’ಮುನ್ನುಡಿ ಬೆನ್ನುಡಿಗಳ ಹಿನ್ನೆಲೆಯಲ್ಲಿ…’ – ಜಿ ಪಿ ಬಸವರಾಜು

ಜಿ ಪಿ ಬಸವರಾಜು

ಲೇಖಕರು ಮುನ್ನುಡಿ, ಬೆನ್ನುಡಿಗಳ ಬೆನ್ನುಹಿಡಿದು ಹೋಗುವುದೇತಕ್ಕೆ? ಸಾಹಿತ್ಯ ಕ್ಷೇತ್ರಕ್ಕೆ ಇದೀಗ ಪ್ರವೇಶ ಪಡೆಯುತ್ತಿರುವ ಬರಹಗಾರರಿಗೆ ಇವುಗಳ ಅಗತ್ಯ ಇರಬಹುದು. ಅವರ ಆತ್ಮವಿಶ್ವಾಸವನ್ನು ಕುದುರಿಸಲು ಇವು ಬೇಕಾಗಲೂಬಹುದು. ಹಾಗೆಯೇ ಓದುಗರಿಗೆ ಹೊಸ ಧ್ವನಿಗಳನ್ನು ಪರಿಚಯಿಸುವ ಕೆಲಸವೂ ಆಗಬೇಕಾಗುತ್ತದೆ. ಆದರೆ ಈಗಾಗಲೇ ತಮ್ಮ ಕೃತಿಗಳ ಮೂಲಕ ಹೆಸರು ಮಾಡಿದವರು, ತಮ್ಮ ಮುದ್ರೆಯನ್ನು ಒತ್ತಿರುವವರು, ಓದುಗರ ನಿರೀಕ್ಷೆಯನ್ನು ಎತ್ತರಿಸಿದವರು-ಇಂಥ ಲೇಖಕರಿಗೂ ಮುನ್ನುಡಿ ಬೆನ್ನುಡಿಗಳ ಅಗತ್ಯವಿರುತ್ತದೆಯೇ?
ತಮ್ಮ ‘ಭೂಮಿಗೀತ’ ಸಂಕಲವನ್ನು ಪ್ರಕಟಿಸುವ ಹೊತ್ತಿಗೆ ಕವಿ ಎಂ.ಗೋಪಾಲ ಕೃಷ್ಣ ಅಡಿಗರು ಮಧ್ಯವಯಸ್ಸನ್ನು ತಲುಪಿದ್ದರು. ನವ್ಯ ಪಂಥದ ನಾಯಕರೂ ಆಗಿದ್ದರು. ‘ಚಂಡೆಮದ್ದಳೆ’ಯ ಮೂಲಕ ಅವರ ಧ್ವನಿ ಆಗಲೇ ಮೊಳಗಿತ್ತು. ನವೋದಯದ ವಿರುದ್ಧ ಸೆಡ್ಡು ಹೊಡೆದು ನಿಂತಿದ್ದ ಅಡಿಗರು ಹೊಸ ತಲೆಮಾರನ್ನು ಪ್ರಭಾವಿಸಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸದೊಂದು ಅಭಿವ್ಯಕ್ತಿ ಕ್ರಮಕ್ಕೆ ಪ್ರಯತ್ನಿಸಿ ದೊಡ್ಡ ಕವಿ ಎನ್ನಿಸಿಕೊಂಡಿದ್ದರು. ಅಂಥವರೂ ‘ಭೂಮಿಗೀತ’ಕ್ಕೆ ಅನಂತಮೂತರ್ಿಯವರಿಂದ ಮುನ್ನುಡಿಯನ್ನು ಬರೆಸಿದ್ದರು. ಅನಂತಮೂರ್ತಿ ಆಗಿನ್ನೂ ತರುಣ; 25ರ ಆಜುಬಾಜು ಇದ್ದವರು. ಅಡಿಗರಿಗೆ ಈ ಮುನ್ನುಡಿಯ ಅಗತ್ಯವಿತ್ತೇ?

ಅನಂತಮೂರ್ತಿಯವರ ಈ ಮುನ್ನುಡಿ ಎಷ್ಟು ಮಹತ್ವದ್ದೆಂದರೆ ಇವತ್ತಿಗೂ ಭೂಮಿಗೀತದ ಕವಿತೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವರಿಗೆ ಇದು ದೊಡ್ಡ ನೆರವನ್ನು ನೀಡುತ್ತದೆ. ಹೊಸ ಕಾವ್ಯವೊಂದರ ಲಯ, ಅರ್ಥವಂತಿಕೆ, ಅದರ ವಿಭಿನ್ನ ಆಯಾಮಗಳು, ಶಿಲ್ಪದ ಸೊಗಸು, ಪ್ರತಿಮಾ ವಿಧಾನ ಇತ್ಯಾದಿ ಅನೇಕ ಸಂಗತಿಗಳ ಬಗ್ಗೆ ಈ ಮುನ್ನುಡಿ ಬೆಳಕುಚೆಲ್ಲುತ್ತದೆ; ಹೊಸ ಹೊಸ ಒಳನೋಟಗಳನ್ನು ಕಟ್ಟಿಕೊಡುತ್ತ, ಹೊಸ ಅಭಿವ್ಯಕ್ತಿಯಲ್ಲಿ ಹುಟ್ಟಿಕೊಂಡ ಇಲ್ಲಿನ ಕವಿತೆಗಳ ಅರ್ಥವಂತಿಕೆಯನ್ನು ತೋರಿಸಿಕೊಡುತ್ತದೆ.
ಮುನ್ನುಡಿ ಎಂದರೆ ಕೇವಲ ಬೆನ್ತಟ್ಟುವ ಕೆಲಸವಲ್ಲ; ಒಂದು ರೀತಿಯ ವಿಮರ್ಶೆಗೂ ಈ ಮುನ್ನುಡಿ ದಾರಿ ಮಾಡಿಕೊಡುತ್ತದೆ. ಗುಣವನ್ನು ಮೆಚ್ಚುತ್ತಲೇ ನಿರ್ದಾಕ್ಷಿಣ್ಯವಾಗಿ ಟೀಕಿಸುವ ಕೆಲಸವನ್ನು ವಿಮರ್ಶೆ ಮಾಡುತ್ತದೆ ಎನ್ನುವುದಾದರೆ, ಕನ್ನಡದಲ್ಲಿ ಬಂದ ಮತ್ತು ಬರುತ್ತಿರುವ ಅನೇಕ ಮುನ್ನುಡಿಗಳು ವಿಮರ್ಶೆಯ ಹೊಣೆಗಾರಿಕೆಯನ್ನು ನಿಭಾಯಿಸಿವೆ ಎನ್ನುವುದು ನಿಜ. ಇದು ನಮ್ಮ ಸಾಹಿತ್ಯದ ಆರೋಗ್ಯಕರ ಬೆಳವಣಿಗೆಯನ್ನು ಸೂಚಿಸುತ್ತದೆ.
ಬಹುಶಃ ಬಹುಪಾಲು ಲೇಖಕರೂ ಇಂಥ ಮುನ್ನುಡಿಗಳನ್ನು ಇಷ್ಟಪಡುವ ಕಾರಣ, ಪ್ರತಿಯೊಂದು ಕೃತಿಯೂ ಮುನ್ನುಡಿಯೊಂದಿಗೆ ಪ್ರಕಟವಾಗುತ್ತಿರುವುದನ್ನು ನೋಡಬಹುದು. (ಓದುಗರನ್ನು ದಾರಿತಪ್ಪಿಸುವ, ಲೇಖಕರನ್ನು ಅಟ್ಟದ ಮೇಲೆ ಕೂರಿಸುವ ಭಟ್ಟಂಗಿ ಮುನ್ನುಡಿಗಳ ಸಂಖ್ಯೆಯೇ ಹೆಚ್ಚಾಗಿದೆ ಎಂಬುದನ್ನು ಮರೆಯುವಂತಿಲ್ಲ) ಮುನ್ನುಡಿಯನ್ನು ಲೇಖಕ ಬಯಸುವುದರ ಹಿಂದೆ ಇನ್ನೊಂದು ಅಂಶವೂ ಇದೆ. ಕೃತಿ ಪ್ರಕಟವಾದ ಮೇಲೆ ಸರಿಯಾದ ವಿಮರ್ಶೆಯೇ ಪ್ರಕಟಗೊಳ್ಳದಿರುವುದು ಇವತ್ತಿನ ಕಟು ವಾಸ್ತವವೂ ಆಗಿದೆ. ಆದ್ದರಿಂದಲೇ ವಿಮರ್ಶಾತ್ಮಕ ಮುನ್ನುಡಿಯೊಂದು ಪ್ರಕಟವಾದರೆ ಅದು ವಿಮರ್ಶೆಯ ಹೊಣೆಗಾರಿಕೆಯನ್ನೂ ನಿಭಾಯಿಸಿ, ಲೇಖಕನಿಗೆ ಮತ್ತು ಓದುಗರಿಗೆ ನ್ಯಾಯ ದೊರಕಿಸಬಹುದೆಂಬ ತರ್ಕವೂ ಇದೆ.
ಹಿಂದೆ ವಿಮರ್ಶೆಯ ಕೆಲಸವನ್ನು ಕೆಲವೇ ಕೆಲವು ಪತ್ರಿಕೆಗಳಾದರೂ ಸಮರ್ಥವಾಗಿ ಮಾಡುತ್ತಿದ್ದವು. ಸಾಹಿತ್ಯಕ ಪತ್ರಿಕೆಗಳಲ್ಲಿಯೂ ವಿಮರ್ಶೆ ಎನ್ನುವುದು ಅರ್ಥಪೂರ್ಣ ಸಂವಾದಕ್ಕೆ ಎಡೆಮಾಡಿಕೊಡುತ್ತಿತ್ತು. ಇವತ್ತು ಪತ್ರಿಕೆಗಳಲ್ಲಿ ವಿಮರ್ಶೆಗೆ ಜಾಗದ ಅಭಾವ. ಜಾಗವೆಂದರೆ ಅದು ಹಣವನ್ನು ತರುವ ಜಾಹಿರಾತಿಗೆ ಮೀಸಲು. ಎಷ್ಟು ಚುಟುಕಾಗಿ ವಿಮರ್ಶೆ ಇದ್ದರೆ ಅದು ತನಗೆ ಲಾಭ ಎಂದು ಭಾವಿಸುವ ಪತ್ರಿಕೆಗಳೇ ಹೆಚ್ಚು. ವಿಮರ್ಶೆ ಎನ್ನುವ ಬರಹ ಇಲ್ಲದಿದ್ದರೂ ಪತ್ರಿಕೆಯ ಪ್ರಸಾರ ಸಂಖ್ಯೆ ಇಳಿಯುವುದಿಲ್ಲ. ಕೆಲವೇ ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ವಿಮರ್ಶೆ ಎನ್ನುವುದು ಸಾಹಿತ್ಯಕ ಹೊಣೆಗಾರಿಕೆ, ಸಾಮಾಜಿಕ ಬದ್ಧತೆ ಎನ್ನುವಂತೆ ಪತ್ರಿಕೆಗಳು ಭಾವಿಸಿದಂತೆ ತೋರುತ್ತಿತ್ತು. ವರ್ಷದಲ್ಲಿ ಬರುವ ಎಲ್ಲ ವಿಮರ್ಶೆಗಳನ್ನು ಸಂಗ್ರಹಿಸಿ ಇಟ್ಟುಕೊಂಡರೆ, ವರ್ಷದ ಪ್ರಮುಖ ಕೃತಿಗಳ ಮೌಲ್ಯಮಾಪನವಾಗುತ್ತಿತ್ತು. ಕನ್ನಡದ ಮುಖ್ಯ ವಿಮರ್ಶಕರು ಉತ್ಸಾಹದಿಂದ ವಿಮರ್ಶೆಯನ್ನು ಬರೆಯುತ್ತಿದ್ದರು. ಛೇಡಿಸುವುದು, ವ್ಯಂಗ್ಯವಾಡುವುದು, ಕಾಲೆಳೆಯುವುದು ಇದ್ದರೂ, ಉತ್ತಮ ಕೃತಿಗಳಿಗೆ ಸಿಕ್ಕಬೇಕಾದ ನ್ಯಾಯ ಸಿಕ್ಕೇ ಸಿಕ್ಕುತ್ತದೆ ಎಂಬ ಭರವಸೆಯ ವಾತಾವರಣವಿತ್ತು. ಅಲ್ಲದೆ ಗಮನಾರ್ಹ ಕೃತಿಗಳು, ಭರವಸೆಯ ಧ್ವನಿಗಳು ಓದುಗರ ಕಣ್ತಪ್ಪದಂತೆ ಈ ವಿಮರ್ಶೆಗಳು ನೋಡಿಕೊಳ್ಳುತ್ತಿದ್ದವು. ದೊಡ್ಡ ಪತ್ರಿಕೆಗಳ ಪುರವಣಿಗಳಲ್ಲಿ ಈ ಕಾರ್ಯ ಶಿಸ್ತ್ತುಬದ್ಧವಾಗಿ ನಡೆಯುತ್ತಿತ್ತು. ಸಾಹಿತ್ಯಕ ಪತ್ರಿಕೆಗಳಲ್ಲಂತೂ ಇದು ಇನ್ನಷ್ಟು ಅರ್ಥಪೂರ್ಣವಾಗಿ ಇರುತ್ತಿತ್ತು. ತನ್ನೆಲ್ಲ ಸೃಜನಶೀಲತೆಯನ್ನು ಪಣಕ್ಕಿಟ್ಟು ಬರೆಯುವ ಉತ್ಸಾಹ ಲೇಖಕರಲ್ಲೂ ಮೂಡುತ್ತಿತ್ತು. ಕೊಳ್ಳುವ ಓದುಗನಿಗೆ ಈ ಪುಸ್ತಕ ವಿಮರ್ಶೆ ಎನ್ನುವುದು ಮಾರ್ಗ ಸೂಚಿಯೂ ಆಗಿರುತ್ತಿತ್ತು. ಪ್ರಕಾಶಕರಿಗೂ ಇದರ ಪ್ರಯೋಜನವಾಗುತ್ತಿತ್ತು. ಹಿಂದೆ ಸಾಹಿತ್ಯ ಪತ್ರಿಕೆಗಳಲ್ಲಿ ನಡೆಯುತ್ತಿದ್ದ ದೊಡ್ಡ ಚರ್ಚೆಗಳು, ವಾಗ್ವಾದಗಳು, ವಿಮರ್ಶೆಯ ವಿವೇಕವನ್ನು, ಓದುಗ ಸಂವೇದನೆಯನ್ನು ಹರಿತಗೊಳಿಸುತ್ತಿದ್ದವು. ಜನಪ್ರಿಯ ಮತ್ತು ಹೆಚ್ಚಿನ ಪ್ರಸಾರದ ಸಾಪ್ತಾಹಿಕಗಳ ಮೇಲೂ ಈ ಪ್ರಭಾವ ಇರುತ್ತಿತ್ತು.
ಇವತ್ತಿನ ಬದಲಾದ ಪರಿಸ್ಥಿತಿಯಲ್ಲಿ ಅದೆಲ್ಲ ಕಣ್ಮರೆಯಾಗಿದೆ. ‘ಟಾಪ್ ಟೆನ್’ಗಳು ಮಾರುಕಟ್ಟೆಯ ಮಾನದಂಡಗಳಾಗಿವೆ. ‘ವಿಮರ್ಶೆ’ ಎಂದು ಪ್ರಕಟವಾಗುವ ಬರಹಗಳೂ ಬೇಕಾಬಿಟ್ಟಿಯಾಗಿರುತ್ತವೆ. ಅನೇಕರು ಮುನ್ನುಡಿ ಬೆನ್ನುಡಿಗಳ ಮಾತುಗಳನ್ನು ಹೆಕ್ಕಿ ಕೈತೊಳೆದುಕೊಳ್ಳುವ ವಿಮರ್ಶಕರೂ ಇದ್ದಾರೆ. ಇದು ಪರಿಚಯ, ಇದು ಕಿರುವಿಮರ್ಶೆ ಇತ್ಯಾದಿ ಮಾತುಗಳಲ್ಲಿ ತಮ್ಮ ಬರಹಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಪದಮಿತಿಯ ಕಾರಣವೋ ಅಥವಾ ಪತ್ರಿಕೆಗಳ ಹೊಣೆಗೇಡಿತನವು ಕಾರಣವೋ ಅಂತೂ ನಮ್ಮ ಪ್ರಮುಖ ವಿಮರ್ಶಕರನೇಕರು ಉತ್ಸಾಹದಿಂದ ಪುಸ್ತಕ ವಿಮಶರ್ೆಯನ್ನು ಮಾಡುತ್ತಿಲ್ಲ. ಇನ್ನೂ ಕೆಲವರು ಗಂಭೀರ ವಿಮರ್ಶೆಯಲ್ಲಿ ತೊಡಗಿಕೊಂಡಿದ್ದರೂ, ಈಗಾಗಲೇ ಚರ್ಚಿತವಾಗಿರುವ, ಮೌಲ್ಯಮಾಪನವಾಗಿರುವ ಕೃತಿಗಳನ್ನೇ ಮತ್ತೆ ಎತ್ತಿಕೊಂಡು ಜಗಿದದ್ದನ್ನೇ ಜಗಿಯುವುದರಲ್ಲಿ ತೃಪ್ತಿಪಟ್ಟುಕೊಳ್ಳುತ್ತಾರೆ. ಇದು ಸಾಹಿತ್ಯದ ಒಟ್ಟಾರೆಯ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿ ಕಾಣುವುದಿಲ್ಲ.
ಇಂಥ ಹಿನ್ನೆಲೆಯಲ್ಲಿ ಲೇಖಕರು ಮುನ್ನುಡಿಯನ್ನು ಅಪೇಕ್ಷಿಸುತ್ತಿರಬಹುದು. ಮುನ್ನುಡಿ ಎನ್ನುವುದು ಕೃತಿಯ ವಿಮರ್ಶೆಯಾಗಿರಲಿ, ತನ್ನ ಮಿತಿಗಳೇನು, ಸಾಮಥ್ರ್ಯವೇನು ಎಂಬುದನ್ನು ವಿಮರ್ಶಕ ಈ ನೆಪದಲ್ಲಾದರೂ ತನಗೆ ತಿಳಿಸಿಕೊಡಲಿ ಎಂಬ ಅಪೇಕ್ಷೆಯೂ ಮುನ್ನುಡಿ ಬರೆಸುವುದರ ಹಿನ್ನೆಲೆಯಲ್ಲಿರಬಹುದು.
ಓದುಗರ ಸಂಖ್ಯೆ ಹೆಚ್ಚಾಗಿರುವಂತೆ ಪ್ರತಿಕ್ರಿಯೆಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ ಅವೆಲ್ಲ ಯಾವ ಮಾದರಿಯವು? ಫೇಸ್ಬುಕ್ ಅಥವಾ ಬ್ಲಾಗ್ಗಳಲ್ಲಿ ಪ್ರಕಟವಾಗುವ ‘ವಾಹ್ವಾ!’ ‘ನೈಸ್’, ‘ವಂಡರ್ಫುಲ್’, ‘ಎಷ್ಟೊಂದು ನವಿರು’-ಇಂಥವೇ.
ಕೃತಿಯೊಂದರ ಬಗ್ಗೆ ವಿಸ್ತಾರವಾಗಿ ಬರೆಯುವ ಪರಿಪಾಠವೇ ಈಗ ಮಾಯವಾಗಿದೆ. ಅದೇನಿದ್ದರೂ ಸೆಲ್ ಫೋನ್ನಲ್ಲಿ ಒಂದೆರಡು ಮಾತುಗಳು. ಅದ್ಭುತವಾದ ಹೊಸ ಕೃತಿಯೊಂದು ಪ್ರಕಟವಾದರೆ ಅದನ್ನು ಕುರಿತ ಗಂಭೀರ ಚರ್ಚೆ, ವಾಗ್ವಾದ, ಅದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಯಾವುದೂ ಇಲ್ಲದೆ ಇಡೀ ಸಾಹಿತ್ಯಕ ವಾತಾವರಣವೇ ಬರಡಾದಂತೆ ಕಾಣಿಸುತ್ತದೆ. ಸಾಂಸ್ಕೃತಿಕ ಬದುಕೇ ಮಂಕಾಗಿರುವ ಈ ಹೊತ್ತಿನಲ್ಲಿ ಸಾಹಿತ್ಯ ಮಾತ್ರ ಝಗಮಗಿಸಬೇಕೆಂದು ಬಯಸುವುದೇ ತಪ್ಪಾಗಬಹುದು. ಹೆಚ್ಚು ಹೆಚ್ಚು ಪತ್ರಿಕೆಗಳಿದ್ದು, ಅತ್ಯಾಧುನಿ ತಂತ್ರಜ್ಞಾನದ ನೆರವಿದ್ದು, ಓದುಗರ ಮತ್ತು ಬರಹಗಾರರ ಸಂಖ್ಯೆಯೂ ಸಮೃದ್ಧವಾಗಿರುವ ಈ ದಿನಗಳಲ್ಲಿ ಮುಖ್ಯವಾದದ್ದೇ ನಾಪತ್ತೆಯಾಗಿರುವುದು ಎಂಥ ದುರಂತ!

‍ಲೇಖಕರು G

May 25, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. Hema Sadanand Amin /mumbai

    namaskaara sir,
    munnudi, bennudi, vimarsheya bagge patrikeya haagu vimarshakara nijavada manadandavannu bahala rochakavaagi vivarisiddhiri. thanks

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: