
“ಎಲೆನಾ ಕೇಳಿಸಿಕೊಂಡೆಯಾ ಗೇಬ್ರಿಯೆಲ್ಲಾ ಹೇಳಿದ್ದು, ಅವಳ ಗುಂಪಿನ ಈ ಸ್ಥಿತಿಗೆ ನೀವೆಲ್ಲರೂ ಕಾರಣವಂತೆ, ಇಬ್ಬರನ್ನೂ ದ್ವೇಷ ಮಾಡುತ್ತಾಳೆ ಅವಳು, ಅವರೂ ೧೪ನೆ ಶತಮಾನದಲ್ಲೇ ಇಲ್ಲಿ ಬಂದವರಲ್ಲವಾ ನಿಮ್ಮಷ್ಟೆ ಹಕ್ಕು ಅವರಿಗೂ ಇದೆ ಇಲ್ಲಿರೋದಕ್ಕೆ, ಅದು ಹೇಗೆ ಅವರನ್ನ ಕಡೆಗಾಣಿಸಿ ನಿಮ್ಮ ಹೋರಾಟ ಹೋರಾಟ ಎಂದು ಕೂಗಾಡುತ್ತಿದ್ದೀರ, ಅವರ ಚರ್ಮದ ಬಣ್ಣ ಬೇರೆಯದ್ದು ಅಂತಲಾ ಇಲ್ಲ ಅವರು ಭಾರತದಿಂದ ಬಂದವರು ಅಂಥಾನಾ ? ಹೇಳು ಸ್ವಾತಂತ್ರ್ಯ, ಸ್ವಾಯತ್ತತೆ, ಅಭಿವ್ಯಕ್ತಿ ಎಂದೆಲ್ಲಾ ಮಾತಾಡುವ ನೀನು ಬರಿ ನಿಮ್ಮ ಜನರ ಪರವಾಗಿ ಮಾತಾಡೋದಲ್ಲ, ಕಟ್ಟಕಡೆಯ ಮನೆಯಿರದ ಮಕ್ಕಳ ಬಗ್ಗೆಯೂ ನೀನು ತಲೆಕೆಡಿಸಿಕೊಳ್ಳಬೇಕು, ಸಾವಿರಾರು ವರ್ಷಗಳು ನಿಮ್ಮಂತೆಯೇ ಅವರೂ ಇಲ್ಲೇ ಇದ್ದಾರಲ್ವಾ ? ಅದು ಹೇಗೆ ಒಂದು ನಾಗರೀಕತೆಯನ್ನೇ ಮರೆತು ನಿಮ್ಮ ಚರಿತ್ರೆಯನ್ನ ಮಾತ್ರ ಊರೆಲ್ಲಾ ಪ್ರಚಾರ ಮಾಡುತ್ತಿದ್ದೀರಾ ” ಖಾರವಾಗಿಯೇ ಹುಡುಗಿ ಪ್ರಶ್ನೆ ಮಾಡಿದಳು.
ಯಾವುದೇ ಹೋರಾಟವನ್ನು ಸ್ವಲ್ಪ ಅನುಮಾನದಿಂದಲೇ ನೋಡುವ ಜಾಯಮಾನ ಅವಳದ್ದಾಗಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಅವಳ ಮನೆಯ ದೊಡ್ಡವರು ಹೇಳುತ್ತಿದ್ದದ್ದು ಒಂದೆ, “ದೇಶದ ಅತೀ ಬಡವ ಯಾವುದೇ ಸೌಲಭ್ಯ ಇಲ್ಲದವನಿಗೂ ಎಲ್ಲಾ ಸಿಕ್ಕರೆ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ, ಯಾವುದೇ ಮನುಷ್ಯ ಇಲ್ಲಿ ಅವನ ಜಾತಿ ಮತ ಪಂಥ ಬೇಧವಿಲ್ಲದೆ ಗೌರವಯುತವಾಗಿ ಬಾಳುವವನಾಗಿರಬೇಕು, ಒಂದು ವರ್ಗಕ್ಕೆ ಮಾತ್ರ ಸ್ವಾತಂತ್ರ್ಯ ಯಾವತ್ತೂ ಸಿಗಬಾರದು, ಅದು ಆದರೆ ಅದಕ್ಕಿಂತ ಖೇದಕರ ಸಂಗತಿ ಮತ್ತೊಂದಿಲ್ಲ. ನಿನ್ನ ದೃಷ್ಠಿಕೋನದಿಂದ ನೋಡಿದರೆ ನಿನಗೆ ಅನ್ಯಾಯ ಅದು ಅದು ಎಂದು ಮಾತಾಡುವ ನೀನು ಮತ್ತೊಬ್ಬರ ಅನ್ಯಾಯವನ್ನ ಕೊಂಚ ಕೂಡ ಅಲೋಚನೆ ಮಾಡದೇ ಸೆಲ್ಫಿಶ್ ಆಗಿದ್ದೀಯಾ” ಎಂದು ಬಡ ಬಡ ಹುಡುಗಿ ಮಾತಾಡುತ್ತಾ ಹೋದಳು,
“ಸ್ಟಾಪ್ ಇಟ್ ಸ್ಟಾಪ್ ಇಟ್ ಐ ಸೇ” ಎಂದು ಎಲೆನಾ ಜೋರಾಗಿ ಕಿರುಚಿದಳು. ತನ್ನ ತಪ್ಪು ಅಥವಾ ತನ್ನ ಕಡೆಯವರ ತಪ್ಪನ್ನ ಎತ್ತಿ ತೋರಿಸಿದರೆ ಎಲೆನಾಳಿಗೆ ಕಿಂಚಿತ್ತೂ ಇಷ್ಟವಾಗುತ್ತಿರಲ್ಲಿಲ್ಲ. ಅಲ್ಲಿಂದ ಕಾಲು ಕೀಳಲು ಯೋಚಿಸುತ್ತಿದ್ದಳು. ಹೀಗೆ ಟ್ರೇನಿನಲ್ಲಿ ವಾಪಸ್ಸು ಬರುತ್ತಿರುವಾಗ ಮಧ್ಯದಲ್ಲಿ ಟ್ರೇನ್ ನಿಲ್ಲಿಸಲಾಯಿತು, ಏನೋ ಸಮಸ್ಯೆ ಎಂದು ಇಬ್ಬರೂ ಹಾಡು ಕೇಳುತ್ತಾ ಕೂತಿದ್ದರೆ ಅಲ್ಲಿ ಮತ್ತೊಂದು ದೊಡ್ಡ ಪ್ರತಿಭಟನೆ ಮೊಳಗುತ್ತಿತ್ತು. ಕತಲನ್ನರು ಬರೀ ಒಂದು ಧರ್ಮದವರಲ್ಲ ಎಂದು. ಹುಡುಗಿಗೆ ಇದರ ಅರ್ಥ ತಿಳಿಯಲು ತುಂಬಾ ಸಮಯವೇನೂ ಆಗಲ್ಲಿಲ್ಲ. ಎಲೆನಾ ಮುಖ ನೋಡಿದಳು. ಭಾರತ ಪಾಕಿಸ್ತಾನದ ಲೆವೆಲ್ಲಿಗೆ ಸ್ಪೇನ್ ಮತ್ತು ಮೊರಕ್ಕೋ ಜಗಳವಾಡುತ್ತದೆ. ಆಫ್ರಿಕಾದ ವಲಸಿಗರು ಸಮುದ್ರ ಮಾರ್ಗವಾಗಿ ಮೊರೊಕ್ಕೋದಿಂದಲೇ ಬರೋದು. ಕೆಲವು ಮೊರಕ್ಕನರು ಸಹ ಇಲ್ಲಿ ಬಾರ್ಸಾದಲ್ಲಿ ತಮ್ಮ ಮನೆ ಮಾಡಿಕೊಂಡಿದ್ದಾರೆ. ಅವರಿಗೂ ಇವರಿಗೂ ಧರ್ಮದ ವಿಚಾರವಾಗಿ ವಿಪರೀತ ಕದನ.

ಇಡೀ ಯುರೋಪಿಗೆ ಕೆಲವೊಮ್ಮೆ ರೆಫ್ಯೂಜಿಗಳ ದಂಡೆ ಇಲ್ಲಿಂದ ಬಂದು ಇಡೀ ಯುರೋಪನ್ನ ಆವರಿಸಿಕೊಂಡಿರುತ್ತದೆ. ಅದರ ಜೊತೆ ಸಿರಿಯಾದಲ್ಲಾಗುತ್ತಿದ್ದ ಯುದ್ಧದ ಪರಿಣಾಮ ತುಂಬಾ ಜನ ಬಂದು ಈ ಊರನ್ನ ಸೇರಿಕೊಂಡಿದ್ದಾರೆ. ಕಪ್ಪು, ಕಂದು, ಬಿಳಿಯ ಬಣ್ಣದಿಂದ ಯುರೋಪ್ ತುಂಬಿ ತುಳುಕುತ್ತಿದ್ದೆ. ಕಪ್ಪು ಮತ್ತು ಕಂದು ಬಹಳ ಜಾಸ್ತಿ ಕಾಣುತ್ತಿದೆ. ಇಲ್ಲಿ ಅವರ ಜನರಿಗೆ ಕೆಲಸ ಕಾರ್ಯ ಯಾವುದೂ ಸಿಗುತ್ತಿಲ್ಲ ಎಂಬ ಕೋಪ ಈ ಊರಿನ ಜನರಿಗೆ ಸಿಕ್ಕಾಪಟ್ಟೆ ಇದೆ. ನಮ್ಮ ದೇಶದಲ್ಲಿರುವಷ್ಟು ಜಾತಿ, ಧರ್ಮ ಇಲ್ಲಿ ಇದ್ದಿದ್ದರೆ ಇವರು ರಕ್ತದ ಕೋಡಿಯನ್ನೇ ಹರಿಸುತ್ತಿದ್ದರೇನೋ. ದೇವಸ್ಥಾನ ಗೋಡೆಗೆ ಮಸೀದಿ, ಮಸೀದಿಯ ಗೋಡೆಗೆ ಗುರುದ್ವಾರ ಅದರ ಹಿಂದಿನ ಗೋಡೆಗೆ ಚರ್ಚು ನಮ್ಮಲ್ಲಿ ಮಾಮೂಲು ಎಂದು ಒಮ್ಮೆ ಹುಡುಗಿ ಎಲೆನಾಗೆ ಹೇಳಿದಾಗ ಅವಳು ಹೌಹಾರಿದಳು. ದೊಡ್ಡ ಪ್ರತಿಭಟನಕಾರರ ತಂಡ ರೈಲಿನ ಬೋಗಿಗೆ ಬಂದು ಒಬ್ಬೊಬ್ಬರಿಗೂ ಕರಪತ್ರ ಹಂಚಿ, ಬಿಳಿಯ ಬಣ್ಣವಾಗೋದು ಏಳು ಬಣ್ಣಗಳು ಸೇರಿ ಎಂದು ಬಹಳ ಮೆತ್ತಗೆ ಬಿಳಿಯರ ಸಾಮ್ರಾಜ್ಯವಲ್ಲ ಎಂದು ಹೇಳಿದಳು. ಅಲ್ಲಿದ್ದ ಎಲ್ಲರೂ ಕರಪತ್ರ ಬಿಸಾಕಲು ನೋಡುತ್ತಿದ್ದಾಗ, ಹುಡುಗಿ ಮಾತ್ರ ಮೆತ್ತಗೆ ಅದನ್ನ ಓದುತ್ತಿದ್ದಳು. “ಇಂದೂ” ಎಂದು ಒಬ್ಬಳು ಕೂಗಿದಳು. “ಇಂಡಿಯಾ, ಸೀ ಸೀ” ಎಂದು ಹುಡುಗಿ ತಲೆ ಅಲ್ಲಾಡಿಸಿದ ಮೇಲೆ, “ಶಾರುಖ್ ಖಾನ್, ಹ್ಯಾಂಡ್ ಸಮ್” ಎಂದಳು. ಅವನೇನೋ ತನ್ನ ಮಾವನ ಮಗ ಅನ್ನುವ ಹಾಗೆ ಹೇಳುತ್ತೇನೆ ಎಂದು ನಕ್ಕಳು. ಆಮೇಲೆ ಪರವಾಗಿಲ್ಲ, ನಾವು ಭಾರತೀಯರು ಎಲ್ಲಿ ಹೋದರೂ ಬಾಲಿವುಡ್ ಸಿನೆಮಾದ ಬಗ್ಗೆ ಹೇಳಿ ಬಚಾವ್ ಆಗಬಹುದು ಎಂದು ನಕ್ಕು ಸುಮ್ಮನಾದಳು.
ಎಲೆನಾ ಕಡೆಗೆ ತಿರುಗಿ, “ನಿಮ್ಮ ಸಿದ್ಧಾಂತವನ್ನೂ ತಪ್ಪು ಎನ್ನುವವರನ್ನ ಇದೀಗ ತಾನೆ ನೋಡಿದೆ, ಏಕ ಧರ್ಮ, ಏಕ ಚರ್ಮ ಬಣ್ಣ, ಏಕ ಭಾಷೆ ಎಂಬುದು ಈಗಿನ ಕಾಲದಲ್ಲಿ ಉಳಿಯುವುದಿಲ್ಲ, ನಾವು ಸಾವಿರಕ್ಕಿಂತ ಹೆಚ್ಚು ಭಾಷೆ ಮಾತಾಡುತ್ತೇವೆ, ಬೇರೆ ಬೇರೆ ವರ್ಣದವರು ನಾವು, ನಮ್ಮ ದೇಶಕ್ಕೆ ಧರ್ಮದ ಹಂಗೇ ಇಲ್ಲ, ಹೀಗಿದ್ದಾಗ ಒಂದೇ ರೀತಿಯಲ್ಲಿ ನಿಮ್ಮ ಹೋರಾಟ ತೆಗೆದುಕೊಂಡು ಹೋಗಿದ್ದೀರಲ್ಲ ಅದು ಎಷ್ಟು ಸಮಂಜಸ” ಎಂದು ಬಹಳ ಗಂಭೀರವಾಗಿ ಹುಡುಗಿ ಕೇಳಿದಳು.
ಎಲೆನಾ “ಮೈ ಫುಟ್, ಇವೆಲ್ಲಾ ಸ್ಪೇನಿನವರ ಕಿತಾಪತಿ, ಅವರೇ ಎಲ್ಲೆಲ್ಲೋ ವಸಾತುಶಾಹಿ ಮಾಡಿಕೊಂಡಿದ್ದು, ಎಲ್ಲೆಲ್ಲೋ ತಮ್ಮ ಜನರನ್ನ ಬಿಟ್ಟಿದ್ದು, ಅಲ್ಲಿನ ಭಾಷೆಯನ್ನ ಸರ್ವನಾಶ ಮಾಡಿ ಅವರ ಭಾಷೆಯನ್ನೇ ಬಿತ್ತಿದರೂ. ಈ ಆಫ್ರಿಕನ್ನರೂ ಅಷ್ಟೆ ಅವರ ಭಾಷೆ ಅವರ ಧರ್ಮ ಪರಿಪಾಲನೆ ಮಾಡಿಕೊಂಡು ಚೆನ್ನಾಗಿಯೇ ಇದ್ದರು, ಇವರ ವಸಾತುಶಾಹಿ ಬುದ್ಧಿ ಇವರನ್ನ ಎಲ್ಲೆಲ್ಲೋ ಹೋಗಿ ಗಬ್ಬೆಬ್ಬಿಸುವ ಹಾಳು ಕೆಲಸ ಬಂತು, ಹೋದರು ಅಲ್ಲಿ ಅವರ ಧರ್ಮ ಸಂಸ್ಕೃತಿಯನ್ನ ಹಾಳು ಮಾಡಿದರು. ಈಗ ನಾವು ನಿಮ್ಮದನ್ನು ಒಪ್ಪಿಕೊಂಡೆವು, ನೀವು ನಮ್ಮನ್ನ ಒಪ್ಪಿಕೊಳ್ಳಿ ನಮ್ಮ ದುಡ್ಡನ್ನ ನೀವು ಕೊಳ್ಳೆ ಹೊಡೆದಿರಿ ನಮ್ಮದನ್ನ ನಮಗೆ ವಾಪಸ್ಸು ಮಾಡಿ ಎಂದು ತಲೆ ಮೇಲೆ ಕೂತಿದ್ದಾರೆ, ಅದು ಹೇಗಾಗುತ್ತದೆ, ನಮ್ಮ ಪೂರ್ವಜರು ಮಾಡಿದ ತಪ್ಪಿಗೆ ನಾವ್ಯಾಕೆ ದಂಡ ತೆರಬೇಕು” ಎಂದು ಸಲೀಸಾಗಿ ತನ್ನ ಕೈಯನ್ನ ತೊಳೆದುಕೊಂಡಳು.

ಹುಡುಗಿ ಮಾತ್ರ, “ಇಲ್ಲಿ ಯಾರೂ ತುಂಬಾ ಒಳ್ಳೆಯವರಲ್ಲ” ಎಂದು ಅಂದುಕೊಂಡು, ಎಲೆನಾ “ಫ್ರಾಂಕೋ ಸತ್ತ ಮೇಲೆ ನಿಮಗೆ ಪೂರ್ಣ ಸ್ವಾಯತ್ತತೆ ಬಂತಲ್ವ ಯಾಕೆ ಈಗಲೂ ಹೊಡೆದಾಡುತ್ತಿದ್ದೀರಾ?” ಎಂದಾಗ, ಇದನ್ನ ಹೇಳಬೇಕೆಂದೇ ಕಾದಿದ್ದ ಎಲೆನಾ, “ನೋಡು ನಮ್ಮ ದೇಶವೇ ಬೇರೆ, ಸ್ಪೇನಿನವರು ನಮ್ಮನ್ನ ಬಲವಂತವಾಗಿ ಅವರ ದೇಶಕ್ಕೆ ಸೇರಿಸಿಕೊಂಡು ಹಿಂಸೆ ಕೊಟ್ಟಿದ್ದರು, ಮತ್ತೆ ನಮ್ಮನ್ನ ಹಾಗೆ ತುಳಿಯೋದಿಲ್ಲ ಎಂದು ಹೇಗೆ ನಂಬುತ್ತೀಯಾ, ನಮ್ಮ ಪ್ರದೇಶದಲ್ಲಿ ೧೯೯೯೨ರಲ್ಲಿ ಒಲಂಪಿಕ್ಸ್ ನಡೆಯಿತು, ಆ ಸಮಯದಲ್ಲಿ ಇಡೀ ಜಗತ್ತಿಗೆ ನಮ್ಮ ಸಮಸ್ಯೆ ಅರ್ಥವಾಯಿತು ಅದೇ ಸಮಯದಲ್ಲಿ ಸ್ಪೇನಿನ ಪಾರ್ಲಿಮೇಂಟಿನಲ್ಲಿ ಯಾವ ಪಕ್ಷದ ಸಂಪೂರ್ಣ ಮೆಜಾರಿಟಿ ಇರಲ್ಲಿಲ್ಲ, ಅದರ ಸಲುವಾಗಿ ನಮ್ಮ ಅಂದರೆ ಕತಲೂನ್ಯಾ, ಬಾಸ್ಕ್, ಕೆನರಿ ದ್ವೀಪದ ಪ್ರಾದೇಶಿಕ ಪಕ್ಷಗಳ ಸಹಾಯ ತೆಗೆದುಕೊಂಡು ಸರ್ಕಾರ ಮಾಡಿದ್ದರು. ಅದಕ್ಕೋಸ್ಕರ ನಮ್ಮ ಪ್ರಾದೇಶಿಕತೆಗೆ ಒತ್ತುಕೊಟ್ಟು ಅವರ ಸರ್ಕಾರ ಭದ್ರ ಮಾಡಿಕೊಂಡರು,
ಹೀಗೆ ಹಾಗೆ ಹೇಗೋ ತಳ್ಳಿಕೊಂಡು ಬರುವಷ್ಟರಲ್ಲಿ ೨೦೦೩ರ ಸರ್ಕಾರ ರಚನೆಯಲ್ಲಿ ಮತ್ತೆ ದೊಂಬರಾಟ ಶುರುವಾಯಿತು. ನಮ್ಮ ಕತಲೂನ್ಯಾ ಸರ್ಕಾರದಲ್ಲಿ ಒಂದಷ್ಟು ತಕರಾರಾಯಿತು ಎಡ ಬಲದ ಜಿದ್ದಾಜಿದ್ದಿ ಶುರುವಾಗಿ ನಮ್ಮ ಸ್ತಾಚ್ಯೂಟ್ ನ ದುರ್ಬಲಗೊಳಿಸುವ ಹುನ್ನಾರ ಶುರುವಾಯಿತು. ನಮ್ಮ ಜನರ ಪರವಾಗಿ ಕಾನೂನು, ಓದು ಮತ್ತು ಸಂಸ್ಕೃತಿ ಮತ್ತೆ ಹಳ್ಳ ಹಿಡಿಯಲು ಶುರುಮಾಡಿತು, ನಮ್ಮ ಮನೆಗೆ ನಾವೇ ಬೆಂಕಿ ಕೊಂಡ ಹಾಗಾಗಿತ್ತು ಅದರ ಜೊತೆ ಸ್ಪೇನಿನವರು ನಾವು ಇಬ್ಭಾಗವಾದಷ್ಟು ಅವರ ಬೇಳೆ ಬೇಯಲು ಸುಲಭವಾಗುತ್ತಿತ್ತು. ನಮ್ಮ ಸ್ವಾಯತ್ತತೆಯೆಂದು ಒಪ್ಪಿಕೊಂಡಿದ್ದ ಕೆಲವು ಕಂಡೀಷನ್ನುಗಳನ್ನು ಸ್ಪೇನಿನ ಮುಖ್ಯ ನ್ಯಾಯಾಲಯ ಕಿತ್ತುಹಾಕಿ ಮತ್ತೆ ಅದೇ ರಾಗ ಅದೇ ಹಾಡು ಹಾಡಲು ಶುರು ಮಾಡಿತ್ತು, ನಮ್ಮನ್ನ ಆಳುವ ಪಕ್ಷಕ್ಕೂ ನಮ್ಮ ಭಾಷೆ, ಪ್ರಾಂತ್ಯಕ್ಕಿಂತ ಅವರ ಅಧಿಕಾರ ದುಡ್ಡೇ ಮುಖ್ಯವಾಗಿತ್ತು ಅದಕ್ಕೋಸ್ಕರ ನಮ್ಮ ಸ್ವಾಭಿಮಾನವನ್ನೇ ಮಾರಿಕೊಳ್ಳುವ ಸ್ಥಿತಿಗೂ ಬಂದಿದ್ದರು. “…
ಹುಡುಗಿ ಸುಸ್ತಾದಳು, ಇದು ಬಗೆಹರಿಯದ ಸಮಸ್ಯೆ ಅದೇಕೆ ಎಷ್ಟೊಂದು ಕಷ್ಟ ಇವರಿಗೆ ಅಂದುಕೊಳ್ಳುವಷ್ಟರಲ್ಲಿ ಢಮ್ ಢಮ್ ಎಂದು ಗುಂಡಿನ ಸದ್ದು ಕೇಳಲು ಶುರುಮಾಡಿತು, ಚೆಲ್ಲಾಪಿಲ್ಲಿಯಾಗಿ ರೈಲು ನಿಲ್ದಾಣದಲ್ಲಿ ಓಡಿದರು…
“ಎಲೆನಾ ಎಲೆನಾ” ಎಂಬ ಕೂಗು ಅವಳ ಕಿವಿಗೇ ಕಡಿಮೆ ಕೇಳಲು ಆರಂಭಿಸಿತು.. ಕಣ್ಣು ಮಂಜಾಯಿತು…
ಮೇಘನಾ ಸುಧೀಂದ್ರ ಅಂಕಣ: 'ಢಮ್ ಢಮ್' ಎಂದು ಗುಂಡಿನ ಸದ್ದು ಕೇಳಲು ಶುರುಮಾಡಿತು
ನಿಮಗೆ ಇವೂ ಇಷ್ಟವಾಗಬಹುದು…





ಚೆನ್ನಾಗಿದೆ