ಸಿಂಧು ರಾವ್
ಉದ್ದ ಕಟ್ಟೆಯ ಜಗಲಿ
ಸಾಲು ಹೂವಂಗಡಿ ಬೆಳಗಿನಲಿ
ಅಷ್ಟೇ ಏನಲ್ಲ
ಕಸದಂಗಡಿಯೂ ಇದೆ ಸಾಲಲಿ
ಹಳೆ ಪೇಪರ್ ಕಬ್ಣ ಅಲ್ಲೆ ಪಕ್ಕದಲಿ
ಹೂವ ಇಡ್ಲಿ, ವಡೆ, ಚಿತ್ರಾನ್ನಈ ಬದಿಯಲಿ
ನಿನ್ನೆ ರಾತ್ರಿಯ ನೆನೆಸಿಟ್ಟ ಅನ್ನಕೆಲ ಬಟ್ಟಲಲಿ
ಕೆಲವರ ಕೈಯ ತಟ್ಟೆ ಖಾಲಿ ಖಾಲಿ..
ಚೂರು ಚುರುಗುಟ್ಟಿತು ಬಿಸಿಲು
ಈಗಿದೋ ಗುಡ್ಮಾರ್ನಿಂಗು,
ಫಾರ್ವರ್ಡು, ಇವತ್ತಿನ ಬ್ರೇಕಿಂಗ್ ನ್ಯೂಸು
ಅವತ್ತವತ್ತಿನ “ದಿನ”ಗಳ ಶುಭಾಶಯವಿರಿಸು
ಮಧ್ಯಾಹ್ನದ ಮೊದಲು ವಿಶ್ಲೇಷಣೆ,
ಕೃಷಿ, ಸಾವಯವ, ಸಿರಿಧಾನ್ಯ, ಹೊಳೆ ಜೋಡಣೆ,
ಕನಿಷ್ಠ ಕೂಲಿ, ಉಳಿತಾಯ ವಿಧಾನ, ಗಗನಚುಂಬೀ ವಿಸ್ತರಣೆ
ಅಲ್ಲಲ್ಲಿ ಕಾರ್ ಬಾರ್,
ಹೆಚ್ಚಿಲ್ಲಿ ವಿಧವಿಧ ಛಾಯಾಚಿತ್ರ ಸ್ವಂತೀ ಜೋಡಣೆ
ಊಟಕ್ಕೆ ಮೊದಲು ಜೋಡಿಸಿಟ್ಟ ತಟ್ಟೆ
ಆಮೇಲೆ ಬರುವುದು ಹೇಗೆ ಕರಗಿಸಬಹುದು ಹೊಟ್ಟೆ
ಮಧ್ಯಾಹ್ನ ಕಿರುನಿದ್ದೆ, ಕಾಫಿಯ ಸಮಯ
ಈಗ ಬಿಸಿಬಿಸಿ ಚರ್ಚೆ, ಗರಿಮುರಿವ ಹದಾ ವಡೆ ಮಿರ್ಚಿ
ಸಂಜೆಗತ್ತಲಿಗೊಂದು ಕಪ್ಪುಬಿಳುಪು ಹಾಡು
ಚಿಕ್ಕಂದಿನಲ್ಲಿ ಕೇಳಿ ಮರೆತ ಭಜನೆ
ಇರುಳ ದೀಪ ಬೆಳಗುವ ಮೊದಲೊಂದು ರಾಕು ಶ್ರೀಕು
ಆರಿಸಿಟ್ಟ ಗಝಲ್, ಹೊಸ ಹಾಡಿನ ಪಲುಕು
ರಾತ್ರಿ ಹೊರಳುವ ಮೊದಲು
ಮುಖೇಶನೇ ಬೇಕು.
ಅಲ್ಲಲ್ಲಿ ನ್ಯೂಸು ಬ್ರೇಕಿಂಗು
ಅದಕೆ ನಮ್ ನಮ್ಮ್ ಸ್ಪಂದನೆ ಶಾಕಿಂಗು
ನೀನೆಲ್ಲಿ ಕಟ್ಟೆಯ ಮೇಲಾ ಕೆಳಗಾ
ಬದಿ ಯಾವುದು
ಮಗು ಸತ್ತಿತೆ? ಕೆಂಪು ಮೂತಿಯೊತ್ತು,
ಗೆಳತಿಯ ಪೋಸ್ಟಿಗೊಂದು ಲವ್ ಲೈಕು
ಆ ಡಾಕ್ಟರ ಯಾರವ? ಅನಲೈಸಾದ ಕಾಮೆಂಟು ಬಿತ್ತು
ಅಷ್ಟರಲ್ಲಾಗಲೆ ಗೆಳೆಯ ಫ್ರೇಮಿಗಿಟ್ಟ ಡೇರೆ ಹೂವಿಗೆ ವಾವ್ ಒತ್ತು
ಇವಳಮ್ಮ ಇಲ್ಲಿ ಟೀವಿಯಲಿ ಅಳುವಳು
ಎಷ್ಟೋ ದಿನದಿಂದ ಹುಡುಕುತಿದ್ದ ಹಾಡು ಹಾಕಿದೆಯಲ್ಲ ಶೇರ್ ಮಾಡು……
ಅಷ್ಟರಲ್ಲಿ ಬಣ್ಣ ಬದಲಿದೆ.
ಬೆಳಗು ದಿನವಿಡಿ ಸುಸ್ತಾಗಿ ಕದಲಿ
ಹದವಾಗಿ ರಾತ್ರಿಮಡಿಲಲಿ
ಮಲಗುವ ಹೊತ್ತಲಿ
ಮೋಡವಿಲ್ಲ ಶ್ರಾವಣದ ಬಾನಿನಲಿ
ಅಷ್ಟಮಿಯ ಬೆಳಕು ಮಂಕು ಬಿದ್ದಿದೆ
ತುಂಬಿ ಕಿಕ್ಕಿರಿದ ಚುಕ್ಕಿ ಸಮೂಹ ಮಿನುಗುವುದೇ ಇಲ್ಲ
ಅಮ್ಮನೆತ್ತಿ ಹಿಡಿದ ಸ್ಪಂದರಹಿತ
ಪುಟ್ ಪುಟಾಣಿ ಮಕ್ಕಳ ಮೊಗ ಮರೆಯಾಗುವುದೆ ಇಲ್ಲ
ಕೊಳಲನೂದಿ ಕ್ಲೇಶ ಕಳೆವ ಕೇಶವನ
ಗಂಟಲು ಕಟ್ಟಿದೆ
ಭವಸಾಗರದ ದೋಣಿಗೆ ಹುಟ್ಟಿಲ್ಲ.
ಸಾವು ಈಗೀಗ ಸಾವೇ ಅಲ್ಲ. ಬರಿದೆ ಅಜೆಂಡಾ
ಉದ್ದ ಜಗಲೀ ಕಟ್ಟೆ,
ಹತ್ತಿ ಸುತ್ತುತಲಿದ್ದೇವೆ,
ಇಳಿವ ಏಣಿ ಹತ್ತಿರದಲಿಲ್ಲ.
ನೂರು ದಾರಿ ತೆರೆದ ಬಾಗಿಲು
ಹೆಜ್ಜೆ ನಮ್ಮ ಹಿಡಿತದಲಿಲ್ಲ.





mudhavagithu