ಮ ಶ್ರೀ ಮುರಳಿ ಕೃಷ್ಣ ನೋಡಿದ ‘ಫೋಟೋ’  

ಮ ಶ್ರೀ ಮುರಳಿ ಕೃಷ್ಣ 

ಇತ್ತೀಚೆಗೆ ಮುಕ್ತಾಯವಾದ ಹದಿನಾಲ್ಕನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಯುವ ನಿರ್ದೇಶಕ ಉತ್ಸವ್‌ ಗೋನವಾರ ಪ್ರಥಮ ಕನ್ನಡ ಚಲನಚಿತ್ರ ʼಫೋಟೊʼ ಪ್ರದರ್ಶನಗೊಂಡಿತು. ಹೌಸ್ಫುಲ್ ಆಗಿದ್ದ ಮಲ್ಟಿಪ್ಲೆಕ್ಸ್ನಲ್ಲಿದ್ದ ಅನೇಕ ವೀಕ್ಷಕರು ಎದ್ದು ನಿಂತು ಕರತಾಡನವನ್ನು ಮಾಡಿ ತಮ್ಮ ಪ್ರತಿಕ್ರಿಯೆಯನ್ನು ಸೂಚಿಸಿದ್ದು ವಿಶೇಷವಾಗಿತ್ತು.

ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ ಮಸ್ಕಿಯ ಸಣ್ಣ ಹಳ್ಳಿಯ ಬಾಲಕ ದುರ್ಗ್ಯಾ ಶಾಲೆಯಲ್ಲಿರುವ ಬೆಂಗಳೂರಿನ ವಿಧಾನ ಸೌಧದ ಪಟವನ್ನು ವೀಕ್ಷಿಸುತ್ತ ತಾನು ಅದರ ಮುಂದೆ ನಿಂತು ಫೋಟೊ ತೆಗೆದುಕೊಳ್ಳಬೇಕೆಂದು ಬಯಸುತ್ತಾನೆ. ಅಲ್ಪ ಸಮಯದಲ್ಲೇ ಬಯಕೆ ಬೇರೂರುತ್ತ ಸಾಗುತ್ತದೆ. ಹೀಗಿರುವಾಗ, ಕೊರೋನಾ ದಾಂಗುಡಿಯಿಟ್ಟಾಗ ಶಾಲೆಗೆ ಹದಿನೈದು ದಿನಗಳ ರಜೆಯನ್ನು ಘೋಷಿಸಲಾಗುತ್ತದೆ. ದುರ್ಗ್ಯಾ ತನ್ನಮ್ಮನನ್ನು ಕಾಡಿ, ಬೇಡಿ ಬೆಂಗಳೂರಿನಲ್ಲಿ ಕಟ್ಟಡ ಕೆಲಸಗಾರನಾಗಿರುವ ಅಪ್ಪನ ಬಳಿ ಹೋಗುತ್ತಾನೆ. ಕೆಲವು ದಿನಗಳ ತರುವಾಯ ಕೊರೋನಾ ಕಾರಣದಿಂದ ಲಾಕ್ಡೌನ್ ಆದ ವಿಷಯ ಅಪ್ಪನಿಗೆ ತಿಳಿಯದೆ, ದುರ್ಗ್ಯಾನನ್ನು ವಿಧಾನಸೌಧಕ್ಕೆ ಕರೆದೊಯ್ಯಲು ಮುಂದಾಗುತ್ತಾನೆ. ಮಾರ್ಗಮಧ್ಯದಲ್ಲಿ ಪೊಲೀಸರು ಅವರನ್ನು ತಡೆಹಿಡಿದು, ತಮ್ಮ ದರ್ಪವನ್ನು ಯಥಾರೀತಿಯಲ್ಲಿ ತೋರಿ, ಅವರು ಹಿನ್ನಡೆಯುವಂತೆ ಮಾಡುತ್ತಾರೆ.

ದೇಶಾದ್ಯಂತ ಲಾಕ್‌ಡೌನಾದ ಹಿನ್ನೆಲೆಯಲ್ಲಿ ಅಪ್ಪನಿಗೆ ಕೆಲಸವಿಲ್ಲದೆ, ರೈಲು-ಬಸ್ಸುಗಳ ಸಾರಿಗೆ ವ್ಯವಸ್ಥೆಯಿರದ ಕಾರಣದಿಂದ ಟೆಂಪೊ ಒಂದರಲ್ಲಿ ಅಪ್ಪ-ಮಗ ಪಯಣವನ್ನು ಬೆಳೆಸುತ್ತಾರೆ. ಆದರೆ ಪೊಲೀಸರು ಟೆಂಪೋವನ್ನು ತಡೆಹಿಡಿದಾಗ, ಬೇರೆ ದಾರಿ ತೋಚದೆ ಅಪ್ಪ ದೂರದ ತಮ್ಮೂರನ್ನು ಸೇರಲು ನಡೆದುಕೊಂಡೇ ಹೋಗಲು ನಿರ್ಧರಿಸುತ್ತಾನೆ! ಪಡಬಾರದ ಪಡಿಪಾಟಲುಗಳಿಗೆ ತುತ್ತಾಗುತ್ತಾರೆ ಅಪ್ಪ-ಮಗ.

ಕೊರೋನಾ ಅಡಿಯಿಡುತ್ತಿದ್ದ ಸಮಯದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳೊಡನೆ ಯಾವ ತೆರನಾದ ಸಮಾಲೋಚನೆಯನ್ನು ನಡೆಸದೇ, ಕೇವಲ 24 ಗಂಟೆಗಳ ಗಡುವನ್ನು ನೀಡಿ, ದೇಶಾದ್ಯಂತ ಲಾಕ್‌ಡೌನನ್ನು ಘೋಷಿಸಲಾಯಿತು. ಮೊದಲನೆಯ ಘಟ್ಟದಲ್ಲಿ ಅದು ಸುಮಾರು 40 ದಿನಗಳ ಕಾಲ ಜಾರಿಯಲ್ಲಿತ್ತು. ಆಗ ವಲಸೆ ಕಾರ್ಮಿಕರು, ಸಮಾಜದ ಅಂಚಿನಲ್ಲಿರುವವರು ಪಟ್ಟ ಕಷ್ಟ-ಕೋಟಲೆಗಳು ಒಂದೇ ಎರಡೇ. ಕಾಲ್ನಡಿಗೆಯಲ್ಲೇ ಹೊರಟ ದೊಡ್ಡ ಸಂಖ್ಯೆಯ ಮಂದಿ ಎದುರಿಸಿದ ಅವಸ್ಥೆಗಳು ಅಮಾನವೀಯವಾಗಿದ್ದವು. ಇವುಗಳನ್ನು ಕಥನ ರೂಪದಲ್ಲಿ, ಸಿನಿಮಾ ಮಾಧ್ಯಮದ ಮೂಲಕ ಉತ್ಸವ್‌ ಪರಿಣಾಮಕಾರಿಯಾಗಿ, ʼ ಶಹಬಾಸ್‌ ʼ ಎನ್ನುವ ಬಗೆಯಲ್ಲಿ ಕಟ್ಟಿಕೊಟ್ಟಿದ್ದಾರೆ! ವೀಕ್ಷಕರ ಪ್ರಜ್ಞೆಯನ್ನು ಬಡಿದೆಬ್ಬುಸುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ !

ಈಗ ಈ ಚಲನಚಿತ್ರದ ಕೆಲವು ದೃಶ್ಯಗಳ ಕೆಲವು ಶಾಟ್‌ಗಳತ್ತ ಗಮನವನ್ನು ಹರಿಸೋಣ…..

ಅ) ಒಂದು ಶಾಟ್‌ನಲ್ಲಿ ದುರ್ಗ್ಯಾ ವಿಧಾನ ಸೌಧದ ಪಟವನ್ನು ನೋಡುತ್ತಾನೆ, ಅದರಲ್ಲಿ ʼ ಸರ್ಕಾರಿ ಕೆಲಸ ದೇವರ ಕೆಲಸ ʼ ಎಂಬ ವಾಕ್ಯವಿರುತ್ತದೆ. ಅವನು ನಂತರ ವೀಕ್ಷಕರತ್ತ ಒಂದು ನೋಟವನ್ನು ಹರಿಸುತ್ತಾನೆ.

ಆ) ಈಗಾಗಲೇ ತಿಳಿಸಿರುವಂತೆ ಅಪ್ಪ ದುರ್ಗ್ಯಾನ ಜೊತೆ ವಿಧಾನ ಸೌಧಕ್ಕೆ ಹೋಗುವಾಗ ಇಬ್ಬರು ಕಾನ್ಸ್ಟೇಬಲ್ಸ್‌ ಅವರನ್ನು ಅಡ್ಡಗಟ್ಟಿ, ವಾಪಸ್ಸು ಮನೆಗೆ ಹೋಗುವಂತೆ ತಾಕೀತು ಮಾಡುತ್ತಾರೆ. ಆಗ ಅಪ್ಪ-ಮಗ ಕಾಲೆಳೆದುಕೊಂಡು ಮುಂದೆ ಹೋಗುತ್ತಾರೆ. ರಸ್ತೆಯ ಪಕ್ಕದಲ್ಲಿ ಮೂರ್ನಾಲ್ಕು ಕಾರುಗಳು ಇರುತ್ತವೆ.

ಇ) ಅಪ್ಪ-ಮಗ ನಡೆದುಕೊಂಡು ಹೋಗುತ್ತಿರುವಾಗ, ಮಾರ್ಗಮಧ್ಯದಲ್ಲಿ ಪೊಲೀಸ್‌ ಕಾನ್ಸ್ಟೇಬಲ್ಸ್‌ ಒಂದು ಟ್ಯಾಕ್ಞಿಯನ್ನು ನಿಲ್ಲಿಸಿ, ಅದರಲ್ಲಿದ್ದ ಯುವ ಚಾಲಕನಿಗೆ ಅವರನ್ನು ಚಳ್ಳಕೆರೆಯ ಸಮೀಪ ಇಳಿಸಬಹುದೆಂದು ಸೂಚಿಸುತ್ತಾರೆ. ಇದು ಪೊಲೀಸರ ಇನ್ನೊಂದು ಮುಖವನ್ನು ತೋರಿಸುತ್ತದೆ.

ಈ) ʼ ಗೋ ಕೊರೋನಾʼ ಮೆರವಣಿಗೆ, ಅದರಲ್ಲಿ ತಟ್ಟೆ, ಜಾಗಟೆಗಳ ಬಳಿಕೆ ಮತ್ತು ಮೆರವಣಿಗೆಯಲ್ಲಿದ್ದ ಒಬ್ಬನಿಂದ ಪಕ್ಕದಲ್ಲಿ ನಿಂತಿದ್ದ ದುರ್ಗ್ಯಾನ ಅಪ್ಪನಿಗೆ ಧಮಕಿ.

ಉ) ಟೆಂಪೋದಲ್ಲಿ ಅಪ್ಪ-ಮಗ ಪಯಣಿಸುತ್ತಿರುವಾಗ, ದುರ್ಗ್ಯಾ ವಿಧಾನ ಸೌಧ ಇನ್ನೆಷ್ಟು ದೂರವಿದೆಯೆಂದು ಅಪ್ಪನನ್ನು ಕೇಳುತ್ತಾನೆ. ಆಗ ಅಪ್ಪ ಇನ್ನೇನು ಬಂದುಬಿಡುತ್ತದೆ ಎಂಬರ್ಥದ ಸುಳ್ಳನ್ನು ಹೇಳುತ್ತಾನೆ. ತುಸು ಸಮಯದ ತರುವಾಯ ದುರ್ಗ್ಯಾ ಪಕ್ಕದಲ್ಲಿದ್ದ ಹಿರಿಯ ವ್ಯಕ್ತಿಯ ಬಳಿ ವಿಧಾನ ಸೌಧ ಯಾವಾಗ ಬರುತ್ತದೆ ಎಂದು ವಿಚಾರಿಸಿದಾಗ ಆತ ಅದನ್ನು ದಾಟಿ ತುಂಬ ಸಮಯವಾಯಿತು ಎಂದು ತಿಳಿಸಿ, ನಗುತ್ತಾನೆ. ಆಗ ದುರ್ಗ್ಯಾ ಏನನ್ನೂ ಮಾತನಾಡದೇ ತನ್ನ ಅಪ್ಪನ ಮುಖವನ್ನು ನೋಡುತ್ತಾನೆ.

ಊ) ಸಾಗುತ್ತಿರುವ ಟೆಂಪೋದ ಹಿಂಭಾಗದಲ್ಲಿ ಹರಿದ ಟಾರ್ಪಾಲಿನ ಕಿಂಡಿಯ ಮೂಲಕ ದುರ್ಗ್ಯಾ ವೀಕ್ಷಕರನ್ನು ನೋಡುತ್ತಾನೆ.

ಎ) ಒಂದು ಶಾಟ್‌ನಲ್ಲಿ ಬೆಂಗಳೂರಿನಲ್ಲಿ ಕಟ್ಟಡವನ್ನು ಕಟ್ಟುವ ಜಾಗದಲ್ಲಿ, ಲಾಕ್‌ಡೌನ್ ಸಮಯದಲ್ಲಿ ಅಪ್ಪ-ಮಗನ ಜೊತೆ 4-5 ಮಂದಿ ಒಟ್ಟಿಗೆ ಕೂತು ಉಣ್ಣುವುದನ್ನು ತೋರಿಸಲಾಗಿದೆ.

ಏ) ವಿಧಾನ ಸೌಧಕ್ಕೆ ಭೇಟಿ ನೀಡಬೇಕಾದ ಸಂದರ್ಭ ಒದಗಿ ಬಂದಾಗ ದುರ್ಗ್ಯಾ, ಮಕ್ಕಳು ಧರಿಸುವ ಆಟಿಕೆಯ ಕೂಲಿಂಗ್‌ ಗ್ಲಾಸನ್ನು ಹಾಕಿಕೊಂಡಿರುತ್ತಾನೆ. ನಂತರ ಯಾವ ದೃಶ್ಯದಲ್ಲೂ ಇದು ಕಾಣುವುದಿಲ್ಲ.

ಐ) ದುರ್ಗ್ಯಾನ ಹಳ್ಳಿಯಲ್ಲಿ ಆತನ ತಾಯಿಯ ಕಾಕ ಮಂಚದ ಮೇಲೆ ನಿದ್ರಿಸುವ, ಕುಳಿತುಕೊಂಡು ಮಾತನಾಡುವ ಕೆಲವು ಶಾಟ್‌ಗಳಿವೆ. ಅವುಗಳಲ್ಲಿ ಮನೆಯ ಹೆಂಗಸರು ಮಾತ್ರ ನೆಲದ ಮೇಲೆ ಕುಳಿತುಕೊಂಡು ತಮ್ಮ ಕಾರ್ಯವನ್ನು ಮಾಡುತ್ತ, ಮಾತನಾಡುತ್ತಿರುತ್ತಾರೆ. ನಿರ್ದೇಶಕರು ಲಿಂಗ ತಾರತಮ್ಯವನ್ನು ಸೂಚ್ಯವಾಗಿ ದಾಟಿಸಿದ್ದಾರೇನೋ ಎಂದೆನಿಸಿತು!

ಒ) ಏರಿಯಲ್‌ ಶಾಟ್‌ಗಳ ಮೂಲಕ ರಸ್ತೆಯ ಇಕ್ಕೆಲಗಳಲ್ಲಿ ಉತ್ತರ ಕರ್ನಾಟಕ ಭಾಗದ ಕಪ್ಪು ಮಣ್ಣಿನ ಭೂಮಿಯನ್ನು , ಹಾಗೂ ಆ ರಸ್ತೆಯ ಮೂಲಕ ಅಪ್ಪ-ಮಗ ನಡೆದು ಹೋಗುತ್ತಿರುವುದನ್ನು ( ತುಂಬ ಕಿರಿದಾಗಿ) ಮಾರ್ಮಿಕವಾಗಿ ತೋರಿಸಲಾಗಿದೆ.

ಓ) ಒಂದೆರಡು ಶಾಟ್‌ಗಳಲ್ಲಿ ಬೋರಲಾಗಿ ಇಟ್ಟಿರುವ ಗ್ಯಾಸ್‌ ಸಿಲಿಂಡರ್‌ಗಳಿರುತ್ತವೆ!

ಔ) ಟ್ಯಾಕ್ಸಿಯ ಚಾಲಕ ಅಪ್ಪ-ಮಗನನ್ನು ತಾನು ತೆಗೆಯುತ್ತಿರುವ ವಿಡಿಯೋದಲ್ಲಿ ಸೇರಿಸಿಕೊಂಡು ತಾನು ಮಾಡುತ್ತಿರುವ ಒಳ್ಳೆಯ ಕೆಲಸದ (ಡ್ರಾಪ್ ನೀಡುವ) ಬಗೆಗೆ ತಾನೇ ಶ್ಲಾಘಿಸುತ್ತ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಫ್ಯಾನ್‌ ಬೇಸನ್ನು ವಿಸ್ತರಿಸಲು ಪ್ರಯತ್ನಿಸುತ್ತಾನೆ.

ಅಂ) ಚಲನಚಿತ್ರದ ಕೊನೆಯಲ್ಲಿ ದುರ್ಗ್ಯಾನ ತಾಯಿ ಗೋಡೆಗೆ ನೇತು ಹಾಕಿದ್ದ ವಿಧಾನ ಸೌಧದ ಪಟವನ್ನು(ಕ್ಯಾಲೆಂಡರಿನ ಒಂದು ಪುಟ?) ಕಿತ್ತು, ಹರಿದು ಬಿಸಾಕುತ್ತಾಳೆ!

ಮೇಲಿನ ಶಾಟ್‌/ದೃಶ್ಯಗಳ ಯಾದಿ ಈ ಚಲನಚಿತ್ರದ ದೃಶ್ಯ ಸಂಯೋಜನೆಯ ಸೂಕ್ಷ್ಮತೆ ಹಾಗೂ ಕಸುವನ್ನು ಸೂಚಿಸುತ್ತದೆ. ಇವುಗಳ ಹೆಣೆಯುವಿಕೆ ತುರುಕಿದಂತೆ ಭಾಸವಾಗುವುದಿಲ್ಲ! ಒಂದರ್ಥದಲ್ಲಿ ಸಾವಯವ ಎನ್ನಬಹುದಾದ ರೀತಿಯಲ್ಲಿ ಮೂಡಿ ಬಂದಿದೆ. ಚಿತ್ರಕಥೆ(ಸ್ಕ್ರೀನ್‌ ಪ್ಲೇ) ಬಿಗಿಯಾಗಿದೆ. ಚಲನಚಿತ್ರದಾದ್ಯಂತ ಹಾಸುಹೊಕ್ಕಾಗಿರುವ ಮೌನ ಅಪ್ಪ-ಮಗನ ದುರ್ಗಮ ಪರಿಸ್ಥಿತಿಯ ವಿಷಣ್ಣತೆಯನ್ನು ವೀಕ್ಷಕರಿಗೆ ದಾಟಿಸುತ್ತದೆ; ಕಾಡಿಸುತ್ತದೆ ಕೂಡ. ಜಡ್ಜ್‌ಮೆಂಟಲ್‌ ಆಗದಂತೆ ನಿರ್ದೇಶಕರು ತಾವು ಹೇಳಬೇಕಾದ್ದನ್ನು ಹೇಳಿದ್ದಾರೆ! ಮಹದೇವ್‌ ಹಡಪದ್‌, ಜಹಂಗೀರ್‌, ಸಂಧ್ಯಾ ಅರೆಕೆರೆ ತಮ್ಮ ಪಾತ್ರಗಳಿಗೆ ಜೀವವನ್ನು ತುಂಬಿದ್ದಾರೆ. ದುರ್ಗ್ಯಾ ಪಾತ್ರವನ್ನು ಮಾಡಿರುವ ವೀರೇಶ್‌ ಗೊನಾವರ್‌ ತನ್ನ ಕಂಗಳ, ಮಾತುಗಳ ಮೂಲಕ ಗಮನವನ್ನು ಸೆಳೆಯುತ್ತಾನೆ. ಉತ್ತರ ಕರ್ನಾಟಕದ ರಾಯಚೂರು ಸೀಮೆಯ ಕನ್ನಡದ ಸೊಗಡಿರುವ ಈ ಚಲನಚಿತ್ರದಲ್ಲಿ ಈ ಭಾಗದ ಕೆಲವು ಗ್ರಾಮೀಣ ಹಾಡುಗಳನ್ನು ಹಿನ್ನೆಲೆ ಸಂಗೀತದಲ್ಲಿ ಬಳಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಇಂತಹ ಕೆಲವು ಕನ್ನಡ ಚಲನಚಿತ್ರಗಳು ಯುವ ನಿರ್ದೇಕರಿಂದ ಮೂಡಿ ಬಂದಿರುವುದು ಇತ್ಯಾತ್ಮಕ ಬೆಳವಣಿಗೆ. ಇವು ಪರ್ಯಾಯ ಚಲನಚಿತ್ರಗಳಿಗೆ ಉತ್ತಮ ನಾಳೆಗಳಿರಬಹುದಾದ ಸಾಧ್ಯತೆಯಿದೆ ಎಂಬ ಭರವಸೆಯನ್ನು ಹುಟ್ಟುಹಾಕುತ್ತವೆ. ವೀಕ್ಷಕರು ಇಂತಹ ಯತ್ನಗಳನ್ನು ಬೆಂಬಲಿಸಬೇಕು. ಕೋಟಿ ಕೋಟಿ ದುಡಿಯುವ ನಿರ್ಮಾಪಕರು, ನಿರ್ದೇಶಕರು, ದೊಡ್ಡ ಬ್ಯಾನರ್‌ಗಳ ಚಲನಚಿತ್ರ ಸಂಸ್ಥೆಗಳು ಒಂದಿಷ್ಟು ಉದಾರವಾಗಿ ಇಂತಹ ಚಲನಚಿತ್ರಗಳ ಜೊತೆ ನಿಲ್ಲಬೇಕು.

‍ಲೇಖಕರು avadhi

April 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಎಂ ನಾಗರಾಜ ಶೆಟ್ಟಿ

    ವಿವರಣೆಗಳೊಂದಿಗೆ ಚಿತ್ರದ ಅಂತಃಸತ್ವವನ್ನು ಹಿಡಿದಿದ್ದೀರಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: