ಸರ್ದಾರ್ ಪಟೇಲ್ ಅವರಿಗೆ ಬಹಿರಂಗ ಪತ್ರ
ಮೇಧಾ ಪಾಟ್ಕರ್
ಅನುವಾದ : ನಾ ದಿವಾಕರ
ಸನ್ಮಾನ್ಯ ಸರ್ದಾರ್ ಪಟೇಲ್ರವರೇ , ನಮಸ್ಕಾರ !
ನೀವು ಎಲ್ಲೇ ಇದ್ದರೂ, ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಅನನ್ಯ ನಾಯಕರಾಗಿ ಕಾಣುತ್ತೀರಿ. ನಿಮ್ಮ ಆತ್ಮ ನನಗೆ ತಿಳಿದಿರುವಂತೆ, ನಮ್ಮ ಈ ಮಾತೃಭೂಮಿಯಲ್ಲಿ ನೆಲೆಸಿದೆ, ನೀವು ಸದಾ ಕಾಲಕ್ಕೂ ಈ ಮಣ್ಣಿನ ಹೆಮ್ಮೆಯ ಪುತ್ರರಾಗಿಯೇ ಇರುತ್ತೀರಿ. ರಾಜಪ್ರಭುತ್ವದ ಆಳ್ವಿಕೆಯಿಂದ ಮತ್ತು ಭೂಮಾಲೀಕರಿಂದ ಭಾರತವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ನಿಮ್ಮ ದಿಟ್ಟ ಕ್ರಮ ಹಾಗೂ ಬ್ರಿಟೀಷ್ ಆಳ್ವಿಕೆಯ ದಮನಕಾರಿ ತೆರಿಗೆ ನೀತಿಯಿಂದ ದೇಶದ ರೈತರನ್ನು ವಿಮೋಚನೆಗೊಳಿಸಿದ ನಿಮ್ಮ ಕ್ರಮ ಇಂದಿಗೂ ಸಹ ಸ್ಮರಣೀಯ. ಸ್ವತಂತ್ರ ಭಾರತದ ಪ್ರಥಮ ಸರ್ಕಾರದ ಪ್ರಪ್ರಥಮ ಗೃಹ ಸಚಿವರಾಗಿ ನೀವು ಸ್ವಾತಂತ್ರ್ಯಾನಂತರದ ಸಂದರ್ಭದಲ್ಲಿದ್ದ ಪ್ರಕ್ಷುಬ್ಧ ಸನ್ನಿವೇಶವನ್ನು ಸಾಮಾಜಿಕ ಕಳಕಳಿಯಿಂದ, ಕೋಮುವಾದಿ ದೃಷ್ಟಿಕೋನವಿಲ್ಲದೆ ನಿಭಾಯಿಸಿದ್ದಿರಿ. ಇತರರು ಈ ಸಂದರ್ಭದಲ್ಲಿ ಏನೇ ವಿವಾದ ಸೃಷ್ಟಿಸಿದರೂ ಮಹಾತ್ಮ ಗಾಂಧಿ ನಿಮ್ಮ ಶ್ರಮವನ್ನು ಶ್ಲಾಘಿಸಿದ್ದರು.
ಭಾರತದ ಐತಿಹಾಸಿಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೀವು ಸರ್ದಾರರಂತೆಯೇ ಮೇರು ವ್ಯಕ್ತಿಯಾಗಿ ವಿಜೃಂಭಿಸಿದಿರಿ. ಆದರೆ ನಿಮ್ಮ ಪರಂಪರೆಯನ್ನೇ ಗಾಳಿಗೆ ತೂರಿ ನಿಮ್ಮ 182 ಮೀಟರ್ ಎತ್ತರದ ಪ್ರತಿಮೆಯನ್ನು ಸ್ಥಾಪಿಸಿ ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಬೆನ್ನುತಟ್ಟಿಕೊಳ್ಳುತ್ತಿರುವುದು ನಿಮಗೆ ತಿಳಿದಿದೆಯೇ ? ನಿಮ್ಮ ಹೊಸ ಅವತಾರದ ನಿರ್ಮಾತೃ ಯಾರು ಎಂದು ನಿಮಗೆ ತಿಳಿದಿದೆಯೇ ? ಅನೇಕ ಚೀನಾದ ಮತ್ತು ಸ್ಥಳೀಯ ಆದಿವಾಸಿಗಳು, ನಮ್ಮವರೇ ಆದ ಕಾರ್ಮಿಕರು ಹಗಲು ರಾತ್ರಿ ದುಡಿದು, ಆದಿವಾಸಿಗಳ ನಂಬುಗೆಯ ದೇವತೆ ಇರುವ ಸಾಧು ಬೆಟ್ ಪ್ರದೇಶದಲ್ಲಿ ಈ ಪುತ್ಥಳಿಯನ್ನು ನಿರ್ಮಿಸಿದ್ದಾರೆ.
ಈ ಪ್ರತಿಮೆ ಯಾರ ಭೂಮಿಯ ಮೇಲೆ ಸ್ಥಾಪನೆಯಾಗುತ್ತದೆ ಎಂದು ನೀವು ಕೇಳಬಹುದು. ಇದು ಯಾರ ಯೋಜನೆ ಎಂದೂ ಕೇಳಬಹುದು. ಈ ಭೂಮಿ, ಈ ನದಿ ಮತ್ತು ನಿಮ್ಮ ಪ್ರತಿಮೆ ನಿಲ್ಲಲಿರುವ ಅರಣ್ಯ ಪ್ರದೇಶ ಆದಿವಾಸಿಗಳಿಗೆ ಸೇರಿದ್ದು. ನಿಮ್ಮ ಸರ್ಕಾರ ಮತ್ತು ಅಂದಿನ ನಾಯಕರುಗಳು, ಮಹಾತ್ಮ ಗಾಂಧಿಯಿಂದ ನೆಹರೂವರೆಗೆ ಎಲ್ಲರೂ ಗ್ರಾಮಸ್ಥರ ಹಕ್ಕುಗಳಿಗೆ ಮಾನ್ಯತೆನೀಡಿ, ಪಂಚಶೀಲ ನೀತಿಯ ಮೂಲಕ ಈ ಗ್ರಾಮಗಳಿಗೆ ಗಣರಾಜ್ಯಗಳಂತೆ ಭದ್ರತೆ ನೀಡಿದ್ದರು. ಭಾರತದ ಸಂವಿಧಾನದ ಕರ್ತೃಗಳು, ಬಾಬಾಸಾಹೇಬ್ ಅವರ ನೇತೃತ್ವದಲ್ಲಿ, ಈ ಗ್ರಾಮಸ್ಥರಿಗೆ ಶಾಂತಿಯಿಂದ ಬಾಳುವ ಹಕ್ಕನ್ನು, ಉತ್ತಮ ಆಡಳಿತವನ್ನು ನೀಡುವುದೇ ಅಲ್ಲದೆ ಸಂವಿಧಾನದ ಐದನೆಯ ಪರಿಚ್ಚೇದದ ಮೂಲಕ ನಂತರ ಪೇಸಾ ಕಾಯ್ದೆಯ ಮೂಲಕ ಸ್ವಾವಲಂಬನೆಯ ಬದುಕನ್ನು ನೀಡಿದ್ದರು.
ನೀವು ಎತ್ತರದಿಂದ ನವರ್iದಾ ನದಿಯನ್ನು, ಅದರ ತಟವನ್ನು ಮತ್ತು ಇನ್ನೂ ದೂರಕ್ಕೆ ಕಣ್ಣು ಹಾಯಿಸಬಹುದು. ನಿಮಗೆ ಅವರ ಗುಡಿಸಲುಗಳು, ತಾಂಡಗಳು, ಬೆಟ್ಟ ಗುಡ್ಡಗಳು ಕಾಣುತ್ತವೆ ಇವುಗಳಲ್ಲಿ ಒಂದು ವರಾತ ಬಾವ ಟೇಕ್ರಿ ನಿಮ್ಮ ಕಾಲಡಿಯಲ್ಲೇ ಇದೆ. ರಾಜಪ್ರಭುತ್ವದ ಪ್ರಾಂತ್ಯಗಳನ್ನು ಪ್ರಚಾತಂತ್ರದ ಚೌಕಟ್ಟಿನಲ್ಲೇ ಸ್ವತಂತ್ರ ಭಾರತದೊಡನೆ ವಿಲೀನಗೊಳಿಸಲು ನೀವು ಅನುಸರಿಸಿದ ಸಂಯಮಪೂರ್ಣ ಕ್ರಮಗಳನ್ನು ನೆನಪಿಸಿಕೊಳ್ಳಿ.
ಅವರೆಲ್ಲರೂ ದೇಶದ ಏಕತೆಗಾಗಿ ಸ್ವ ಇಚ್ಚೆಯಿಂದಲೇ ತ್ಯಾಗ ಮಾಡುವಂತೆ ನೀವು ಮಾಡಿದ್ದಿರಿ. ನಿಮ್ಮ ಹೊಸ ಅವತಾರದ ಉದ್ದೇಶವೂ ಅದೇ ಎಂದು ಹೇಳಲಾಗುತ್ತಿದೆ. ಏಕತೆಗಾಗಿ ಎನ್ನಲಾಗುತ್ತಿದೆ. ಆದರೆ ಈ ಏಕತೆ ಸಾಧಿಸಲು ಆದಿವಾಸಿಗಳ ಭೂಮಿ ಮತ್ತು ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಅಂದಿನ ಜುನಘಡ್ ರಾಜರ ವಿರುದ್ಧ ಮಾಡಿದಂತೆ ಈ ಸ್ವಾಭಿಮಾನಿ, ದುರ್ಬಲ, ಬಡಜನತೆಯ ವಿರುದ್ಧ ಬಲಪ್ರಯೋಗ ಮಾಡುವುದನ್ನು ನೀವು ಎಂದಾದರೂ ಊಹಿಸಿರಲಿಕ್ಕುಂಟೇ ?
ಸರ್ದಾರರೇ ಈ ಆದಿವಾಸಿಗಳು ದೇಶಕ್ಕೆ ಅನ್ನ ನೀಡುವ ಆಳಲು ಅರ್ಹರಾದ ಜನತೆ ಎಂದು ನೀವೇ ಗುರುತಿಸಿದ ರೈತ ಸಮುದಾಯಕ್ಕೂ ಸೇರಿದವರಾಗಿದ್ದಾರೆ. ಇಂದು ಈ ರೈತರು ಸಾವನ್ನು ಬಯಸುತ್ತಾ ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ನೀವು ಗಮನಿಸಿದರೆ ನೀವು ಆಗಸ್ಟ್ 1942ರಲ್ಲಿ ಮಾಡಿದಂತೆಯೇ ಪ್ರತಿಯೊಂದು ಗ್ರಾಮಗಳನ್ನೂ, ಹೊಲಗದ್ದೆಗಳನ್ನೂ ಆಕ್ರಮಿಸಿ ಅದೇ ರೀತಿಯ ಕ್ರಮ ಕೈಗೊಳ್ಳುತ್ತಿದ್ದಿರಿ.
ರಾಜಪ್ರಭುತ್ವದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಸಂಪತ್ತನ್ನು ವರ್ಗಾವಣೆ ಮಾಡಿ, ರಾಜಧನವನ್ನು ಸೃಷ್ಟಿಸಿದ ನಿಮಗೆ , ನೀವು ಯಾರ ವಿರುದ್ಧ ಹೋರಾಟ ನಡೆಸಿದ್ದಿರೋ ಅವರಿಗೆ ಸಂಪನ್ಮೂಲಗಳನ್ನು ವರ್ಗಾವಣೆ ಮಾಡಲು ಇವರು ಅನುಸರಿಸುತ್ತಿರುವ ಮಾರ್ಗಗಳನ್ನೂ ಮತ್ತು ನೀವು ರೂಪಿಸಿದ ಸಾಮಾಜಿಕ ಆಂದೋಲನದ ಕೀರ್ತಿ ಪಡೆಯುತ್ತಿರುವ ರೀತಿಯನ್ನೂ ನೋಡಿದರೆ ನಿಮಗೆ ಆಘಾತವಾದೀತು.
ಅಂದು ಬಾಪೂ ನೇತೃತ್ವದಲ್ಲಿ ನೀವು ಅಹಿಂಸಾತ್ಮಕ ಅಸಹಕಾರ ಚಳುವಳಿಗೆ ಒಂದು ರೂಪ ನೀಡಿದ್ದಿರಿ. ಇಂದು ಅದೇ ಅಸ್ತ್ರ ಭಾರತದ ಆಳುವ ವರ್ಗಗಳ ಕೈಯ್ಯಲ್ಲಿನ ಅಸ್ತ್ರವಾಗಿದೆ. ನವ ವಸಾಹತುಶಾಹಿ ಚಿಂತನೆಗಳನ್ನು ಅನುಸರಿಸುತ್ತಿದ್ದಾರೆ. ಅವರು ಅಶ್ವದಳವನ್ನು ಬಳಸಿ, ಸೇನೆಯನ್ನು ಬಳಸಿ ಶ್ರೀಮಂತರ, ಬಲಾಢ್ಯರ ಆಸ್ಥಿಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಬದಲಾಗಿ ದುರ್ಬಲರ, ಅವಕಾಶವಂಚಿತರ, ಅಂಚಿಗೆ ತಳ್ಳಲ್ಪಟ್ಟವರ ಭೂಮಿ, ನೀರು, ನದಿ, ಅರಣ್ಯ, ಮೀನು ಇತ್ಯಾದಿ ಜೀವನಾವಶ್ಯ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಬದುಕನ್ನೇ ಕಸಿದುಕೊಳ್ಳುತ್ತಾರೆ.
ನೀವು ಸಂತರಂತೆ ಭಾವಿಸಿ ಸೃಷ್ಟಿಸಿದ ನಾಗರಿಕ ಸೇವಾ ಅಧಿಕಾರಿಗಳ ಹುದ್ದೆಯನ್ನು ಅಲಂಕರಿಸುವವರು, ನಿಷ್ಪಕ್ಷಪಾತವಾಗಿ ಭ್ರಷ್ಟಾಚಾರ ಇಲ್ಲದೆ ಕಾರ್ಯನಿರ್ವಹಿಸುವ ಶಿಸ್ತಿನ ಸಿಪಾಯಿಗಳಂತಹ ಸಚಿವ ಸಂಪುಟದ ಸದಸ್ಯರು ಇಂದು ತಮ್ಮೆಲ್ಲಾ ಅಧಿಕಾರ ಮತ್ತು ಪ್ರಾಬಲ್ಯವನ್ನು ಬಳಸಿ ರೈತರ ಮೇಲೆ ತೆರಿಗೆ ವಿಧಿಸುತ್ತಿರುವುದೇ ಅಲ್ಲದೆ ಅವರ ಉತ್ಪನ್ನಗಳಿಗೆ ಅತಿ ಕಡಿಮೆ ಮೌಲ್ಯ ನಿಗದಿಪಡಿಸುವ ಮೂಲಕ ಶೋಷಣೆಗೊಳಪಡಿಸುತ್ತಿದ್ದಾರೆ.
ಸಣ್ಣ ವ್ಯಾಪಾರಿಗಳಿಂದ ಜಿಎಸ್ಟಿ ವಸೂಲಿ ಮಾಡುವ ಮೂಲಕ, ಬೃಹತ್ ಮೂಲ ಸಂರಚನೆಗಳ ನಿರ್ಮಾಣದ ನೆಪದಲ್ಲಿ ರಸ್ತೆ ಬದಿ ವ್ಯಾಪಾರಿಗಳ, ಬಡ ಜನತೆಯ ಮಾರುಕಟ್ಟೆಯ ಮೂಲ ರಚನೆಗಳನ್ನು ಧ್ವಂಸ ಮಾಡುವ ಮೂಲಕ ನೀವು 1947ರ ಏಪ್ರಿಲ್ 21ರ ಭಾಷಣದಲ್ಲಿ ಅಪೇಕ್ಷಿಸಿದ್ದ ಸಚ್ಚಾರಿತ್ರ್ಯದ ಪರಿಕಲ್ಪನೆಯನ್ನೇ ಧೂಳಿಪಟ ಮಾಡುತ್ತಿದ್ದಾರೆ. ನೀವು ಹುಟ್ಟುಹಾಕಿದ ಪರಂಪರೆ ಅಪಾಯದಲ್ಲಿದೆಯೇ ಪಟೇಲರೇ ? ಲಕ್ಷಾಂತರ ರೈತರ ಆತ್ಮಹತ್ಯೆಯನ್ನು ಅವರು ಸಹಿಸಿಕೊಂಡು ಸುಮ್ಮನಿರಲು ಹೇಗೆ ಸಾಧ್ಯ ?
ಒಮ್ಮೆ ನಿಮ್ಮ ಎಡಬದಿಗೆ ಕಣ್ಣು ಹಾಯಿಸಿ. ಅಲ್ಲಿ ನರ್ಮದಾ ನದಿಗೆ ಸಮಾನಾಂತರವಾಗಿ ಆರು ಪಥದ 120 ಕಿಮೀ ವ್ಯಾಪ್ತಿಯ ಸುಂದರ ರಸ್ತೆ ಕಾಣುತ್ತದೆ. ನೂರು ವರ್ಷಕ್ಕೂ ಹಳೆಯದಾದ ಲಕ್ಷಾಂತರ ಮರಗಳನ್ನು ಒಂದೇ ವರ್ಷದ ಅವಧಿಯಲ್ಲಿ ಕಡಿದು ಈ ರಸ್ತೆ ನಿರ್ಮಿಸಲಾಗಿದೆ. ಔರಂಗಜೇಬನ ಸೇನೆಯನ್ನು ಸೋಲಿಸಿ ಇತಿಹಾಸದ ಪುಟಗಳಲ್ಲಿ ವಿಜೃಂಭಿಸಿರುವ ರಾಜಪಿಪ್ಲಾ ಪ್ರಾಂತ್ಯದ ಜನತೆ ಇಲ್ಲಿ ಮೌನ ಪ್ರೇಕ್ಷಕರಾಗಿದ್ದಾರೆ. ಅವರ ಮನದ ಮಾತುಗಳನ್ನಾಡಲು ಅವರಿಗೆ ಯಾವುದೇ ದಾರಿಯೂ ಇರಲಿಲ್ಲ.
ಸರ್ದಾರರೇ, ನೀವು ಒಂದು ಕಾಲಘಟ್ಟದಲ್ಲಿ ಅಲ್ಪಸಂಖ್ಯಾತರ, ಆದಿವಾಸಿಗಳ, ಹೊರಗುಳಿದ ಪ್ರದೇಶಗಳ ಮತ್ತು ಮಾನವ ಹಕ್ಕುಗಳ ಸಮಿತಿಗಳಿಗೆ ಅಧ್ಯಕ್ಷರಾಗಿದ್ದಿರಿ. ಇಲ್ಲಿ ನಿಮಗೆ ಅರಿವಾಗಬೇಕಿರುವ ಸತ್ಯವೆಂದರೆ, ನಿಮ್ಮ ಹೊಸ ಅವತಾರ ನಳನಳಿಸುವ ಸಂದರ್ಭದಲ್ಲೇ ಆದಿವಾಸಿ ಸಮುದಾಯಗಳು ದಬ್ಬಾಳಿಕೆಯಿಂದ ಸೊರಗಿ, ದಮನಕ್ಕೊಳಗಾಗಿ ಕತ್ತಲ ಕೂಪಕ್ಕೆ ತಳ್ಳಲ್ಪಟ್ಟಿರುತ್ತಾರೆ. ಅವರ ಆರು ಗ್ರಾಮಗಳಲ್ಲಿನ ಭೂಮಿಯನ್ನು 1894ರ ಬ್ರಿಟೀಷ್ ಕಾಯ್ದೆಯ ಅನುಸಾರವೂ ಕಾನೂನಾತ್ಮಕವಾಗಿ ಸ್ವಾಧೀನಪಡಿಸಿಕೊಳ್ಳಲಾಗಿಲ್ಲ. 1961ರಲ್ಲಿ ಎಕರಿಗೆ ಕೇವಲ 80 ರಿಂದ 200 ರೂಗಳವರೆಗೆ ಪರಿಹಾರ ಮೊತ್ತವನ್ನು ಅವರಿಗೆ ನೀಡಲಾಗಿದ್ದು ಈಗ ಇದೇ ಭೂಮಿಯನ್ನು ಐಷಾರಾಮಿ ಹೋಟೆಗಳಿಗೆ ನೀಡಲಾಗಿದೆ. ಇದನ್ನು ಶ್ರೇಷ್ಠ ಭಾರತ ಎಂದೂ ಕರೆಯಲಾಗುತ್ತದೆ. ಅಥವಾ ಸ್ವಾಮಿನಾರಾಯಣ ಸಂಕೀರ್ಣ ಎಂದೂ ಕರೆಯಲಾಗುತ್ತದೆ. ಇಲ್ಲಿ ವಸ್ತು ಸಂಗ್ರಹಾಲಯವನ್ನೂ ಸ್ಥಾಪಿಸಲಾಗಿದೆ.
ರೈತರಿಗೆ ಕೃಷಿ ಭೂಮಿಯನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದ ನೀವು ರೈತರು ದಮನಕಾರಿ ತೆರಿಗೆಯನ್ನು ಪಾವತಿಸಲು ನಿರಾಕರಿಸಿದ್ದಾಗಲೂ ಅವರನ್ನು ಬೆಂಬಲಿಸಿದ್ದಿರಿ. ಈ ರೈತರಿಗೆ 2013ರ ಹೊಸ ಕಾಯ್ದೆಯ ಅನುಸಾರ ಯಾವುದೇ ಪರ್ಯಾಯ ಭೂಮಿಯನ್ನೂ ನೀಡದೆ ಯಾವುದೇ ಪರಿಹಾರವನ್ನೂ ನೀಡಲಾಗಿಲ್ಲ. ಅವರಿಗೆ ನೀಡಲಾಗುತ್ತಿರುವ ಏಳು ಲಕ್ಷ ರೂಗಳ ಪ್ಯಾಕೇಜ್ಗೆ ರೈತರು ಒಪ್ಪಿಗೆ ಸೂಚಿಸುತ್ತಿಲ್ಲ. ಈ ರೈತರ ಬೆಂಬಲಕ್ಕೆ ನಿಲ್ಲಲು ನೀವೇ ಮತ್ತೊಮ್ಮೆ ಅವತರಿಸಬೇಕು. ನೀವು ಅಂತಹ ಒಂದು ಹೋರಾಟದ ಮುಂಚೂಣಿ ನಾಯಕತ್ವ ವಹಿಸಿದ್ದುದೇ ಅಲ್ಲದೆ ಕಾಂಗ್ರೆಸ್ ಪಕ್ಷವನ್ನೇ ತೊರೆಯುವ ಬೆದರಿಕೆ ಹಾಕುವ ಮೂಲಕ ನಿಮ್ಮ ಪಕ್ಷ ಅಹಿಂಸಾತ್ಮಕ ಉಗ್ರ ಹೋರಾಟವನ್ನು ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಿರಿ.
ಈ ಹೋರಾಟದಲ್ಲಿ 1940ರಲ್ಲಿ ನೀವು ಸೆರೆ ವಾಸ ಅನುಭವಿಸಿದ್ದಿರಿ. 1942ರ ಸಾಮೂಹಿಕ ಪ್ರತಿಭಟನೆಯ ಸಂದರ್ಭದಲ್ಲಿ ನಾಗರಿಕ ಸೇವೆಗಳನ್ನೇ ಬಂದ್ ಮಾಡಿಸುವಲ್ಲಿ ನೀವು ಯಶಸ್ವಿಯಾಗಿದ್ದಿರಿ. ಗ್ರಾಮೀಣ ಜನತೆಯನ್ನು ಸಂಘಟಿಸುವ ನಿಮ್ಮ ಸಾಮಥ್ರ್ಯ ಮತ್ತು ಸಾಮ್ರಾಜ್ಯಶಾಹಿ ಶಕ್ತಿಗಳ ಅಟ್ಟಹಾಸವನ್ನು ಎದುರಿಸಿ ನಿಲ್ಲುವ ಸಾಮಥ್ರ್ಯದ ಹಿನ್ನೆಲೆಯಲ್ಲಿ ನೀವು ಪ್ರಸ್ತುತ ದೇಶವನ್ನಾಳುತ್ತಿರುವ ಪ್ರಬಲ ಶಕ್ತಿಗಳನ್ನು ಸಮರ್ಥವಾಗಿ ಎದುರಿಸಬಲ್ಲಿರಿ. ಇದೇ ಆಳುವ ಶಕ್ತಿಗಳೇ ನಿಮ್ಮ ಹೊಸ ಅವತಾರದ ಸೃಷ್ಟಿಕರ್ತರಾಗಿದ್ದು, ಏಕತೆಯ ಮಂತ್ರ ಪಠಿಸುತ್ತಿದ್ದಾರೆ. ಆದರೆ ಜನರನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಕ್ರೌರ್ಯವನ್ನು ಪೋಷಿಸುತ್ತಿದ್ದಾರೆ. ಜಾತಿ, ಸಂಸ್ಕøತಿ ಮತ್ತು ಧರ್ಮದ ವೈವಿಧ್ಯತೆಯನ್ನು ನಿರಾಕರಿಸುತ್ತಿದ್ದಾರೆ.
ನೀವು ನರ್ಮದಾ ಕಣಿವೆಯತ್ತ ಒಂದು ಹೆಜ್ಜೆ ಮುನ್ನಡೆದು ಕಣಿವೆಯಲ್ಲಿ ಸಂಚರಿಸಿದರೆ ಹಲವು ಪೀಳಿಗೆಗಳ ಆದಿವಾಸಿ, ಮೀನುಗಾರರು, ರೈತರ ಸಮುದಾಯಗಳ ಸರಳತೆಯನ್ನು ನೋಡಿ ದಂಗಾಗುವಿರಿ. ಇವರಲ್ಲಿ ಅನೇಕರ ಭೂಮಿಯನ್ನು ನರ್ಮದಾ ಅಣೆಕಟ್ಟಿಗಾಗಿ ಆಗಲೇ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ನಂತರ ನಿಮ್ಮ ಹೆಸರಿನಲ್ಲಿ ಸರ್ದಾರ್ ಸರೋವರ್ ನಿರ್ಮಿಸಲು ಭೂಮಿ ಕಳೆದುಕೊಳ್ಳಬೇಕಾಯಿತು. ಭೂಮಿ ಕಳೆದುಕೊಂಡ ರೈತರಿಗೆ ಚಿಕ್ಕಾಸಿನ ಪರಿಹಾರವನ್ನೂ ನೀಡಲಿಲ್ಲ.
ಅವರೂ ನೀವು ನಡೆದ ಹಾದಿಯಲ್ಲೇ ನಡೆದರು, ದಾಳಿಗಳನ್ನು ಎದುರಿಸಿದರು, ಸೆರೆವಾಸ ಅನುಭವಿಸಿದರು. ( ನೀವು 1943ರಲ್ಲಿ ಬಂದಿಖಾನೆಯನ್ನು ಶಾಂತಿಯ ತಾಣ ಎಂದು ಕರೆದಿದ್ದನ್ನು ಸ್ಮರಿಸಿಕೊಳ್ಳಿ). 2013ರಲ್ಲಿ ಸರ್ಕಾರ ಆದೇಶ ಹೊರಡಿಸಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರ್ಯಾಯವಾಗಿ ಭೂಮಿ ನೀಡುವುದಾಗಿ ಘೋಷಿಸಿತು. ಅದರೆ ರೈತರನ್ನು ಕೊನೆಗೆ ವಂಚಿಸಲಾಯಿತು. ರೈತರ ಬಳಿ ಇದ್ದ ತುಂಡು ಭೂಮಿಯಿಂದಲೂ ಅವರನ್ನು ಒಕ್ಕಲೆಬ್ಬಿಸಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಯಿತು. ಈ ಶೀಘ್ರ ಗತಿಯ ಯೋಜನೆಗಳತ್ತ ಒಮ್ಮೆ ಕಣ್ಣು ಹಾಯಿಸಿ, ನೀವು ಮಾತ್ರ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಸಾಧ್ಯ, ನೀವು ಮಾತ್ರ ಸರ್ದಾರ್ !
ಸರ್ದಾರರೇ, ಈ ಪ್ರಾಚೀನ ನರ್ಮದಾ ನಾಗರಿಕತೆ ಮತ್ತು ಕಣಿವೆ ಪ್ರದೇಶದಲ್ಲಿ ಶತಮಾನಗಳಿಂದ ನೆಲೆ ಮಾಡಿರುವ ಜನಸಮುದಾಯಗಳ ಜೀವನದ ಮೇಲೆ ಈ ರೀತಿಯ ಭೂ ಸ್ವಾಧೀನ ಮತ್ತು ಒಕ್ಕಲೆಬ್ಬಿಸುವಿಕೆಯಿಂದ ಉಂಟಾಗುವ ಭೀಕರ ಪರಿಣಾಮವನ್ನು ನಿಮ್ಮಂತಹ ಮೇರು ವ್ಯಕ್ತಿತ್ವ ಮತ್ತು ದಾರ್ಶನಿಕತೆ ಇರುವವರು ಮಾತ್ರ ಅರಿಯಲು ಸಾಧ್ಯ.
ಇಂದು ನಿಮ್ಮ ಕೈಯ್ಯನ್ನು ಯಾರೂ ಹಿಡಿಯಲಾಗುವುದಿಲ್ಲ. ಆದರೆ ಈ ಅಧಿಕಾರ ಶಾಹಿಗಳ ಸೇನೆ ಶ್ರಮಜೀವಿಗಳ ಹಕ್ಕುಗಳನ್ನು ಕಸಿದುಕೊಳ್ಳುವ ಪರಿಯನ್ನು ನೀವು ನೋಡುವುದೇ ಆದರೆ, ನಿಮ್ಮ ಕಬ್ಬಿಣದಂತಹ ಕೈಗಳಿಂದ ಅವರನ್ನು ಗ್ರಾಮಗಳಿಂದ ಹೊರಗೆಳೆದು ಬಿಸಾಡುವುದು ಮಾತ್ರ ಖಚಿತ. ಅದು ನಿಮ್ಮಿಂದ ಮಾತ್ರವೇ ಸಾಧ್ಯ. ನಮ್ಮ ನೆಚ್ಚಿನ ನಾಯಕರೇ, ಇಂದಿನ ಪ್ರಭುತ್ವದ ಅಧಿಪತಿಗಳಿಗೆ ಈ ಕುರಿತು ಪರಾಮರ್ಶೆ ಮಾಡಲು, ಹಿಂದಿರುಗಿ ನೋಡಲು ಪ್ರೇರಣೆ ನೀಡಲು ಸಾಧ್ಯವೇ?
ನೀವು ಮತ್ತು ಗಾಂಧೀಜಿ ಸೆರೆಮನೆಯ ನೆಲದ ಮೇಲೆ ಕುಳಿತು ಸ್ವರಾಜ್ ಮತ್ತು ಸ್ವಾವಬಲಂಬನೆಯ ಹಾದಿಗಳನ್ನು ಅನ್ವೇಷಿಸಿದ ದಿನಗಳು ಮುಗಿದಿವೆ, ಕೃಷಿ ಸ್ವಾವಲಂಬನೆ ಮತ್ತು ಗ್ರಾಮ ಗಣರಾಜ್ಯಗಳ ಕಲ್ಪನೆಯನ್ನು ರೂಪಿಸಿದ ದಿನಗಳು ಮುಗಿದಿವೆ. ಆರ್ಥಿಕತೆ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆಯನ್ನು ತರಲು ಜನಸಮೂಹಗಳ ಉತ್ಪಾದನೆಗೆ ಅತಿ ಹೆಚ್ಚಿನ ಮೌಲ್ಯ ನೀಡಿದ ನಿಮ್ಮ ಆ ದಿನಗಳು ಇನ್ನಿಲ್ಲವಾಗಿವೆ.
ಇಲ್ಲಿರುವ ಗುಜರಾತಿನ ಆದಿವಾಸಿಗಳನ್ನು, ನಿಮ್ಮ ರಾಜ್ಯದವರೇ ಆದ ದುಡಿಮೆಗಾರರನ್ನು ನಿರ್ಲಕ್ಷಿಸಿ 1500 ಕಾರ್ಮಿಕರನ್ನು ಚೀನಾದಿಂದ ಕರೆತಂದಿರುವುದು ನಾಚಿಕೆಗೇಡಿನ ವಿಚಾರ. ಇಲ್ಲಿ ಸ್ಥಳೀಯ ದುಡಿಮೆಗಾರರು ಒತ್ತಡಕ್ಕೆ ಮಣಿದು ವಲಸೆ ಹೋಗಿ ಕಬ್ಬಿನ ಗದ್ದೆಗಳಲ್ಲಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ನಿಮ್ಮ ಹೆಸರಿನಲ್ಲಿ ನಿರ್ಮಿಸಲು ಯೋಜಿಸಿರುವ ಸ್ಥಾವರಗಳು ಮತ್ತು ಪ್ರಚಾರ ಮಾಡುತ್ತಿರುವ ಪರಿ ದಿಗಿಲು ಹುಟ್ಟಿಸುತ್ತದೆ. ಶಾಪಿಂಗ್ ಮಾಲ್ಗಳು, ಪಂಚತಾರಾ, ಸಪ್ತತಾರಾ ಹೋಟೆಲುಗಳು, ಐಷಾರಾಮಿ ಅತಿಥಿ ಗೃಹಗಳು, ಹೆಲಿಪ್ಯಾಡುಗಳು, ನದಿಯ ತೀರದಲ್ಲಿ ರಾಜ್ಯವಾರು ಭವನಗಳು, ಈ ಭವನಗಳೊಡನೆ ಅಂಗಡಿ ಮುಗ್ಗಟ್ಟುಗಳು, ಮಾರುಕಟ್ಟೆಗಳು, ಬೃಹತ್ ಫುಡ್ ಪ್ಲಾಜಾಗಳು, ಫುಡ್ ಕೋರ್ಟ್ಗಳು, ವಾಕಿಂಗ್ ಮಾರ್ಗಗಳು, ಟ್ರಾವಲೇಟರ್ಸ್ ಇತ್ಯಾದಿ. ನಿಮ್ಮ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಅಣೆಕಟ್ಟಿನಿಂದ ತಮ್ಮ ಭೂಮಿ, ಮನೆ ಮತ್ತು ಬದುಕನ್ನೇ ಕಳೆದುಕೊಂಡ 35 ಸಾವಿರ ಕುಟುಂಬಗಳಿಗೆ ಇದುವರೆಗೂ ಸೂಕ್ತ ಪರಿಹಾರ ಅಥವಾ ಪುನರ್ವಸತಿ ನೀಡದೆಯೇ ಇವೆಲ್ಲವೂ ನಿರ್ಮಾಣವಾಗುತ್ತಿವೆ.
ಈ ಜನತೆ ನರ್ಮದಾ ನದಿಯನ್ನು ಮಾರುಕಟ್ಟೆಯ ಸರಕಿನಂತೆ ಪರಿಗಣಿಸಲಿಲ್ಲ ಅಥವಾ ನದಿಯ ನೀರನ್ನು ಮಾರುಕಟ್ಟೆಯ ವಸ್ತುವನ್ನಾಗಿಸಲಿಲ್ಲ. ಈ ಅಣೆಕಟ್ಟು ಅವರ ಬದುಕನ್ನು ಮೂರಾಬಟ್ಟೆ ಮಾಡಿದೆ ಆದರೆ ಅವರ ತ್ಯಾಗ ಬಲಿದಾನಗಳನ್ನು ಪ್ರವಾಸೋದ್ಯಮ ಉದ್ದಿಮೆಯ ಬಂಡವಾಳವನ್ನಾಗಿ ಪರಿಗಣಿಸುವ ನೀತಿಯಿಂದ ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ರಾಜಕೀಯ ಪ್ರವಾಸೋದ್ಯಮದ ಬಂಡವಾಳವೂ ಆಗಿರುವುದನ್ನು ಎಲ್ಲರೂ ಬಲ್ಲರು. ನಿಮ್ಮ ಚಳುವಳಿಗಳ ಮೂಲಕ ಬದುಕು ಪಡೆದ ಗುಜರಾತ್ನ ರೈತರ ಸಂತತಿ ಇಂದು ತ್ರಿಶಂಕು ಪರಿಸ್ಥಿತಿ ಎದುರಿಸುತ್ತಿದ್ದು ಕಾರ್ಪೋರೇಟ್ ಉದ್ಯಮಿಗಳು ಭಾರಿ ಲಾಭವನ್ನು ದೋಚುತ್ತಿದ್ದಾರೆ.
ರೈತರಿಗೆ ನೀವು ನೀಡಿರುವ ಕೊಡುಗೆ ಮತ್ತು ಭಾರತದ ಬಗ್ಗೆ ನಿಮ್ಮಲ್ಲಿದ್ದ ದಾರ್ಶನಿಕತೆ ಮಹಾತ್ಮಾಜಿ ಮತ್ತು ನೆಹರೂ ಅವರೊಂದಿಗೆ ನಿಮ್ಮನ್ನೂ ಪ್ರಾತಃಸ್ಮರಣೀಯರನ್ನಾಗಿಸಿದೆ. ನಮ್ಮ ನೆನಪುಗಳಲ್ಲಿ ನಿಮ್ಮ ಹೆಸರು ಅಚ್ಚಳಿಯದೆ ಉಳಿದಿದೆ. ನೀವು ಪಂಡಿತ್ ನೆಹರೂ ಅವರನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷದಲ್ಲಿ ಅಂತರಿಕ ಐಕ್ಯತೆ ಸಾಧಿಸಲು ಪಣ ತೊಟ್ಟಿದ್ದಿರಿ. ಇಂದಿನ ಬೃಹತ್ ನಾಟಕರಂಗದಲ್ಲಿ ಈ ದೇಶದ ಜನತೆಗೆ ಸ್ಥಳಾವಕಾಶವೇ ಇಲ್ಲವಾಗಿದೆ. ಸರ್ದಾರರೇ, ಈಗ ಎಲ್ಲ ಬೆಳಕೂ ನಿಮ್ಮ ಮೇಲೆಯೇ ಚೆಲ್ಲಿದಂತಿದೆ. ನಿಮ್ಮ ನೂತನ ಅವತಾರ ಕಂಗೊಳಿಸುತ್ತಿದೆ. ಆದರೆ ನೀವು ಬೋಧಿಸಿದ, ಅನುಸರಿಸಿದ ನೀತಿಗಳೆಲ್ಲವನ್ನೂ ಕತ್ತಲೆಗೆ ನೂಕಿ ಇತಿಹಾಸದ ಪುಟಗಳಲ್ಲಿ ಹುದುಗಿಹಾಕಲಾಗುತ್ತಿದೆ. ಹೊಸ ಅಧ್ಯಾಯದೊಂದಿಗೆ ಈ ದೇಶದ ಆದಿವಾಸಿಗಳ ಮತ್ತು ದೇಶದ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಲಾಗುತ್ತಿದೆ.
ನಿಮ್ಮ ಪೀಳಿಗೆಯವರಿಗೆ ಎರಡು ದುಷ್ಟ ಸಂಗತಿಗಳ ಅರಿವಿತ್ತು. ಭ್ರಷ್ಟಾಚಾರ ಮತ್ತು ಕೋಮುವಾದ. ನಿಮ್ಮ ಉಪದೇಶಗಳ ಹಿಂದಿನ ಪ್ರೇರಣೆ ಇಂದು ಅತ್ಯಗತ್ಯವಾಗಿದೆ. ದೇಶದ ವಿಭಜನೆಯ ನಂತರದಲ್ಲಿ ಉಂಟಾದ ಕೋಮು ಸಂಘರ್ಷಗಳ ಸಂದರ್ಭದಲ್ಲಿ ನೀವು ಕೋಮುವಾದವನ್ನು ಸ್ಪಷ್ಟವಾಗಿ ನಿರಾಕರಿಸುವ ಮೂಲಕ ವಿವಿಧ ಧಾರ್ಮಿಕ ನಾಯಕರಿಗೆ ಮನವಿ ಸಲ್ಲಿಸಿದ್ದೇ ನಿಮ್ಮ ಪ್ರಾಮಾಣಿಕತೆಯ ಕುರುಹಾಗಿದೆ. ನೀವು ದೇಶಾದ್ಯಂತ ಮಾಡಿದ ಭಾಷಣಗಳು ಮತ್ತು ಗೋಲ್ವಾಲ್ಕರ್ ಗುರೂಜಿಗೆ ಆರೆಸ್ಸೆಸ್ನ ಹಿಂದೂ ಮೂಲಭೂತವಾದದ ವಿರುದ್ಧ ಬರೆದಿದ್ದ ಪತ್ರವನ್ನು ಇಂದು ಪ್ರತಿಯೊಬ್ಬ ಭಾರತೀಯನೂ ಓದಿ ಮನನ ಮಾಡಿಕೊಂಡು ಅನುಸರಿಸಬೇಕಿದೆ.
ಈ ಪತ್ರದಲ್ಲಿ ನೀವು ಆರೆಸ್ಸೆಸ್ಗೆ ಬದಲಾಗಿ ಮುಖ್ಯವಾಹಿನಿಯಲ್ಲಿ ಒಂದಾಗಲು ವಿನಂತಿಸಿಕೊಂಡಿದ್ದಿರಿ. ಇಂದು ನಿಮ್ಮ ಹೊಸ ಅವತಾರದ ಹಿಂದೆ ಅವಿತು ಕುಳಿತಿರುವವರು ನಿಮ್ಮನ್ನು ಮಾರುಕಟ್ಟೆಯ ಸರಕಿನಂತೆ ಬಿಕರಿ ಮಾಡುತ್ತಿದ್ದಾರೆ. ನಿಮ್ಮ ಚಿಂತನೆಗಳನ್ನು ಮತ್ತು ಹಿಂಸೆಯನ್ನು ಕೊನೆಗೊಳಿಸಲು ನೀವು ಪಟ್ಟ ಶ್ರಮವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡದ ಇವರು, ರಾಜಪ್ರಭುತ್ವದಿಂದ ಪ್ರಜಾತಂತ್ರದೆಡೆಗೆ, ಏಕಸ್ವಾಮ್ಯ ಮತ್ತು ಅಧಿಪತ್ಯದಿಂದ ಸಮಾನತೆ ಮತ್ತು ಭ್ರಾತೃತ್ವದೆಡೆಗೆ ಚಲಿಸಲು ನೀವು ಪಟ್ಟ ಶ್ರಮವನ್ನೂ ಗ್ರಹಿಸುವ ಪ್ರಯತ್ನ ನಡೆಸಿಲ್ಲ. ಗುಂಪು ಥಳಿತಕ್ಕೊಳಗಾದ ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳುವ ಸಂಯಮವೂ ಇವರಲ್ಲಿಲ್ಲ. ಇವರಿಗೆ ಆದಿವಾಸಿಗಳ ಕ್ರಾಂತಿ ಅಪಥ್ಯವಾಗುತ್ತದೆ. ಕೃಷಿ ಮತ್ತು ಕೃಷಿಕರ ಮೌಲ್ಯ ಇವರಿಗೆ ಅರ್ಥವಾಗುವುದೇ ಇಲ್ಲ. ಆದರೆ ಇವರು ನಿಮ್ಮ ಹೆಸರನ್ನು ಬಳಸಿಕೊಂಡು ರಾಜ್ಯಭಾರ ಮಾಡಲು ಹವಣಿಸುತ್ತಿದ್ದಾರೆ ಸರದಾರರೇ.
ನಿಮ್ಮ ಹೊಸ ಅವತಾರದ ಬೃಹದಾಕಾರ ಮತ್ತು ಎತ್ತರವನ್ನು ಕುರಿತು ಪರಾಕು ಹಾಡುವ ಇವರು ಸ್ವತಃ ಕುಬ್ಜರಾಗಿ ಹೋಗಿದ್ದಾರೆ. ಆದಿವಾಸಿಗಳಿಗೆ ಇವೆಲ್ಲವೂ ತಿಳಿದಿದೆ. 1961ರಿಂದಲೂ ಒಕ್ಕಲೆಬ್ಬಿಸಲ್ಪಟ್ಟಿರುವ ಆದಿವಾಸಿಗಳು ಇನ್ನು ಮೌನವಾಗಿ ಸಹಿಸಲು ಸಾಧ್ಯವಿಲ್ಲ. ಅವರಿಗೆ ಯಾವುದೇ ಜಯಕಾರಗಳಿಲ್ಲ, ಉತ್ಸವಗಳಿಲ್ಲ, ಹರ್ಷೋತ್ಸಾಹಗಳಿಲ್ಲ. ಅವರು ಪ್ರತಿಭಟಿಸುತ್ತಾರೆ, ಸಂತಾಪ ವ್ಯಕ್ತಪಡಿಸುತ್ತಾರೆ. ಅವರ ಮಾತೃ ಸ್ವರೂಪಿ ನರ್ಮದಾ ನದಿ, ಅವರ ದೇವ ದೇವತೆಗಳು, ಸಂಸ್ಕೃತಿ ಮತ್ತು ನಿಸರ್ಗ ಮತ್ತು ಅವರ ಬದುಕು ಎಲ್ಲವೂ ಮತ್ತೆ ಮತ್ತೆ ಅಪಾಯಕ್ಕೀಡಾಗುತ್ತಿರುವುದನ್ನು ಪ್ರತಿಭಟಿಸುವ ಆದಿವಾಸಿಗಳು ಈ ನೀತಿಗಳನ್ನು ಖಂಡಿಸುವ ಮೂಲಕ ಸವಾಲೆಸೆಯುತ್ತಾರೆ.
ಅವರ ಪೂರ್ವಿಕರೂ ಬ್ರಿಟೀಷರ ವಿರುದ್ಧ ಹೋರಾಡಿದ್ದರು, ಹೋರಾಟದ ಮೂಲಕವೇ ತಮ್ಮ ಭೂಮಿಯನ್ನು ಉಳಿಸಿಕೊಂಡಿದ್ದರು. ಈಗ ಅವರು ಹೊಸ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿದ್ದಾರೆ. ಸ್ವಯಂ ನಿರ್ಧಾರದ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ನಿಮ್ಮ ಹೆಸರಿನಲ್ಲಿ 3500 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ಪ್ರಹಸನದಲ್ಲಿ ಅವರು ಭಾಗಿಯಾಗಿಲ್ಲ. ಇದರಲ್ಲಿ 200 ಕೋಟಿ ರೂಗಳನ್ನು ಕಾಪೋರೇಟ್ಗಳಿಂದ ಸಾಮಾಜಿಕ ಹೊಣೆಗಾರಿಕೆಯ ಹೆಸರಿನಲ್ಲಿ ಸಂಗ್ರಹಿಸಲಾಗಿದೆ. ಈ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಎಂದರೇನು ಸರದಾರರೇ ? ಇದರ ಬಗ್ಗೆ ಸವಿವವರವಾಗಿ ಮತ್ತೊಮ್ಮೆ ನಿಮಗೆ ಪತ್ರ ಬರೆಯುತ್ತೇನೆ.
ನಿಮ್ಮ ಹೊಸ ಅವತಾರ ಎತ್ತರದಲ್ಲಿ ನಿಲ್ಲುತ್ತದೆ. ನದಿಯ ನಡುವೆ, ವರಾತ ಬಾವಾ ಟೇಕ್ರಿಯಲ್ಲಿ ನಿಲ್ಲುತ್ತದೆ. ನಿಮ್ಮ ಹೊಸ ಅವತಾರದಲ್ಲಿ ನೀವು ನಿಮ್ಮ ಕಣ್ಣಿಗೆ ಗೋಚರಿಸುವ ಎಲ್ಲ ಅನ್ಯಾಯಗಳನ್ನೂ ಗಮನಿಸಿ ನಿಲ್ಲಿಸುತ್ತೀರಿ ಎಂದು ಭಾವಿಸುತ್ತೇವೆ. ಸಮಾನತೆ, ಐಕ್ಯತೆ ಮತ್ತು ಸುಸ್ಥಿರತೆಯ ವಿರುದ್ಧ ನಡೆಯುವ ಎಲ್ಲ ಅನ್ಯಾಯಗಳನ್ನೂ ತಡೆಗಟ್ಟುತ್ತೀರಿ ಎಂದು ನಾವು ಭಾವಿಸುತ್ತೇವೆ.
ಇಂದಿನ ಪರಿಸ್ಥಿತಿಯಲ್ಲಿ ನಾವು ನಿಮ್ಮ ಉಕ್ಕಿನ ಬಾಹುಗಳನ್ನು ಮತ್ತು ಆಶೀರ್ವಾದವನ್ನು ಅಪೇಕ್ಷಿಸುತ್ತೇವೆ. ಉದ್ಘಾಟನೆಯ ದಿನದಂದು ಮತ್ತು ಪ್ರತಿದಿನ ಇಲ್ಲಿಗೆ ಆಗಮಿಸುವ ಲಕ್ಷಾಂತರ ಪ್ರವಾಸಿಗರ ನಡುವೆಯೇ ಆದಿವಾಸಿಗಳು ತಮ್ಮ ಪ್ರತಿಭಟನೆಯ ದನಿ ಎತ್ತಿದಾಗ ನಾವು ನಿಮ್ಮನ್ನು ನಿರೀಕ್ಷಿಸುತ್ತೇವೆ. ನಿಮ್ಮ ಪರಂಪರೆ ಇದ್ದೋ ಇಲ್ಲದೆಯೋ ಹೊಸ ಪ್ರವಾಸೋದ್ಯಮದ ಇತಿಹಾಸ ಇಲ್ಲಿ ಉಗಮಿಸಿದೆ.
ಆದಿವಾಸಿಗಳ ದನಿಯನ್ನು ನೀವು ಮಾತ್ರ ಆಲಿಸಬಲ್ಲಿರಿ ಎಂದು ನಮಗೆ ತಿಳಿದಿದೆ. ಅವರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಕ್ಕೆ ಅಂತ್ಯ ಹಾಡಿ ಅವರ ಹಕ್ಕುಗಳಿಗಾಗಿ ಹೋರಾಡಲು, ನರ್ಮದಾ ನದಿಗಾಗಿ ಹೋರಾಡಲು ನೀವು ಪ್ರೇರಣೆ ನೀಡುವಿರೆಂದು ಭಾವಿಸುತ್ತೇವೆ. ನರ್ಮದಾ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದಾಳೆ ಸರ್ದಾರರೇ !
ಇಂತಿ ಗೌರವಯುತ ಸಮ್ಮಾನದೊಂದಿಗೆ
ಮೇಧಾ ಪಾಟ್ಕರ್






ಪತ್ರ ಅರ್ಥಪೂರ್ಣ…. ಮೇಧಾಪಾಟ್ಕರ್ ಅವರ ಹೋರಾಟಕ್ಕೆ ಶರಣು