
ನಾ ದಿವಾಕರ್
ರೇಖೆ: ಗಿರಿಧರ ಕಾರ್ಕಳ
ಮೈಸೂರು ಬ್ಯಾಂಕ್ ತನ್ನ ಸೂರು ಕಳೆದುಕೊಂಡಿದೆ.
ಬಂಡವಾಳದ ಜಗನ್ನಾಥ ರಥದ ಚಕ್ರದಡಿ ಸಿಲುಕಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಮತ್ತೊಂದರಲ್ಲಿ ಲೀನವಾದ ಈ ಬ್ಯಾಂಕ್ ಕೇವಲ ಒಂದು ಸ್ಥಾವರವಾಗಿತ್ತೇ ಅಥವಾ ಕರ್ನಾಟಕದ ಜನತೆಯ ಅಸ್ಮಿತೆಯ ಒಂದು ಭಾಗವಾಗಿತ್ತೇ ?
ಇಂದಿನ ಸನ್ನಿವೇಶವನ್ನು ಒಂದು ಸಂಸ್ಥೆಯ ಅವಸಾನ ಅಥವಾ ಅಂತ್ಯ ಎಂದು ಮಾತ್ರ ಪರಿಗಣಿಸಬೇಕೇ ಅಥವಾ ಇದು ಜಾಗತೀಕರಣದ ಅನಿವಾರ್ಯತೆ ಎಂದು ಸಾಂತ್ವನ ಹೇಳಿಕೊಳ್ಳಬೇಕೇ ?
ಈ ಪ್ರಶ್ನೆಗಳು ಇನ್ನಾದರೂ ಬ್ಯಾಂಕ್ ಕಾರ್ಮಿಕ ಸಂಘಟನೆಗಳನ್ನು ಕಾಡಬೇಕಿದೆ.
ಬ್ಯಾಂಕ್ ಸಂಘಟನೆಗಳು ಎಸ್ ಬಿ ಎಂ ವಿಲೀನವಾಗುವುದರ ವಿರುದ್ಧ ಪ್ರಬಲ ಹೋರಾಟ ನಡೆಸಿದವು. ನಿಜ. ಎಸ್ ಬಿ ಎಂ ಯಾರಿಗೆ ಬೇಕಿತ್ತು ? ಯಾರ ಅಸ್ಮಿತೆಯ ಪ್ರಶ್ನೆಯಾಗಿತ್ತು ? ಯಾರ ಭಾವನೆಗಳ ಮೇಲೆ ಪ್ರಭಾವ ಬೀರಿತ್ತು ? ಯಾವ ಜನಸಮುದಾಯ ಮೈಸೂರ್ ಬ್ಯಾಂಕ್ ನಮ್ಮ ಬ್ಯಾಂಕ್ ಎಂದು ಭಾವಿಸಿತ್ತು ?
ಇದು ಬ್ಯಾಂಕ್ ಉದ್ಯೋಗಿಗಳಿಂದಾಚಗೆ ಕಾಣುವ ಕರ್ನಾಟಕದ ಜನತೆಯನ್ನು ಕಾಡಬೇಕಾದ ಪ್ರಶ್ನೆ.
ಈ ಪ್ರಶ್ನೆಗೆ ಬ್ಯಾಂಕ್ ಕಾರ್ಮಿಕ ಸಂಘಟನೆಗಳು ಉತ್ತರ ಶೋಧಿಸಿದ್ದರೆ ಇಂದು ಕರ್ನಾಟಕ ಬಂದ್ ಆಚರಿಸಬಹುದಿತ್ತು. ದುರಂತ ಎಂದರೆ ಮೈಸೂರು ಬ್ಯಾಂಕ್ ಸದ್ದಿಲ್ಲದೆ ಮರೆಯಾಗಿದೆ.
ಬಾವುಟ, ಬ್ಯಾನರ್ ಜಿಂದಾಬಾದ್ ಘೋಷಣೆಗಳು ಕ್ಷೀಣ ದನಿಯಲ್ಲಿ ಕೇಳಿಬರುತ್ತದೆ ಸೆಲ್ಫಿಗಳು ರಾರಾಜಿಸುತ್ತವೆ. ನಿವೃತ್ತ ಸಿಬ್ಬಂದಿಯ ನೊಂದ ಹೃದಯಗಳು ಮಿಡಿಯುತ್ತವೆ. ನಾಮಫಲಕಗಳು ಬದಲಾಗಲಿವೆ. ಸಂಸ್ಕೃತಿ ಬದಲಾಗಲಿದೆ. ಒಡೆತನ ಬದಲಾಗಲಿದೆ.
ಹೋರಾಟದ ರೂಪುರೇಷೆಗಳು ಬದಲಾಗಲಿವೆ. ಏಕೆ ಹೀಗಾಯಿತು ?
ಉತ್ತರ ಕೊಡಬೇಕಾದವರಿಗೆ ಚಿಂತಿಸುವ ವ್ಯವಧಾನವೇ ಇಲ್ಲ. ಉತ್ತರ ನಿರೀಕ್ಷಿಸುವವರಿಗೆ ವಾಸ್ತವದ ಅರಿವಿಲ್ಲ. ಅಸ್ಮಿತೆಯ ಆಧಾರದ ಮೇಲೆ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರತಿರೋಧದ ದನಿ ಜನಸಮುದಾಯಗಳ ಮನದಾಳದಿಂದ ಹೊರಸೂಸಬೇಕು. ವಿಪರ್ಯಾಸವೆಂದರೆ ಮೈಸೂರು ಬ್ಯಾಂಕ್ ಉಳಿವಿಗಾಗಿ ವೀರೋಚಿತ(?) ಹೋರಾಟ ನಡೆಸಿದ ಬ್ಯಾಂಕ್ ಕಾರ್ಮಿಕ ಸಂಘಟನೆಗಳು ಈ ಜನಸಮುದಾಯಗಳೊಡನೆ ಸಂವಾದವನ್ನೇ ನಡೆಸಲಿಲ್ಲ. ಜನತೆಯ ಭಾವನೆಗಳನ್ನು ಗ್ರಹಿಸಲೇ ಇಲ್ಲ.
ಬದುಕಿದ್ದಾಗ ಅಪ್ಪಅಮ್ಮನನ್ನು ನಿರ್ಲಕ್ಷಿಸಿ ಸತ್ತ ನಂತರ ಪಿಂಡ ಇಡುವಂತೆ ಈಗ ಪರಿತಪಿಸಿ ಏನು ಪ್ರಯೋಜನ ? ಕಾರಣ ಯಾರು ಎನ್ನುವುದಕ್ಕಿಂತಲೂ ಏಕೆ ಹೀಗಾಯಿತು ಎಂಬ ಪ್ರಶ್ನೆ ನಮ್ಮನ್ನು ಕಾಡಿದರೆ ಬಹುಶಃ ನಮ್ಮ ಸಹಕಾರಿ ಬ್ಯಾಂಕುಗಳಾದರೂ ಉಳಿದುಕೊಂಡಾವು.
ಏಕೆಂದರೆ ನವ ಉದಾರವಾದದ ಮೈದಾನದಲ್ಲಿ ಮಸಣಗಳೇ ಹೆಚ್ಚಾಗಿರುತ್ತದೆ. ಗೋರಿಗಳ ಮೇಲೆ ಸೌಧ ನಿರ್ಮಿಸಲು ದೊರೆಗಳು ಸಾಲುಗಟ್ಟಿ ನಿಂತಿದ್ದಾರೆ. ಇಟ್ಟಿಗೆಗಳನ್ನು ಹೊರಲು ಕಾಲಾಳುಗಳು ಸಿದ್ಧವಾಗಿದ್ದಾರೆ.
ಎಸ್ ಬಿ ಎಂ ಮೊದಲ ಹೆಜ್ಜೆ.







ಮೈಸೂರು ಬ್ಯಾಂಕ್ ಮೈಸೂರಿನ ಗುಣವನ್ನು ಅದನ್ನು ಕೇಂದ್ರ ಸರ್ಕಾರ ವಶಪಡಿಸಿಕೊಂಡಾಗಲೇ ಕಳೆದುಕೊಂಡು ಬಿಟ್ಟಿತು. ಬೇರೆಲ್ಲಾ ಸರ್ಕಾರಿ ಬ್ಯಾಂಕ್ ಗಳಂತೆ ಅದು ಕೂಡ ಹತ್ತರಲ್ಲಿ ಹನ್ನೊಂದು ಎನುವಂತಾಯಿತು. ಉಳಿದದ್ದು ಹೆಸರಿನ ಮೋಹವೊಂದೇ . ನಾಲ್ಮಡಿಯವರ , ವಿಶ್ವೇಶ್ವರಯ್ಯನವರ ಸ್ಮರಣೆ ಮಾತ್ರ.
ಇದ್ದರೆ ಸಿಬ್ಬಂದಿಯ ಹಿತಾಸಕ್ತಿ ಮಾತ್ರ . ಜನರು ಕೆನರಾ, ಸಿಂಡಿಕೇಟ್ ಇತ್ಯಾದಿ ಬ್ಯಾಂಕ್ ಗಳೊಡನೆಯೇ ಹೆಚ್ಚು ಸಂಬಂಧ ಹೊಂದಿದ್ದಾರೆ.
ಕರ್ನಾಟಕ ಏಕೀಕರಣ, ಭಾಷಾವಾರು ರಾಜ್ಯ ನಿರ್ಮಾಣದ ಜೊತೆಗೇ ಮೈಸೂರು ಬ್ಯಾಂಕ್ ಮತ್ತು ಇತರ ಬ್ಯಾಂಕ್ ಗಳನ್ನು ಆಯಾ ರಾಜ್ಯಗಳ ಸ್ವಾಯತ್ತ ಅಭಿವೃದ್ಧಿಯ , ದೇಶದ ವಿಕೇಂದ್ರಿಕೃತ ಬೆಳವಣಿಗೆಯ ಅಡಿಪಾಯವಾಗಿ ಮಾಡಬಹುದಾಗಿತ್ತು . ಕನ್ನಡ ಭಾಷೆ, ಶಿಕ್ಷಣ ಮಾಧ್ಯಮದ ಆಧಾರವಾಗಿರುತ್ತಿತ್ತು. ಆದರೆ ಹಾಗೆ ಅಂದು ರಾಜ್ಯದ ಏಕೀಕರಣದ ಅಧ್ವರ್ಯುಗಳೂ , ರಾಜಕಾರಣಿಗಳೂ ಯೋಚಿಸಲಿಲ್ಲ. ಅವಶ್ಯ ಬಿದ್ದರೆ ಏಕೀಕರಣದಷ್ಟೇ ದೊಡ್ದ ಚಳುವಳಿ ಮಾಡಬೇಕಾಗಿದ್ದ ಪ್ರಾಮುಖ್ಯತೆಯ ವಿಷಯ.
ಆದರೆ ಈಗ ಹೆಸರಿಗಾಗಿ ಮರುಗುವ ಸ್ಥಿತಿಗೆ ಬಂದಿದ್ದೇವೆ.
ಔದ್ಯಮಿಕ ಹಿತಾಸಕ್ತಿ ಮತ್ತು ಇದಕ್ಕೆ ಸಂಬಂಧಿಸಿದಂತೆ ಶ್ರಮಿಕ ವರ್ಗಗಳ ಹಿತಾಸಕ್ತಿ ಕನ್ನಡ, ಕರ್ನಾಟಕ ಅಥವಾ ಕನ್ನಡ ಪ್ರಾದೇಶಿಕ ಅಸ್ಮಿತೆಯ ಕೇಂದ್ರ ಬಿಂದು ಆಗಿಯೇ ಇಲ್ಲ. ಕನ್ನಡ ಪರ ಸಂಘಟನೆಗಳು, ಕನ್ನಡ ಪರ ಹೋರಾಟಗಗಾರರಿಗೆ ಆರ್ಥಿಕ ಸನ್ನಿವೇಶ ಮತ್ತು ಹಣಕಾಸು ಸಂಬಂಧಿತ ವಿದ್ಯಮಾನಗಳು ಎಂದಿಗೂ ಹೋರಾಟದ ವಸ್ತುವಾಗಿಲ್ಲ. ಕರ್ನಾಟಕದ ಅಭಿವೃದ್ಧಿಗೆ ಈ ಧೋರಣೆಯೂ ಒಂದು ಕಾರಣ ಎನ್ನಬಹುದು. ಹಾಗಾಗಿಯೇ ಎಸ್ ಬಿ ಎಂ ಕನ್ನಡ ಪರ ಸಂಘಟನೆಗಳಿಗೆ ಒಂದು ಸ್ಥಾವರ ರೂಪದಲ್ಲಿ ಕಂಡುಬಂದಿದೆಯೇ ಹೊರತು, ಕನ್ನಡತನವನ್ನು ಆರ್ಥಿಕ ನೆಲೆಯಲ್ಲಿ ಕಾಪಾಡಬಲ್ಲ ಒಂದು ಸಂಸ್ಥೆಯಾಗಿ ಕಂಡುಬಂದಿಲ್ಲ. ಕಾರ್ಮಿಕ ಸಂಘಟನೆಗಳ ರಾಜಕೀಯ ನಿಷ್ಕ್ರಿಯತೆ ಹಾಗೂ ನಿರಾಸಕ್ತಿ, ರಾಜಕೀಯ ಪಕ್ಷಗಳಲ್ಲಿರುವ ಶ್ರಮಿಕ ವರ್ಗಗಳ ಬಗೆಗಿನ ನಿಷ್ಕಾಳಜಿ, ಕನ್ನಡ ಹೋರಾಟಗಾರರ ಗ್ರಹೀತಗಳಲ್ಲಿನ ಕೊರತೆ, ಈ ಎಲ್ಲ ಕಾರಣಗಳಿಂದ ಕನ್ನಡತನ-ಕನ್ನಡ ಅಸ್ಮಿತೆ ಮತ್ತು ಶ್ರಮಿಕ ವರ್ಗಗಳ ಸಮೀಕರಣ ಸಾಧ್ಯವಾಗಿಲ್ಲ. ಬ್ಯಾಂಕ್ ಉದ್ಯೋಗಿಗಳೂ ಸಹ ವಿಶ್ವಕಾರ್ಮಿಕರೇ ಒಂದಾಗಿ ಎಂದು ಘೋಷಣೆಗಳನ್ನು ಕೂಗಿದ್ದರೂ ವ್ಯಕ್ತಿಗತ ನೆಲೆಯಲ್ಲಿ ಶ್ರಮಜೀವಿಗಳೊಡನೆ ಗುರುತಿಸಿಕೊಳ್ಳಲು ವಿಫಲರಾಗಿದ್ದಾರೆ. ಹಾಗಾಗಿಯೇ ರಾಮಮಂದಿರಕ್ಕೆ ಇಟ್ಟಿಗೆ ಹೊತ್ತವರು, ಮೋದಿಯ ಆರಾಧಕರು ಇಂದಿಗೂ ಕೆಂಬಾವುಟದಡಿ ಎಐಬಿಇಎ ಜಿಂದಾಬಾದ್ ಹೇಳಲು ನಾಚಿಕೊಳ್ಳುವುದಿಲ್ಲ. ಇದು ಸಾಂಘಿಕ ವೈಫಲ್ಯ ಹೌದಾದರೆ, ಜಾಗೃತಿ ಮೂಡಿಸುವ ಪ್ರಯತ್ನವನ್ನೇ ಮಾಡದ ಸಂಘಟನಾತ್ಮಕ ವೈಫಲ್ಯವೆಂದೂ ಹೇಳಬಹುದು. ಎಸ್ ಬಿ ಎಂ ಸಮಕಾಲೀನ ಹೋರಾಟಗಳ ಒಂದು ದುರಂತ ಪ್ರತಿಮೆಯಾಗಿ ಕಾಣುತ್ತದೆ.
ನಾ ದಿವಾಕರ.