ಮೌನದೊಳಗಿನ ಮಾತನ್ನು ಓದುವ ಜಾಣ್ಮೆ ಎಲ್ಲರಿಗೂ ಬರಲಿ.

ಗೋಡೆಯೊಳಗಿನ ಮಹಾಮೌನ

“ಬಾಗಿಲಿನ ಕರೆಗಂಟೆಯನ್ನು ಕೇವಲ ಮೂರುಬಾರಿ ಮಾತ್ರ ಒತ್ತಿರಿ,
ಬಾಗಿಲು ತೆರರೆಯದಿದ್ದರೆ ಸಂದೇಶವನ್ನು ಬರೆದು ಪೆಟ್ಟಿಗೆಯಲ್ಲಿ ಹಾಕಿರಿ,
ಸಹಕರಿಸಿದ್ದಕ್ಕೆ ಧನ್ಯವಾದಗಳು”

-ಹೀಗೆಂದು ಹೇಳಿ ಮನೆಯ ಬಾಗಿಲನ್ನು ಮುಚ್ಚಿಕೊಂಡವರು ಸಾಮಾನ್ಯದವರೇನಲ್ಲ. ದೇಶ ಕಂಡ ಅಪರೂಪದ ಸಂಗೀತಗಾರರಲ್ಲಿ ಒಬ್ಬರು. ಅಪರೂಪದ ವಾದನವಾದ ಸುರ್ ಬಹಾರ್ ಅನ್ನು ಲೀಲಾಜಾಲವಾಗಿ ನುಡಿಸಬಲ್ಲ ದೇಶದ ಏಕಮಾತ್ರ ಸಂಗೀತಗಾರ್ತಿ.

ಹಾಗೆಂದು ಇದು ಕೇವಲ ಒಂದು ತಿಂಗಳು ಅಥವಾ ವರ್ಷದ ಮಾತು ಕೂಡ ಅಲ್ಲ. ಅನೇಕ ದಶಕಗಳೇ ಕಳೆದುಹೋಗಿವೆ ಆ ಮನೆಯೊಳಗಿನ ದಿವ್ಯಮೌನಕ್ಕೆ. ಆದರೂ ಅನವಶ್ಯಕವಾದ ಒಂದೂ ಮಾತಿಲ್ಲದೇ ಅಲ್ಲಿಯ ದಿನಚರಿಗಳು ಸಾಗುತ್ತಲೇ ಇವೆ. ಮೌನ ಅಲ್ಲಿ ಒಂದು ತಪಸ್ಸಿನ ರೂಪ ಪಡೆದು ನೆಲೆಸಿದೆ. ತಪಸ್ಸಿನ ಹಿಂದಿನ ಉದ್ದೇಶ ವಿಫಲವಾದ ನಂತರವೂ ಅದು ಹಠಯೋಗದಂತೆ ನಿರಂತರವಾಗಿ ಮುಂದುವರೆಯುತ್ತಲೇ ಇದೆ.

ಹೌದು, ಇದು ಪ್ರಸಿದ್ಧ ಸಂಗೀತಗಾರರಾಗಿದ್ದ ಅಲ್ಲಾವುದ್ದೀನ ಖಾನ್ ಅವರ ಮುದ್ದಿನ ಮಗಳ ಕಥೆ. ಜಗತ್ಪ್ರಸಿದ್ಧ ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ಅವರ ಮೊದಲ ಪತ್ನಿಯ ಕಥೆ. ಅಂದರೆ ಅನ್ನಪೂರ್ಣಾದೇವಿಯೆಂಬ ಜೀವಂತ ಸಂಗೀತದ ಕಥೆ.

ಕಥೆಯ ಪ್ರಾರಂಭದಲ್ಲಿ ಅನ್ನಪೂರ್ಣಾದೇವಿಯ ಹೆಸರು ರೋಶನಾರಾ ಖಾನ್. ಮನೆಯ ಕಿರಿಯ ಮಗಳು ಅವಳು. ತಂದೆ ಅಲ್ಲಾವುದ್ದೀನ್ ಖಾನ್ ಬರೋಡೆಯ ಮಹಾರಾಜ ಬ್ರಿಜ್‍ನಾಥ್ ಸಿಂಗ್‍ರ ಆಸ್ಥಾನ ವಿದ್ವಾಂಸರಾಗಿದ್ದರು. ಅಣ್ಣ ಅಕಬರ್ ಅಲಿ ಖಾನ ತಂದೆಯಿಂದ ಸಂಗೀತಾಭ್ಯಾಸ ಪಡೆಯುತ್ತಿದ್ದ. ಪುಟ್ಟ ಹುಡುಗಿ ರೋಶನಾರಾಗೆ ತಾಲೀಮಿನ ಮನೆಗೆ ಪ್ರವೇಶವಿರಲಿಲ್ಲ. ಮನೆಯ ವರಾಂಡಕ್ಕೆ ಹೊಂದಿಕೊಂಡೇ ಇದ್ದ ಪಕ್ಕದ ಕೊಠಡಿಯಲ್ಲಿ ದಿನವೂ ಅಪ್ಪ ಮಗನ ತಾಲೀಮು ನಡೆಯುತ್ತಿತ್ತು. ತಪ್ಪಿ ಎಲ್ಲಿಯಾದರೂ ರೋಶನಾರಾ ಆ ಕೊಠಡಿಯೊಳಗೆ ಇಣುಕಿದರೆ ಅಪ್ಪನ ಕೆಂಗಣ್ಣು ಅವಳನ್ನು ಬೆದರಿಸುತ್ತಿತ್ತು.

ಹಾಗೆಂದು ಅಲ್ಲಾವುದ್ದೀನ ಖಾನರು ಕರ್ಮಠರೇನೂ ಆಗಿರಲಿಲ್ಲ. ತನ್ನ ಮೊದಲ ಮಗಳಿಗೆ ಸಂಗೀತದ ಪಾಠವನ್ನು ಸಂತೋಷದಿಂದಲೇ ಹೇಳಿಕೊಟ್ಟಿದರು. ಆದರೆ ಮದುವೆಯ ನಂತರ ಸಂಗೀತವೇ ಅವಳ ಬದುಕಿಗೆ ತೊಡಕಾಗಿ ಕಣ್ಣೆದುರೇ ಅವಳ ಬಾಳು ಮೂರಾಬಟ್ಟೆಯಾದದ್ದು ಅವರನ್ನು ಇನ್ನಿಲ್ಲದಂತೆ ಕಾಡುತ್ತಿತ್ತು. ಹಾಗಾಗಿ ಇನ್ನೊಂದು ಅನಾಹುತಕ್ಕೆ ಅವರು ಸಿದ್ಧರಿರದ ಕಾರಣ ಕಿರಿಯ ಮಗಳು ರೋಶನಾರಾಳನ್ನು ಉದ್ದೇಶಪೂರ್ವಕವಾಗಿ ಸಂಗೀತದಿಂದ ದೂರವಿಟ್ಟಿದ್ದರು.

ಆದರೆ ಕಲೆ ತನ್ನ ಪಾತ್ರಧಾರಿಗಳನ್ನು ತಾನೇ ಆಯ್ದುಕೊಳ್ಳುತ್ತದೆ ಎಂಬ ಮಾತು ಖಂಡಿತ ಸುಳ್ಳಲ್ಲ. ಒಂದು ದಿನ ಹೀಗಾಗಿಹೋಯ್ತು. ಅಣ್ಣ ಅಕಬರ್ ಅಲಿ ತನ್ನ ದಿನದ ರಿಯಾಜ್ ನಲ್ಲಿ ತಲ್ಲೀನನಾಗಿದ್ದ. ಸರೋದ್ ನುಡಿಸುತ್ತಿದ್ದ ಅವನು ನಡುವಲ್ಲಿ ಎಲ್ಲೋ ಒಂದು ಸ್ವರವನ್ನು ತಪ್ಪಾಗಿ ನುಡಿಸಿದ. ಅಲ್ಲೇ ಅಂಗಳದಲ್ಲಿ ಕುಂಟಾಬಿಲ್ಲೆ ಆಡುತ್ತಿದ್ದ ರೋಶನಾರ ತಕ್ಷಣ ಅಣ್ಣನ ಕೊಠಡಿಯೊಳಗೆ ನುಗ್ಗಿ ಹೇಳಿದಳು, “ಅಣ್ಣಾ, ಬಾಬಾ ಹೇಳಿಕೊಡುತ್ತಿದ್ದುದು ಹಾಗಲ್ಲ. ಹೀಗೆ.” ಎಂದು ಸರಿಯಾದ ಸ್ವರವನ್ನು ಹಾಡಿ ತೋರಿಸಿದಳು. ಅಣ್ಣನಿಗೂ ದಿಗ್ಭ್ರಮೆಯಾಗಿತ್ತು. ತಂಗಿಯ ಸಂಗೀತಜ್ಞಾನ ಅವನನ್ನು ಬೆರಗುಗೊಳಿಸಿತ್ತು. ಇನ್ನೇನು ಅವನು ಸರಿಯಾಗಿ ನುಡಿಸಬೇಕೆನ್ನುವಾಗಲೇ ತಂದೆ ಬಾಗಿಲಲ್ಲಿ ಬಂದು ನಿಂತಿದ್ದರು. ರೋಶನಾರ ನಿಜಕ್ಕೂ ಭಯಗೊಂಡಿದ್ದಳು. ಅದಕ್ಕೆ ಸರಿಯಾಗಿ ತಂದೆ ಅವಳನ್ನು ಮಹಡಿಯ ಮೇಲಿರುವ ತನ್ನ ಖಾಸಗಿ ಕೋಣೆಗೆ ಬರಲು ಹೇಳಿ ಸರಸರನೆ ಅಲ್ಲಿಂದ ನಿರ್ಗಮಿಸಿದರು.

ಪುಟ್ಟ ಮಗಳು ಹೆದರುತ್ತಲೇ ತನ್ನ ಬಾಬಾನ ಕೊಠಡಿಯನ್ನು ಪ್ರವೇಶಿಸಿದಳು. ಖಾನ್ ಮೌನವಾಗಿ ತನ್ನ ಮಗಳ ತಲೆಯಮೇಲೆ ಕೈಯ್ಯಿಟ್ಟರು. “ಅವಳು ನಿನ್ನನ್ನು ಆರಿಸಿಬಿಟ್ಟಿದ್ದಾಳೆ, ನಾನೇನು ಮಾಡಲಿ?” ಎಂದೇನೋ ತನ್ನಷ್ಟಕ್ಕೇ ಗೊಣಗಿಕೊಂಡರು. ಮಗಳಿಗೆ ಏನೊಂದೂ ಅರ್ಥವಾಗಲಿಲ್ಲ. ತಂದೆಯ ಮುಖವನ್ನೇ ದಿಟ್ಟಿಸತೊಡಗಿದಳು. “ಮಗೂ, ನೀನೂ ಸಂಗೀತ ಕಲಿಯುತ್ತೀಯೇನು?” ಎಂದು ಕೇಳಿದರು. ರೋಶನಾರಾಳ ಆನಂದಕ್ಕೆ ಪಾರವೇ ಇರಲಿಲ್ಲ. ಅಸಲಿಗೆ ಅವಳು ಸಂಗೀತ ತಾಲೀಮು ನಡೆಯುವಾಗಲೆಲ್ಲ ಅಂಗಳದಲ್ಲಿ ಕುಂಟಾಬಿಲ್ಲೆ ಆಡುತ್ತಾ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದಳು. ಆದರೂ ತಂದೆಯ ಭಯಕ್ಕೆ ಸಂಗೀತ ಕಲಿಯುವ ತನ್ನ ಅದಮ್ಯ ಆಸೆಯನ್ನು ಎದೆಯೊಳಗೆ ಬಚ್ಚಿಟ್ಟುಕೊಂಡಿದ್ದಳು. ಇಂದು ಅವಳ ಸಂಗೀತದ ಅರಿವಿನ ಆಳವನ್ನು ಕಂಡ ತಂದೆ ತಾನಾಗಿಯೇ ಸಂಗೀತ ಕಲಿಸಲು ಮುಂದಾಗಿದ್ದರು. ಅವಳ ಸಂಗೀತದ ತಾಲೀಮು ಆರಂಭಗೊಂಡ ಬಗೆಯಿದು.

ಅಲ್ಲಾವುದ್ದೀನ್ ಖಾನ್ ಅಂತಿಂಥ ಸಂಗೀತಗಾರರಾಗಿರಲಿಲ್ಲ. “ಸೇನಿಯಾ ಮೈಹಾರ್” ಎಂಬ ಹೊಸ ಸಂಗೀತದ ಘರಾಣೆಯನ್ನೇ ಹುಟ್ಟುಹಾಕಿದವರು. ದೇಶದ ಮೂಲೆಮೂಲೆಯಿಂದ ಅವರಲ್ಲಿಗೆ ಶಿಷ್ಯರಾಗಲು ಹುಡುಕಿಕೊಂಡು ಬರುವವರಿದ್ದರು. ಅವರ ಯಾರೊಬ್ಬ ಶಿಷ್ಯರಲ್ಲೂ ಅವರು ಸುರ್ ಬಹಾರ್ ನುಡಿಸುವ ನೈಪುಣ್ಯವನ್ನವರು ಗುರುತಿಸಿರಲಿಲ್ಲ. ಆದರೆ ರೋಶನಾರಾ ಮಾತ್ರ ಅಸಾಮಾನ್ಯ ಸಾಧಕಿಯೆಂಬುದನ್ನವರು ಮನಗಂಡಿದ್ದರು. ಒಂದುದಿನ ಮೈಮರೆತು ಸಿತಾರ್ ನುಡಿಸುತ್ತಿದ್ದ ಮಗಳಲ್ಲಿ ಅವರು ಕೇಳಿದರು, “ರೋಶನೀ, ನೀನು ಸಿತಾರ್ ಬಿಟ್ಟು ಸುರ್ ಬಹಾರ್ ನುಡಿಸುವಿಯೇನು?” ಮಗಳು ಅಡ್ಡಡ್ಡ ತಲೆಯಾಡಿಸಿದಳು.

ತಂದೆ ಮುಂದುವರೆಸಿ ಹೇಳಿದರು, “ಆದರೆ ಮಗು ಸುರ್ ಬಹಾರ್ ನುಡಿಸುವುದು ಸಾಮಾನ್ಯದ ಮಾತಲ್ಲ. ಸಾಮಾನ್ಯರು ಅದನ್ನು ಅರ್ಥಮಾಡಿಕೊಳ್ಳಲೂ ಸಾಧ್ಯವಿಲ್ಲ. ಸಂಗೀತದ ಸೂಕ್ಷ್ಮತೆಯುಳ್ಳವರು ಮಾತ್ರವೇ ಸುರ್ ಬಹಾರ್ ನ್ನು ಅಸ್ವಾದಿಸಬಲ್ಲರು. ಕೆಲವೊಮ್ಮೆ ನೀನು ಸಾಮಾನ್ಯರಿಂದ ಕಲ್ಲು ತೂರಿಸಿಕೊಳ್ಳುವ ಪ್ರಸಂಗವೂ ಬಂದೀತು. ಇದಕ್ಕೆಲ್ಲ ಸಿದ್ಧಳಿರುವಿಯೇನು?” ಅವಳು ಹೌದೆನ್ನುವಂತೆ ಮತ್ತೆ ತಲೆಯಲ್ಲಾಡಿಸಿದಳು. ಅಲ್ಲಿಂದ ಖಾನರು ತನ್ನ ಗುರುವಿನಿಂದ ಕಲಿತ ಉತ್ಕೃಷ್ಟ ಕಲೆಯೊಂದರ ಮುಂದುವರಿಕೆಯೆಂಬಂತೆ ಮಗಳನ್ನು ಅದರಲ್ಲಿ ಸಜ್ಜುಗೊಳಿಸತೊಡಗಿದರು.

ಎಲ್ಲವೂ ಚೆನ್ನಾಗಿತ್ತು, ಅವಳಿಗೆ ಹದಿನಾಲ್ಕು ತುಂಬುವವರೆಗೂ. ಪಂಡಿತ್ ರವಿಶಂಕರ್ ಆಗ ಅಲ್ಲಿಯೇ ಸಂಗೀತ ಕಲಿಯುತ್ತಿದ್ದರು. ಅವರ ಅಣ್ಣನೂ ಖಾನ್ ರ ಶಿಷ್ಯನೇ. ಅವನು ತನ್ನ ಸ್ಫುರದ್ರೂಪಿ ತಮ್ಮನಿಗೆ ಮಗಳನ್ನು ಕೊಡಿರೆಂದು ಗುರುವಿನಲ್ಲಿ ಕೇಳಿದ. ಖಾನ್ ರಿಗೆ ನಿರಾಕರಿಸಲು ಕಾರಣಗಳೇ ಇರಲಿಲ್ಲ. ಮೊದಲ ಮಗಳನ್ನು ಸಂಪ್ರದಾಯಸ್ಥ ಮುಸ್ಲಿಂ ಕುಟುಂಬಕ್ಕೆ ಮದುವೆಮಾಡಿಕೊಟ್ಟು ಕೈಸುಟ್ಟುಕೊಂಡಿದ್ದ ಖಾನರು ಇವಳನ್ನು ಸಂತೋಷದಿಂದಲೇ ತನ್ನ ಪ್ರೀತಿಯ ಶಿಷ್ಯನಿಗೆ ಧಾರೆಯೆರೆದುಕೊಟ್ಟರು. ಅಲ್ಲಿಗೆ ರೋಶನಾರಾಳ ಪಾತ್ರ ಮುಗಿದು ಅನ್ನಪೂರ್ಣಾದೇವಿಯ ಹೊಸಪಾತ್ರವೊಂದು ಸೃಷ್ಠಿಯಾಯಿತು.

ಮದುವೆಯ ನಂತರವೂ ಅನ್ನಪೂರ್ಣಾ ಕಠಿಣ ತಾಲೀಮನ್ನು ಮುಂದುವರೆಸಿದ್ದಳು. ಅಣ್ಣ ಅಕಬರ್ ಅಲಿಖಾನನ ಸಂಗೀತ ಶಾಲೆಯಲ್ಲಿ ನಿರಂತರವಾಗಿ ಸಂಗೀತ ಪಾಠಗಳನ್ನು ಹೇಳಬೇಕಾಗಿತ್ತು. ಜೊತೆಗೆ ವರ್ಷದೊಳಗೇ ಮಗ ಶುಭೇಂದ್ರನ ಜನನವೂ ಆಗಿಹೋಯ್ತು. ಮಗುವಿನ ಆರೋಗ್ಯ ಪದೇ ಪದೇ ಕೈಕೊಡತೊಡಗಿತು. ಎಂಥದ್ದೇ ಸನ್ನಿವೇಶದಲ್ಲೂ ಅವಳು ತಾಲೀಮನ್ನು ಮಾತ್ರ ಬಿಡುತ್ತಿರಲಿಲ್ಲ. ಗಂಡ ರವಿಶಂಕರರ ಜೊತೆಯಲ್ಲಿ ಸಂಗೀತ ಕಛೇರಿಗಳನ್ನೂ ನೀಡುತ್ತಿದ್ದದರು. ಹೀಗೆ ಜೀವನ ಪ್ರಯಾಸಕರವಾಗಿ ಸಾಗುತ್ತಿತ್ತು.

ಅನ್ನಪೂರ್ಣಾದೇವಿಯ ಸಂಗೀತದಲ್ಲಿ ಎದೆಂದಿಗೂ ಅಪಸ್ವರ ಬರಲು ಸಾಧ್ಯವೇ ಇರಲಿಲ್ಲ. ಆದರ ಬದುಕಿನ ವೀಣೆ ಪಾತ್ರ ನಿರಂತರವಾಗಿ ಅಪಸ್ವರವನ್ನು ನುಡಿಸತೊಡಗಿತು. ಸಂಗೀತ ಕಛೇರಿ ಮುಗಿದರೆ ಸಾಕು, ಪ್ರೇಕ್ಷಕರೆಲ್ಲರೂ ಅವರನ್ನು ಸುತ್ತುವರೆಯುತ್ತಿದ್ದರು ಮತ್ತು ಅವಳ ಸ್ವರಸಾಧನೆಯನ್ನು ಕೊಂಡಾಡುತ್ತಿದ್ದರು. ಸ್ವತಃ ಅವಳ ಅಣ್ಣನೇ ಅನೇಕ ಸಲ ಎಲ್ಲರೆದುರಿಗೆ ಹೇಳುತ್ತಿದ್ದ, “ನನ್ನನ್ನು, ರವಿಯನ್ನು ಒಟ್ಟಿಗೆ ತಕ್ಕಡಿಯ ಒಂದು ಬದಿಗೆ ಕೂಡಿಸಿ, ಅನ್ನಪೂರ್ಣಳನ್ನು ಇನ್ನೊಂದು ಬದಿಯಲ್ಲಿ ಕೂಡಿಸಿದರೂ ಅವಳ ಸಂಗೀತದ ತೂಕವೇ ಹೆಚ್ಚು” ಎಂದು. ಇವೆಲ್ಲವುಗಳಿಂದ ಗಂಡ ರವಿಶಂಕರರ ಹಣೆಯಲ್ಲಿ ಸಣ್ಣ ಗೆರೆಗಳೇಳುವುದನ್ನು ಅವಳು ಗಮನಿಸಿದ್ದಳು. ಯಾಕೋ ಬದುಕಿನ ರೈಲು ಹಳಿತಪ್ಪುತ್ತಿದ್ದಂತೆ ಕಂಪಿಸಿದಳು ಅವಳು.

ಅಂದು ತಂದೆಯ ಹೆಸರಿನಲ್ಲಿ ದೊಡ್ಡ ಸಂಗೀತದ ಉತ್ಸವ ನಡೆದಿತ್ತು. ಪ್ರತಿಸಲವೂ ತಪ್ಪದೇ ಸಿತಾರ್ ನುಡಿಸುತ್ತಿದ್ದ ರವಿಶಂಕರ್ ಅಂದು ಕಾಣಿಸಲಿಲ್ಲ. ಅಂದು ಅನ್ನಪೂರ್ಣ ನೀಡಿದ ಕಛೇರಿ ಮಾತ್ರ ಸಂಗೀತದ ಇತಿಹಾಸದಲ್ಲಿ ಮರೆಯಲಾಗದ ಮೈಲಿಗಲ್ಲಿನಂತಿತ್ತು. ಕೇಳಿದ ಪ್ರತಿಯೊಬ್ಬರೂ ಈ ಸಂಗೀತದ ನದಿಗೆ ತಡೆಯೇ ಇಲ್ಲವೆಂದು ತಲೆದೂಗಿದರು. ಎಲ್ಲ ಮುಗಿದ ಮೇಲೆ ಮನೆಯಲ್ಲೊಂದು ದಿವ್ಯ ಮೌನ! ತಂದೆ ಮಗಳನ್ನು ಹತ್ತಿರ ಕರೆದು ಹೇಳಿದರೆ, “ಮಗಳೇ, ಸಂಸಾರವನ್ನು ಉಳಿಸಿಕೋ” ಮಗಳು ಅಷ್ಟೇ ಪ್ರೀತಿಯಿಂದ ತಂದೆಯ ಕೈ ಮೇಲೆ ಭಾಷೆಯಿತ್ತಳು, “ಖಂಡಿತ.”

ಮುಂದೆ ನಡೆದದ್ದೊಂದು ಘೋರವಾದ ದುರಂತ. ಸಂಗೀತ ಕಛೇರಿಗೆ ಬರದೇ ಅಲ್ಲೆಲ್ಲೋ ಇದ್ದ ಗಂಡ ಮನೆಗೆ ಬಂದದ್ದೇ ತಡ, ಅನ್ನಪೂರ್ಣಾದೇವಿ ಗಂಡನನ್ನು ತನ್ನ ತಂದೆಯ ಭಾವಚಿತ್ರವಿದ್ದೆಡೆಗೆ ಕರೆದೊಯ್ದು, ಅವನ ಕೈಯಲ್ಲಿ ಕೈಯ್ಯಿಟ್ಟು ಭಾಷೆ ಕೊಟ್ಟಳು, “ನಾನಿನ್ನೆಂದೂ ಸಾರ್ವಜನಿಕ ಕಛೇರಿಯನ್ನು ನೀಡುವುದಿಲ್ಲ” ರವಿಶಂಕರರಿಗೆ ಇದರಿಂದ ಏನನ್ನಿಸಿತು ಯಾರಿಗೂ ಗೊತ್ತಿಲ್ಲ!

ಇದು ತನ್ನ ದಾಂಪತ್ಯವನ್ನು ಉಳಿಸಿಕೊಲ್ಲಲು ಹೆಣ್ಣೊಬ್ಬಳು ಮಾಡಿದ ಮಹಾನ್ ತ್ಯಾಗವಾಗಿತ್ತು. ಆದರೆ ಗಂಡನನ್ನು ಬಂಧಿಸಿಡಲು ಅಂತಹ ತ್ಯಾಗಕ್ಕೂ ಸಾಧ್ಯವಿರಲಿಲ್ಲ. ರವಿಶಂಕರ್ ನೃತ್ಯಗಾತಿಯೊಬ್ಬಳ ಹೆಜ್ಜೆಯೊಂದಿಗೆ ತನ್ನ ಬದುಕಿನ ನಡೆಯನ್ನು ಜೋಡಿಸಿಕೊಂಡರು. ಅದು ಕವಲಾದಾಗ ಇನ್ನೊಬ್ಬಳು, ಅದರಲ್ಲೂ ಅಪಸ್ವರ ಮಿಡಿದರೆ ಮಗದೊಬ್ಬಳು ಹೀಗೆ ಬದುಕಿನ ಯಾನದುದ್ದಕ್ಕೂ ಜೊತೆಗಾತಿಯರನ್ನು ಬದಲಾಯಿಸುತ್ತಲೇ ಹೋದರು. ಅನ್ನಪೂರ್ಣ ಮೇಲೆ ಹೇಳಿದಂತೆ ಬೋರ್ಡೊಂದನ್ನು ತನ್ನ ಮನೆಯ ಬಾಗಿಲಿಗೆ ತಗುಲುಹಾಕಿ ಕದವಿಕ್ಕಿಕೊಂಡರು.

ಮಗ ಶುಭೋವಿಗಲ್ಲದೇ ಬೇರೆ ಅನೇಕ ಶಿಷ್ಯರಿಗೆ ತನ್ನಲ್ಲಿರುವ ವಿದ್ಯೆಯನ್ನು ಧಾರೆಯರೆದ್ದೊಂದೇ ನಮ್ಮೆಲ್ಲರ ಭಾಗ್ಯ. ಅವರ ಶಿಷ್ಯ ಸಮೂಹವಾದರೂ ಅದೆಂಥದ್ದು? ನಿಖಿಲ್ ಬ್ಯಾನರ್ಜಿ, ಹರಿಪ್ರಸಾದ್ ಚೌರಾಸಿಯಾ, ದೇಬ್ ಶರ್ಮಾ, ನಿತ್ಯಾನಂದ ಹಳ್ದೀಪುರ, ಚಂದ್ರಕಾಂತ್ ಸರ್ವೆಶಮುಖ್, ಪ್ರದೀಪ್ ಬಾರೋಟ್, ಅಮಿತಹ ಭಟ್ಟಾಚಾರ್ಯ….. ಓಹ್! ಒಂದೊಂದೂ ಸಂಗೀತ ಲೋಕದ ಮುತ್ತು, ಹವಳ, ವಜ್ರ ವೈಢೂರ್ಯಗಳೇ. ಆದರೆ ಇವೆಲ್ಲರನ್ನು ತರಬೇತುಗೊಳಿಸುವ ಗುರು ಮಾತ್ರ ಯಾರೆದುರಿಗೂ ತನ್ನ ಸಂಗಿತವನ್ನು ತೆರೆದಿಡದ ವ್ರತಾಚರಣೆಯಲ್ಲಿದ್ದಾರೆ!

ಮಗ ಶುಭೋವಿಗೆ ಇಪ್ಪತ್ತೈದು ವರ್ಷವಾಗುವವರೆಗೂ ಅಮ್ಮನೊಂದಿಗೇ ಕಠಿಣ ಸಂಗೀತಾಭ್ಯಾದದಲ್ಲಿ ಮುಳುಗಿದ್ದ. ಅವನ ತಂದೆಯೀಗ ಅಂತರಾಷ್ಟ್ರೀಯ ಸಿತಾರ್ ವಾದಕರಾಗಿದ್ದರು. ಒಂದೆರಡು ವರ್ಷ ಕಳೆದಿದ್ದರೆ ಶುಭೋ ಕೂಡ ತಂದೆಯನ್ನು ಮೀರಿಸುವ ಸಂಗೀತಗಾರನಾಗುವುದರಲ್ಲಿ ಸಂಶಯವಿರಲಿಲ್ಲ. ಆದರೆ ಅವನ ದುರಾದೃಷ್ಟ ತಂದೆಯ ರೂಪದಲ್ಲೇ ಮುಂಬಯಿಗೆ ಬಂದಿತ್ತು.

ಸ್ಟುಡಿಯೋವೊಂದರಲ್ಲಿ ಅದ್ಭುತವಾದ ಸಿತಾರ ವಾದನದ ತುಣುಕನ್ನು ಕೇಳಿದ ಪಂಡಿತಜೀ ಅದನ್ನು ನುಡಿಸಿದವರ ಬಗ್ಗೆ ವಿಚಾರಿಸಿದರು. ಅದು ತನ್ನ ಮಗನದೇ ಸಂಗೀತವೆಂದಾಗ ಅವರಿಗೂ ಖುಶಿಯಾಯಿತು. ಮಗನನ್ನು ಭೇಟಿಯಾದರು. ತನ್ನೊಡನೆ ಅಮೇರಿಕಾಕ್ಕೆ ಬರುವಂತೆ ಕರೆದರು. ಮಗನಿಗೋ ಏರುತ್ತಿರುವ ಯೌವ್ವನ. ಅಪ್ಪನ ಪ್ರತಿಷ್ಠೆ, ಐಶಾರಾಮಗಳು ಕೈಬೀಸಿ ಕರೆಯುತ್ತಿದ್ದವು. ಆದರೆ ಅಮ್ಮನದು ಒಂದೇ ಹಠ. ನಿನ್ನ ಕಲಿಕೆಯಿನ್ನೂ ಮುಗಿದಿಲ್ಲ. ಒಂದೆರಡು ವರ್ಷಗಳ ನಂತರವೇ ನೀನು ಹೋಗಬೇಕು.

ಮಗ ಅಮ್ಮನ ಮಾತನ್ನು ತಿರಸ್ಕರಿಸಿ ಅಪ್ಪನ ಹಿಂದೆ ನಡೆದ. ತನ್ನ ಇಡಿಯ ಬದುಕನ್ನೇ ಕೈಯ್ಯಾರೆ ಹಾಳುಮಾಡಿಕೊಂಡ. ಅದ್ಭುತ ಸಂಗೀತಗಾರನಾಗಬೇಕಾದವನು ಜೀವನ ನಿರ್ವಹಣೆಗಾಗಿ ದೊಮಿನ್ ಹೌಸ್ ಗಳಲ್ಲಿ ದುಡಿಯತೊಡಗಿದ. ಮದುವೆಯಾಗಿ ಮೂರು ಮಕ್ಕಳ ತಂದೆಯೂ ಆದ. ತಂದೆಯೊಂದಿಗೆ ಮೊದಮೊದಲು ಸಂಗಿತ ಕಛೇರಿ ನೀಡುತ್ತಿದ್ದನಾದರೂ , ಅದೇಕೋ ಸಂಗೀತ ವಿಮರ್ಶಕರೆಲ್ಲರಿಗೂ ಅವನ ವಾದನದಲ್ಲಿ ಅಪಸ್ವರವೇ ಕೇಳುತ್ತಿತ್ತು. ಪ್ರೇಕ್ಷಕರು ಅವನನ್ನು ಕೊಂಡಾಡುತ್ತಿದ್ದರೂ ಮರುದಿನ ಪತ್ರಿಕೆಯಲ್ಲಿ ಮಾತ್ರ ಅವನು ವಿರೋಧವಾದ ವಿಮರ್ಶೆಯೇ ಪ್ರಕಟವಾಗುತ್ತಿತ್ತು.

ಇದರ ಹಿಂದೆ ಯಾರ ಕೈವಾಡವಿದೆಯೆಂದು ಯಾರು ಬಲ್ಲರು? ಅಂತೂ ಶುಭೋನ ಭವ್ಯ ಸಂಗೀತ ಭವಿಷ್ಯ ಮಂಕಾಗಿಹೋಯಿತು. ಕೊನೆಗೊಮ್ಮೆ ಸತ್ಯದರ್ಶನವಾಗಿ ತಾಯಿಯ ಬಳಿಗೆ ಬಂದನಾದರೂ ಆಗ ತುಂಬಾ ತಡವಾಗಿಹೋಗಿತ್ತು. ಬದುಕು ಅವನನ್ನು ಹೈರಾಣಾಗಿಸಿಬಿಟ್ಟಿತ್ತು. ಕೇವಲ ಐವತ್ತರ ಹರೆಯದಲ್ಲೇ ಅವನು ಹೃದಯಾಘಾತದಿಂದ ಮರಣಿಸಿದ. ಅನ್ನಪೂರ್ಣಾದೇವಿಯ ಕೊನೆಯ ಆಶಾಕಿರಣವೂ ಬದುಕಿನಿಂದ ನಿರ್ಗಮಿಸಿತು.

ಪ್ರಸಿದ್ಧ ವಯೋಲಿನ್ ವಾದಕ ಯೆಸೂದಿ ಮೆನುಹಿನ್ ಒಮ್ಮೆ ಭಾರತಕ್ಕೆ ಬಂದರು. ಪ್ರಧಾನಿ ಇಂದಿರಾಗಾಂಧಿಯವರನ್ನೂ ಭೇಟಿಯಾದರು. ಭೇಟಿ ಸಮಾಪ್ತಿಗೊಳ್ಳುವ ಮೊದಲು ತಮ್ಮ ಮನದಾಳದ ಬೇಡಿಕೆಯೊಂದನ್ನು ಪ್ರಧಾನಿಯೆದುರು ತೆರೆದಿಟ್ಟರು. ಅನ್ನಪೂರ್ಣಾದೇವಿಯವರ ಸಂಗೀತವನ್ನೊಮ್ಮೆ ಕೇಳಬೇಕೆಂದು. ಪ್ರಧಾನಿಯೇ ವಿನಂತಿಸಿದರೂ ಅನ್ನಪೂರ್ಣಾದೇವಿ ತಮ್ಮ ನಿರ್ಧಾರವನ್ನು ಸಡಿಲಿಸಲಿಲ್ಲ. ಅನೇಕ ಓಲೈಕೆಗಳ ನಂತರ ಕೊನೆಗೊಮ್ಮೆ ತಮ್ಮ ದೈನಂದಿನ ತಾಲೀಮನ್ನು ಕೇಳಲು ಅನುವುಮಾಡಿಕೊಡಲು ಒಪ್ಪಿದರು.

ಆದರೆ ಯೆಸೂದಿಗೆ ಆ ಅದೃಷ್ಟವಿರಲಿಲ್ಲ. ನಿಗದಿಪಡಿಸಿದ ದಿನ ಅವರು ಹತ್ತಿರದವರೊಬ್ಬರ ಅನಾರೋಗ್ಯದಿಂದಾಗಿ ಅವರು ತಮ್ಮೂರಿಗೆ ಮರಳಬೇಕಾದ್ದರಿಂದ ಅವರ ಜೊತೆಗಾರ ಜಾರ್ಜ ಹಾರಿಸನ್‍ಗೆ ಮಾತ್ರವೇ ಆ ಅದೃಷ್ಟ ಒಲಿಯಿತು. ಅನ್ನಪೂರ್ಣಾದೇವಿಯ ಶಿಷ್ಯಂದಿರನ್ನು ಬಿಟ್ಟರೆ ಅವರ ಸಂಗೀತವನ್ನು ಕೇಳಿದವರೆಂದರೆ ಈ ಹ್ಯಾರಿಸನ್ ಮಾತ್ರವೆ. ಅವರ ಸಂಗೀತದ ದಾಖಲೀಕರಣವನ್ನೂ ಅವರು ಖಡಾಖಂಡಿಯವಾಗಿ ನಿರಾಕರಿಸಿದ್ದಾರೆ. ಇದಿನ್ನೆಂತಹ ಹಠವಾದೀತು?

ಅವರ ಶಿಷ್ಯರಾಗಿ ಬಂದ ಮನಶಾಸ್ತ್ರಜ್ಞ ರೋಶಿಕುಮಾರ್ ಅವರನ್ನು ಅನ್ನಪೂರ್ಣದೇವಿಯವರು ತಮ್ಮ 55ನೆ ವಯಸ್ಸಿನಲ್ಲಿ ಸಂಗಾತಿಯಾಗಿ ಆರಿಸಿಕೊಂಡರು. ಅದೂ ಕೂಡ ತನ್ನ ಅಣ್ಣನ ಒತ್ತಾಸೆಗೆ ತಲೆಬಾಗಿ. ಉಳಿದಂತೆ ಅವರ ಲೋಕದರ್ಶನವೆಲ್ಲ ತನ್ನ ಶಿಷ್ಯರ ಮೂಲಕವೆ. ಸಂಗಿತ ತಾಲೀಮಿನ ವೇಳೆಯನ್ನು ಹೊರತುಪಡಿಸಿದರೆ ಉಳಿದೆಲ್ಲ ಸಮಯವನ್ನವರು ಸಾಮಾನ್ಯ ಹೆಂಗಸಿನಂತೆಯೇ ಕಳೆಯುತ್ತಾರೆ. ತನಗಲ್ಲದೇ ತನ್ನ ಶಿಷ್ಯರೆಲ್ಲರಿಗೂ ಅವರೇ ಕೈಯ್ಯಾರೆ ಅಡುಗೆ ತಯಾರಿಸುತ್ತಾರೆ, ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಳ್ಳುತ್ತಾರೆ, ಧ್ಯಾನ, ಯೋಗ ಎಲ್ಲವನ್ನೂ ಮಾಡುತ್ತಾರೆ. ಇವೆಲ್ಲವುದರ ಜೊತೆಗೆ ಸಂಜೆ ಮತ್ತು ಬೆಳಿಗ್ಗೆ ತಪ್ಪದೇ ಪಾರಿವಾಳಗಳಿಗೆ ಕಾಳನ್ನು ತಿನ್ನಿಸುತ್ತಾರೆ. ಅವರೊಳಗೊಂದು ಜೀವಂತಿಕೆಯನ್ನು ಸೂಚಿಸುವ ಸುಂದರ ಗಳಿಗೆಗಳಿವು.

ಅಲ್ಲೇ ಮನೆಯ ಗೋಡೆಯ ಮೇಲೆ ಒಳ್ಳೆಯ ಚಿತ್ರಗಾರನೂ ಆಗಿದ್ದ ಮಗ ಶುಭೋ ಚಿಕ್ಕವನಿರುವಾಗ ಗೀಚಿದ ಚಿತ್ರ ಇನ್ನೂ ಹಾಗೆಯೇ ಇದೆ. ಅವನ ನೆನಪುಗಳೂ ಅವರೊಳಗೆ ಹಾಗೆಯೇ ಇರಬಹುದು. ಪಂಡಿತಜೀ ತನ್ನ ಆತ್ಮಚರಿತ್ರೆಯಲ್ಲಿ ಅವರ ಬಗ್ಗೆ ತನಗನಿಸಿದಂತೆ ಬರೆದಾಗಲೂ ಅವರು ಮೌನವಾಗಿದ್ದಾರೆ ಒಂದೇ ಮಾತನ್ನು ಹೇಳಿ, “ ಪಂಡಿತಜೀಯವರಿಗೆ ಒಂದೋ ಮರೆವು ರೋಗವಿದೆ ಅಥವಾ ಕೀರ್ತಿಯ ಅಮಲು ತಲೆಗೇರಿದೆ.” ಅವರು ಗೋಡೆಯೊಳಗಿನ ಅವರ ಜಗತ್ತಿನಲ್ಲಿ ತಾವೇ ವಿಧಿಸಿಕೊಂಡ ಆವರಣದೊಳಗೆ ನಿರಾಳವಾಗಿಯೇ ಜೀವಿಸಿದ್ದಾರೆ, ಆದರೆ ಸಂಗೀತದ ಜಗತ್ತು ಮಾತ್ರ ಒಂದು ಅನರ್ಘ್ಯವಾದ ರತ್ನವನ್ನು ಕಳಕೊಂಡಿದೆ!

ಗಂಡ ಯಾವ ಆಫೀಸಿನ ಅಧಿಕಾರಿಯೇ ಆಗಿರಲಿ, ಅವನ ಪ್ರಮೋಶನ್ ಪರೀಕ್ಷೆಗಾಗಿ ಓದುತ್ತಾನೆಂದರೆ ಹೆಂಡತಿ ತನ್ನ ಮಕ್ಕಳ ಪಟಾಲಂನ್ನು ಕಟ್ಟಿಕೊಂಡು ತವರಿಗೆ ಮರಳುತ್ತಾಳೆ, ಗಂಡನ ಓದಿಗೆ ತೊಂದರೆಯಾಗಬಾರದೆಂದು. ಹೆಚ್ಚಿನ ಸಾಹಿತಿಗಳ ಹೆಂಡತಿಯರೆಲ್ಲರೂ ಒಳ್ಳೆಯ ಪ್ರತಿಕಾರರೆ. ಗಂಡ ಗೀಚಿದ್ದನ್ನು ಸುಂದರವಾದ ಪ್ರತಿ ತೆಗೆಯುವುದರಲ್ಲಿಯೇ ಅವರು ತಮ್ಮ ಬಾಳಿನ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ದೊಡ್ಡ, ದೊಡ್ಡ ಕಾದಂಬರಿಕಾರರ ಪತ್ನಿಯರಂತೂ ಗಂಡ ಕೋಣೆಯಲ್ಲಿ ಬರೆಯುತ್ತಿದ್ದಾರೆಂದರೆ ಸಾಕು, ಹೊತ್ತು ಹೊತ್ತಿಗೆ ಕಾಫಿ, ತಿಂಡಿ, ಊಟವನ್ನೆಲ್ಲ ಅಲ್ಲಿಗೇ ಸರಬರಾಜು ಮಾಡಿ, ಗಳಿಗೆಯೂ ಅಲ್ಲಿ ನಿಂತು ಮಾತನಾಡಿ ಅವರ ಸಮಯವನ್ನು ಹಾಳುಮಾಡದೇ ನಿರ್ಗಮಿಸುತ್ತಾರೆ.

ಚೆಂದದ ನೃತ್ಯಗಾರ್ತಿಯರು ಕೂಡ ಮದುವೆಯ ನಂತರ ಕೇವಲ ತನ್ನ ಗಂಡನ ವಸ್ತ್ರವಿನ್ಯಾಸಕರಾಗಿ ಬದಲಾಗಿದ್ದಾರೆ. ಗಂಡನ ಹಿತಕಾಯಲು ಉದ್ಯೋಗ ಬಿಟ್ಟವರು, ಕಲಿಕೆಯನ್ನು ಅರ್ಧದಲ್ಲಿಯೇ ನಿಲ್ಲಿಸಿದವರು, ಅವನ ಇಷ್ಟದಂತೆಯೇ ವಸ್ತ್ರವನ್ನು ಧರಿಸುವವರು, ತಮ್ಮ ಇಷ್ಟಾನಿಷ್ಟಗಲನ್ನೂ ಬದಲಾಯಿಸಕೊಂಡವರು, ಬ್ರಶ್‍ನ ತುದಿಗೆ ಪೇಸ್ಟ್ ಕೂಡಾ ಹಾಕಿ ಕೊಡುವವರು, ಬಿಸಿನೀರು ರೆಡಿ ಮಾಡಿ, ಟವೆಲ್ ನ್ನು ಇಟ್ಟು ಸ್ನಾನಕ್ಕೆ ಕರೆಯುವವರು… ಉಫ್. ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಯಾಕೆ ಇದನ್ನೆಲ್ಲ ಪಟ್ಟಿಮಾಡುತ್ತಿದ್ದೇನೆ, ಒಂದೂ ಹೊಳೆಯುತ್ತಿಲ್ಲ.

ಆದರೆ ಅದ್ಭುತವಾದ ಸಂಗೀತ ಪ್ರತಿಭೆಯೊಂದು ಲೋಕದ ಪಾಲಿಗೆ ಮೌನವಾಗಿಹೋದ ಕಥೆಯನ್ನು, “ಅವಳಿಗೆ ಮೊದಲಿನಿಂದಲೂ ಒಬ್ಬಳೇ ಸಂಗೀತ ಕಛೇರಿ ಕೊಡುವುದೆಂದರೆ ಆಗದು. ಪ್ರೇಕ್ಷಕರನ್ನು ನೇರವಾಗಿ ಎದುರಿಸಲು ಮುಜುಗರವಿರಬಹುದು. ನಾನು ಮೊದಮೊದಲೆಲ್ಲ ಒತ್ತಾಯಮಾಡಿ ಕಛೇರಿಗೆ ಕರೆದುಕೊಂಡು ಹೋಗುತ್ತಿದ್ದೆ. ನನ್ನಿಂದ ಬೇರ್ಪಟ್ಟ ಮೇಲೆ ಅವಳು ಕಛೇರಿ ಕೊಡುವುದನ್ನೇ ನಿಲ್ಲಿಸಿದಳು. ಕಾರಣ ನನಗೆ ತಿಳಿಯದು. ಅವಳು ಖಂಡಿತ ಒಳ್ಳೆಯ ಸಂಗೀತಗಾರ್ತಿ” ಎಂದು ವ್ಯಾಖ್ಯಾನಿಸುವವರ ಘನತೆಯ ಬಗ್ಗೆ ಏನು ಹೇಳುವುದು?

ಅವಳ ಸಂಶಯ ಪ್ರವೃತ್ತಿಯೇ ನಮ್ಮ ಬೇರ್ಪಡುವಿಕೆಗೆ ಕಾರಣ ಎಂಬುದಂತೂ ಬೇರ್ಪಡುವಿಕೆಗೆ ಲೋಕದ ಒಂದು ಸಾಮಾನ್ಯ ಕಾರಣವೇ ಆಗಿಹೋಗಿದೆ. ಮೊನ್ನೆಯಷ್ಟೇ ಸಿನಿಮಾ ನಟನೊಬ್ಬ ತನ್ನ ಐದನೆಯ ಮದುವೆಗೆ ತನ್ನ ಮೊದಲ ಹೆಂಡತಿ ತನ್ನ ತಂದೆತಾಯಿಯರನ್ನು ಸರಿಯಾಗಿ ನೋಡಿಕೊಳ್ಳದಿರುವುದೇ ಕಾರಣ ಎಂದು ತೊದಲುತ್ತಿದ್ದ.

ಕಲಾಜಗತ್ತು ಎಷ್ಟು ವರ್ಣಮಯವೋ ಅಷ್ಟೇ ಕತ್ತಲೆಯ ಕೂಪವೂ ಹೌದು. ಹೆಚ್ಚಿನ ಹೆಣ್ಣುಗಳ ಪಾಲಿಗದು ಕತ್ತಲೆಯ ಕೂಪವೇ ಆಗಿಹೋದದ್ದು ಕಲಾಚರಿತ್ರೆಯ ದುರಂತದ ಪುಟಗಳಾಗಿವೆ. ಅಂಥದೊಂದು ಕತ್ತಲೆಯ ಪುಟದಲ್ಲಿ ಸಂಗೀತದ ಬೆಳಕಿನ ಬುಗ್ಗೆಯನ್ನೇ ತನ್ನೊಳಗೆ ಧರಿಸಿರುವ ಅನ್ನಪೂರ್ಣೆಯವರಂಥವರಿದ್ದಾರೆ. ಅವರ ಶಿಷ್ಯರೆಲ್ಲರ ಮೂಲಕ ಕತ್ತಲನ್ನು ಸೀಳುವ ಬೆಳಕಿನ ಗೆರೆಗಳು ಹೊಳೆಯುತ್ತಿರುವುದು ಈ ಲೋಕದ ಭಾಗ್ಯ. ಅಲ್ಲಾವುದ್ದೀನ್ ಖಾನರಿಂದ ‘ಸಂಗೀತ ಸರಸ್ವತಿ’ ಎಂದೆನಿಕೊಂಡ ಅವರ ಸಾಧನೆ ಸಾಮಾನ್ಯವಾದುದಲ್ಲ.

ಮೌನದೊಳಗಿನ ಮಾತನ್ನು ಓದುವ ಜಾಣ್ಮೆ ಎಲ್ಲರಿಗೂ ಬರಲಿ.

‍ಲೇಖಕರು avadhi

October 12, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

20 ಪ್ರತಿಕ್ರಿಯೆಗಳು

  1. Sandhya rani

    ಎಷ್ಟು ಮನೋಜ್ಞವಾಗಿ ಬರೆದಿದ್ದೀರಿ ಸುಧಾ…. ಯಾವುದೋ ಒಂದು ವಿಷಾದ ರಾಗ ಎದೆಯನ್ನೆಲ್ಲಾ ವ್ಯಾಪಿಸಿತು… ಬರಹ ಮತ್ತು ಜೊತೆಗಿನ ಚಿತ್ರಗಳು ಎರಡಕ್ಕೂ ಸಲಾಂ.

    ಪ್ರತಿಕ್ರಿಯೆ
  2. BVKulkarni

    ಇದು ಅದ್ಭುತವಾದ ಲೇಖನ… ಧನ್ಯವಾದಗಳು.

    ಪ್ರತಿಕ್ರಿಯೆ
  3. Ahalya Ballal

    ಈ ವೃತ್ತಾಂತವನ್ನು ಇನ್ನೊಬ್ಬರ ನಿರೂಪಣೆಯಲ್ಲಿ ಮೊದಲು ಓದಿದ್ದೆ. ಹೀಗಿದ್ದೂ ಅಚಲವಾದ ಆ ಮೌನ ನಿಮ್ಮ ಲೇಖನಿಯಿಂದಾಗಿ ಬೆಟ್ಟದಂತೆ ಧುತ್ತೆಂದು ಮತ್ತೆ ಎದುರಾಯಿತು, ಸುಧಾ.

    ಚಿತ್ರಗಳೂ ಎಷ್ಟೊಂದು ಅನುರೂಪವಾಗಿವೆ. ಅವಧಿಗೆ ಅಭಿನಂದನೆ ಹಾಗೂ ಧನ್ಯವಾದಗಳು!

    ಪ್ರತಿಕ್ರಿಯೆ
  4. SUMANGALA

    ಚೆನ್ನಾಗಿ ಬರೆದಿದ್ದೀರಿ ಸುಧಾ ಅವರೇ. ಒಳ್ಳೆಯ ನಿರೂಪಣೆ. ಆದರೆ ಎರಡು ಮೂರು factual ತಪ್ಪುಗಳಿವೆ. ಶುಬೋಗೆ ಇಬ್ಬರು ಮಕ್ಕಳು, ಮೂರೂ ಜನರಲ್ಲ. ಅವರು ತೀರಿಕೊಂಡಿದ್ದು ಹ್ರದಯಾಘಾತದಿಂದಲ್ಲ, ನ್ಯುಮೋನಿಯಾದಿಂದ. ಮತ್ತೆ ಅನ್ನಪೂರ್ಣ ದೇವಿಯವರು ರೂಶಿಕುಮಾರ್ ಅವರನ್ನು ಮದುವೆಯಾಗಿದ್ದು ಅಣ್ಣನ ಒತ್ತಾಸೆಯಿಂದ ಅಲ್ಲ, ಆ ನಿರ್ಧಾರ ಅವರೇ ತೆಗೆದುಕೊಂಡಿದ್ದು. ಹಾ.. ಅಮೇರಿಕಾದಲ್ಲಿ ತಮ್ಮಲ್ಲಿ ಕಲಿಯುತ್ತಿದ್ದ ಆತನನ್ನು ಇವರಲ್ಲಿಗೆ ಕಳಿಸಿದ್ದು ಉಸ್ತಾದ್ ಅಲಿ ಅಕ್ಬರ್ ಖಾನ್ ಸಾಹೇಬರು. ರೂಶಿಜಿಯವರನ್ನು ಶಿಷ್ಯರಾಗಿ ಸ್ವೀಕರಿಸಿದ್ದು ಮಾತ್ರ ಅಣ್ಣ ಕಳಿಸಿದ್ದು ಎಂದು. ನಾನು ಅವರ ಬಗ್ಗೆ ೨ ಪುಸ್ತಕ ಓದಿ, ಅವರ ಹತ್ತಿರದ ಶಿಷ್ಯರಾದ ಪಂ. ರಾಜೀವ ತಾರಾನಾಥರು ಮತ್ತು ಪಂ. ನಿತ್ಯಾನಂದ ಹಲ್ಡಿಪುರ್ ಅವರೊಂದಿಗೆ ಮಾತನಾಡಿ, ಹಲವು ಸಂಗತಿಗಳನ್ನು ದೃಢಪಡಿಸಿಕೊಂಡು ಬರೆದ ಲೇಖನವೊಂದು ಎರಡು ವರ್ಷ ಹಿಂದೆ ತುಷಾರದಲ್ಲಿ ಪ್ರಕಟವಾಗಿದೆ, ಮತ್ತೆ ರಾಜೀವಜಿಯವರು ನೆನಪಿಸಿಕೊಂಡಂತೆ ಈಡನ್ ಗಾರ್ಡನ್ನಿನಲ್ಲಿ ಗುರುಮಾ ನೀಡಿದ ಕಛೇರಿಯೇ ಕಡೆಯದು. ಈಬಗ್ಗೆ ರಾಜೀವಜಿಯವರು ನೆನಪಿಸಿಕೊಂಡಿದ್ದು ಇಲ್ಲಿದೆ ನೋಡಿ – “ದೀದಿ ದೆಹಲಿಯಲ್ಲಿ ಸ್ವಲ್ಪ ಹಿಂಸೆ ಅನುಭವಿಸ್ತಾ ಇದ್ದರು. ಆಮೇಲೆ ಮಗನನ್ನು ಕರ‍್ಕಂಡು ಮೈಹರ್‌ಗೆ ಹೋದ್ರು. ಹಿಂಗಾದ್ರೆ ಆಗಲ್ಲ ಅಂತ ಕಲ್ಕತ್ತೆಯಲ್ಲಿ ಖಾನ್ ಸಾಹೇಬ್ರು ಮ್ಯೂಸಿಕ್ ಕಾಲೇಜು ಶುರು ಮಾಡೋದು, ಇವ್ರು ಅದಕ್ಕೆ ವೈಸ್ ಪ್ರಿನ್ಸಿಪಾಲ್ ಅಂತ ಆಯ್ತು. ಸರಿ, ಅದರ ಆರಂಭೋತ್ಸವಕ್ಕೆ ಈಡನ್ ಗಾರ್ಡನ್ನಿನಲ್ಲಿ ಬಹಳ ದೊಡ್ಡ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ರು. ಸಂಜೆ ಆರು ಗಂಟೆಗೆ ಶುರುವಾಗಿ ಆಹೋರಾತ್ರಿ ನಡೆದು, ಬೆಳಗ್ಗೆ ಆರಕ್ಕೆ ಮುಕ್ತಾಯ. ಅವತ್ತು ಮೈಹರ್ ಖಾನ್‌ದಾನಿನ ಎಲ್ಲರೂ ಅಂದರೆ ಖಾನ್ ಸಾಹೇಬರು, ಅವರ ಮಕ್ಕಳು, ಆಮೇಲೆ ಮೈಹರ್ ಘರಾನೆಯ ಶಿಷ್ಯಂದಿರು ನಿಖಿಲ್ ಬ್ಯಾನರ್ಜಿ, ಶರಣ್‌ರಾಣಿ, ಎಲ್ಲರೂ ಇದ್ದರು. ಜೊತೆಗೆ ಅಮೀರ್ ಖಾನ್ ಸಾಹೇಬ್ರೂ ಇದ್ರು, ಅವರದೂ ಕಛೇರಿ ಇತ್ತು. ಅಲ್ಲಿ ಇಲ್ಲದವರು ಎಂದರೆ ರವಿಶಂಕರ್ ಒಬ್ಬರೇ. ರವಿಶಂಕರ್‌ಗೆ ಒಂದು ಪಾಠ ಕಲಿಸ್ತಿನಿ ಅಂತಲೂ ಇರಬಹುದು. ಅವತ್ತು ದೀದಿ ಸುರ್‌ಬಹಾರ್ ನುಡಿಸಿದ್ರು. ಅದೇ ಅವರ ಕೊನೆಯ ಸಾರ್ವಜನಿಕ ಕಛೇರಿಯಾಯ್ತು. ಎಂತಹ ಭವ್ಯ ಕಛೇರಿ… ಇವತ್ತಿಗೂ ನಂಗೆ ಕಿವೀಲಿ ಗುಂಯ್‌ಗುಡುತ್ತೆ. ನಾನು ಆಗ ಅಲ್ಲಿ ಶಿಷ್ಯನಾಗಿದ್ದನೆಲ್ಲ, ಅವರ ಕಛೇರಿಗೆ ಮೈಕ್ರೊಫೋನ್ ಸರಿಮಾಡೋದು, ತಾನ್‌ಪುರಾ ಎತ್ಕೊಂಡು ಹೋಗಿ ಕೊಡೋದು ಇಂಥ ಕೆಲಸ ಮಾಡ್ತಿದ್ದೆ, ಜೊತೆಗೆ ಟಿಕೆಟ್ ಕೌಂಟರಿನಲ್ಲೂ ನಂಗೆ ಕೆಲಸ ಇತ್ತು. ಆ ದಿನ ಎಲ್ಲರ ಕಛೇರಿಯೂ ಬಹಳ ಕಳೆಗಟ್ಟಿತ್ತು, ಇನ್ನು ದೀದಿಯ ಕಛೇರಿಯಂತೂ ನೆನಪುಳಿಯುವಂತಹ ಕಡೆಯ ಕಾರ್ಯಕ್ರಮವಾಗಿಬಿಟ್ಟಿತು”
    ನಿಮ್ಮ ಈ-ಮೇಲ್ ಐಡಿ ಕೊಟ್ಟರೆ, ಲೇಖನ ಓದುವ ಆಸಕ್ತಿ ಇದ್ದರೆ ಹೇಳಿ, ಕಳಿಸುವೆ. —
    ಸುಮಂಗಲಾ

    ಪ್ರತಿಕ್ರಿಯೆ
    • Sudha Hegde

      ಧನ್ಯವಾದಗಳು ಮೇಡಂ. ಅಂಕಣ ಬರಹದ ಧಾವಂತದಲ್ಲಿ ಕೆಲವು ತಪ್ಪುಗಳು ಹಾಗೇ ಉಳಿದಿವೆ. ನಿಮ್ಮ ಲೇಖನವನ್ನು ಓದಿದ್ದೇನೆ. ಅಂದಿನಿಂದಲೂ ಅನ್ನಪೂರ್ಣೆ ಕಾಡುತ್ತಿದ್ದಳು. ಮಾಹಿತಿಗಳನ್ನು ಅಂತರ್ಜಾಲದಿಂದ ಪಡೆದಿರುವೆ. ಎಚ್ಚರಿಸಿದ್ದಕ್ಕೆ ಶರಣೆನುವೆ.
      [email protected]

      ಪ್ರತಿಕ್ರಿಯೆ
  5. ರಾಜೀವ

    ಅನ್ನಪೂರ್ಣದೇವಿಯ ಬಗ್ಗೆ ಮತ್ತೆ ಮತ್ತೆ ಓದಿದಾಗಲೂ ಒಡಲಲ್ಲಿ ವೇದನೆಯೊಂದು ಉಳಿಯುತ್ತದೆ. ನಮ್ಮ ಹಲವು ಪೌರಾಣಿಕ ಪಾತ್ರಗಳಷ್ಟೆ ತೀವ್ರವಾಗಿ ಅನ್ನಪೂರ್ಣದೇವಿ ಕೂಡ ಕಾಡುತ್ತಾರೆ. ಉತ್ತಮ ಬರಹ.

    ಪ್ರತಿಕ್ರಿಯೆ
  6. ಭಾರತಿ ಬಿ ವಿ

    ಓದಿ ಮುಗಿಸಿದ ಮೇಲೆ ವಿಷಾದವೊಂದು ಉದ್ದಗಲಕ್ಕೂ ವ್ಯಾಪಿಸಿತು ಸುಧಾ…
    ಪ್ರತಿಯೊಬ್ಬ ಗಂಡಸಿನ ಯಶಸ್ಸಿನ ಹಿಂದೆ ನಿಂತು, ನಿಂತು, ನಿಂತೇ ದಣಿದ ಹೆಂಡತಿಯರು … ಬದುಕು ಎಷ್ಟು ನಿಷ್ಕರುಣಿ ಅಲ್ಲವಾ

    ಪ್ರತಿಕ್ರಿಯೆ
  7. ಅಜಯ್ ವರ್ಮಾ ಅಲ್ಲೂರಿ

    ಅನ್ನಪೂರ್ಣಾದೇವಿಯವರು ಪಟ್ಟ ಯಾತನೆಯನ್ನು ಏನೆನ್ನಬೇಕೋ ತಿಳಿಯುತ್ತಿಲ್ಲ ಮೇಡಂ.ಇಂತಹ ಜೀವವನ್ನು ಪರಿಚಯಿಸಿದಕ್ಕೆ ಧನ್ಯವಾದ.ಮೊನ್ನೆಯೇ ಅವರು ತೀರಿಕೊಂಡರು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: