ಮೀನಾಕ್ಷಿ ಬಾರು ಮತ್ತು ಮುಸಾಫಿರ್…

ಫೇಸ್ ಬುಕ್ ನಿಂದ..

ಚಲಂ ಹಾಡ್ಲಹಳ್ಳಿ

ಮುಸಾಫಿರ್ ಹು ಯಾರೋ… ನ ಘರ್ ಹೈ, ನ ಠಿಕಾನ… ಬಸ್ ಚಲ್ತೆ ಜಾನಾ ಹೈಅಂತ ಹಾಡಿಕೊಂಡು ತಿರುಗುವ ದಿನಗಳು. ಕಿಶೋರ್, ರಫಿ ಬಿಟ್ಟರೆ ಜಗತ್ತೇ ಇಲ್ಲದಂತೆ ಆವರಿಸಿದ್ದರು‌. ಪಿ.ಯು.ಸಿಯ ಆ ದಿನಗಳಲ್ಲಿ ಬೆಂಗಳೂರಿನ ಗಾಂಧಿನಗರದಲ್ಲಿ ಇಂತಹುದೇ ಹಾಡುಗಳನ್ನು ಎದೆಗಾನಿಸಿಕೊಂಡು ಮೀನಾಕ್ಷಿ, ಕಳಿಂಗ, ಚೋಳ ಬಾರುಗಳಲ್ಲಿ ಕೆಲಸ ಕೇಳಿಕೊಂಡು ಅಲೆಯುತ್ತಿದ್ದೆ.

ಜೀವದ ಗೆಳೆಯ ಕಾಂತ ಕಪಾಲಿ ಥಿಯೇಟರಿನ ಪಕ್ಕದ ರಸ್ತೆಯಲ್ಲಿದ್ದ ಮೋತಿಮಹಲ್ ಲಾಡ್ಜಿನ ಎದುರಿಗೆ ಇದ್ದ ಮೀನಾಕ್ಷಿ ಬಾರಿನಲ್ಲಿ ಕಿಚನ್ ನೋಡಿಕೊಳ್ಳುತ್ತಿದ್ದ. ಅವನಿಗೆ ನಾನು ಸಪ್ಲೈಯರ್ ಆಗುವುದು ಇಷ್ಟವಿರಲಿಲ್ಲ. ಗಾಂಧಿನಗರದಲ್ಲಿ ಇದ್ದಷ್ಟು ದಿನವೂ ನನಗೆ ಲೋಟ ಎತ್ತಲು ಬಿಡಲೂ ಇಲ್ಲ.

ಕೆಲಸ ಮುಗಿದ ಮೇಲೆ ಮೀನಾಕ್ಷಿ ಬಾರಿನ ಟೇಬಲುಗಳನ್ನು ಜೋಡಿಸಿಕೊಂಡು ಮಲಗುವಾಗ ಕಾಂತ ನನಗಾಗಿ ಅಂತ ಹಾಡು ಕೇಳಿಸುತ್ತಿದ್ದ. ಅದಕ್ಕಾಗಿಯೇ ಟೇಪ್ ರೆಕಾರ್ಡರ್ ಕೊಂಡಿದ್ದ. ಅದೇನಿದ್ದರೂ ನಮಗದು ಕಿಶೋರ್, ರಫಿ ಹಾಡುಗಳ ಕಾಲ. ಅಷ್ಟೊತ್ತಿಗಾಗಲೇ ಎದೆಯೊಡೆಯುವ ಸದ್ದಿನ ಪರಿಚಯವಾಗಿತ್ತು. ನಿಧಾನಕ್ಕೆ ನದೀಮ್-ಶ್ರವಣ್ ಅವರ ಹಾಡುಗಳು ದಾಳಿಯಿಟ್ಟವು‌.

ಸಾಜನ್, ದಿವಾನಾ, ಆಶಿಖಿ ಅದೆಷ್ಟು ಹಾಡುಗಳು… ಮೆಜೆಸ್ಟಿಕ್ಕಿನಿಂದ ಅಂಡರ್‌ಗ್ರೌಂಡಿನ ರೋಡ್ ಕ್ರಾಸ್ ಮಾಡಿ ಈ ಕಡೆ ಬಂದರೆ ಬೀದಿ ಬದಿ ವ್ಯಾಪರಿಗಳ ಸಾಮ್ರಾಜ್ಯ. ಆ ವೈಭವ ದಾಟಿ ಗುಬ್ಬಿ ವೀರಣ್ಣ ನಾಟಕ ಮಂದಿರಕ್ಕೂ ಸ್ವಲ್ಪ ಹಿಂದೆ ಚೋಳ ಬಾರ್ ಇತ್ತು. ಅದರ ಪಕ್ಕಕ್ಕೆ ಹೊಂದಿಕೊಂಡಂತೆ ಕ್ಯಾಸೆಟ್ ಅಂಗಡಿ. ಅದಾಗಲೇ ಕ್ಯಾಸೆಟ್ಟುಗಳ ಜಮಾನ ಮುಗಿಯುವ ಕಾಲ. ಸಿಡಿಗಳು ಬಂದಿದ್ದವು.

ಸೋನು ನಿಗಮ್‌ನ ದೀವಾನ ಮುಂತಾದ ಆಲ್ಬಮ್‌ಗಳು ಆವರಿಸಿದ್ದವು. ಆತನ ಆ ಹಾಡುಗಳು ಇಂದಿಗೂ ಇಷ್ಟವೇ… ಆದರೆ ಅದಕ್ಕಿಂತ ಹೆಚ್ಚಿನ ಫಾಯ್ದೆಯಾದದ್ದು ಆತನ ಇತರೆ ಪ್ರಯತ್ನಗಳಿಂದ. ಸೋನು ನಿಗಮ್ ರಫಿ ಅವರ ಹಾಡುಗಳನ್ನು ಹಾಡಿದ ಸಿ ಡಿ ಸಿಕ್ಕವು. ಅದರ ಜತೆಗೆ ಅಭಿಜಿತ್ ಹಾಡಿದ ಕಿಶೋರ್ ಹಾಡುಗಳು. ಸೋನು ನಿಗಮ್ ರಫಿಗೆ ಹೊಂದಿದಂತೆ, ಅಭಿಜಿತ್ ಕಿಶೋರ್ ಅವರ ದನಿಗೆ ಸನಿಹವಾಗಿದ್ದ‌. ಅಲ್ಲಿಂದ ಶುರುವಾದ ಕಿಶೋರ್, ರಫಿ ಸಾಂಗತ್ಯ ಇಂದಿಗೂ ಬಿಟ್ಟಿಲ್ಲ. ಅಲ್ಲಿ ಕೊಂಡ ‘ಕಿಶೋರ್ ಕೆ ದರ್ದ್ ಭರೆ ನಗ್ಮೆ’ ಸಿಡಿಗಳನ್ನು ಪದೇ ಪದೇ ಕೊಳ್ಳುತ್ತಿದ್ದೆ. ಅವವೇ ಹಾಡುಗಳಿದ್ದರೂ ಕೂಡ ಅವವೇ ಸಿಡಿ ಕೊಳ್ಳುವುದು ಮಾತ್ರ ನಿಂತಿರಲಿಲ್ಲ. ಅದೊಂತರ ಸಂಭ್ರಮ.

ಇಂಡಿಯನ್ ಐಡಲ್‌ನಲ್ಲಿ ಪವನ್‌ದೀಪ್ ಎಂಬ ಉತ್ತರಾಖಂಡದ ಯುವಕ ಮುಸಾಫಿರ್ ಹು ಯಾರೋ ಎಂದು ಹಾಡುತ್ತಿದ್ದರೆ ನನ್ನ ಮನಸ್ಸು ಗಾಂಧಿನಗರದ ಕಳಿಂಗ, ಚೋಳ, ಮೀನಾಕ್ಷಿ ಬಾರುಗಳು ನಡುನಡುವೆ ಆರ್‌.ಕೆ ಲ್ಯಾಬ್ ಮತ್ತು ಬಟ್ಟೆ ಅಂಗಡಿಗಳೇ ತುಂಬಿದ ಬೀದಿಗಳು ನೆನಪಾದವು. ಜೀತತಾ ಜಿಸ್ ಜೆ ಲಿಯೇ… ಜಿಸ್ ಕೆ ಲಿಯೇ ಮರ್ ಥಾ ತ. ಏಕ್ ಐಸೀ ಲಡ್ಕೀ ಥಿ ಜಿಸೇ ಮೆ ಪ್ಯಾರ್ ಕರ್ ಥಾ ತಎಂದು ಹಾಡಿದ ಕುಮಾರ್ ಸಾನು ಏರಿದ ಎತ್ತರ ಹಾಗೇ ಇಳಿದು ಹೋದ ದಾರಿಗಳೆಲ್ಲವೂ ಮೆಜೆಸ್ಟಿಕ್ಕಿನ ಪಕ್ಕದ ಗಾಂಧಿನಗರವನ್ನು ಒಂದು ರೀತಿಯಲ್ಲಿ ಪ್ರತಿನಿಧಿಸುತ್ತಿದ್ದವು‌.

ಹೊಳೆ ತಿಮ್ಮನಹಳ್ಳಿ ಕಾಂತ ಅಂದು ಲೋಟ ತೊಳೆಯದಂತೆ ಹಠಕ್ಕೆ ಬೀಳದಿದ್ದರೆ, ನೀ ಮಾಡಬೇಕಾದ್ದು ಬೇರೆಯದೇ ಇದೆ ಎಂದು ಹೇಳದೇ ಇದ್ದರೆ, ಎದೆಯೊಡೆದ ಸದ್ದಿಗೆ ಕಿಶೋರ್, ಕುಮಾರ್‌ಸಾನು, ರಫಿ ಸಮಾಧಾನ ಮಾಡಿರದಿದ್ದರೆ ಬದುಕು ಮತ್ತೆಲ್ಲಿಗೆ ಕರೆದೊಯ್ಯುತ್ತಿತ್ತೊ…? ಈಗ ಅದೆಲ್ಲಿಗೋ ಕರೆತಂದು ನಿಲ್ಲಿಸಿದೆಯೋ ಗೊತ್ತಿಲ್ಲ… ಮುಸಾಫಿರ್ ಹು ಯಾರೋ… ನ ಘರ್ ಹೈ ನ ಠಿಕಾನ ಎಂಬ ಸಾಲುಗಳ ಮೇಲೆ ನಡೆಯುವುದು ಮಾತ್ರ ಇಂದಿಗೂ ಹಿತವೆನಿಸುತ್ತದೆ.

‍ಲೇಖಕರು Avadhi

April 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: