ಚಂಸು ಪಾಟೀಲ ಅವರ ‘ಕುಳದ ಸಂಗಾತ’
‘ಕವಿತಾ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಬಗೆಗಿನ ದೇವರಾಜ್ ಹುಣಸಿಕಟ್ಟಿ ಅವರ ಅನಿಸಿಕೆ ಇಲ್ಲಿದೆ.
–ದೇವರಾಜ್ ಹುಣಸಿಕಟ್ಟಿ
ತೀವ್ರ ವಿಷಾದ, ವ್ಯಂಗ್ಯದಿಂದ ಬಿಡುಗಡೆಯ ಹಾದಿ ಅರಸುವ ಕುಳದ ಸಂಗಾತ….
ಪ್ರಸಕ್ತ ಕಾಲಘಟ್ಟದ ಇಡೀ ಒಂದು ಜನಸಮೂಹದ ವ್ಯಥೆ ಕಟ್ಟಿ ಕೊಡುವ ಶೀರ್ಷಿಕೆ ರಹಿತ ಕವಿತೆಗಳ ಕಟ್ಟಿನೊಂದಿಗೆ ಚಂಸು ಪಾಟೀಲರು ನಮ್ಮೆದುರಿಗೆ ಮುಖಾ ಮುಖಿ ಆಗಲು ತೆರೆದ ಕವನ ಸಂಕಲನವೇ “ಕುಳದ ಸಂಗಾತ” ಅವರ ಕವಿತೆಯ ಸಾಲುಗಳು…
ಇದು ಬೆಳದಿಂಗಳಲ್ಲವೋ ಮುಢಾ
ಉಳ್ಳೊರ ನೆಳ್ಳಾಗ ನರ ಸತ್ತವರ ದುಗುಡ!
ಬಡ ಬಗ್ಗರ ಬದುಕು ಮುಗಿಲಾಗಿನ ಮಿಂಚೊ ಚುಕ್ಕಿ ಹಾಂಗ ನೋಡ!
ಭ್ರಷ್ಟ ವ್ಯವಸ್ಥೆ, ಕಣ್ಣೆದುರಿಗೆ ನಡೆವ ಲೂಟಿ ಅದಕ್ಕೆ ಎದುರಾಗಿ ತನ್ನ ಕನಿಷ್ಠ ಹಕ್ಕು ಪಡೆಯಲಾಗದ ಲಕ್ಷ ಲಕ್ಷ ಜನರ ದುಗುಡ.ಮೆಲ್ ನೋಟಕ್ಕೆ ಮನೆ,ಹೆಂಡತಿ,ಮಕ್ಕಳು ಹೊರಗಡೆ ಯಿಂದ ಸುಖಿ ಸಂಸಾರ, ಬಾನಲ್ಲಿ ಮಿನುಗುವ ಚುಕ್ಕಿ ಹಂಗ್ ಒಳಗೆ ಹೊಕ್ಕು ನೋಡಿದ್ರೆ ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸೋದು ಕಷ್ಟ, ಕಾಯಿಲೆಗೆ ಒಳ್ಳೆ ಟ್ರೀಟ್ಮೆಂಟ್ ಕೊಡಿಸೋದು ಕಷ್ಟ, ಗೊಬ್ಬರ ಬೀಜಕ್ಕೆ ಸಾಲ ಹೀಗೆ ಅನೇಕ ಸಮಸ್ಯೆಗಳು ಬಡವರ ಬದುಕನ್ನು ಹಿಂಡಿ ಹಿಪ್ಪೆ ಗೊಳಿಸಿವೆ ಅನ್ನೋದು ಈ ಕವಿತೆ ಮೂಲಕ ಅವರು ಬಂಡವಾಳ ವ್ಯವಸ್ಥೆಗೆ, ಬಡವರ ಬದುಕಿಗೆ ಏಕ ಕಾಲಕ್ಕೆ ಕನ್ನಡಿ ಹಿಡಿದಿದ್ದಾರೆ.

ಒಮ್ಮೊಮ್ಮೆ ಕವಿ ಲೋಕ ಸ್ಥಾಪಿತ ಅನೇಕ ಕಲ್ಪಿತ ಮಿತ್ ಗಳ ಎಗ್ಗಿಲ್ಲದೇ ಮುರಿಯುವ, ಇರಿಯುವ ಉಮೇದು ತೋರಿದ್ದಾರೆ. ಇದಕ್ಕೆ ಅವರು ಅಭಿನಂದನೆಗೆ ಅರ್ಹರು. ಅವರ ಕವಿತೆಯ ಸಾಲುಗಳೇ ಇದಕ್ಕೆ ಸಾಕ್ಷಿ…
ರೆಕ್ಕೆಯ ಕನಸು ಕಾಣುತ್ತಲೆ
ಗೂಡು ಕಟ್ಟಿಕೊಳ್ಳುವ ರೇಷ್ಮೆಹುಳು..
ಸ್ವಾತಂತ್ರದ ಕನಸು ಕಾಣುತ್ತಲೆ
ದೇಶ ಕಟ್ಟಿಕೊಳ್ಳುವ ಮನುಷ್ಯ
ಪ್ರಭುತ್ವಕ್ಕೆ ಬಲಿಯಾಗಿ
ಮಾನಕ್ಕೆ ಅಲಂಕಾರವಾಗುವುದು
ನಿಜಕ್ಕೂ ಘೋರ ದುರಂತ.!
ಗಾಂಧಿಜೀ ಈ ಜಗತ್ತಿನ ಅಸ್ಮಿಯತೆ. ಅವರು ಭಾರತಕ್ಕೆ ಸೇರಿದವರು ಎಂಬುದು ನಮ್ಮ ಹೆಮ್ಮೆ. ಇಂತಹ ಗಾಂಧೀಜಿ ಚರಕದ ಮುಂದೆ ಕುಳಿತು ಬಂಡವಾಳ ಶಾಯಿಯ ದಲಾಲನೊಬ್ಬ ಪೋಸು ಕೊಡುವಾಗ ಚoಸು ಬರೆದ ಸಾಲುಗಳು ಅನನ್ಯ. ಕುರುಡನಿಗೆ ಕಣ್ಣು ಕೊಡುವ ಪ್ರಯತ್ನ ಅಂದ್ರೆ ಸುಳ್ಳಲ್ಲ. ಸುಮ್ನೆ ಓದಿ
ಗಾಂಧಿ ಚರಕವ
ನೂತಿದ್ದು ನಮಗೆ
ಸ್ವಾವಲಂಬನೆಯ ಸಂಕೇತ!
ಅಲ್ಲಿ ಇನ್ಯಾರೋ
ಕೂತರು ಅದು
ಜೀಡ ಬಲೆ ನೇಯುವ ಚಿತ್ರ!
ಹೀಗೆ ತಮ್ಮ ಕವಿತೆಗಳ ಮೂಲಕ ತೀವ್ರವಾದ ವಿಷಾದ ಹೊರ ಹಾಕುವ ಕವಿ ಚoಸು ಪಾಟೀಲರು. ರೈತರ ಬವಣೆಯ ಬದುಕಿಗೆ ಕನ್ನಡಿ ಹಿಡಿಯುವ ಕವಿತೆಗಳ ಬರೆದಿದ್ದಾರೆ.
ನಾವು ರೈತರು
ನಮ್ಮ ಶ್ರಮಕ್ಕೆ
ಬಂಡವಾಳ ಎನ್ನುತ್ತೇವೆ!
ಅವರು ಕೈ ಗಾರಿಕೋದ್ಯಮಿಗಗಳು
ಹಣಕ್ಕೆ ಬಂಡವಾಳ ಎನ್ನುತ್ತಾರೆ..!
ಹೌದು
ನಮ್ಮ ಬದುಕೂ ಹೀಗೆ..
ಚೌಕಾಶಿ ಬೆಲೆಗೆ ಸಿಕ್ಕುವ ತರಕಾರಿ…
ನಾವು ಊರಿಗೆ ಉಪಕಾರಿ
ಮನೆಗೆ ಮಾರಿ!
ಅವರ ಪ್ರತಿ ಕವಿತೆ ನಾವು ನಡೆವ ನೆಲ ಕುಡಿವ ನೀರು ಉಸಿರಾಡುವ ಗಾಳಿ ಎದುರಿಸುತ್ತಿರುವ ಅಪಾಯ ಎಗ್ಗಿಲ್ಲದೇ ಮಾತಾಡಿವೆ. ಅವರು ವ್ಯವಸ್ಥೆಯ ಕುರಿತು ತೀವ್ರ ವ್ಯಂಗದ ದಾಟಿಯಲ್ಲಿ ಹಲವು ಕವಿತೆಗಳಲ್ಲಿ ತಿವಿದಿದ್ದಾರೆ. ಉದಾಹರಣೆಗೆ…
ನಂಬಿಕೆ ಮತ್ತು ಮೋಸಗಳ
ನಡುವಿನ ವ್ಯತ್ಯಾಸವಿಷ್ಟೇ!
ನಂಬಿಕೆಯ “ನ”ಮೋವನ್ನು
ಮೋಸದ “ಮೋ “ವನ್ನು
ಒಂದು ಗೂಡಿಸಿದರೆ.. ನಮೋ..
ಆಗುವುದೆಂತೆ ಚೇಷ್ಟೆ!
ನಕ್ಕು ಬಿಡಿ.. ಅಷ್ಟೇ!
ಈ ಸಂಕಲನದಲ್ಲಿ ಕವಿ ಪ್ರೇಮ ಕವಿತೆಗಳಿಗೂ ಒಂದಿಷ್ಟು ಕಿರು ಜಾಗ ಕೊಟ್ಟಾರೆ… ಉದಾಹರಣೆಗೆ
‘ಒಂದಿಷ್ಟು ಒಂದು ಕಿರುನಗು
ಚೆಲ್ಲಿ ಹೋಗು ಚೆಲುವೆ
ಇದ್ದರೂನು ಬಿಸಿಲು ಬೇಗೆ
ಎಲ್ಲ ಸಹಿಸಿ ನಗುವೆ!
ಇನ್ನೊಂದು…
ನಾನೊ
ನೀನೇ ಹೊಸೆದ ಬತ್ತಿ
ನಿನ್ನೆದೆಯ ಹಣತೆಯಲ್ಲಿ
ಇನ್ನೂ ಪ್ರೀತಿಯ ತೈಲ
ಉಳಿದಿದ್ದರೆ ಹೇಳು
ಖಂಡಿತ ಬೆಳಕಾಗುತ್ತೇನೆ..!
ಜಗತ್ತು ಕಿರಿದಾದ ಬಗೆ, ಪರಸ್ಪರ ಅವಲಂಬನೆ ಅವು ಬೀರುವ ಪರಿಣಾಮ, ಮದಿರೆ, ಮೈಖಾನೆ ಹೀಗೆ ಹಲವು ಹಂದರಗಳ ಕೆಲ ಕವಿತೆಗಳು ಇಲ್ಲಿ ನಿಮ್ಮ ಕಣ್ಣಿಗೆ ಬೀಳುತ್ತವೆ ಅವುಗಳ ಗ್ರಹಿಸಲು ನಮ್ಮ ಲೋಕಗ್ರಹಿಕೆ ನಿರಂತರ ಅಪ್ಡೇಟ್ ಆಗುತ್ತಿರಬೇಕು ಅಷ್ಟೇ..ಉದಾಹರಣೆಗೆ
ಅಮೇರಿಕೆಯಲ್ಲಿ
ಮಳೆಯಾದರೆ
ಇಂಡಿಯಾಕ್ಕೆ ನೆಗಡಿ!
ದಿಕ್ಕೆಟ್ಟ ಮಂದಿ
ಗುಂಡು ಹಾಕಿದ್ದೆ ತಡ
ಹೊಸ ವರ್ಷಕೆ ಧಾoಗುಡಿ!
ನಿದ್ದೆ ಗೆಟ್ಟ ಕಣ್ಣಲ್ಲಿ
ಕನಸಿತ್ತು
ಮಹಲಾಗಿತ್ತೇ? ಜೋಪಡಿ!
ನಸುಕಿಗೆ
ಕಣ್ಣ ಬಿಟ್ಟರೆ
ಅರೆರೆ ಇದೇನು ಮತ್ತದೇ ಥಂಡಿ!
ಎಷ್ಟೇ ಮಾತನಾಡಿದರೂ ಕವಿತೆಗಳ ಕುರಿತು ಮಾತನಾಡದೆ ಉಳಿವ ಸಂಗತಿಗಳು ಸಾಕಷ್ಟು ಇರುತ್ತವೆ ಎಂಬ ಎಚ್ಚರದೊಂದಿಗೆ, ಈ ಕೃತಿಗೆ ಹಿರಿಯರಾದ ವಿ. ಚಂದ್ರ ಶೇಖರ ನಂಗಲಿ ಅವರು ಮುನ್ನುಡಿ ಬರೆದು ಹಾರೈಸಿದ್ದಾರೆ. ಬಿ. ಪೀರ್ ಬಾಷ ಸರ್ ಅವರ ಬೆನ್ನುಡಿ ಇದೆ. ಈ ಕೃತಿಯ ಮುಖ ಪುಟವನ್ನು ಕಲ್ಲೂರು ನಾಗೇಶ್ ಅವರು ರಚಿಸಿದ್ದಾರೆ. ಮೈಸೂರಿನ ಕವಿತಾ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಒಟ್ಟು 109 ಕವಿತೆಗಳು ಈ ಸಂಕಲನದಲ್ಲಿವೆ.ಏಕತಾನತೆ ಈ ಸಂಕಲದಲ್ಲಿ ಕಂಡರೆ ಅದು ವಿಷಯಕ್ಕೆ ಸಂಬಂಧಿಸಿದ್ದು ಮಾತ್ರ.ಈ ಕೃತಿಯನ್ನು ಚoಸು ಪಾಟೀಲರು ಕನ್ನಡದ ಹಿರಿಯ ಚೇತನ ಪಾಟೀಲು ಪುಟ್ಟಪ್ಪನವರಿಗೆ ಅರ್ಪಿಸಿದ್ದಾರೆ.






0 Comments