ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂರು ಸಾವುಗಳಿಗೆ ಸಾಕ್ಷಿಯಾದ ಹುಲಿಗೆವ್ವನ ಹೊಲ..

ಬೇಲಿ-ಹೊಲ, ಸಾವು ಮತ್ತು ನಾನು

ಅಮರದೀಪ್ ಪಿ ಎಸ್

ಇಪ್ಪತ್ತೈದು ಮುವ್ವತು ವರ್ಷಗಳ ಹಿಂದೆ ನಮ್ಮ ಹಳ್ಳಿಯಲ್ಲಿ ಇದ್ದಂಥ ಹೊಲಗಳು, ನೀರಿನ ಸೆಲೆ, ಹಳ್ಳ, ತೋಟ, ಬಾವಿ, ಸರ್ಕಾರಿ ಶಾಲೆ, ಹಸಿರು ಬಣ್ಣದ ನಿಕ್ಕರು, ಬಿಳಿ ಅಂಗಿ, ಶಾಲೆ ಮುಂದೆ ನೀರಿನ ಕೈ ಪಂಪು, ದಿನ ಬೆಳಿಗ್ಗೆ ಶಾಲೆ ಶುರುವಾಗುವ ಮುನ್ನವೇ ಹುಡುಗರು ಬಂದು ಶಾಲೆಯ ಬೇಗ ತೆಗೆದು ಕಸ ಗುಡಿಸಿ ಮುಂದಿನ ಗಿಡಗಳಿಗೆ ಕೈ ಪಂಪು ಬೋರಿನಿಂದ ನೀರು ಹಾಕಿ, ಹೆಡ್ ಮಾಸ್ತರರ ರೂಮಿನಲ್ಲಿ ಟೇಬಲ್ ಕ್ಲೀನ್ ಮಾಡಿ ಬೋರ್ಡ್ ಒರೆಸಿ ದಿನಾಂಕ ಬರೆದು , ಬೆಲ್ ನಂತರ ಶಾಲಿವಾಹನ ಶಕೆ …… ಸಾವಿರದ …..ಮತ್ತು ಸುಭಾಷಿತ ಓದಿ, ಮಧ್ಯಾಹ್ನ ಸರಬರಾಜಾಗುತ್ತಿದ್ದ ಗೋದಿ ಉಪ್ಪಿಟ್ಟು ತಿನ್ನಲು ಸಾಲು ನಿಂತು, ತಿಂದು ಬಾಯಾರಿಕೆಗೆ ಬೋರಿನತ್ತ ಅಲ್ಲಿ ರಶ್ ಜಾಸ್ತಿ ಆದರೆ ಶಾಲೆಯ ಹಿಂದಿನ ಹುಲಿಗೆವ್ವನ ಹೊಲದಲ್ಲಿ ಬಾವಿಯಿಂದ ಪಂಪ್ ಸೆಟ್ ಮೂಲಕ ಹೊಲದ ಬೆಳೆಗೆ ನೀರು ಹಾಯಿಸಿದ ದಾರಿಗುಂಟ ಹರಿದ ನೀರಿನ ತಿಳಿಯಲ್ಲಿ ಕೈ ಅದ್ದಿ ತೊಳೆದು, ಬಿಸಿಲ ಝಳಕ್ಕೆ ಕಪ್ಪಿಟ್ಟು ಕಿತ್ತ ಮುಖದ ಬೆವರ ತೊಳೆದು ನೀರು ಕುಡಿದು ತಿರುಗ ಶಾಲೆಗೇ …..
ಓಹ್। ಹಾಗೆ ಎಷ್ಟು ಚೆಂದವಿತ್ತು ಶಾಲೆಯ ಬದುಕು.ಒಮ್ಮೊಮ್ಮೆ ಪಕ್ಕದ ಹೊಲದ ಬೇಲಿ ದಾಟಿ ಹಾವುಗಳು ಶಾಲೆಯೊಳಗೆ ಕಿಟಕಿಯಿಂದ ಬಂದು ದರ್ಶನ ನೀಡುತ್ತಿದ್ದವು. ಮಾಸ್ತರರು ಎಲ್ಲಾ ಮಕ್ಕಳನ್ನು ಸಮಾಧಾನಿಸಿ ಅದೇ ಕೊಠಡಿಯಲ್ಲಿ ದಿಸ್ ಇಸ್ ಅ ಬಾಲ್… ಥಟ್ ಇಸ್ ಎ ಬಾಲ್. ದಿಸ್ ಇಸ್ ಎ ಪೀಸ್ ಆಫ್ ಚಾಕ್ ಎಂದು ಜೋರಾಗಿ ಹುಡುಗರಿಂದ ಹೇಳಿಸುತ್ತಾ ಕಿಟಕಿಯಿಂದ ಹೊಲದ ಬೇಲಿ ದಾಟಿ ನುಸುಳುವ ಹಾವುಗಳ ದಾರಿಯನ್ನು ಬದಲಿಸುತ್ತಿದ್ದರು. ಹೊಲದಲ್ಲಿ ಏನು ಬೆಳೆ ಹಾಕಿದ್ದರೆಂದು ನೋಡಿ ಬೇಲಿ ದಾಟುವ ಹುಡುಗರ ದಂಡು ಹೊಲದ ಮಧ್ಯೆ ಜಾಸ್ತಿಯಾಯಿತೆಂದರೆ ಹೊಲದ ಯಾವುದೋ ಮೂಲೆಯಿಂದ ಒಂದು ಧ್ವನಿ ಅಟ್ಟಿಸಿಕೊಂಡು ಬರುತ್ತಿತ್ತು ….

ಬರುತ್ತಿದ್ದುದು ಅದೇ ಹೊಲದ ಒಡತಿ ಹುಲಿಗೆವ್ವ …. ನಾವೆಲ್ಲ “ಯಪ್ಪೋ ದೆವ್ವುಲಿಗೆವ್ವ ಬಂದ್ಲಲೇ” ಅನ್ನುತ್ತಲೇ ಓಡುತ್ತಿದ್ದೆವು. ಅದಕ್ಕೆ ಕಾರಣ ಹುಡುಗರು ಹೊಲದಲ್ಲಿ ನೀರು ಕುಡಿಯಲು ಬಂದದ್ದಕ್ಕಲ್ಲ ಬದಲಾಗಿ ಕೈಗೆ ಬಂದ ಬೆಳೆಯಲ್ಲಿ ಕಾಳು, ಹಣ್ಣು, ತರಕಾರಿ ಕಿತ್ತು ತಿನ್ನಲು ಬರುವ ಅಥವಾ ಶಾಲೆಯಲ್ಲಿ ತಡೆದುಕೊಳ್ಳಲಾಗದೇ ಎದ್ದೋ ಬಿದ್ದೋ ಚಡ್ಡಿಯಲ್ಲಿ ಕಕ್ಕ ಮಾಡಿಕೊಂಡರೆ ಹೆಂಗೆ ಎಂದು ಹೊಲದಲ್ಲಿ ಕುಪ್ಪೆ ಇರಿಸಿ ಬೆಳೆಗೆ ಬದು ಮಾಡಿ ನೀರು ಹಾಯಿಸಿದ ದಾರಿಯಲ್ಲೇ ಅಂಡು ತೊಳೆಯಲು ಹುಡುಗರು ಬಂದರೆ ಸಾಕು …. ಹುಲಿಗೆವ್ವ ನಿಜವಾಗಲು ದೆವ್ವುಲಿಗೆವ್ವ. ಅಂಥ ಹುಲಿಗೆವ್ವನ ಮೊಮ್ಮಗಳು ನಮ್ಮ ಕ್ಲಾಸ್ ಮೇಟ್ …. ಪದ್ದಿ .. ಪದ್ಮಾವತಿ … ಈಗಿನಂತಾಗಿದ್ದರೆ …. ನಾವು ಶಾಲೆಗೊಬ್ಳೆ ಪದ್ಮಾವತಿ ….. ಹೊಲಕ್ಕೊಬ್ಬಳೇ ಹುಲಿಗೆವ್ವ …. ಎಂದು ಹಾಡುತ್ತಿದ್ದೆವೋ ಏನೋ …
ನಿಜಕ್ಕೂ ಪದ್ದಿ ಚೆಂದಿದ್ದಳು.ಓದಿನಲ್ಲಿ ಸ್ವಲ್ಪ ಪೆದ್ದಿ. ಹಾಗಂತ ಮಾಸ್ತರರು ಕೆಲ ಮಕ್ಕಳನ್ನು ಬೆತ್ತದಿಂದ “ತಿದ್ದುವಾಗ” ಮಾತ್ರ ಗೊತ್ತಾಗುತ್ತಿತ್ತು . ಆಗ ಜಾಣ ದಡ್ಡ, ಚತುರ ಚುರುಕು ಇವುಗಳ ವ್ಯತ್ಯಾಸ ನಮಗೆ ನಿಜಕ್ಕೂ ಗೊತ್ತಾಗುತ್ತಿರಲಿಲ್ಲ. ಈಗಲೂ ಒಮ್ಮೊಮ್ಮೆ ಯಾರಾದ್ರೂ “ಅವ್ರು ಬಿಡಿ ಸರ್ … ತುಂಬಾನೇ ಬ್ರಿಲಿಯೆಂಟ್ ” ಅಂದ್ರೆ ಎದುರಿಗಿದ್ದವರು ದಡ್ದರಾ ಎಂಬಂತೆ ನೋಡುತ್ತೇನೆ. ಹೇಳಿದೆನಲ್ಲ … ಹೊಲದಲ್ಲಿ ದೊಡ್ಡ ಬಾವಿ. ಮೆಟ್ಟಿಲಿಲ್ಲದ ಮಣ್ಣು ಜಾಡು ಹಿಡಿದು ಇಳಿಯಬೇಕು, ಹತ್ತಬೇಕು. ಹುಲಿಗೆವ್ವನ ಹೊಲದಲ್ಲಿ ಒಂದು ದೊಡ್ಡ ಬೇವಿನ ಮರ ಬುಡದಲ್ಲಿ ಗಾಳೆಮ್ಮ ದೇವಿ , ವಾರಕ್ಕೆರಡು ಬಾರಿ ಹುಲಿಗೆವ್ವಗೆ ದರ್ಶನ ಮತ್ತು ಹುಲಿಗೆವ್ವನಿಂದ ಗಾಳೆಮ್ಮನ ಸಂದರ್ಶನ. ಓಣಿ ಜನಕ್ಕೆ ಬಾಕಿ ದಿನಗಳಲ್ಲಿ ಹುಲಿಗೆವ್ವನಿಂದ ತನ್ನ ಹೊಲಕ್ಕೆ ತಮ್ಮ ದನಗಳನ್ನು ಮೇಯಲು ಬಿಟ್ಟ ತಪ್ಪಿಗೆ ಅಥವಾ ಅವರು ಹೇಳದಿದ್ದರೂ ಜಾಡು ಹಿಡಿದ ದನಗಳು ನುಗ್ಗಿ ಮೇಯ್ದು ತಂತಮ್ಮ ಹಟ್ಟಿ ಸೇರಿದ ಮರು ದಿನದ ಬೆಳ್ ಬೆಳಿಗ್ಗೆ ದನಗಳ ವಾರಸುದಾರರಿಗೆ ಬೈಗಳ ನಿಘಂಟು ಬಾಯೊಳಗೆ ಇಟ್ಟುಕೊಂಡೇ ಓಣಿದಾರಿಯಲ್ಲಿ ಭರ್ಜರಿ ಬೌಂಡರಿ ಬಾರಿಸುತ್ತಿದ್ದಳು. ಉಳಿದವರಿಗೆ ನಿಘಂಟಿನಲ್ಲಿನ ಉಚ್ಹಾರ, ಕಾಳಜಿ, ಕಲಿಕೆ, ಹೇಸಿಗೆ ಇತ್ಯಾದಿಯಾಗಿ ಕಾಣುತ್ತಿತ್ತು .
ಮುಖದಲ್ಲಿ ಸುಕ್ಕುಗಟ್ಟಿದ ವಯಸ್ಸಿನ ಲೆಕ್ಕ ಕಾಣಿಸಿದರೂ ವಯಸ್ಸಿನ ಹಂಗು ತೊರೆದು ಬಾಯಲ್ಲಿ ನಸ್ಸೆ ಪುಡಿ, ಸೊಂಟದಲ್ಲಿ ಚಂಚಿ ಸಿಕ್ಕಿಸಿ, ಮೊಳಕಾಳವರೆಗೂ ಸೀರೆಯ ಚುಂಗು ಹಿಡಿದು ವಾಲುವ ದೇಹವನ್ನೊತ್ತು ಹುಲಿಗೆವ್ವ ಓಣಿಯಲ್ಲಿ ಬಂದಳೆಂದರೆ ನಿರರ್ಗಳ, ಸುದೀರ್ಘ ಬೈಗಳ ಘಾಟು ಮನೆಯೊಳಗಿನ ಓಲೆ ಮೇಲಿನ ಒಗ್ಗರಣೆಗಿಂತ ಜಾಸ್ತಿ .”ನಿಮ್ ನಿಮ್ ಗಂಡ್ರುನ್ನ ಅದ್ ಬಸ್ತನ್ಯಾಗೆ ಇಟಗಂಡಿದ್ರೆ ಅವ್ರು ನಿಮ್ ಮಾತು ಕೇಳಾವು … ಅವು ನೆಟ್ಟಗಿದ್ದಿದ್ರೆ ನಿಮ್ ದನಗಳು ಕಂಡವ್ರು ಹೊಲಕ್ಕೋಗಿ ಇಂಗ್ ಮೆಯ್ತಿದ್ವಾ ಮುಂಡೇವು? ನಿಮ್ ದನಗಳ್ನಾ ಬಿಟ್ಟಂಗ ನಿಮ್ ಮನೆ ಗಂಡ್ಸುರ್ನು ಹೊರಾಗ್ ಮೆಯಾಕ್ ಬುಡ್ತೀರಾ” ಅಂದು ಹೆಂಗಸಿರಿಗೆ ಸ್ವಾಟೆ ತಿವಿದಂಗೆ ಸುಪ್ರಭಾತ ಹಚ್ಚ್ಕೊಂಡು ಬಂದು ಬಿಡೋಳು.
ಹಿಂಗಿದ್ದ ದಿನಗಳಲ್ಲಿ ನಾಲ್ಕು ವರ್ಷಗಳ ಅಂತರದಲ್ಲಿ ಮೂರು ಸಾವುಗಳಿಗೆ ಹುಲಿಗೆವ್ವನ ಹೊಲ ಸಾಕ್ಷಿಯಾಯಿತು . ಒಮ್ಮೆ ಉರಿ ಬಿಸಿಲ ಮಧ್ಯಾಹ್ನ ಶಾಲೆಯೊಳಗೆ ಅದೇ ತಾನೇ ಹೊಸದಾಗಿ ವರ್ಗವಾಗಿ ಬಂದಿದ್ದ ನಮ್ಮ ಮೆಚ್ಚಿನ ಮಾಸ್ತರೊಬ್ಬರ ಹಿಂದಿ ಪಾಠ ನಡೆಯುತ್ತಿತ್ತು. ಯಾರೋ ಹುಡುಗನೊಬ್ಬ ಬಂದು “ಈ ಸಾಲಿ ಹುಡುಗಿಯೋಬ್ಳು ಹುಲಿಗೆವ್ವನ ಹೊಲ್ದಾಗ ಹಾವ್ ಕಡ್ದು ಸತ್ತಾಳ” ಎಂದು ಮಾಸ್ತರರಿಗೆ ಹೇಳಿದ .. ಕೂಡಲೇ ಹುಯ್ ಅಂತಲೇ ಹುಡುಗರೆಲ್ಲ ಪಕ್ಕದ ಹೊಲದಾಗ ಓಡಿದೆವು. ಸತ್ತಿದ್ದು ಬೇರಾರೂ ಅಲ್ಲ .. ಅದೇ ಹುಲಿಗೆವ್ವನ ಮೊಮ್ಮಗಳು ನಮ್ಮ ಸರೀಕ ಹುಡುಗಿ ಪದ್ದಿ. ಆಗಿನ್ನೂ ನಾವು ಐದೋ ಆರನೇದು ಓದುವಾಗಲೇ ಆ ಪದ್ದಿಯನ್ನು ಯಾರೋ ನಮ್ಮ ಓಣಿಯ ಆಗತಾನೆ ಚಿಗುರು ಮೂಡಿದ ಮೀಸೆಯ ಹುಡುಗನೊಬ್ಬ ತನ್ನೊಳಗೇ ಪ್ರೀತಿಸಿಕೊಳ್ಳುತ್ತಾ ಪುಳಕವಾಗುವುದನ್ನು ಯಾರಿಂದಲೋ ಕೇಳಿ ತಿಳಿದಿದ್ದೆವು.
ಕದ್ದು ಮುಚ್ಚಿ ಪ್ರೀತಿ ಮಾಡುವ, ಮಿತಿ ಮೀರಿದ ಪ್ರೀತಿಯಿಂದಾಗಿ ಊರ ಬಿಟ್ಟು ಓಡಿ ಹೋಗುವವರ ಸುದ್ದಿಗಳಿಗೆ, ಆಕಸ್ಮಿಕವಾಗಿ ಈ ರೀತಿ ಪ್ರೀತಿ ಪ್ರೇಮಕ್ಕೆ ಸಿಲುಕಿ ಏನಾದರೂ ಸಾವಿಗೀಡಾಗುವ ಸುದ್ದಿಗೆ ನಾವು ಕಿವಿಯಾಗುತ್ತಿದ್ದೆವು. ಪದ್ದಿ ನಿಜವಾಗ್ಲೂ ಹಾವ್ ಕಡ್ದು ಸತ್ತಳಾ? ಅಥವಾ ಏನಾದ್ರೂ … ಎಂಬ ಅನುಮಾನ ಕೆಲವರಲ್ಲಿ. ಇನ್ನು ಕೆಲವರು ಹೊಲದಾಗಿನ ಗಾಳೆಮ್ಮಗೆ ಅಪಚಾರವಾಗಿದೆ ಅದಕ್ಕೆ ಈ ಅವಘಡ ಆಗಿದೆ ಅಂದರು. ಒಟ್ಟಿನಲ್ಲಿ ಹೊಲದಾಗಿನ ಹುಲಿಗೆವ್ವ ಮೊಮ್ಮಗಳ ಸಾವಿಗೆ ತನ್ನ ಕುಟುಂಬ ಸಮೇತ ಬೋರಿಟ್ಟಳು. ಸಂಭಂಧವೇ ಇರದಿದ್ದ ಚಿಗುರು ಮೀಸೆಯ ಓಣಿಯ ಪ್ರೇಮಿಯು ತನ್ನ ದುಃಖವನ್ನು ಯಾರ ಮುಂದೆ ಹೇಳಿಕೊಂಡನೋ ಏನೋ? ಆಗಿನಿಂದ ನಮ್ಮ ಶಾಲೆ ಹುಡುಗರು ಪದ್ದಿ ಸಾವಿನ ಭಯದಿಂದ ಬಾವಿ ಕಡೆ ಸುಳಿಯಲಿಲ್ಲ.
ಹೊಲದ ಸುತ್ತಲೂ ಕಳ್ಳಿ ಸಾಲು. ರಾತ್ರಿ ಆದ್ರೆ ಆ ದಾರಿಯಲ್ಲಿ ಒಂದು ಬೀದಿ ದೀಪದ ಕೂಡ ಇರದ ಕತ್ತಲೆಯಲ್ಲಿ ಗಾಳೆಮ್ಮನ ಗುಡಿ ಮುಂದಿನ ದೀಪದ ಬೆಳಕಿನಲ್ಲಿ ಯಾರ್ಯಾರೋ ಕುಂತು ಎದುರಾ ಬದುರಾ ಏನೇನೋ ಮಾತಾಡ್ದಂಗೆ, ದೂರದಿಂದ ಸಣ್ಣಗೆ ಘಲ್ ಘಲ್ ಗೆಜ್ಜೆ ಸದ್ದು ಮಾಡುತ್ತಾ ಯಾರೋ ನಡೆದಾಡುತ್ತಾ ಪಕ್ಕದಲ್ಲೇ ಹಾಡು ಹೋದಂಗೆ, ಕೆಲವೊಮ್ಮೆ ಎಲ್ದಕ್ಕೆ ಹೋದ ಜನ ಏನೋ ಕಂಡಂಗೆ ಹೀಗೆ ನಾನಾ ಗಾಸಿಪ್ಪುಗಳು ನಮ್ಮ ಸಣ್ಣ ಮೆದುಳಿಗೆ ದೊಡ್ಡ ಕುತೂಹಲವಾಗಿ ಕಾಡುತ್ತಿದ್ದವು. ಅದೊಮ್ಮೆ ಸರಿ ರಾತ್ರಿ ಕಳ್ಳಿ ಸಾಲ ಹಿಂದಿನ ಗಾಳೆಮ್ಮನ ಗುಡಿ ಹತ್ತಿರ ಪೊಲೀಸರು ಬಂದು ಯಾರೋ ಒಂದಿಬ್ಬರನ್ನು ಎತ್ತಾಕ್ಕೊಂಡು ಹೋದರಂತೆ… ಏನಾಯ್ತೋ ಏನ್ ಕತೀನೋ ? ಯಾಕಿದ್ದೀತು ಹುಲಿಗೆವ್ವನ ಹೊಲದ ಸಾವಾಸ ಮುರಾ ಸಂಜಿ ಆತಂದ್ರಾ ಯಾರೂ ಆ ಕಡೆ ಹೆಂಗುಸ್ರು ಮಕ್ಳು ಅಷ್ಟೇ ಯಾಕೆ ಗಂಡುಸ್ರು ಸೈತ ಹೋಗಾದು ದುಸ್ತರ ಅಗ್ಯಾದ್ ನೋಡು ” ನಮ್ಮಜ್ಜಿ ಆಗಾಗ ಹೇಳುತ್ತಿತ್ತು.
ಇಷ್ಟಾಗಿ ಕೆಲ ದಿನಗಳು ಕಳೆದಿರಲಿಲ್ಲ ಓಣಿಯ ಪರಿಚಯಸ್ಥ ಮುಖ ಒಂದೆರಡು ದಿನಗಳಿಂದ ಕಾಣದ ಬಗ್ಗೆ ಅಕ್ಕಪಕ್ಕದವರು ಮಾತಾಡಿಕೊಂಡರು. ನಂತರ ಪ್ರತ್ಯಕ್ಷವಾದಾಗ ಸುಮ್ಮನಾದರೂ ಯಾಕೋ ಆ ವ್ಯಕ್ತಿಯ ಚೆಹರೆಯಲ್ಲಾದ ಕಳವಳ, ಜಿಗುಪ್ಸೆಯನ್ನು ಯಾರೂ ಗುರುತಿಸಿದರೋ ಇಲ್ಲವೋ ಐಸ್ ಪೈಸ್ ಆಡ್ಕೊಂಡು ಚಿಣ್ಣಿ ದಾಂಡು, ಗೋಲಿ ಆಡುವ, ರೊಳ್ಳೆ ತೆಗೆದು ಹೊಡೆದೋ ಹೊಡೆಸಿಕೊಂಡೋ ಬಂದು ಮನೆಯಲ್ಲಿ ಮತ್ತೊಂದು ರೌಂಡ್ ಒದೆ ತಿಂದು ಹರಿದ ಪಾಟಿ ಚೀಲದಲ್ಲಿನ ಕಿತ್ತೋದ ಪುಸ್ತಕ ತೆರೆದು ಬೇಕು ಬೇಕು ಬ್ಯಾಡ ಬ್ಯಾಡ ಎಂಬಂತೆ ಹೆದರಿಕೆಗೆ ತಲೆ ತಗ್ಗಿಸಿ ಕೂಡುವ ನಮಗೆ ಗೊತ್ತೇ ಆಗಲಿಲ್ಲ .. ಆ ವ್ಯಕ್ತಿ ನಮ್ಮ ಟೋಳಿಯ ಗೆಳೆಯನೊಬ್ಬನ ತಂದೆ. ಒಂದು ಮುಂಜ್ ಮುಂಜಾನೆ ಪೋಲಿಸರ ಜೀಪು, ಹತ್ತಾರು ಜನಗಳ ಗುಂಪು ಅದೇ ಹುಲಿಗೆವ್ವನ ಹೊಲದ ಕಡೆಗೆ ಬಹಳ ಸೀರಿಯಸ್ ಆಗಿ ದೌಡಾಯಿಸೋದನ್ನು ನೋಡಿ ಜನ ಗಾಬರಿ ಬಿದ್ದು ಹಿಂಬಾಲಿಸಿದರು. ಅವರ ಹಿಂದೆ ಸಣ್ಣ ಹುಡುಗರ ನಮ್ಮ ದಂಡು .
ಗಾಳೆಮ್ಮನ ಗುಡಿ ಮುಂದಿನ ಗಿಡಗಳ ಮಧ್ಯೆ ಬದಲಾದ ಚೆಹರೆಯ ವ್ಯಕ್ತಿ, ನಮ್ಮ ಗೆಳೆಯನ ತಂದೆ ಹೆಣವಾಗಿ ಬಿದ್ದಿದ್ದ. ಹೆಣದ ಮೇಲೆ ಕುಳಿತ ನೊಣಗಳನ್ನು, ಸುತ್ತ ಸಾಲಿಟ್ಟ ಇರುವೆ ಸಾಲು, ಹೆಣದ ತೆರೆದ ಕಣ್ಣು ದೂರದಿಂದಲೇ ನೋಡಿ ಈಗೀಗ ಹುಲಿಗೆವ್ವನ ಹೊಲದ ಮೇಲಿನ ಭಯ ಯಾಕೋ ನಮ್ಮನ್ನು ಜಾಸ್ತಿ ಆವರಿಸಿತ್ತು. ಮೊದಲ ಬಾರಿಗೆ ನನಗೆ ಹೀಗೆ ಅನುಮಾನಾಸ್ಪದ ಸಾವಿಗೀಡಾದವರನ್ನು ಪೋಸ್ಟ್ ಮಾರ್ಟಂ ಮಾಡುವುದರ ಬಗ್ಗೆ ತಿಳಿದಿತ್ತು. ದಿನ ಸಂಜೆ ಬಸವಣ್ಣನ ಗುಡಿ ಮುಂದಿನ ಕಟ್ಟಿ ಮೇಲೆ ಕುಂತು ತುಂಡು ಬೀಡಿ ಎಳೆಯುತ್ತಾ ಓಣಿ ಗಿರಾಗತಿಗಳನ್ನೂ, ತಮ್ಮ ತೆವಲುಗಳನ್ನು ತೀರಿಸಿಕೊಳ್ಳಲು ಹರಟುವ ಮಂದಿ ಬಾಯಲ್ಲಿ, ಬಾಯಿಂದ ಬಾಯಿಗೆ ಹರಡಿದ ಮಾತುಗಳು ಹೊಲದ ಸಂಗತಿಗೆ ಹೆಚ್ಚು ರೆಕ್ಕೆ ಪುಕ್ಕ ಮೂಡಿದವು. ಯಾರೂ ನೇರವಾಗಿ ಆಡದಿದ್ದರೂ ಗುಸುಗುಸು ಇದ್ದೆ ಇತ್ತು.
ಇದಾಗಿ ಆರು ತಿಂಗಳ ರಜೆ ಬೇಸಿಗೆ ರಜೆ ಬಂದವು ಹೋದವು. ನಾವು ಪಾಸು ನಪಾಸು ಆದೆವು. ಚೈತ್ರ, ವಶ್ಯಕ, ಅಷಾಡ, ಹೀಗೆ ಮಾಸಗಳನ್ನು ಸಾಲಿಡಿದು ಓದುವ ಹಾಗೆ ನಮ್ಮ ಮಧ್ಯೆ ಹುಡುಗುರ ಹೆಸರುಗಳು ಸಹ ಬಹಳ ಚೆಂದಿದ್ದವು. ಬಸುವ, ಅಸ್ಯಕ, (ಅಶೋಕ ) ವಾಗೇಸ, ರಮೇಸ, ಸಿದ್ದ, ತಿಪ್ಪ , ಪಂಪ, ಹೀಗೆ. ಎಲ್ಲರೂ ಏಳನೆತ್ತ ಪಾಸಾಗಿ ಒಬ್ಬೊಬ್ಬರೂ ಹೈಸ್ಕೂಲ್ ಗೆ ಒಂದೊಂದು ಶಾಲಿಗೆ ಸೇರಿಕೊಂಡೆವು.ನಮ್ ಮನೆಯಲ್ಲಂತೂ ನಮ್ಮ ದೊಡ್ಡ ಸೋದರ ಮಾವ ” ಲೇ ಗಿಡ್ಡ, ಹೈಸ್ಕೂಲ್ ಮೆಟ್ಲು ಹತ್ತಾಕ್ ಸಿಕ್ತಾವೆನಲೇ ? ಅನ್ನುತ್ತಿದ್ದ. ಹೊಲಮನೆ ಬದುಕು ಹಳ್ಳಿ ಜೀವಾಳ. ದಿನಾ ಉರುಳಿದವು. ಹೊಲಗಳು ಬೆಳೆ ಮೇಲೆ ಬೆಳೆ ನೀಡಿದರೂ ಈ ಮಧ್ಯೆ ಬಾವಿಯ ನೀರಿನ ಸೆಲೆ ಕಡಿಮೆಯಾಯಿತು. ಉಳುಮೆಯೇ ಆಧ್ಯತೆಯಾಗಿದ್ದ ದಿನಗಳು ಪರ್ಯಾಯವಾಗಿ ದುಡಿಮೆಯೊಂದನ್ನು ನೆಚ್ಚಿಕೊಳ್ಳುವ ಪರಿಸ್ಥಿತಿಗೆ ತಂದೋಡ್ಡಿದವು . ದುಡಿಮೆ ಇಲ್ಲದ, ಯೋಜನೆ ಇಲ್ಲದ ಬದುಕು ದಿನದಿಂದ ದಿನಕ್ಕೆ ಸವಕಳಿಯಾಗುತ್ತಿತ್ತು.
ಕರಿ ಗಡ್ಡ ಬೆಳ್ಳಗಾಗಿ ತಲೆ ಕೂದಲು ಬೆಳೆ ಇಲ್ಲದ ಖಾಲಿ ಭೂಮಿಯಂತಾಗಿ ರೈತರು ಬರುಬರುತ್ತಾ ಹೊಲಗಳ ಬಿಕರಿಗೆ ಮುಂದಾಗತೊಡಗಿದರು. ಹುಲಿಗೆವ್ವನ ಹೊಲದ ಪೂರ್ವಕ್ಕೆ ಬಸಪ್ಪ,ಮಂಜಣ್ಣ, ದಕ್ಷಿಣಕ್ಕೆ ಎಂಕಣ್ಣ, ಶಂಭಣ್ಣ ಎಲ್ಲರ ಹೊಲಗಳ ಹದವಾದ ಮಣ್ಣು ಕುಯಿಲಿಗೆ ಮೈಯೋಡ್ಡುವ ಬದಲು ರಿಯಲ್ ಎಸ್ಟೇಟ್ ಎಂಬ ಕೆಚ್ಚಲಾಗಿ ಸೈಟ್ ಗಳ ಲೆಕ್ಕದಲ್ಲಿ ಹರಿದು ಹಂಚಿ “ಪತಿ ಪತ್ನಿ ಸುತ ಆಲಯ” ಸ್ತೋತ್ರ ಪಾಲಕರ ಕನಸಿನ ಪಾಲಾದವು. ಇದೊಂದು ಹುಲಿಗೆವ್ವನ ಹೊಲ ಮಾತ್ರ ಹಾಗೆ ಬಯಲಾಗಿ ಉಳಿಯಿತು. ಹುಲಿಗೆವ್ವನ ಗಡಸು ಧ್ವನಿ ಕ್ಷೀಣಿಸಿ, ವಯಸ್ಸು ಮುಪ್ಪಾಗಿಸಿದ ದೇಹವೂ ಒಂದು ದಿನ ಉಸಿರ ಚೆಲ್ಲಿತು. ಅವರದೇ ಮನೆಯಲ್ಲಿ ಸದಸ್ಯನೊಬ್ಬ ಹೊಲದ ಪಕ್ಕದಲ್ಲೇ ಇದ್ದ ಮನೆಯ ಮುಂದೆ ಅಷ್ಟೆತ್ತರದ ಮರದ ಕೊಂಬೆಯೊಂದಕ್ಕೆ ಹಗ್ಗ ಬಿಗಿದು ಗೋಣು ಚೆಲ್ಲಿದ್ದ.ಓಣಿಯ ಹಿರಿಯ ಅಕ್ಷಾಲರ (ಅಕ್ಕಸಾಲಿಗರ) ಆನಂದಪ್ಪಜ್ಜ “ಯಾವ್ದೂ ದಕ್ಕಾಕಿಲ್ಲ… ದೇಶ ಉದ್ಧಾರ ಆಗೂದಿಲ್ಲ… ಮಕ್ಳು ಮಾತ್ ಕೇಳಾದಿಲ್ಲ… ಹೊಟ್ಟೆಗ್ ಕೂಳ್ ಹಾಕೊರಿಲ್ಲ …. ಎಂದು ಗೊಣಗಿ ತನ್ನ ವಯಸ್ಸಿಗಾದ ಮರೆವನ್ನು ಮತ್ತೆ ಮತ್ತೆ ಕೆದಕಿ ದಾರಿಯಲ್ಲಿದ್ದ ಹುಡುಗನೊಬ್ಬನನ್ನು ಕರೆದು ತನ್ನ ಮನೆಯ ದಾರಿ ಯಾವುದೆಂದು ಕೇಳಿ ಊರಗೋಲು ಹಿಡಿದು ನಡೆದದ್ದು ನಿನ್ನೆ ಮೊನ್ನೆಯಷ್ಟೇ ಹಳೆಯದೆನಿಸುತ್ತಿದೆ. ಅಂದಿನ ಹುಡುಗರು ಈಗ ದುಡಿಮೆಗೋ ವಾಸಕ್ಕೋ, ಮಕ್ಕಳ ವಿಧ್ಯಾಭ್ಯಾಸಕ್ಕೋ ಅದೇ ಹಳ್ಳಿಯಲ್ಲಿ ಇರುವವರು ಒಂದಷ್ಟು ಬಿಟ್ಟು ಹೋದವರೊಂದಿಷ್ಟು. ಬಿಟ್ಟು ಬಂದರವಲ್ಲಿ ನಾನೂ ಒಬ್ಬ ..
ಚಿಕ್ಕವರಾಗಿದ್ದ ನಮ್ಮ ಮೇಲೆ ಒಂದು ಕುತೂಹಲದ ಸಂಗತಿಯಾಗಿದ್ದ ಹುಲಿಗೆವ್ವನ ಹೊಲ, ಬಾವಿ ಕತ್ತಲು, ಕಳ್ಳಿ ಸಾಲಿನ ಬೇಲಿ, ಮಾತಾಡುವ ಗಾಳೆಮ್ಮ ದೇವತೆ, ಗೆಜ್ಜೆ ಸಪ್ಪುಳ, ಶಾಲೆ ದಿನಗಳು ಎಲ್ಲಾ ಒಮ್ಮೆ ಕಣ್ಣ ಮುಂದೆ ಹಾದು ಹೋದಂತಾಗಿದ್ದು ಇತ್ತೀಚೀನ ದಿನಗಳಲ್ಲಿ ಊರಿಗೆ ಹೋದಾಗ, ಅದೇ ಹೊಲದ ಬಯಲಲ್ಲಿ ಮಧ್ಯೆ ನಿಂತು ಗೆಳೆಯನೊಟ್ಟಿಗೆ ಹರಟಿದಾಗ. ಈಗಲ್ಲಿ ಮೊದಲಿದ್ದ ಬಾವಿ, ಕಳ್ಳಿ ಸಾಲಿನ ಬೇಲಿ, ಬೆಳೆ, ಕಳೆ, ದೂರದಲ್ಲೆಲ್ಲೋ ನಿಂತು ಒದರುವ ಹುಲಿಗೆವ್ವನ ದನಿ, ಬೆಚ್ಚಿ ಓಡುವ ಹುಡುಗರ ದಂಡು, ಗಾಳೆಮ್ಮನೊಂದಿಗೆ ಮಾತಾಡುವವರು, ಗೋಲಿ, ಚಿಣ್ಣಿ ದಾಂಡು , ಲಗೋರಿ, ಐಸ್ ಪೈಸ್ ಆಟ ಯಾವುದೂ ಇಲ್ಲ. ಮುಖ್ಯವಾಗಿ ನಾವು ಕಂಡಿದ್ದ ಸಾವಾದ ಮುಖಗಳು ಮುಖಗಳಾಗಿ ಮಾತ್ರ ನೆನಪಾಗುತ್ತವೆ ಹೊರತು ಸಣ್ಣ ವಯಸ್ಸಿನಲ್ಲಿ ಕಾಡಿದ ಕುತೂಹಲವಾಗಿ, ಭಯವಾಗಿ ಉಳಿದಿಲ್ಲ. ಮತ್ತು ಗಾಳೆಮ್ಮ ದೇವಿಯು ಸಹ ಅಲ್ಲೇ ಇದ್ದಾಳೋ ಅಥವಾ ಗುಳೇ ಹೋದಳೋ ಗೊತ್ತಾಗಲಿಲ್ಲ.
ಕೊನೆ ಮಾತು : ಹಳ್ಳಿಗಾಡಿನ ಬಯಲ ಸುತ್ತಿದ,ಬಿಸಿಲಿಗೆ ಬೆವರಾದ, ಸಣ್ಣ ಕುತೂಹಲವನ್ನೂ ದೊಡ್ಡ ಬೆರಗುಗಣ್ಣಿನಿಂದ ನೋಡಿ ಅನುಭವಿಸುವ, ಒದೆ ತಿಂದು ಕಲಿತ ಅರ್ಥವಾಗುವ ಭಾಷೆ, ಭಾವ ಪಾಠ ಎಂದೆಂದೂ ಮರೆಯಲಾರದ ಹಾಗೂ ತಿರುಗಿ ನೋಡಲೇಬೇಕಾದ ಅನಿವಾರ್ಯ ಸಂಗತಿ.
 

‍ಲೇಖಕರು G

21 October, 2013

16 Comments

  1. Tippesh

    Chennagi barediddera,

  2. Arun Kumar

    Exellent lines by deepu , recall of old memories .

  3. Dr Vani Sundeep

    Halli gadina jeevana tumba chennagi moodibandide, esto janaru jeevanadalli munde banda nantara tamma halliya balyada nenapugalannu maretiruttare. Nimma barahdalli balayada nenapugalannu jeevantavagirisideeri.

  4. Dinesh hegde

    Nice …halligadina gandu bhashe Arthavattadaddu…balyada beragugalannu chennagi kattikodalagide.Aadre Aa beragina kutoohala haage ulisiddiri..?

  5. ULLAS

    NICE TO READ,GOOD KEEP IT UP

  6. LATHA ATTE

    First itself is best, cute lanaguage

  7. Habeeb

    Excellent dude, keep it up… You took me to our good old days of school…9880254028

  8. knravikumar

    good

  9. Santhoshkumar LM

    Superb sir!!

  10. ganesh s iyer

    chalo aithi.. besh

  11. vasanth.s.bhakri

    Nimma baraha halligadina baalyada jeevana nenapisithu. Katheyalli balasida bhashe bhale ennuvathide. Katha vastu odugarannu seleyuthade.My hearty compliments.
    Keep it up.

  12. sujatha jyothi

    i recalled my child wood.

  13. Manjunatha A C

    Amara deep!, naanu kanda obba apratima barahagara…

  14. Anonymous

    Good

  15. ಶಿವಶಂಕರ ಬಣಗಾರ

    ಚೆಂದವಿದೆ ಬರಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading