ಮೆಮರಿ ಕಾರ್ಡ್ ಗೆ ಧಕ್ಕೆಯಾಗಿದೆ..

ಮೆಮರಿ ಕಾರ್ಡ್ ಗೆ ಧಕ್ಕೆಯಾಗಿದೆ..

sandhyarani

ಸಂಧ್ಯಾರಾಣಿ

pull a girlದಿನ ಮುಗಿಯುತ್ತಿತ್ತು, ಬೆಳಕು ಮಿಣಮಿಣ

ಮೊಬೈಲ್ ನ ಕಂಠದಲ್ಲಿ ಕ್ಷೀಣ ಉಸಿರಾಟ

ಅದರ ಎದೆಯಲ್ಲಿ ನಿರಂತರ ಹೊಕ್ಕಳಬಳ್ಳಿ

ಅಲ್ಲಿ ಎಲ್ಲವೂ ನಿತ್ಯ ಜನನ, ನಿತ್ಯ ಮರಣ

ಹೊಕ್ಕಳಬಳ್ಳಿಗೆ ಜೋತುಬಿದ್ದದ್ದು ಜೀವದ ಆಸೆಯಲ್ಲಿಯೇ

ಯಾವ ಗಳಿಗೆಯಲ್ಲಿ ಇಟ್ಟ ಹೆಜ್ಜೆ ತೊಡರಿತೋ

ಬಳ್ಳಿಕಡಿದು ಫೋನು ನೆಲಕ್ಕೆ

ಓಡಿಬಂದೆ, ಕೈಗೆತ್ತಿಕೊಂಡೆ, ಎದೆ ಬಡಿತ ನೋಡಿದೆ

ಇತ್ತು ಜೀವ ಇತ್ತು, ನೆಮ್ಮದಿಯ ನಿಟ್ಟುಸಿರಿಡುವುದರಲ್ಲಿ

ಬಿಳಿಹಾಳೆಯ ಮೇಲಿನ ಕರಿಬರಹ

ಮೆಮರಿ ಕಾರ್ಡ್ ಗೆ ಧಕ್ಕೆಯಾಗಿದೆ, ಫಾರ್ಮಾಟಿಸಿ ನಂತರ ಬಳಸಿ

 

ಸಾಧ್ಯವೇ ಹಾಗೆ ಎಲ್ಲವನೂ ಒತ್ತಿಟ್ಟು ಒರೆಸಿ

ಮತ್ತೆ ಸಿದ್ಧವಾಗುವುದು, ಹೊಸತನ್ನು ಕರೆಯಲು

ಶಿವತಾಂಡವದ ಜೊತೆಯಲ್ಲಿಯೇ ಲಲಿತೆಯ ಆಲಾಪ

12112155_10206272691830417_1931021503214485873_nಅಳಿಸಬಹುದೇ ಕಣ್ಣುಗಳ ಮೌನಸ್ಪರ್ಶ? ಅಂಗೈಯಲ್ಲಿ ಉಳಿದಿದೆ

ನಿನ್ನ ಕಣ್ಣೆವೆಗಳ ಕನಸು, ಕೊಡವಿಬಿಡಲೇ ಕೈಯನ್ನು

ಕತ್ತಿನ ಮೇಲೆ ಸುಳಿಯುವ ಬಿಸಿಉಸಿರ ವಿಳಾಸ ನನ್ನದೇ, ನಿನ್ನದೆ?

ಬರೆದದ್ದನ್ನು ಅಳಿಸಬಹುದು, ಅಂದಿದ್ದನ್ನು ಮರೆಯಬಹುದೆ

ಮೊಣಕಾಲೂರಿ ಕೈ ಚಾಚಿದ ದೈನ್ಯ, ಬೊಗಸೆಗೆ ಬಿದ್ದ ಸುಡುಕೆಂಡ

ಪದಗಳ ಜಾಣತನ, ಕೈಗಳಿಂದ ಜಾರಿದ ಬೆರಳುಗಳು

ತಾಕಿದ, ನೇವರಿಸಿದ, ಆವರಿಸಿದ ಎವೆಗಳು

ಮೆಮರಿ ಕಾರ್ಡಿಗೆ ಧಕ್ಕೆಯಾಗಿದೆ, ಫಾರ್ಮಾಟಿಸಬೇಕಿದೆ…. ಮತ್ತೊಮ್ಮೆ

 

ಏನೇನಿತ್ತು ನೆನಪಿನ ಸಂಚಿಯಲ್ಲಿ?  ತೆಗೆದಿಟ್ಟ ಚಿತ್ರ

ಒಂದು ಮಳೆಯಲ್ಲಿ ದಕ್ಕಿದ್ದ ಒದ್ದೆ ರಾಗದ ನೆನಪು,

ಕನಸಿನಲಿ ಕೇಳಿದ್ದ ಹಾಡು, ಮಡಿಲಲ್ಲಿ ಮಲಗಿದ್ದ ಜೋಗುಳ

ಅರ್ಧ ಬರೆದ ಕವಿತೆ, ಚರಣವಾಗದ ಒಂದು ಪಲ್ಲವಿ

ಎಷ್ಟೊಂದು ನಿನ್ನೆಗಳು ಒಂದು ಪುಟ್ಟ ಎದೆಯಲ್ಲಿ

ಸ್ಲೇಟಿನ ಬರಹವನ್ನು ಹೊಸ ಆರಂಭದ ಹುಮ್ಮಸಿನಲ್ಲಿ

ಅಳಿಸುತ್ತಿದ್ದ ಬಾಲ್ಯವೇ ಎಲ್ಲಿ ಕಳೆದುಹೋದೆ?

he is goneನೆಲಕ್ಕೆ ಕುಸಿದ ಎದೆಯ ಒಂದು ತಕ್ಕಡಿಯಲ್ಲಿ ನಿರಾಕರಣೆಗಳು

ಇನ್ನೊಂದು ತಟ್ಟೆಯಲಿ ಉಳಿದ ನಾಳೆಗಳು

ಈಗೀಗ ತಟ್ಟೆಗಳು ಯಾಕೆ ಹತ್ತಿರಾಗುತ್ತಿಲ್ಲ?

ಮೆಮರಿ ಕಾರ್ಡಿಗೆ ಧಕ್ಕೆಯಾಗಿದೆ, ಫಾರ್ಮಾಟಿಸಬೇಕಿದೆ…. ಮತ್ತೊಮ್ಮೆ

 

ಸಿಕ್ಕಬಹುದೆ ಬಿಡುಗಡೆ ಒದಗಿಬರದ ಆಣೆಭಾಷೆಗಳಿಂದ

ಕೊಡವಿಕೊಳ್ಳಬಹುದೆ ಬೆನ್ನಮೇಲಿನ ಹೊರೆಗಳಿಂದ

ಅಂಗಡಿಯವ ಹೇಳುತ್ತಾನೆ, ’ಎಲ್ಲಾ ಅಳಿಸಿಬಿಟ್ಟರೆ ಮತ್ತೆ

ಬಳಕೆಗೆ ಬಂದರೂ ಬರಬಹುದು. ಅಳಿಸುವುದಿಲ್ಲವೆಂದರೆ

ಬಳಸಲಾಗುವುದಿಲ್ಲ. ಹೋದದ್ದು ಬಿಡಿ, ಆದರೆ

ಬ್ಯಾಕ್ ಅಪ್ ಇಟ್ಟುಕೊಳ್ಳಬೇಕಿತ್ತಲ್ಲವೇ?’

ಎಲ್ಲಿ ಸಿಗಬಹುದು ಮಾರಾಯ ಭರವಸೆಗಳಿಗೆ ಬ್ಯಾಕ್ ಅಪ್

 

ಬಿದ್ದ ಫೋನು ಮುರಿಯದೆ, ಹನಿ ಕಣ್ಣು ಮೀರದೆ

ಆಕ್ರಂದನ ದನಿಯಾಗದೆ ನೆನಪುಗಳು ಸಾಯಬಹುದು

ಮೆಮರಿ ಕಾರ್ಡಿಗೆ ಧಕ್ಕೆಯಾಗಿದೆ, ಫಾರ್ಮಾಟಿಸಬೇಕಿದೆ…. ಮತ್ತೊಮ್ಮೆ

 

‍ಲೇಖಕರು admin

October 31, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sarala

    horaginadella sadya, olagiruvude shashwatha – Internal and external memory, alva sandhya 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: