ಮುಂಬೈ ಮಹಾನಗರದ ಮಾನವೀಯ ಮುಖಗಳು
ಜಿ ಪಿ ಬಸವರಾಜು
ಹತ್ತಿರ ಹತ್ತಿರ ಎರಡು ಕೋಟಿ ಜನಸಂಖ್ಯೆಯನ್ನು ತನ್ನ ಒಡಲಲ್ಲಿ ತುರುಕಿಕೊಂಡಿರುವ ಮುಂಬೈ ಮಹಾನಗರ ಮೊದಲ ಬಾರಿಗೆ ಕಾಲಿಟ್ಟವರನ್ನು ಬೆಚ್ಚಿಬೀಳಿಸುತ್ತದೆ. ಎಲ್ಲಿಂದ ಹೊರಟರೂ ಈ ನಗರ ಮುಗಿಯದ ಮಹಾಸಾಗರ. ಈ ಎರಡು ಕೋಟಿಯಲ್ಲಿ ಅರ್ಧದಷ್ಟು ಜನ ಕೊಳೆಗೇರಿಗಳಲ್ಲೇ ವಾಸಮಾಡುತ್ತಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಕೊಳೆಗೇರಿಗಳು ಈ ನಗರದಲ್ಲಿವೆ. ಮುಂಬೈ ಮಹಾನಗರದ ಅತ್ಯಂತ ದೊಡ್ಡ ಕೊಳೆಗೇರಿಯಾಗಿರುವ ಧರಾವಿ ಎಲ್ಲರ ಕಣ್ಣು ಕುಕ್ಕುತ್ತದೆ. ಇಲ್ಲಿ ಹೆಜ್ಜೆ ಊರುವುದಕ್ಕೂ ಜಾಗ ಸಿಕ್ಕುವುದಿಲ್ಲ ಎಂಬ ಮಾತಿನಲ್ಲಿ ಉತ್ಪ್ರೇಕ್ಷೆ ಇದೆ ಎಂದು ಅನಿಸುವುದಿಲ್ಲ. ಮುಂಬೈ ಭೂಗತ ಜಗತ್ತಿನ ಪ್ರಮುಖ ದಾದಾಗಳು ಸಿಕ್ಕುವುದು ಇಲ್ಲಿಯೇ; ದಾದಾಗಿರಿಯ ಎಲ್ಲ ಮುಖಗಳು ಕಾಣಿಸುವುದು ಇಲ್ಲಿಯೇ. ಎಲ್ಲಿಂದಲೋ ಬಂದು ದಿಕ್ಕೆಟ್ಟ ಲಕ್ಷಲಕ್ಷ ಮಂದಿ ತಮ್ಮ ಬದುಕಿಗೊಂದು ದಿಕ್ಕು ದೆಸೆಯನ್ನು ಕಂಡುಕೊಂಡಿರುವುದು ಇಲ್ಲಿಯೇ. ಇಲ್ಲಿ ತಯಾರಾಗುವ ಚರ್ಮದ ವಸ್ತುಗಳು, ಜವಳಿ, ಕುಂಬಾರಿಕೆಯ ವಸ್ತುಗಳು ಅನೇಕ ರಾಷ್ಟ್ರಗಳಿಗೆ ರಫ್ತಾಗುತ್ತವೆ. ಇಲ್ಲಿ ಜನ ಹೇಗೆ ಬದುಕುತ್ತಿದ್ದಾರೆ ಎಂಬುದೇ ಅನೇಕ ಕುತೂಹಲಿಗಳಿಗೆ ಅಧ್ಯಯನದ ಸಂಗತಿಯಾಗಿದೆ. ಈ ಕೊಳೆಗೇರಿಯನ್ನೇ ಕೇಂದ್ರ ಮಾಡಿಕೊಂಡ ಅನೇಕ ಪುಸ್ತಕಗಳು ಪ್ರಕಟವಾಗಿವೆ; ಮಾಧ್ಯಮಗಳಿಗಂತೂ ಇಲ್ಲಿ ಸಮೃದ್ಧ ಸರಕು.
ಮೊನ್ನೆ ಮೂರನೇ ಬಾರಿಗೆ ಮುಂಬೈ ನಗರಕ್ಕೆ ಹೋದಾಗ ನನ್ನ ಭಯ, ಆತಂಕಗಳೇನೂ ಕಡಿಮೆಯಾಗಿರಲಿಲ್ಲ. ನಮ್ಮೆಲ್ಲರ ಅಹಂಕಾರಗಳನ್ನು ಕರಗಿಸಿಬಿಡಬಲ್ಲ ಈ ಮಹಾನಗರ ನಮ್ಮ ಅಸ್ಮಿತೆಗೂ ಜಾಗ ಕಲ್ಪಿಸುತ್ತದೆ. ನಮ್ಮ ಅನೇಕ ನಗರಗಳು ನಮ್ಮೊಳಗಿನ ಮಾನವೀಯ ಸೆಲೆಗಳನ್ನು ಬತ್ತಿಸುವಷ್ಟು ಕ್ರೂರವಾಗಿ, ಅಮಾನುಷವಾಗಿ ನಡೆದುಕೊಳ್ಳುತ್ತವೆ. ಈ ಗುಂಪಿನಲ್ಲಿ, ಈ ಜನಜಂಗುಳಿಯಲ್ಲಿ, ಈ ಮೋಸಗಳ ಜಾಲಗಳಲ್ಲಿ ನಮ್ಮನ್ನು ನಾವು ಬಚಾವು ಮಾಡಿಕೊಳ್ಳುವುದು ಒಂದು ಸಾಹಸವಾಗಿಯೇ ಕಾಣಿಸುತ್ತದೆ. ಆದರೆ ಮುಂಬೈ ಭಿನ್ನ ನಗರ. ಇಲ್ಲಿ ಟ್ಯಾಕ್ಸಿಗಳನ್ನು ನೀವು ಸುಲಭವಾಗಿ ಹತ್ತಬಹುದು. ಬೆಂಗಳೂರು, ಮೈಸೂರು ನಗರಗಳಿಗೆ ಹೊರಗಿನಿಂದ ಬಂದವರು ಆಟೋಗಳನ್ನು ಬೈಯದೆ ಈ ಊರುಗಳಿಗೆ ವಿದಾಯ ಹೇಳಿರುವುದೇ ಕಡಿಮೆ. ಅಷ್ಟು ಮೋಸ; ಇಲ್ಲವೇ ಮೀಟರ್ಗಳೇ ಮೋಸ. ಅಲ್ಲಲ್ಲಿ ಇರಬಹುದಾದ ಸಜ್ಜನ ಆಟೋ ಚಾಲಕರೂ ಇದರಿಂದ ತಲೆತಗ್ಗಿಸುವಂತಾಗುತ್ತದೆ. ಮುಂಬೈ ಹಾಗೆ ಹೆದರಿಸುವುದಿಲ್ಲ. ಟ್ಯಾಕ್ಸಿವಾಲಾಗಳು ನಿಮ್ಮನ್ನು ಮುತ್ತುತ್ತಾರೆ. ಆದರೆ ಕಾಡುವುದಿಲ್ಲ. ಇಲ್ಲಿ ಟ್ಯಾಕ್ಸಿ ಹತ್ತುವುದು ಸುಲಭ. ಕನಿಷ್ಠ ದರ 21 ರೂಪಾಯಿ. ಮೂರ್ನಾಲ್ಕು ಪ್ರಯಾಣಿಕರಿದ್ದರೆ ಈ ದರ ಇನ್ನೂ ಕಡಿಮೆಯಾಗುತ್ತದೆ. ಕರೆದಲ್ಲಿಗೆ ಬರುತ್ತಾರೆ; ಮೀಟರ್ ತೋರಿಸುವಷ್ಟೆ ಹಣವನ್ನು ತೆಗೆದುಕೊಳ್ಳುತ್ತಾರೆ. ಮುಂಬೈಯಲ್ಲಿ ಟ್ಯಾಕ್ಸಿ ಪ್ರಯಾಣ ಎಷ್ಟು ಹಿತ.
ಅದು ಬೇಡವೆಂದರೆ ಬಸ್ಸುಗಳಿವೆ. ಇಲ್ಲಿಯೂ ಎಷ್ಟೊಂದು ಒಳ್ಳೆಯ ವ್ಯವಸ್ಥೆಯಿದೆ. ಹಿಂಬಾಗಿಲಿನಿಂದ ಹತ್ತುವುದು; ಮುಂಬಾಗಿಲಿನಿಂದ ಇಳಿಯುವುದು. ವೃದ್ಧರಿಗೆ ಒಂದಿಷ್ಟು ವಿನಾಯಿತಿ. ಅವರು ಮುಂಬಾಗಿಲಿನಿಂದಲೂ ಹತ್ತಬಹುದು. ಆದರೆ ಹತ್ತುವ ಮತ್ತು ಇಳಿಯುವ ಹೊತ್ತಿನಲ್ಲಿ ಯಾವ ಗೊಂದಲವೂ ಇರುವುದಿಲ್ಲ; ನೂಕಾಟ, ತಳ್ಳಾಟಗಳಿರುವುದಿಲ್ಲ. ಕಂಡೆಕ್ಟರ್ ಕೂಡಾ ಚಿಲ್ಲರೆಯನ್ನು ಕೊಡುತ್ತಾನೆ; ಟಿಕೆಟ್ ಹಿಂಬದಿಯಲ್ಲಿ ಬರೆದುಕೊಡುವುದು, ಪ್ರಯಾಣಿಕರು ಇಳಿಯುವಾಗ ಗುಂಪಿನಲ್ಲಿ ತಲೆ ತಪ್ಪಿಸಿಕೊಂಡು ಚಿಲ್ಲರೆಯನ್ನು ಉಳಿಸಿಕೊಳ್ಳಲು ನೋಡುವ ಕಂಡೆಕ್ಟರ್ಗಳು ಇಲ್ಲಿ ಕಾಣಸಿಕ್ಕುವುದಿಲ್ಲ. ಸುಖ ಪ್ರಯಾಣಕ್ಕೆ ಮೆಟ್ರೋ ಇದ್ದೇ ಇದೆ. ತುಂಬ ದೂರದ ಭಾಗಗಳಿಗೂ ಬೇಗನೆ ಹೋಗಲು ಇರುವ ಅತ್ಯುತ್ತಮ ಸಾಧನ ಇದು. ಇಲ್ಲಿ ನಿಮ್ಮ ಜೇಬುಗಳನ್ನು ಒಂದಿಷ್ಟು ಎಚ್ಚರದಿಂದ ನೋಡಿಕೊಂಡರೆ ಪ್ರಯಾಣ ಸುಖಕರವಾಗಿರುತ್ತದೆ.
ಕೊಲ್ಕತ್ತ ಮನುಷ್ಯರಿರುವ ನಗರ; ಮುಂಬೈ ಕೂಡಾ ಅಷ್ಟೆ. ಮನುಷ್ಯರು ಕಾಲಿರಿಸುವುದಕ್ಕೂ ಇಲ್ಲಿ ಜಾಗವಿಲ್ಲ ಅನ್ನಿಸಿದರೂ, ಇಲ್ಲಿ ಮನುಷ್ಯರಿದ್ದಾರೆ; ಮಾನವೀಯತೆ ಇನ್ನೂ ಹಸಿರು ಹಸಿರಾಗಿ ಉಳಿದುಕೊಂಡಿದೆ. ವಾಹನ ಸಂಚಾರ ಜೋರಾಗಿದ್ದ ಒಂದು ರಸ್ತೆಯ ಬದಿಯಲ್ಲಿ ಬಸ್ಗಾಗಿ ಕಾಯುತ್ತ ನಾವು ನಿಂತ ಹೊತ್ತಿನಲ್ಲಿ ಕೈಗಾಡಿಯೊಂದು ಈ ರಸ್ತೆಯಲ್ಲಿ ಸಾಗಿ ಬಂತು. ಮೂಟೆಗಳನ್ನು ತುಂಬಿದ ಕೈಗಾಡಿಯನ್ನು ಬಡ ಕಾರ್ಮಿಕನೊಬ್ಬ ಎಳೆದುಕೊಂಡು ಸಾಗುತ್ತಿದ್ದ. ಈತನ ಹಿಂದೆ, ಗಾಡಿಯಲ್ಲಿದ್ದ ಮೂಟೆಗಳು ಬೀಳದಂತೆ ನೋಡಿಕೊಳ್ಳಲು ಇನ್ನೊಬ್ಬ. ತೀರ ಆತಂಕದಿಂದ ನಾನು ಈ ಗಾಡಿಯನ್ನು, ಅದು ಚಲಿಸುವ ಪರಿಯನ್ನು, ಉರಿಯುವ ಬಿಸಿಲನ್ನು, ಗಾಡಿ ಎಳೆಯುವಾತನ ಮೈಯಿಂದ ಸುರಿಯುತ್ತಿರುವ ಬೆವರನ್ನು ನೋಡುತ್ತಿದ್ದೆ. ಹಲವಾರು ವಾಹನಗಳು ಓಡುವ ಈ ರಸ್ತೆಯಲ್ಲಿ ಇವರ ಪಯಣ ಹೇಗೆ ಸಾಗುವುದೋ ಎಂಬ ಆತಂಕ ನನಗೆ. ಆದರೆ ಈ ಪಯಣ ಎಷ್ಟು ಮುಕ್ತವಾಗಿತ್ತು. ಯಾರೊಬ್ಬರೂ, ಯಾವೊಬ್ಬ ಚಾಲಕನೂ ಇವರನ್ನು ಬೈಯ್ಯಲಿಲ್ಲ; ಶಪಿಸಲಿಲ್ಲ. ಅವರ ಪಯಣಕ್ಕೆ ಅಡ್ಡಿಯಾಗದಂತೆ ತಮ್ಮ ವಾಹನಗಳ ವೇಗವನ್ನು ಕಡಿಮೆಗೊಳಿಸಿ, ನಿಧಾನಕ್ಕೆ ಅವರ ಮಗ್ಗುಲಲ್ಲಿ ದಾರಿಮಾಡಿಕೊಂಡು ಸಾಗುತ್ತಿದ್ದರು. ಇದೆಂಥ ದೃಶ್ಯ! ನಾನಂತೂ ಬೆರಗಾಗಿ ನೋಡುತ್ತಲೇ ಇದ್ದೆ.

ಇದು ಕೇವಲ ಅಪವಾದ ಎನ್ನುವ ದೃಶ್ಯವಲ್ಲ. ಈ ನಗರದ ಇನ್ನೊಂದು ಬೀದಿಯಲ್ಲಿ ಸೀಮೆ ಹಸುಗಳನ್ನು, ಕರುಗಳನ್ನು ಹಿಡಿದುಕೊಂಡು ರಸ್ತೆ ಮಧ್ಯದಲ್ಲಿಯೇ ನಡೆದುಹೋಗುವವರನ್ನೂ ಕಂಡೆ. ಆಗಲೂ ವಾಹನ ಚಾಲಕರು ತೋರುತ್ತಿದ್ದ ಸಹನೆ, ಮಾನವೀಯತೆ ಅವರ ಬಗ್ಗೆ ಗೌರವ ಹುಟ್ಟಿಸುವಂತಿತ್ತು. ಹಸು ಹಿಡಿದವರು ನೆಮ್ಮದಿಯಿಂದ ನಡೆದುಹೊದರು. ರಸ್ತೆಗಳು ವಾಹನಗಳಿಗಿರುವಂತೆಯೇ ಮನುಷ್ಯರಿಗೆ ಮತ್ತು ಪ್ರಾಣಿಗಳಿಗೂ ಇವೆ ಎಂಬುದನ್ನು ಈ ಮಹಾನಗರ ತೋರಿಸಿಕೊಡುತ್ತಿತ್ತು.
ಜನ ಸಂಚಾರ ದಟ್ಟವಾಗಿದ್ದ ಫುಟ್ಪಾತಿನಲ್ಲಿಯೇ ಮಹಿಳೆಯೊಬ್ಬಳು ತನ್ನ ಹಸುವಿಗೆ ಹಿಂಡಿಯನ್ನು ತಿನ್ನಿಸುತ್ತಿದ್ದಳು. ಅದರ ಆರೈಕೆಯೂ ಅಲ್ಲಿಯೇ ನಡೆಯುತ್ತಿತ್ತು. ಅದಕ್ಕೂ ಅಲ್ಲಿ ಅವಕಾಶವಿತ್ತು.
ಮಾತುಂಗ ಒಂದು ಚಾಳನ್ನು ತೋರಿಸಲೆಂದು ನನ್ನ ಮಿತ್ರ ಕೃಷ್ಣಮೂತರ್ಿ ರಾವ್ ನನ್ನನ್ನು ಕರೆದುಕೊಂಡು ಹೋದರು. ಈ ಚಾಳಿನ ಮೇಲೆ ಗಗನವನ್ನು ಮುತ್ತಿಕ್ಕಲು ಹೊರಟ ಕಟ್ಟಡವೊಂದರ ನೆರಳು ಉದ್ದೋಉದ್ದಕ್ಕೆ ಚಾಚಿಕೊಂಡಿತ್ತು. ಬಹುಮಹಡಿಗಳ ಈ ಕಟ್ಟಡ ತಲೆ ಎತ್ತುವುದಕ್ಕಿಂತ ಮೊದಲು ಎಷ್ಟು ಝೋಪಡಪಟ್ಟಿಗಳು ಅಲ್ಲಿದ್ದವೊ. ಅವನ್ನೆಲ್ಲ ಕಿತ್ತೆಸೆದು ಅಲ್ಲಿ ಈ ಕಟ್ಟಡ ಮೇಲೆದ್ದಿದೆ ಎಂಬುದು ಯಾರಿಗೂ ತಿಳಿಯುತ್ತಿತ್ತು. ಝೋಪಡಪಟ್ಟಿಗಳನ್ನು ಕಿತ್ತೆಸೆಯುವುದು ಮುಂಬೈ ಮಹಾನಗರದಲ್ಲಿ ಸುಲಭವಲ್ಲ. ಧರಾವಿಯ ಸಂಗತಿಗಳನ್ನು ಅರಿತವರಿಗೆ ಇದೆಲ್ಲ ಸುಲಭದಲ್ಲಿ ತಿಳಿಯುತ್ತದೆ. ಹಾಗೆಯೇ ‘ಲ್ಯಾಂಡ್ ಮಾಫಿಯಾ’ದ ಕ್ರೂರ ಮುಖಗಳನ್ನು ಕಂಡವರಿಗೆ ಈ ಝೋಪಡಪಟ್ಟಿಗಳನ್ನು ರಾತೋರಾತ್ರಿ ಇಲ್ಲದಂತೆ ಮಾಡುವುದು ಹೇಗೆಂಬುದೂ ತಿಳಿದಿರುತ್ತದೆ. ಇಲ್ಲಿರುವ ಸಾವಿರಾರು ಗಗನಚುಂಬಿ ಕಟ್ಟಡಗಳ ಹಿಂದೆ ಲಕ್ಷಾಂತರ ಝೋಪಡಪಟ್ಟಿಗಳ ಕಣ್ಣೀರೂ ಇರಬಹುದು. ಆದರೆ ಅದು ಯಾವುದೂ ತಿಳಿಯದಂತೆ ಗಗನಚುಂಬಿಗಳೇ ಕಣ್ಣು ಕೋರೈಸುತ್ತಿವೆ.
ನಾವು ನೋಡಿದ ಚಾಳು ನಮ್ಮಲ್ಲಿ ಕರುಣೆ ಹುಟ್ಟಿಸುವಂತಿದ್ದರೂ, ಅಲ್ಲಿಯ ಜನ ಬಹಳ ನೆಮ್ಮದಿಯಲ್ಲಿದ್ದಂತೆ ಕಾಣಿಸುತ್ತಿತ್ತು. ಅವರ ಬದುಕಿನ ಸಂಭ್ರಮ ಎದ್ದು ಕಾಣುತ್ತಿತ್ತು. ಇದ್ದಷ್ಟು ಜಾಗದಲ್ಲಿಯೇ ಕೆಲವರು ಇಸ್ಪೇಟು ಆಡುತ್ತಿದ್ದರು. ಮಹಿಳೆಯರು ಬಟ್ಟೆ ಒಗೆಯುತ್ತಿದ್ದರು. ಗೃಹಕೃತ್ಯಗಳ ನೂರು ಬಗೆ ಅಲ್ಲ ತಲೆ ಎತ್ತಿ ಕ್ರಿಯಾಶೀಲವಾಗಿತ್ತು. ಸಾಮೂಹಿಕ ಶೌಚಾಲಯ, ಸಾಮೂಹಿಕ ಸ್ನಾನಗೃಹ. ಒಂದು ಮೀಯುವ ಮನೆಯ ಬಾಗಿಲು ಮುರಿದು ಹೋಗಿತ್ತು. ಅದಕ್ಕೊಂದು ಬಟ್ಟೆಯ ಪರದೆಯನ್ನು ಇಳಿಯಬಿಡಲಾಗಿತ್ತು. ಕೆಲವರು ತಮ್ಮ ಪುಟ್ಟ ನಿವಾಸದ ಮುಂದಿನ ಭಾಗವನ್ನು ಬಳಸಿ ಅಲಂಕಾರ ಮಾಡುತ್ತಿದ್ದರು. ದೀಪಾವಳಿಯ ಮುನ್ನಾದಿನವಾದ ಕಾರಣ, ದೀಪಾವಳಿಯ ಸಂಭ್ರಮ ಅಲ್ಲಿ ತಲೆ ಎತ್ತಲು ಹವಣಿಸುತ್ತಿತ್ತು.
ಅಲ್ಲಿಯ ಮಕ್ಕಳು ಚಾಳಿನ ಮುಂಭಾಗದ ರಸ್ತೆಗಿಳಿದು ಆಟವಾಡುತ್ತಿದ್ದರು. ಆಟವೆಂದರೆ ಕ್ರಿಕೆಟ್ ಆಗಿರಲೇಬೇಕಲ್ಲ! ಅದೂ ಸಚಿನ್ ತೆಂಡೂಲ್ಕರ್ ಅವರ ಮುಂಬೈನಲ್ಲಿ. ರಸ್ತೆಯಲ್ಲಿಯೇ ಸಿಕ್ಸರ್ ಬಾರಿಸಲು ಹವಣಿಸುವ ಮಕ್ಕಳು. ನಮ್ಮ ರಸ್ತೆಗಳಲ್ಲಿ ಮಕ್ಕಳು ಕ್ರಿಕೆಟ್ ಆಡಲು ಆರಂಭಿಸಿದರೆ ಹಿರಿಯರಿಂದ, ವಿಶೇಷವಾಗಿ ವಾಹನ ಚಾಲಕರಿಂದ ಎಂಥ ಬೈಗುಳವನ್ನು ಕೇಳಬೇಕೆಂಬುದನ್ನು ನಮ್ಮ ಮಕ್ಕಳು ಚೆನ್ನಾಗಿ ಬಲ್ಲರು. ಆದರೆ ಈ ರಸ್ತೆಯಲ್ಲಿ ಮಕ್ಕಳು ಒಂದರ್ಥದಲ್ಲಿ ನಿರಾತಂಕವಾಗಿ ಆಡುತ್ತಿದ್ದರೆನ್ನಬೇಕು. ವಾಹನಗಳ ಸಂಚಾರ ಸಾಕಷ್ಟಿತ್ತು. ಆದರೆ ಯಾರೂ ಮಕ್ಕಳನ್ನು ಬೈಯ್ಯುತ್ತಿರಲಿಲ್ಲ. ಆಟ ಮತ್ತು ವಾಹನ ಸಂಚರ ಪರಸ್ಪರ ಸಹಕಾರದ ಮೇಲೆ ನಡೆದಂತೆ ಕಾಣುತ್ತಿತ್ತು. ಇದು ಮುಂಬೈ!
ರಸ್ತೆ ದಾಟುವವರು ಅಷ್ಟೇ. ತೀರ ಭಯಭೀತರಾಗಿ ದಾಟಬೇಕಾದ ಅಗತ್ಯವಿರಲಿಲ್ಲ. ಪೊಲೀಸರ ನೆರವು ಇಲ್ಲದ ಕಡೆಗಳಲ್ಲೂ ಜನ ರಸ್ತೆ ದಾಟುತ್ತಿದ್ದರು. ವಾಹನ ಚಾಲಕರು ಅಂಥವರಿಗೆ ತೊಂದರೆಯಾಗದ ರೀತಿಯಲ್ಲಿ ವಾಹನಗಳನ್ನು ಓಡಿಸುತ್ತಿರಲಿಲ್ಲ. ಇಲ್ಲಿಯೂ ಸಹಬಾಳ್ವೆಯ ತತ್ವಗಳು ಎದ್ದುಕಾಣಿಸುತ್ತಿದ್ದವು.
ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆಯ ಫಲಿತಾಂಶ ಹೊರಬಿದ್ದ ದಿನ ನಾವು ಮುಂಬೈನಲ್ಲಿದ್ದೆವು. ಶಿವಸೇನೆಯ ಕಚೇರಿ ಬಳಿಯೇ ನಮ್ಮ ವಾಸ್ತವ್ಯ. ಶಿವಸೇನೆ ಸೋತಿತ್ತು; ಬಿಜೆಪಿ ಗೆದ್ದಿತ್ತು. ದೊಡ್ಡ ಗಲಾಟೆಯಾಗಬಹುದೆಂಬ ನಿರೀಕ್ಷೆ, ಆತಂಕದಲ್ಲಿದ್ದ ನಮಗೆ ಮುಂಬೈ ಎಂದಿನಂತೆ ನೆಮ್ಮದಿಯಲ್ಲಿದ್ದುದು ಕಂಡು ಸೋಜಿಗವಾಯಿತು. ಗೆಲುವಿನ ಆಚರಣೆ ಅಲ್ಲಲ್ಲಿ ಇದ್ದರೂ ಅದು ನಿತ್ಯದ ಬದುಕಿಗೆ, ವ್ಯವಹಾರಕ್ಕೆ ಅಡ್ಡಿಯುಂಟುಮಾಡುವಂತಿರಲಿಲ್ಲ.
ಫುಟ್ಪಾತ್ಗಳಲ್ಲಿ ತಲೆ ಎತ್ತಿದ ಹೊಟೆಲುಗಳು ಕೊಡುತ್ತಿದ್ದ ಚಹಾ, ತಿಂಡಿ ಎಂಥ ಅದ್ಭುತ. ದೋಸೆ, ಜಿಲೇಬಿಗಳಂತೂ ಕಣ್ಣುಕುಕ್ಕುತ್ತ ನಾಲಗೆಯ ರುಚಿಯನ್ನು ಕೆರಳಿಸುತ್ತಿದ್ದವು. ಪಂಚತಾರಾ ಹೋಟೆಲ್ಗಳಲ್ಲಿ ಸುಖಿಸುವಂತೆ ಜನ ಅವುಗಳನ್ನು ಸುಖಿಸುತ್ತ, ಅಲ್ಲಿನ ರುಚಿಯನ್ನು ಸವಿಯುತ್ತಿದ್ದರು.
ಮುಂಬೈ ಸಹನೆಯ ನಗರ; ಸಹಕಾರದ ನಗರ; ಸಹಬಾಳ್ವೆಯ ನಗರ. ಸಾಮಾನ್ಯರ ನೆಮ್ಮದಿಯನ್ನು ಕಲಕದ ನಗರ.
ಸಲಾಂ ಬಾಂಬೆ!






ನೀವು ಹೇಳಿರುವ ಮಾತುಗಳು ಬಹಳ ಮಟ್ಟಿಗೆ ಸರಿ ಸರ್. ನೀವು ಲೋಕಲ್ ರೈಲಿನಲ್ಲಿ ಓಡಾಡಿದ್ದರೆ ಅಲ್ಲಿ ನಿಮಗೆ ಇನ್ನೆಷ್ಟೋ ಕತೆಗಳು ಸಿಕ್ಕುತ್ತಿದ್ದವು. ಮಹಿಳೆಯರಿಗಂತೂ ಬಹಳ ಸುರಕ್ಷಿತ ನಗರ -ಕೆಲವೊಂದು ಅಪವಾದಗಳನ್ನು ಬಿಟ್ಟರೆ. ನಾವು ರಾತ್ರಿ 12 ಗಂಟೆಯಲ್ಲೂ ರೈಲಿನಲ್ಲಿ ಪ್ರಯಾಣಮಾಡಬಹುದು. ಯಾಕೆಂದರೆ ಈ ನಗರ ಯಾವಾಗಲೂ ಎಚ್ಚರವಾಗಿಯೇ ಇರುತ್ತದೆ. ಮುಂಬಯಿ ಮಲಗುವುದಿಲ್ಲ.
ಮುಂಬೈ ಜೀವಾಳವೇ ಲೋಕಲ್ ಟ್ರೈನ್ ಗಳು. ಅದರಲ್ಲಿ ತಾವು ಬಹುಶಹ ಪಯಣಿಸಿದಂತಿಲ್ಲ. ಲೋಕಲ್ ಟ್ರೈನ್, ಡಬ್ಬಾವಾಲಾ, ವಡಾ ಪಾವ್, ಹಬ್ಬ ಹರಿದಿನಗಳ ಆಚರಣೆ, ಆಟೋ, ಟ್ಯಾಕ್ಸೀ,ವಿಪರೀತ ಸೆಖೆ, ವಿಪರೀತ ಮಳೆ, ನೈಟ್ ಲೈಫ್, ಟ್ರ್ಯಾಫಿಕ್ ಜಾಮ್, ಸಮುದ್ರ ಬೀಚ್ಗಳು.. ಹೀಗೆ ಹತ್ತು ಹಲವು ವಿಶೇಷತೆಗಳು ಮುಂಬೈ ತನ್ನದಾಗಿಸಿಕೊಂಡಿದೆ. ಅದಕ್ಕೆ ಅನ್ಸತ್ತೆ..ಮುಂಬೈಗೆ ಬಂದು ಜೀವನ ಮಾಡೋವ್ರು, ಒಂದು ವರ್ಷದಲ್ಲೇ ಮುಂಬೈ ಮೇರಿ ಜಾನ್ ಅಂತ ಶರಣಾಗಿ ಬಿಡ್ತಾರೆ..ನಾನೂ ಅವರಲ್ಲೊಬ್ಬ..