-ಛಾಯಾ ಭಗವತಿ ರಾಜು ಮೇಷ್ಟ್ರು ನಮ್ಮನ್ನೆಲ್ಲ ಬಿಟ್ಟು ಹೋಗಿ 3 ವರ್ಷಗಳೇ ಕಳೆದು ಹೋದವು, ಅವರ ನೆನಪಿನಲ್ಲಿ ಈ ಪುಟ್ಟ ಬರಹ.
ಪ್ರೀತಿಯ ರಾಜು ಮೇಷ್ಟ್ರಿಗೆ, ‘ಭೇಟಿ ಆಕಸ್ಮಿಕ ಅಗಲಿಕೆ ಅನಿವಾರ್ಯ ನೆನಪು ಚಿರಂತನ’
ಆ ಬಳಿಕ ಕೆಲಸವೆಂಬ ಮಾಯಮೃಗದ ಬೆನ್ನು ಹತ್ತಿ ಹೊರಟವಳಿಗೆ, ಬೆಂಗಳೂರಿಗೆ ಹೋಗಿ ಹಾಳಾಗುತ್ತಾಳೆ ಅನ್ನುವ ಕಾರಣಕ್ಕೆ ಮನೆಯಲ್ಲಿ ಯಾರಿಂದಲೂ ಉತ್ತೇಜನ ದೊರೆತಿರದಿದ್ದಾಗ, ಥೇಟು ಅಪ್ಪನ ವಾತ್ಸಲ್ಯ, ಆಪ್ತತೆಯ, ಸುರಕ್ಷಿತ ಅನುಭವ ಕೊಟ್ಟು, ನಾನು ಗಟ್ಟಿಯಾಗಿ ಕಾಲೂರಲು ಕಾರಣರಾದ ಅಪರೂಪದ ಆದರೆ ಕಲಿಸದೆಯೂ ಮೇಷ್ಟ್ರಾದವರು ಸರ್ ನೀವು. ನಾನು ಬಂದ ಹೊಸತರಲ್ಲಿ ಮಲ್ಲೇಶ್ವರಮ್ನ ನಿಮ್ಮ ಮನೆಗೆ ಹತ್ತಿರದಲ್ಲಿಯೇ ನನ್ನ ಹಾಸ್ಟೆಲ್ ವಾಸ ಗೊತ್ತು ಮಾಡಿ ಕೊಟ್ಟ ಸುರೇಖಕ್ಕನಿಗೆ ನಾನು ಋಣಿಯಾಗಿರಲೇಬೇಕು. ಅವತ್ತೊಮ್ಮೆ ಮಗನನ್ನು ಕರೆದುಕೊಂಡು ಚಿತ್ರಕಲಾ ಪರಿಷತ್ತಿನ ಅಂಗಳಕ್ಕೆ ಕಾಲಿಟ್ಟರೆ, ಕಾಣಿಸಿದ್ದೆಲ್ಲವೂ ಮಸುಕು ಮಸುಕು. ಹೆಗಲಿಗೆ ಚೀಲ, ಕೈಲೊಂದಿಷ್ಟು ಪುಸ್ತಕಗಳು, ಮುಖದ ಮೇಲೊಂದು ನಸು ನಗು ಧರಿಸಿ, ಅಲ್ಲೆಲ್ಲಾದರೂ ಇದಿರಾದೀರೇನೋ ಎನ್ನುವ ಕ್ಷೀಣ, ಈಡೇರದ ಆಸೆ. ಕಲಿಸುವುದರ ಗಂಧ ಗಾಳಿಯೂ ಗೊತ್ತಿರದಿದ್ದ ನನ್ನನ್ನು ಪಕ್ಕಾ ಚಿಕ್ಕ ಮಗುವೊಂದನ್ನು ಮೊದಲ ಸಲ ಬಾಲವಾಡಿಯ ಅಂಗಳಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸುವ ಅಮ್ಮನ ಮಮತೆ, ಧೈರ್ಯ ತುಂಬಿದ ದನಿ ನನ್ನನ್ನು ಬೆಂಗಳೂರಿನ ಬೆರಗಿಗೆ ಕಂಗೆಡಿಸದೆ ಗಟ್ಟಿಯಾಗಿ ನಿಲ್ಲಿಸಿತ್ತು. ‘ಯಾಕಮ್ಮಾ ಗಾಭ್ರಿ, ಹೆದಕರ್ೊಬೇಡ ಧೈರ್ಯವಾಗಿರು’ ಅಂತನ್ನುತ್ತ, ಪುಸು ಪುಸು ಅಳುಕುತ್ತಿದ್ದ ನನ್ನನ್ನು ಹುರಿದುಂಬಿಸುತ್ತ, ಸಂದರ್ಶನಕ್ಕೆ ಹೋಗಲು ಹಾರೈಸಿ ಕಳಿಸಿಕೊಟ್ಟಿದ್ರಲ್ಲ ಸರ್! ಆಮೇಲಾಮೇಲೆ ನಾನು ತಲೆಯೆತ್ತಿಯೇ ನೋಡಬೇಕಾಗಿದ್ದ, ದೈತ್ಯದೇಹೀ, ಮರ್ಕಟ ಮನಸ್ಸುಗಳ ವಿದ್ಯಾಥರ್ಿ-ವಿದ್ಯಾಥರ್ಿನಿಯರ ‘ಬ್ಯಾಂಗಲೂರ್ ಕಲ್ಚರಿ’ಗೆ ಬೆಚ್ಚಿ ಬೀಳುವಂತಾಗಿ, ಆ ಹುಡುಗು ಮುಂಡೇವಕ್ಕೆ, ಪೊಯೆಟ್ರಿ, ಪ್ರೋಸು ಅಂತ ಸಣ್ಣ ದನಿಯನ್ನು ಆದಷ್ಟು ಗಟ್ಟಿಗೊಳಿಸಿ, ಚೀರಿಯೇ ಪಾಠ ಮಾಡಬೇಕಿದ್ದ ಅನಿವಾರ್ಯತೆಯಲ್ಲಿ, ‘ಅವರಿಗೆ ಕ್ರಿಯೇಟಿವ್ ಆಗಿ ಏನಾದರೂ ಕೆಲ್ಸ ಹಚ್ಚಮ್ಮಾ, ಚೆನ್ನಾಗಿ ಬರೆಸು’ ಅಂತಂದು ಮತ್ತೆ ಮತ್ತೆ ನನ್ನ ಆತಂಕಗಳಿಗೆ ಸಮಾಧಾನವಾಗುತ್ತಿದ್ದಿರಿ. ನಮ್ಮ ಕ್ಲಾಸುಗಳೇನಾದರೂ ಜತೆ ಜತೆಗೇ ಮುಗಿದರೆ ನಿಮ್ಮೊಂದಿಗೆ ಕಾಫಿ ಕುಡಿಯುವ ಪುಳಕದ ಘಳಿಗೆ ನನ್ನದಾಗಿರುತ್ತಿತ್ತು. ಒಮ್ಮೆ ನಿಮ್ಮ ಮನೆಯಲ್ಲಿ ನಿಮ್ಮೊಂದಿಗೆ ಕೂತು, ಋತ ನನಗೆ ಓದಲು ಕೊಟ್ಟಿದ್ದ ಫ್ರಾಂಜ್ ಕಾಫ್ಕಾನ ‘ಮೆಟಮಾರ್ಫಸಿಸ್’ ಕತೆಯ ಬಗ್ಗೆ ಎಷ್ಟೋ ಹೊತ್ತಿನ ತನ್ಕ ಚಚರ್ೆ ಮಾಡಿ, ಅವನದನ್ನ ಟೆಲಿಫಿಲ್ಮ್ ಥರಾ ಏನೋ ಮಾಡ್ತೀನಿ, ನೀವು ಸ್ಕ್ರಿಪ್ಟ್ ಬರೀರಿ ಅಂದಿದ್ದಾಗ, ನೀವು ನನ್ನನ್ನ ಎಷ್ಟೊಂದು ಹುರಿದುಂಬಿಸಿದ್ರಿ. ದಡ್ಡಿ ನಾನು, ನೀವು ಹೇಳಿದ ಬರವಣಿಗೆಯ ಎಷ್ಟೋ ಕೆಲಸಗಳನ್ನ ಮಾಡಲೇ ಇಲ್ಲ. ನೀವು ಕೇಳಿದಾಗೊಮ್ಮೆಯಾದರೂ ಕವಿತೆಗಳ ತೆಗೆದು ತೆಗೆದು ತೋರಿಸಲಿಲ್ಲ. ಆದ್ರೆ ನೀವು ಮಾತ್ರ ಒಂದಿನಕ್ಕೂ ಬೇಸರ ಮಾಡಿಕೊಳ್ಳದೇ ಅದೇ ತಣ್ಣೀರಿನಂತ ದನಿಯಲ್ಲಿ, ‘ಏನಮ್ಮಾ, ಏನಾದರೂ ಬರೀತಿರಮ್ಮ, ಬರಿಯೋದ ಬಿಡಬೇಡ’ ಅಂತ ಹೇಳಿ ಜೀವಂತವಾಗಿರಲು ನೆನಪಿಸ್ತಾನೇ ಇದ್ರಿ, ನಾನು ನನ್ನ ಸಂಸಾರದ ಖುಷಿಯಲ್ಲಿ, ಸಾಫ್ಟ್ವೇರ್ ಕೆಲಸವೆಂಬ ಭ್ರಮಾಲೋಕದಲ್ಲಿ ಮಬ್ಬಾಗಿ ಹೋಗಿಬಿಟ್ಟೆ ಸರ್. ನಿಮ್ಮೊಡನೆ ಹರಟಲು ಕೂತರೆ ಅಪರೂಪಕೊಮ್ಮೊಮ್ಮೆ ಅನಿಸುವ ಹಾಗೆ ನೀವು ಮೈ ಕುಲುಕಿಸಿ ನಗೋದನ್ನ ನೋಡ್ತಿದ್ದರೆ, ‘ಅರೆ, ಸರ್ ಹಿಂಗೂ ನಗ್ತಾರಾ! ಅಂತ ಆದೆಷ್ಟು ಖುಶಿ ಪಡ್ತಿದ್ದೆವೋ ನಾನು ಮತ್ತು ಭಗವತಿ. ಸುಮ್ ಸುಮ್ನೆ ಇಬ್ಬರೂ ಫೋನು ಮಾಡಿಕೊಂಡು, ‘ಮೇಷ್ಟ್ರ ಮನೆಗೆ ಹೋಗೋಣ ಬರ್ರೀ’ ಅಂತ ಮಾತಾಡಿಕೊಂಡು, ಸುಖಾ ಸುಮ್ಮನೆ ನಿಮ್ಮ ಮನೆಗೆ ಬಂದು, ನಿಮ್ಮ ಮತ್ತು ಸರಸ್ವತಿ ಅಮ್ಮನೊಂದಿಗೆ ಹರಟಿ, ಸಂಭ್ರಮಿಸಿದ ಘಳಿಗೆಗಳನ್ನ ಮರೆತೇವು ಹೇಗೆ ಸರ್? ಈ 8 ವರ್ಷಗಳ ಬೆಂಗಳೂರು ಎಂಬ ಬಿಂಕದೂರಿನಲಿ ್ಲಸಂಜೀವಿನಿಯಂತೆ ಕಾಪಾಡಿರುವುದು ನಿಮ್ಮ ಹಾಗೂ, ನಿಮ್ಮ ಮಿತ್ರದ್ವಯರೂ, ನಮಗೆಲ್ಲ ಅತ್ಯಂತ ಪ್ರೀತಿ ಪಾತ್ರರೂ ಆಗಿರುವ ಹೆಚ್ಚೆಸ್ಸಾರ್ ಮತ್ತು ಓಎಲ್ಲೆನ್ ಸರ್ಗಳ ಒಡನಾಟಗಳು. ಯಾವ ಸನ್ಮಾನ, ಸಮಾರಂಭಗಳೂ, ಬಿರುದಾವಳಿಗಳೂ ನಿಮಗೆ ಹೆಚ್ಚೆನಿಸದೇ, ಅವು ಯಾವತ್ತೂ ಕೊಡಲಾಗದ ಖುಷಿಯನ್ನು, ನೀವು ನಾಡಿನ ಮೂಲೆ ಮೂಲೆಯಲ್ಲೂ ಹಚ್ಚಿ, ನೀರುಣಿಸಿ ಬೆಳೆಸಿದ ಕವಿಗಿಡಗಳು ಕವಿತೆಯ ಹೂ ಬಿಟ್ಟಾಗ ಅನುಭವಿಸಿ, ಸಂಭ್ರಮಿಸಿದವರು ನೀವು. ಇನ್ನು ಅಂತಹ ನಿಷ್ಕಲ್ಮಷ, ನಿಷ್ಕಪಟ ಫ್ರೋತ್ಸಾಹದ ಸೋನೆಯನ್ನರಸಿ ನಾವೆಲ್ಲಿಗೆ ಹೋಗಬೇಕು ಸರ್? ಮೂರು ವರ್ಷಗಳ ಕೆಳಗೆ ಇದೇ ಡಿಸೆಂಬರಿನ 28ರಂದು ಹಾಗೆ ಆಕಸ್ಮಾತ್ತಾಗಿ ಹೊರಟೇ ಬಿಟ್ಟಿರಲ್ಲ, ಆ ಅಗಲಿಕೆ ಅನಿವಾರ್ಯವಾಗಿರಲಿಲ್ಲ ಸರ್, ನಿಮ್ಮಾಣೆ. ಅದ್ಯಾವ ಅವಸರದ ಬೆನ್ನು ಹತ್ತಿಹಾಗೆ ಹೋಗಿಬಿಟ್ರಿ ನೀವು? ಬಿಳಿಯ ಪಂಚೆಯ ಮೇಲೊಂದು ಹಾಫ್ ತೋಳಿನ ಷಟರ್ು ಧರಿಸಿ, ಕೈ ಕಟ್ಟಿ ಕೂತು, ನಮ್ಮ ಹರಟೆಗೆ ದನಿಯಾಗುತ್ತ, ನಸು ನಕ್ಕು, ಬದಿಗಿರಿಸಿಕೊಂಡಿದ್ದರೆ ಅಲ್ಲಿಂದ, ಇಲ್ಲವಾದರೆ ಮೆಟ್ಟಿಲೇರಿ ನಿಮ್ಮ ಕೋಣೆಗೆ ಹೋಗಿ, ಕಡ್ಡಾಯ ಸಂಸ್ಕೃತಿ ಅನ್ನುವ ನಿಯಮವಿತ್ತೇನೋ ಅನಿಸುವಂತೆ, ಕೈಗೆ ಕನಿಷ್ಟ ಎರಡು ಪುಸ್ತಕಗಳನ್ನಿರಿಸಿ, ‘ಸಂಕಲನ’ವೆಂಬ ಮಗು ಹುಟ್ಟಲೇ ಇಲ್ಲ ಎಂದು ಸೂಚ್ಯವಾಗಿ ಎಚ್ಚರಿಸಿ, ಗೇಟಿನ ತನಕ ಅಮ್ಮನೊಂದಿಗೆ ನಡೆದು ಬಂದು, ನಗು ನಗುತ್ತ ಕಣ್ಮರೆಯಾಗುವತನಕ ಕೈ ಬೀಸಿ ನಮ್ಮನ್ನು ಕಳಿಸಿ ಕೊಡುತ್ತಿದ್ದವರು, ಅದೇ ಗೇಟಿನಿಂದಾಚೆ ಮತ್ತೆಂದೂ ವಾಪಸು ಬರದಂತೆ ಹೊರಟು ಹೋದಿರಲ್ಲ, ಇದು ನ್ಯಾಯವೇ ಸರ್? ನೆನಪು ಚಿರಂತನವೇ ಸರಿ. ಎಷ್ಟು ಪ್ರಯತ್ನ ಪಟ್ಟರೂ, ಕಣ್ಣುಗಳು ನೀರಾಡುವುದ ತಡೆಯಲಾಗುವುದಿಲ್ಲ. ‘ಸಾವು ಯಾರಿಗೂ ತಪ್ಪಿದ್ದಲ’್ಲ ಎನ್ನುವ ಗೌತಮನ ಮಾತುಗಳೂ ಪಥ್ಯವಾಗುವುದಿಲ್ಲ. ಕುಪ್ಪಳಿಗೆ ಸಾಹಿತ್ಯ ಪೂಜಕರಾಗಿಯೇ ಹೋದವರು, ನೀವು ಅತಿಯಾಗಿ ಪ್ರೀತಿಸುತ್ತಿದ್ದ, ಬಯಸುತ್ತಿದ್ದ, ದಿವ್ಯಮೌನವನ್ನೇ ಹೊದ್ದು ವಾಪಸಾಗಿಬಿಟ್ಟಿರಿ. ಇರಲಿ ಬಿಡ್ರಿ ಸರ್, ನಿಮಗೆ ಆ ದಿವ್ಯ ಮೌನವೇ ಹೆಚ್ಚು ಪ್ರಿಯವಾಗಿ ಸುಮ್ಮನೆ ಕಾಣದ ಇನ್ನೊಂದು ಮನೆಗೆ ಹೊರಟು ಹೋಗಿರುವಾಗ, ನಾನು, ನನ್ನಂತಹ ಅನೇಕರು ಹೀಗೆ ಹಗಲೆಲ್ಲ ಕಣ್ತುಂಬಿಕೊಂಡರೆ ನಿಮಗದು ಹಿಡಿಸದೇ ಹೋಗಬಹುದು. ಬದಲಾಗಿ, ನೀವು ಹಚ್ಚಿದ ಗಿಡಗಳಲ್ಲಿ, ಸದಾ ಕಾವ್ಯದ, ಕಥೆಯ ಕುಸುಮಗಳು ಅರಳಿ, ಅವು ನಿರಂತರ ನಿಮಗೆ ನುಡಿ ನಮನಗಳನ್ನು ಸಲ್ಲಿಸುವ ತೆರದಲ್ಲಿ ನಮ್ಮನ್ನು ಹರಸಿ ಸರ್. ನೀವು ನಡೆದ ಹಾದಿಯಲ್ಲಿ ನಾಲ್ಕು ಹೆಜ್ಜೆಗಳಾದರೂ ನಮ್ಮವಿರಲಿ. ನಿಮ್ಮ ಮಗುವಿನಂತಹ ಮನಸು, ಹೂವಿನಂತಹ ನಗು ನಮ್ಮ ಬದುಕುಗಳನ್ನು ಅರಳಿಸಲಿ. ಬರ್ತೀನಿ ಸರ್,…ಒಂದಲ್ಲ ಒಂದು ದಿನ ನಾನೂ.





0 Comments