ಮುನ್ನೂರು ನುಡಿ : ಗಾಂಧಿಯ ಕೈಕುಲುಕಿದ ಕಲಬುರ್ಗಿಯ ಭಾವುಸಾಹೇಬ್

ಗಾಂಧಿಯ ಕೈಕುಲುಕಿದ ಕಲಬುರ್ಗಿಯ ಭಾವುಸಾಹೇಬ್

-ಮಹಿಪಾಲರೆಡ್ಡಿ ಮುನ್ನೂರ್

`ಭಾವುಸಾಹೇಬ್’

ಕಲಬುರ್ಗಿ ಭಾಗದ `ಗರಿ’.

ವಿ.ಪಿ.ದೇವುಳಗಾಂವಕರ್ ಅವರನ್ನು ಕರೆಯುತ್ತಿದ್ದುದೇ ಹೀಗೆ. ವಿಠ್ಠಲರಾವ ಪಾಂಡುರಂಗರಾವ ದೇವುಳಗಾಂವಕರ್ ಎಂಬುದು ಪೂರ್ಣ ಹೆಸರು. ಅವರು ಕಲಬುರ್ಗಿಯ ಕಲ್ಲರಳಿಗೆ ವಾಯುಜೀವೋತ್ತಮರಾಗಿದ್ದರು. ಭಾವುಸಾಹೇಬರಂಥ ವ್ಯಕ್ತಿಗಳು ಕೇವಲ ಮನುಷ್ಯರಲ್ಲ. ನಮ್ಮ ಬದುಕಿಗೆ ಅಗತ್ಯವಾದ ಗಾಳಿ, ಬೆಳಕು ಕೂಡ ಹೌದು. ಭಾಷೆ, ಜಾತಿ, ಧರ್ಮಗಳು ವ್ಯಕ್ತಿ, ವ್ಯಕ್ತಿಯ ನಡುವೆ ಗೋಡೆ ಕಟ್ಟಬಾರದು. ಪರಸ್ಪರ ಅರಿವಿನ ಸಾಧನವಾಗಬೇಕು. ಇದು ನಮಗಿಂದು ಜರೂರಾಗಿರುವ ಆದರ್ಶ.

ಇಂಥ ಆದರ್ಶದ ಹಾದಿಯಲ್ಲಿ ನಡೆದಿರುವ ಭಾವುಸಾಹೇಬ್ ಅವರು ನಮ್ಮ ನಡುವೆ ಇದ್ದು, ಕಳೆದ ನಾಲ್ಕೈದು ವರ್ಷಗಳಿಂದ ನಮ್ಮ ನಡುವೆ ಇಲ್ಲದ ಮಹಾತ್ಮ ಗಾಂಧಿಯವರ ಅಪ್ಪಟ ಒಡನಾಡಿ.

ನಾಲ್ಕು ಬಾರಿ ಗಾಂಧಿಯವರನ್ನು ಸಮೀಪದಿಂದ ಕಂಡಿದ್ದಾರೆ. ಅವರ ಮಾತುಗಳನ್ನು ಕೇಳಿದ್ದಾರೆ. ಅವರ ಕೈ ಕುಲುಕಿದ್ದಾರೆ. ಕಲಬುರ್ಗಿಗೆ ಬಂದಾಗ ಗಾಂಧಿಯವರು ಮಾಡಿದ ಭಾಷಣ ಕೇಳಿ ಪ್ರಭಾವಿತರಾಗಿದ್ದಾರೆ. ಗಾಂಧಿಯವರು ಆಡಿದ ಪ್ರೇರಣಾದಾಯಕ ಮಾತುಗಳಿಗೆ ತಮ್ಮ ನೌಕರಿಯನ್ನೇ ಬಿಟ್ಟು, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಮನಸ್ಸು ಮಾಡಿದ್ದಾರೆ. ಶಾಲೆಯಲ್ಲಿ ಮೇಷ್ಟ್ರು ಆಗಿ ಪಾಠ ಬೋಧನೆಗಿಂತ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗುವ ತುಮುಲ ಅವರನ್ನು ಸುಮ್ಮನೇ ಕುಳಿತುಕೊಳ್ಳಲು ಬಿಡಲಿಲ್ಲ. ಚಳುವಳಿಯಲ್ಲಿ ಧುಮುಕಿದರು. ರೈಲ್ವೆ ಗಾಡಿಗಳ ಮೇಲೆ ಹೋಗಿದ್ದಾರೆ. ಕರ ಪತ್ರಗಳನ್ನು ಹಂಚಿದ್ದಾರೆ. ಹಳ್ಳಿಗಳಿಗೆ ಹೋಗಿದ್ದಾರೆ. ಅಲ್ಲಿ ಚಳುವಳಿ ಬಗ್ಗೆ ತಿಳಿಹೇಳಿ ಯುವಕರನ್ನು ಹುರಿದುಂಬಿಸಿದ್ದಾರೆ. ಬಂಧನಕ್ಕೊಳಗಾಗಿ ಜೈಲಿಗೆ ಹೋಗಿ ಬಂದಿದ್ದಾರೆ. ವಾಪಾಸು ಬಂದ ತೀವ್ರಗತಿಯಲ್ಲೇ ಮತ್ತೆ ಚಳುವಳಿ ಶುರು ಮಾಡಿದ್ದಾರೆ. ಅದರಲ್ಲಿ ಕಾರ್ಯೋನ್ಮುಖರಾಗಿ, ಸ್ವಾತಂತ್ರ್ಯ ದೊರಕಿಸಿಕೊಳ್ಳುವಲ್ಲಿ ಸಫಲರೂ ಆಗಿದ್ದಾರೆ.

ಅಂಥ ಭಾವುಸಾಹೇಬ್ ದೇವುಳಗಾಂವಕರ್ ಅವರು ಬದುಕಿದ್ದರೆ ಈಗ 100 ರ ಚಿರ ಯೌವ್ವನಿಗರಾಗಿರುತ್ತಿದ್ದರು. ಈಗ್ಗೆ ಐದು ವರ್ಷಗಳ ಹಿಂದೆ ನಮ್ಮಿಂದ ಅಗಲಿದ ಅವರು, ಕೊನೆಯ ಉಸಿರು ಇರುವವರೆಗೂ ಊರುಗೋಲು (ಸ್ಟಿಕ್) ಇಲ್ಲದೆಯೇ ನಡೆಯಬಲ್ಲವರಾಗಿದ್ದರು. ಗಾಂಧಿ ತತ್ವಗಳಿಗೆ ಮಾರು ಹೋದ ಅವರು, ಅದೇ ಸಮಯ ಪರಿಪಾಲನೆ ಮತ್ತು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಭಾವುಸಾಹೇಬ್ ಅವರ ಕೊನೆಯ ದಿನಗಳಲ್ಲಿ ಅಂದರೆ, ನಾಲ್ಕೈದು ವರ್ಷಗಳಿಂದ ಆ ಕೆಲಸಗಳನ್ನು ಅವರ ಸೊಸೆ ಬಲವಂತವಾಗಿ ಬಿಡಿಸಿದ್ದರಂತೆ.

ಅಂಥ ಭಾವುಸಾಹೇಬ್ ಅವರನ್ನು ಭೇಟಿಯಾಗಿ, ಮಾತನಾಡಿಸುವ ಸೌಭಾಗ್ಯ ನನಗೆ ಒದಗಿತ್ತು. ಅವರ ಜೀವಿತದ ಕೊನೆಯ ವರ್ಷದಲ್ಲಿ ಅವರನ್ನು ಸಂದರ್ಶನ ಮಾಡಿದ್ದೆ. ಅದ್ಯಾಕೋ ಗೊತ್ತಿಲ್ಲ. ಇವತ್ತು, ಭಾವುಸಾಹೇಬ್ ದೇವುಳಗಾಂವಕರ್ ನೆನಪಾದರು.

ಗಾಂಧಿಯವರ ಪ್ರಥಮ ದರ್ಶನ :

ಕಲಬುರ್ಗಿಯಲ್ಲಿ ಒಮ್ಮೆ ಹಿಂದೂ-ಮುಸ್ಲಿಂರ ನಡುವೆ ಸಾಮರಸ್ಯ ತಪ್ಪಿಹೋಗಿತ್ತು. ಹೀಗಾಗಿ ಅವರ ಮಧ್ಯೆ ಸಾಮರಸ್ಯ ಬೆಳೆಸುವುದಕ್ಕಾಗಿ ಗಾಂಧಿಯವರು ಕಲಬುರ್ಗಿಗೆ ಬಂದಿದ್ದರು. ಬಹುಶಃ ಅದು 1927ರಲ್ಲಿ. ಇಲ್ಲಿನ ಛೋಗಮಲ್ ಹೀರಾಲಾಲ ಭಲಗತ್ ಎಂಬ ವ್ಯಾಪಾರಿಯ ಮನೆಯಲ್ಲಿ ಗಾಂಧೀಜಿ ತಂಗಿದ್ದರು. ಆ ಸಂದರ್ಭದಲ್ಲಿ ನೂತನ ವಿದ್ಯಾಲಯದ ಸ್ಕೂಲ್ನಲ್ಲಿ ಗಾಂಧಿಯವರ ಭಾಷಣ ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಬಾಲ ಸ್ವಯಂ ಸೇವಕರಾಗಿ ಕೆಲಸ ಮಾಡಿದ ಭಾವುಸಾಹೇಬ್ ದೇವುಳಗಾಂವಕರ್ ಗಾಂಧಿಯವರನ್ನು ತೀರಾ ಹತ್ತಿರದಿಂದ ನೋಡಿದ್ದಾರೆ.

ಎರಡನೇ ಬಾರಿ :

ಅದಾದ ನಂತರ, 1929ರ ಏಪ್ರಿಲ್ನಲ್ಲಿ ಮುಂಬಯಿಯಿಂದ ಮದ್ರಾಸ್ಗೆ ರೈಲಿನಲ್ಲಿ ಗಾಂಧಿಯವರು ಹೋಗುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕ ತಕ್ಷಣವೇ ದೇವುಳಗಾಂವಕರ್ ಅವರು ಕಲಬುಗರ್ಿಯ ರೈಲ್ವೆ ನಿಲ್ದಾಣಕ್ಕೆ ಒಂದೇ ಗುಕ್ಕಿನಲ್ಲಿ ಓಡಿಹೋದರಂತೆ. ಹಾಗೇ ರೈಲಿನಲ್ಲಿ ಹೊರಟ ಗಾಂಧಿಯವರನ್ನು ಕಲಬುರ್ಗಿಯ ರೈಲ್ವೆ ಪ್ಲಾಟ್ಫಾರಂನಲ್ಲಿ ಕಂಡಿದ್ದಾರೆ. ಗಾಂಧಿಯವರ ಈ ಎರಡು ಬಾರಿಯ ದರ್ಶನಗಳಿಂದ ಅವರ ಕಡೆ ಹೆಚ್ಚು ಹೆಚ್ಚು ಆಕರ್ಷಿತರಾಗಿದ್ದಾರೆ.

ಗಾಂಧಿಯವರ ಸಾದಾತನ, ಸರಳಭಾವ, ಅವರ ಸೋದರಭಾವದ ಕಲ್ಪನೆ, ಬಡವರ ಮತ್ತು ದಲಿತರ ಬಗ್ಗೆ ಇರುವ ನಿಷ್ಠೆಗಳು ದೇವುಳಗಾಂವಕರ್ ಅವರ ಮೇಲೆ ಪ್ರಭಾವ ಬೀರಿವೆ. ಗಾಂಧಿಯವರ ಪ್ರಭಾವ ಎಷ್ಟು ಗಾಢವಾಗಿ ಬೀರಿತು ಎಂದರೆ, ಕೇವಲ ಹದಿಮೂರನೇ ವಯಸ್ಸಿನಿಂದಲೇ ಖಾದಿಯನ್ನು ತೊಡಲು ಆರಂಭಿಸಿದ್ದಾರೆ. ಆವಾಗಲೇ ದಂಡಿಯಾತ್ರೆ ಶುರುವಾಗಿತ್ತು.

ಮೂರನೇ ಬಾರಿ :

ಅಲ್ಲಿ ನೂಕು ನುಗ್ಗಲು ಇತ್ತು.

ಗಾಂಧಿಯವರನ್ನು ಕಾಣುವ ತವಕವಿತ್ತು. ಅವರನ್ನು ಕಣ್ಣಾರೆ ನೀಡುವ ಆಸೆಯಿತ್ತು. ಅವರ ಕೈಕುಲುಕುವ ಉತ್ಕಟ ಇಚ್ಛೆಯಿತ್ತು. ಅವರ ದರ್ಶನ ಮಾಡುವ ಭಾಗ್ಯಕ್ಕಾಗಿ ಜನರು ಕಿಕ್ಕಿರಿದು ಸೇರಿದ್ದರು. ಬ್ಯಾರಿಸ್ಟರ್ ಪದವಿಯನ್ನು ಮುಗಿಸಿ, ಭಾರತದಲ್ಲಿ ವಕೀಲಿ ವೃತ್ತಿಯನ್ನು ಮಾಡುತ್ತಿದ್ದ ಗಾಂಧಿಯವರನ್ನು ಆಫ್ರಿಕಾದಿಂದ ಕರೆ ಬಂದಿತ್ತು. ಆಫ್ರಿಕಾಕ್ಕೆ ಹೋಗುವಾಗ ಅವರನ್ನು ನೋಡುವ ಕಾತುರದಿಂದಾಗಿ ಮುಂಬಯಿಯಲ್ಲಿ ಜನ ಸೇರಿದ್ದರು.

ಅದಾಗಲೇ ಎರಡು ಬಾರಿ ಗಾಂಧಿಯವರನ್ನು ನೋಡಿ, ಅವರ ಮಾತುಗಳಿಗೆ, ಚಟುವಟಿಕೆಗಳಿಗೆ ಮಾರುಹೋಗಿ, ತತ್ವಗಳಿಗೆ ಕಟಿಬದ್ಧರಾಗಿದ್ದ ದೇವುಳಗಾಂವಕರ್ ಅವರು, ಮೂರನೇ ಬಾರಿಗೆ ನೋಡಲು ಮುಂಬಯಿಗೆ ಹೋಗಿದ್ದರು. ಆಫ್ರಿಕಾಕ್ಕೆ ಹೊರಟಿದ್ದ ಗಾಂಧಿಯವರನ್ನು ಕಣ್ತುಂಬ ನೋಡಿ, ಅವರ ಕೈಕುಲುಕಿ ದರ್ಶನ ಮಾಡಿಕೊಂಡರು.

ನಾಲ್ಕನೇ ಬಾರಿ :

ವಿನೋಬಾ ಭಾವೆ ಅವರ ನೇತೃತ್ವದಲ್ಲಿ `ಭೂದಾನ’ ಚಳುವಳಿಯು ತೀವ್ರಗತಿಯಲ್ಲಿತ್ತು. ಸೇವಾಗ್ರಾಮದಲ್ಲಿ ವಿನೋಬಾ ಭಾವೆ ಅವರ ಜತೆಯಲ್ಲಿ ಗಾಂಧಿಯವರಿದ್ದರು. ಈ ಸಂದರ್ಭದಲ್ಲಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಗಾಂಧಿಯವರ ಭೇಟಿಗಾಗಿ ಬಂದಿದ್ದರು. `ತಮ್ಮ ದರ್ಶನಕ್ಕಾಗಿಯೇ ಬಂದಿದ್ದೇನೆ’ ಎಂದು ಡಾ.ರಾಧಾಕೃಷ್ಣನ್ ಅವರು ಮನವಿ ಮಾಡಕೊಂಡಾಗ, ತಕ್ಷಣವೇ ಗಾಂಧಿಯವರು, `ನನ್ನ ದರ್ಶನದಿಂದ ಏನು ಲಾಭ? ವಿನೋಬಾ ಭಾವೆ ಅವರನ್ನು ಕಾಣು’ ಎಂದು ಹೇಳಿದರಂತೆ. ವಿನೋಬಾ ಭಾವೆ ಅವರ ಕೆಲಸವನ್ನು ಮತ್ತು ಅವರನ್ನು ಕಂಡ ರಾಧಾಕೃಷ್ಣನ್ ಅವರು ಹೇಳಿದ ಮಾತುಗಳು, ಅದೇ ಸಮಯದಲ್ಲಿ ಅಲ್ಲಿದ್ದ ದೇವುಳಗಾಂವಕರ್ ಅವರು ಕೇಳಿಸಿಕೊಂಡರಂತೆ. ಆ ಮಾತುಗಳಿಂದ ಅವರು ಪ್ರಭಾವಿತಗೊಂಡರು. ಹೀಗೆ, ಗಾಂಧಿಯವರನ್ನು ನಾಲ್ಕು ಬಾರಿ ಕಂಡು ದರ್ಶನ ಪಡೆದಿದ್ದರಿಂದ ಪುಳಕಿತಗೊಂಡ ದೇವುಳಗಾಂವಕರ್ ಅವರ ಸ್ವಾತಂತ್ರ್ಯ ಚಳುವಳಿಗೆ ಇನ್ನಷ್ಟು ಇಂಬು ನೀಡಿತು.

ಗಾಂಧಿಯವರ ಈ ಪ್ರಭಾವಲಯದಲ್ಲಿ ಇರುವಾಗಲೇ, ನಿಜಾಂ ಕಾಲೇಜಿನಿಂದ ಪದವಿ ಪಡೆದ ನಂತರ ಕಲಬುರ್ಗಿಯಲ್ಲಿ ಅವರ ದೊಡ್ಡಪ್ಪ ಸ್ಥಾಪಿಸಿದ ನೂತನ ವಿದ್ಯಾಲಯ ಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದರು. ದೇಶ ಸ್ವಾತಂತ್ರ್ಯಗೊಂಡರೂ ಹೈದ್ರಾಬಾದ್ ನಿಜಾಂ ಸಂಸ್ಥಾನಕ್ಕೆ ಒಳಪಟ್ಟ ಕಲಬುರ್ಗಿ, ಬೀದರ್ ಮತ್ತು ರಾಯಚೂರು ಭಾಗ ಸ್ವತಂತ್ರಗೊಂಡಿರಲಿಲ್ಲ. ಇದಕ್ಕಾಗಿ ಈ ಭಾಗದಲ್ಲಿ ಸ್ವಾಮಿ ರಮಾನಂದ ತೀರ್ಥ ಅವರ ನೇತೃತ್ವದಲ್ಲಿ ಚಳುವಳಿ ಶುರುವಾಗಿತ್ತು. ಹೀಗೆಯೇ ಒಮ್ಮೆ ನೂತನ ವಿದ್ಯಾಲಯ ಸ್ಕೂಲಿನಲ್ಲಿ ರಮಾನಂದರ ಭಾಷಣವಿತ್ತು.

ದೇವುಳಗಾಂವಕರ್ ಅವರು ಗಾಂಧಿಯವರನ್ನು ಕಂಡಿದ್ದರ ಬಗ್ಗೆ ಮತ್ತು ಅವರಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕುವ ತೀವ್ರತೆಯ ಬಗ್ಗೆ ತಿಳಿದುಕೊಂಡಿದ್ದ ಸ್ವಾಮಿ ರಮಾನಂದ ತೀರ್ಥರು, `ನಿಮ್ಮಂಥವರು ಹೀಗೆ ಶಾಲೆಯಲ್ಲಿ ಕೂತರೆ ಹೇಗೆ? ನಡೀರಿ ನಮ್ಮ ಜೊತೆ’ ಎಂದು ಹೇಳಿದರು.

ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕುವ ತುಡಿತ ಹೊಂದಿದ್ದ ದೇವುಳಗಾಂವಕರ್ ಅವರು, ನೂತನ ವಿದ್ಯಾಲಯದಲ್ಲಿದ್ದ ಶಿಕ್ಷಕ ನೌಕರಿಯನ್ನು ಬಿಟ್ಟು, ಚಳುವಳಿಯನ್ನು ಸೇರಿಕೊಂಡರು. ಅವರಾದಿ ದತ್ತಾತ್ರೇಯ, ಹಣಮಂತರಾಯ ಕಕ್ಕೇರಿ, ಬಿ.ಅಶ್ವಥರಾವ, ನಾರಾಯಣರಾವ, ಸೀತಾರಾಮ ಜೋಶಿ, ನಾರಾಯಣ ಕಾನೇಹಾಳ ಅವರೊಂದಿಗೆ ಚಳುವಳಿ ಶುರು ಮಾಡಿದರು. ಹಳ್ಳಿಗಳಿಗೆ ಹೋಗಿ ಕರಪತ್ರಗಳನ್ನು ಹಂಚಿದರು. ರೈಲ್ವೆ ಭೋಗಿಗಳ ಮೇಲೆ ನಡೆದಾಡಿ ಊರೂರಿಗೆ ಹೋದರು.

ಚಳುವಳಿಯಲ್ಲಿ ಪಾಲ್ಗೊಳ್ಳುವಂತೆ ಯುವಕರನ್ನು ಹುರಿದುಂಬಿಸಿದರು. ಈ ಸಂದರ್ಭದಲ್ಲಿ ಒಮ್ಮೆ ನಿಜಾಂ ಸರಕಾರದ ಪೊಲೀಸರು ದೇವುಳಗಾಂವಕರ್ ಅವರ ಮನೆ ಕಡೆ ಬರುತ್ತಿದ್ದರು. ಇದನು ಗಮನಿಸಿದ ತಂದೆ ಪಾಂಡುರಂಗರಾವ ಅವರು ಒಳಗೆ ಹೋಗಿ ಮಗ ವಿಠ್ಠಲರಾವನನ್ನು ಮತ್ತು ಮನೆಯಲ್ಲಿಯೇ ಚಳುವಳಿ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸುತ್ತಿದ್ದ ಇನ್ನುಳಿದ ಜನರನ್ನು `ಪೊಲೀಸರು ಬರುತ್ತಿದ್ದಾರೆ, ಏನ್ ಮಾಡ್ತಿರಿ ನೋಡ್ರಪ್ಪ’ ಎಂದರು. ನಾರಾಯಣರಾವ ಭೂಗತರಾದರು. ಉಳಿದವರನ್ನು ಬಂಧಿಸಿ ಕುಲಾಲಿ ಪೊಲೀಸ್ ಸ್ಟೇಷನ್ಗೆ ಕರೆದುಕೊಂಡು ಹೋದರು. ಮಧ್ಯಾಹ್ನ 12 ರವರೆಗೆ ಕುಳಿಸಿಕೊಂಡು ನಂತರ ಜೈಲಿಗೆ ಕಳಿಸಿದರು.

ಆ ಸಂದರ್ಭದಲ್ಲಿ ಎಸ್.ಹಣಮಂತ ಎಂಬುವವರು `ನಾಗರಿಕ’ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಅದರಲ್ಲಿ ಚಳುವಳಿ ಬಗ್ಗೆ ಪ್ರೇರಣೆಯ ಲೇಖನಗಳನ್ನು ಪ್ರಕಟಿಸಲಾಗುತ್ತಿತ್ತು. ಹೀಗಾಗಿ ಕರಪತ್ರಗಳ ಜತೆಗೆ `ನಾಗರಿಕ’ ಪತ್ರಿಕೆಯನ್ನು ಹಂಚುತ್ತಿದ್ದರು.

ಸ್ವಾಮಿ ರಮಾನಂದ ತೀರ್ಥರು ಹೈದ್ರಾಬಾದ್ ಸ್ಟೇಟ್ ಕನರ್ಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಒಬ್ಬ ಸಮರ್ಥರನ್ನು ಹುಡುಕುತ್ತಿದ್ದರು. ಆ ಸಂದರ್ಭದಲ್ಲಿ ಚಳುವಳಿಯಲ್ಲಿ ಕಾಣಿಸಿಕೊಂಡ ದೇವುಳಗಾಂವಕರ್ ಅವರನ್ನು ಪ್ರಧಾನ ಕಾರ್ಯದಶರ್ಿಯನ್ನಾಗಿ ಮಾಡಿದರು ಚಳುವಳಿಗೆ ಇನ್ನಷ್ಟು ತೀವ್ರತೆ ಬಂತು. ಗಾಂಧಿಯವರ ಪ್ರಭಾವ ಆಗಿದ್ದರಿಂದ ಹೈದ್ರಾಬಾದ್ ಸಂಸ್ಥಾನದ ಮುಕ್ತಿಗಾಗಿ ಹೋರಾಡಲು ಪುಷ್ಠಿ ನೀಡಿತು.

ಬದುಕಿನ ಕೊನೆ ಉಸಿರಿನವರೆಗೂ ಬೆಳಿಗ್ಗೆ 6ರಿಂದ 6.15 ರೊಳಗೆ ಏಳುತ್ತಿದ್ದರು ಮುಂಜಾನೆಯ ಎಲ್ಲ ಕಾರ್ಯಗಳನ್ನು ಮುಗಿಸಿ, ಸ್ನಾನ, ಪೂಜಾ ಕಾರ್ಯಕ್ರಮ ಮತ್ತು ಸಂಧ್ಯಾವಂದನೆ ಮಾಡುತ್ತಿದ್ದರು. ಸಮಾಜ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದರು. ಬದುಕಿನ ಕೊನೆ ಘಟ್ಟದಲ್ಲಿ ಅಂದರೆ, ತೀರಾ ವಯಸ್ಸಾಗುತ್ತ ಬಂದಂತೆಲ್ಲ ಆಧ್ಯಾತ್ಮದೆಡೆಗೆ ಒಲವು ತೋರಿಸಿದ್ದರು. ಅವರಿಗೆ ಯಾರೇ ಪತ್ರಗಳನ್ನು ಬರೆದರೆ, ತಕ್ಷಣವೇ ಉತ್ತರ ಬರೆದು ಹಾಕುತ್ತಿದ್ದರು. ಸಮಯ ಪ್ರಜ್ಞೆ ಅವರಲ್ಲಿ ಗಾಢವಾಗಿತ್ತು. ಸತ್ಯದ ಪರಿಪಾಲನೆ ಮಾಡುತ್ತಿದ್ದರು. ಕೊನೆಯವರೆಗೂ ಸಸ್ಯಹಾರಿಗಳಾಗಿಯೇ ಇದ್ದರು. ಗಾಂಧಿಯವರ ತತ್ವಗಳನ್ನು ಅಕ್ಷರಶಃ ಪಾಲಿಸುತ್ತಿದ್ದರು. ಅನ್ಯ ಊರಿಗೆ ಹೊದರೂ ಗೆಳೆಯರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಯಾರಿಗೂ ಹೊರೆಯಾಗದ ರೀತಿಯಲ್ಲಿ ಅವರು ಇರುತ್ತಿದ್ದರು. ಸ್ವಚ್ಛತೆಗೆ ಅವರು ಹೆಚ್ಚು ಮಹತ್ವ ಕೊಡುತ್ತಿದ್ದರು. `ಮಡಿ’ ಎಂಬುದು ಸ್ವಚ್ಛತೆಯಲ್ಲಿ ಕಾಣಬಹುದಿತ್ತು. ಪ್ರವಾಸ ಎಂದರೆ ಅವರಿಗೆ ತುಂಬಾ ಇಷ್ಟ. ಬೆಳಿಗ್ಗೆ ಒಂದು ಹೊತ್ತು ಕಾಫಿ. ಒಮ್ಮೆಯೇ ಊಟ. ಮಿತವಾದ ಆಹಾರ. ಸಂಜೆ ಒಂದು ಬಟ್ಟಲು ಅವಲಕ್ಕಿ, ಸ್ಯಾವಿಗೆ.. ಏನಾದರೂ ಸರಿಯೇ.

ಖಾದಿಯ ಧೋತರ, ಖಾದಿ ಅಂಗಿ, ಜಾಕೀಟ್, ಕೋಟು ಮತ್ತು ಗಾಂಧಿ ಟೋಪಿ. ಸ್ವಂತಕ್ಕಾಗಿ ಏನೂ ಇಲ್ಲ. ಎಲ್ಲವೂ ಇನ್ನೊಬ್ಬರಿಗಾಗಿಯೇ ಮಾಡಿದ್ದಾರೆ. ಶ್ರವಣಯಂತ್ರವನ್ನು ಖರೀದಿಸುವಾಗ ಅದರ ದರ ಕಂಡು ಬೇಡ ಎಂದರಂತೆ. ಆದರೆ, ದೇವುಳಗಾಂವಕರ್ ಅವರನ್ನು ಹೆಚ್ಚು ಪ್ರೀತಿಸುವ ಅವರ ಮೊಮ್ಮಗ ನಿಲೇಶ ಕಂಪ್ಯೂಟರ್ ಬೇಕು ಎಂದು ಕೇಳಿದನಂತೆ. ತಕ್ಷಣವೇ ಕೊಡಿಸಿದರಂತೆ.. ಹೀಗೆಂದು ಅವರ ಸೊಸೆ ಶೀತಲ್ ಆವತ್ತು ಸಂದರ್ಶನದಲ್ಲಿ ಹೇಳಿದ್ದು ನೆನಪಾಯಿತು.

ದೇವುಳಗಾಂವಕರ್ ಅವರ ಎಲ್ಲ ಕೆಲಸಗಳಿಗೆ ಪತ್ನಿ ಇಂದಿರಾಬಾಯಿ ಅವರ ಪ್ರೋತ್ಸಾಹವಿತ್ತು. ಒಬ್ಬ ಮಗ ಕಿಶೋರ ಡಾಟ್ಕರ್. ಶುಭಾ ಮತ್ತು ಪ್ರತಿಭಾ ಇಬ್ಬರು ಹೆಣ್ಣುಮಕ್ಕಳು. ಸೊಸೆ ಶೀತಲ್ ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಬಲ್ಲ ಲೇಖಕಿ. ಒಬ್ಬಳು ಮೊಮ್ಮಗಳು ಮತ್ತು ಇಬ್ಬರು ಮೊಮ್ಮಕ್ಕಳನ್ನು ಪಡೆದಿರುವ ದೇವುಳಗಾಂವಕರ್ ನಿಜಕ್ಕೂ ಆವತ್ತು ಹಸನ್ಮುಖಿಯಾಗಿದ್ದರು.

ಇಂಗ್ಲೀಷಿನಿಂದ ಮರಾಠಿಗೆ ಸ್ವಾಮಿ ರಮಾನಂದ ತೀರ್ಥರ ಹೈದ್ರಾಬಾದ್ ವಿಮೋಚನಾ ಚಳುವಳಿಯ ನೆನಪುಳು, ಮರಾಠಿ ಪ್ರಬಂಧಗಳ ಬೆಳವಣಿಗೆ, ಮರಾಠಿ ವ್ಯಾಕರಣ, ಅಮರ ಸಾಹಿತ್ಯ, ಕನ್ನಡ ಕಥಾ ಸೌಗಂಧ ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು ಮರಾಠಿ ಭಾಷೆಯಲ್ಲಿ ಪ್ರಕಟಗೊಂಡಿವೆ. ಸ್ವಾಮಿ ರಮಾನಂದ ತೀರ್ಥರ ಜೀವನ ಚರಿತ್ರೆಯನ್ನು ಮರಾಠಿ ಮತ್ತು ಇಂಗ್ಲೀಷಿನಲ್ಲಿ ಬರೆದಿದ್ದಾರೆ. ಶಿವರಾಮ ಕಾರಂತರ ಯಕ್ಷಗಾನ ಬಯಲಾಟವನ್ನು ಮತ್ತು ಇಂಥ ಮೇಧಾವಿ ಶಿಕ್ಷಣ ತಜ್ಞ, ಸ್ವಾತಂತ್ರ್ಯ ಸೇನಾನಿ ಭಾವುಸಾಹೇಬ್ ದೇವುಳಗಾಂವಕರ್ ಅವರಿಗೆ ಅಭಿನಂದನಾ ರೂಪದಲ್ಲಿ ಗ್ರಂಥಗಳು ಪ್ರಕಟವಾಗಿವೆ. ಮರಾಠಿಯಲ್ಲಿ `ದಿಂಡಿ’ ಮತ್ತು ಕನ್ನಡದಲ್ಲಿ `ದೇವುಳ ಕನ್ನಡ ಉಲಿ’ ಪ್ರಕಟಗೊಂಡಿವೆ.

 

‍ಲೇಖಕರು G

December 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Gopaal Wajapeyi

    ಈ ಹಿರಿಯರನ್ನು ಕಂಡು ಕೈಮುಗಿಯುವ ಅವಕಾಶವೊಂದು ನನಗೆ ಒದಗಿತ್ತು. ಅದು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಗುಲಬರ್ಗಾ ಆವೃತ್ತಿಯ ಬಿಡುಗಡೆಯ ಸಂದರ್ಭ. ನಿಮ್ಮ ಈ ಲೇಖನ ಓದಿ ಮತ್ತೆ ಆ ಸಂದರ್ಭ ಕಣ್ಣೆದುರು ಕಟ್ಟಿತು. ಆ ದಿವ್ಯಚೇತನಕ್ಕಿದೋ ‘ನಮೋ’ ಎಂಬೆ…

    ಪ್ರತಿಕ್ರಿಯೆ
  2. basavaraj mudanur

    ನಾನು ಡಿಗ್ರಿ ಓದುತ್ತಿದ್ದ ಕಾಲದಲ್ಲಿ ನೀವು ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದ ‘ಮರೆತೇನೆಂದರ ಮರೆಯಲಿ ಹ್ಯಾಂಗ’ ತಪ್ಪದೇ ಓದುತ್ತಿದ್ದೆ ಅಷ್ಟೊಂದು ಸ್ವಾರಸ್ಯಕರವಾಗಿತ್ತು ಇಮ್ಮ ಬರಹ. ನಂತರ ನಾನು ಚಿತ್ರದುರ್ಗ ಸೇರಿದ ಪರಿಣಾಮ ನೀವು ಬರೆದ ಪುಸ್ತಕ ಕಳುಹಿಸಿ ಸರ್ ಎಂದು ಫೋನ್ ಮಾಡಿ ಹೇಳಿದೆ ನೀವು ಓಕೆ ಅಂದಿರಿ ಆದರೂ ಕಳುಹಿಸಿಲ್ಲ. ಇದೀಗ ‘ಅವಧಿ’ಯಲ್ಲಿ
    ನಿಮ್ಮ ಬರಹ ಓದುವ ಅದೃಷ್ಟ ಲಭಿಸಿದೆ ಧನ್ಯೋಸ್ಮಿ.
    ‘ಇಂದು ಜರೂರಾಗಿರುವ ಆದರ್ಶ. ಸಾಹೇಬರು ಕೊನೆಗಾಲದಲ್ಲೂ ಊರುಗೋಲು
    ಬಳಸುತ್ತಿರಲಿಲ್ಲ, ಸೊಸೆ ಒತ್ತಾಯ ಮಾಡಿ ಅವರ ಕೆಲಸ ಅವರೆ ಮಾಡಿಕೊಳ್ಳುವುದನ್ನು ಬಿಡಿಸಬೇಕಾಯ್ತು ಎಂಬ ಮಾತುಗಳನ್ನು ಹಾಗೂ ಗಾಂಧಿಜಿ
    ಕಂಡ ಸಾಹೇಬರು ಹಾಗೂ ಗಾಂಧಿ ಪ್ರಭಾವದ ಬಗ್ಗೆ ಎಷ್ಟು ಚೆಂದಗೆ ಬರೆದಿದ್ದೀರಿ ಸರ್. ನಿಜಕ್ಕೂ ಓದಿನ ಖುಷಿ ಅನುಭವಿಸಿದೆ . -ಬಸವರಾಜ ಮುದನೂರ, ಪತ್ರಕರ್ತ, ಚಿತ್ರದುರ್ಗ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: