ಪ್ರಕಾಶ ಕಡಮೆ
ಉತ್ತರ ಕನ್ನಡದ ಮಲೆನಾಡಿನ ಹೊಸ ಪ್ರತಿಭೆ ಶೋಭಾ ಹಿರೇಕೈ ತಮ್ಮ ಸತ್ವಶಾಲಿ ಕವನಗಳ ಮೂಲಕ ಸಾಹಿತ್ಯ ಲೋಕ ಪ್ರವೇಶಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಳೆದ ಕೆಲ ವರ್ಷಗಳಿಂದ ಅಲ್ಲಲ್ಲಿ ಪತ್ರಿಕೆ ಮತ್ತು ಅಂತರ್ಜಾಲಗಳ ಮುಖಾಂತರ ಹೆಸರಾಗಿರುವ ಶೋಭಾ, ರೈತ ಕುಟುಂಬದ ಮಗಳು ಮತ್ತು ಸೊಸೆಯಾಗಿದ್ದರಿಂದ ಇವರ ಕವನಗಳಲ್ಲಿ ಮಣ್ಣಿನ ಮತ್ತು ಬೆವರಿನ ಘಮವಿದೆ, ಬಾಲ್ಯದ ಬೆಳದಿಂಗಳ ಬೆಳಕಿದೆ: ಪ್ರಾಥಮಿಕ ಶಾಲಾ ಶಿಕ್ಷಕಿಯಾದ್ದರಿಂದ ಮಕ್ಕಳೊಡನೆ ಬೆರೆತ ಮಗುಮೊಗ: ನಗುಮೊಗವಿದೆ.
‘ಅವ್ವ ಮತ್ತು ಅಬ್ಬಲಿಗೆ’ ಶೋಭಾ ಅವರ ಪ್ರಥಮ ಕವನ ಸಂಕಲನವಾಗಿದ್ದು ನಲವತ್ತು ಬದುಕಿನ ವೈವಿಧ್ಯಮಯ ಕವಿತೆಗಳನ್ನೊಳಗೊಂಡಿದೆ. ಸೊರಬದ ನೇಕಾರ ಪ್ರಕಾಶನ ಪ್ರಕಟಿಸಿದ ನೂರಾ ಎಂಟು ಪುಟಗಳ ಈ ಪುಸ್ತಕವನ್ನು ಕವಿಯಿತ್ರಿ ಈ ನೆಲದ ಶ್ರಮಿಕರ ಬೆವರಿಗೆ ಅರ್ಪಿಸಿರುವುದು ಒಂದು ವಿಶೇಷವಾಗಿದೆ.

ಹಳೆಮನೆಯ ಕೋಳಿಳಿಸುವ
ಮೊದಲೊಮ್ಮೆ ಹೋಗಿ ಬರಬೇಕು
ಅಟ್ಟವನ್ನೊಮ್ಮೆ ಏರಿ
ಕೋಳುಗಂಭಕ್ಕೆ ಕಟ್ಟಿದ
ನನ್ನ ಸಿರಿದೊಂಡಲಿನ ಮುತ್ತು ಮಣಿಗಳನ್ನೆಲ್ಲ
ಒಂದೊಂದೇ ಬಿಡಿಸಿ ಆರಿಸಿ ತರಬೇಕು.
ಎಂದು ‘ತವರು ತಾರಸಿಯಾಗುತ್ತಿದೆ’ ಕವಿತೆಯಲ್ಲಿ ತಮ್ಮನ್ನು ಸದಾ ಕಾಡುವ ಬಾಲ್ಯ, ಬಾಲ್ಯದಂಗಳದ ತವರು ಮನೆಯನ್ನು ಮನ ಮುಟ್ಟುವಂತೆ ವರ್ಣಿಸಿರುವರು. ತವರು ಮನೆ ತಾರಸಿಯಾಗುತ್ತಿದೆ ಈ ಸಾಲು ಇಂದಿನ ಸಮಾಜದ ವಾಸ್ತವಕ್ಕೆ ಅತ್ಯಂತ ಅರ್ಥಪೂರ್ಣವಾಗಿರುತ್ತದೆ.
ಮನುಷ್ಯನ ಮಾನವೀಯ ಮನೋಧರ್ಮ ಇವೆಲ್ಲವೂ ಇಂದು ಲೆಕ್ಕಾಚಾರದ ಮಾತಾಗಿದೆ. ಮನದಲ್ಲಿ ಹಸಿರು ಮರಗಟ್ಟಿ ಎಲ್ಲೆಡೆ ಆರ್.ಸಿ.ಸಿ ಗಳ ಸೌಂದರ್ಯಕ್ಕೆ ನಾವಿಂದು ಮಾರು ಹೋಗಿದ್ದೇವೆ. ಆಧುನಿಕ ಜಗತ್ತಿನ ಈ ಸಂಬಂಧಗಳೇ ಹೀಗೆ, ಆದರೂ ಅಂದು ಕಳೆದ ಆ ದಿನಗಳ ನೆನಪು ಹಚ್ಚ ಹಸಿರು.
ತವರಿನ ಕೋಳು, ಸಿರಿದೊಂಡಲಿನ ಮುತ್ತು, ನಾಗಂದಿಗೆ, ಅವ್ವನ ಈಚಲು ಚಾಪೆ ಮಾಯವಾಗಿ ತಾರಸಿ ಮನೆಗಳಾಗುವ ಈ ಸಂದರ್ಭದಲ್ಲಿ, ಅಣ್ಣನ ಗ್ರಾನೈಟ್ ನೆಲ ಬರುವ ಪೂರ್ವದಲ್ಲಿ ಮತ್ತೊಮ್ಮೆ ಹಿಂದಿನ ಎಲ್ಲ ಮಾನವೀಯ ಮೌಲ್ಯಗಳಿಗೆ ಕಣ್ಣಾಗಿ ನೋಡುವ ಆಸೆ ಕವಯತ್ರಿ ಸಹಜವಾದ ಅಭಿವ್ಯಕ್ತಿಯ ಮೂಲಕ ಶಬ್ಧಗಳ ಡಂಬಾಚಾರವಿಲ್ಲದೇ ವಿವರಿಸಿರುವರು.
ಸಂಕಲನದ ಶೀರ್ಷಿಕೆಯ ಕವನವಾದ ಅವ್ವ ಮತ್ತು ಅಬ್ಬಲಿಗೆಯಲ್ಲಿ…
ಈಗೀಗ ಮಲ್ಲಿಗೆಯ ಕಂಪಿಗೆ
ಮಾರು ಹೋದರೂ
ಅಬ್ಬಲಿಗೆಯ ಕಂಪನ್ನು ಮರೆತಿಲ್ಲ
ಮೋಟು ಜಡೆ ಗುಲಾಬಿಯನ್ನೇ
ಬಯಸಿದರೂ ಸಹ
ಎನ್ನುತಾ ಮತ್ತೆ ತವರು ಅವ್ವ ಅಬ್ಬಲಿಗೆಯನ್ನು ನೆನೆದು ಓದುಗರ ಮನ ತುಂಬುತ್ತಾರೆ. ಅದೇ ಅಮಟೆ ಪಲ್ಯ, ಏಡಿ ಪಳದಿ, ಚೀಪಿನ ದಂಟು, ಅಬ್ಬಲಿಗೆ ದಂಡೆ, ಕಂಪಿಲ್ಲದ ಕೆಂಪಿನ ಜೊತೆ ನಾವಿಂದು ಬದುಕುತ್ತಿದ್ದರೂ ಅಬ್ಬಲಿಗೆಯ ಕೆಂಪನ್ನು ಮರೆಯಲಸಾಧ್ಯ. ಮತ್ತೆ ಮತ್ತೆ ಕಾಡುವ ಆ ದಿನಗಳಿಗಾಗಿ ಮೋಟು ಜಡೆಗೆ ಕೆಂಗುಲಾಬಿ ಇದ್ದರೂ ಕವಿಯಿತ್ರಿಗೆ ಅಬ್ಬಲಿಗೆಯ ಕಂಪೇ ಹಿತವೆನಿಸುವದು.
ಸಂಕಲನಕ್ಕೆ ನೆಲಮುಖಿ ಚಿಂತನೆಯ ಅವ್ವ ಮತ್ತು ಅಬ್ಬಲಿಗೆ ಎಂಬ ಒಂದು ಅರ್ಥಪೂರ್ಣ ಮುನ್ನುಡಿ ಬರೆದ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ ವಿಷ್ಣು ನಾಯ್ಕ ಇದೊಂದು ದೇಸೀ ಚಿಂತನೆಯ ನೆಲಮುಖೀ ಕವನ ಗುಚ್ಚ. ಇಲ್ಲಿ ಒಟ್ಟಾರೆಯಾಗಿ ಬಳಕೆಯಾದ ಸರಳವೂ ಆದ ಪದ ಪ್ರಯೋಗದಿಂದಾಗಿ ಸಂಕೀರ್ಣತೆಯ ಭಾರದಿಂದ ಈ ಸಂಕಲನ ನಲುಗುವದಿಲ್ಲ. ಆದ್ದರಿಂದ ಪ್ರತೀ ಪದ್ಯವೂ ಆಪ್ಯಾಯಮಾನವಾಗಿಯೇ ಮನಸ್ಸಿಗೆ ತಟ್ಟುತ್ತದೆ.
ಸಂಕೀರ್ಣ ಕವನಗಳಲ್ಲಿಯ ಒಳ ಪ್ರವೇಶ ಕೆಲವರಿಗೆ ತುಸು ಪ್ರಯಾಸದ್ದೆನಿಸುತ್ತದೆ, ಇಲ್ಲಿ ಆ ಸಮಸ್ಯೆ ಇರುವುದಿಲ್ಲ. ಹಾಗಂತ ಸಂಕೀರ್ಣ ಕವನಗಳಿಗೆ ಬೆಲೆ ಕಡಿಮೆ ಎನ್ನುವಂತೆಯೂ ಇಲ್ಲ, ಅಂಥ ಕವನಗಳನ್ನು ಸಹೃದಯನಾದವನು ಯಶಸ್ವಿಯಾಗಿ ಒಳ ಪ್ರವೇಶ ಮಾಡಿದಾಗ ಉಂಟಾಗುವ ಆನಂದವೇ ಬೇರೆ ಇಲ್ಲಿಯ ಕವನಗಳಿಗೆ ಭಾವ ನಿರ್ಭರತೆ ಇದೆ. ಇಲ್ಲಿ ಬಹಳಷ್ಟು ಕವನಗಳು ಮನಸ್ಸನ್ನು ಥಟ್ಟನೆ ಬರಸೆಳೆದುಕೊಳ್ಳುತ್ತದೆ ಎಂದಿರುವರು.
ದೃಷ್ಟಿ ತೆಗೆದು ನೆಟಿಗೆ ಮುರಿದು
ಎದೆಗೆತ್ತಿಕೊಂಡು
ಹಣೆಗೊಂದು ಮುತ್ತಿಕ್ಕಿ ಥೇಟ್ ನನ್ನ ಮಗನಂತೆ ಎನ್ನುತ್ತಾ
ಹದಿನೆಂಟನೆಯ ಕೊನೆಯ ಮೆಟ್ಟಿಲ
ಕೆಳಗಿಳಿದ ಮೇಲೂ
ಮತ್ತೊಮ್ಮೆ ಮಗದೊಮ್ಮೆ
ನಿನ್ನ ತಿರುತಿರುಗಿ ನೋಡಿಯೇನು
ಈಗ ಹೇಳು
ನನ್ನ ಮುಟ್ಟು ನಿನಗೆ ಮೈಲಿಗೆಯೇನು?
ಎಂದು ‘ಹೆಚ್ಚೆಂದ್ರೇನು ಮಾಡಿಯೇನು?’ ಕವಿತೆಯಲ್ಲಿ ಅಯ್ಯಪ್ಪನಿಗೇ ಸವಾಲು ಎಸಗಿರುವರು ಶೋಭಾ. ಹೆಣ್ಣು ಮುಟ್ಟಾಗುವಳು ಎಂಬ ಒಂದೇ ಕಾರಣಕ್ಕೆ ಹೆಂಗಸರಿಗೆ ಅಯ್ಯಪ್ಪನ ದರ್ಶನ ಇಲ್ಲವಂತೆ. ಇದು ಅಯ್ಯಪ್ಪ ಹೊರಡಿಸಿದ ಫರ್ಮಾನು ಇಲ್ಲ ಪಟ್ಟಭದ್ರ ಹಿತಾಸಕ್ತಿಯೋ? ಮುಟ್ಟಿನ ಬಗ್ಗೆ ಯಾಕಿಷ್ಟು ಅಸಹ್ಯ? ಮುಟ್ಟು ಮುಟ್ಟೆಂದೇಕೆ ಕೀಳರಿಮೆ ಹೊಂದುವಿರಿ, ಮುಟ್ಟಿನಿಂದಲ್ಲವೇ ನಮ್ಮೆಲ್ಲರ ಹುಟ್ಟು? ಮುಟ್ಟಲ್ಲವೇ ನಮ್ಮ ಸೃಷ್ಟಿಯ ಗುಟ್ಟು ಎಂಬಂತೆ, ನೀನೂ ನನ್ನ ಮಗನಂತೆ, ಬಾ. ಏಕೆ ನಿಂತಿರುವೆ? ಹುಲಿಯ ಹಾಲು ಕುಡಿದ ನೀನು ಮಗನಾಗಿ ತಾಯ ಹಾಲಿನ ರುಚಿ ನೋಡು, ಇಷ್ಟಾಗಿಯೂ ನನ್ನ ಮುಟ್ಟು ನಿನಗೆ ಮೈಲಿಗೆಯೇನು? ಎನ್ನುವಲ್ಲಿ ಈ ಸಾಂಪ್ರದಾಯಿಕ ಪದ್ಧತಿ, ಮೂಢನಂಬಿಕೆ, ಕಾಟಾಚಾರಗಳಿಗೆ ಅಯ್ಯಪ್ಪನ ಮೂಲಕ ಸಮಾಜಕ್ಕೆ ಸವಾಲೆಸಗಿರುವರು.

ಶೋಭಾ ಹಿರೇಕೈ ಕಂಡ್ರಾಜಿ
ನಾಡಿನ ಮತ್ತೊಬ್ಬ ಮಹತ್ವದ ಬರಹಗಾರ, ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ ಅವರು, ತಪ್ತ ಮನಕ್ಕೆ ತಾತ್ವಿಕ ಸಾಂತ್ವನ ಎಂಬ ಬೆನ್ನುಡಿ ಬರೆಯುತ್ತ, ಇವರ ರಚನೆಗಳಲ್ಲಿ ಸಂಸ್ಕೃತಿ ನಿಷ್ಠತೆ, ಪರಂಪರಾಪ್ರೀಯತೆ ಮತ್ತು ಪ್ರಕೃತಿ ಪ್ರಿಯತೆಗಳು ತಾಯ್ತನದ ಆಪ್ತತೆಯಲ್ಲಿ ಅರಳಿಕೊಳ್ಳುತ್ತವೆ.
ಬದುಕು ಕಾದ ಕೊಪ್ಪರಿಗೆಯಂತಿದ್ದರೂ ಮೌನವಾಗಿ ನಿರ್ಲಿಪ್ತವಾಗಿ ಅನುಭವಿಸುತ್ತಲೇ ಸಾತ್ವಿಕ ಪ್ರತಿಭಟನೆ ಗೈಯ್ಯುವ ಮಾತೃ ಸಂಹಿತದ ತಣ್ಣನೆಯ ಅಭಿವ್ಯಕ್ತಿ ಬೆರಗು ಮೂಡಿಸುತ್ತದೆ. ತಮ್ಮ ಸುತ್ತಲಿನ ಸಾಂಸ್ಕೃತಿಕ ಚೈತನ್ಯವನ್ನು ಹೀರಿಕೊಂಡು ತಮ್ಮ ಪುಟ್ಟ ಬೊಗಸೆಯಲ್ಲಿ ಎತ್ತಿ ನೀಡುತ್ತಿರುವ ಶೋಭಾ ಅವರ ಪ್ರಯತ್ನ ಭರವಸೆ ಮೂಡಿಸುತ್ತದೆ, ಸಂತೋಷ ಸೃಷ್ಟಿಸುತ್ತದೆ ಎಂದಿರುವರು.
‘ನಾವೂ ಮತ್ತು ಅವರು’ ಕವಿತೆಯಲ್ಲಿ…
ಸಂಜೆ ಮೀನು ಮತ್ತು
ಮಾರುದ್ದ ಜಡೆಯ ಮಗಳಿಗೆರಡು
ರಿಬ್ಬನ್ನು ಒಯ್ಯುವಾಗ ನಗುತ್ತದೆ
ಅವರ ಕೈಗಳಲ್ಲಿ
ನಾವೇ ಕೊಟ್ಟ ನೋಟುಗಳು
ಇಲ್ಲಿಯ ಬರಕತ್ತಿನ ಬದುಕು ಕಂಡು
ಎನ್ನುತ್ತ, ದುಡಿಯುವ ಕೈಗಳ ಪರವಾಗಿ ನಿಂತು ಮನ ಮಿಡಿಯುವರು. ಬೆವರು ಸುರಿಸಿ ದುಡಿದು ಮನೆಗೆ ಆಸರೆಯಾಗುವ ಈ ನೆಲದ ಮಣ್ಣಿನ ಮಕ್ಕಳು ಜೋಪಡಿಗಳಲಿ ಸುಖದ ನಿದ್ದೆ ಕಾಣುವರು. ಆದರೆ, ಹೊಳೆಯುವ ಟೆರೇಸಿನ ಮನೆಯೊಳಗಿನ ಜನಕ್ಕೆ ನಿದ್ದೆ ಬಾರದೇ ಒದ್ದಾಡುವರು ಜಂಜಡದ ಬದುಕಲಿ ಎಂದು ಈ ನೆಲದ ಶ್ರಮಿಕರ ಬೆವರಿಗೆ ಕವಿ ಬೆನ್ನು ಕೋಲಾಗಿ ನಿಲ್ಲುವರು.
ಆಗ
ಇಡೀ ಊರೇ ಒಂದು ಮನೆಯಂತೆ
ಪರ ಊರಿಗೆಲ್ಲಾ ಮಾದರಿ
ಎಲ್ಲದರಲೂ ನನ್ನೂರು
ರೋಡಿಲ್ಲ ಕರೆಂಟಿಲ್ಲ
ಈ’ಇಲ್ಲ’ಗಳ ನಡುವೆಯೂ
ಎಲ್ಲಾ ಇತ್ತು ನನ್ನೂರಲಿ
ಎಂದು ‘ನನ್ನೂರು’ ಕವನದಲ್ಲಿ ಅಂದು ಇಂದಿನ ವಾಸ್ತವ ಬದುಕನ್ನು ವಿವರಿಸಿರುವರು. ಅಂದು ಇಂದಿನಷ್ಟು ಸವಲತ್ತುಗಳು ಇಲ್ಲದಿದ್ದರೂ ಶಾಂತಿ ಸಮಾಧಾನ ಮಾನವೀಯತೆ ಮನೆಮಾಡಿತ್ತು. ಇಂದು ನಾಗರೀಕತೆಯ ಸೋಗಿನಲಿ ಮನುಷ್ಯತ್ವ ಸತ್ತುಹೋಗಿದೆ.
ನಾನು ನನ್ನದೆಂಬ ಮಮಕಾರಕ್ಕೆ ಬಿದ್ದ ಮನುಷ್ಯ ನಗು ಮಾತು ಎಲ್ಲವನ್ನೂ ಕಳೆದುಕೊಂಡಿರುವನು. ಟಿ.ವಿ, ಮೊಬೈಲುಗಳ ಹಾವಳಿಯಿಂದ ನಗು, ಹರಟೆಗಳೆಲ್ಲ ಮಾಯವಾಗಿ, ರಂಗಮಂದಿರವಂತೂ ಹಾಳು ಸುರಿಯುತ್ತಿದೆ ಅನ್ನುತ್ತಾ ನನ್ನೂರೇ ನನಗೆ ಅಪರಿಚಿತವಾಗಿ ಬಿಟ್ಟಿದೆ ಎಂದು ಇಂದಿನ ಧಾವಂತದ ದೈನಿಕವನ್ನು ಚಿತ್ರಿಸಿರುವರು.
ಸಂಕಲನದ ಕವಯಿತ್ರಿ ಶೋಭಾ ತನ್ನ ಕವಿತೆಗಳ ಕುರಿತು ಹೇಳುತ್ತಾ, ‘ಅಂದಿನ ದಿನಗಳಿಂದಲೂ, ಗುಡ್ಡ-ಬೆಟ್ಟ ಬ್ಯಾಣ ದೆಣಪೆ ದಾಟಿ, ಸರಗೋಲು ಸರಿಸುತ್ತ ಹಾದಿಹಾದಿಯಲ್ಲೇ ಸವೆದ ಪಾದ ನದಿಯಾಚೆ ಕಾಡಿಳಿದು ಓದಿಗೆಂದು ಸೇರಿದ್ದು ಉತ್ತರ ಕನ್ನಡದ ಅರಬ್ಬಿಯ ತೀರವನ್ನು.
ಕರಾವಳಿಯಲ್ಲಿ ಕಾಲೇಜು ದಿನಗಳಿಂದಲೇ ಎದೆ ಹೊಕ್ಕ ಕವಿತೆಯೊಂದು ಅಲ್ಲಿಂದ ಬಯಲು ಸೇರಿ ನನ್ನೊಡಲಲ್ಲೇ ಬೇರು ಬಿಟ್ಟು ಮೊಕ್ಕಾಂ ಹೂಡಿದ್ದು ಕಂಡು ನಾನು ಬಿಟ್ಟರೂ ಕವಿತೆ ನನ್ನ ಬಿಡೆನೆಂದಾಗ ನಾನೇ ಸೋತೆ ಕವಿತೆಗೆ ಎಂದು ತನ್ನೊಳಗೆ ಕವಿತೆ ಹುಟ್ಟಿದ ಕ್ಷಣವನ್ನು ನೆನೆದಿರುವರು.
ಮರಿಗಳ ಹೆತ್ತಪ್ಪ
ಮುಖವ ತೋರಲೇ ಇಲ್ಲ
ಯಾವ ಬೀದಿಯಲ್ಲಿತ್ತೋ
ಗಂಡು ಪ್ರಾಣಿ
ಎನ್ನುತ್ತಾ ‘ನಾಯಿಪಾಡು’ ಕವಿತೆಯಲ್ಲಿ ಬೇಜವಾಬ್ದಾರಿ ಕವಿತೆಯನ್ನು ಗಂಡು ನಾಯಿಗೆ ಹೋಲಿಸಿ ಹೆಣ್ಣು ತನ್ನೆಲ್ಲಾ ಕಷ್ಟ ದುಃಖಗಳ ನಡುವೆಯೂ ಹೇಗೆ ಬದುಕನ್ನು ನಿಭಾಯಿಸುವಳು ಎಂದು ತಾಯಿಯ ಮಹಿಮೆಯನ್ನು ಸಾಂಕೇತಿಕವಾಗಿ ಹೇಳುತ್ತಾ, ಸ್ವಾಭಿಮಾನದ ನಾಯಿಯೊಡಲು ಹಸಿದಿದ್ದರೂ ಎದೆಯ ಅಮೃತವನ್ನು ಉಣಿಸುತ್ತಿತ್ತು ಎಂದು ಹೆಣ್ಣಿನ ಮನೋವೈಶಾಲ್ಯತೆಯನ್ನು ಮೆರೆದಿರುವರು.
‘ಹೊಸ ಬದುಕಿನತ್ತ’ ಕವಿತೆಯಲ್ಲಿ
ಬಾ ಗೆಳತಿ
ಬರಡು ನೆಲದೊಳಗೊಮ್ಮೆ
ಹಸಿರಾಗಿ ಹುಟ್ಟೋಣ
ಸ್ವರ ಸತ್ತ ಕೊರಳೊಳಗೆ
ದನಿಯಾಗಿ ನಿಲ್ಲೋಣ
ಎನ್ನುತ್ತ ಬದುಕಿನಲಿ ಎಷ್ಟೇ ಕಷ್ಟ ಕಾರ್ಪಣ್ಯಗಳಿದ್ದರೂ ಹೊಸ ಬದುಕಿನತ್ತ ಮುನ್ನಡೆಯುವ, ಬರಡು ನೆಲವನ್ನು ಹಸಿರುಗೊಳಿಸುವಾ, ದೀನ ದಲಿತ ದುರ್ಬಲರಿಗೆ ನೆರವಾಗುವ, ನೆರಳಾಗುವ, ದನಿಯಿಲ್ಲದವರಿಗೆ ಬಾಯಾಗುವ ಎಂಬ ಆಶಯವನ್ನು ವ್ಯಕ್ತಪಡಿಸಿರುವರು.
ಕವಿ ಶೋಭಾರ ರಚನೆಗಳಲ್ಲಿ ಬಾಲ್ಯದ ನೆನಪಿದೆ, ತವರಿನ ಬೆಳಕಿದೆ, ಜನಪರ ಮನಸಿದೆ, ಮಾನವೀಯತೆಯ ತುಡಿತವಿದೆ, ಬೆವರಿನ ಜನಕೆ ಆಸರೆಯಾಗುವ ಅಂತಃಕರಣವಿದೆ. ಇವರು ಸಮಕಾಲೀನ ಕವನಗಳನ್ನು ಅಧ್ಯಯನ ಮಾಡಿ, ಅಲ್ಲಲ್ಲಿ ನುಸುಳುವ ಗದ್ಯದ ಶುಷ್ಕ ಗಾಳಿಯಿಂದ ಪಾರಾಗಿ ಮುಂದೆಯೂ ಸಹ ಮಾನವೀಯ ನೆಲೆಗಟ್ಟಿನ, ತವರಿನ ಮಿಡಿತದ ಕವನಗಳು ಬರಲೆಂದು ಆಶಿಸುತ್ತಾ ಪ್ರಥಮ ಸಂಕಲನಕ್ಕೆ ಶುಭ ಕೋರುವೆನು.





ಚೆನ್ನಾಗಿದೆ ಪ್ರಕಾಶ ಕಡಮೆ ಅಣ್ಣ.ಚಂದ ಬರ್ದೀರಿ.ಶೋಭಾರಿಗೆ
ಶುಭಾಶಯಗಳು
ನನ್ನ ವಂದನೆ ಅವಧಿಗೆ, ಮತ್ತು ಅವ್ವ ಮತ್ತು ಅಬ್ಬಲಿಗೆಯನ್ನು ಚಂದ ಪರಿಚಯಿಸಿದ ನಾಗಸುಧೆಯ ಪ್ರಕಾಶ್ ಕಡಮೆ ಸರ್ ಅವರಿಗೆ