡಿಸಿ
ಅಕ್ಕರೆಯಿಂದ ಬರಮಾಡಿಕೊಳ್ಳಬೇಕು ಅಂಕಿ ಸಂಖ್ಯೆಗಳನು
ಕಕ್ಕುಲಾತಿಯಿಂದ ಒಲಿಸಿಕೊಳ್ಳಬೇಕು
ಮುನಿಸು ತೋರುವ ಸಮೀಕರಣಗಳನು
ಮೌನ ಧ್ಯಾನದಲಿ ಪ್ರಾರ್ಥಿಸಬೇಕು
ಅಸೀಮ ಜ್ಞಾನ ಸಿಂಧುವಿನ
ಬಿಂದು ಬಿಂದುಗಳನು
ಸಹನೆಯ ಸೂತ್ರದಿಂದ ಸoಭಾಳಿಸಬೇಕು
ರಚ್ಚೆ ಹಿಡಿದು ತುಂಟಾಟವಾಡುವ
ಒಲವ ಚಿಹ್ನೆಗಳ ಚರಾಕ್ಷರಗಳನು
ಜತನವಾಗಿ ಕಾಪಿಡಬೇಕು
ಎದೆಯ ಬೀದಿಯಲಿ ಅಪರೂಪಕ್ಕೊಮ್ಮೊಮ್ಮೆ ಸಂಚರಿಪ
ಅನಂತ ರೇಖೆಗಳನು
ಶ್ರದ್ಧೆ ಮಂತ್ರವ ಪಠಿಸುತ
ಅನುದಿನ ಅನುಕ್ಷಣ ಆರಾಧಿಸಬೇಕು
ಅಗಣಿತ ಪರಿಕಲ್ಪನೆಗಳನು
ಗಣಿತ ಸಾಂಗತ್ಯದಿ ಒಪ್ಪವಾಗಲಿ ಬದುಕು
ಅನುಗಾಲ ಒಲಿಯಲಿ ಒಲುಮೆ ವರವು






0 Comments