ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ಮೈಕಿಗರ” ಕಣ್ಣಲ್ಲಿ ನಾನೊಬ್ಬ ಭಯೋತ್ಪಾದಕ

ಪರಿಸರವಾದಿ ಎಚ್ ಸುಂದರ ರಾಯರು ಶಬ್ದ ಮಾಲಿನ್ಯದ ಬಗ್ಗೆ ‘ಮೈಕೋ ಮೈಕು’ ಲೇಖನ ಬರೆದಿದ್ದರು.

ಅದಕ್ಕೆ ದಿನೇಶ್ ಕುಕ್ಕುಜಡ್ಕರ ಅಭಿಪ್ರಾಯ ಇಲ್ಲಿದೆ.

ಈ ವಿಚಾರದಲ್ಲಿ ನಾನೂ ಒಬ್ಬ ರೆಗ್ಯುಲರ್ ಸಂತ್ರಸ್ತನೇ!

–ದಿನೇಶ್ ಕುಕ್ಕುಜಡ್ಕ

ನಮ್ಮೂರಿನಲ್ಲಿ ಯಾವುದೇ ಫಂಕ್ಷನ್ನು ನಡೆಯುವುದಿದ್ದರೂ ಅದು ನಮ್ಮ ಮನೆಯಿಂದ ನೂರಿನ್ನೂರು ಮೀಟರ್ ದೂರದಲ್ಲೇ ಇರುವ ಹೈಯರ್ ಪ್ರೈಮರಿ ಶಾಲೆಯಲ್ಲೇ ನಡೆಯುವುದು ಸಂಪ್ರದಾಯ. ಹೀಗಾಗಿ ಅಲ್ಲೇನು ಕಾರ್ಯಕ್ರಮ ನಡೆಯುವುದಿದ್ದರೂ ನಮಗೆ ಉಚಿತ ಕಿರಿಕಿರಿ ಖಾಯಮ್ಮು!

ಹೋದ ವರ್ಷ ಗಣಪತಿ ಕೂರಿಸುವ ಕಾರ್ಯಕ್ರಮವೊಂದಿತ್ತು. ಕಾರ್ಯಕ್ರಮದ ಹಿಂದಿನ ರಾತ್ರಿ ೧೨ ರ ಅವೇಳೆಯಲ್ಲಿ ಮೈಕಿನ ಗರಿಷ್ಟ ಸಾಮರ್ಥ್ಯದ ನಿರಾತಂಕ ಪ್ರದರ್ಶನ ಉದ್ದಕ್ಕೂ ನಡೆದೇ ಇತ್ತು.ರಾತ್ರಿಯ ನೀರವ ಮೌನವನ್ನು ರಾಕ್ಷಸ ರೀತಿಯಲ್ಲಿ ಕದಡುವ ಅಖಂಡ ಭಕ್ತಿಯ ನಿರ್ದಯ ಪ್ರಯೋಗಗಳಗೆ ರಾಜಕೀಯದ ಗಟ್ಟಿ ಅಡಿಗಟ್ಟು ಬೇರೆ! ಯಾವುದೇ ಎಗ್ಗಿಲ್ಲದೆ ಅರಚಿಕೊಳ್ಳುತ್ತಿತ್ತು ಮೈಕು.ಮಂಚದಲ್ಲಿ ಎತ್ತ ಹೊರಳಿದರೂ ನಿದ್ದೆ ಬರಲೊಲ್ಲದೆ ಕೊನೆಗೊಮ್ಮೆ ಟಾರ್ಚು ಹಿಡಿದವನೇ ನೇರ ಅಲ್ಲಿಗೇ ತೆರಳಿ ಕಾರ್ಯಕ್ರಮ ಸಂಘಟಕರನ್ನು ತರಾಟೆಗೆತ್ತಿಕೊಂಡೆ.ಅವರಲ್ಲೊಬ್ಬ ,”ವರ್ಷಕ್ಕೊಮ್ಮೆ ನಡೆಯುವ ಫಂಕ್ಷನ್ನಲ್ಲವಾ?” ಅಂದ.” ಈ ದೇವರ ಪಾಳಿ ವರ್ಷಕ್ಕೊಮ್ಮೆ ಹೌದಪ್ಪಾ. ಆದರೆ ಈತನ ಅಪ್ಪ-ಅಮ್ಮ-ತಾತ-ಮುತ್ತಾತಂದಿರ ಸರದಿಯಿನ್ನೂ ಬಾಕಿಯಿದೆಯಲ್ಲ!ಕಾರ್ಯಕ್ರಮದ ವೇಳೆ ಮೈಕು ಹಾಕುವುದೇನೋ ನ್ಯಾಯವೇ. ಆದರೆ ಹಿಂದಿನ ದಿನ ತಯಾರಿಗೂ ಮೈಕು! ದೇವರ ವಿಸರ್ಜನೆಯ ನಂತರವೂ ಅಹೋರಾತ್ರಿ ಮೈಕು! ಇಡೀ ವರ್ಷ ಇದೇ ಆದರೆ ನಾವೆಲ್ಲಾ ನಿದ್ದೆ ಮಾಡುವುದ್ಯಾವಾಗ? ” ಅಂತ ಸ್ವಲ್ಪ ಎಕ್ಸೈಟಾಗಿಯೇ ಜರಿದೆ.

ಕೊನೆಗೂ ಅವರಲ್ಲೊಬ್ಬ ಅರೆಬರೆ ಮನಸ್ಸಿನಿಂದ ಸ್ವಲ್ಪ ವಾಲ್ಯೂಮ್ ಕಮ್ಮಿ ಮಾಡಿ, ಪಕ್ಕದ ನೆಲ್ಲಿಕಾಯಿ ಮರಕ್ಕೆ ಹತ್ತಿ ಅಲ್ಲಿದ್ದ ಮೈಕಿನ ಮೋರೆಯನ್ನು ನಮ್ಮ ಮನೆ ದಿಕ್ಕಿನಿಂದ ಬೇರೆ ಕಡೆ ತಿರುಗಿಸಿದ. ನನ್ನ ಪಾಪಪ್ರಜ್ಣೆ ಇನ್ನೂ ಹೆಚ್ಚಾಯಿತು. ನಾನು ಮನೆ ಸೇರುವಷ್ಟರಲ್ಲಿ ಆ ಕಡೆ ಮನೆಯವರೂ ಎದ್ದು ಬಂದು ,ಮೈಕಿನ ಮೋರೆಯನ್ನು ಇನ್ನೊಂದು ಕಡೆ ತಿರುಗಿಸಿ…. ಮತ್ತೆ ಮತ್ತೊಂದು ಮನೆಯವರು ಬಂದು….. ಒಟ್ಟಿನಲ್ಲಿ ಮೈಕು ಒಂದು ಪೂರ್ತಿ ಸುತ್ತು ಸುತ್ತುವಷ್ಟರಲ್ಲಿ ಬೆಳಗಾಗಿರುತ್ತೆ ಅಂತ ಆವಾಗಲೇ ಲೆಕ್ಕ ಹಾಕಿದ್ದೆ.

ಡಾ.ಶಿವರಾಮ ಕಾರಂತರ ವಿಚಾರವಾಗಿಯೂ ಹೀಗೊಂದು ಕತೆಯಿದೆ. ಕಾರಂತರೊಮ್ಮೆ ಮಧ್ಯರಾತ್ರಿ ಇಂತದೇ ಕಿರಿಕಿರಿ ಅನುಭವಿಸಿ,ಕೊನೆಗೆ ಸಿಟ್ಟಿನಿಂದ ಟಾರ್ಚನ್ನೆತ್ತಿಕೊಂಡು ಸೀದಾ ಫಂಕ್ಷನ್ನಿನ ತಯಾರಿ ನಡೆಯುತ್ತಿದ್ದಲ್ಲಿಗೆ ಹೋದವರೇ “ಇಷ್ಟೊಂದು ಕಿವಿಹರಿಯುವ ಹಾಗೆ ಹಾಕ್ತೀರಲ್ಲ? ನಿಮ್ಮ——-(ಆ ದೇವರ ಹೆಸರು ಹೇಳಿ) ಆತನೇನು ಪೊಟ್ಟನಾ~~???….. ” ಅಂತ ಹಿಗ್ಗಾಮುಗ್ಗಾ ಬೈದಿದ್ದರಂತೆ! ಯಾರೋ ಹೇಳಿದ ಈ ಕತೆಯ ಸತ್ಯಾಸತ್ಯತೆಯ ಬಗ್ಗೆ ನನಗೇನೂ ತಿಳಿದಿಲ್ಲವಾದರೂ, ಈ ಕಿರಿಕಿರಿಯಿಂದ ಬೇಸತ್ತವನಾಗಿ ಈ ಕತೆಯನ್ನು ಈಗಷ್ಟೇ ನಡೆದುದು ಎಂಬಷ್ಟು ಹಸಿಯಾಗಿ ನಂಬಿದ್ದೇನೆ. ಮತ್ತು ಸಂದರ್ಭ ಬಂದಾಗಲೆಲ್ಲಾ ನನ್ನ ಸುತ್ತಮುತ್ತಣ ಹತ್ತಾರು ಜನರ ಕಿವಿಗೂ ಹಾಕಿ, ನನ್ನ ಸಾಮಾಜಿಕ ಪ್ರಜ್ಣೆಯ ಹಿಂದೆ ಎಂತೆಂಥ ಮಹಾನುಭಾವರ ತಾತ್ವಿಕ ಪ್ರೇರಣೆಯ ಒತ್ತಾಸೆಯಿದೆ ಅನ್ನುವಂತೆ ಒಂಥರಾ ವಿಪರೀತ ಫೋಸೂ ಕೊಟ್ಟಿದ್ದೇನೆ!

ಕೋರ್ಟು-ಕಾಯಿದೆಗಳ ವಿಶೇಷ ಅರಿವು- ಈ ವಿಚಾರದಲ್ಲಿ ನನಗಿಲ್ಲವಾದರೂ, ಒಂದೆರಡು ಬಾರಿ ಸಂಘಟಕರನ್ನು “ಸುಪ್ರೀಮ್ ಕೋರ್ಟು-ಆ ಕೋರ್ಟು-ಈ ಕೋರ್ಟು”ಅಂತೆಲ್ಲಾ ಹೆದರಿಸಿ, ಈರ್ವರ ಅಜ್ಣಾನವೂ ಏಕೀಭವಿಸಿದ ಪರಿಣಾಮವಾಗಿ, ಅದೊಂದೊಂದು ರಾತ್ರಿಯ ಮಟ್ಟಿಗೆ ಮೈಕು ಮೆತ್ತಗಾಗಿಸಿದ್ದೆ! ಕಷ್ಟವೆಂದರೆ, ಇಲ್ಲಿ ದೇವರ ಸೀಸನ್ ಕಳೆಯಿತೋ, ಮತ್ತೆ ಮದುವೆ ಸೀಸನ್ ಶುರು! ಮತ್ತದೇ ಅಬ್ಬರ! ಬಹುತೇಕ ಊರವರ- ನೆಂಟರಿಷ್ಟರ- ಪರಿಚಯಸ್ಥರ ಕಾರ್ಯಕ್ರಮಗಳೇ ಜರಗುವುದರಿಂದ ಒಮ್ಮೊಮ್ಮೆ ತೀರ ಒರಟಾಗಿ ಕಾಣಿಸುವುದೂ ಕಷ್ಟವೇ! ಆದರೂ ಯಾವತ್ತಿಗೂ ಊರೊಳಗಿನ “ಮೈಕಿಗರ” ಕಣ್ಣಲ್ಲಿ ನಾನೊಬ್ಬ ಭಯೋತ್ಪಾದಕನಾಗಿರುವುದು ನನ್ನ ಕಡಿಮೆ ಸಾಧನೆಯೇನಲ್ಲ!!

‍ಲೇಖಕರು G

28 May, 2011

1 Comment

  1. swathi

    nice to read

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading