ರನ್ನಕಂದ

ಕೃತಿ : ಮೌನ ಯುದ್ಧ, ಮಾತಿಗೂ.. ಮನಸಿಗೂ..
ಕವಿ : ಎಲ್ಲಾರ್ ಸೂರ್ಯ (ಸುರೇಶ ಎಲ್. ರಾಜಮಾನೆ)
ಪ್ರಕಾಶನ : ವಿಶ್ವ ಖುಷಿ ಪ್ರಕಾಶನ
ಬಾಗಲಕೋಟೆ
ಪುಟಗಳು : 92
ಬೆಲೆ : 120/-
ಯುವ ಕವಿ ಸುರೇಶ ಎಲ್. ರಾಜಮಾನೆ ಮೌನ ಯುದ್ಧ ಎಂಬ ತಮ್ಮ ಎರಡನೆಯ ಕವಿತಾ ಸಂಕಲನದೊಂದಿಗೆ ಈಗ ಮಾತಾಗಿದ್ದಾರೆ.
ಅವರ ಮೊದಲ ಕವಿತಾ ಸಂಕಲನ ‘ಸುಡುವ ಬೆಂಕಿಯ ನಗು’ ಓದುಗರ ಎದೆಯ ಬೆಂಕಿಯ ನಗುವಿಗೆ ಸಮಾಂತರವಾಗಿ ಸಂತೋಷವನ್ನು, ಸಮಾಧಾನವನ್ನು ಸಹಾನುಭೂತಿಯನ್ನು ಅರಳಿಸಿತ್ತು. ಈಗ ಅದಕ್ಕಿಂತಲೂ ಭಿನ್ನವಾದ ತುಂಬಾ ಅನುಭವಿಸಿ, ಅನುಭಾವಿಸಿ ಹಾಗೂ ಆಸ್ವಾದಿಸಿ ಯುದ್ಧದ ಸವಿಯನ್ನು ಉಣಬಡಿಸಿದ್ದಾರೆ.
ರನ್ನನ ಹುಟ್ಟೂರಿನವರೇ ಆದ ಎಲ್ಲಾರ್ ಸೂರ್ಯ ರನ್ನನ ಗದಾಯುದ್ಧವನ್ನೊಮ್ಮೆ ಈ ಕೃತಿಯ ಮೂಲಕ ನೆನಪಿಸುತ್ತಾರೆ. ಬಹುಶಃ ಈ ಮೌನ ಯುದ್ಧ ಕೃತಿಯನ್ನು ವಿಮರ್ಶಿಸುವುದಕ್ಕಿಂತ ಅಭ್ಯಸಿಸುವುದು ಉತ್ತಮವೆನಿಸುತ್ತದೆ. ಪ್ರಖ್ಯಾತ ಕವಿಗಳು ಹಾಗೂ ಪ್ರಾಧ್ಯಾಪಕರಾಗಿರುವ ಡಾ. ಟಿ. ಯಲ್ಲಪ್ಪ ಮುನ್ನುಡಿ ಬರೆದಿದ್ದಾರೆ. ಗಾಂಭೀರ್ಯ ಕಾವ್ಯ ಪರಂಪರೆಯಲ್ಲಿ ಕಾವ್ಯ ಅನುಸಂಧಾನಗೈಯುತ್ತಿರುವ ಕೆಲವೇ ಕವಿಗಳಲ್ಲಿ ಎಲ್ಲಾರ್ ಸೂರ್ಯ ಪ್ರಮುಖರೆನಿಸುತ್ತಾರೆ.
ಯುದ್ಧಕ್ಕಿಳಿಯುವ ಮುನ್ನ ಕವಿ ಮಾತಾಗಿರುವುದು ಕವಿತೆಗಳ ಓದಿಗೆ ಮತ್ತಷ್ಟು ಪುಷ್ಠಿ ನೀಡುತ್ತದೆ. ವ್ಯವಸ್ಥೆಗಳ ಅವರ ಅಸಮಾಧಾನದ ಬಗ್ಗೆ ಅವರದೇ ಮಾತು ಬಹಳ ಮಾರ್ಮಿಕವಾಗಿದೆ. ‘ವ್ಯವಸ್ಥೆಯಲ್ಲಿನ ಅವ್ಯವಸ್ಥೆಗಳು ಕಣ್ಣಿಗೆ ಕಂಡರೂ ಕೇಳುವ, ಪ್ರಶ್ನೆ ಮಾಡುವ ಗೋಜಿಗೆ ಹೋಗದ ಪರಿಸ್ಥಿತಿಯಲ್ಲಿರುವ ನನ್ನನ್ನು ಮತ್ತು ನನ್ನ ಈ ಅಸಹಾಯಕತೆಯನ್ನೂ ನಾನಿಲ್ಲಿ ಶಪಿಸುತ್ತೇನೆ. ಅದಕ್ಕಾಗಿಯೇ ಮೌನ ಯುದ್ಧದ ಮೊರೆ ಹೋಗಿದ್ದೇನೆ ‘ಎನ್ನುವ ಅವರ ಈ ದ್ವಂದ್ವ ನಮ್ಮ ನಿಮ್ಮೆಲ್ಲರ ಒಳಗೂ ಇದೆ.
56 ಅಸ್ತ್ರ (ಕವಿತೆಗಳು)ಗಳ ಹೊತ್ತು ಅವರ ಮೌನ ಯುದ್ಧ ಶುರುವಾಗುತ್ತದೆ. ಅಸ್ತ್ರಗಳ ಹೆಸರುಗಳು ಸಹ ಅಷ್ಟೇ ತೀಕ್ಷ್ಣವಾಗಿವೆ. ಕವಿತೆಗಳ ಶೀರ್ಷಿಕೆಗಳೇ ಓದುಗರನ್ನು ಕವಿತೆಗಳ ಆಳಕ್ಕೆ ಇಳಿಸಿ ಒಂದೊಂದು ಕವಿತೆಗಳ ಉದ್ದಗಲಕ್ಕೆ ತೇಲಿಸಿ ಮತ್ತೇ ಮೌನಕ್ಕೆ ತಂದು ಬಿಡುತ್ತವೆ. ಈ ಘಟ್ಟದಲ್ಲಿ ಓದುಗರೇ ನಿರ್ಧರಿಸಬೇಕು.. ಮೌನ ಯುದ್ಧ ಎಷ್ಟು ಸರಿ ಎಷ್ಟು ತಪ್ಪು ಎಂದು.
ಕವಿ ಎಲ್ಲಾರ್ ಸೂರ್ಯ ಅವರು ತಮ್ಮ ಕವಿತೆಗಳಲ್ಲಿ ಬದುಕಿನಲ್ಲಿ ನಾವು ಅನುಭವಿಸುವ ಸಹಜ ನೋವುಗಳನ್ನು ಚಿತ್ರಿಸಿದ್ದಾರೆ. ಬದುಕಿನ ಹಲವು ತಿರುವುಗಳನ್ನು ಮನೋಜ್ಞವಾಗಿ ತೋರಿದ್ದಾರೆ. ಸಂಬಂಧಗಳ ಮೌಲಿಕತೆಯನ್ನು ಎತ್ತಿ ಹಿಡಿದಿದ್ದಾರೆ. ಸಮಾಜ ಮುಖಿ ವಿಚಾರಗಳನ್ನು ಕವಿತೆಗೆ ಸವರಿ ದೊಡ್ಡ ಫಿರಂಗಿಗಳನ್ನೇ ಸಿದ್ಧ ಪಡಿಸಿದ್ದಾರೆ. ಯುದ್ಧಕ್ಕೆ ಮುನ್ನ ಅಂತರಂಗ ರಣರಂಗವನ್ನು ಶಾಂತವಾಗಿಸಿದ್ದಾರೆ.
ಬಿದ್ದಲ್ಲೇ ಬಿದ್ದು ಕಣ್ಣೆತ್ತಿ ನೋಡಲಾಗದ
ಅಸಹಾಯಕ ಮನಸ್ಥಿತಿ ಅಸುನೀಗುವ ಮುನ್ನ
ಶತ್ರುಗಳೂ ಕೈಕೊಟ್ಟು ಎತ್ತಿ
ನೀರ ಹನಿ ಚುಮುಕಿಸಿ ಎಚ್ಚರಿಸುವ ಚಿತ್ರ
ಹೃದಯವದು ರಕ್ತದ ಮಡುವಿನಲಲಿ ಮಿಂದು
ಅಳುತ್ತಿರುವ ಸದ್ದು ಎಲ್ಲೆಡೆ ಕೇಳುತ್ತಿದೆ
ಯುದ್ಧ ಸಿದ್ಧತೆಯಲ್ಲಿ ಕಳೆದುಕೊಂಡ ಅಸ್ತ್ರವೇ
ಕೈಗೆ ಸಿಗಲಿಲ್ಲ…
ಯುದ್ಧವು ಶುರುವಾಗಿದೆ
ಹಿಟ್ಲರನಷ್ಟು ತೀವ್ರವಾಗಿಯೂ…
ಬುದ್ಧನಷ್ಟು ಸೌಮ್ಯವಾಗಿಯೂ…
(ದೃಶ್ಯ)
ಯುದ್ಧದ ಔಚಿತ್ಯವೇ ಗೊತ್ತಿಲ್ಲದೇ ಯುದ್ಧಕ್ಕೆ ಸಿದ್ಧರಾಗಿ ನಿಂತಿರುವುದು ಈ ಕವನದಲ್ಲಿ ಆಪ್ತವೆನಿಸುತ್ತದೆ. ಯುದ್ಧದ ಪರಿಯೂ ಅಂತಹುದೇ.ಅಪ್ಪನ ಬಗ್ಗೆ ಕವಿ ಅತೀ ಭಾವಪರವಶನಾಗಿ ಬರೆದ ಕವಿತೆಗಳಲ್ಲಿ ತೀರಾ ಕಾಡುವಂತಹ ಸಾಲುಗಳು ಹೀಗಿವೆ.
ಅವರಿವರಲಿ ಬೇಡಿ ತಂದು ಬದುಕಿಸಿದಾಂವ
ಬೇಡಿ ತಂದದ್ದನ್ನು ಬಿಡಿಗಾಸೂ ಬಿಡದಂತೆ ಮರಳಿಸಿದಾಂವ
ಮನಸಿಟ್ಟು ದುಡಿದು ಉಣ್ಣೋ ಸ್ವಾಭಿಮಾನಿ ಅಂವ
ಅದೇ ಸ್ವಾಭಿಮಾನವ ನನಗುಣಿಸಿದ ಅಪ್ಪ ನನ್ನಾಂವ
(ನನ್ನೊಳಗಿನ(ಅ)ವನೇ ನಾನು)
ಅಪ್ಪನ ಕರ್ತವ್ಯವನ್ನು ತನ್ನ ಕುಟುಂಬದೆಡೆಗೆ ಅವನ ತುಡಿತವನ್ನು ಹಾಗೂ ತನ್ನವರಿಗೆ ತನ್ನದೇ ಆದರ್ಶಗಳನ್ನು ಕಲಿಸುವ ಪರಿಯನ್ನು ಕವಿತೆಯನ್ನು ಓದಿಯೇ ತಿಳಿಯಬೇಕು. ಕವಿ ಕನ್ನಡವನ್ನ ಕನ್ನಡಿತಿಯನ್ನಾಗಿಸಿ ವಳ ವಾಸ್ತವತೆಯನ್ನ ವಿವರಿಸುವಲ್ಲಿ ಗೆಲ್ಲುತ್ತಾರೆ.
ಅವ್ಳಿಗಿ ಅವಳಿಲ್ದೇ ಅರ್ದಾ ಮರ್ದಾ ಆಗೋಗೈತಿ ಬಾಳು
ವಸಿ ಕಾಪಾಡ್ರಪ್ಪ ಅವಳೂ ಕನ್ನಡ್ದೋಳು
(ಕಂಗೆಟ್ಟವ್ಳೆ ಕನ್ನಡ್ತಿ)
ಎನ್ನುತ್ತ ಕನ್ನಡದ ಅಭಿಮಾನವನ್ನ ಹೆಣ್ಣಿಗೆ ಹೋಲಿಸಿ, ಹೆಣ್ಣನ್ನು ಕನ್ನಡಕ್ಕೆ ಹೋಲಿಸಿ ರನ್ನನಂತೆ, ಬೇಂದ್ರೆಯಂತೆ ಶ್ಲೇಷಾಲಂಕಾರದಲ್ಲಿ ಬರೆದಿರುವ ಈ ಕವಿತೆ ಸದಾ ಕನ್ನಡಿಗರನ್ನು ಕಾಡಿ ಬೇಡಿ ಎಚ್ಚರಿಸುತ್ತದೆ. ಕವಿತೆ ಓದುತ್ತ ಓದುತ್ತ ಮಾತು ಹಾಗೂ ಮೌನದ ನಡುವೆ ಯುದ್ಧ ಸನ್ನದ್ಧರನ್ನಾಗಿಸುತ್ತದೆ.
ಕವಿತೆಗಳ ಓದು ಒಂದೇ ಬಾರಿ ಓದಿ ಮುಗಿಸುವಂತಿಲ್ಲ. ಕವಿತೆಯ ಸಾಲುಗಳಲ್ಲಿನ ಭಾವ ಓದುಗರನ್ನು ಅಂತರಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸುವುದು ಪ್ರತೀ ಕವಿತೆಗಳ ವೈಶಿಷ್ಟ್ಯ. ಕವಿತೆ ನನ್ನದಲ್ಲ ಎಂದು ನಿರಾಕರಿಸುವ ಕವಿಯ ಭಾವ ಕೆಳಗಿನ ಕವಿತೆಯಲ್ಲಿ ಕಾಣಬಹುದು.
ಕೂಗುವ ಬಾಯಿಗೆ ಶಕುನದ ಘಾಟು
ಕೂಗಿದೆದೆಗೆ ಬಿತ್ತು ಯಾರೋ ಬೀಸಿದ ಮೊನಚು ಕಲ್ಲಿನೇಟು
ಭಲೇ! ಭಲೇ! ಸಾಕ್ಷರ ದಕ್ಕಿತು ಕಲಿತ ಅಕ್ಕರಗಳಿಗೂ
ಸಾರ್ಥಕತೆಯೀಗ
(ನಿಜ! ಈ ಕವಿತೆ ನನ್ನದಲ್ಲ)
ಈ ನಿರಾಕರಣೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ಯ ಹರಣವಾಗುತ್ತಿರುವ ಹಾಗೂ ಕಂದಾಚಾರಗಳ ಬಗ್ಗೆ ಕವಿ ಕ್ಷೋಭಿತರಾಗುತ್ತಾರೆ. ಶಾಂತವಾಗುತ್ತ ಅದರಲ್ಲಿನ ಭಾವಗಳನ್ನು ನಿರಾಕರಿಸುತ್ತಾರೆ. ಕೊನೆಯ ಕವಿತೆಯಾದ ‘ಮೌನ ಯುದ್ಧ’ ಕೊನೆಯದಾಗಿದ್ದರೂ ಅದೆಷ್ಟೋ ಚಿಂತನೆಗಳಿಗೆ ಮೊದಲಾಗುತ್ತದೆ.
ಮಾತುಗಳು ಮಾತುಗಳೊಂದಿಗೆ
ಮನಸುಗಳು ಮನಸುಗಳೊಂದಿಗೆ ಯುದ್ಧಕ್ಕೆ ನಿಂತಾಗಿದೆ\
ಕನ್ನಡಿಯೊಮ್ಮೆ ನೋಡಬೇಕಿದೆ
ಮುಖದ ಮೇಲಿನ ಸಾಹಸದ ಮಂದಹಾಸವನ್ನರಿಯಲು
ಗದೆಯಿಲ್ಲದೆ ವಧೆಯಿಲ್ಲದೆ
ದಳಪತಿಗಳಿಲ್ಲದೆ, ದೊರೆಗಳಿಲ್ಲದೇ, ಸೇನೆಯಿಲ್ಲದೇ
ಶಸ್ತ್ರಾಸ್ತ್ರಗಳಿಲ್ಲದೆ..
(ಮೌನ ಯುದ್ಧ)
ಮಾತಿಗೂ ಮನಸಿಗೂ, ಮಾತು ಮಾತಿಗೂ ಮನಸು ಮನಸಿಗೂ ನಡೆವ ಯುದ್ಧಕ್ಕೆ ಯಾವ ತೃತೀಯ ಪಕ್ಷಗಳ ಅವಶ್ಯಕತೆಯಿಲ್ಲ. ಆ ಯುದ್ಧವನ್ನು ಜಯಿಸಿದರೂ ಒಂದೊಂದು ನೆಲೆಗಟ್ಟುಗಳಲ್ಲಿ ಪರಾಜಿತ ವಿಜೇತರಾಗುತ್ತೇವೆ. ಮತ್ತೊಂದು ಯುದ್ಧಕ್ಕೆ ಆ ಸ್ಥಿತಿ ಕಾರಣೀಭೂತವಾಗುತ್ತದೆ ಎಂಬುದನ್ನು ಕವಿ ಅತ್ಯದ್ಭುತವಾಗಿ ಚಿತ್ರಿಸಿದ್ದಾರೆ.
ಕೆಲವು ಕಡೆ ಬಹಳ ಗಾಂಭೀರ್ಯತೆ ಇಲ್ಲವೆನಿಸುತ್ತಾದರೂ ಆ ಸಂದರ್ಭದಲ್ಲಿ ಕವಿತೆಗೆ ಅದೇ ಭೂಷಣ ಎನಿಸುತ್ತದೆ. ಪ್ರೇಮ ಕವಿತೆಗಳಲ್ಲಿ ಎಲ್ಲಾರ್ ಸೂರ್ಯ ಕೆ.ಎಸ್.ನರಸಿಂಹಸ್ವಾಮಿಯಂತಹ ಬೇಂದ್ರೆಯನ್ನು ತಂದು ಎದುರು ಕೂರಿಸುತ್ತಾರೆ. ಬೇಂದ್ರೆಯಂತಹ ಕೆ.ಎಸ್.ನರಸಿಂಹಸ್ವಾಮಿಯವರನ್ನು ನೆನಪಿಸುತ್ತಾರೆ.
ಕವಿತೆಗಳು ಸಾಕಷ್ಟು ದೀರ್ಘವಲ್ಲದಿದ್ದರೂ ಓದಿನ ಸುಖ ನೀಡುತ್ತವೆ. ಹಿಂದಿನ ಕವನ ಸಂಕಲನವಾದ ಸುಡುವ ಬೆಂಕಿಯ ನಗುವಿಗಿಂತಲೂ ಮೌನಯುದ್ಧದ ಕವಿತೆಗಳು ಪ್ರಬುದ್ಧವಾಗಿವೆ. ಬದುಕಿನ ಎಲ್ಲ ಆಯಾಮಗಳಲ್ಲೂ ಹೊಕ್ಕು ಸಿಕ್ಕಿದ ಭಾವಗಳನ್ನು ಕವಿತೆಯಾಗಿಸಿದ್ದಾರೆ. ಕವಿತೆಗಳಲ್ಲಿ ಪ್ರತಿಮೆಗಳು, ದೃಶ್ಯ ನಿರೂಪಣೆ ಸರಳ ಸ್ಪಷ್ಟವಾಗಿದ್ದು, ಓದುಗರ ಕೌಶಲ್ಯವನ್ನು ಬಯಸುತ್ತವೆ. ಹುಡುಕಾಟ, ಅಧ್ಯಯನ, ಆಶಾವಾದ, ಪ್ರಯತ್ನಶೀಲತೆ, ಸಕಾರಾತ್ಮಕ ಮನೋವಾಂಛೆ, ಬದುಕಿನ ಸೂಕ್ಷ್ಮ ಸಂವೇದನೆಗಳು ಕವಿತೆಗಳ ಜೀವಾಳವಾಗಿದೆ. ಇವನ್ನೆಲ್ಲ ಸೂಕ್ತ ಶಬ್ದಗಳಲ್ಲಿ, ಅವಿಚ್ಛಿನ್ನ ವಾಕ್ಯಗಳಲ್ಲಿ ಅಭಾಸವಾಗದಂತೆ ಹೊಂದಿಸಿ ಕವಿತೆ ಹೆಣೆದಿದ್ದು ಕವಿಯ ಸೃಜನಶೀಲತೆಗೆ ಹಿಡಿದ ಕೈಗನ್ನಡಿ.
ಕವಿಯ ತುಡಿತಗಳು, ಮಿಡಿತಗಳು ಓದಿನ ನಂತರವೂ ಕೆಲ ಕಾಲ ಕಾಡುತ್ತವೆ. ಲೌಕಿಕ ನೆಲೆಗಟ್ಟಿನಿಂದ ಅಲೌಕಿಕ ನೆಲೆಯೆಡೆ ನಮ್ಮನ್ನು ಚಿಂತನಶೀಲರನ್ನಾಗಿ ಮಾಡುತ್ತವೆ. ಮೌನ ಯುದ್ಧ ಮುಗಿಯುವುದಿಲ್ಲ. ಕಾಲ ಚಕ್ರದ ಅಂಚಿಗೆ ಅಂಟಿಕೊಂಡು ಉರುಳುತ್ತದೆ. ಗೆಲುವನ್ನು ಸೋಲು ಹಿಂಬಾಲಿಸಿ, ಸೋಲನ್ನು ಗೆಲುವು ಹಿಂಬಾಲಿಸಿ ಉರುಳುತ್ತದೆ. ಸಂಭಾಳಿಸುವ ಜಾಣ್ಮೆಯನ್ನೂ ಕವಿತೆಗಳು ಕಲಿಸುತ್ತವೆ.





ತುಂಬುಪ್ರೀತಿಯ
ಧನ್ಯವಾದಗಳು ಅವಧಿಪತ್ರಿಕಾ ಬಳಗಕ್ಕೂ ಮತ್ತು ಸಚೀನಕುಮಾರ್ ಹಿರೇಮಠ (ರನ್ನಕಂದ) ಅವರಿಗೂ..
❤