
ಮೌಢ್ಯ ವಿರೋಧ
ಬೆತ್ತಲೆಸೇವೆ ಮಾಡುವುದು, ಜೀವಂತ ವ್ಯಕ್ತಿಯ ಬೆನ್ನಿಗೆ ಕಬ್ಬಿಣದ ಕೊಂಡಿಯನ್ನು ಸಿಕ್ಕಿಸಿ ಅವನ ದೇಹವನ್ನು ಸುಮಾರು ಹದಿನೈದು ಅಡಿ ಮೇಲಕ್ಕೇರಿಸಿ ಸಿಡಿ ಎಂದು ನೇತಾಡಿಸುವ ಮೌಢ್ಯ ಸಂಪೂರ್ಣವಾಗಿ ಇಲ್ಲವಾಗಬೇಕಾಗಿದೆ. ಕೆಲವು ಗ್ರಾಮಗಳಲ್ಲಿ, ಸ್ತ್ರೀಯರನ್ನು ಅವರ ಮಾಸಿಕ ದೈಹಿಕ ಬದಲಾವಣೆಯ ಕಾರಣಕ್ಕಾಗಿ ಮತ್ತು ಗರ್ಭಿಣಿಯರು, ಬಾಣಂತಿಯರನ್ನು ಸೂತಕವೆಂಬ ನೆಪವೊಡ್ಡಿ ಊರಹೊರಗೆ ಇರಿಸುವ ಪದ್ಧತಿ ಇನ್ನೂ ರೂಢಿಯಲ್ಲಿದೆ. ಇದನ್ನು ತಪ್ಪಿಸಲು ಈ ಬುಡಕಟ್ಟು ಮಹಿಳೆಯರು ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಸೌಲಭ್ಯವನ್ನು ಪಡೆಯುವಂತೆ ಪ್ರೋತ್ಸಾಹಿಸುವುದು ಅಗತ್ಯವಾಗಿದೆ. ಇದಲ್ಲದೆ ಒಂದು ಜಾತಿಯ ಜನರು ತಿಂದುಬಿಟ್ಟ ಎಂಜಲಿನ ಮೇಲೆ ಇನ್ನೊಂದು ಜಾತಿಯವರು ಹೊರಳಾಡುವುದು ಧರ್ಮವೂ ಅಲ್ಲ, ಆರೋಗ್ಯಕರವೂ ಅಲ್ಲ. ಈ ಬಗೆಯ ಅಂಧಶ್ರದ್ಧೆ, ಮೂಢನಂಬಿಕೆಗಳು ಎಲ್ಲಾ ಜಾತಿ, ಧರ್ಮಗಳಲ್ಲೂ ಇವೆ. ಮಾನವನಿಗೆ ನೈತಿಕಶಕ್ತಿ ಮತ್ತು ಮನೋಬಲ ಕೊಡುವ, ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ನಾನು ವಿರೋಧಿಸುವುದಿಲ್ಲ. ಮನುಷ್ಯನ ಘನತೆಯನ್ನು ಕುಗ್ಗಿಸುವ ಮೌಢ್ಯಾಚರಣೆಗಳನ್ನು ವಿರೋಧಿಸುತ್ತೇನೆ. ನನ್ನ ಆಕ್ಷೇಪಣೆ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಜಾತಿ, ಧರ್ಮಗಳಲ್ಲಿರುವ ಮೌಢ್ಯತೆ ಅಳಿದು ಅಲ್ಲಿ ಮಾನವೀಯತೆ ನೆಲೆಗೊಳ್ಳಲೆಂದು ಆಶಿಸುತ್ತೇನೆ. ಇಂಥ ಕಂದಾಚಾರಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಮೌಢ್ಯವಿರೋಧಿ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇನೆ.
ಅಸ್ಪೃಶ್ಯತೆ ಸಮಸ್ಯೆ
ದಲಿತರ ಮೇಲೆ ದೌರ್ಜನ್ಯ, ಅಸ್ಪೃಶ್ಯತೆಯ ಆಚರಣೆ, ಸುದ್ದಿಮಾಧ್ಯಮಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ನಿತ್ಯವೂ ವರದಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಮಾನವ, ಮಂಗಳಗ್ರಹವನ್ನು ತಲುಪುವ ಈ ಸಂದರ್ಭದಲ್ಲೂ ಸಾವಿರಾರು ಕುಗ್ರಾಮಗಳಲ್ಲಿ ಅಸ್ಪೃಶ್ಯತೆಯು ಆಚರಣೆಯಲ್ಲಿದ್ದು, ದಲಿತವರ್ಗದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ಇಲ್ಲದಂತಾಗಿದೆ. ಈ ವರ್ಗದವರನ್ನು ದೇವಾಲಯ, ಉಪಹಾರಗೃಹ, ಸಾರ್ವಜನಿಕ ಬಾವಿಗಳಿಂದ ದೂರ ಇಡಲಾಗಿದೆ. ಇವರಿಗೆ ಕ್ಷೌರವನ್ನು ನಿರಾಕರಿಸಿದ ಘಟನೆಗಳೂ ವರದಿಯಾಗುತ್ತಿವೆ. ಅಸ್ಪೃಶ್ಯತೆ ಅಳಿಯಬೇಕೆನ್ನುವ ಗಾಂಧಿ, ಅಂಬೇಡ್ಕರ್ ಅವರುಗಳ ಕನಸು ನನಸಾಗಬೇಕಾಗಿದೆ. ಊರಿನ ಶಾನುಭೋಗ, ಪಟೇಲ, ಗೌಡ, ತೋಟಿ, ನೀರುಗಂಟಿ, ತಳವಾರರ ಮಕ್ಕಳು ಮೇಲು ಕೀಳೆನ್ನದೆ ಒಂದೇ ಪಂಕ್ತಿಯಲ್ಲಿ ಕುಳಿತು ದಲಿತ ತಾಯಿಯೊಬ್ಬಳು ತಯಾರಿಸಿದ ಬಿಸಿಯೂಟವನ್ನು ಸಂತೋಷದಿಂದ ಊಟ ಮಾಡುವ ಸನ್ನಿವೇಶ ಕನರ್ಾಟಕದ ಎಲ್ಲಾ ಶಾಲೆಗಳಲ್ಲಿ ಉಂಟಾಗಲಿ ಎಂದು ಆಶಿಸುತ್ತೇನೆ. ಆ ಸುದಿನ ಬಹುದೂರ ಇಲ್ಲವೆಂಬ ಆತ್ಮವಿಶ್ವಾಸ ನನಗಿದೆ. ಅಸ್ಪೃಶ್ಯತೆಯ ಕಳಂಕವನ್ನು ತೊಡೆದು ಹಾಕಲು ದಲಿತವರ್ಗದವರು ಜಾಗೃತವಾಗುವುದರ ಜೊತೆಗೆ ಅಸ್ಪೃಶ್ಯತಾ ನಿವಾರಣಾ ಚಳುವಳಿಗೆ ಮೇಲ್ವರ್ಗದ ಯುವಕರೂ ಕೈ ಜೋಡಿಸಬೇಕೆಂದು ವಿನಂತಿಸುತ್ತೇನೆ. ಕನ್ನಡವೇ ನಮ್ಮ ಜಾತಿ, ಕನ್ನಡವೇ ನಮ್ಮ ಧರ್ಮ, ಕನ್ನಡವೇ ನಮ್ಮ ದೇವರು ಎಂಬ ಉದಾತ್ತ ಭಾವನೆ ಜನಮನದಲ್ಲಿ ಮೂಡಲೆಂದು ಹಾರೈಸುತ್ತೇನೆ.
ಮೌಢ್ಯವಿರೋಧಿ ಕಾಯ್ದೆ ಜಾರಿಗೆ ಬರಲಿ
ನಿಮಗೆ ಇವೂ ಇಷ್ಟವಾಗಬಹುದು…




0 Comments