ಸರೋಜಿನಿ ಪಡಸಲಗಿ ಸರಣಿ 1: ಮೊದಲ ಭೇಟಿ ತಿಳವಳ್ಳಿಗೆ..

ಸರೋಜಿನಿ ಪಡಸಲಗಿ

1979 ರಿಂದ 1985ರ ವರೆಗೆ ಬಂಕಾಪುರದಲ್ಲಿ ದಿನ ಹೇಗೆ ಓಡಿದವು ಎಂಬುದರ ಅರಿವೇ ಇಲ್ಲದಂತೆ ಸಮಯ ಸರಿದಿತ್ತು. ನಮಗೆ ಅಲ್ಲಿಂದ ತಿಳವಳ್ಳಿಗೆ ಟ್ರಾನ್ಸ್ ಫರ್ ಆಯ್ತು. ತಿಳವಳ್ಳಿ ಹಾನಗಲ್ ತಾಲೂಕಿನ ಒಂದು ಚಿಕ್ಕ ಹಳ್ಳಿ – ಕುಗ್ರಾಮ ಅನಲೂಬಹುದು. ಹಾನಗಲ್ಲಿನಿಂದ 23-24 ಕಿ ಮೀ ದೂರದಲ್ಲಿತ್ತು. ಸವಣೂರ ವಿಭಾಗದಲ್ಲಿಯೇ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಬರ್ತಿತ್ತು. ಹೀಗಾಗಿ ಅಷ್ಟೇನೂ ದೂರ ಅಲ್ಲ, ಸವಣೂರಿನ ಹತ್ರಾನೇ ಇರ್ತೀವಿ ಅಂತ ನನ್ನ ಗಂಡಗೆ ಖುಷಿಯೋ ಖುಷಿ. ಆದರೆ ತಿಳವಳ್ಳಿಗೆ ಟ್ರಾನ್ಸ್ ಫರ್ ಆಗಿದೆ ಎಂದು ಯಾರಿಗೇ ಹೇಳಿದ್ರೂ ನೂರು ಕತೆ  ಹೇಳೋರು – “ಯವ್ವಾ ಅದು ಊರೇನs ಯವ್ವಾ. ಅಡವಿ ಇದ್ಧಾಂಗ ಐತಿ. ಆ ಊರ ದಾರಿಯರ ಏನ ಯವ್ವಾ. ಹೆಂಗ ಇರತೀರ ಬೇ ಅಲ್ಲಿ” ಅನ್ನಾವ್ರು.

ಅದನ್ನು ಕೇಳಿ ಕೇಳಿಯೇ ನನಗೆ ಅರ್ಧ ಕಾಡಲ್ಲಿ ಕಣ್ಣು ಕಟ್ಟಿ ಬಿಟ್ಟಂತೆನಿಸಿ ಉಸಿರು ಕಟ್ಟಿದಂತಾಗೋದು. ಕೊನೆಗೆ ಆ ಆಸುಪಾಸಿನ ಊರುಗಳಲ್ಲೆದರ ಪರಿಚಯ ಇದ್ದ ಕುಲಕರ್ಣಿ ಸಿಸ್ಟರ್ ನ ಕೇಳೇ ಬಿಟ್ಟೆ ಏನು ಹಕೀಕತ್ತು ತಿಳವಳ್ಳಿದು ಅಂತ. ಆಗ ಅವರು – “ವೈನೀ ನೀವು ಹೆದರಿ ಗಿದರೀರಿ ಅಂತ ನಾ ಸುಮ್ಮನಿದ್ದೆ. ಅದು ನೀವು ತಿಳ್ಕೊಂಡಷ್ಟ ಸರಳ ಇಲ್ರೀ. ಆ ಊರಿಗೆ ಬಸ್ಸೇ ಭಾಳ ಕಡಿಮೆ. ಇದ್ದ ಯಾವ ಬಸ್ಸೂ ಸರಳ ಹಾದೀಲೇ ಹೋಗಾಂಗಿಲ್ಲ. ಎಲ್ಲೆಲ್ಲೋ, ಹೆಂಗೆಂಗೋ ಹೋಗ್ತಾವ. ಹಾನಗಲ್ಲಿಂದ ಅಲ್ಲಿಗೆ ಮುಟ್ಟಲಿಕ್ಕೆ ಎರಡು-ಎರಡೂವರೆ ತಾಸು ಬೇಕ್ರಿ. ಕೊಂಕಣಾ ಸುತ್ತಿ ಮೈಲಾರಿಗೆ ಹೋದ ಲೆಕ್ಕಾನ್ರೀ ವೈನೀ. ಊರನೂ ಭಾಳ ಕೆಟ್ಟ ಕಗ್ಗ ಹಳ್ಳಿರೀ. ಅಲ್ಲಿ ಹೆಂಗಿರತೀರಿ ವೈನೀ ಸಣ್ಣ ಮಕ್ಕಳನ ಕಟಗೊಂಡು? ಸಾಹೇಬ್ರಿಗೆ ಹೇಳ್ರಿ ವೈನೀ ಬ್ಯಾರೆ ಕಡೆ ಟ್ರಾನ್ಸ್ ಫರ್ ಕೇಳ್ರಿ ಹೆಂಗರ ಮಾಡಿ ಅಂತ” ಅಂದ್ರು. ಸುಮ್ಮನಾಗಿ ಬಿಟ್ಟೆ ನಾ ಒಂದೂ ಮಾತಾಡದೆ. ದೇವರೇ ಗತಿ ಅನ್ಕೊಂಡೆ.

ಬಂಕಾಪುರದ ಮೆಡಿಕಲ್ ಆಫೀಸರ್ ಪೋಸ್ಟ್ ಗೆ ಇನ್ನೊಬ್ಬರು ಬರೋವರೆಗೂ ಟೈಂ ಇತ್ತು ನಮಗೆ. ಅದರಲ್ಲಿಯೇ ಒಂದಿನ ಬಿಡುವು ಮಾಡಿಕೊಂಡು ನನ್ನ ಪತಿ ಹಾಗೂ ICDS MO ಇಬ್ರೂ ಕೂಡಿ ಆ ಊರನ್ನು ನೋಡಿ ಬರಲು ಹೋದವರು ಬೆಳಗಿನ ನಾಲ್ಕು ಗಂಟೆಗೆ ಬಂದ್ರು ತಿರುಗಿ! ಬಂದಾಗ ಸುರೇಶ ಅವರ ಮುಖ ನೋಡಿ ಗೊತ್ತಾಗಿ ಹೋಯ್ತು ನಂಗೆ ಏನೂ ಸರಿ ಇಲ್ಲ ಅಂತ. ಏನೂ ಕೇಳದೇ ನನ್ನನ್ನೇ ನಾನು ತಯಾರು ಮಾಡಿಕೋತಿದ್ದೆ ಮುಂದಿನದನ್ನು ಎದುರಿಸಲು. ಅಷ್ಟ್ರಲ್ಲಿ ಅವರೇ ಹೇಳಿದ್ರು- “ಕಾಡು ಇದ್ಧಾಂಗ ಅದ ಊರು. ಭಾಳ ಅಧ್ವಾನ್ನ. ಯದ್ವಾತದ್ವಾ ಹಾದಿ. ಕ್ವಾರ್ಟರ್ಸ್ ನೂ ಇಲ್ಲ. ಬಾಡಿಗಿ ಮನಿ ಹುಡುಕಬೇಕು. ಹೆಂಗೆಂಗೋ ಅವ ಮನೀನೂ. ಆಸ್ಪತ್ರಿ ಕಟ್ಟಡಾನೂ  ಒಂದು ಗೋಡೌನ್ ಥರಾ ಅದ. ಅಂಥಲ್ಲಿ ಪೇಷಂಟ್ ಗಳನ್ನು ಹೆಂಗೆ ನೋಡೋದು, ಆಪರೇಷನ್ ಹೆಂಗ ಮಾಡೂದು ತಿಳೀತಿಲ್ಲ. ಹಾಸ್ಪಿಟಲ್ ಬಿಲ್ಡಿಂಗ್, ಕ್ವಾರ್ಟರ್ಸ್ ಎಲ್ಲಾ ಮಂಜೂರಾಗ್ಯಾವಂತ. ಆದ್ರೆ ಎಲ್ಲಾ ತಯಾರಾಗ್ಲಿಕ್ಕೆ ಎರಡು ವರ್ಷರೇ ಬೇಕಾದೀತು,” ಅಂದ್ರು.

ನನ್ನ ಬಾಯಿಂದ ಮಾತೇ ಹೊರಡಲಿಲ್ಲ. ‘ಕರೆಂಟ್ ಪರಿಸ್ಥಿತಿನೂ ಹಂಗಂಗೇ ಅಂತ’ ಸೇರಿಸಿದ್ರು ಸುರೇಶ ನಾ ಊಹಿಸಿದ್ದನ್ನೇ. ‘ಆತ ಬಿಡ್ರಿ’ ಅಂದೆ ಕಷ್ಟಪಟ್ಟು. ಕರೆಂಟ್ ಇಲ್ಲದ ಕತ್ತಲು ರಾತ್ರಿ, ಒಂದು ಹೆಂಚಿನ ಮನೆ, ಅದರ ಮಧ್ಯೆ ತೂಗು ಹಾಕಿದ ಲಾಟೀನು, ಹೆಂಚುಗಳ ಸಂದೀಲಿ ಓಡಾಡೋ ಇಲಿಗಳು, ಮುಂದೆ ಅಂಗಳ, ಅದಕ್ಕೊಂದು ತಂತಿಯ ಬೇಲಿ, ಆ ಬೇಲಿಗೊಂದು ತಡಿಕೆಯ ಗೇಟ್.. ಇವಿಷ್ಟು ನನಗೇ ಗೊತ್ತಿಲ್ಲದಂತೆ ನನ್ನ ಮನದಲ್ಲಿ ತಾನೇ ತಾನಾಗಿ ಮೂಡಿ ಬಂತು.

ಒಂದೇ ಒಂದು ಶಬ್ದ ಮಾತಾಡಲಾಗಲಿಲ್ಲ ನಂಗೆ. ಮಲಗಿದ್ದ ಕಂದಮ್ಮಗಳತ್ತ ಒಮ್ಮೆ ನೋಡಿ ಹಾಗೇ ಸುಮ್ಮನೆ ಕಣ್ಮುಚ್ಚಿ ಮಲಗಿದೆ ಬಾರದ ನಿದ್ದೆಗೆ ಕಾಯುತ್ತಾ, ಅರಿಯದ, ಕಾಣದ ಆ ತಿಳವಳ್ಳಿಯಲ್ಲಿ ಕಳೆಯಲಿರುವ ದಿನಗಳ ಬಗ್ಗೆ ಯೋಚಿಸುತ್ತ, ನನ್ನ ಮನಸ್ಸನ್ನು ಅಳ್ಳಕವಾಗದಂತೆ ಗಟ್ಟಿ ಹಿಡಿಯುತ್ತ.

ಒಂದೆರಡು ದಿನ ಕಳೆದ ಮೇಲೆ ನಾನೇ ಕೇಳಿದೆ ನನ್ನ ಪತಿಯನ್ನು – “ತಿಳವಳ್ಳಿಗೆ ನಾಳೆ ಹೋಗಿ ಬರೂದು ಛಲೋ ಅನಿಸ್ತಿದೆ. ಮತ್ತ ಮನಿ ಗಿನಿ ನೋಡಬೇಕಲಾ” ಅಂದೆ. ಸರಿ ಅಂದರವರು. ಹೊರಟಾಯ್ತು ಮಾರನೇ ದಿನ ಮಕ್ಕಳನ್ನು ಸೀತವ್ವನ ಜೊತೆ ಬಿಟ್ಟು. ಜೀಪ್ ನಲ್ಲಿ ನೇರವಾಗಿ ಹೋದ್ರೆನೇ ಬಂಕಾಪುರದಿಂದ ಎರಡೂವರೆ ತಾಸಿನ ಮೇಲಾಯ್ತು ಅಲ್ಲಿಗೆ ಹೋಗಿ ಮುಟ್ಟಲು. ಬರೀ 52-53 ಕಿ.ಮೀ. ಅಷ್ಟೇ ದೂರ! ಅಂಥ ರಸ್ತೆಗಳು ತಿಳವಳ್ಳಿಯ ಸ್ಥಿತಿಗತಿಗೆ ಕನ್ನಡಿ ಹಿಡಿಯುವಂತೆ.

ತಿಳವಳ್ಳಿ ಊರು ಪ್ರವೇಶಿಸಿತು ಜೀಪು. ಡ್ರೈವರ್ ಬಿಸ್ತಿಯ ಮುಖ ನೋಡುವ ಹಾಗಿತ್ತು. “ಸಾಹೇಬ್ರ, ಜೀಪ್ ಬಂಕಾಪುರಕ ಹೊಳ್ಳಿಸಿ ಬಿಡ್ತೀನ್ರೀ. ಬಾಯರ ಏನ ನೋಡ್ತೀರಿ, ನಡೀರಿ ವಾಪಸ್ ಹೋಗೋಣ” ಅಂದ ಆತ. ಸುರೇಶ ನನ್ನ ಮುಖ ನೋಡಿದ್ರು. ನಾನೇ ಹೇಳಿದೆ, “ಬಿಸ್ತಿ, ಏನಾಗಾಂಗಿಲ್ಲ ನಡಿ. ಇಲ್ಲಿಗೆ ವರ್ಗ ಆಗೇದ ಅಂದ ಮ್ಯಾಲೆ ಇಲ್ಲೆ ಬರಲಿಕ್ಕೇ ಬೇಕು, ಇರಲಿಕ್ಕೇ ಬೇಕು. ಅನುಕೂಲ ಮಾಡಿಕೊಳ್ಳೋದು ನಮ್ಮ ಕೈಯಾಗs‌ ಅದ ನಡಿ. ಮನಿ ಅಂತೂ ನೋಡಿ ಬರೋಣ ನಡಿ” ಅಂದೆ. ನನ್ನ ಪತಿ ಅಲ್ಲಿನ FDC ಯವರಿಗೆ ಮನೆ ನೋಡಲು ಹೇಳಿದ್ರು. ನಾವು ಆಸ್ಪತ್ರೆಯತ್ತ ಹೋಗಿ ಅಲ್ಲಿಯೇ ಅವರನ್ನು ಕಂಡರಾಯ್ತು ಅಂತ ಅಲ್ಲಿಗೇ ಹೊರಟೆವು.

ದೊಡ್ಡ ಬಯಲು ಒಂದನ್ನು ಪ್ರವೇಶಿಸಿತು ಜೀಪು. ನಾ ಎಲ್ಲಿ ಹಾಸ್ಪಿಟಲ್ ಅಂದೆ. ಏನೂ ಮಾತಾಡದೇ ಸುರೇಶ  ಕೈ ಮಾಡಿ ತೋರಿಸಿದ್ರು. ಆ  ಕಟ್ಟಡ ನೋಡಿ ನನಗೂ ಮಾತು ಮರೆತು ಹೋಯ್ತು. ಆ ಖಾಲಿ ಖಾಲಿ ಬಯಲಿನಲ್ಲಿ ನಿಂತಿತ್ತು  ಬಿಳೀ ಬಣ್ಣ ಬಳೆದುಕೊಂಡ ಉಗ್ರಾಣದಂಥ ಒಂದು ಕಟ್ಟಡ! ಆಸ್ಪತ್ರೆ ಬಿಲ್ಡಿಂಗೇ ಹೀಗಿರಬೇಕಾದರೆ ನಾವಿರಬೇಕಾದ ಬಾಡಿಗೆ ಮನೆ ಇನ್ಯಾವ ಥರಾನಪಾ ದೇವರೇ ಅಂದುಕೊಂಡೆ. ಏನಂದುಕೊಂಡ್ರೂ ಅಷ್ಟೇ, ಬೇರೆ ದಾರಿ ಇಲ್ಲ. ಅದು ಹೊಳೆದಂತೆ ಕುಸಿಯುತ್ತಿದ್ದ ನನ್ನ ಗಟ್ಟಿತನ ಜಾಗ್ರತಗೊಂಡಿತು. ಹೇಳ್ದೆ ನನ್ನ ಪತಿಗೆ , “ಛಲೋ ಅದ ಆಸ್ಪತ್ರಿ. ರಗಡ ದೊಡ್ಡದೂ ಅದ. ಅರ್ಧ ಗೋಡೆ ಮೇಲರ್ಧ ತಂತಿ ಬಿಗಿಸಿರೋದರಿಂದ ಗಾಳಿ ಬೆಳಕು ಸಾಕಷ್ಟು ಬರ್ತದೆ” ಅಂದೆ.

ಅಲ್ಲಿನ ಮಲೆನಾಡಿನ ಮಳೆಗೆ ಗತಿ ಏನು ಅಂತ ಮನದಲ್ಲೇ ಅಂದುಕೊಳ್ಳುತ್ತಾ. ಸುರೇಶ ಅವರ ಮುಖ ಸ್ವಲ್ಪ ಗೆಲುವಾಯ್ತು. ‘ಹೂಂ ಒಂಚೂರು ಸಣ್ಣಪುಟ್ಟ ರಿಪೇರಿ ಮಾಡಿಸಿಕೊಂಡ್ರಾತು’ ಅಂದ್ರು. ನಾ ತಲೆ ಅಲ್ಲಾಡಿಸಿದೆ. ಅಷ್ಟ್ರಲ್ಲಿ ಆಸ್ಪತ್ರೆಯ ಒಳಗಿನಿಂದ ಒಬ್ಬ ಎತ್ತರದ ಕಪ್ಪು ಮನುಷ್ಯ ಬಂದು ‘ನಮಸ್ಕಾರ್ರೀ ಸರ್’ ಅಂದ. ಆಗ ಸುರೇಶ ಪ್ರತಿ ವಂದಿಸಿ ನನಗೆ ಆತನ್ನ ಪರಿಚಯಿಸಿದ್ರು. ಅವರೇ FDC. ‘ಸರ್ ಒಂದು ಮನೆ ನೋಡಿ ಹೇಳಿ ಇಟ್ಟೀನ್ರಿ. ಹೂಂ ಅಂದಾರ್ರಿ. ಆಸ್ಪತ್ರೆಗೂ ಹತ್ರ ಅದರೀ’ ಅಂದು ‘ನಮಸ್ಕಾರ್ರಿ ಅಕ್ಕಾರ’ ಅಂದರಾತ. ನಾನೂ ನಮಸ್ಕಾರ ಹೇಳಿ, ‘ಆ ಮನಿ  ತೋರಸ್ತೀರಿ?’ ಅಂತ ಕೇಳಿದೆ. ‘ಈಗ ಅಲ್ಲೇ ಹೋಗೋಣ್ರಿ ಅಕ್ಕಾರ’ ಅಂದ್ರು ಅವರು. ಸರಿ ತಿಳವಳ್ಳಿಯಲ್ಲಿ ನಮ್ಮದಾಗಲಿರುವ ಮನೆಯತ್ತ ಹೊರಟೆವು.

ಐದು ನಿಮಿಷಗಳಲ್ಲಿ ಒಂದೆಡೆ ಜೀಪ್ ನಿಲ್ಲಿಸಲು ಹೇಳಿದರಾತ. ಇಳಿದು ನೋಡಿದೆ. ಒಂದೇ ಸಾಲಿನಲ್ಲಿ ಐದು ಮನೆಗಳು. ಎಲ್ಲಾ ಮನೆಗಳ ಮಧ್ಯದಲ್ಲಿ common wall ಇತ್ತು ಅಂತ ನೋಡಿದ್ರೆನೇ ಗೊತ್ತಾಯ್ತು. ಒಟ್ಟಲ್ಲಿ ಒಂದು ಚಾಳ ಥರಾ ಇತ್ತದು. ಜೋರಾಗಿ ಉಸಿರು ಬಿಟ್ರೂ ಪಕ್ಕದ ಮನೆಗೆ ಕೇಳೋದು! ಪುಣ್ಯಕ್ಕೆ ಮೊದಲನೇ ಮನೆನೇ ನಮಗಾಗಿ ಇದ್ದದ್ದು. ಅಂದರೆ ಒಂದು ಬದಿಗಷ್ಟೇ common wall ಅಷ್ಟೇ ಏನೋ ಸ್ವಲ್ಪ ಸಮಾಧಾನ. ಅಲ್ಲೇ ನಾಲ್ಕನೇ ಮನೇಲಿ ಮಾಲೀಕರು ಇರತಿದ್ರು. ಅವರ ಮನೆಯ ಪಕ್ಕವೇ ಪೋಸ್ಟ್ ಆಫೀಸ್. ಮುಂದಿನ ಎರಡು ಕೋಣೆ ಆಫೀಸ್ ಗೆ, ಹಿಂದಿನ ಮೂರು ಕೋಣೆಗಳಲ್ಲಿ ಅವರ ವಾಸ ಕುಟುಂಬದೊಂದಿಗೆ. ಅಂದರೆ ಈ ಕೊನೆಗೆ ನಾವಿರಬೇಕಾಗಿದ್ದ ಮನೆ, ಆ ಕೊನೆಗೆ ಪೋಸ್ಟ್ ಆಫೀಸ್.

ನಮ್ಮ ಪಕ್ಕದ ಮನೆಯಲ್ಲಿ ಒಬ್ಬ ಪೋಲಿಸ್ ತಮ್ಮ ಕುಟುಂಬ ಸಹಿತ ಹಾಗೂ ಅದರ ಪಕ್ಕದ ಮನೆಯಲ್ಲಿ ಒಬ್ಬ ಸಿಸ್ಟರ್ ಅಂದರೆ ನರ್ಸ್ ಹಾಗೂ ಅವರ ಕುಟುಂಬ- ಇಷ್ಟು ಸ್ಥೂಲ ಪರಿಚಯ ನಮ್ಮ ವಾಸ ಸ್ಥಾನವಾಗಲಿರೋ ಸ್ಥಳದ್ದು FDC ನೀಡಿದ್ರು. ನಾ ಸುಮ್ಮನೇ ಅತ್ತ ಇತ್ತ ನೋಡುತ್ತಾ ಇದ್ದೆ. ಅಷ್ಟ್ರಲ್ಲಿ ಮಾಲೀಕರು ಬಂದು ‘ನಮಸ್ಕಾರ’ ಹೇಳಿ ಮನೆ ಬೀಗ ತೆರೆದು ‘ಬನ್ನಿ ಒಳಗೆ’ ಅಂದ್ರು. ನಾನೂ ಅಳಕುತ್ತಲೇ ಬಲಗಾಲಿಟ್ಟು ಒಳಗೆ ಹೋದೆ- ಏನೋ ಟಪ್ಪಂತಾ ಸಪ್ಪಳಾಯ್ತು. ಗಟ್ಟಿಯಾಗಿ ಸುರೇಶ ಅವರ ತೋಳು ಹಿಡಿದು ಆ ಕಡೆ ನೋಡಿದೆ- ಒಂದು ಹಲ್ಲಿ, ದೊಡ್ಡ ಗಾತ್ರದ್ದೇ, ಓತಿಕೇತಿನ ಸೈಜಿಂದು! ಒಂಥರಾ ಹೆದರಿಕೆ, ವಾಂತಿ ಬರೋ ಹಾಗಾಯ್ತು. ಮೈ ಝುಮ್ಮಂತು. ಅಲ್ಲೇ ನಿಂತೆ. ಸುರೇಶ ‘ಒಳಗೆ ಬರದಿದ್ರೆ ಮನೆ ನೋಡೋದು ಹೇಗೆ?’ ಅಂದಾಗ ಒಳಗೆ ಹೋದೆ ಅಂಜಂಜುತ್ತಲೇ.

ಮನೆ ನೋಡಿ ಹೈರಾಣಾಯ್ತು ಜೀವ. ಒಂದು ವ್ಹೆರಾಂಡಾ, ಅದೇ ಹಲ್ಲಿ ಬಿದ್ದಿದ್ದು, ಅದನ್ನು ಸೇರಿಸಿಯೇ ಐದು ಕೋಣೆಗಳು ಉದ್ದಕ್ಕೆ ರೈಲು ಬೋಗಿಗಳಂತೆ. ಸುಮಾರು ಸೈಜಿನವು. ಮಧ್ಯದ ಎರಡು ಕೋಣೆಗಳಿಗೆ ಮೇಲೆ ಹೆಂಚಿನ ಕೆಳಗೆ ಹಲಿಗೆ ಬಡಿಸಿದ್ಹಂಗಿತ್ತು. ಮೇಲೆ ಚಿಕ್ಕ ಅಟ್ಟ ಇತ್ತು ಬಳಸಲಿಕ್ಕೆ ಯೋಗ್ಯ ಇಲ್ಲದ್ದು. ಅದಕ್ಕೆ ಮೆಟ್ಟಿಲೂ ಇರಲಿಲ್ಲ, ಒಂದು ನಿಚ್ಚಣಿಕೆ ಇಟ್ಟಿದ್ದನ್ನು ತೋರಿಸಿದ್ರು ಮಾಲೀಕರು. ಅದೇನು ಬೇಡವೇ ಬೇಡ , ಅಲ್ಲಿದ್ದ ಒಂದು entrance ಅಟ್ಟಕ್ಕೆ ಹೋಗಲು ಅದನ್ನು ಮುಚ್ಚಿಸಿ ಬಿಟ್ರೆ ಸಾಕು ಅಂದೆ. ಆ ಎರಡು ಕೋಣೆಗಳಿಗಷ್ಟೇ ಒಂದೊಂದು ಪುಟ್ಟ ಪುಟ್ಟ ಕಿಟಕಿ. ಇನ್ನುಳಿದಂತೆ ಎಲ್ಲಾ ಪೂರ್ತಿ ಬಂದ್! ಹೊರಗಿನ ವ್ಹೆರಾಂಡಾದ ಅರ್ಧ ಗೋಡೆ ಮೇಲರ್ಧ ತಂತಿ ಬಿಗಿದ ಕಿಟಕಿ ಥರಾ ಥೇಟ್ ದವಾಖಾನೆಗೆ ಇದ್ದ ಹಾಗೆಯೇ. ಓಪನ್ ಏರ್ ಥಿಯೇಟರ್ ಅದು! ತಿಳವಳ್ಳಿಯ ಸ್ಟೈಲ್ ಇದು ಅನ್ಕೊಂಡೆ. ಆದರೂ ಉಪಯೋಗಿಸಬಹುದಿತ್ತು.

ಒಟ್ಟಿನಲ್ಲಿ ವ್ಹೆರಾಂಡಾ ಸೇರಿ ಮುಂದಿನ ಮೂರು ಕೋಣೆಗಳಲ್ಲಿಯೇ ನಮ್ಮ ಸಂಸಾರ! ಇನ್ನುಳಿದ ಎರಡು ಕೋಣೆಗಳಲ್ಲಿ ನಮ್ಮ ಹೆಚ್ಚಿನ ಸಾಮಾನು ಒಟ್ಟಬೇಕು ಅಷ್ಟೇ. ಆ ಕೊನೇ ಕೋಣೆಯಲ್ಲಿ ಒಂದು ಬಚ್ಚಲು, ಅದೇ ಅಡಿಗೆ ಕೋಣೆನೂ ಅಂತೆ! ಅಯ್ಯಪ್ಪಾ ಅಂದೆ. ಒಂದು ಕ್ಷಣ ಸುಮ್ಮನಿದ್ದು ಪಟ್ಟನೇ ಒಂದು ನಿರ್ಧಾರಕ್ಕೆ ಬಂದೆ, ಇಲ್ಲಿನ ವರೆಗಿನ ಜೀವನ ಕಲಿಸಿದ ಪಾಠಗಳ ಬೆಳಕಿನಲ್ಲಿ. 

ಸುರೇಶಗೆ ಹೇಳಿದೆ – “ಹೊರಗಿನ ವ್ಹೆರಾಂಡಾ sit out, ಎರಡನೇ ಕೋಣೆ ಹಾಲ್ ಹಾಗೂ ಡೈನಿಂಗ್ ಹಾಲ್, ಮೂರನೇ ಕೋಣೆ  ಬೆಡ್ ರೂಂ cum ಅಡಿಗೆ ಮನೆ! (ನಾನು ಒಂದು ಕಿಚನ್ ಟೇಬಲ್ಲು ಖರೀದಿಸಿದ್ದೆ. ಅದರಲ್ಲಿ ಅಡಿಗೆ ಮನೆಯ ಸಾಮಾನು ಜರೂರಿಗಾಗುವಷ್ಟು ಇಟ್ಟುಕೋ ಬಹುದಿತ್ತು.) ಅದನ್ನು ಗೋಡೆಯ ಪಕ್ಕ, ಬಾಗಿಲಿನ ಇದಿರಿಗೆ ಇಟ್ಟರೆ ಅದಷ್ಟೇ ಅಡಿಗೆ ಕೋಣೆ ನನಗೆ ನಿಂತು ಅಡಿಗೆ ಮಾಡಲು ಎರಡು ಫೂಟ್ ಜಾಗ, ಅದೇ ಓಡಾಡುವ ಹಾದಿನೂ ಹೌದು – ಅಷ್ಟು ಬಿಟ್ಟು ಎರಡು ಡಬಲ್ cot ಜೋಡಿಸಿ ಹಾಕಿದರೆ ಅದೇ ಬೆಡ್ ರೂಂ! ಅದರ ಪಕ್ಕದ ಕತ್ತಲು ಕೋಣೆ ದೇವರಿಗೆ ಮತ್ತು ಸ್ಟೋರ್, ಕೊನೇ ಕೋಣೆಯ ಬಚ್ಚಲಷ್ಟೇ ಉಪಯೋಗಿಸೋದು ಮತ್ತು ಅಲ್ಲೇ ಇದ್ದ ನೀರೊಲೆ. ಉಳಿದೆಲ್ಲ ಸಾಮಾನು ಬಿಚ್ಚದೇ ಹಾಗೇ ಅಲ್ಲಿಟ್ಟು ಬಿಡೋದು” ಅಂತ ಹೇಳಿದೆ ಸಾವಧಾನವಾಗಿ, ಶಾಂತವಾಗಿ. ಪಾಪ, ಏನು ಹೇಳಿಯಾರು ಆತ? ಹೂಂ ಸರಿ ಅಂದ್ರು.

ಆ ಮನೇಲಿ ಮಾಲೀಕರು ಬತ್ತ ತುಂಬಿದ್ರಂತೆ. ತೆಗೆಯಿಸಿ ಸ್ವಚ್ಛ ಮಾಡಿದ ಮನೆ ಇದು- ಇನ್ನೂ ಹಂಗಂಗೇ ಇತ್ತು. ಅದನ್ನೇ ಇರಲಿ ಅಂತ ಹೇಳಿ ಸ್ವಲ್ಪ ಸ್ವಚ್ಛ ಮಾಡಿಸಿ ಕೊಡಲು ಹೇಳಿ, ಹಿತ್ತಿಲು ನೋಡಿದೆ. ದೊಡ್ಡ ಹಿತ್ತಿಲು. ಮೂರು ಮನೆಗಳಿಗೆ ಸೇರಿ. ಮಧ್ಯೆ ಏನೋ ಕಟ್ಟಿದಂತೆ ಇತ್ತು ಆ ಇನ್ನೆರಡು ಮನೆಗಳ ಹಿತ್ತಿಲಲ್ಲಿ. ನಮ್ಮ ಮನೆಯ ಹಿತ್ತಲಲ್ಲಿ ದೊಡ್ಡ ಬಾವಿ, ಸಿಹಿ ನೀರಿನದು. ಇಣುಕಿ ನೋಡಿದೆ ಭಯ ಆಯಿತು. ಈ ಕಡೆ ತಿರುಗಿದೆ.

ಎಲ್ಲಾ ಆಯ್ತು ಆದ್ರೆ Toilet ಸುದ್ದಿಯೇ ಇಲ್ಲ! ಎದೆ ಧಸ್ ಅಂತು! ಗಡಿಬಿಡಿಸಿ ಸಣ್ಣ ಧ್ವನಿಯಲ್ಲಿ ಕೇಳಿದೆ ಗಾಬರಿಯಿಂದ. ಆಗ ಆ ಮಾಲೀಕರು, “ಐದೂ ಮನೆಗೆ ಸೇರಿ ಎರಡಿದೆ. ಅದನ್ನೇ ಬಳಸಬೇಕ್ರಿ ಅಕ್ಕಾರ” ಅಂದ್ರು. ಎಲ್ಲಿದೆ ಅಂದಾಗ ಆ ಮಧ್ಯದಲ್ಲಿ ಏನೋ ಕಟ್ಟಿದಂತಿತ್ತಲ್ಲ, ಅದನ್ನೇ ತೋರಿಸಿದ್ರು! ಏನೂ ಹೇಳಲು ತಿಳಿಯದೇ ತಲೆ ಅಲ್ಲಾಡಿಸಿದೆ. ಬೇರೆ ದಾರಿ ಇರಲಿಲ್ಲ. ಆ ಊರಲ್ಲಿದ್ದುದ್ರಲ್ಲಿ ಇದೇ ಒಳ್ಳೇ ಮನೆ ಬಾಡಿಗೆಗಿರೋದು! ಇದಿಷ್ಟು ಆಯ್ತು, ಇನ್ನೂ ಏನೇನೋ ಅನ್ಕೊಂಡು ಮೌನವಾಗಿ ಬಿಟ್ಟೆ.

ಬಂಕಾಪುರದಲ್ಲಿ ಸೀತವ್ವನ ಜೊತೆ ಇದ್ದ ಮಕ್ಕಳ ನೆನಪಾಗಿ ಆದಷ್ಟು ಗೆಲುವಾಗಿರಲು ಪ್ರಯತ್ನಿಸುತ್ತ ಜೀಪು ಏರಿದೆ. ವಾಪಸ್ಸು ಬಂದೆ, ಕಾಯುತ್ತಿದ್ದ ಮಕ್ಕಳಿಗೆ ಸುದ್ದಿ ಹೇಳಲು ಅದಕ್ಕೊಂದು ರೂಪ, ಆಕಾರ ಕೊಡುತ್ತಾ!

‍ಲೇಖಕರು Avadhi

December 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Shrivatsa Desai

    ಅಬ್ಬಬ್ಬಾ! ಹಿಂದಿನ ಸರಣಿಯ ಎಲ್ಲ ಕಂತುಗಳನ್ನೂ ಹಪಹಪಸಿ ಓದಿ ಚಪ್ಪರಿಸಿದವನಿಗೆ ಏನೋ ಗಂಟಲಲ್ಲಿ ಸಿಕ್ಕು ಹಾಕಿಕೊಂಡಂತೆ ಆಯಿತು ಈ ಅನುಭವವನ್ನು ಓದಿ. ಬರೆದಾರೆಂದಮೇಲೆ ಬದುಕಿ ಈಸಿ… ಜಯಿಸಿದ್ದೊಂದೇ ಸಮಾಧಾನ. ಹೆಪ್ಪುಗಟ್ಟುವಂತ (ರಕ್ತ!) ಶೈಲಿ, ವರ್ಣನೆ. ಆಗಿನ ತಿಳವಳ್ಳಿ ಆರ್ಟ್ ಫಿಲ್ಮ ಸೆಟ್ ಇದ್ದಂತಿದೆ! ಆದರೆ ಸಂಜೆಗೆ ‘ತಮ್ಮ ಮನೆಗೆ ’ ಹೋಗುವ ಹಾಗಿರಲಿಲ್ಲವಲ್ಲ ಚಂದ ಅನಿಸಲು! ಮುಂದಿನವಾರದ ‘ಶೂಟಿಂಗ’ದಲ್ಲಿ ಏನು ಕಾದಿದೆಯೋ! ಕಾಯಲೇಬೇಕು, ದಾರಿಯೇ ಇಲ್ಲ, ಸರೋಜಿನಿಯವರು ಬರೆದಂತೆ!
    (ಶ್ರೀವತ್ಸ ದೇಸಾಯಿ)

    ಪ್ರತಿಕ್ರಿಯೆ
  2. Sarojini Padasalgi

    ಮೊದಲು ಅವಧಿಗೆ ನನ್ನ ಧನ್ಯವಾದಗಳು ಒಳಗೇ ಹುದುಗಿದ್ದ ಅನುಭವಗಳ ಗಂಟು ಬಿಚ್ಚಲು ಅವಕಾಶ ಒದಗಿಸಿದ್ದಕ್ಕೆ.
    ನಿಮ್ಮ ಅಪರೂಪದ ಅನಿಸಿಕೆ ನನಗೆ ಇನ್ನೂ ಮತ್ತೂ ಬರೆಯಲು ಪ್ರೋತ್ಸಾಹದ ಒರತೆ.ನಿಮಗೆ ಅನಂತ ಧನ್ಯವಾದಗಳು ಶ್ರೀವತ್ಸ ದೇಸಾಯಿ ಅವರೇ .

    ಪ್ರತಿಕ್ರಿಯೆ
  3. T S SHRAVANA KUMARI

    ಆಪ್ತವಾದ ಶೈಲಿಯಲ್ಲಿ ಅನುಭವ ಕಥನ, ಚೆನ್ನಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: