ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೌನ ಮುರಿಯೋಣ ಬನ್ನಿ: ನನಗಾಗ ಹತ್ತು ವರ್ಷವಿದ್ದಿರಬೇಕು..

ಇದು ಖೋ ಸರಣಿ. ಇದನ್ನು ಓದಿದ ನಂತರ ದಯವಿಟ್ಟು ಶೇರ್ ಮಾಡಿ ನಿಮ್ಮ ಸ್ನೇಹಿತರಿಗೆ ಕಳಿಸಿ, ಅವರ ಅನುಭವಗಳನ್ನೂ ಸೇರಿಸಲು ಉತ್ತೇಜಿಸಿ.

whatsapp-image-2016-09-07-at-15-04-34ನನಗಾಗ ಹತ್ತು ವರ್ಷವಿದ್ದಿರಬೇಕು.

ಸ್ಕೂಲಿಗೆ ಹೋಗುತ್ತಿದ್ದ ಕೆಂಪು ಬಸ್ಸಿನಲ್ಲಿ ಕಂಡಕ್ಟರ್ ಒಬ್ಬ ಹೇಮಯ್ಯ ಅಂತ. ಅವನ ನಡವಳಿಕೆ ಸರಿ ಇರುತ್ತಿರಲಿಲ್ಲ. ಸ್ಕೂಲಿಗೆ ಹೋಗುತ್ತಿದ್ದ ನಮ್ಮನ್ನ ಮುದ್ದು ಮಾಡುವ ನೆಪದಲ್ಲಿ ಹೇಗೇಗೋ ಮುಟ್ಟೋದು, ಹುಡುಗೀರ ಚಡ್ಡಿ ಹೆಂಗಿರುತ್ತೆ ತೋರ್ಸಿ ಅಂತ ತನ್ನ ತೆವಲುಗಳನ್ನ ಆಟ ಆಡಿಸೋ ನೆಪದಲ್ಲಿ ತೀರಿಸಿಕೊಳ್ಳೋದು ಮಾಡುತ್ತಿದ್ದ.

ಬಹಳ ಹುಡುಗಿಯರು ಹೆದರುತ್ತಿದ್ದರು. ಬಸ್ಸಿಲ್ಲದೆ ಸ್ಕೂಲ್ ಇಲ್ಲ. ಬಸ್ ಹತ್ತಿದರೆ ’ರಷ್ಶು’ ’ಹಿಂದಕ್ಕೆ ಹೋಗ್ರೀ’ ಎನ್ನುವ ನೆವದಲ್ಲಿ ಇವನು ಎಲ್ಲರ ಮೈಗೆ ಮೈ ಉಜ್ಜಿಕೊಂಡು ಹೋಗೋ ಕಾಟ. ಮನೇಲಿ ಹೇಳಿದರೆ ’ಚೈಲ್ಡ್ ಸೆಕ್ಷುಯಲ್ ಅಬ್ಯೂಸ್’ ಎನ್ನುವ ಪದಜೋಡಣೆಯೇ ಗೊತ್ತಿಲ್ಲದ ಕಾಲವದು. ಸುಮ್ಮನೆ ಸ್ಕೂಲಿಗೆ ಚಕ್ಕರ್ ಹಾಕೋಕೆ ಇಲ್ಲದ ನೆಪ ಹೇಳ್ತಿದಾಳೆ ಅಂತ ಎಲ್ಲರ ಮನೇಲೂ ಬಯ್ಗುಳ.

ಯಾಕಂದ್ರೆ ಹೇಮಯ್ಯ ಎಲ್ಲಾ ಅಮ್ಮಂದಿರ ಪ್ರಕಾರ ಒಳ್ಳೆಯ ಕಂಡಕ್ಟರ್. ಮಕ್ಕಳಿಗೆ ಏನು ಮಾಡ್ತಿದ್ದ ಎನ್ನುವುದು ಮುಖ್ಯವಲ್ಲ. ಅವನು ಎಂದೂ ಚಿಲ್ಲರೆ ಕದಿಯುತ್ತಿರಲಿಲ್ಲ. ಮಕ್ಕಳೇ ಟಿಕೆಟ್ ತೆಗೆಸಿಕೊಂಡರೂ ಸರಿಯಾಗಿ ದುಡ್ಡು ವಾಪಾಸ್ ಕೊಡ್ತಿದ್ದ ಅನ್ನುವ ಕಾರಣಕ್ಕೆ ಅವನು ಮಹಾನ್ ದೈವಾಂಶಸಂಭೂತ. ಚಿಕ್ಕ ಸಂಬಳದಲ್ಲಿ ಸಂಸಾರ, ಬಳಗ, ಮಕ್ಕಳು, ಮರಿಗಳನ್ನು ಸಾಕುತ್ತಿದ್ದ ನಮ್ಮ ಹಿಂದಿನ ಪೀಳಿಗೆಗೆ ಮಾನಸಿಕ ಕಿರಿಕಿರಿ ಒಂದು ವಿಷಯವೇ ಅಲ್ಲ. ಅದು ಅವರ ಕಾಲದ ದೊಡ್ಡ ಸತ್ಯ.

ಹೇಮಯ್ಯನ ಬಗ್ಗೆ ಇಂಥದ್ದೇ ಕಂಪ್ಲೇಂಟ್ ಅಂತ ಹೇಳಲಿಕ್ಕೂ ಮಾತುಗಳಿರುತ್ತಿರಲಿಲ್ಲ. ಅಸಹನೆ ಬೆಳೆಯುತ್ತಾ ಬಂದಂತೆ ಒಂದು ದಿನ ನನ್ನ ಅಮ್ಮನಿಗೆ ನಾನು ಹೇಮಯ್ಯನ ಬಗ್ಗೆ ಹೇಳಿದೆ.

“ಇನ್ನೊಂದ್ ಸಾರಿ ಅವ್ನ್ ಹಂಗೆ ಮಾಡಿದಾ ಅಂದ್ರೆ ಜೋರು ಮಾಡು. ಗಲಾಟೆ ಮಾಡು. ಉಳಿದೋರು ಸಪೋರ್ಟ್ ಮಾಡ್ಲಿ, ಬಿಡ್ಲಿ…ನೀನು ಸುಮ್ನೆ ಇರ್ಬೇಡ. ಕಳ್ರು ಸುಮ್ಮನಿದ್ರೆ ಇನ್ನೂ ಜಾಸ್ತಿ ಮಾಡ್ತಾರೆ. ಪಬ್ಲಿಕ್ಕಾಗಿ ಗಲಾಟೆ ಮಾಡು, ಆಮೇಲೆನಾಗುತ್ತೆ ನೋಡನ”

ಹಳ್ಳಿಯಲ್ಲಿ ಹುಟ್ಟಿ ದಾವಣಗೆರೆಗೆ ಬಂದು ಪಿ ಯು ಸಿ ಕೂಡ ಮುಗಿಸದ ನನ್ನ ಅಮ್ಮ ಶಶಿಕಲಾ ನನಗೆ ಧೈರ್ಯದ ಪಾಠ ಹೀಗೆ ಹೇಳಿಕೊಟ್ಟಳು. ನಾನು ಗಲಾಟೆ ಮಾಡಿದೆ. ನನ್ನ ಬೆಂಬಲಕ್ಕೆ ಬೇರೆಯವರೂ ಕೂಡ ಬಂದರು. ಹೇಮಯ್ಯ ಮತ್ತು ಅವನ ಥರದ ವಿಕೃತಿಯನ್ನು ಎದುರಿಸಲು ನನ್ನ ಅಮ್ಮ ಹೇಳಿಕೊಟ್ಟ ’ವಿರೋಧ’ದ ಅಸ್ತ್ರ ಈವತ್ತಿಗೂ ನನ್ನ ಬತ್ತಳಿಕೆಯಲ್ಲಿದೆ.

ಅದನ್ನೇ ’ಅಮ್ಮ ಕೊಟ್ಟ ಬಂಗಾರ’ ಅಂತ ನನ್ನ ಮಕ್ಕಳಿಗೂ ಧಾರಾಳವಾಗಿ ಕೊಟ್ಟಿದ್ದೀನಿ. ಎಲ್ರೂ ಗಲಾಟೆ ಮಾಡ್ಕೊಂಡು ಆರಾಮಾಗಿದ್ದಾರೆ.

‍ಲೇಖಕರು Admin

8 September, 2016

1 Comment

  1. Sangeeta Kalmane

    ನಾನು ಹಡೆದವ್ವ. ಅಪರೂಪದ ಮಗಳು ನಮ್ಮ ಮನೆತನಕ್ಕೆ. ಎಂಟು ಗಂಡು ಮೊಮ್ಮಕ್ಕಳ ನಂತರ ಹುಟ್ಟಿದ ಮೊಮ್ಮಗಳು ನನ್ನ ಮಗಳು. ಸಿಸೇರಿಯನ್ ಮಾಡಿ ಮಗು ತೆಗೆದಾಗ ಜೋರಾದ ಅಳು ಕೇಳಿ ಹೊರಗಿದ್ದ ಮನೆಯವರ ಮೊಗದಲ್ಲಿ ಸಂತಸದ ರಂಗೋಲಿ ಬಿತ್ತಿದ ಕ್ಷಣ ಪ್ರತಿಯೊಬ್ಬ ತಾಯಿ ಅನುಭವಿಸುವ ಚಂದದ ಕನಸಾದ ನನಸು. ಹಾಗೆ ನನಗನಿಸಲೇ ಇಲ್ಲ. ಏಕೆಂದರೆ ಮಗು ಹೆಣ್ಣೆಂದು ಡಾಕ್ಟರ್ ಹೇಳಿದಾಗ “ಅಯ್ಯೋ! ನೀನ್ಯಾಕೆ ಧರೆಗಿಳಿದೆ. ಹೆಣ್ಣು ಹುಟ್ಟಿದ ಮೇಲೆ ಕೆಲವು ಕಷ್ಟ ಎಷ್ಟೇ ಶ್ರೀಮಂತರಾದರೂ ಅನುಭವಿಸಲೇ ಬೇಕಲ್ಲ ಮಗಳೆ” ಕಣ್ಣಾಲಿಗಳು ಒದ್ದೆ ಆಗಿದ್ದಂತೂ ನಿಜ.

    ಅತ್ತೆಯ ಮುಖದಲ್ಲಿ ನೋವಿನ ಗೆರೆ “ಹೆಣ್ಣಾಗಿ ಹುಟ್ಟಬಾರದಿತ್ತು” ಬಾಯಲ್ಲಿ ಹೊರ ಬಿದ್ದ ಮೊದಲ ಮಾತು. ನನಗೆ ನಿಜಕ್ಕೂ ಆಶ್ಚರ್ಯ. “ಯಾಕೆ ಅತ್ತೆ, ಅಪರೂಪದ ಮೊಮ್ಮಗಳಲ್ಲವೆ ಹೀಗ್ಯಾಕೆ ಹೇಳುತ್ತೀರಾ?,” ” ಸುಮ್ಮನಿರು. ಹೆಣ್ಣಿನ ಜೀವನ ಅಂದರೆ ಕಷ್ಟದ ಕೂಪ. ನೀನು ಅತ್ಯಂತ ಮುತುವಜಿ೯ಯಿಂದ ಕಾಪಾಡಿಕೊ ಮಗಳೆ” ಅಂತ ತಲೆ ಸವರಿ ನುಡಿದ ಮಾತುಗಳು ಇಂದಿಗೂ ಕಿವಿಯಲ್ಲಿದೆ.

    ಹೌದು ಹೆಣ್ಣು ಜನ್ಮ ತಳೆದ ದಿನಗಳಿಂದ ಪ್ರತಿ ದಿನ ಪ್ರತಿ ಕ್ಷಣ ಕಾಳಜಿ ವಹಿಸಲೇ ಬೇಕು. ಅವಳನ್ನು ತಿದ್ದಿ ತೀಡಿ ಒಳ್ಳೆಯ ಶಿಕ್ಷಣ, ಸಮಾಜದಲ್ಲಿಯ ಆಗು ಹೋಗುಗಳ ಅರಿವು ಮಾಡಿಸುತ್ತಲೇ ಇರಬೇಕಾಗುತ್ತದೆ. ಬೆಳೆದು ದೊಡ್ಡವಳಾದಂತೆ ಮದುವೆಯ ಯೋಚನೆ ಅತಿ ದೊಡ್ಡ ಚಿಂತೆ. ಎಂತಹ ಗಂಡ ಸಿಗುತ್ತಾನೊ. ಹೇಗೆ ನೋಡಿಕೊಳ್ಳುತ್ತಾನೊ. ಇಷ್ಟು ವಷ೯ ಸಾಕಿ ಸಲಹಿ ಹೇಗೆ ಬಿಟ್ಟಿರೋದು. ಅವಳ ಜೀವನ ಸುಃಖವಾಗಿಡಪ್ಪ ಅನ್ನುವ ಮೊರೆ ಪ್ರತಿಯೊಬ್ಬ ಹೆತ್ತವರ ಮೊರೆ.

    ಕಾಡುವ ಪ್ರಶ್ನೆಗಳಿಗೆ ನಾನು ಹುಡುಕಿದ ದಾರಿ ಅವಳನ್ನು ಹೆಣ್ಣು ಅನ್ನುವ ಹೆದರಿಕೆಯ ಭಾವನೆಯಿಂದ ಮುಕ್ತವಾಗಿ ಧೈರ್ಯವಂತಳಾಗಿ ಬೆಳೆಸೋದು. Independent ಆಗಿ ಅವಳಷ್ಟಕ್ಕೆ ಜೀವನದಲ್ಲಿ ಏನೇ ಬಂದರೂ ಎದುರಿಸುವ ತಾಕತ್ತು ತುಂಬ ಬೇಕು. ಒಳ್ಳೆಯ ವಿಧ್ಯೆ ಬುದ್ಧಿ, ಆಚಾರ, ವಿಚಾರ ತುಂಬಿ ಬೆಳೆಸುವ ಛಲ.

    ಹೌದು ನಾನಿವತ್ತು ನನ್ನ ಗುರಿ ತಲುಪಿದ್ದೇನೆ. ಅವಳನ್ನು ಕಣ್ತುಂಬಿ ಸಂಭ್ರಮ ಪಡುತ್ತೇನೆ.

    “ದೇಶ ಸುತ್ತ ಬೇಕು, ಕೋಶ ಓದ ಬೇಕು. ಅನುಭವ ಬರೆದು ಜನರ ಮುಂದೆ ಇಡಬೇಕು. ಮಾಡುವ ಕೆಲಸದಲ್ಲಿ ಶೃದ್ಧೆ ಇಡಬೇಕು. ಎಲ್ಲರಿಂದ ಸೈ ಅನಿಸಿಕೊಳ್ಳಬೇಕು. ಬರುವ ಸಂದರ್ಭ ಎದುರಿಸಿ ಬಾಳಬೇಕು” ಈ ದಾರಿಯಲ್ಲಿ ಮುನ್ನಡೆಯುತ್ತಿರುವ ಹೆಣ್ಣು ಇವಳು. ಹೇಳಿಕೊಳ್ಳಲು ಹೆಮ್ಮೆ ನನಗೆ.

    ನೀ ಹೆಣ್ಣು. ಅಲ್ಲಿ ಹೋಗಬೇಡ ಇಲ್ಲಿ ಹೋಗ ಬೇಡ. ಹಾಗೆ ಮಾಡ ಬೇಡ ಹೀಗೆ ಮಾಡ ಬೇಡ. ಹಾಗೆ ಹೀಗೆ ಅಂತ ಬರೀ ಹೆದರಿಕೆಯನ್ನೇ ತುಂಬಿ ಹೆಣ್ಣನ್ನು ಮುಚ್ಚಿಡುವ ಪ್ರಯತ್ನ ತಪ್ಪು. ಪ್ರತಿಯೊಂದು ವಿಷಕ್ಕೂ ತಿಳುವಳಿಕೆ ನೀಡಿ ಯಾವುದು ತಪ್ಪು ಯಾವುದು ಸರಿ ಯಾರೊಂದಿಗೆ ಹೇಗಿರಬೇಕೆನ್ನುವ ತಿಳುವಳಿಕೆ ನೀಡಿ ಸ್ವತಂತ್ರ ವ್ಯಕ್ತಿತ್ವ ಹೆಣ್ಣು ಮಕ್ಕಳಲ್ಲಿ ಮೊದಲಿಂದಲೇ ಜ್ಞಾನದ ದೀವಿಗೆ ಹಚ್ಚಿ ಬೆಳೆಸುವ ಪ್ರಯತ್ನ ಪ್ರತಿಯೊಬ್ಬ ಹೆತ್ತವರ ಕತ೯ವ್ಯ. ಕತ೯ವ್ಯ ಮರೆತು ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ನಿವೆಷ್ಟು ಮುತುವಜಿ೯ವಹಿಸಿ ಬೆಳೆಸುತ್ತೀರೊ ಅಷ್ಟೆ ಸದೃಡ ಪ್ರಜೆಯಾಗಿ ಸಮಾಜಕ್ಕೆ ಮಾದರಿಯಾಗುವುದರಲ್ಲಿ ಸಂಶಯವಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading