ದಿಲಾವರ್ ರಾಮದುರ್ಗ
ಏನ್ ಮಾಡಬಾರದ ಘನಕಾರ್ಯ ಅಂದ್ಕೊಂಡ್ರೀ ಅಲ್ವಾ..? ಏನ್ಮಾಡ್ಲಿ ಮೀನು ಕಂಡ್ರೆ ನನ್ನ ಕಾಲು ಮುಂದಕ್ಕೇ ಹೋಗಲ್ಲ ಅಂತವೆ. ಸಮುದ್ರ ತೀರದಗುಂಟ ಓಡಾಡಿಕೊಂಡಿದ್ದೆ, ತೀರಕ್ಕೆ ಸಮೀಪದಲ್ಲೇ ಮೀನಂಗಡಿ! ಪಾಂಪ್ರೆಟ್, ಕಾಣೆ, ಅಂಜಲ್… ಹೀಗೊಂದಿಷ್ಟು ಮೀನಾಕ್ಷಿಯರು ಬುಟ್ಟಿಯೊಳಗಿಂದಲೇ ಕಣ್ಣು ಹೊಡೆದ್ರು. ಹಾಯ್ ಹಾಯ್ ದಿಲ್ ಕೊಟ್ಟು ಬಿಟ್ಟೆ. ಬೀಚ್ ತುಂಬ ಬಿಕನಿ ತೊಟ್ಟ ಸುಂದರಿಯರ ಕಣ್ಣಿಗೆ ಸೋಲದ ದಿಲ್ ಮೀನಾಕ್ಷಿಯರಿಗೆ ಸೋತು ಸುಣ್ಣವಾಗಿಬಿಡ್ತು! ಎರಡು ರೌಂಡ್ ಮೀನಾಕ್ಷಿಯರ ಮೋಹದಲ್ಲಿ ಮುಳುಗಿಹೋದೆ. ವಾವ್ ಫಿಶ್…
* * *
ಬುಟ್ಟಿಯೊಳಗಿನ ಮೀನು ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಿದ್ದ ಅಜ್ಜಿಯನ್ನು ಕೇಳಿದೆ. ಎಷ್ಟು ದುಡಿತಿಯಾ ದಿನಕ್ಕೆ ಅಂತ. ನಾಚಿಕೆಯಿಂದಲೇ ಹೇಳಿದ್ದು ಇಷ್ಟು.. “ಸಂಪಾದನೆ ಎಲ್ಲಿಂದ ಬಂತು ದೊರೆ, ಒಂದು ಮೀನು ಸ್ವಚ್ಛ ಮಾಡಿದ್ರೆ ಒಂದು ರೂಪಾಯಿ. ದಿನಕ್ಕೆ ನೂರಾರು ಮೀನು ಸ್ವಚ್ಛ ಮಾಡ್ತಿನಿ. ಮಧ್ಯಾನ್ಹ ಮೀನ್ಸಾರು ಊಟ, ಸಂಜೆನೂ ಊಟ, ಬೇಕಿದ್ದರೆ ಜತೆಗೆ ಒಂದು ಫ್ರೈ. ಸಂಜೆ ಮನೆಗೆ ಹೋಗುವಾಗ ನೂರೋ, ನೂರಿಪ್ಪತ್ತೊ ತಗೊಂಡು ಹೋಯ್ತಿನಿ”…
* * *
ಅಂಗಡಿಯಲ್ಲಿ ಮೀನು ಹುರಿ/ಕರಿಯುತ್ತಿದ್ದ ಬಾಬುನನ್ನು ಕೆಣಕಿದೆ ..
ದಿನಕ್ಕೆ ಅದೆಷ್ಟು ಮೀನಾಕ್ಷಿಯರ ಮೈಸುಡ್ತಿಯಾ ಮಾರಾಯಾ ಅಂದೆ.
‘ನೂರಾರು ಸಾರ್’ ಅಂದ
ಎಷ್ಟು ಬಿಸಿನೆಸ್ಸು?
‘ಎಂಟರಿಂದ ಹತ್ತು ಸಾವಿರ’ ಅಂದ.
ಓಹ್ ದಿನಾ ಮನೆಗೆ ಹೋಗೋದು ಬರೋದು ಕಾರಲ್ಲೇ ಇರಬೇಕು. ಅಂದೆ.
‘ಸಾರ್ ನಾನಿಲ್ಲಿ ಬೆಳಿಗ್ಗೆ 11ಕ್ಕೆ ಬರ್ತೀನಿ. ರಾತ್ರಿ ಒಂದು ಗಂಟೆಗೆ ಮನೆ ಸೇರ್ತಿನಿ. ಅದೂ ಸೈಕಲ್ ಮೇಲೆ. ನನಗೆ ದಿನಕ್ಕೆ 300 ರೂ ಸಂಬಳ. ಎರಡು ಹೊತ್ತು ಊಟ. ಜತೆಗೊಂದು ಫಿಶ್ ಫ್ರೈ. ಅಂಗಡಿ ನನ್ನದಲ್ಲ ದೊರೆ. ಇದರ ಮಾಲೀಕರೇ ಬೇರೆ. ಅವ್ರು ಓಡಾಡೋದು ದೊಡ್ಡ ಕಾರಲ್ಲೇ’ ಅಂದ.
* * *
(ನನ್ನ ಕನ್ನಡ ಮತ್ತು ಅವರ ಅಪ್ಪಟ ದೇಸಿ ತಮಿಳು ಭಾಷೆಯ ನಡುವಿನ ಸಂವಹನ ಕ್ರಿಯೆಯೇ ಒಂದು ಅದ್ಭುತ ಎನ್ನುವಂತಿತ್ತು.)









ದಿಲಾವರ್,ಸರ್
ಮೀನಾಕ್ಷಿಯ ಮೋಹದಲ್ಲಿ. ಹೊಸ ಅಡುಗೆ ರುಚಿ ಸವಿತಾ, ತಮಿಳು ಭಾಷೆಯೊಂದಿಗಿನ ಹೊಸ ಅನುಭವದ ಜತೆ ಓಂದು ಕತೆ.