ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೆಹಬೂಬ್ ಮಠದ ಓದಿದ ‘ಮರಳಿ ಮನ ಸಾಗಿದೆ’

ಚೌಕಟ್ಟಿಗೆ ಸಿಗದ ತೇವವಾದ ಬರಹಗಳು

ಮೆಹಬೂಬ್ ಮಠದ

*

ಕೃತಿ – ಮರಳಿ ಮನ ಸಾಗಿದೆ

ಲೇಖಕರು – ಪಿ.ಎಸ್. ಅಮರದೀಪ್

ಪ್ರಕಾಶನ – ಅನ್ನದಾನೇಶ್ವರ ಶಿಕ್ಷಣ ಸೇವಾ ಟ್ರಸ್ಟ್ (ರಿ)

ಬೆಲೆ – 199

ಪುಟಗಳು – 128

ಸಂಪರ್ಕ – 81520 72757

*

ಹೊಸ ಕನಸುಗಳ ಜಾಡು ಹಿಡಿಯಲು ಕಾದಂತಿರುವ ಕಣ್ಣುಗಳನ್ನು ದಣಿಸುವ ಸಲುವಾಗಿ ಹೆಗಲ ಮೇಲೆ ಕ್ಯಾಮರಾ ಹೊತ್ತುಕೊಂಡು ಚಿರತೆಯಂತೆ ಧುತ್ತನೆ ಎಲ್ಲೋ ಹೊರಟು ಬಿಡುವ, ಪುಸ್ತಕ ಮತ್ತು ಗೆಳೆಯರ ಒಡನಾಟದ ಮಿಡಿತಕ್ಕೆ ಬಿಸಿ ಜೋಳದ ರೊಟ್ಟಿಯ ಮೇಲಿನ ಬೆಣ್ಣೆ ಮುದ್ದೆಯಂತೆ ಕರಗುವ, ವಯಸ್ಸು ಮತ್ತು ಆಹ್ಲಾದಕರ ಬದುಕಿನ ಕುರಿತ ಮಿಥ್ಯಗಳನ್ನು ತುಂಗಭದ್ರೆಯ ಸೆಳೆವಿನಲ್ಲಿ ತೇಲಿ ಬಿಟ್ಟಿರುವ, ಮೆದುಳು ಮತ್ತು ಹೃದಯದ ಭಾರವನ್ನು ಬರಹಗಳ ಸಾಲುಗಳಲ್ಲಿ ಇಳಿಸಿ ಹಗುರಾಗುವ ವಿದ್ಯೆ ಒಲಿಸಿಕೊಂಡಿರುವ ಹಾಗೂ ಕೆಲವೊಮ್ಮೆ ನಿಷ್ಟುರ ಕಿಡಿಗಳಿಂದಲೂ ಹತ್ತಿರವಾಗುವ ಬಹುಮುಖ ಪ್ರತಿಭೆಯ ಲೇಖಕ ಪಿ.ಎಸ್. ಅಮರದೀಪ್ ಅವರು ಜನಪ್ರಿಯ ಆನ್ಲೈನ್ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪತ್ರಿಕೆಯಾದ ‘ಅವಧಿ’ ಮೂಲಕ ಹಲವಾರು ಓದುಗರನ್ನು ತಲುಪಿದವರು. ಮತ್ತೊಂದು ಆನ್ಲೈನ್ ಪತ್ರಿಕೆಯಾದ ‘ಪಂಜು’ ಸಹ ಇವರ ಹಲವು ಬರಹಗಳನ್ನು ಕನ್ನಡಿಗರಿಗೆ ತಲುಪಿಸಿದೆ. ಇದಲ್ಲದೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನ ಹಾಗೂ ಕವಿತೆಗಳು ಪ್ರಕಟಗೊಂಡಿವೆ. ಈಗ ತಮ್ಮ ಮೊದಲ ಕೃತಿ ‘ಮರಳಿ ಮನ ಸಾಗಿದೆ’ ಹಿಡಿದುಕೊಂಡು ಕನ್ನಡ ಓದುಗರ ಮನಸಿನಲ್ಲಿ ಶಾಶ್ವತ ನೆಲೆ ಕಂಡುಕೊಳ್ಳುವ ತಯಾರಿಯಲ್ಲಿ ಪಿ.ಎಸ್. ಅಮರದೀಪ್ ಅವರಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ತಾಲೂಕು ಘಟಕದಿಂದ ನೀಡಲಾಗುವ ‘ದಿ. ಮರಿಗೌಡ ಮಲ್ಲನಗೌಡರ ದತ್ತಿ ಪ್ರಶಸ್ತಿ’ಗೆ ಈ ಕೃತಿ ಭಾಜನವಾಗಿರುವುದು ಅವರ ಬರಹದ ಮೇಲಿನ ಭರವಸೆಯನ್ನು ಹೆಚ್ಚಿಸಿದೆ.

“ಈ ಕೃತಿಯಲ್ಲಿ 33 ಲಘು ಲೇಖನಗಳಿವೆ ಕೆಲವು ಕಟ್ಟೆಯ ಮೇಲೇ ಕುಳಿತು ಮಾತಾಡಿ ಹಗುರಾದಂಥ ಮಾತುಗಳು, ಕೆಲವು ಪ್ರಬಂಧಗಳ ಮೋಡಿಗೆ ಸಿಕ್ಕಿದಂಥವು ಇನ್ನೂ ಕೆಲವು ಆಪ್ತವಾದ ಆತ್ಮಕಥನ ಶೈಲಿಗೂ ಒಗ್ಗಿಕೊಂಡಂತಿವೆ. ಇವು ಹೀಗೆ ನಿರ್ದಿಷ್ಟ ಫ್ರೇಮಿನಲ್ಲಿ ಇಲ್ಲದಿರುವುದೇ ಈ ಲೇಖನಗಳ ಸೊಗಸು”. ಎಂದು ಮುನ್ನುಡಿ ಬರೆದ ಹಿರಿಯ ಸಾಹಿತಿ ಈಶ್ವರ ಹತ್ತಿ ಅವರು ತಮ್ಮ ವಿಮರ್ಶೆಯ ನೋಟವನ್ನು ದಾಖಲಿಸಿದ್ದಾರೆ. “ನಮ್ಮ ಸುತ್ತಮುತ್ತ ನಿತ್ಯ ನಡೆಯುವ, ಹಿಂದೆ ನಡೆದಿರಬಹುದಾದ ಘಟನೆಗಳೇ ಇಲ್ಲಿ ಅತ್ಯಾಕರ್ಷಕ ಬರವಣಿಗೆ ಮೂಲಕ ಕಣ್ಣೆದುರು ನಿಲ್ಲುತ್ತವೆ. ನಾವು ಓದುತ್ತಿಲ್ಲ, ಅಲ್ಲಿ ಬರುವ ಘಟನೆಗಳಲ್ಲಿ ನಾವೂ ಪಾತ್ರವಾಗಿದ್ದೇವೆ ಎಂಬ ಭಾವನೆಯನ್ನು ಈ ಪುಸ್ತಕ ಮೂಡಿಸುತ್ತದೆ” ಎಂದು ಹೆಸರಾಂತ ಪತ್ರಕರ್ತ ಚಾಮರಾಜ ಸವಡಿ ಅವರು ಬೆನ್ನುಡಿಯ ಮಾತುಗಳಲ್ಲಿ ಹೇಳಿದ್ದಾರೆ.

ಮುಕ್ಕೋಟಿ ದೇವತೆಗಳು ಆಶೀರ್ವಾದಿಸುತ್ತಿರುವ, ಸಿನಿಮಾ ನಟ ನಟಿಯರು ಮುಗಳ್ನಗುತ್ತಿರುವ, ಯಾರದ್ದೋ ಮದುವೆ ಸಂಭ್ರಮ ಮುಗಿಲು ಮುಟ್ಟಿ ನಳನಳಿಸುತ್ತಿರುವ, ವಯಸ್ಸಿಗೆ ಬಂದ ಹೆಣ್ಣಿನ ಸೌಂದರ್ಯ ಸರೆಹಿಡಿಯುತ್ತಿರುವ, ಜಾತ್ರೆಯ ಗದ್ದಲದ ನಡುವೆ ಧಿಮಾಕಿನ ಪ್ರದರ್ಶನ ಮಾಡುತ್ತಿರುವ, ಯಾರೋ ಪುಣ್ಯಾತ್ಮರ ಸಾವಿನ ನಂತರದ ನೆನಪಿಗಾಗಿ ಇಟ್ಟುಕೊಂಡಿರುವ ಹೀಗೆ ಹತ್ತು ಹಲವು ನೆನಪುಗಳ ನೂರಾರು ಬಣ್ಣಗಳ ಫೋಟೋಗಳಿಗೆ ಚೆಂದದ ಫ್ರೇಮು ಹಾಕಿಕೊಟ್ಟು ಅದರ ಘನತೆಯನ್ನು ಮತ್ತು ಸೌಂದರ್ಯವನ್ನು ಹೆಚ್ಚುಸುತ್ತಿದ್ದ ‘ಜನತಾ ಫೋಟೋ ಫ್ರೇಮ್ ವರ್ಕ್ಸ್’ ನ ಮಾಲೀಕರಾದ ಲೇಖಕರ ತಂದೆ ಯಾವಾಗಲೂ ಸಂಸಾರದ ಚೀಲ ತುಂಬಿಸುವ ಚಿಂತೆಯಲ್ಲೇ ಮುಳುಗಿ ತಮ್ಮ ಬದುಕಿನ ಹೊಳಪನ್ನು ಕಳೆದುಕೊಂಡವರು. ಊರು ಮಂದಿಯ ಫೋಟೋಗಳಿಗೆಲ್ಲ ಫ್ರೇಮು ಕಟ್ಟಿ ಬೆವರು ಒರೆಸಿಕೊಳ್ಳುತ್ತಿದ್ದ ಅವರು ತಮ್ಮ ಹಿರಿಯ ಮಗನಾದ ಲೇಖಕರ ಜೊತೆ ಒಂದೇ ಒಂದು ಫೋಟೋದಲ್ಲಿಯೂ ದೈವಿಕ ನಗುವನ್ನು ಚೆಲ್ಲದೇ ನೆನಪುಗಳ ಚೌಕಟ್ಟಿನಿಂದ ಹೊರಗೆ ಉಳಿಯುತ್ತಾರೆ. ಫೋಟೋದಲ್ಲಿ ಜೊತೆಯಾಗದ ಅಪ್ಪನ ಬಡತನ ಮತ್ತು ಸಂಕಟದ ಅಕ್ಷರಗಳನ್ನು ಮುಟ್ಟುವಾಗ ಹೃದಯ ತೇವವಾಗುತ್ತವೆ. ಈ ಪುಸ್ತಕದ ಹಲವಾರು ಬರೆಹಗಳಲ್ಲಿ ಅಪ್ಪನ ಗೈರುಹಾಜರಿ ಎಂಬುದು ಸುಪ್ತವಾಗಿ ಕಾಡುತ್ತಲೇ ಇರುತ್ತದೆ. ಬೀದಿ ಬದಿಯ ಅಂಗಡಿಯಲ್ಲಿನ ಹಸಿವಿನ ಹನಿಗಳಿಂದ ಹವಾನಿಯಂತ್ರಿತ ಕೋಣೆಯ ಅಧಿಕಾರಿ ಕುರ್ಚಿಗೆ ಲೇಖಕರ ಬದುಕು ಬಡ್ತಿ ಹೊಂದಿದರೂ ಅಪ್ಪನ ಕಣ್ಣುಗಳಲ್ಲಿದ್ದ ನೋವಿನ ಸಾಗರದ ಮೊರೆತ ಅವರನ್ನು ಕಾಡುತ್ತಲೆ ಇರುತ್ತದೆ. ಅವರಿಗಷ್ಟೆ ಅಲ್ಲ ಇದನ್ನು ಓದುವಾಗ ಅಪ್ಪ ಎನ್ನುವ ದೈವ ಓದುಗರನ್ನೂ ಕಾಡುತ್ತದೆ.

‘ಆಟಿಸಂ’ ಹೆಸರು ಕೇಳಿದರೆ ಸಾಕು ಜಗತ್ತು ಭಯದಿಂದ ನಡುಗತ್ತದೆ. ಕಣ್ಣಲ್ಲಿ ಕಣ್ಣಿಟ್ಟು ನೋಡದ, ಯಾರ ಭಾವನೆಗಳಿಗೂ ಸ್ಪಂದಿಸದ, ಒಂಟಿತನದ ವರ್ತುಲದಲ್ಲಿಯೇ ಗಿರಕಿ ಹೊಡೆಯುತ್ತ ಮುಳುಗಿದ, ಬೇಕು ಅಂದಿದ್ದನ್ನು ತಂದು ಕೊಡಲೇಬೇಕೆಂಬ ಹಂಬಲದ ಇನ್ನೂ ಘೋರವೆಂದರೆ ಹಲವು ವರ್ಷಗಳವರೆಗೆ ಅಸಲು ಮಾತೇ ಬಾರದಂತಹ ಬಂದರೂ ಸ್ಪಷ್ಟವಾಗಿ ಹೇಳದಂತಹ ಲಕ್ಷಣ ಹೊಂದಿರುವ ಈ ಆಟಿಸಂ ಕಾಯಿಲೆ ಜಗತ್ತಿನ ಸಾವಿರಾರು ಮಕ್ಕಳ ಬದುಕನ್ನು ಅದು ಹೇಗೆ ನರಕ ಮಾಡಿದೆ ಎಂಬುದನ್ನು ಈ ಕೃತಿ ಸಮರ್ಥವಾಗಿ ಹೇಳುತ್ತದೆ. ಇದನ್ನು ಬೇಗ ಪತ್ತೆ ಹಚ್ಚದಿದ್ದರೆ ಆಗುವ ಅನಾಹುತಗಳನ್ನು ಮತ್ತು ಅದೇ ಆಟಿಸಂನ ತೆಕ್ಕೆಯಿಂದ ತಮ್ಮ ಮಗನನ್ನು ಬಿಡಿಸಿಕೊಂಡ ಬಗೆಯನ್ನು ಒಬ್ಬ ಅಪ್ಪನಾಗಿ ಲೇಖಕರು ದಾಖಲಿಸುವಾಗ ಕಣ್ಣೀರಾಗುತ್ತಾರೆ.

ಮೈಕು ಸಿಕ್ಕಿದರೆ ಸಾಕು ಮುಂದೆ ಕುಳಿತವರ ಎದೆ ಮೇಲೆ ಭಾಷಣದ ಬೆಂಕಿ ಸುರಿಯುವ ಸಮಯದ ಪರಿಜ್ಞಾನವಿಲ್ಲದ ಭಾಷಣಕೋರರ ಮನಃಸ್ಥಿತಿಯಿಂದ ಸಮಾರಂಭಗಳು ಕೊಲೆಯಾಗುತ್ತಿರುವ ಪರಿಯನ್ನು ವಿನೋದದ ಹಿನ್ನೆಲೆಯಲ್ಲಿ ಹೇಳುತ್ತಲೇ ಜನಸಾಮಾನ್ಯರ ಬದುಕು ಮತ್ತು ವ್ಯಕ್ತಿತ್ವವನ್ನು ಗೌರವಿಸುವುದನ್ನು ಗಣ್ಯಮಾನ್ಯರು ಕಲಿಯಬೇಕೆಂದು ಒತ್ತಾಯಿಸುತ್ತಾರೆ. ಮತ್ತೊಂದು ಪ್ರಕರಣದಲ್ಲಿ ಸಮಾಜಮುಖಿ ಕೆಲಸ ಮಾಡುವ ಮನಸಗಳು ನಡೆಸುವ ಕಾರ್ಯಕ್ರಮಗಳ ವೇದಿಕೆಯನ್ನು ಸನ್ಮಾನದ ಹೆಸರಲ್ಲಿ ದುರ್ಬಳಕೆ ಮಾಡಿಕೊಳ್ಳುವ ಸಾಂಸ್ಕೃತಿಕ ಕಳ್ಳರ ಮುಖವಾಡವನ್ನು ಹೊರಗೆ ಎಳೆಯುತ್ತಾರೆ. ಫೋನು, ಬೈಕು, ಕಾರು, ಫ್ರಿಡ್ಜು, ಮನೆ ಇನ್ನೂ ಮುಂತಾದವುಗಳಿಗಾಗಿ ಸಾಲ ಮಾಡಿ ಅತ್ತ ಶೋಕಿ ಮಾಡೋಕು ಆಗದೆ ಇತ್ತ ಇಷ್ಟಬಂದಂತೆ ಬದುಕಲೂ ಆಗದೆ ಸಾಲದ ಜೇಡರ ಬಲೆಗಳಲ್ಲಿ ಸಿಲುಕಿ ಒದ್ದಾಡುತ್ತಿರುವವರ ಬವಣೆಗಳು ವರ್ತಮಾನದ ಕೊಳ್ಳುಬಾಕ ಸಂಸ್ಕೃತಿಯ ಕೋರೆಹಲ್ಲುಗಳ ಮೊನಚನ್ನು ಪರಿಚಯಿಸುತ್ತವೆ.

ನಾಡಿನ ಮಹತ್ವದ ಸಾಹಿತಿ ಕುಂವೀ ಅವರು ಹೇಳುವಂತೆ ಲೇಖಕರಲ್ಲಿ ಎರಡು ಬಗೆ ಹೆದ್ದಾರಿ ಲೇಖಕರು ಮತ್ತು ಒಳದಾರಿ ಲೇಖಕರು. ನಾವು ಸದಾ ಮನುಷ್ಯಪರ ಮತ್ತು ಜೀವಪರ ಇರುವ ಒಳದಾರಿ ಲೇಖಕರಾಗಬೇಕೆ ಹೊರತು ತಮ್ಮದೇ ಸುರಕ್ಷಿತ ವಲಯದಲ್ಲಿ ಕುಳಿತು ಮೋಜು ಮಾಡುವ ಹೆದ್ದಾರಿ ಲೇಖಕರು ಆಗಬಾರದು ಎಂದು ಕುಂವೀ ಹೇಳುತ್ತಾರೆ. ಈ ಕೃತಿಯಲ್ಲಿನ  ಹಿರಿಯ ಸಾಹಿತಿ ಹವಾಲ್ದಾರ್ ಕೃಷ್ಣಮೂರ್ತಿರಾವ್ ಮತ್ತು ಕನ್ನಡಕಧಾರಿ ಲೇಖಕರು ಈ ಸಾಲಿಗೆ ಸೇರುತ್ತಾರೆ. ಸಾಹಿತ್ಯ ಜನರ ಕಣ್ಣೀರು ಒರೆಸಬೇಕೆಂಬ ಆಶಯವನ್ನು ಈ ಕೃತಿ ಶಕ್ತಿಯುತವಾಗಿ ಹೇಳುತ್ತದೆ. ಮನೆಯಲ್ಲಿರುವ ಮುರಿದು ಸ್ಟೂಲು, ಹಳೆಯ ಫೋಟೋ, ದೇವರನ್ನು ಪೂಜಿಸಿದ ಹೂಗಳು, ಜೋಬಿನೊಳಗಿನ ಪರ್ಸು, ಕೈ ಮೇಲಿನ ಹಚ್ಚೆ, ಯಾರದ್ದೋ ಮನೆಯ ಮುಚ್ಚಿದ ಕಿಟಕಿ ಹೀಗೆ ಸುಮ್ಮನೇ ನಿರ್ಲಕ್ಷ್ಯ ಮಾಡಬಹುದಾದ ವಸ್ತು ವಿಷಯಗಳನ್ನೇ ಇಟ್ಟುಕೊಂಡು ಕಟ್ಟಿದ ಬರೆಹಗಳು ಗಂಭೀರವಾದ ಚಿಂತನೆಗಳನ್ನು ಹುಟ್ಟು ಹಾಕುತ್ತವೆ.

“ಕೂಡಿದಾಗ ಕೈ ಕೈ ಕುಲುಕುತ್ತಾರೆ

ಆಗಲೇ ಬೀಳ್ಕೊಳ್ಳಲು ಮತ್ತೆ ನುಲಿಯುತ್ತಾರೆ

ಮಿನಿಮಿನಿ ಕನಸುಗಳನ್ನಪ್ಪಿ

ಕರಕರಗುವ ತೋಳುಗಳಲ್ಲಿ

ಸುರಿಯುತ್ತಾರೆ ಚೋಕಲೀಟುನುಡಿ ಕೊರಡು ನಾಲಿಗೆಯಿಂದ

ಪದವಿ ಸಾಲಿನ ಮೇಲೆ ಕಾಲ ಹರವುತ್ತಾರೆ

ಮತ್ತೆ ಕಣ್ಣ ಮುಚ್ಚುತ್ತಾರೆ.” ( ಕವಿತೆ – ಧ್ರುವಧ್ಯಾಸ )

ಇವು ನಾಡಿನ ಪ್ರಸಿದ್ಧ ಕವಿ ಅರವಿಂದ ನಾಡಕರ್ಣಿ ಅವರ ‘ಅಜ್ಞಾತ’ ಕವನ ಸಂಕಲನದಲ್ಲಿರುವ ‘ಧ್ರುವಧ್ಯಾಸ’ ಕವಿತೆಯ ಸಾಲುಗಳು. ತಮ್ಮ ತಮ್ಮ ಬದುಕು ಚೆಂದವಾಗಿದ್ದರೆ ಸಾಕು ಮಿಕ್ಕವರು ಹಾಳಾಗಿ ಹೋಗಲಿ ಎಂದು ಬಯಸುವ, ಸದಾ ಜೊತೆಗೆ ಇರುತ್ತಲೇ ತಮಗಿಂತಲೂ ಒಳ್ಳೇ ಬದುಕನ್ನು ಕಟ್ಟಿಕೊಳ್ಳಲು ಹೊರಟವರ ಬೆನ್ನಿಗೆ ಚೂರಿ ಹಾಕುವ ಇಲ್ಲವೇ ಒಂದಲ್ಲ ಒಂದು ರೀತಿಯಲ್ಲಿ ಅವರಿಗೆ ಭೀಕರ ಸಮಸ್ಯೆಗಳನ್ನು ತಂದಿಡುವ ಒಳಮುಚುಗರ ಸಂಚನ್ನು ಬಯಲು ಮಾಡುವ ಕವಿತೆ ಇದು. ಇಂಥ ಗೋಮುಖವ್ಯಾಘ್ರರ ಜೊತೆಗೇ ಜೀವನ ಮಾಡಿದ ಲೇಖಕರ ಅನುಭವಗಳು ಓದುಗರದ್ದೂ ಆಗಿರಬಹುದು. ಬದುಕು ಕೊಡುವ ಪ್ರತಿ ಸವಾಲನ್ನೂ ತಾಳ್ಮೆಯಿಂದ ಗೆಲ್ಲುವ ಕಲೆ ರೂಢಿಸಿಕೊಂಡರೆ ನಮ್ಮನ್ನು ಯಾರಿಂದಲೂ ಸೋಲಿಸಲು ಆಗುವುದಿಲ್ಲ ಎಂದು ಬರಹಗಳು ಹೇಳುತ್ತವೆ. ಇಲ್ಲಿನ ಸಾಂಸಾರಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಔದ್ಯೋಗಿಕ ಅನುಭವಗಳ ಕಥನಗಳು ಓದುಗರನ್ನು ಸೆಳೆಯುತ್ತವೆ.

‍ಲೇಖಕರು avadhi

6 March, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading