ಜಯಶ್ರೀ ಕಾಸರವಳ್ಳಿ
ಕೆಲವೊಂದು ವಿಷಯಗಳು ಸಾಹಿತ್ಯ ವಲಯಕ್ಕೆ ತೀರಾ ಹೊಸತಾಗಿ ಮೂಡಿಬಂದಂತೆ ಅನ್ನಿಸುವುದಾದರೂ ಬದುಕಿನ ವಾಸ್ತವದಲ್ಲಿ ಖಂಡಿತಾ ನಿರ್ಲಕ್ಷಕ್ಕೆ ಒಳಗಾಗಿರದೆ ಒಳಗೆಲ್ಲೋ ಕುದಿಯುತ್ತಿರುವಂತಹದು ಬಿಡುಗಡೆಯ ದಾರಿ ಹುಡುಕುತ್ತಲೇ ಬರವಣಿಗೆಯ ಮೂಲಕ ಪ್ರಕಟವಾಗಿಬಿಡುತ್ತದೆಯೇನೊ? ಎಂದೋ ಯಾವಾಗಲೋ ಅಂಥಾ ಒಂದು ಅವಕಾಶ ಸಿಕ್ಕಾಗ, ತನಗೇ ತಿಳಿಯದ ಹಾಗೆ ಸರ್ವರಿಗೂ ತಲುಪುವಂತೆ ಎಷ್ಷು ಸಲೀಸಾಗಿ ತನ್ನ ಮಾರ್ಗವನ್ನು ಕಡೆಗಾದರೂ ಕೊರೆದುಕೊಂಡು, ಹೊರಬಂದ ಸಂತೃಪ್ತಿಯಲ್ಲಿ ನಿರಾಳವಾಗುತ್ತೆ ಎನ್ನುವುದು ಎಷ್ಟೋ ಕೃತಿಗಳನ್ನು ಓದುವಾಗ ನನ್ನ ಅನುಭವಕ್ಕೆ ಬಂದ ಮಾತು. ಸಾಹಿತ್ಯ ಅನುಬಂಧವೂ ಹೌದು, ಅನುಸಂಧಾನವೂ ಹೌದು. ಕೆಲ ಪುಸ್ತಕಗಳನ್ನು ಓದುವಾಗಲೆಲ್ಲಾ ಅನ್ನಿಸುವುದಿದೆ: ಕೇವಲ ನಮ್ಮೆದುರಿಗೆ ತೆರೆದಿಟ್ಟ ಪುಸ್ತಕವೊಂದು ಹೇಗೆ ಓದುತ್ತಾ ಹೋದಂತೆ ನಮಗರಿವಿಲ್ಲದ ಹಾಗೆ ಅಕ್ಷರಗಳ ನಡುವಿನಲ್ಲೆಲೋ ಇಣಿಕಿಬಿಡುವ ಒಂದು ಖಾಸಗೀ ಆಪ್ತ ದ್ವನಿ ನಮ್ಮ ಹೃದಯ ಮೀಟುತ್ತಾ ಹತ್ತಿರವಾಗಿಬಿಡುತ್ತದಲ್ಲಾ…! ನಮ್ಮದೇ ಆದ ಆ ದ್ವನಿಯನ್ನ, ನಾ ಹೇಳದಿದ್ದರೂ ಚಿಂತೆಯಿಲ್ಲ, ಆದರೆ ನಾ ಹೇಳಬೇಕಾದ್ದು ಆ ಇನ್ನೊಬ್ಬರು ಹೇಳುತ್ತಿದ್ದಾರಲ್ಲಾ, ಅನ್ನಿಸುವುದಿದೆಯಲ್ಲಾ ಆ ಅನುಭೂತಿಗೆ ಏನು ಹೇಳುವುದು? ಅದೇ ಸೋಜಿಗ.
ಬಹುಶಃ ಒಂದು ಕೃತಿಯ ಶ್ರೇಷ್ಠತೆ ಹೃದಯ ತಟ್ಟುವುದರಲ್ಲಿದೆಯೋ, ಬುದ್ಧಿಗೆ ಚುರುಕು ಮುಟ್ಟಿಸುವುದರಲ್ಲಿದೆಯೋ ಈಗಲೂ ನನಗೆ ಗೊಂದಲ. ತನ್ನ ವೈಯಕ್ತಿಕ ಬದುಕನ್ನು ಸಾರಾಸಗಟಾಗಿ ನಮ್ಮ ಮುಂದೆ ತೆರೆದಿಟ್ಟ ಓರ್ಹಾನ್ ಪಾಮುಕ್ನ ಬೃಹತ್ ಗ್ರಂಥ ‘ದ ಮ್ಯೂಸಿಯಮ್ ಆಫ್ ಇನ್ನೋಸೆನ್ಸ್’. ಬಹಳ ವಿಮರ್ಶಕರ ಪ್ರಕಾರ ತೀರಾ ಸಾಧಾರಣವಾದ ಕಾದಂಬರಿ! ಆದರೆ ಅದು ತಲ್ಲಣಿಸಿದ ಪ್ರಪಂಚದ ಹೃದಯಗಳು ಮಾತ್ರ ಲೆಕ್ಕವಿಲ್ಲದಷ್ಟು! ಇಸಬೆಲ್ಲಾ ಅಯೆಂದೆಯ ಕಾದಂಬರಿ ‘ಪೌಲಾ’ ಗೂ ಈ ಮಾತು ಅನ್ವಯಿಸುತ್ತದೆ. ಸೆಮಿ-ಆಟೋಬಯಾಗ್ರಫಿಕಲ್ ಕೃತಿಗಳು ವಿರ್ಮಶಕರಿಗೆ ರುಚಿಸದಿದ್ದರೂ ಓದುಗನಿಗೆ ಹಿಡಿಸುತ್ತವೆ! ಪ್ರಾಯಶಃ ಪ್ರತಿ ಓದುಗನೂ ಕೂಡ ಪ್ರತಿ ಲೇಖಕನನ್ನು ಓದುವಾಗಲೂ ತನಗೆ ಹತ್ತಿರವಾಗುವ ಪ್ರಕ್ರಿಯೆಯಲ್ಲೇ ತನ್ನನ್ನು ಅವನ ಮೂಲಕ ಹುಡುಕಿಕೊಳ್ಳುತ್ತಿರುತ್ತಾನೆ. ನಮಗೆ ಚಿರಪರಿಚಿತ ವಾಸ್ತವ ಆವರಣಗೊಳ್ಳುತ್ತಿದ್ದಂತೇ, ಅಲ್ಲಲ್ಲಿ ಇಣುಕುವ ತುಣುಕುಗಳನ್ನು ಚಿತ್ರಾನ್ನದ ನಡುವಿನ ಕಡಲೇಕಾಯಿ ಬೀಜದಂತೆ ಹೆಕ್ಕಿ, ಹೆಕ್ಕಿ ಯಾರೂ ಪ್ರವೇಶಿಸದ ನಮ್ಮ ಏಕಾಂತದೊಳಗಿನ ಸುಖದಂತೆ ನಮ್ಮಷ್ಟಕ್ಕೆ ಆನಂದಿಸುತ್ತಾ ಸವಿಯುತ್ತಿರುತ್ತೇವೆ. ಹೀಗೆ ಮನಸ್ಸು ಹೊಕ್ಕ ಅವು ಎಂದೂ ಹೊರಬರಲೊಪ್ಪದ ಹಾಗೆ ನಮ್ಮನ್ನು ಕಚ್ಚಿ ಹಿಡಿದು ಬಿಡುತ್ತವೆ! ಈಗೊಂದೆರಡು ತಿಂಗಳಿಂದ ವಸುಧೇಂದ್ರ ಅವರ ಹೊಸ ಸಂಕಲನ ‘ಮೋಹನಸ್ವಾಮಿ’ಯ ಗುಂಗಿಗೆ ಒಳಗಾದ ಅನೇಕರ ಅನೇಕ ತರಹದ ವಿಶ್ಲೇಷಣೆ ನೋಡುತ್ತಾ, ಓದುತ್ತಾ ಬಂದ ನನಗೆ ಒಂದು ಕೃತಿ ಯಾಕೆ ಇಷ್ಟವಾಗುತ್ತೆ ಅಂದುಕೊಂಡಾಗ ಹೊಳೆದ ಹೊಳಹುಗಳು ಇವು.
ಕನ್ನಡ ಸಾಹಿತ್ಯದ ಪರಿಪೂರ್ಣ ಪರಿಚಯ ಇದೆಯೆಂದು ಹೇಳುವ ಧೈರ್ಯ ನನಗಿಲ್ಲ, ನಿಜ. ಆದರೂ ಇದುವರೆಗಿನ ನನ್ನ ಅನುಭವದಲ್ಲಿ ಸಲಿಂಗಕಾಮದ ಬಗ್ಗೆ ವಸುಧೇಂದ್ರರೇ ಈ ಹಿಂದೆ ಬರೆದ ಒಂದೆರಡು ಕತೆಗಳು ಬಿಟ್ಟರೆ ಬೇರೆ ಓದಿದ ಅರಿವಿಲ್ಲ. ಹಾಗೂ ಸದ್ಯದ ನಮ್ಮೆದುರಿನ ಅನೇಕ ತುರ್ತುಗಳಲ್ಲಿ ಬಹು ಚರ್ಚಿತವಾಗಬಹುದಾದ ವಿಷಯವಿದಾಗಿದ್ದರೂ ಕೂಡ, ಸಮಾಜದ ‘ಟ್ಯಾಬೂ’ವಿನ ಚಾಪೆಯಡಿ ತಣ್ಣಗೆ ಮಲಗಿರುವ ಇಂತಹ ವಿಷಯಗಳು ಸಾಮಾಜಿಕ ವಲಯಗಳಲ್ಲಿ ಅಷ್ಟು ಚರ್ಚಿತವಾಗುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಪರ ವಿರೋಧ, ಸಮ್ಮತಿ ಅಸಮ್ಮತಿಗಳ ವಾದ ವಿವಾದಗಳು ಪತ್ರಿಕೆ, ಚಾನಲ್ ಗಳ ನಡುವೆ ನುಸುಳುತ್ತಿದ್ದರೂ ಇನ್ನೂ ಮಡಿವಂತಿಕೆಯ ಮುಸುಕಿನೊಳಗೆ ಬೆಚ್ಚಗಿರುವ ನಮಗೆ, ಸಲಿಂಗಕಾಮದ ಬಗ್ಗೆ ಯಾರು ಎಷ್ಟೇ ಮಾತನಾಡಿದರೂ ನಮ್ಮ ಮನಸ್ಸಿನೊಳಗೆ ಮಾತ್ರ ಅದಿನ್ನೂ ಹೆಪ್ಪುಗಟ್ಟಿದ ಭಾವನೆಯೇ. ಬಹುಶಃ ಈ ಒಂದು ಕಾರಣಕ್ಕಾಗಿಯೇ ವಸುಧೇಂದ್ರ ಅವರ ವಿಷಯದ ಆಯ್ಕೆಯೇ ನನಗೆ ಬಹಳ ‘ಬೋಲ್ದ್’ ಅನ್ನಿಸಿತು! ಆದರೆ ಓದುತ್ತಾ ಹೋದ ಹಾಗೆ ತನ್ನ ಓದುಗರು ತನಗಿದ್ದಾರೆಂಬ ಆತ್ಮವಿಶ್ವಾಸದ ಒಂದು ಮುಕ್ತ ನಿರಾಳತೆಯಲ್ಲಿ ಸಲಿಂಗಕಾಮಿಯ ಬದುಕನ್ನು ಬಹಳ ಸರಳವಾಗಿ, ಸಹಜವಾಗಿ ಮತ್ತು ನೇರವಾಗಿ ನಮ್ಮೆದುರು ವಸುಧೇಂದ್ರ ಅವರು ಅನಾವರಣಗೊಳಿಸುತ್ತಾ ಹೋಗುತ್ತಾರೆ.
ಒಟ್ಟು ಹನ್ನೊಂದು ಬಿಡಿ ಕತೆಗಳ ಸಂಕಲನದಲ್ಲಿ ಮೊದಲ ಆರು ಮೋಹನಸ್ವಾಮಿಯ ಬದುಕಿನೊಡನೆ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಸಂಬಂಧವಿರಿಸಿಕೊಂಡ ಕತೆಗಳೇ ಆಗಿದ್ದರೆ, ಕಡೇ ಐದು ವಸುಧೇಂದ್ರ ಅವರ ಎಂದಿನ ಚಿರಪರಿಚಿತ ಐ.ಟಿ. ಮತ್ತು ಆಧುನಿಕ ಜಗತ್ತಿನ ಹೊಸ ಅವಿಷ್ಕಾರಗಳ ಕಟು ಅವಸ್ಥೆಯ ವಿಲಕ್ಷಣ ಪ್ರಲೋಭನೆಯ ಕ್ರೂರ ಸ್ಥಿತಿಯೊಳಗೆ ಸಿಲುಕಿ ನಲುಗುವ ಬಿಡಿ ಬಿಡಿ ಪಾತ್ರಗಳ ಹಿಡಿ ನೋವಿನದಾಗಿವೆ. ‘ದ್ರೌಪದಮ್ಮನ ಕಥಿ’ ಒಂದು ಅಪವಾದವಷ್ಟೇ. ವಸುಧೇಂದ್ರ ಅವರ ಸ್ಥಾಯಿಪ್ರಜ್ಞೆಯಾದ ಮದ್ಯಮ ವರ್ಗದ ದ್ವಂದ್ವ, ಮೌಲ್ಯಗಳ ತಾಕಲಾಟ ಹಾಗೂ ಪಾಪಪ್ರಜ್ಞೆ, ಐ.ಟಿ ಜಗತ್ತಿನ ಅಮಾನುಷ ಜಗತ್ತಿನ ಕ್ರೂರ ವಾಸ್ತವದೊಂದಿಗೆ ಸೆಣೆಸಾಡುತ್ತಲೇ ಬದುಕು ಕಟ್ಟಿಕೊಳ್ಳುವ ಅನಿವಾರ್ಯವನ್ನು ಮತ್ತೊಮ್ಮೆ ಅವರು ತಮ್ಮ ‘ದುರ್ಭಿಕ್ಷ ಕಾಲ’ದಲ್ಲಿ ಸಾಬೀತುಪಡಿಸಿದ್ದಾರೆ. ಆಧುನಿಕತೆ ಮತ್ತು ತಂತ್ರಜ್ಞಾನದ ಬಳಕೆ ಹಾಗೂ ದುರ್ಬಳಿಕೆ, ಇಂದಿನ ಸಾಮಾಜಿಕ ಜಾಲತಾಣ, ಫೇಸ್ಬುಕ್ ಗಳ ನಡುವೆ ಅಮೂಲ್ಯ ಬದುಕು ಆ ಕ್ಷಣದ ಕ್ರೌರ್ಯಕ್ಕೆ ಬಲಿಯಾಗಿ ಅರ್ಥಹೀನವಾಗುತ್ತಿರುವುದನ್ನು ‘ ಪುರ್ಣಾಹುತಿ’ಯಲ್ಲಿ ಮನ ಕಲಕುವ ಹಾಗೆ ಮುಟ್ಟಿಸಿದ್ದಾರೆ. ‘ಇವತ್ತು ಬೇರೆ’ ಮತ್ತು ‘ಭಗವಂತ, ಭಕ್ತ ಮತ್ತು ರಕ್ತ’ ಕತೆಗಳು ರೂಢಿಗತ ಮೌಲ್ಯಗಳಲ್ಲಿ ಯಾವ ಏರುಪೇರೂ ಬಯಸದ ಸಾಮಾಜಿಕ ಬದುಕಿನಲ್ಲಿ, ಗಂಡನ ಸಾವು ಹೆಂಡತಿಯನ್ನು ನಿರಾಳಗೊಳಿಸುವುದಾಗಲೀ, ಅವಶ್ಯ ಸಂದರ್ಭದಲ್ಲೂ ಬ್ರಾಹ್ಮಣನಿಗೆ ಅಬ್ರಾಹ್ಮಣನ ರಕ್ತವನ್ನು ಒಪ್ಪಿಕೊಳ್ಳುವುದಾಗಲೀ ಅಸಾಧ್ಯವೆನ್ನಿಸುವ ಜಡ ಮನೋಭಾವದ ಅವಸ್ಥೆಯ ದ್ವಂದ್ವವಾಗಿವೆ.
ಆದರೆ ನಾನು ಹೇಳ ಹೊರಟಿದ್ದು ಈ ಯಾವ ಕತೆಗಳ ಬಗ್ಗೆಯಾಗಲೀ, ಅವುಗಳ ವಿಮರ್ಶೆಯಾಗಲಿ ಅಲ್ಲ. ಮೊದಲ ಆರು ಕತೆಗಳ ಬಗ್ಗೆ ಮಾತ್ರ. ಇವು ಪ್ರಾಯಶಃ ನನ್ನೊಳಗಿನ ಸುಪ್ತ ಭಯ, ಗೊಂದಲ, ಸಹಜ ಮತ್ತು ಅಸಹಜದ ನಡುವಿನ ತೆಳು ಗೆರೆಯ ನಡುವೆ ಸಿಕ್ಕಿಕೊಂಡ ಬದುಕಿನ ಕೆಲ ಸಿಕ್ಕುಗಳನ್ನ, ಅವ್ಯಕ್ತ ಕಸಿವಿಸಿಗಳನ್ನ ಮತ್ತೆ ಇಡಿಯಾಗಿ ನನ್ನೆದೆರು ಹಿಡಿದು ನಿಲ್ಲಿಸಿದಂತಹ ಕತೆಗಳು. ಸಲಿಂಗಕಾಮ ಸಹಜ ಮನೋಭಾವನೆಯೆಂಬುದು ಒಪ್ಪಿಕೊಳ್ಳಬೇಕೇ ಬೇಡವೇ, ಈ ಜಿಜ್ಞಾಸೆಯಿಂದ ಇನ್ನೂ ಹೊರಬಾರದ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು, ಇಲ್ಲಿ ಪ್ರಸ್ತುತವೋ ಅಪ್ರಸ್ತುತವೋ ಗೊತ್ತಿಲ, ನಾನಿಲ್ಲಿ ದಾಖಲಿಸಲೇಬೇಕು! ಏಳೆಂಟು ವರುಷದ ಹಿಂದೆ ಮದರಾಸಿನ ನಮ್ಮ ಪ್ಲಾಟ್ನ ಪಕ್ಕದ ಪ್ಲಾಟ್ನಲ್ಲಿದ್ದವನ ಕತೆಯಿದು. ಯಾರೊಡನೆಯೂ ಅಷ್ಟಾಗಿ ಬೆರೆಯದೆ ತನ್ನಷ್ಟಕ್ಕೇ ತಾನೆಂದು ಇದ್ದವನು ಅವನು. ಇದ್ದಕಿದ್ದಂತೆ ಒಂದು ದಿನ ಅವನೊಡನೆ ಯಾರೋ ಬಂದು ಸೇರಿಕೊಂಡ. ಅಪಾಟರ್ಟ್ ಮೆಂಟಲ್ಲಿ ಎಲ್ಲರಿಗೂ ತನ್ನ ಕಸಿನ್ ಎಂದೇ ಪರಿಚಯಿಸಿದ್ದ. ಒಂದು ಒಂಟಿ ಗೋಡೆಯ ಆಚೀಚೆ ಇದ್ದ ನನಗೆ ರಾತ್ರಿಯ ಹಲವಾರು ಸದ್ದುಗಳು ಹಲವು ನಿಗೂಢ ರಹಸ್ಯಗಳನ್ನು ಕಣ್ಣಿಗೆ ಕಾಣದಿದ್ದರೂ ಶಬ್ದಗಳ ಮೂಲಕ ಬಿಚ್ಚುತ್ತಿರುವಾಗ ನಿಶ್ಚಿಂತೆಯಿಂದ ಮಲಗಲು ಸಾದ್ಯವಾಗುತ್ತಿರಲಿಲ್ಲ. ಮನಸ್ಸು ವಿಹ್ವಲಗೊಳ್ಳುತ್ತಿತ್ತು. ಏನೋ ನಡೆಯಬಾರದ್ದು ನಡೆದುಹೋಗುತ್ತಿದೆ, ಅದನ್ನು ನಿಲ್ಲಿಸಲು ಅಗುತ್ತಿಲ್ಲವಲ್ಲ ಎಂಬ ಕಳವಳ. ಸಾಮಾನ್ಯರ ಸಹಜ ಬದುಕಿನ ನಡುವೆ ಏನೋ ಅಸಹಜ ಘಟನೆ ಘಟಿಸುತ್ತಿದೆಯೆಂಬ ಗಾಬರಿ. ಮತ್ತೊಬ್ಬರೊಡನೆ ಬಾಯಿ ಬಿಡಲೂ ಭಯ. ಒಂದೇ ಚಡಪಡಿಕೆ. ಎಂತವರ ನಡುವೆ ವಾಸಿಸುತ್ತಿದ್ದೇವೆ ಎಂಬ ಆತಂಕ.
ಒಂದಷ್ಟು ತಿಂಗಳು ಹೀಗೇ ಕಳೆದ ನಂತರ ಇವೆಲ್ಲಕ್ಕೂ ಉತ್ತರವೆಂಬಂತೆ ಬಂದವನು ಬಂದ ಹಾಗೇ ಆರು ತಿಂಗಳ ನಂತರ ಒಂದು ದಿನ ನಾಪತ್ತೆಯಾದ, ಥೇಟ್ ಮೋಹನಸ್ವಾಮಿಯ ಬದುಕಿನಲ್ಲಿಯ ಕಾರ್ತೀಕನ ಹಾಗೆ! ಅದಾದ ಎಷ್ಟೋ ದಿನಗಳ ನಂತರ ಒಂದು ದಿನ ಮಧ್ಯರಾತ್ರಿ ನೀರವ ಕತ್ತಲ ಅಂತರಾಳದಾಳದಲ್ಲಿ ಹುಟ್ಟಿಕೊಂಡ ಒಂಟಿ ಆರ್ತದ್ವನಿಯೊಂದು ಗಾಡವಾಗಿ ನಿದ್ರಿಸುತ್ತಿದ್ದ ನನ್ನನ್ನು ಬಡಿದೆಬ್ಬಿಸಿತ್ತು! ನನ್ನ ಪ್ಲಾಟ್ಗೂ ಅವನ ಪ್ಲಾಟ್ಗೂ ಕೊಂಡಿಯಾಗಿದ್ದ ಆ ಏಕಮಾತ್ರ ಮೋಟು ಗೋಡೆಗೆ ತಲೆ ಚಚ್ಚಿಕೊಳ್ಳುತ್ತಾ ಮೌನ ಹೊದ್ದು ಮಲಗಿದ್ದ ನಿರ್ಲಿಪ್ತ ಪ್ರಪಂಚಕ್ಕೊಂದು ತಾನು ತುರ್ತಾಗಿ ಸಾರಲೇಬೇಕಾದ ತನ್ನದೊಂದು ಅಗತ್ಯ ಧ್ವನಿಯಿದೆ ಎನ್ನುವ ಹಾಗೆ ಅಂದು ನನ್ನ ಕಿವಿಗೆ ಬಂದೂ ಬಂದೂ ಅಪ್ಪಳಿಸಿತ್ತು ಅವನ ಆ ಆಕ್ರಂದನ! ಏನೂ ಅರ್ಥವಾಗದೆ ಹಾಸಿಗೆಯ ಮೇಲೆ ಬೆಚ್ಚಿ ಎದ್ದು ಕುಳಿತಿದ್ದೆ ನಾನು! ಅದೊಂದು ಎಂದೂ ಮುಗಿಯದ ಮೂಕ ರೋದನದಂತೆ, ಗಾಬರಿಯಲ್ಲಿ ಕೈಯ ಹಿಡಿ ಮುಷ್ಠಿಯಲ್ಲಿ ಹೃದಯ ಹಿಡಿದು ಕುಳಿತ ನನಗೇ ನೇರ ಗುರಿಯಿಟ್ಟಂತೆ ನಿರಂತರ ಬಿಕ್ಕುವಾಗಿನ ಆ ದ್ವನಿ ಬಂದೂ ಬಂದೂ ಬಡಿದ ರೀತಿ…! ಆ ರಾತ್ರಿ ನನ್ನ ಹೃದಯ ಸೀಳಿದ ಆ ನೋವಿಗೆ ಈಗಲೂ ನನ್ನಲ್ಲಿ ಪದಗಳಿಲ್ಲ! ಅಂದು ನನಗೆ ಕೇಳಿದ್ದು ಪ್ರಾಯಶಃ ಅವನೊಬ್ಬನ ಒಂಟಿ ದ್ವನಿ ಮಾತ್ರವಾಗಿರಲಿಲ್ಲ! ಆ ಒಂಟಿ ದ್ವನಿ ಕೇವಲ ಅವನದು ಮಾತ್ರವಾಗಿರಲಿಲ್ಲ. ಅವನಂತೆ ಏಕಾಂಗಿಯಾಗಿ ಬದುಕುತ್ತಿರುವ ಸಹಸ್ರ ಸಹಸ್ರಾರು ಸಲಿಂಗಕಾಮಿಗಳ ಒಂಟಿ ದ್ವನಿಯದಾಗಿತ್ತು! ನನ್ನೊಳಗೆ ಗುಟ್ಟಾಗಿ ಉಡುಗಿಹೋಗದೆ ಉಳಿದುಹೋಗಿದ್ದ ಆ ನಿಗೂಡ ಒಂಟಿ ಧ್ವನಿ ಬಿಡುಗಡೆಗೊಂಡಿದ್ದು ವಸುಧೇಂದ್ರರ ‘ಮೋಹನಸ್ವಾಮಿ’ ಓದಿದ ಮೇಲೆ.
ಇದನ್ನು ಕತೆ ಮಾಡಬೇಕೆಂದು ಅನೇಕ ಬಾರಿ ಕುಳಿತು ಮಾಡಲಾಗದೇ ಚಡಪಡಿಸಿದ್ದೆ. ಒಬ್ಬ ಸಲಿಂಗಕಾಮಿಯನ್ನು ಗೋಡೆಯಾಚೆ ನೋಡಿದ್ದೆ. ಅಷ್ಟೇ ಹೊರತು, ಆ ನೋವು ನನ್ನದಾಗಿರದೆ, ನನ್ನದಾಗಲು ಒಪ್ಪದೆ ಪ್ರತ್ಯೇಕವಾಗಿಯೇ ಮೂಡಿಬರುತ್ತಿತ್ತು. ಆದರೆ ಅದು ಅಷ್ಟೇ ತೀವ್ರವಾಗಿ ನನ್ನೊಳಗೇ ಮೊಳಗುತ್ತಿತ್ತು – ಆಗೀಗ ಪತ್ರಕೆಗಳಲ್ಲಿ, ಚಾನಲ್ ಗಳಲ್ಲಿ, ಅವರಿವರಲ್ಲಿ ಚರ್ಚೆಗಳಾದ ಪ್ರತಿಕ್ಷಣವೂ, ಅವನ ಆರ್ತನಾದ ಹೊಟ್ಟೆಯೊಳಗಿನ ಸಂಕಟದಂತೆ ಭುಗಿಲೇಳುತ್ತಿತ್ತು. ಎಷ್ಟು ಇದು ಕಾಡಿತೆಂದರೆ ಸಂಕೋಚವನ್ನು ಬದಿಗೊತ್ತಿ ನನ್ನ ಮಗನನ್ನೂ ಬಿಡದೇ ವಿಚಾರಿಸಿದ್ದೆ! ಮಕ್ಕಳು ಸಲಿಂಗಕಾಮಿಯಾದರೆ ಎಲ್ಲರೆದುರು ಅದನ್ನು ಒಪ್ಪಿಕೊಳ್ಳುವ ಮುಜುಗರಕ್ಕಿಂತ ಹೆಚ್ಚಾಗಿ, ತಿಳಿಯದೇ ಒಂದು ಹೆಣ್ಣನ್ನು ಕಟ್ಟಿಕೊಂಡು ಮುಗ್ಧ ಹುಡುಗಿಯ ಬಾಳು ಹಾಳಾಗಬಾರದೆಂಬ ಕಾಳಜಿಗಿಂತ ಮಿಗಿಲಾಗಿ ಮಕ್ಕಳ ಸೆಕ್ಸ್ಯುಯಲ್ ಒರಿಯಂನಟೇಷನ್ ತಿಳಿಯದ ತಂದೆ ತಾಯಿಯರಾಗಿ ನಾವು ಸಾಯಬಾರದೆಂಬ ಜವಾಬ್ದಾರಿಯಲ್ಲಿ. ಅಂದು ನನ್ನ ಕಿವಿಯಲ್ಲಿ ಮೊಳಗಿದ ಒಂಟಿ ವ್ಯಕ್ತಿಯೊಬ್ಬನ ಆಕ್ರಂದನ, ಮೋಹನಸ್ವಾಮಿಯ ಪುಟ ಪುಟಗಳಲ್ಲೂ ಜೀವ ತಳೆದಾಗ, ಕತ್ತಲ ನೀರವದಲ್ಲಿ ಪುಟಿದ ಧ್ವನಿಯ ನೋವು ನನಗೆ ತಟ್ಟಿದ್ದರೂ, ಯಾಕೋ ಗೋಡೆಯಾಚೆಯೇ ನಿಂತಿದ್ದು, ನನಗರಿವಿಲ್ಲದ ಹಾಗೇ ನನ್ನ ಮನೆ ಹೊಸ್ತಿಲಲ್ಲಿ ನಿಂತು ‘ಇನ್ನಾದರೂ ಒಳ ಬರಲಪ್ಪಣೆಯೇ?’ ಎಂದು ವಿನಮ್ರವಾಗಿ ಬಾಗಿಲು ತಟ್ಟುತ್ತಾ ಸಮ್ಮತಿಸುವುದಕ್ಕೆ ಮುಂಚೆಯೇ ನನ್ನ ಪರಿಧಿಯೊಳಗೆ ಪ್ರವೇಶಿಸಿದ್ದನ್ನು ಕಂಡೆ! ನನ್ನ ಅಂತರಂಗದೊಳಗೆಲ್ಲೋ ಗುಪ್ತವಾಗಿ ಬಚ್ಚಿಟ್ಟುಕೊಂಡಿದ್ದ, ನನ್ನದಾಗಲೊಪ್ಪದ ಆ ನೋವು ಆಚೆ ಬಂದು ಸರೀಕರರಲ್ಲಿ ಒಂದಾಗಲು ಎಂದಿನಿಂದಲೂ ಹಾತೊರೆಯುತ್ತಿದ್ದದು – ತನ್ನ ಪ್ರೀತಿಯ ಕೃಷ್ಟನ ಮುಂದೆ ಕಣ್ಣೀರು ಕರೆಯುತ್ತಾ ಗುಟ್ಟಿನಲ್ಲಿ ಮೊರೆಯಿಟ್ಟು ನಿವೇದಿಸಿಕೊಳ್ಳುವ ಮೋಹನಸ್ವಾಮಿಯ ‘ಹನ್ನೊಂದನೆಯ ಅವತಾರದಲ್ಲಿ ನನ್ನಂತೆ ಹುಟ್ಟು.ಹದಿನಾರು ಸಾವಿರ ಹೆಣ್ಣುಗಳನ್ನು ಅನುಭೋಗಿಸಿದ ನಿನಗೆ ಒಂದೂ ಹೆಣ್ಣನ್ನು ಮುಟ್ಟಲಾಗದ ದುಃಖ, ಅಸಹಾಯಕತೆಯ ಅರಿವಾಗಲಿ.. ಇನ್ನೊಬ್ಬರಿಗೆ ತಟ್ಟದ ನೋವನ್ನು ಏಕಾಂಗಿಯಾಗಿ ಅನುಭವಿಸು.’ ಎಂಬ ಹೃದಯವಿದ್ರಾವಕ ನುಡಿಗಳಲ್ಲಿ !!







Excellent article.
ಒಂದು ಪುಸ್ತಕಕ್ಕೆ ಸಮಗ್ರವಾಗಿ ಪ್ರತಿಕ್ರಿಯಿಸಿರುವ ರೀತಿ, ಪುಸ್ತಕ ದೊರಕಿಸಿಕೊಟ್ಟ ಅನುಭವವನ್ನು ಕೇಂದ್ರದಲ್ಲಿರಿಸಿ ಅದಕ್ಕೆ ಸಾಹಿತ್ಯ, ಸಾಮಾಜಿಕ, ವೈಯಕ್ತಿಕ – ಹೀಗೆ ಹಲವನ್ನು ಜೋಡಿಸಿರುವ ರೀತಿ ಬಹಳ ಇಷ್ಟವಾಯಿತು. ಅಭಿನಂದನೆಗಳು.
ವಿವೇಕ ಶಾನಭಾಗ
nannannu bahuvaagi kaadida kathe ‘Durbhiksha kaala’. kathe Odi mugisidaaga nanna kannamchinalli neeriddavu. keendra sarkaari noukariyalliruva nanage kelavomme software mandiyannu noodi asuyeyaguttittu. eega nanna bhrame hariyitu.
Tumba ishtavaytu baraha!
article tumba chennagide
Tumba channagide madam. Very well expressed!
jayashree avare adeshtu chandavagi, gadavagi, saralavu agi kruthiya bagge vishleshisiddeeri…! abhinandanegaLu! vasudhendra avara ella krythigaLannu odiruva nanu adyako idannu innu tharisikondilla…neevu baredaddannu odida mele, nanage arivillada mathyavudadaru nanna bhavanegaLige ‘bidugade’ sigabahudemba nireekshe’ nanagagide…yakendare avara aneka kathegalu nanage aa reethiya ‘bidugade’ kottive! vasudhendra avara kathegaLu ashtondu ‘khyathi’ padediruvude…alli siguva apthathe-aharshane-anubhoothi-kuthuhala-navirada hasya, kelavomme khullam-khulla abhivyakthi….yindagi! thanks again..
ತುಂಬಾ ಚೆನ್ನಾಗಿ ಮೋಹನಸ್ವಾಮಿಯನ್ನು ಪರಿಚಯಿಸಿದ್ದೀರಿ . ಅಭಿನಂದನೆಗಳು .
Ee Kate nimmannu liberate maadida reetiyannu bahaLa chennagi heliddeeri jaishree. Thanks.
the book has so many dimensions..nice article madam.
Lekhanavannu mechida ellarigu mattu Avadhigu thanks.
tumbaa chennaagi parichayisiddeeri jayashree avare, katha visleshane,vyaapti, harahu sulalitavaagi hitavenisuttave – Vasudhendrari shabbash yendoo helalebeku – istavaayitu.
Tumba chenada baraha jayshree …
ನಿಮ್ಮ ಬರಹ ತುಂಬ ಚೆನ್ನಾಗಿದೆ. ಕತೆ ಸಾಮಾಜಿಕವಾಗಿ ಹಾಗೂ ವೈಯುಕ್ತಿಕ ಆಯಾಮದಲ್ಲಿ ಹೇಗೆ ಮುಖ್ಯವಾಗುತ್ತದೆ ಎಂಬುದನ್ನು ಚೆನ್ನಾಗಿ ವಿಶ್ಲೇಷಿಸಿದ್ದೀರಿ. ವಸುಧೇಂದ್ರರ ಕತೆಯಷ್ಟೇ ಆಪ್ತ ನಿಮ್ಮ ಬರವಣಿಗೆ ಕೂಡಾ.
ಕಥೆಯೊಂದರ ಶಕ್ತಿಯ ಕುರಿತು ಬರೆದ ವ್ಯಾಖ್ಯಾನವಿದು , ಮೋಹನಸ್ವಾಮಿ ಅದೆಷ್ಟು ಜನರನ್ನು ಅದೆಷ್ಟು ಪರಿ ತಟ್ಟುತ್ತಿದ್ದಾನೆ !!!