ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಕ್ಷಗಾನದ ವೀಡಿಯೊ ಕ್ಲಿಪ್ ನೋಡಿದೆ..

ಇಲ್ಲೊಂದು ವಿಡಿಯೋ ಇದೆ 

ಯಕ್ಷಗಾನದ್ದು. ಅಯ್ಯೋ ಯಕ್ಷಗಾನ ಬೇಕಾದಷ್ಟು ನೋಡಿದ್ದೀವಿ ಬಿಡಿ ಅಂತೀರಾ..? 

ನೋ ನೋ.. ನೀವು ಈ ಯಕ್ಷಗಾನ ವಿಡಿಯೋ ನೋಡಲೇಬೇಕು 

ನಿಮಗೇನನ್ನಿಸುತ್ತೆ? ಇದು ಸರೀನಾ ತಪ್ಪಾ? 

ಯಕ್ಷಗಾನ ಹೇಗಿರಬೇಕು ಬರೆದು ತಿಳಿಸಿ ಚರ್ಚೆ ಆರಂಭವಾಗಲಿ ಎಂದು ಕೇಳಿದ್ದೆವು. 

ಅದಕ್ಕೆ ಬಂದ ಪ್ರತಿಕ್ರಿಯೆ ಇಲ್ಲಿದೆ  ಬನ್ನಿ ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ

vinate sharma

ವಿನತೆ ಶರ್ಮ

ದೃಶ್ಯ ೧.

ಮನದಲ್ಲಿ ಮಿಶ್ರ ಭಾವನೆಗಳು. ಒಂದು ಸಲ ನಿಧಾನವಾಗಿ ಉಸಿರೆಳೆದುಕೊಂಡು ಕಲಕಿದ ಅಲೆಗಳ ಹಿಂದೆ ಏನಿದೆ ಎಂದು  ಇಣುಕಿದೆ.

yakshagana4ಎಷ್ಟೋ ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡಾಗ ಯಾರೋ ಒಬ್ಬರು ಯಕ್ಷಗಾನ ಹೇಳಿಕೊಡುತ್ತಾರೆ ಎಂದು ಕೇಳಿ, ನಾನೂ ಯಕ್ಷಗಾನ ಕಲಿಯಲು ಇಷ್ಟಪಟ್ಟು ವಿಚಾರಿಸಿದ್ದೆ.

ಕಾರಣಾಂತರದಿಂದ ಹೇಳಿಕೊಡಲಾಗುವುದಿಲ್ಲ ಎಂದು ಹೇಳಿದ ಅವರು ಹುಡುಗಿಯೊಬ್ಬಳು ಯಕ್ಷಗಾನ ಕಲಿಯುವುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದರು.

ವರ್ಷಗಳು ಉರುಳಿದಂತೆ ಯಕ್ಷಗಾನ ಕಲಾವಿದರಲ್ಲಿ ಹೆಚ್ಚು ಹೆಚ್ಚು ಹೆಂಗಸರು ಕಾಣುತ್ತಿದ್ದಾರೆ. ಹಾಗೆ, ಅನೇಕ ರೀತಿಯ ಹೊಸ ಪ್ರಯೋಗಗಳು ಕೂಡ ಬಂದಿವೆ. ಪರಂಪರೆಯನ್ನು, ಒಂದು ವಿದ್ಯೆಯ ಪುರಾತನಪವಿತ್ರತೆಯನ್ನು ಕಾಯ್ದುಕೊಂಡು ಬಂದವರಿಗೆ ಶಾಕ್ ಹುಟ್ಟಿಸುವ ಹಾಗೆ ಇದೆ ಆ ವೀಡಿಯೊ.

ಸ್ಟೇಜ್ ಮೇಲೆ, ತೆಳ್ಳನೆಯ ಪೋರ್ನೋ-ಅರ್ಥವನ್ನು ಹೊಂದಿರುವ ಆ ಹಾಡಿನ ಅಭಿನಯವನ್ನು ಕಲಾವಿದರು ಯಕ್ಷಗಾನದ ಮೂಲಕ ತೋರಿದ್ದು ಎಗ್ಗಿಲ್ಲದೆ ಸಾಗಿರುವ ಬದಲಾವಣೆಯ ಗಾಳಿ ಹೇಗೆಲ್ಲಾ, ಎಲ್ಲೆಲ್ಲಾ ಹರಡಬಹುದು ಎಂದು ಸೂಚಿಸಿದೆ. ಯಕ್ಷಗಾನದ ಪರಿಚಯವೇ ಇಲ್ಲದವರಿಗೆ ಆ ಅಭಿನಯ, ರೂಪ ವೇಷಗಳು, ಸಂಗೀತ, ಪ್ರೇಕ್ಷಕರ ಕೇಕೆ – ಇವು ಇನ್ನಿಲ್ಲದ ಮನರಂಜನೆಯನ್ನ ಕೊಡುತ್ತವೆ.

ಹೊಸ ಪ್ರಯೋಗವೆಂದು ಒಪ್ಪಿಕೊಳ್ಳುವುದೇ, ಎಲ್ಲವೂ ಕಮರ್ಷಿಯಲ್ ಆಗಿರುವ ಈ ಕಾಲದಲ್ಲಿ ಇದೂ ಒಂದು ಎನ್ನುತ್ತಾ ಎದ್ದು ಹೋಗುವುದೇ, ಅಥವಾ ಆ ಕಲೆಯನ್ನು ಗೌರವವಾಗಿ ಉಳಿಸಿಕೊಂಡು ಅಷ್ಟೇ ಗೌರವದಿಂದ ಅದನ್ನು ಬಗೆ ಬಗೆಯಾಗಿ ಅಳವಡಿಸಿಕೊಳ್ಳಬಹುದೇ, ಹೇಗೆ ಎಂದು ಯೋಚಿಸಿ ಮುಂದುವರೆಯುವುದೇ? ಒಂದೊಮ್ಮೆ ಹಾಗೆ ಮುಂದುವರೆಸಿದರೆ ಅದಕ್ಕೊಂದು ದಿಕ್ಕನ್ನು, ಹೊಸ ಪರಿಯ ಬಗೆಯನ್ನು ಹೇಳಿಕೊಡುವ ಜವಾಬ್ದಾರಿ ಯಾರದ್ದು?

ದೃಶ್ಯ ೨.

ಎಷ್ಟೋ ವರ್ಷಗಳ ನಂತರ ಆಸ್ಟ್ರೇಲಿಯಾದ ನಗರವೊಂದರಲ್ಲಿ, ಯೂನಿವರ್ಸಿಟಿಯಲ್ಲಿ ಆ ದೇಶದ ಮೂಲನಿವಾಸಿಗಳ (Aboriginal) ಒಂದು ಪಂಗಡಕ್ಕೆ ಸೇರಿದ ಕೆಲ ಸಹೋದ್ಯೋಗಿಗಳ (ಅಪ್ಪಟ ನಗರೀಕರಣಗೊಂಡ) ಮೂಲಕ ಅವರ ಒಂದು ನೃತ್ಯ ಪ್ರಕಾರದ ಸ್ವಲ್ಪ ಪರಿಚಯವಾಯ್ತು.

yakshagana5ಆ ನೃತ್ಯ ಪ್ರಕಾರವನ್ನು ಹೇಳಿಕೊಡುವ, ತರಗತಿಗಳನ್ನು ನಡೆಸುವ ಗುಂಪನ್ನು ಸಂಪರ್ಕಿಸಿ, ನಾನೂ ಕಲಿಯಬಹುದೇ ಎಂದು ಕೇಳಿದ್ದೆ. ಅತ್ಯಂತ ಗಂಭೀರ ಸ್ಪರೂಪದ ಪಾಳೆಗಾರಿಕೆ/ವಸಾಹತುಶಾಹಿ ರಾಜಕೀಯ ಮತ್ತು ಸಮಸ್ಯೆಗಳಿಂದ ಸಾಕಷ್ಟು ಘಾಸಿಗೊಂಡಿರುವ ದೇಶದ ಮೂಲನಿವಾಸಿಗಳ ನೋವನ್ನು ಕುರಿತು ಅವರುಗಳು ಸ್ವಲ್ಪ ಹೇಳಿಕೊಂಡು, ನಂತರ ಅವರ ಪಂಗಡದ ರೀತಿನಿಯಮಗಳ ಪ್ರಕಾರ ನನಗೆ ಆ ನೃತ್ಯವನ್ನು ಹೇಳಿಕೊಡಲಾಗುವುದಿಲ್ಲ ಎಂದರು. ಸುಮ್ಮನಾದೆ.

ಆ ದೇಶದಲ್ಲಿ ಬದಲಾವಣೆಯ ಗಾಳಿ ನಿಧಾನವಾದರೂ ನಿಲ್ಲದೆ ಬೀಸುತ್ತಿದೆ. ಮೂಲನಿವಾಸಿಗಳ ನೃತ್ಯ ಪ್ರಕಾರಗಳನ್ನ ಕಲಿಯಲು ಬೇರೆ ಬೇರೆ ಜನ – ಬಿಳಿಯರು ಮತ್ತು ಇತರೆ ದೇಶಗಳಿಂದ ಬಂದು ನೆಲೆಸಿದವರು – ಉತ್ಸಾಹ ತೋರುತ್ತಿದ್ದಾರೆ, ಅಂತಹವರ ಮಕ್ಕಳು ಕಲಿಯುತ್ತಿದ್ದಾರೆ. ಆ ಮೂಲನಿವಾಸಿಗಳ ಪಂಗಡಗಳೇ ತಮ್ಮ ತಮ್ಮ ನೃತ್ಯ ಪ್ರಾಕಾರಗಳಲ್ಲಿ ಹೊಸ ಬಗೆಯ ಪ್ರಯೋಗಗಳನ್ನು ತರುತ್ತಿದ್ದಾರೆ.

ಹಳೆ ತಲೆಗಳು ಗೊಣಗುತ್ತಿವೆ, ಮಧ್ಯ ವಯಸ್ಕ ಹಿರಿಯರು ತಮ್ಮ ಕಿರಿಯರ ಈ ಹೊಸ ಅಲೆಯ ನೃತ್ಯಗಳನ್ನು, ಬ್ಯಾಂಡಗಳನ್ನ ನೋಡಿ ತಲೆ ತೂಗುತ್ತಿದ್ದಾರೆ. ಹಳೆ ನೀರು ಕೊಚ್ಚಿ ಹೋಗಿಲ್ಲ, ಮರೆಯಾಗಿಲ್ಲ. ಬದಲಾಗಿ, ಹಳೆ ನೀರು ಹರಿದ ಜಾಡಿನಲ್ಲಿ ಹುಟ್ಟುತ್ತಿರುವ, ಮುನ್ನುಗ್ಗಿ ಹರಿಯುವ ಉತ್ಸಾಹ ತೋರುತ್ತಿರುವ ಹೊಸ ನೀರಿನ ಬುಗ್ಗೆಗಳಿಗೆ ಆ ಹಳೆ ಬೇರುಗಳು ತಮ್ಮ ಸತ್ವವನ್ನು ನೀಡುತ್ತಾ, “ಹರಿವ ಪ್ರಯತ್ನದಲ್ಲಿ ಕಳೆದು ಹೋಗದಿರಿ ಮಕ್ಕಳೇ, ನಮ್ಮ ಪುರಾತನ ಕಲೆಗಳು ನಿಮ್ಮನ್ನು ನಂಬಿವೆ, ಅವನ್ನು ಕಾಯ್ದು, ಗೌರವ, ಪ್ರೀತಿಯಿಂದ ಬೆಳೆಸಿ. ಗೌರವದಿಂದ ಹೊಸ ತಳಿಗಳನ್ನ ಹುಟ್ಟು ಹಾಕಿ ” ಎಂದು ಉಸುರುತ್ತಿದ್ದಾರೆ.

 

‍ಲೇಖಕರು Admin

29 February, 2016

1 Comment

  1. Gopinatha rao

    ಶಿವರಾಮ ಕಾರಂತರು ಶ್ರಮ ಪಟ್ಟು ಆಸ್ಥೆಯಿಂದ ಮಾಡಿದ ಯಕ್ಷಗಾನ ಬ್ಯಾಲೆಯಂತಹ ಪ್ರಯೋಗವೇ ನಂತರದ ದಿನಗಳಲ್ಲಿ ಸ್ಥಳೀಯರಲ್ಲೂ ಹೊರಗಿನವರಲ್ಲೂ ಆಸಕ್ತಿ ಕೆರಳಿಸಲು ವಿಫಲವಾಗಿ ಮೂಲೆ ಹಿಡಿದು ಹೋಯಿತು. ಕಲೆ ಎಂದ ಮೇಲೆ ಪ್ರಯೋಗಗಳು ಸಾಮಾನ್ಯ. ಜನಮನ ಗೆಲ್ಲುವ ಪ್ರಯೋಗಗಳು ಮಾತ್ರ ನೆಲೆನಿಲ್ಲುತ್ತವೆ.
    ಅರ್ಥಹೀನ ಪ್ರಯೋಗಗಳು ಅಣಬೆಗಳಂತೆ ಹುಟ್ಟಿದ ಮರುಕ್ಷಣವೇ ಇಲ್ಲವಾಗುತ್ತವೆ.
    ಮಕ್ಕಳಾಟಿಕೆಯ ಇಂತಹ ಪ್ರಯೋಗಗಳಿಂದ ಯಕ್ಷಗಾನಕ್ಕೆ ಲಾಭವೂ ಇಲ್ಲ, ಆಪತ್ತೂ ಇಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading