ಮೆಹಬೂಬ್ ಮಠದ ನೋಡಿದ ‘ಡೇರ್ ಡೆವಿಲ್ ಮುಸ್ತಾಫಾ’

ಮೆಹಬೂಬ್ ಮಠದ

ಮನುಷ್ಯ ಪ್ರೇಮದ ರೂಪಕ ‘ಡೇರ್ ಡೆವಿಲ್ ಮುಸ್ತಾಫಾ’

ನನಗೆ ಸಿನೆಮಾ ಎಂದರೆ ವಿಪರೀತ ಹುಚ್ಚು ವಾರಕ್ಕೆ ಕನಿಷ್ಠ ಒಂದಾದರೂ ಸಿನೆಮಾ ನೋಡದಿದ್ದರೆ ನನಗೆ ಆ ವಾರ ಸಂಪನ್ನವಾಗುವುದಿಲ್ಲ. ಈ ವಾರವಂತು ಹಬ್ಬದೂಟದಂತೆ ಸಂಪನ್ನವಾಯಿತು ಅದಕ್ಕೆ ಕಾರಣ ಡೇರ್ ಡೆವಿಲ್ ಮುಸ್ತಾಫಾ ಎಂಬ ಮನುಷ್ಯ ಪ್ರೇಮದ ರೂಪಕದಂತಿರುವ ಸಿನೆಮಾ. ಜಿ ಎನ್ ಮೋಹನ್ ಸರ್ ಹಾಗೂ ಮಂಸೋರೆ ಸರ್ ರವರ ಬರಹಗಳನ್ನು ಓದಿದ ಮೇಲಂತೂ ಈ ಚಿತ್ರ ನೋಡುವ ಕುತೂಹಲ ಇಮ್ಮಡಿಯಾಯಿತು ಆ ಕಾರಣಕ್ಕೆ ಬೆಂಗಳೂರಿನ ಸಂತೋಷ ಚಿತ್ರಮಂದಿರದಲ್ಲಿ ಕುಟುಂಬ ಸಮೇತನಾಗಿ ನಿನ್ನೆ ನೋಡಿದೆ. ಕನ್ನಡದ ಓದುಗರನ್ನು ಇನ್ನಿಲ್ಲದಂತೆ ಆವರಿಸಿರುವ ಪೂಚಂತೇ ರವರ ಕತೆಯನ್ನು ಸಶಕ್ತವಾಗಿ ಪುಟದಿಂದ ಪರದೆಗೆ ತರುವಲ್ಲಿ ನಿರ್ದೇಶಕ ಶಶಾಂಕ್ ಸೋಗಾಲ ರವರು ಗೆದ್ದಿದ್ದಾರೆ ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಭರವಸೆಯ ನಿರ್ದೇಶಕ ದೊರೆತಿದ್ದಾರೆ.

ತೇಜಸ್ವಿ ರವರ ಸಂದರ್ಶನದ ತುಣಿಕಿನಿಂದ ಆರಂಭವಾಗುವ ಚಿತ್ರ ನಮ್ಮನ್ನು ನೇರವಾಗಿ ಅಬಚೂರಿನ ಕಾಲೇಜಿನ ಅಂಗಳಕ್ಕೆ ಕರೆದೊಯ್ಯುತ್ತದೆ ಅಲ್ಲಿನ ಲವಲವಿಕೆ, ಕಾಲೇಜು ಹುಡುಗರ ತುಂಟಾಟ, ಮೇಷ್ಟ್ರುಗಳ ಫಜೀತಿ, ಅಯ್ಯಾಂಗಾರಿ ಎಂಬ ಅಮರ ಪ್ರೇಮಿಯ ಒನ್ ಸೈಡ್ ಲವ್, ಸ್ನಿಗ್ಧ ಸೌಂದರ್ಯದ ಪ್ರತೀಕದಂತಿರುವ ರಮಾಮಣಿಯ ಹಾಡು, ಅಯ್ಯಾಂಗಾರಿ ಪಟಾಲಮ್ಮಿನ ಮೆರವಣಿಗೆಯ ಜೊತೆ ಜೊತೆಗೆ ಕ್ಲಾಸ್ ರೂಮಿನ ದೃಶ್ಯಗಳನ್ನು ನೋಡುತ್ತ ಮೈಮರೆತ ಪ್ರೇಕ್ಷಕರಿಗೆ ಕಾಲೇಜಿಗೆ ಸವಾಲಾಗಿ ನಿಂತ ಹೆಸರನ್ನು ಪ್ರಿನ್ಸಿಪಾಲರು ಡಿಕೋಡ್ ಮಾಡುವ ಮೂಲಕ ಡೇರ್ ಡೆವಿಲ್ ಮುಸ್ತಾಫಾನ ಪ್ರವೇಶವಾಗುತ್ತದೆ ಅಲ್ಲಿಂದ ಚಿತ್ರ ಮತ್ತಷ್ಟು ಕುತೂಹಲದಿಂದ ನೋಡಿಸಿಕೊಂಡು ಹೋಗುತ್ತದೆ. “ನಾನು ಯಾರೂ ಅಂತ ಗೊತ್ತು ಇಲ್ಲದಿದ್ದಾಗಲೂ ನನ್ನ ದ್ವೇಷ ಮಾಡೋಕೆ ಶುರು ಮಾಡಿದ್ರು ಈಗ ಗೊತ್ತಾದ ಮೇಲೂ ಮಾಡ್ತಾ ಇದಾರೆ ಯಾಕೆ ಹೀಗೆ?” ಅಂತ ಮುಸ್ತಾಫಾ ನೊಂದುಕೊಂಡು ರಮಾಮಣಿ ಗೆ ಕೇಳುವ ಪ್ರಶ್ನೆ ಎಲ್ಲರದೆಯನ್ನು ಕಲಕುತ್ತದೆ. ಸಂಬಂಧವೇ ಇಲ್ಲದಿದ್ದರೂ ಅಯ್ಯಂಗಾರಿ ಯಾಕೆ ಮುಸ್ತಾಫಾನನ್ನು ಅಷ್ಟೊಂದು ಬಲವಾಗಿ ದ್ವೇಷಿಸುತ್ತಾನೆ? ರಮಾಮಣಿಯ ಪತ್ರ ಎಬ್ಬಿಸುವ ಬಿರುಗಾಳಿ ಯಾವುದು? ಕಾಲೇಜು ಹುಡುಗರು ಕ್ರಿಕೆಟ್ ಗೆಲ್ತಾರಾ? ಅಯ್ಯಂಗಾರಿ ಮತ್ತು ಮುಸ್ತಾಫಾ ಒಂದಾಗ್ತಾರಾ? ಎನ್ನುವ ಪ್ರಶ್ನೆಗಳಿಗೆ ಸಿನೆಮಾ ನೋಡಲೇ ಬೇಕು. ಕ್ರಿಕೆಟ್ ಆಟದ ದೃಶ್ಯಗಳನ್ನು ನೋಡುವಾಗ ಇಡೀ ಚಿತ್ರಮಂದಿರ ಸೂಜಿ ಬಿದ್ದರೂ ಸದ್ದಾಗುವಷ್ಟು ನಿಶ್ಯಬ್ದವಾಗಿತ್ತು. ಈ ಸಿನೆಮಾದ ಇನ್ನೊಂದು ಹೆಚ್ಚುಗಾರಿಕೆ ಏನೆಂದರೆ ಇಲ್ಲಿನ ಯಾವ ಪಾತ್ರಗಳನ್ನೂ ಚಿಕ್ಕದು-ದೊಡ್ಡದು ಅಂತ ವಿಂಗಡಿಸಲಾಗುವುದಿಲ್ಲ. ಯಾವ ಪಾತ್ರಧಾರಿಗಳೂ ಇದರಲ್ಲಿ ನಟಿಸಿಲ್ಲ ಬದಲಾಗಿ ಜೀವಿಸಿದ್ದಾರೆ.

ಪ್ರತಿಯೊಬ್ಬ ಪಾತ್ರಧಾರಿಗಳು ಥೇಟ್ ತೇಜಸ್ವಿ ರವರ ಪಾತ್ರಗಳಂತೆ ನಮ್ಮನ್ನು ಸಿನೆಮಾ ಮುಗಿದ ಮೇಲೂ ಕಾಡುತ್ತಾರೆ ಆ ಲೆಕ್ಕದಲ್ಲಿ ಇದು ಕಾಡುವ ಸಿನೆಮಾ. ಈ ನೆಲ ಯಾವತ್ತಿದ್ದರೂ ಸರ್ವಜನಾಂಗದಶಾಂತಿಯತೋಟ ವೆಂಬ ಸತ್ಯವನ್ನು ನೋಡುಗರ ಹೃದಯದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡುವಲ್ಲಿ ಚಿತ್ರ ಭರ್ಜರಿಯಾಗಿ ಗೆದ್ದಿದೆ. ಮೈಸೂರು ದೊರೆಯೇ…. ಎನ್ನು ಹಾಡಿನಲ್ಲಿ ಬಹಳ ವರ್ಷಗಳ ನಂತರ ಅಣ್ಣಾವ್ರನ್ನು ನೋಡಿ ಪ್ರೇಕ್ಷಕರು ಹುಚ್ಚೆದ್ದು ಸಿಳ್ಳೆ-ಚಪ್ಪಾಳೆ ಹಾಕಿದ್ದಂತು ಮರೆಯು ಹಾಗೇ ಇಲ್ಲ. ಇಂತಹ ಅತ್ಯಧ್ಭುತ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತ ಡಾಲಿ ಧನಂಜಯರವರಿಗೆ ಧನ್ಯವಾದಗಳು.

ನಿರ್ದೇಶಕ ಶಶಾಂಕ್ ಸೋಗಾಲ, ಮಂಡ್ಯ ರಮೇಶ್, ಎಮ್.ಎಸ್ ಉಮೇಶ್, ಸುಂದರ್, ಈ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡ #ಪೂಚಂತೇ ಅಭಿಮಾನಿಗಳಿಗೆ ಅಭಿನಂದನೆಗಳು. ಇದು ನೋಡಲೇ ಬೇಕಾದ ಸಿನೆಮಾ ಅದರಲ್ಲೂ ವಿಶೇಷವಾಗಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ದಯವಿಟ್ಟು ಚಿತ್ರ ಮಂದಿರಗಳಿಗೆ ಹೋಗಿ ನೋಡಿ ಅದರಿಂದ ಮತ್ತಷ್ಟು ಅಪರೂಪದ ಕತೆಗಳನ್ನು ಪರದೆ ಮೇಲೆ ತರಲು ಉಳಿದವರಿಗೆ ಪ್ರೇರಣೆಯಾಗುತ್ತದೆ. ವಿಸ್ಮಯ ಕನ್ನಡ ಕಥಾಲೋಕದ ಅಡಿಯಲ್ಲಿ ಕನ್ನಡ ಅಸ್ಮಿತೆಯ ಸಿನೆಮಾಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡುವಂತಾಗಲಿ.
ಜೈ ಕನ್ನಡ
ಜೈ ಕನ್ನಡಿಗ

‍ಲೇಖಕರು avadhi

May 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: