ಯಕ್ಷಪ್ರಶ್ನೆ!

ಆಕಾಂಕ್ಷಾ ಶೇಖರ್

ಪಾಂಡವರು ವನವಾಸದಲ್ಲಿದ್ದಾಗ ಧರ್ಮರಾಯನ ಧರ್ಮನಿಷ್ಠೆಯನ್ನು ಜಗಜ್ಜಾಹೀರು ಮಾಡಲೆಂದು ಯಕ್ಷರಾಜನ ರೂಪದಲ್ಲಿ ದರ್ಶನ ಕೊಟ್ಟ ಯಮಧರ್ಮರಾಯ ಆತನಿಗೆ ವಿವಿಧ ಪ್ರಶ್ನೆಗಳ ಸುರಿಮಳೆಗೈದು ಉತ್ತರಗಳನ್ನು ಪಡೆದು ಕೃತಾರ್ಥನಾದ ಕಥೆ ನಮಗೆಲ್ಲರಿಗೂ ಗೊತ್ತೇ ಇದೆ.

ಧರ್ಮದ ಸಾರ ಮತ್ತು ಬದುಕಿನ ಆಳವನ್ನು ಜನಸಾಮಾನ್ಯರಿಗೆ ಸುಲಭವಾಗಿ ಆರ್ಥೈಸಲು ಯಕ್ಷರಾಜ ಧರ್ಮರಾಯನಿಗೆ ದ್ವಾಪರ ಕಾಲದಲ್ಲಿಯೇ ಪ್ರಶ್ನೆಗಳ ಮಹಾಪೂರಗೈದಿದ್ದರು. ಅಷ್ಟಕ್ಕೂ ಯಕ್ಷರಾಜ ಧರ್ಮರಾಯನಿಗೆ ಕೇಳಿದ ಪ್ರಶ್ನೆಗಳು ನಾವೂ ಪರೀಕ್ಷೆಯಲ್ಲಿ ಎದುರಿಸುವಂತಹ ಸಾಮಾನ್ಯ ಪ್ರಶ್ನೆಗಳಾಗಿರಲಿಲ್ಲ, ಬದಲಿಗೆ ಮನುಷ್ಯ ತನ್ನ  ಆತ್ಮೋದ್ಧಾರದ ದಾರಿಯಲ್ಲಿ ಹೇಗೆ ಸಕ್ರಿಯವಾಗಿ ಸಾಗಬಹುದು ಎಂಬುದರ ಕುರಿತಾದ ಅದ್ವಿತೀಯ ಪ್ರಶ್ನೆಗಳಾಗಿದ್ದವು. ಹಾಗೆ ನೋಡಿದರೆ, ಮಹಾಭಾರತದ ಕಾಲದಲ್ಲಿಯೇ ನಡೆದ ಅತ್ಯುತ್ತಮ  Q&A Session ಇದಾಗಿತ್ತೆಂದರೆ ತಪ್ಪಾಗಲಾರದು.

ಪ್ರಶ್ನೆಗಳಿಗಿರುವ  ಸಾಮರ್ಥ್ಯವೇ ಹಾಗೆ,  ‘Question Yourself & Answer is You’ ಎಂಬ ನಾಣ್ಣುಡಿಯಂತೆ ‘ಪ್ರಶ್ನಿಸಿ ಕೆಟ್ಟವರಿಲ್ಲವೋ ರಂಗ’ ಎಂದರೆ  ಹೆಚ್ಚು ಸೂಕ್ತ. ಅಧ್ಯಾತ್ಮ ಶಿಖರದ ಮೊದಲ ಮೆಟ್ಟಿಲೇ ಪ್ರಶ್ನೆ, ನಾವೂ ಹೆಚ್ಚೆಚ್ಚು ಪ್ರಶ್ನಿಸಿದಷ್ಟು ನಮ್ಮೊಳಗಿನ ಆತ್ಮಜ್ಯೋತಿ ಪ್ರಖರವಾಗಿ ಉರಿಯುತ್ತದೆ, ಒಳಗಿನ  ಶತ್ರುಗಳಿಗೆ ಬ್ರೇಕು ಬೀಳುತ್ತದೆ, ಮತ್ತು ನಮ್ಮ ಮನಸ್ಸು ಇನ್ನಷ್ಟು ವಿಶಾಲವಾಗುತ್ತದೆ, ವಿನಮ್ರವಾಗುತ್ತದೆ. ವಿಶೇಷವಾಗಿ, ಜಗನ್ನಿಯಾಮಕನ ಕಡೆಗಿನ ನವವಿಧ ಭಕ್ತಿ ಜಾಗೃತಗೊಳ್ಳುತ್ತದೆ. ಸಕಲ ಚರಾಚರಗಳಲ್ಲಿಯೂ ದೈವತ್ವದ ಅಸ್ತಿತ್ವ ಕಣ್ಣಿಗೆ ರಾಚುತ್ತದೆ. ಹಾಗಾಗಿ ಪ್ರಶ್ನಿಸಬೇಕು, ನಮ್ಮೊಳಗೆ ಪ್ರತಿನಿತ್ಯ ‘ಚಿಂತನ – ಮಂಥನ’ ನಡೆಯಬೇಕು!

ಅಷ್ಟಕ್ಕೂ ಯಕ್ಷರಾಜನ ಪ್ರಶ್ನೆಗಳಿಗೆ ಲೀಲಾಜಾಲವಾಗಿ ಉತ್ತರಿಸಲು ಧರ್ಮರಾಯನಿಗೆ ಸಾಧ್ಯವಾಗಿದ್ದು ಅವನನ್ನೇ ಅವನು ಪರೀಕ್ಷೆಗೊಳಪಡಿಸಿಕೊಂಡಾಗ. ಹಾಗಾಗಿ, ನಮ್ಮನ್ನು ನಾವು ಪ್ರಶ್ನಿಸುವುದು ಒಳಿತು. ಏಕೆಂದರೆ ಪ್ರಶ್ನೆಗಳು ನಮ್ಮ ಆತ್ಮದ ಸತ್ವವನ್ನು ಕಡೆಯುವ ಕಡೆಗೋಲಿನಂತೆ!

ಅಸಲಿಗೆ ನಮ್ಮನ್ನು ನಾವೂ ಪ್ರಶ್ನಿಸಿಕೊಳ್ಳುವುದು ಎಂದರೆ ಯಕ್ಷರಾಜ ಧರ್ಮರಾಯನಿಗೆ ಕೇಳಿದಂತಹ ಪ್ರಶ್ನೆಗಳನ್ನೇ ನಮಗೆ ನಾವೇ ಕೇಳಿಕೊಳ್ಳಬೇಕು ಎಂದರ್ಥವಲ್ಲ!

ಬದಲಿಗೆ ಸರಳವಾಗಿ – ಸಹಜವಾಗಿ ನಾವು ನಮ್ಮ ನಡೆ-ನುಡಿಗಳ ಬಗ್ಗೆ, ತಪ್ಪು – ಒಪ್ಪುಗಳ ಬಗ್ಗೆ, ಗುರಿ – ನಿಲ್ದಾಣಗಳ  ಬಗ್ಗೆ ಹಾಗೂ ಯಾವ ಪ್ರಶ್ನೆಗಳಿಂದ ನಮ್ಮ ಬದುಕನ್ನು ಇನ್ನಷ್ಟು ಸರಳೀಕೃತ ಮಾಡಿಕೊಳ್ಳಬಹುದೋ, ಅಂತಹ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಒಳಿತು – ಕೆಡಕು, ದ್ವೇಷ – ಅಸೂಯೆ, ಮದ – ಮತ್ಸರ ಇನ್ನಿತರ ನೂರಾರು ವಿಷಯಲಂಪಟಗಳ ಕುರಿತು ನಮ್ಮನ್ನು ನಾವೂ ದಿನನಿತ್ಯ ಪ್ರಶ್ನಿಸಿಕೊಳ್ಳಬೇಕು,  ಪ್ರಶ್ನಿಸುವುದರ ಮುಖಾಂತರ ನಮ್ಮ ವ್ಯಕಿತ್ವವನ್ನು ಇನ್ನಷ್ಟು ಹದಗೊಳಿಸಿಕೊಳ್ಳಬೇಕು!

ಉದಾಹರಣೆಗೆ,

ಮೂಲತಃ ನಾವು ಒಳ್ಳೆಯವರೇ! ನಾವು ಒಳ್ಳೆಯದು ಮಾಡಿದರೆ ನಮಗೆ ನಾಳೆ ಎಲ್ಲಿಂದಲೋ ಒಳ್ಳೆಯದಾಗುತ್ತದೆ ಎನ್ನುವ  ಚಿಂತನೆಯನ್ನು ಸಹಜವಾಗಿ ಇಟ್ಟುಕೊಂಡಿರುತ್ತೇವೆ. ಆದರೆ ಅಸಲಿಗೆ ನಾವು ಎಂದಾದರೂ ಈ ಒಳ್ಳೆಯತನ ಎಂಬುದರ ಕುರಿತು ವಿವರವಾಗಿ ಯೋಚಿಸಿದ್ದೇವಾ? ಹಾಗೆ ಯೋಚಿಸಿದ್ದೇ ಆದರೆ, ಒಳ್ಳೆಯತನ ಎಂದರೇನು? ಅದರ ಕುರಿತು ನಿಮ್ಮ ನಿಲುವೇನು?

ಹೀಗೆ ಇಲ್ಲೊಂದಿಷ್ಟು ಒಳ್ಳೆಯತನ ಕುರಿತಾದ ‘ಯಕ್ಷಪ್ರಶ್ನೆ’ ಗಳಿವೆ! ಓದುತ್ತಾ ಓದುತ್ತಾ ನಿಮ್ಮನ್ನು ನೀವು

ಪ್ರಶ್ನಿಸಿಕೊಳ್ಳಿ, ಕಡೆಗೆ ಸಿಗುವ ಉತ್ತರ ಅದು ನೀವಾ? ಎಂದು ಪರೀಕ್ಷಿಸಿಕೊಂಡು ನೋಡಿ!!

* ನಾವೂ ಇತರರ ಜತೆ ಒಳ್ಳೆಯ ರೀತಿಯಲ್ಲಿ ನಡೆದುಕೊಂಡರೆ, ನಾಲ್ಕು ಜನ ನಮ್ಮನ್ನು ಗುರುತಿಸಿ, ನಾಲ್ಕು ಒಳ್ಳೆಯ ಮಾತನಾಡುತ್ತಾರೆ ಅನ್ನೋದಕ್ಕೆ ನಾವೂ ಒಳ್ಳೆಯರಾಗಿದ್ದೇವಾ? – ಒಳ್ಳೆಯತನವನ್ನು ನಾವೂ ನಮ್ಮ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುತ್ತಿದ್ದೇವಾ? ಇಲ್ಲವೆಂದಲ್ಲಿ ನಮ್ಮನ್ನು ‘ನೀನು ಒಳ್ಳೆಯ ಮನುಷ್ಯ’ ಎಂದಾಗ ನಮ್ಮ ಮನಸ್ಸೇಕೆ ಹಿಗ್ಗಬೇಕು? ಏನೂ ಹೇಳದಿದ್ದಾಗ ಏಕೆ ಕುಗ್ಗಬೇಕು? ಒಳ್ಳೆಯವರಾಗಿ ಇರಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯ ಅಲ್ವ? ಕೆಲಸಕ್ಕೆ ಮನ್ನಣೆ ಬೇಕಾಗಬಹುದು. ಆದರೆ ಕರ್ತವ್ಯಕ್ಕೆ ಏಕೆ ಬೇಕು?

* ಪ್ರಪಂಚದಲ್ಲಿ ಎಲ್ಲರೂ ಶ್ರೀಮಂತರಾಗಿಯೇ ಇದ್ದಿದ್ದರೆ ನಿನ್ನ ಹೃದಯ ವಿಶಾಲತೆ ತೋರಿಸಲು ನಿನಗೆ ಅವಕಾಶ ಸಿಗುತ್ತಿತ್ತೇ? ಮೇಲು-ಕೀಳು ಎಂಬ ವ್ಯವಸ್ಥೆಗಳೇ ಇಲ್ಲದಿದ್ದರೆ ನಿನ್ನ ವಿಶಾಲ ಮನೋಭಾವವನ್ನು ವ್ಯಕ್ತಪಡಿಸಲು ನಿನಗೆ ವೇದಿಕೆ ಸಿಗುತ್ತಿತ್ತೇ? ಒಳ್ಳೆಯತನ ಅನ್ನೋದು ವಿಶ್ವದೆಲ್ಲೆಡೆ ಸಾಮಾನ್ಯವಾಗಿ ಹೋಗಿದ್ದರೆ ಒಳ್ಳೆಯತನ ವಿಶೇಷವಾಗಿ ಕಾಣುತ್ತಿತ್ತೇ? ಒಳ್ಳೆಯತನ ಅನ್ನೋದು ಉಸಿರಾಟದಷ್ಟೇ ಸಾಮಾನ್ಯ, ಸಹಜ ಸಂಗತಿಯಾಗಬೇಕಿತ್ತು ಅಲ್ಲವೇ?

* ಒಳ್ಳೆಯತನ ಎಂಬುದು ನಿನಗೆ ಅಸಲಿಗೆ ಹುಟ್ಟಿನಿಂದ ಬಂದಿದ್ದ ಅಥವಾ ನೀ ರೂಢಿಸಿಕೊಂಡಿದ್ದಾ!?

ಒಳ್ಳೆಯತನ ಹುಟ್ಟಿನಿಂದ ಬಂದಿದ್ದೇ ಆದಲ್ಲಿ, ಅದೂ ನಿನಗೆ ನಿನ್ನ ಪರಿಸರ ಕೊಟ್ಟ ಕಾಣಿಕೆ ಅಂದಮೇಲೆ ಇಲ್ಲಿ ನಿನ್ನ ಹಿರಿಮೆ ಹೇಳಿಕೊಳ್ಳುವುದೇನಿಲ್ಲ! ಹಾಗಾಗಿ ನೀನು ನಿನಗೆ ‘ಒಳ್ಳೆಯವನೆಂಬ ಟ್ಯಾಗ್ ಕೊಟ್ಟುಕೊಂಡಿರುವದರಲ್ಲಿ’ ಎಳ್ಳಷ್ಟು ಅರ್ಥವಿಲ್ಲ ಅಥವಾ ಒಳ್ಳೆಯತನ ನಿನಗೆ ರೂಢಿಯಿಂದ ಬಂದಿದ್ದೇ ಆದಲ್ಲಿ ನಿನ್ನ ಮೇಲೆ ಪರಿಣಾಮ ಬೀರಿದ ಪುಸ್ತಕಗಳು, ವ್ಯಕ್ತಿಗಳೇ ನಿನ್ನ ಒಳ್ಳೆಯತನಕ್ಕೆ ಕಾರಣ… ಹಾಗಾಗಿ ಈ ಒಳ್ಳೆಯತನ ನಿನ್ನದಲ್ಲ!

* ಅಸಲಿಗೆ ಒಳ್ಳೆಯತನ ಎಂಬುದು ಕರ್ತವ್ಯವಷ್ಟೇ.. ಅದಕ್ಕೆ ನೀನು ಪ್ರತಿಫಲಾಪೇಕ್ಷೆ ಬಯಸಲಿಕ್ಕೆ ಇದೇನು ತಿಂಗಳ ಅಂತ್ಯದಲ್ಲಿ ನೀನು ಸಂಬಳ ಎಣಿಸುವ ಕೆಲಸದಂತೆಯೇ?

* ಕುಡಿಯುವವರೆಲ್ಲ ಕೆಟ್ಟವರಾ? ಅಥವಾ ಕುಡಿಯದಿದ್ದವರೆಲ್ಲ ಒಳ್ಳೆಯವರಾ? ಜೈಲಿನಲ್ಲಿ ಇದ್ದವರೆಲ್ಲ ಅಪರಾಧಿಗಳಾ? ಹೊರಗಿರುವವರೆಲ್ಲ ನಿರಪರಾಧಿಗಳಾ? ಕೆಟ್ಟದ್ದು ಇರುವುದಕ್ಕೆ ತಾನೆ ಒಳ್ಳೆಯದಕ್ಕೆ ಬೆಲೆ ಅಲ್ಲವಾ? ರಾವಣನಿಲ್ಲದಿದ್ದರೆ ರಾಮಾಯಣವಾಗುತ್ತಿತ್ತಾ?

* ಸ್ವಾರ್ಥ ಎಲ್ಲಿಲ್ಲ?

ನಾವೂ ಒಳ್ಳೆಯವರಾಗಿ ನಡೆದುಕೊಳ್ಳುವುದರಲ್ಲಿಯೂ ಸ್ವಾರ್ಥದ ಛಾಯೆ ಇದೆಯಲ್ಲ. ಅದು  ಹೇಗೆಂದರೆ?

‘ಇಂದು ನಾವು ಒಳ್ಳೆಯದನ್ನು ಮಾಡಿದರೆ, ನಾಳೆ ಅದು ನಮ್ಮ ಮೊಮ್ಮಕ್ಕಳನ್ನು ಕಾಯುತ್ತದೆ’ ಎಂದು ಭಾವಿಸುತ್ತೇವಲ್ಲ? ‘ಇಂದು ನಾವು ಒಳ್ಳೆಯದನ್ನು ಮಾಡಿದರೆ ನಾಳೆ ನಮಗೆ ಎಲ್ಲಿಂದಲೋ ಒಳ್ಳೆಯದಾಗುತ್ತದೆ ಎಂಬ ತೀರ್ಮಾನಕ್ಕೆ ಬಂದು ದಾನ-ಧರ್ಮ ಮಾಡುತ್ತೇವಲ್ಲ’ ಇದು ಸ್ವಾರ್ಥ ಅಲ್ಲವೇ? ಈ ಅಪೇಕ್ಷೇ ಒಳ್ಳೆಯದೇ ಅಥವಾ ಕೆಟ್ಟದ್ದೇ? ಈ ಜಗತ್ತಿನಲ್ಲಿ ಸ್ವಾರ್ಥ ಸಹಜವೇ…

ಆದರೆ ಕೆಲವೊಮ್ಮೆ ಸ್ವಾರ್ಥ ಕೆಟ್ಟದ್ದು, ಕೆಲವೊಮ್ಮೆ ಒಳ್ಳೆಯದು ಅನಿಸುತ್ತೆ. ಒಟ್ಟಿನಲ್ಲಿ ಒಳ್ಳೆಯತನದಲ್ಲೂ ಸ್ವಾರ್ಥವಿದೆ ಎಂದಾಯಿತಲ್ಲ?

* ಈ ಪಾಪ-ಪುಣ್ಯ, ಸ್ವರ್ಗ-ನರಕದ ಕಲ್ಪನೆ ಇರೋದಕ್ಕೆ ನಾವೂ ಎಷ್ಟೊಂದು ತಪ್ಪುಗಳನ್ನು ಮಾಡದೇ ಸುಮ್ಮನಿದ್ದೇವಾ? ಒಂದು ವೇಳೆ ಈ ಪರಿಕಲ್ಪನೆಗಳು ಇಲ್ಲದಿದ್ದರೂ ನಾವೂ ಒಳ್ಳೆಯವರಾಗಿಯೇ ಉಳಿದುಕೊಂಡು ಬಿಡುತ್ತಿದ್ದೆವಾ?

* ‘ನಾನೂ ಒಳ್ಳೆಯವ’ ಎಂಬ ಐಡಿ ಕಾರ್ಡ್ ಇಟ್ಟುಕೊಂಡು ನಾವೂ ಓಡಾಡುತ್ತಿದ್ದೀವಾ?’ ಯಾರೋ ಒಬ್ಬರು ನಮ್ಮನ್ನು ಕೆಟ್ಟವರು ಎಂದಮಾತ್ರಕ್ಕೆ ನಾವು ಅದಕ್ಕೆ ಕೆಂಡಾಮಂಡಲರಾಗಿ ನಮ್ಮ ಒಳ್ಳೆಯತನವನ್ನು ಅವರ ಮುಂದೆ ಸಾಬೀತುಪಡಿಸಲು ಹಪಹಪಿಸುತ್ತೇವಲ್ಲ ಅದೇಕೆ? ನಾವು ಜನ ಮೆಚ್ಚುವಂತೆ ಬದುಕಬೇಕಾ? ಅಥವಾ ದೇವರು ಮೆಚ್ಚುವಂತೆ ಬದುಕಬೇಕಾ?

* ನಾವೂ ಯಾರದ್ದೋ ಬದುಕಿನಲ್ಲಿ ಕೆಟ್ಟವರೆಂದೆನಿಸಿರುತ್ತೇವೆ, ನಮ್ಮ ಬದುಕಲ್ಲಿ ಇನ್ಯಾರೋ ಕೆಟ್ಟವರೆಂದೆನಿಸಿರುತ್ತಾರೆ! ಹೀಗಿರುವಾಗ ನಮ್ಮನ್ನು ನಾವು ಹೇಗೆ ಒಳ್ಳೆಯವರೆಂದುಕೊಳ್ಳಲು ಸಾಧ್ಯ? ನಮ್ಮನ್ನು ನಾವು ಒಳ್ಳೆಯವರೆಂದುಕೊಂಡುಬಿಟ್ಟರೆ ನಮ್ಮ ಬೆಳವಣಿಗೆ ಅರ್ಧಕ್ಕೆ ನಿಂತುಹೋಗುವುದಿಲ್ಲವೇ? ಓದು ಮುಗಿಯಿತು ಎಂದು ಹೇಳುವುದಕ್ಕಿಂತ – ಕಲಿಯುತ್ತಿದ್ದೇನೆ ಅನ್ನೋದೇ ಹಿತವಲ್ಲವೇ?

* ಪ್ರಶ್ನೆಯಿಷ್ಟೆ… ಒಳ್ಳೆಯತನ ಅಂದರೇನು? ಮಹಾನ್ ಸತ್ಯವಂತನಾಗಿದ್ದ ಹರಿಶ್ಚಂದ್ರನಲ್ಲಿ ತಾನೂ ಸತ್ಯವಂತ ಎಂಬ ಭಾವನೆ ಇದ್ದಿದ್ದರಿಂದಾಗಿಯೇ ಆತ ಕಷ್ಟಗಳ ಸರಮಾಲೆಯನ್ನೇ ಎದುರಿಸಬೇಕಾಯ್ತಂತೆ! (ನಾನೂ ಸತ್ಯವಂತ ಎಂದೂ ಸಾರಿಕೊಳ್ಳುವುದು ಅಹಂನ ಒಂದು ಮುಖವೇ!) ಅಂದಮೇಲೆ ನಮ್ಮನ್ನು ನಾವು ‘ಒಳ್ಳೆಯವರೆಂದು’ ಕೊಳ್ಳುವುದನ್ನು ಏನೆನ್ನಬೇಕು?

ಒಟ್ಟಿನಲ್ಲಿ ಒಳ್ಳೆಯದು… ಒಳ್ಳೆಯತನ ಎಂದರೆ ಏನು!? ಒಳ್ಳೆಯತನ ಎಂದರೆ ನಿನಗರಿವಿಲ್ಲದಂತೆ ನೀ ಮಿಡಿಯುವುದಾ? ಪ್ರತಿಫಲಾಕ್ಷೆಯ ಯೋಚನೆಯಿಲ್ಲದೇ ತುಡಿಯುವುದಾ?  ಒಳ್ಳೆಯತನ ಎಂಬುದು ಒಂದು ಕೌಶಲ್ಯವಾ? ಒಳ್ಳೆಯತನ ಎಂಬುದು ಹವ್ಯಾಸವಾ?

ಮಗುವಿನಂತಿರುವುದಾ? ನಿಜವಾದ ಮನುಷ್ಯನಂತೆ ವರ್ತಿಸುವುದಾ? ದೇವರಂತಿರುವುದಾ? ದೇವರಾಗಿಬಿಡುವುದಾ?

ಈ ಪ್ರಶ್ನೆಗೆ ಉತ್ತರ ಸಿಕ್ಕಮೇಲೂ ನೀ ನಿನ್ನನ್ನು ಒಳ್ಳೆಯವನೆಂದು ಕರೆದುಕೊಳ್ಳುವೆಯಾ?????

‍ಲೇಖಕರು Avadhi

May 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: