ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

`ಮುದ್ರಾಮಂಜೂಷ' – ಒಂದು ಸಮಗ್ರ ಅಧ್ಯಯನ


ಉದಯಕುಮಾರ ಹಬ್ಬು

ಸಂಶೋಧಕರಿಗೊಂದು ಅನನ್ಯ ಮಾರ್ಗದರ್ಶಿ `ಮುದ್ರಾಮಂಜೂಷ’ – ಒಂದು ಸಮಗ್ರ ಅಧ್ಯಯನ’
ಲೇಖಕರು: ಡಾ. ಕೆ. ಎಸ್. ಎನ್. ಉಡುಪ,
ಪ್ರಕಾಶಕರು: ಸುಬ್ರಹ್ಮಣ್ಯ ಪ್ರಕಾಶನ, ಸುಬ್ರಹ್ಮಣ್ಯ,
ಪುಟಗಳು: 228,
ದರ: ರೂ. 195-00,
ಡಾ. ಕೆ. ಎಸ್. ಎನ್ ಉಡುಪರು ಕೆಂಪು ನಾರಾಯಣ ಶಾಸ್ತ್ರಿಗಳು ಎಂಬ ಮಹಾಕವಿ ಬರೆದ ಚಾರಿತ್ರಿಕ ಗದ್ಯ ಮಹಾಕಾವ್ಯವಾದ `ಮುದ್ರಾ ಮಂಜೂಷ’ ಕೃತಿಯ ಕುರಿತು ತಲಸ್ಪರ್ಶಿ ಅಧ್ಯಯನ ನಡೆಸಿದ್ದಾರೆ. ಮತ್ತು ವ್ಯಾಪಕ ಕ್ಷೇತ್ರಕಾರ್ಯಗಳ ಮತ್ತು ಅತ್ಯಂತ ಗಾಢವಾದ ಒಳನೋಟಗಳುಳ್ಳ ಚಿಂತನಶೀಲತೆ ಇವೆಲ್ಲವೂ ಮುಪ್ಪರಿಗೊಂಡ ಬಗೆಯಲ್ಲಿ ಬಗೆದಿದ್ದಾರೆ. ಈ ಕೃತಿಯನ್ನು “ಮುದ್ರಾ ಮಂಜೂಷ : ಒಂದು ಸಮಗ್ರ ಅಧ್ಯಯನ’ ಎಂದು ಯಥಾರ್ಥವಾಗಿಯೆ ಕರೆದಿದ್ದಾರೆ. ಪಿ ಎಚ್ ಡಿ ಮಹಾಪ್ರಬಂಧಕಾರನು ಯಾವೆಲ್ಲ ಅಧ್ಯಯನದ ಕ್ಷೇತ್ರಗಳಿಗೆ ತನ್ನನ್ನು ತೆರೆದುಕೊಳ್ಳಬೇಕು, ಎಷ್ಟೊಂದು ಅಧ್ಯಯನ ಮಾಡಬೇಕು, ಹೇಗೆ ಮಹತ್ತಾದ ಕೃತಿಯನ್ನು, ಅದರ ಮಹತ್ತನ್ನು ಎತ್ತಿಹಿಡಿದು ಅದನ್ನು ಬಿತ್ತರಿಸಬೇಕು ಎಂಬುದು ಇನ್ನು ಮಹಾಪ್ರಬಂಧ ಬರೆಯುವವರಿಗೆ ಮಾರ್ಗದರ್ಶಕವಾಗುವ ರೀತಿಯಲ್ಲಿ ಬರೆದಿದ್ದಾರೆ. ಉಡುಪರು ಓದಿದ ಅವರು ಕೊಟ್ಟ ಹಲವಾರು ಗ್ರಂಥಗಳನ್ನು, ದಾಖಲೆಗಳನ್ನು, ತಾಡೋಲೆ ಪತ್ರಗಳಾಗಿರಲಿ, ಕೈಫಿಯತ್ತಾಗಿರಲಿ, ಶಿಲಾಶಾಸನವಾಗಿರಲಿ, ಕನ್ನಡ, ಹಿಂದಿ ಸಂಸ್ಕೃತ ಮಲಯಾಳಂ, ಗ್ರೀಕ್ ಈ ಮುಂತಾದ ಭಾಷೆಗಳಲ್ಲಿ ಬರೆಯಲ್ಪಟ್ಟ ಇವರ ಮಹಾಪ್ರಬಂಧಕ್ಕೆ ಪೂರಕವಾದ ವಿಷಯಗಳ ವಿಪುಲತೆ ಓದುಗರನ್ನು ದಂಗುಗೊಳಿಸುತ್ತದೆ. ಇದು ಹಲವಾರು ವರ್ಷಗಳ ಪರಿಶ್ರಮದ ಮತ್ತು ತಾಳ್ಮೆ ಹಾಗೂ ನಿರಂತರ ಅಧ್ಯಯನದ ಫಲ ಎಂದೆನಿಸುತ್ತದೆ. ಸುಮಾರು ಸಾವಿರಕ್ಕೂ ಮಿಕ್ಕಿ ಗ್ರಂಥಗಳನ್ನು ಓದಿರಬಹುದು. ದಾಖಲೆಗಳನ್ನು ಸಂಗ್ರಹಿಸಿರಬಹುದು. ಪ್ರವಾಸ ಕೈಗೊಂಡಿದ್ದಿರಬಹುದು. ಒಬ್ಬ ಮಹಾನ್ ಕವಿಗೆ ಸಂದಾಯವಾಗಬೇಕಾದ ಎಲ್ಲ ಗೌರವಗಳೊಂದಿಗೆ ಈ ಮಹಾ ಗದ್ಯ ಕಾವ್ಯಕ್ಕೆ ಅತ್ಯಂತ ಉನ್ನತ ಮಟ್ಟದ ಗೌರವವನ್ನು ಸಲ್ಲಿಸಲಾಗಿದೆ.
ಒಬ್ಬ ವಿಮರ್ಶಕ ಕೃತಿಯೊಂದನ್ನು ಓದುಗರ ಮುಂದೆ ಅರಳಿಸುವಾಗ ಅವನು ಸಹೃದಯನಾದ ಓದುಗನಾಗಿರಬೇಕು. ಆ ಸಹೃದಯತೆ ಉಡುಪರಲ್ಲಿ ವಿಪುಲವಾಗಿದೆ. ಅವರು ಈ ಮಹಾಕವಿಯ ವಕಾಲತ್ತು ವಹಿಸುತ್ತಾರೆ, ಮತ್ತು ಆ ಕವಿಯ ಕುರಿತಾದ ಟೀಕೆಗಳಿಗೆ ಸಮರ್ಪಕ ಉತ್ತರ ವಿದ್ವತ್ ಪೂರ್ಣವಾಗಿ ನೀಡುತ್ತಾರೆ. ಮತ್ತು ಉಡುಪರ ಈ ಮಹಾಕವಿಯ ವಿಶ್ಲೇಷಣೆ ಆ ಕವಿಯ ಉತ್ಕೃಷ್ಟತೆಯನ್ನು ತೆರೆದಿಡುವುದರೊಂದಿಗೆ, ಒಬ್ಬ ಶ್ರೇಷ್ಠ ಸಾಹಿತಿಗೆ ಇರಬೇಕಾದ ಉನ್ನತಮಟ್ಟದ ಜ್ಞಾನದ ವಿವಿಧ ಶಾಖೆಗಳ ಕುರಿತಾದ ಅರಿವಿನ ಕುರಿತಾಗಿಯೂ ಇದು ಬೆರಳು ಮಾಡಿ ತೋರಿಸುತ್ತದೆ. ಒಬ್ಬ ಸಾಹಿತಿಯ ಜವಾಬ್ದಾರಿ ಏನು? ಕೇವಲ ಮನೋರಂಜನೆ ನೀಡುವುದೆ ಅಥವಾ ಓದುಗನಿಗೆ ಒಬ್ಬ ಗುರು ಮಾಡಬೇಕಾದ ಜ್ಞಾನಬುತ್ತಿಯನ್ನು ಬಿಡಿಸಿ ಉಣಿಸುವ ಕರ್ತವ್ಯವವನ್ನು ನೆರವೇರಿಸುವುದೆ? ಓದುಗನ ಜವಾಬ್ದಾರಿಗಳು ಯಾವವು? ಉಡುಪರಂತೆ ಓದುಗನೂ ಕೃತಿಯೊಂದನ್ನು ಸಂಪೂರ್ಣವಾಗಿ ಆಸ್ವಾದಿಸಬೇಕಾದರೆ ತುಂಬ ಓದಿಕೊಂಡವನಿದ್ದರೆ ಕವಿಯು ತನ್ನ ಸಂವಹನದಲ್ಲಿ ಯಶಸ್ವಿಯಾಗುತ್ತಾನೆ. ಈ ಮುಂತಾದ ವಿಚಾರಗಳನ್ನು ಈ ಕೃತಿಯು ಧ್ವನಿಸುತ್ತದೆ. ಉಡುಪರು ಈ ಗ್ರಂಥದಲ್ಲಿ ಭಾರತೀಯ ನೂರಾರು ಅಥವಾ ಸಮಗ್ರ ಜ್ಞಾನ ಶಾಖೆಯ ಪ್ರಸ್ತಾಪ ಮಾಡಿ ಓದುಗರನ್ನು ಸಂಭ್ರಮಕ್ಕೊಳಪಡಿಸುತ್ತಾರೆ. ನಮ್ಮ ಭಾರತದಲ್ಲಿ ಶಿಲ್ಪಕಲೆ, ಆಯುರ್ವೇದ, ಯುದ್ಧಕಲೆ, ರಾಜನೀತಿ ಶಾಸ್ತ್ರ, ಕಾಮಶಾಸ್ತ್ರ, ಆರೋಗ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಜ್ಯೋತಿಷ್ಯ, ಔಷಧ ಶಾಸ್ತ್ರ, ರಸಾಯನ ಶಾಸ್ತ್ರ ಮುಂತಾದ ನೂರಾರು ಜ್ಞಾನ ಶಾಖೆಗಳು ಇದ್ದವು ಎಂಬ ಪರಿಚಯವುಂಟಾಗುತ್ತದೆ.

ಈ ಮಹಾ ಗದ್ಯಕಾವ್ಯವು ಮುಮ್ಮಡಿ ಕೃಷ್ಣರಾಜ ಒಡೆಯರ್ ಮಹಾರಾಜರ ಆಸ್ಥಾನ ಕವಿ ಕೆಂಪು ನಾರಾಯಣ ಬರೆದ ಒಂದು ಐತಿಹಾಸಿಕ ಮಹಾಕಾವ್ಯವಾಗಿದೆ. ಈ ಕೃತಿಯ ಮೂಲ, ಸಂಸ್ಕೃತ ನಾಟಕಕಕಾರ ವಿಶಾಖಾದತ್ತ ಬರೆದ `ಮುದ್ರಾ ರಾಕ್ಷಸ’ ನಾಟಕದ ಕಥಾನಕ ಎನ್ನಲಾಗಿದೆ. ಈ ಕೃತಿಯಲ್ಲಿ ಚಾಣಕ್ಯನೆಂಬ ರಾಜಕೀಯ ಶಾಸ್ತ್ರದ ಜ್ಞಾನಿಯೊಬ್ಬ, ಬುದ್ಧಿವಂತ, ಚತುರ. ತಾನು ಅಂದಿನ ಪಾಟಲೀಪುತ್ರದ ರಾಜರುಗಳಾದ ನವನಂದನನರಿಂದ ಅವಮಾನಗೊಂಡದ್ದಕ್ಕಾಗಿ, ಅವರನ್ನು ಚತುರೋಪಾಯಗಳಿಂದ ಸೋಲಿಸಿ, ಸಾಯಿಸಿ, ತನ್ನ ಅಚ್ಚುಮೆಚ್ಚಿನ ಚಂದ್ರಗುಪ್ತನನ್ನು ಸಿಂಹಾಸನಸ್ಥನನ್ನಾಗಿ ಮಾಡುವ ಐತಿಹಾಸಿಕ ಕಥಾನಕವನ್ನು ಅತ್ಯಂತ ರೋಚಕವಾಗಿ ಕಥನಿಸಲಾಗಿದೆ. ಆದರೆ ಇದು ಸ್ವತಂತ್ರವಾದ ಕೃತಿಯಾಗಿದೆ. ಮೂಲ ಕೃತಿಗಿಂತ ತುಂಬ ಭಿನ್ನ ಎನ್ನಲು ಉಡುಪರು ಕೃತಿಯೊಳಗಿನ ನೂರಾರು ಉದಾಹರಣೆಗಳನ್ನು ಕೊಟ್ಟು ಸಮರ್ಥಿಸುತ್ತಾರೆ. ಐತಿಹಾಸಿಕ ಕೃತಿಯೊಂದರ ಅಧ್ಯಯನಕ್ಕೆ ತೊಡಗಿದಾಗ ಆಯಾ ಕಾಲದ ಚರಿತ್ರೆಯನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಲೇಬೇಕು. ಮತ್ತು ಆ ಕಾಲಘಟ್ಟದ ಬದುಕಿನ ಸಮಾಜದ ವ್ಯವಸ್ಥೆಯನ್ನೂ, ಸಾಂಸ್ಕೃತಿಕ ವಿದ್ಯಮಾನಗಳನ್ನೂ ಅಧ್ಯಯನ ಮಾಡಬೇಕಾದದ್ದು ವಿಮರ್ಶಕನ ಮುಖ್ಯ ಧ್ಯೆಯಗಳಲ್ಲಿ ಒಂದಾಗಿರುತ್ತದೆ. ಅವರು ಟಿ ಎಸ್ ಏಲ್ಯಟ್ ನ ಒಂದು ಮಾತನ್ನು ಉಲ್ಲೇಖಿಸುತ್ತಾರೆ:` ದ ಗ್ರೇಟ್ ಪೋಯೆಟ್ ಇನ ರೈಟಿಂಗ್ ಹಿಮಸೆಲ್ಫ್, ರೈಟ್ಸ್ ಹಿಸ್ ಟೈಮ್’, ಅಂದರೆ ಶ್ರೇಷ್ಠ ಕವಿಯೊಬ್ಬ ತನ್ನ ಕಾವ್ಯ ಬರೆಯುವಾಗ ತನ್ನ ಕಾಲವನ್ನು ಬರೆಯುತ್ತಾನೆ. ಅಂತೆಯೆ ಉಡುಪರು ಈ ಕಾವ್ಯದ ಐತಿಹಾಸಿಕ ಹಿನ್ನೆಲೆಯ ಆಮೂಲಾಗ್ರ ಅಧ್ಯಯನ ಮಾಡಿದ್ದಾರೆ. ಅಂದಿನ ರಾಜಕೀಯ ರೀತಿ, ನೀತಿ ನಡಾವಳಿಗಳು, ಯುದ್ಧದ ಕ್ರಮಗಳು, ಚತುರೋಪಾಯಗಳ ಅನ್ವಯಿಸುವಿಕೆ, ಕುಟಿಲೋಪಾಯಗಳು, ಸಂಚುಗಳು, ಒಳಸಂಚುಗಳು ಇವೆಲ್ಲವೂ ಮಹಾಕಾವ್ಯದಲ್ಲಿ ಪ್ರಸ್ತಾಪಗೊಂಡಿರುವುದನ್ನು ಉಲ್ಲೇಖಿಸುತ್ತಾರೆ. ಅವರು ಒಂದೆಡೆ ಹೇಳುತ್ತಾರೆ:“ ನಮ್ಮ ಕವಿಯು ಆಯ್ಕೆ ಮಾಡಿಕೊಂಡಿದ್ದು-ಆತನೇ ಹೇಳಿಕೊಂಡಂತೆ-ಪುರಾಣದ `ಚಂದ್ರಗುಪ್ತ-ಚಾಣಕ್ಯ’ರ ಕಥೆಯನ್ನು. ಆದರೆ ಆತ ಅದನ್ನು ಯಥಾವತ್ತಾಗಿ ಅನುಸರಿಸದೆ ತನ್ನ `ಪ್ರಾದೇಶಿಕ, ಸಾಂಸ್ಕೃತಿಕ, ವ್ಯಕ್ತಿ ವಿಶಿಷ್ಟ ಪ್ರತಿಭೆ’ಯ ಮೂಲಕ ಪುನರ್ ವ್ಯಾಖ್ಯಾನಿಸಿದ್ದಾನೆ. ಕವಿಗೆ ತಾನು ಬದುಕಿದ ಕಾಲದ ಸಾಮಾಜಿಕ, ಧಾರ್ಮಿಕ, ರಾಜಕೀಯ ವಿದ್ಯಮಾನಗಳನ್ನು ಮೂಡಿಸಲು ಇದೊಂದು ಒಳ್ಳೆಯ ಮಾಧ್ಯಮವೆನಿಸಿತು.’

ಕಾವ್ಯವನ್ನು ಅಧ್ಯಯನ ಮಾಡುವಾಗ ಕವಿಯ ಖಾಸಗಿ ಬದುಕಿನ ಪರಿಜ್ಞಾನವಿದ್ದರೆ ಆ ಕಾವ್ಯದ ಆಸ್ವಾದನೆ ಸುಲಭವಾಗಬಹುದು. ಮತ್ತು ಕವಿಯ ಕಾಲ ನಿರ್ಧಾರವು ಆ ಕಾಲದ ಐತಿಹಾಸಿಕ ಪರಿಜ್ಞಾನಕ್ಕೆ ಕೈಕಂಬವಾಗುತ್ತದೆ. ಮುಮ್ಮಡಿಯವರ ಆಸ್ಥಾನದಲ್ಲಿ, ನಾನಾ ಶಾಸ್ತ್ರಗಳಲ್ಲಿ ಪಾಂಡಿತ್ಯವಿದ್ದ ವಿದ್ವಾಂಸರಲ್ಲಿ `ಕೆಂಪು ಶಾಸ್ತ್ರಿಗಳು’ ಒಬ್ಬರಾಗಿದ್ದರು.’ ಈ ಕೃತಿಯನ್ನು ಕ್ರಿ. ಶ. 1873ರರಲ್ಲಿ ಸಂಪಾದಿಸಿ ಮೊದಲ ಸಲ ಮುದ್ರಿಸಿದ ವೆಸ್ಲಿಯನ್ ಮಿಶನರಿಯಾದ ಜೆ. ಸ್ಟಿವೆನ್ಸನ್ನನು ಕೃತಿಯ ಅವತರಣಿಕೆಯ ಮೂಲಪಾಠವನ್ನು ತಿದ್ದಿ “ಕೆಂಪು ನಾರಾಯಣನೆಂಬ…..ಕವಿಯು ಪೇಳ್ದನು” ಎಂದು ಮುದ್ರಿಸಿದ್ದನು’ ಎಂಬ ಮಾಹಿತಿಯನ್ನು ಉಡುಪರು ನೀಡುತ್ತಾರೆ. ಉಡುಪರ ಪ್ರಯತ್ನಶೀಲತೆಯಿಂದಾಗಿ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಆ ಮಹಾಕವಿಯ ವಂಶಕುಡಿಯನ್ನು ಹುಡುಕಲಾಗುತ್ತದೆ. ಮತ್ತು ಅವರು ಕವಿಯ ಮರಿಮಗನ ಮರಿಮಗಳಾದ ಶ್ರೀಮತಿ ಲಲಿತಮ್ಮ ನಾಡಿಗ್ ಎಂದು ಕಂಡು ಹಿಡಿಯುತ್ತಾರೆ. ಅವರಿಂದ ಆ ಕವಿಯು ಬರೆದ ಮೂಲಪ್ರತಿಯನ್ನು ಪಡೆದು ಅದು ಮುದ್ರಿತ ಪಠ್ಯಕ್ಕಿಂತ ತೀರ ಭಿನ್ನವಾಗಿದ್ದುದನ್ನು ದಾಖಲಿಸುತ್ತಾರೆ. ಮತ್ತು ಶ್ರೀ ಟಿ. ವಿ. ವೆಂಕಟಾಚಲಪತಿ ಶಾಸ್ತ್ರಿಯವರು ಪ್ರತಿಮಾಡಿ ಕೇಂದ್ರ ಸಾಹಿತ್ಯ ಎಕಾಡೆಮಿಯವರು ಮುದ್ರಿಸಿದ ಪ್ರತಿ ಅತ್ಯಂತ ನಿಖರವಾದದ್ದು ಎಂದೂ ದಾಖಲಿಸುತ್ತಾರೆ. ಈ ಗ್ರಂಥದಲ್ಲಿ ಏಳು ಅಧ್ಯಾಯಗಳಿವೆ. ಮೊದಲ ಅಧ್ಯಾಯವು ಈ ಅಧ್ಯಯನದ ಉದ್ದೇಶ ಮತ್ತು ವ್ಯಾಪ್ತಿಯ ಕುರಿತಾಗಿ ಬರೆಯುತ್ತಾರೆ. `19ನೆ ಶತಮಾನದ ಮೊದಲ ಪಾದದಲ್ಲಿ ರಚಿತವಾದ `ಮುದ್ರಾ ಮಂಜಷ’ವು ಒಂದು ಅಪೂರ್ವ ಗ್ರಂಥವಾಗಿದೆ. ಇಷ್ಟಾದರೂ ಈ ಕೃತಿಯ ಬಗೆಗೆ ಇಲ್ಲಿಯವರೆಗೆ ಸಾಕಷ್ಟು ಅಧ್ಯಯನ ಆಗಿಲ್ಲ. ಪೂರಕ ಮಾಹಿತಿಗಳು ಒಂದೆಡೆ ಲಭ್ಯವಿರಲಿಲ್ಲ. ಹಾಗಾಗಿ ಇರುವವುಗಳನ್ನೆಲ್ಲ ಸಂಗ್ರಹಿಸಿ, ವಿಶ್ಲೇಷಿಸಿ ಇನ್ನಷ್ಟು ಆಧಾರಗಳ ಸಹಾಯದಿಂದ ಹೊಸ ಸಂಗತಿಗಳನ್ನು ಹೇಳುವ ಪ್ರಯತ್ನ ಇದಾಗಿದೆ.’ ಎನ್ನುತ್ತಾರೆ. ಉಡುಪರು ಉದ್ದೇಶಿಸಿದ ಗುರಿ ಈ ಅವರ ಗ್ರಂಥವು ಮುಟ್ಟಿದೆ ಎಂದೆನ್ನಬಹುದಾಗಿದೆ.
ಈವರೆಗೆ 9 ಮುದ್ರಣವನ್ನು ಕಂಡ ಈ ಕೆಂಪುನಾರಾಯಣ ಶಾಸ್ತ್ರಿಯವರ ಈ `ಮುದ್ರಾ ಮಂಜೂಷ’ವು ಅದರ ಖ್ಯಾತಿಗೆ ಮತ್ತು ಜನಪ್ರಿಯತೆಗೆ ಸಾಕ್ಷಿಯಾಗಿ ನಿಂತಿದೆ. ಅಧ್ಯಾಯ 3ರಲ್ಲಿ `ಚಂದ್ರಗುಪ್ತ ಚಾಣಕ್ಯರ ಕಥೆಯ ಉಗಮ ಮತ್ತು ವಿಕಾಸದ ಕುರಿತು ಬೆಳಕು ಚೆಲ್ಲುತ್ತಾರೆ. ಈ ಕಥೆಯು ವಿಷ್ಣು ಪುರಾಣದಲ್ಲಿ, ಭಾಗವತದಲ್ಲಿ, ವಾಯು ಪುರಾಣದಲ್ಲಿ, ಮತ್ಸ್ಯ ಪುರಾಣದಲ್ಲಿ ಬೃಹತ್ಕಥೆಯಲ್ಲಿ ಬರುತ್ತದೆ. ಉಡುಪರು ಆ ಕೃತಿಗಳಲ್ಲಿ ಬರುವ ಕಥೆಗೂ `ಮುದ್ರಾ ಮಂಜೂಷ’ಕ್ಕೂ ಇರುವ ಸಾಮ್ಯತೆಗಳನ್ನು ಮತ್ತು ವ್ಯತ್ಯಾಸಗಳನ್ನು ದಾಖಲಿಸಿದ್ದಾರೆ. ಬೌದ್ದ ಪಾಠಂತರಗಳಲ್ಲಿಯೂ ಈ ಕಥೆ ಲಭ್ಯ. ಜೈನ ಪಾಠಂತರ ಹಾಗೂ `ದೇವಚಂದ್ರ ವಿರಚಿತ ರಾಜಾವಳಿ ಕಥಾಸಾರ’ ದಲ್ಲಿ, ಗ್ರೀಕ್ ಭಾಷೆಯಲ್ಲಿ ಕರ್ಟಿಯಸ್ ಹೇಳಿದ ಕಥೆಯಲ್ಲಿ ಚಂದ್ರಗುಪ್ತ ಚಾಣಕ್ಯರ ಕಥೆ ಇದೆ. ಆದರೆ ಕೆಂಪು ನಾರಾಯಣ ಶಾಸ್ತ್ರಿಯವರ `ಮುದ್ರಾಮಂಜೂಷ’ ಸ್ವತಂತ್ರ ಕೃತಿ ಎಂದು ವಾದಿಸುತ್ತಾರೆ. ಈ ಕೃತಿಯ ಸಾಹಿತ್ಯಿಕ ಅಧ್ಯಯನದಲ್ಲಿ ಉಡುಪರು ಭಾರತೀಯ ಕಾವ್ಯ ಮೀಮಾಂಸೆಯನ್ನೆ ಬಳಸುತ್ತಾರೆ. ರಸ ನಿಷ್ಪತ್ತಿ, ಶೈಲಿ ಹಾಗೂ ನಿರೂಪಣಾ ಕೌಶಲ್ಯವನ್ನು ಮೆಚ್ಚಿ ಬರೆಯುತ್ತ` ಈ ಕಾವ್ಯವನ್ನು ಮಹಾಭಾರತಕ್ಕೂ ಹೋಲಿಸಬಹುದು ಎನ್ನುತ್ತಾರೆ. ಮತ್ತು ಕೆಲವು ವಿವರಣೆಗಳು ಜ್ಞಾನ ವಿಜ್ಞಾನ ಶಾಖೆಗಳ ಪ್ರಸ್ತಾಪವು ಆ ಕವಿ ಬದುಕಿದ್ದ ಇತಿಹಾಸವನ್ನು ಬಿಂಬಿಸುತ್ತದೆ ಎನ್ನುತ್ತಾರೆ. `ಇಲ್ಲಿ ವಿವಿಧ ಶಾಸ್ತ್ರಗಳ ಆಳವಾದ ಪರಿಜ್ಞಾನ ಹೊಂದಿದ್ದು ಸಂದರ್ಭಕ್ಕೆ ತಕ್ಕಷ್ಟೇ ಮಿತವಾಗಿ ಹೇಳುವ ಈ ಕವಿಯ ಸಂಯಮವನ್ನು ನೋಡಿದಾಗ ಮೇಲಿನ ಸೂಕ್ತಿಯು ನೆನಪಾಗುತ್ತದಲ್ಲದೇ, ಆತನ ಬಗ್ಗೆ ಗೌರವದ ಭಾವ ಮೂಡುವುದು ಸಹಜ.’ ಎಂದು ಕವಿಯನ್ನು ಮೆಚ್ಚಿ ಬರೆಯುತ್ತಾರೆ.
ಕೆಂಪುನಾರಾಯಣನ ಈ ಗ್ರಂಥದ ಕುರಿತು ಬರೆಯುತ್ತ `ಆದರೆ ಸಾಹಿತ್ಯ ಕೃತಿಗಳನ್ನು ಶಾಸ್ತ್ರೀಯ ಸಂಶೋಧನ ದೃಷ್ಟಿಯಿಂದ ಪರೀಕ್ಷಿಸಿದರೆ ಅನ್ಯ ಮೂಲಗಳಲ್ಲಿ ಸಿಗದಂತಹ ಚಾರಿತ್ರಿಕ ಘಟನೆಗಳ ಬಾಹುಳ್ಯ ಸಾಹಿತ್ಯದಲ್ಲಿ ಕಂಡು ಬರುತ್ತದೆ’ ಎಂದು ಉಡುಪರು ಅಭಿಪ್ರಾಯಪಡುತ್ತಾರೆ. ಸಾಹಿತ್ಯ ಕೃತಿಯೊಂದು ಆಯಾ ಕಾಲದ ಇತಿಹಾಸವನ್ನು, ಸಾಮಾಜಿಕ ಬದುಕನ್ನು, ಸಾಂಸ್ಕತಿಕ ಹಾಗೂ ಧಾರ್ಮಿಕ ಬದುಕನ್ನು ಬಿಂಬಿಸಿದರೆ ಅದರಷ್ಟು ಉತ್ಕೃಷ್ಟ ಕೃತಿ ಬೇರೊಂದಿರಲಿಕ್ಕಿಲ್ಲ. ಇಲ್ಲಿ ಉಡುಪರು ಮೆಚ್ಚುಗೆ ಅಥವಾ ಆರಾಧನಾ ಭಾವದಿಂದ ಈ ಕೃತಿಯನ್ನು ಕೊಂಡಾಡಿದ್ದಾರೆ. ಕೆಂಪು ನಾರಾಯಣರಂತೆ ಬೇರೆ ಮೂಲದಿಂದ ಕಥಾ ಭಾಗವನ್ನು ಆಯ್ದು ತಮ್ಮ ಪ್ರತಿಭೆಯಿಂದಾಗಿ ಉನ್ನತ ಶ್ರೇಷ್ಠ ಕೃತಿಗಳನ್ನು ರಚಿಸಿದ ಅನೇಕ ಕವಿಗಳಿದ್ದಾರೆ. ಸಂಸ್ಕೃತದಲ್ಲಿ ಭವಭೂತಿ, ಕಾಳಿದಾಸ, ಬಾಣಭಟ್ಟ, ಹರ್ಷವರ್ಧನ ಮುಂತಾದವರು ಬೇರೆ ಮೂಲಗಳಿಂದ ಕೃತಿ ರಚನೆ ಮಾಡಿದ್ದಾರೆ. ಆದರೆ ಉಡುಪರ ಮೆಚ್ಚುಗೆಯ ಮಹಾಪೂರದಲ್ಲಿ ಕೆಂಪು ನಾರಾಯಣನ ಕೃತಿ ಕೊಚ್ಚಿಕೊಂಡು ಹೋದಂತೆನಿಸಿದೆ. ಸಾಹಿತ್ಯ ಕೃತಿಗಳನ್ನು ಹೋಲಿಸಿ, ಮೌಲ್ಯ ಮಾಪನ ಮಾಡುವ ಕ್ರಮವೊಂದಿದೆ. ಅದನ್ನು ಉಡುಪರು ಧಾರಾಳವಾಗಿ ಬಳಸಿದ್ದಾರೆ. ಆದರೆ ಅದನ್ನು ಕೆಂಪುನಾರಾಯಣರ ಕೃತಿಯ ವಿಶ್ಲೇಷಣೆಗೆ ಬಳಸಿದ್ದಾರೆ ವಿನಹ ಅದರ ಮೌಲ್ಯಮಾಪನ ಮಾಡಲಲ್ಲ. ಮಹಾಭಾರತಕ್ಕೆ ಹೋಲಿಸಲಾಗಿ ಕೆಂಪು ನಾರಾಯಣರ ಕೃತಿ ಎಲ್ಲಿ ನಿಂತೀತು? ಅಥವಾ ವಿಶಾಖದತ್ತನ `ಮುದ್ರಾ ರಾಕ್ಷಸಕ್ಕೆ ಹೋಲಿಸುವಾಗ ಸಾಹಿತ್ಯಿಕವಾಗಿ ಅದು ಯಾವ ಮಟ್ಟದ್ದು ಎಂಬ ಮೌಲ್ಯಮಾಪನದ ಕೊರತೆ ಕಂಡಂತೆ ನನಗನಿಸಿತು. ಇದು ಕೇವಲ ಮೊಸರಲ್ಲಿ ಕಲ್ಲು ಹುಡುಕಿದಂತಾದೀತೇನೋ? ಇರಲಿ, ಆದರೂ ಉಡುಪರ ವಿದ್ವತ್ ಪ್ರವಾಹಕ್ಕೆ ಓದುಗರೆಲ್ಲ ಮೆಚ್ಚುಗೆಯ ಪ್ರವಾಹದಲ್ಲಿ ಕೊಚ್ಚಿ ಹೋಗುವುದು ಖಂಡಿತ. ಈ ಕೃತಿಯಲ್ಲಿ ಪ್ರಸ್ತುತಗೊಂಡ ಹಲವಾರು ಸಂಸ್ಕೃತ ಸೂಕ್ತಿಗಳನ್ನು, ಅಂತೆಯೆ ಕನ್ನಡದ ಸೂಕ್ತಿಗಳನ್ನು ಅನುಬಂಧದಲ್ಲಿ ದಾಖಲಿಸಿದ್ದಾರೆ. ಅಪರೂಪದ ಹೋಲಿಕೆಗಳನ್ನು ಈ ಕಾವ್ಯದಲ್ಲಿ ಕಂಡಂತೆ ದಾಖಲಿಸಿದ್ದಾರೆ. ಇದಂತೂ ಸತ್ಯ; ಕನ್ನಡದ ಐತಿಹಾಸಿಕ ಅಥವಾ ಚಾರಿತ್ರಿಕ ಕಾದಂಬರಿಯ ಚರಿತ್ರೆಯಲ್ಲಿ ಇದು ಮೊದಲ ಅನನ್ಯ ಮತ್ತು ಶ್ರೇಷ್ಠ ಕೃತಿ. ಗದ್ಯ ಕಾವ್ಯದ ಮುಂಗೋಳಿ ಎಂದು ಕೆಂಪು ನಾರಾಯಣನನ್ನು ಮುದ್ದಣನನ್ನು ಸಂಭೋಧಿಸಿದಂತೆ ಸಂಭೋಧಿಸಬಹುದಾಗಿದೆ. ಬಹುಶಃ ಕೆಂಪು ನಾರಾಯಣರ ಇನ್ನೂ ಹೆಚ್ಚಿನ ಅಧ್ಯಯನ ಮಾಡುವವರಿಗೆ ಉಡುಪರಿಂದಾಗಿ `ನೀವು ಸಂಪರ್ಕಿಸುವ ಎಲ್ಲ ಹಾದಿಗಳು ಸ್ಥಗಿತಗೊಂಡುಬಿಟ್ಟಿವೆ.’ ಎನ್ನದೆ ವಿಧಿಯಿಲ್ಲ. ಪಿ ಎಚ್ ಡಿ ಮಹಾಪ್ರಬಂಧ ಬರೆಯುವವರು ಈ ಕೃತಿಯನ್ನು ಕೊಂಡು ಓದಬೇಕೆಂಬುದು ನನ್ನ ಕಳಕಳಿಯ ವಿನಂತಿ.
 
 

‍ಲೇಖಕರು avadhi

26 April, 2014

2 Comments

  1. prathibha nandakumar

    thank you very much for this post Udaykumar Habbu and thank you Dr K S N Udupa. i will get my copy asap..:)

  2. Anand Kunchanur

    An eye-opening work! Thanks to Avadhi. These works will enlighten the literary people. Keep publishing such articles.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading