-ಅಶೋಕ ಹೊಸಮನಿ
ನರತಂತುಗಳ ಕೊರೆಯುವ ಜಾದೂಗಾರ
ಅದೇಕೊ
ಈಗೀಗ
ಗಡಿಯಾರ
ಕಣ್ಣಲ್ಲಿ
ಮುಳ್ಳಾಡಿಸುತ್ತಿದೆ
ಹನಿ ಹನಿ ನೆತ್ತರಿಗೆ
ತುಟಿಗಳ ಚಾಚಿದೆ
ಬತ್ತಿಹ ಕಣ್ಣಲಿಗಳ ಬಾಚಿ
ಕೂಗಿ ಕೂಗಿ ಕರೆಯುತ್ತಿದೆ
ಸತ್ತ ಪದಗಳ ಜಾಡಿನಲ್ಲಿ
ಕುರುಹುಗಳ ಅರಸುತ್ತಿದೆ
ಪೂರ್ವಸೂರಿಗಳ
ಎಡರು ತೊಡರಿಲ್ಲದ ಬಾಳ್ವೆಗೆ ತಲೆದೂಗಿ
ತಲೆಬಾಗಿದೆ
ದಿಟ್ಟಿಸುತ್ತಿದೆ
ಇಂದೇಕೋ
ಜೊತೆಗಾರನಿಲ್ಲದ
ಹೊತ್ತಲ್ಲಿ
ಪುರಾತನ ಪ್ರೇಮದ ಸಂಪುಟಗಳ
ಹರವಿ
ಹೃದಯದ ಬಡಿತಕ್ಕೆ ಕಿವಿಯಾನಿಸದೇ
ಧಾವಂತದ ಪಾದಗಳನ್ನ ತೂರಿದೆ
ಬಾಗಿಲಾಚೆಗೆ
ಆಕಾಶದಾಚೆಗೆ
ಬ್ರಹ್ಮಾಂಡದಾಚೆಗೆ
ಕಡು ಕತ್ತಲ ಕೋಣೆಗಳ
ಉಸಿರ ತುಣುಕಿಗೆ
ಹೊತ್ತಿಸಿಹ
ಬೆಂಕಿಯ ತಳಮಳದಲಿ
ಇಂದೇತಕೊ
ನುಡಿಗಳು
ಎದುರು ಬದರಾಗಿವೆ
ಕಣ್ಣಲ್ಲಿಯ ಬೆಂಕಿ ಮಾತಿಗಿಳಿದಿಹ
ಹೊತ್ತಲ್ಲಿ
ಅಮ್ಮ
ಅಪ್ಪನಂಥ
ಅಜ್ಜ
ಅಜ್ಜಿಯಂಥ
ಗೆಳೆಯ
ಗೆಳೆತಿಯಂಥ
ಸಾಕೆಂದು
ತೊರೆದರೂ
ತೊರೆಯದ
ತೆರೆಮರೆಯ ನೆರಳು ಬೆಳಕಿನ ಕಾಲನ ಗಡಿಯಾರ
ನರತಂತುಗಳ ಕೊರೆಯುವ ಜಾದೂಗಾರ
ಅದೆಲ್ಲಿ ದೊರೆಯಬಹುದು
ಮುದುಡಿಹ ಜೋಳಿಗೆಯ ನರಳುವಿಕೆಯಲಿ
ಮಾತೆಲ್ಲಿ ಸೋತಿತು
ಹೃದಯವೆಲ್ಲಿ
ಹಿಂಡಿತು
ಬೀದಿ ಬೀದಿಯ
ಸೂರು ಸೂರಿನ ನರಕದ ತೂಗುಯ್ಯಾಲೆಯಲ್ಲಿ
ಮಿಂದೇಳುತ
ಎಡೆಬಿಡದ ಓಟದಲ್ಲಿ
ಅರೆಕೂಳಿನಾಸರೆಯಲಿ
ದನಿಯನಾಲಿಸದ ದೊರೆಯ ಗತ್ತಿನ ಕರಾಮತ್ತಿನಲಿ
ಶಿಲೆಗಳ ಉರುಳಿಸಿ
ಶಿರಗಳಲಿ ಕೈಯಾಡಿಸಿ
ಕಾಲನ ಒಲೆಯಲಿ ಉರಿಸಿದೆ
ಅನುದಿನದ ಪಡಿ ಪದಾರ್ಥವ
ಮೈಮರೆತು ಕೂತ ನಿನಗೇತಕೊ
ಅರ್ಥವಾಗುತ್ತಿಲ್ಲ
ಈ ಪರಿಯೂ
ಇಂದೇತಕೊ
ಗಡಿಯಾರವು
ಬಾಯ್ತೆರಿದಿದೆ
ಉಕ್ಕುವ ಕಣ್ಣೀರ ಕಣ್ಣಾಲಿಗಳಿಗಂಟಿಹ
ಉರಿಯುತಿಹ
ಗತದ ಓಲೆಗಳ
ನುಂಗುತ್ತಿದೆ
ಕಣ್ಣಲ್ಲಿ ಗಡಿಯಾರ ನಕ್ಕು ನಲಿಯುವ ಹೊತ್ತಲ್ಲಿ
ಮುಖಮೂಡದ ಭ್ರೂಣಗಳು ಅಳುತ್ತವೆ






0 Comments