ಸಹಜರಂಗ ೨೦೧೨
ಮೌಢ್ಯಗಳನ್ನು ಹೊರಹಾಕಲು ರಂಗಭೂಮಿ ಉತ್ತಮ ಮಾಧ್ಯಮ – ಪ್ರೊ ಕಾಳೇಗೌಡ ನಾಗವಾರ
ಮೌಢ್ಯಗಳನ್ನು ಹೊರಹಾಕಲು ರಂಗಭೂಮಿ ಉತ್ತಮ ಮಾಧ್ಯಮವಾಗಿದೆ ಎಂದು ಪ್ರೊ ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು. ನಿರಂತರ ಫೌಂಡೇಷನ್ ಮಾನಸ ಗಂಗೋತ್ರಿಯಲ್ಲಿ ಕಾಲೇಜು ವಿದ್ಯಾಥರ್ಿಗಳಿಗಾಗಿ ಆಯೋಜಿಸಿದ್ದ ‘ಸಹಜರಂಗ 2012’ ರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿಯು ಒಂದು ವಿಶಿಷ್ಟ ಮಾಧ್ಯಮವಾಗಿದ್ದು ಸಂದೇಶವನ್ನು ಅನಕ್ಷರಸ್ತರಿಗೂ ಸಹಾ ಸುಲಭವಾಗಿ ತಲುಪಿಸಬಹುದಾಗಿದೆ. ನಾಟಕಗಳ ಮೂಲಕ ಜನರನ್ನು ಸಂಘಟಿತರನ್ನಾಗಿ ಮಾಡಬಹುದಾಗಿದೆ ಎಂದು ಹೇಳಿದರು.
ಇಂದು ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸ್ವಾತಂತ್ರ್ಯ , ಸಮಾನತೆ ಮೌಲ್ಯಗಳಿಗೆ ಧಕ್ಕೆಯುಂಟಾಗತ್ತಿದೆ. ರಾಜಕಾರಣಿಗಳಿಂದ ಸಂವಿಧಾನದ ದುರ್ಬಳಕೆಯಾಗುತ್ತಿದೆ ಎಂದು ಅವರು ವಿಷಾದಿಸಿದರು.
ಸ್ವಾತಂತ್ರ್ಯಾ ನಂತರ ಭಾರತ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಸ್ವಹಿತಾಸಕ್ತಿ , ಸ್ವಾರ್ಥಪರ ಚಿಂತನೆ , ಭ್ರಷ್ಟಾಚಾರದಿಂದ ಭಾರತ ಅಭಿವೃದ್ದಿಯಲ್ಲಿ ಕುಂಟುತ್ತಾ ಸಾಗಿದೆ. ಮುಂದುವರಿದ ರಾಷ್ಟ್ರಗಳ ಪೈಕಿ ಭಾರತವು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದರೂ ಸಹಾ ಮಹಿಳೆಯರಿಗೆ ಇನ್ನೂ ಪರಿಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲದಿರುವುದು ಬೇಸರದ ಸಂಗತಿ ಎಂದರು. ಅಲ್ಲದೆ ಪಠ್ಯಕ್ರಮವು ಸಾಮಾಜಿಕ ಕಳಕಳಿಗೆ ವಿರುದ್ದವಾಗಿರುವುದರಿಂದ ವಿದ್ಯಾರ್ಥಿಗಳನ್ನು ಸರಿದಾರಿಗೆ ತರಲು ನಾವು ವಿಫಲರಾಗುತ್ತಿದ್ದೇವೆ. ಗುರು ಶಿಷ್ಯರ ಸಂಬಂಧ ಇಂದು ಹಾಳಾಗಿದ್ದು ಬುದ್ದ, ಬಸವಣ್ಣ, ಕುವೆಂಪುರಂತಹವರು ನಮ್ಮ ಯುವಪೀಳಿಗೆಗೆ ಆದರ್ಶವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಡಾ.ನ.ರತ್ನರವರು ಅಭಿಮುಖ ಪತ್ರಿಕೆಯನ್ನು ಬಿಡುಗಡೆ ಮಾಡಿದರು, ನಿರಂತರ ಸಂಸ್ಥೆಯ ಪ್ರಸಾದ್ ಕುಂದೂರು ಪ್ರಾಸ್ತಾವಿಕ ನುಡಿಗಳನ್ನು ನುಡಿದರು, ಈ ಸಂದರ್ಭದಲ್ಲಿ ನಗರದ ವಿವಿಧ ಕಾಲೇಜುಗಳಿಂದ ಆಗಮಿಸಿದ ಶಿಬಿರಾಥರ್ಿಗಳು ಹಾಗೂ ರಂಗಾಸಕ್ತರು ಹಾಜರಿದ್ದರು.






0 Comments