ಮೇ 26ಕ್ಕೆ ಇನ್ನೊಂದೇ ತಿಂಗಳು!

ನರೇಂದ್ರ ಮೋದಿಯವರ ಸರ್ಕಾರ ಇನ್ನು 35 ದಿನಗಳಲ್ಲಿ ಮೂರು ವರ್ಷ ಪೂರೈಸಲಿದೆ. ಹಾಗಾಗಿ ಇದು ಅವರಿಗೆ ರಿಪೋರ್ಟ್ ಕಾರ್ಡ್ ಸಮಯವೂ ಹೌದು. ಈ ಹಿನ್ನೆಲೆಯಲ್ಲಿ ಭರ್ಜರಿ ತಯಾರಿಗಳು ಈಗಾಗಲೇ ನಡೆದಿವೆ. ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ವೆಂಕಯ್ಯ ನಾಯ್ಡು ಅವರು ತನ್ನ ಸಂಪುಟ ಸಹೋದ್ಯೋಗಿಗಳಿಗೆ ತಂತಮ್ಮ ಇಲಾಖೆಗಳ ಯಶಸ್ಸು, ಬೆಳವಣಿಗೆಯ ಅಂಕಿ-ಸಂಖ್ಯೆಗಳ ವಿವರಗಳನ್ನು ಒದಗಿಸುವಂತೆ ಕೋರಿ ಎಪ್ರಿಲ್ ಮೊದಲ ವಾರದಲ್ಲಿ ಎರಡನೇ ಸುತ್ತಿನ ಪತ್ರಗಳನ್ನು ಬರೆದಿದ್ದಾರೆ.

ಸಚಿವ ಖಾತೆಗಳಿಂದ ಬರಲಿರುವ ಮಾಹಿತಿ ಈ ಕೆಳಗಿನ ವಿಚಾರಗಳನ್ನು ಒಳಗೊಳ್ಳಲಿದೆಯಂತೆ:

1. ಜನ ಮೆಚ್ಚಿದ 5 ಯೋಜನೆಗಳು

2.  ಇಲಾಖೆಯ ಪ್ರಮುಖ ಸೂಚಿ ಅಂಕಿ-ಅಂಶಗಳು

3. 2014-2017ಕ್ಕೆ ಸಾಧನೆಗಳ ಹೋಲಿಕೆ

4. ಇಲಾಖೆ ತಂದ 3 ಪ್ರಮುಖ ಸುಧಾರಣೆಗಳು

5. ಎರಡು ಯಶಸ್ಸಿನ ಕಥೆಗಳು.

ಇದಲ್ಲದೆ ಪತ್ರಕರ್ತರಾಗಿರುವುದರಿಂದ ವ್ರತ್ತಿಪರ ಬರಹಗಾರರೂ ಆಗಿರುವ ಸಚಿವ ಎಂ.ಜೆ.ಅಕ್ಬರ್, ಸಂಸದರಾದ ಚಂದನ್ ಮಿತ್ರ, ಸ್ವಪನ್ ದಾಸ್ ಗುಪ್ತ ಅವರುಗಳಿಗೂ ವಿಶೇಷ ಅಸೈನ್ ಮೆಂಟ್ ಗಳನ್ನು ನೀಡಲಾಗಿದೆಯಂತೆ.

ಸರ್ಕಾರದ ಈ ಎಲ್ಲ ತಯಾರಿಗಳು ಅಚ್ಛೇದಿನದ ನಿರೀಕ್ಷೆಯಲ್ಲಿರುವ ದೇಶದ ಜನತೆಗೆ ಒಂದಿಷ್ಟು ಹೂವಿನ ಹಾಸಿಗೆಯನ್ನು ತೆರೆದು ತೋರಿಸಲಿವೆ ಎಂಬುದರಲ್ಲಿ ಸಂಶಯವಿಲ್ಲ. ಈ ನಡುವೆ ಸರ್ಕಾರದ ವೈಫಲ್ಯಗಳು, ನೋಟು ರದ್ಧತಿ ಮತ್ತು ಅಮೆರಿಕದಲ್ಲಿ ಸಂಭವಿಸಿರುವ ಟ್ರಂಪೋತ್ತರ ಬೆಳವಣಿಗೆಗಳ ಆತಂಕಗಳು ಮೂರು ವರ್ಷದ ಸಾಧನೆಯ ಸಂಭ್ರಮಗಳು ತೀರುವ ತನಕ ಮುಸುಕು ಹೊದ್ದು ಮಲಗಲಿವೆ ಎಂಬುದೂ ಸತ್ಯ.

ಹಿಂಬಾಗಿಲಿನಿಂದ ಒಳಹೊಕ್ಕಿರುವ ಭೂತ

ನಾನೀಗ ಹೇಳ ಹೊರಟಿರುವುದು ಟ್ರಂಪ್ ಆಡಳಿತ ಅಮೆರಿಕದಲ್ಲಿ ತೆಗೆದುಕೊಳ್ಳಲಾರಂಭಿಸಿರುವ ಒಂದು ನಿರ್ಧಾರ ಮತ್ತು ಅದರ ಪರಿಣಾಮಗಳ ಬಗ್ಗೆ. ಈ ಪರಿಣಾಮಗಳು ಈಗಾಗಲೇ ದೇಶದ ಆರ್ಥಿಕತೆಯ ಕತ್ತು ಹಿಸುಕಲಾರಂಭಿಸಿವೆಯಾದರೂ, ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆಯಲ್ಲಿ ಆಗಿರುವ ಕುಸಿತ ಮತ್ತು ಅದಕ್ಕೆ ಹೊರತಾಗಿಯೂ ದೇಶದಲ್ಲಿ ಇಳಿಯದ ತೈಲ ಬೆಲೆಗಳ ಕಾರಣದಿಂದಾಗಿ ಹಲವು ಹೊಂಡಗಳು ಸುಲಭವಾಗಿ ಮುಚ್ಚಿಕೊಂಡಿವೆ.

ಅಮೆರಿಕದಲ್ಲಿ ಟ್ರಂಪ್ ಬಂದ ಬಳಿಕ “ಮೊದಲು ಅಮೆರಿಕ” ನೀತಿಯ ಫಲವಾಗಿ, ಅಮೆರಿಕನ್ನರ ಹಿತಾಸಕ್ತಿಗಳನ್ನು ಕಾಪಾಡಲು ಅಲ್ಲಿನ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳಲ್ಲಿ ಅಮೆರಿಕದ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರವನ್ನು ಹೆಚ್ಚಿಸುವುದು ಕೂಡ ಸೇರಿದೆ. ಈ ನಿಟ್ಟಿನಲ್ಲಿ ಅಮೆರಿಕ ಸರ್ಕಾರ ತನ್ನ ಹೆಜ್ಜೆಗಳನ್ನಿಡಲು ಆರಂಭಿಸಿ ಆಗಿದೆ.

ಹೀಗೆ ಬಡ್ಡಿ ದರ ಹೆಚ್ಚಾದ ತಕ್ಷಣ, ಭಾರತದಲ್ಲಿ ಅದರ ಪರಿಣಾಮಗಳು ಕಾಣಿಸಲಿವೆ. (ಹಿಂದೆ 2013ರಲ್ಲಿ ಹೀಗಾದಾಗ ಏನಾಗಿತ್ತೆಂಬ ಬಗ್ಗೆ ದಿ ಹಿಂದೂ ಬಿಸಿನೆಸ್ ಲೈನ್ ಪತ್ರಿಕೆಯಲ್ಲಿ ಬಂದಿದ್ದ ವಿಶ್ಲೇಷಣೆ ಇಲ್ಲಿದೆ: http://www. thehindubusinessline.com/ portfolio/the-impact-of-fed- rate-hike/article7572033.ece) ಅಮೆರಿಕ ಈ ಕ್ರಮ ಕೈಗೊಂಡರೆ, ಡಾಲರಿನೆದುರು ರೂಪಾಯಿಯ ಬೆಲೆ ತಗ್ಗಲಿದೆ. ಹೂಡಿಕೆ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರು ಹಿಂದಡಿ ಇಡುವುದರ ಜೊತೆಗೆ, ದೇಶದ ವಿದೇಶಿ ಸಾಲಕ್ಕೆ ದೇಶ ಮಾಡಬೇಕಾಗಿರುವ ಮರುಪಾವತಿಯ ಪ್ರಮಾಣ ಗಣನೀಯವಾಗಿ ಹೆಚ್ಚಳ ಆಗಲಿದೆ. ಆಮದು-ರಫ್ತುಗಳ ಮೇಲೆ ಭಾರೀ ಹೊರೆ ಎದುರಾಗಲಿದೆ.
(ಈ ಬಗ್ಗೆ ವಿವರವಾದ ಲೇಖನವೊಂದು ಇಲ್ಲಿದೆ: http://indiamacrowatch.com/ 2017/03/will-fed-interest- rate-hikes-derail-indian- economy/)
ಸುಧಾರಣೆ ಎಂಬ ಬಿಸಿಲುಗುದುರೆ

ಆಡಳಿತಕ್ಕೆ ಬಂದ ಆರಂಭದಲ್ಲಿ ದೇಶದ ಆರ್ಥಿಕತೆಗೆ ಕಾಯಕಲ್ಪ ಕೊಡುವ ಮಾತನಾಡಿದ್ದ ಮೋದಿ ಸರಕಾರ ಈಗ ತಾನೇ ತೋಡಿಕೊಂಡಿರುವ ನೋಟುರದ್ಧತಿಯ ಆಳ ಹೊಂಡದಲ್ಲಿ ಕುಸಿದು ಮೇಲೆ ಬರುವ ದಾರಿ ತೋಚದೆ ಒದ್ದಾಡುತ್ತಿದೆ. ಅದರ ಮೇಲೀಗ ಆಳಿಗೊಂದು ಕಲ್ಲು ಎಂಬಂತೆ ಜಾಗತಿಕ ಮಾರುಕಟ್ಟೆಯ ಹೊಡೆತಗಳು ದೇಶದ ಆರ್ಥಿಕತೆಯ ಮೇಲೆ ಬೀಳಲಾರಂಭಿಸಿವೆ. 2017-18 ಮೋದಿ ಸರಕಾರದ ಪಾಲಿಗೆ, ದೇಶದ ಆರ್ಥಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಹಳ ಸವಾಲಿನ ವರ್ಷ ಆಗಲಿರುವ ಎಲ್ಲ ಲಕ್ಷಣಗಳೂ ಎದ್ದು ತೋರುತ್ತಿವೆ.

ಜನರ ಗಮನವನ್ನು ಧರ್ಮ, ಜಾತಿ, ಆಹಾರ, ಚಿಲ್ಲರೆ ತಕರಾರುಗಳು, ಇತ್ಯಾದಿಗಳ ಹೆಸರಲ್ಲಿ ಬೇರೆಡೆಗೆ ಸೆಳೆದು ಮೂಲ ಸಮಸ್ಯೆಗಳಿಗೆ ಪ್ರತಿಕ್ರಿಯಿಸುವ ಬದಲು ಮುಸುಕೆಳೆದುಕೊಂಡೇ ದಿನ ದೂಡಿರುವ ಕೇಂದ್ರ ಸರಕಾರದ ಭಾಷಣಗಳು – ಘೋಷಣೆಗಳು ಇನ್ನು ಹೆಚ್ಚು ದಿನ ಉಪಯೋಗಕ್ಕೆ ಬಾರವು. ಅಸಲು ಕೈಜಾರತೊಡಗಿದರೆ ಸರಕಾರ ಸಮಸ್ಯೆಗಳ ಮೇಲಿನ ಮುಸುಕು ಸರಿಸಲೇ ಬೇಕು; ಅದಕ್ಕೆ ಪರಿಹಾರ ಕಂಡುಕೊಳ್ಳುವ ಛಾತಿ ತೋರಿಸಲೇ ಬೇಕು.

‍ಲೇಖಕರು avadhi

April 21, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: