ಮೋದಿಯವರ ಅಭೂತಪೂರ್ವ ವಿಜಯವನ್ನು ಹೇಗೆ ವಿಶ್ಲೇಷಿಸುವುದು?

ಸುರೇಶ ಕಂಜರ್ಪಣೆ 

ಮೋದಿಯವರ ಅಭೂಪೂರ್ವ ವಿಜಯವನ್ನು ಹೇಗೆ ವಿಶ್ಲೇಷಿಸುವುದು? ಈ ಫಲಿತಾಂಶವನ್ನು ಊಹಿಸಲು ನನ್ನನ್ನೂ ಸೇರಿ ಹಲವಾರು ವಿಶ್ಲೇಷಕರು ಎಡವಿದ್ದಾರೆ. ಈಗ ತಿರುಗಿ ನೋಡಿದರೆ, ಈ ವಿಜಯದ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು.

1. ಚುನಾವಣೆಯಲ್ಲಿ ಮುಂದಿಡಬೇಕಾದ ವಿಷಯಗಳನ್ನು ಅತ್ಯಂತ ಜಾಗರೂಕವಾಗಿ ಮೋದಿ ಮುಂದಿಟ್ಟಿದ್ದಾರೆ. ಈ ಹದ ಮಿಶ್ರಣದ ಬಗ್ಗೆ ಯೋಗೇಂದ್ರ ಯಾದವ್ ಸಹಿತ ಹಲವರು ಬರೆದಿದ್ದಾರೆ. ಇದರ ಕೌತುಕವೆಂದರೆ ಅಭಿವೃದ್ಧಿ ಕುರಿತಂತೆ ಮೋದಿಯವರು “ಕಳೆದ ಐದು ವರ್ಷ ತಯಾರಿಗೆ ವ್ಯಯವಾಯಿತು. ಅಸ್ತಿವಾರ ಹಾಕುವ ಕೆಲಸ ಇದು. ಮುಂದಿನ ಐದು ವರ್ಷದಲ್ಲಿ ಇದನ್ನು ಸಾಕಾರಗೊಳಿಸುತ್ತೇನೆ” ಎನ್ನುತ್ತಲೇ ಹೋದರು.

ಇದಕ್ಕೆ ಮೂರು ಹಂತ ಇದೆ. 1. ಯೋಜನೆಯ ನೀಲಿನಕ್ಷೆಯಲ್ಲೇ ಲೋಪ ಇದೆಯಾ ಎಂಬ ವಿಶ್ಲೇಷಣೆ. 2. ಅನುಷ್ಠಾನದ ಮಾದರಿಯಲ್ಲಿ ದೋಷಗಳಿವೆಯೇ ಎಂಬ ಪ್ರಶ್ನೆ. 3. ಅನುಷ್ಠಾನಗೊಂಡಾಗ ಅದು ನಿರೀಕ್ಷಿತ ಫಲಿತಾಂಶ ನೀಡಿದೆಯಾ ಎಂಬ ಪ್ರಶ್ನೆ. ಇದರಲ್ಲಿ ಮೊದಲ ಎರಡು ಪ್ರಶ್ನೆಗಳನ್ನು ಹಲವಾರು ಯೋಜನೆಗಳ ಚರ್ಚೆಯಲ್ಲಿ ಮುಂದಿಟ್ಟಾಗಲೂ ಮೋದಿಯವರು ತೋರಿದ ಜಾಣತನ ಗಮನಾರ್ಹ.

ಅವರು ಈ ಗಾಳವನ್ನು ಕಚ್ಚಲೇ ಇಲ್ಲ.!! ಆಡಳಿತಗಾರನಾಗಿ ಇದು ಜಾಣ ನಡೆ!! ಇದರೊಂದಿಗೇ ಭಾಜಪದ ಶೇ.90 ಮಂದಿಗೆ ಈ ಬಗ್ಗೆ ಪ್ರಾಥಮಿಕ ಜ್ಞಾನವೂ ಇಲ್ಲವೆನ್ನುವುದೂ ಮೋದಿಯವರಿಗೆ ಗೊತ್ತಿದ್ದಿರಬಹುದು. ಅಂದರೆ ಸಾರ್ವಜನಿಕ ಚರ್ಚೆಗೆ ಬಂದರೆ ತಳಮಟ್ಟ ಬಿಡಿ ಎಂಪಿ, ಶಾಸಕರ ಮಟ್ಟದಲ್ಲೂ ಈ ಚರ್ಚೆ ನಡೆಸುವ ಮಂದಿ ಇಲ್ಲ. ಈ ಚರ್ಚೆಯ ಬದಲು ಮೋದಿ ನೇರವಾಗಿ “ಇನ್ನೊಂದು ಅವಧಿ ಕೊಡಿ” ಎಂದರು.

2. ರಾಷ್ಟ್ರಿಯತೆಯನ್ನು ಸಶಕ್ತ ರಾಷ್ಟ್ರ ಕಟ್ಟುವ ರೂಪಕವಾಗಿ ಮೋದಿ ಮುಂದಿಟ್ಟರು. ಇದರಲ್ಲಿ ಸೂಪರ್ ಪವರ್ ಆಗುವುದರ ಜೊತೆಗೆ ಮಿಲಿಟರಿ ಶಕ್ತಿಯ ಮೀಶ್ರಣವೂ ಇತ್ತು. ಇದರ ವಿವರ ಏನು ಎಂಬುದನ್ನು ಯಾವ ಸಾಮಾನ್ಯನೂ ಚರ್ಚಿಸುವುದಿಲ್ಲ. ಇದೊಂದು ಸ್ಥೂಲ ಭಾವನೆ. ಇದಕ್ಕೆ ಬೇಕಾಗುವುದು ಸಶಕ್ತ ನಾಯಕ. ಮೋದಿ ತಾವೇ ಆ ನಾಯಕ ಎಂಬುದನ್ನು ಹೇಳಿದರು. ತದ್ವಿರುದ್ಧವಾಗಿ- ತುಲನೆ ಮಾಡಲು ತನ್ನ ಎದುರಾಳಿಗಳಾಗಿದ್ದ ನಾಯಕರನ್ನು ಮೋದಿ ಬಿಡಿಬಿಡಿಯಾಗಿ ಬೀದಿ ಭಾಷೆಯಲ್ಲಿ ವಿಶ್ಲೇಷಿಸಿದರು. ಈ ವಿಶ್ಲೇಷಣೆಯಲ್ಲಿ ಯಾವ ನಾಯಕನೂ ರಾಷ್ಟ್ರದ ಕಪ್ತಾನಿಕೆ ಪಡೆಯುವ ಅಂಕ ಗಳಿಸಲು ಸಾದ್ಯವಿಲ್ಲ. ಅದು ನಿಜ ಕೂಡಾ.

3. ಉದ್ಯೊಗ ಸೃಷ್ಟಿ. ಬಂಡವಾಳ ಸೃಷ್ಟಿ ಮತ್ತು ಆದಾಯವೃದ್ಧಿಯ ಮೂಲಕ ಸಂಪತ್ತಿನ ಸೃಷ್ಟಿ ( ಮುಖ್ಯವಾಗಿ ರೈತರದ್ದು) ಈ ಮೂರು ವಿಷಯಗಳನ್ನು ನಮ್ಮಂಥಾ ವಿಶ್ಲೇಷಕರು ಚರ್ಚೆಯ ವೇದಿಕೆಗೆ ತಂದಾಗಲೂ ಇತರ ರಾಜಕೀಯ ಪಕ್ಷಗಳು ಇದನ್ನು ಎತ್ತಿಕೊಳ್ಳಲಿಲ್ಲ. ಮೋದಿ ಇವನ್ನು ಚಾಪೆಯಡಿ ತಳ್ಳಿದರು.!! ಈ ಮೂರು ವಿಷಯಗಳು ನಿರ್ಣಾಯಕ. ಆದರೆ ಮೋದಿಯವರು “ಇದನ್ನು ಸಾಧಿಸಲು ಸಮಯ ಬೇಕು” ಎಂಬುದನ್ನು ತೇಲಿ ಬಿಟ್ಟ ರೀತಿಯಲ್ಲಿ ಈ ಭರವಸೆಯ ಮೇಲೆ ಜನ ನಂಬಿಕೆ ಇಟ್ಟರು.

2014 ಹಾಗೂ 2019ರ ನವ ಮತದಾರರು ನಿರುದ್ಯೊಗದ ದುಗುಡದಲ್ಲಿದ್ದರೂ ಇನ್ನೂ ಭರವಸೆ ಇಟ್ಟಿದ್ದಾರೆ. ಈ ವಿಚಾರದಲ್ಲಿ ನಿರ್ಣಾಯಕ ಅಸಮಾಧಾನ ಮಡುಗಟ್ಟಿಲ್ಲ. ( ನೋಟು ರದ್ಧತಿಯಲ್ಲೂ ಇದೇ ಆಗಿತ್ತು) ಮೋದಿ ಕೇಂದ್ರಿತವಾಗುತ್ತಾ ಬಂದ ಈ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಅಷ್ಟಿಷ್ಟಾದರೂ ಪ್ರತಿರೋಧ ಒಡ್ಡಿವೆ. ಆದರೆ ಎಲ್ಲೆಲ್ಲಿ ಕಾಂಗ್ರೆಸ್ ಎದುರಾಳಿಯಾಗಿದೆಯೋ ಅಲ್ಲೆಲ್ಲಾ ಜನ ಕಾಂಗ್ರೆಸ್ ಮುಖ ನೋಡಿಯೇ ಭಾಜಪಕ್ಕೆ ಮತ ಹಾಕಿದಂತಿದೆ!! ಇದರರ್ಥ ತಾನು ಪರ್ಯಾಯವಾಗಬಲ್ಲೆ ಎಂಬ ಕಾಂಗ್ರೆಸ್ ಹೇಳಿಕೆ ಕಂಡಿದ್ದೇ ಜನ ನಿರ್ಧಾರಕವಾಗಿ ಅದನ್ನು ತಿರಸ್ಕರಿಸಿದ್ದಾರೆ.

4. ನನ್ನ ಸಹಿತ ಬಹುತೇಕ ವಿಶ್ಲೇಷಕರು ಮೋದಿಯ ಆಡಳಿತಾತ್ಮಕ ಬಿರುಕುಗಳನ್ನು ಎತ್ತಿ ತೋರಿದಾಗಲೂ ಪರ್ಯಾಯ ಯಾರು ಎಂಬುದನ್ನು ಹೇಳಲಿಲ್ಲ. ಯಾಕೆಂದರೆ ನನ್ನಂಥಾ ಸ್ವತಂತ್ರ ವಿಶ್ಲೇಷಕರೂ ಕಾಂಗ್ರೆಸ್ ವಿರೋಧಿಗಳಾಗೇ ಬೆಳೆದವರು!! ಪರ್ಯಾಯವೆಂಬ ಮುಖಗಳು ಮಹತ್ವಾಕಾಂಕ್ಷೆಯ ಕೆಡವಿ ಹಾಕುವ ಅರಾಜಕ ರಾಜಕಾರಣಿಗಳು ಎಂಬ ಬಗ್ಗೆ ಎರಡು ಮಾತಿಲ್ಲ!! ಮೋದಿಗೆ ವರವಾಗಿದ್ದು ಈ ಸನ್ನಿವೇಶ. ಭಾಜಪ ಸದಾ ಭಿನ್ನಮತ ಬೀದಿಗೆ ತಾರದ ಶಿಸ್ತಿನ ಪಕ್ಷ. ಇದರ ಎದುರು ಇತರ ಪಕ್ಷಗಳ ಭಿನ್ನಮತ ಕಾಲೆಳೆಯುವ ರಾಜಕಾರಣ ಮೋದಿಯವರ ಸ್ಟಾಚರ್ ಅನ್ನು ಇನ್ನಷ್ಟು ಏರಿಸಿದೆ.

5. ಈ ಚುನಾವಣೆಯಲ್ಲಿ ಮೋದಿ ಕೋಮು ಧ್ರುವೀಕರಣದ ಮಾತಾಡಿದರೂ ಅದು ಮೂಲತಃ ನಮ್ಮ ಪಾಳೇಗಾರಿಕೆ ಜಾತಿ ವ್ಯವಸ್ಥೆಯ ಸಂಗತಿಯ ರಾಷ್ಟ್ರಮಟ್ಟದ ನವೀಕೃತ ಮಾದರಿ. ಅಂದರೆ “ಮಡುಗಿದಲ್ಲಿ ಇರು. ತಲೆಹರಟೆ ಮಾಡಬೇಡ..!!” ಎಂಬ ಬಹುಸಂಖ್ಯಾತರ ಕಣ್ಣಂಚಿನ ಸೂಚನೆ. ಇದು ಕಳೆದ ಐದು ವರ್ಷಗಳಲ್ಲಿ ಅಲ್ಪಸಂಖ್ಯಾತರಿಗೆ ಅರ್ಥವಾಗಿದೆ. ಅವರಿಗೆ ನೆನಪಿಸಲು ಆಗಾಗ್ಗೆ ಈ ಆವಾಜ್ ಹಾಕುತ್ತಿರಬೇಕಾಗುತ್ತೆ. ಅದನ್ನು ಎರಡನೇ ಹಂತದ ನಾಯಕರು ಶ್ರದ್ಧೆಯಿಂದ ಮಾಡಿದ್ದಾರೆ. ಶಿವಸುಂದರ್ ಹೇಳಿದ ಹಾಗೆ ಉಲ್ಟಾ ಧ್ರುವೀಕರಣ ಅಂದರೆ ಬಹುಸಂಖ್ಯಾತ ಧ್ರುವೀಕರಣ ನಡೆದಿದೆ.

ವಿ.ಸೂ: 1.

ನಾನು ಈಗ Real Choukidar! ಕಳೆದ 40 ವರ್ಷಗಳಿಂದ ಆಗಿದ್ದರೂ ಈ ಬಾರಿ ಅಧಿಕೃತವಾಗಿ ಘೋಷಿಸಿಕೊಳ್ಳುತ್ತಿದ್ದೇನೆ. ಸರ್ಕಾರದ ಮೇಲೆ ನಿಗಾ ಇಡುವ ಕೆಲಸ. ಇಷ್ಟು ದಿನ ಸರ್ಕಾರದ ಪರವಾಗಿ ಬ್ಯಾಜು ತಗಲಿಸಿಕೊಂಡವರು ಬ್ಯಾಜು ಕಿತ್ತು ಹಾಕಿರುವ ಕಾರಣ ಪರವಾಗಿಲ್ಲ!!

‍ಲೇಖಕರು avadhi

May 24, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: