ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುನಿಸಿಕೊಂಡ ಹನುಮ!

-ಸೂರ್ಯಕೀರ್ತಿ

ಹನುಮನಿಗೂ ನನಗೂ ನಂಟಿರಬಹುದು ಆದರೆ ಹನುಮ ನನಗಿಂತ ಹೆಚ್ಚೇನೂ ಚೇಷ್ಟೆ ಮಾಡಿರಕ್ಕಿಲ್ಲ ಎನ್ನುವ ನಂಬಿಕೆಯೂ ಇದೆ. ಹನುಮನೂ ನನ್ನಂತೆಯೇ ಮನುಷ್ಯ ತಾನೆ ಎಂದು ಅಜ್ಜಿಯೊಂದಿಗೆ ವಾದ ಮಾಡುತ್ತಿದೆ.

ಅಜ್ಜಿಗೆ ಸಿಟ್ಟು ನೆತ್ತಿಗೇರಿ, ಅವ್ನು ದೇವಮಾನವ , ನಾವು ಹುಲುಮಾನವ.. ಹಾಗೇ ಹೀಗೆ ಎಂದು ಸಂಭಾಷಣೆಯ ಮಾಡೋರು. ಕಾಡಲ್ಲಿ ವಾಸಿಸುವ ಕೋತಿಗಳಿಗೆ ನಮ್ಮಷ್ಟು ಬುದ್ಧಿಯಿರುವುದು ನಿಂಗೊತ್ತಿಲ್ಲಜ್ಜಿ ಹೋಗು ಒಲೆ ಮುಂದೆ ಅದೇನೋ ಸೀದು ಹೋಗ್ತಾ ಇದೆ ಅಂತಾ ಕೇಕೆ ಹಾಕಿ ನಗುತ್ತಿದ್ದೆ.

ಯಾಕ್ಲ ಹಂಗ್ ನಕ್ಕೀಯಾ ಥೇಟ್ ನಿನ್ನ ಅಂಗೆಯೇ ಆ ಹನುಮ ಇದ್ನಾ ನಿಂಗೆ ಬಾಲ ವೊಂದ್ ಇಲ್ಲ ನೋಡು ಮತಾ, ಇದಿದ್ರೆ ಆ ಹನುಮನೇ ನೀನು. ಎಂದು ಅಜ್ಜ, ಅಜ್ಜಿ, ಈರಮ್ಮಜ್ಜಿ ಮುಂತಾದವರು ಕಡ್ಲೇಕಾಯಿ ಬೇಯಿಸಿ ಸುಲಿದು ತಿನ್ನುವಾಗ ಮಾತನಾಡೋರು.

ಫೈಲ್ ಫೋಟೋ

ನಂಗೆ ಬಾಳಾ ಸಿಟ್ಟು ಬರೋದು ಬಂದ್ರೆ ಒಂದು ವಾರ ಊಟ ಮಾಡಕ್ಕಿರಲಿಲ್ಲ. ದಮ್ಮಾಯ ದಪ್ಪಯಾ ಅಂದ್ರೂ ವೂಟಾ ಮಾಡ್ತಾನೇ ಇರಲಿಲ್ಲ. ಅಜ್ಜನಿಗೆ ಕೋಪ ಬಂತು. ಈ ಎಕ್ಕಕೊರ್ಮನಿಗೆ ಬುದ್ಧಿ ಬರಬೇಕಾದ್ರೆ ವೂಟವಿಲ್ದೆ ಸಾಯ್ಲಿ ಬಿಡೇ, ಅಚ್ಚೇರಕ್ಕಿ ತಪ್ತು ಅಂತಾ ಸುಮ್ನಾಗೋರು ಮತ್ತೆ ನಿಧಾನವಾಗಿ ಹೊಟ್ಗೆ ಕೊಟ್ಯೇನೆ ? ಅಂತಾ ಅಜ್ಜಿನೇ ಕೇಳೋರು. ಅಜ್ಜನ ಕರುಳು ತುಡಿಯದೇ ಇರ್ತಾನೆ ಇರಲಿಲ್ಲ.

ಈ ಈರಮ್ಮಜ್ಜಿ ಅಂದ್ರೆ ನಮ್ಮ ಮನೆಗೆ ಮಡಿಬಟ್ಟೆಗಳ ಹೊಗೆದು ಸುದ್ಧ ಮಾಡಿಕೊಂಡು ಬರುತ್ತಿದ್ದಜ್ಜಿ. ಬಲು ಗಲಾಟೆ ಅಷ್ಟೇ ಮೃದು. ನನ್ನಜ್ಜಿಗೂ ಇವರಿಗೂ ಬಲೂ ನಂಟು. ಮಾತನಾಡಲೂ ಕುಂತರೇ ನನ್ನ ಸೊಸೆ ಹೊಟ್ಗೆ ಕೊಡಕ್ಕಿಲ್ಲ ಬೈತಾಳೆ ಹೊಡೆತಾಳೆ ನನ್ ಮಗ  ತಾನೆ ಏನು ಮಾಡೋನು ಹಾಗೇ ಹೀಗೆ, ಅವ್ಳು ಅವ್ನ ಇಟ್ನಾಕೊಂಡಾನೇ ಇವ್ನು ಅವ್ಳ ಹತ್ರ ಇವ್ನೆ ಹೀಗೆ ಸಾವಿರಾರು ಕತೆಗಳ ಗೊಂಚಲು ಬೀಳೋವು.
ನಾನು ಕೇಳ್ತಾ ಕುಂತಿದ್ರೆ ನಿಂಗ್ಯಾಕೋ ಹೆಂಗುಸ್ರು ಇಚಾರ ಹೋಗ್ ಆಡ್ಕೋ ಅನ್ನೋರು.

ಈ ಮುನಿಸು ಅಂದ್ರೆ ಮುನಿಸು ರಾವಣನಿಗಿಂತಲೂ ಒಂದು ಪಟ್ಟು ಹೆಚ್ಚೇ ಮುನಿಸು ಬರೋದು. ಅಜ್ಜ ರಾಮಾಯಣ ಹೇಳುವಾಗ ನಾನು ಸುಮ್ನೆ ಇರಲಾರದೆ ಮಧ್ಯ ಮಧ್ಯ ಪ್ರಶ್ನೆಗಳನ್ನು ಕೇಳ್ತಾ ಇರ್ತಿದ್ದೆ. ಅದಿಕ್ಕೆ ಈ ನಾರದನ ಕೆಲ್ಸ ಬಿಟ್ಟು ಕತೆ ಕೇಳು ಅಂತಾ ಅಜ್ಜ ಬೈಯೋರು.

ಅಜ್ಜ ಹೇಳಿದ ಕತೆಗೆ ನಾನು ಸ್ವಲ್ಪ ಬೆರೆಸಿ ಬೇರೆ ರಾಮಾಯಣವನ್ನೇ ನನ್ನ ಗೆಳೆಯರಿಗೆ ಹೇಳ್ತಾ ಇದ್ದೆ. ಬೇವಿನ ಹರಳು ಆಯುವಾಗ, ಹೊಂಗೆಕಾಯಿ ಬಡಿಯುವಾಗ, ಹುಣಸೆ ಹಣ್ಣು ಉದುರಿಸುವಾಗ ರಾಮಾಯಣದ ಕತೆಯನ್ನು ಆಧಾರವಾಗಿಟ್ಟುಕೊಂಡು ಸತ್ಯ ಸುಳ್ಳುಗಳ ಸೇರಿಸಿ ಕತೆ ಮುಗಿಸಿಬಿಡುತ್ತಿದ್ದೆ. ಎಲ್ಲರೂ ನಂಬೋರು, ಇನ್ನೂ ಹೇಳೋ ಚೆಂದ ಇದೆ ಅಂತಾ ಪೀಡಿಸೋರು. ಅಲ್ಲ ಈ ಸುಳ್ಳು ಹೇಳೋದನ್ನು ಹೀಗೆ ಜನ ಸ್ವೀಕಾರ ಮಾಡ್ತಾರಲ್ಲಾ ಅಂತಾನು ನಾಚಿಕೆ ಆಯ್ತು.

ಅಂಗ್ಡಿ ಸುರೇಶಣ್ಣ ಎಲ್ಲೋ ಒಂದು ಕಡೆಯಿಂದ ಕೋತಿ ತಂದಿದ್ದ. ಆ ಕೋತಿಗೆ ಒಂದು ರೂಪಾಯಿ ಕೊಟ್ರೆ ತಲೆ ಹೇನು ಹಿಡಿಯುತ್ತೆ ಅಂತಾ ಜನರೆಲ್ಲ ಸೇರಿದ್ರೂ. ಭಲಾ!ಕೋತಿ ದುಡ್ಡು ತಗೊಂಡು ಯಜಮಾನನಿಗೆ ಕೊಟ್ಟು ತಲೆಹೇನು ಹಿಡಿದು ಕುಕ್ಕುವ ಅಥವಾ ತಿನ್ನುವ ಕಾರ್ಯದಲ್ಲಿ ತಲ್ಲಿನತೆಯ ಕಂಡು ಬೆರಗಾಗಿ ನಿಂತಿದ್ದೆ. ಅದೇ ಸಮಯಕ್ಕೆ ಅಜ್ಜ ಹೇಳಿದ ಹನುಮನ ಕತೆ ನೆನಪಿಗೆ ಬಂದು ಅಜ್ಜನ ಬಳಿ ಓಡಿ ಹೋದೆ.

ಅಜ್ಜ , ಹನುಮನು ಕೋತಿ ಅಲ್ವಾ..
ಹ್ಮೂ ಯಾಕ್ಲ.. ಅಂದ್ರು
ಅದೇ ಸುರೇಸಣ್ಣ ಕೋತಿ ತಂದನಲ ಅದ್ನು ನೋಡ್ದ ನೀನು ? ಎಂದೆ.
ಹು ಅದರಲ್ಲಿ ಏನಾದೆ?
ಏನಾದೆ ಅಂತೀಯಲಾ ಅಜ್ಜ, ಈ ಕೋತಿಯನ್ನೆ ಸುರೇಸಣ್ಣ ಇಷ್ಟು ಫಳಗಿಸಿರಬೇಕಾದ್ರೆ ರಾಮನ ಕಾಲದಲ್ಲಿ ಇನ್ನೇಷ್ಟು ರಾಮ ಸೇತುವೆ ಕಟ್ಟಲು ಕೋತಿಗಳನ್ನು ಫಳಗಿಸಿರಬಹುದು ಎಂದೆ.

ಅದಕೂ ಇದಕೂ ಏನು ಸಂಬಂಧನೋ ಎಂದು ಅಜ್ಜನೂ ಕೂಡಾ ತಲೆಕೆರೆದುಕೊಂಡ. ಆಮೇಲೆ ತಿಳಿಯಿತೋ ಏನೋ ಕಿಷ್ಕಿಂದೆಯಲ್ಲಿ ವಾನರು ಎಂದರೆ ಕೋತಿಗಳೆಂದು ಹೇಳ್ತಾ ಇದ್ಯಾ ಅವು ನಮ್ಮ ಹಾಗೇ ಮನುಷ್ಯನ ಹಾಗೇ ಇದ್ದವು ಗೊತ್ತ ಎಂದರು.

ನಾನು ಒಂದು ನಿಮಿಷವೂ ನಿಲ್ಲಲಾರದೆ. ನೀನು ಕಂಡಿದ್ಯಾ ಅಜ್ಜ ? ಎಂದು ಪ್ರಶ್ನಿಸಿಯೇ ಬಿಟ್ಟೆ.
ತಾಳಲಾರದೆ ನೀನ್ ಭ್ರಮೆ ತಾತ ವಾನರ ಸೇನೆ ಎಂದ್ರೆ ಈ ಫಳಗಿಸಿದ ಕೋತಿಗಳಲ್ಲಿಯೇ ರಾಮ ಸೇತುವೆ ಕಟ್ಟಿದ್ದು ಇಲ್ಲಂದ್ರೆ ಯಾರು ನಂಬುತ್ತಾರೆ. ಅಂತ ಜಗಳಕ್ಕೆ ಬಿದ್ದಿದ್ದನ್ನು ಕಂಡ ತಾತನಿಗೆ . ” ಹೋಗ್ಲಿ ಬಿಡಪಾ ನಿನ್ ಕೋಣನೇ ಮುಂದಕ್ಕೇ ಹೋಗ್ಲಿ ‘ ಎಂದು ತಣ್ಣಗಾದರು.

ನಂಗೆ ಯಾರಾದರೂ ಬೈದಾಗ ಅಳುತ್ತಿರಲಿಲ್ಲ ಇನ್ನೂ ನಾನೇ ಅವರಿಗೆ ಬೈತಾ ಇದ್ದೆ. ಅಜ್ಜ ಹೊಂಗೆ ಕಡ್ಡಿಯಲ್ಲಿ ಹೊಡೆದಾಗ ಬಾಗಿಲಿನ ಸಂದಿಯಲ್ಲಿ ದುಗುಡಿಸಿಕೊಂಡು ಅಲ್ಲಿಯೇ ಮಲಗ್ತಾ ಇದ್ದೆ. ಒಂದು ವಾರ ಊಟ ಮಾಡ್ತಾ ಇರಲಿಲ್ಲ ಅಂದನಲ್ಲ. ನೀವು ಕೇಳಬಹುದು ಮತ್ತೆ ಯಂಗಾ ಇವ್ನು ಇರ್ತಿದಾ ಅಂತಾ.

ಎಮ್ಮೆ ಮೇಯಿಸೋಕೆ ಹೋದಾಗ ಮೂರು ನಾಕು ಎಳನೀರು, ಇಚಲುಹಣ್ಣು, ತೊಪ್ರೆಹಣ್ಣು, ಗುಮಟೆಹಣ್ಣು, ಹಲಸು, ಸೀತಾಫಲ, ರಾಮಫಲ, ನೇರಳೆ, ಮಾವು ಮುಂತಾದ ಕಾಡುಹಣ್ಣುಗಳ ಆಯಾ ಕಾಲಕ್ಕೆ ಸಿಗುವ ಹಣ್ಣುಗಳ ತಿನ್ನುತ್ತಿದ್ದೆ. ಹೊಲಕ್ಕೆ ಹೋದ್ರೆ ಕಲ್ಲಂಗಡಿ ಹಣ್ಣೋ, ಸೌತೆಕಾಯಿನೋ, ಕರಬೂಜನೋ ಸಿಗೋವು ಕಿತ್ಕೊಂಡು ತಿನ್ತಿದ್ದೆ.

ಹುರುಳಿಕಾಳು ಹುರಿದು ತಿನೋದು, ಅವರೇಕಾಯಿ, ತರಣಿಕಾಯಿಗಳ ಹೊಲದಲ್ಲಿಯೇ ಬೆಂಕಿ ಹಾಕಿ ಸುಟ್ಟಿ ತಿನೋದು. ಗದ್ದೆ ಬದಿಗಳಲ್ಲಿ ಸಿಗುವ ತ್ವಾಡನ ಬ್ಯಾಟೆಯಾಡೋದು. ಕಾಡಕ್ಕಿ ಮೊಟ್ಟೆ ತಿನೋದು, ಶಿಂಷಾ ನದಿಯಲಿ ನೀರು ಕುಡಿಯೋದು. ಥೇಟ್ ಆ ಕಿಷ್ಕಿಂದೆಯ ಹನುಮನಂತೆ ನೀನು ಅನುಮನೇ ಎಂದು ಅಜ್ಜಿ ಹೇಳೋರು.

‍ಲೇಖಕರು

3 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading