ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮಿಸ್ ಯೂ ಪಪ್ಪಾ’ – ವೈಶಾಲಿ ಹೆಗಡೆ

-ವೈಶಾಲಿ ಹೆಗಡೆ,

ಬಾಸ್ಟನ್ (ಯು. ಎಸ್. ಎ.)

ಸಾವಿರಾರು ಮೈಲುಗಳ ದೂರದಲ್ಲಿ ನನ್ನದೊಂದು ಗೂಡನ್ನು ನಾನೇ ಕಟ್ಟುವ ಅಸ್ತಿತ್ವದಲ್ಲಿ ಬೆಳೆಯುತ್ತಿರುವ ಹೊತ್ತಲ್ಲಿ, ಅಮ್ಮ ನಿತ್ಯದ ಜಂಜಾಟಗಳಲ್ಲಿ ನೆನಪಾಗುವ ದಿನಂಪ್ರತಿ ಆಧಾರಸ್ತಂಭ. ಎಲ್ಲೋ ತೆರೆಮರೆಯಲ್ಲಿ ಸದಾ ದಾರಿತೋರುವ, ಗದರುವ ಧ್ವನಿ. ಆದರೆ ಪಪ್ಪ, ಹೊಸ ಬಿಸಿಲು ಮೂಡಿ ಎಳೆಚಿಗುರು ಹಸಿರಾಗಿ ಹೊಸ ಚೈತನ್ಯ ಮೂಡಿದಾಗೆಲ್ಲ ಸುಸ್ಪಷ್ಟ ಕಣ್ಣೆದುರು ಮೂಡುವ ಹೆಸರು. ಪಪ್ಪ ಅಮ್ಮನ ಮೇಲೆ ಅಪಾರ ಪ್ರೀತಿ ಗೌರವಗಳಿದ್ದರೂ ನನಗೆ ಅಮ್ಮನ ಮೇಲೆ ಗೌರವ ಜಾಸ್ತಿ, ಅಪ್ಪನ ಮೇಲೆ ಪ್ರೀತಿ ಜಾಸ್ತಿ.

ಪಪ್ಪ ಮೊದಲಿಂದಲೂ ನಮ್ಮ ಊಟ, ಪಾಠಗಳಿಗೆಲ್ಲ ತಲೆಹಾಕಿದವನಲ್ಲ, ನಾವು ಎಷ್ಟನೆ ಇಯತ್ತೆ ಎಂಬುದೇ ಗೊತ್ತಿರುತ್ತಿರಲಿಲ್ಲ ಅವನಿಗೆ. ಆಟಕ್ಕಷ್ಟೇ ಜೊತೆಯಾದವ. ದಿನ ಸಂಜೆ ಬೈಕ್ ಮೇಲೆ ಒಂದು ರೌಂಡ್ ಹೊಡಿಸಿದವ. ಕೋಲಾ, ಐಸ್ಕ್ರೇಮ್ ಕೊಡಿಸಿದವ. ಕೇರಂ ಕಲಿಸಿದವ. ಬ್ಯಾಡ್ಮಿಂಟನ್ ರೆಕೆಟ್ ಹಿಡಿಸಿದವ, ಸಿಟ್ಟಲ್ಲಿ ಅದನ್ನು ಮುರಿಯುವುದನ್ನೂ ತೋರಿಸಿಕೊಟ್ಟವ. ಟೆನಿಸ್ ನಿಯಮಗಳನ್ನು ಕಲಿಸಿದವ. ಕ್ರಿಕೆಟ್ ಬೆಟ್ ಕಟ್ಟಿ ಕೆಟ್ಟ ಜಗಳಾಡಿದವ. ಕಂಡ ಕಂಡ ಗುಡ್ಡ ಹತ್ತುವ ಹುಂಬ ಧೈರ್ಯ ತುಂಬಿದವ. ಯಾವ್ಯಾವುದೋ ಜಲಪಾತದ ಪ್ರಪಾತಕ್ಕೆ ಇಳಿಸಿ ಸುತ್ತಿಸಿದವ. ಕನ್ನಡ ಪುಸ್ತಕಗಳ ಹೊಸಲೋಕವನ್ನು ತೆರೆದಿತ್ತವ. ಅಮ್ಮ ನಮ್ಮ ಜೀವನ ರೂಪಿಸುವ ಆತ್ಮವಿಶ್ವಾಸದ ಜವಾಬ್ದಾರಿಗಳ ಹೊಣೆಯ ಕಲಿಸುವುದರೊಳಗೆ ಹೈರಾಣಾಗುವ ಹೊತ್ತಲ್ಲಿ ನನ್ನ ಪಪ್ಪ ಜೀವನೋತ್ಸಾಹ ಕಲಿಸಿದವ. ಅದಕ್ಕೆ ಏನೋ ಹೊಸ ಬಿಸಿಲಿನಲ್ಲಿ ದಾರಿಗುಂಟ ಓಡುವಾಗೆಲ್ಲ ಮಿಸ್ ಯೂ ಪಪ್ಪಾ.
ಪಪ್ಪ ಮನಸ್ಸಿಂದ ಮುಗ್ಧ. ಚಾಣಾಕ್ಷಮತಿಯಲ್ಲ. ಸನ್ನೆ ಸೂಕ್ಷ್ಗಳೆಲ್ಲ ತಿಳಿಯದವ. ವಿಚಿತ್ರ ಹುಂಬ ಭೋಳೇಶಂಕರ. ಸುತ್ತಲಿನ ಹಳ್ಳಿಗಳ ಶಾಲೆಮಕ್ಕಳಿಗೆ ಅಮೆರಿಕೆಯ ಚಾಕಲೇಟು ಹಂಚುವವ. ತನ್ನ ನಾಯಿಯ ಕಣ್ಣಿಗೆ ಬಿಸಿಲಾಗುತ್ತದೆಂದು ತನ್ನದಕಿಂತ ದುಬಾರಿಯ ಬಿಸಿಲುಗನ್ನಡಕ ತೊಡಿಸಿ ವಾಕಿಂಗ ಕರೆದೊಯ್ಯುವ. ಅಂಗವಿಕಲ ರೋಗಿಗಳಿಂದ ಹಣ ಪಡೆಯದೆಯೇ ಔಷಧ ನೀಡುವ. ಕೊಟ್ಟಿಗೆಯ ಚಂದ್ರಿ ಕರುವಿಗೆ ಬಾದಂ ಗೇರುಬೀಜಗಳನ್ನೆಲ್ಲ ಅಡಗಿಸಿ ತಿನ್ನಿಸುವ. ಆದರೆ ಚಹಾ ಕೂಡ ಮಾಡಲು ಬಾರದವ. ಮಧ್ಯರಾತ್ರಿ ಬೇಕಾದರೂ ಅಮ್ಮನನ್ನೆಬ್ಬಿಸಿ ನಾಳೆ ಬೆಳಿಗ್ಗೆ ಆಸರಿಗೆ ಪೂರಿ ಮಾಡು ಎನ್ನುವವ. ಇವನ ಈ ಅರ್ಥವಾಗದ ಅಂತಃಕರಣಕ್ಕೆ ಪ್ರಶ್ನೆ ಹಾಕುವುದನ್ನು ನಾವೆಲ್ಲಾ ಎಂದೋ ಬಿಟ್ಟುಬಿಟ್ಟಿದ್ದೇವೆ. ಅದರ ಭಾಗವಾಗುವ ಅನುಭವವನ್ನಷ್ಟೇ ನಮ್ಮದಾಗಿಸಿಕೊಂಡಿದ್ದೇವೆ. ಹಳೆಯ ಪೆನ್ನುಗಳನ್ನು ಕಂಡಾಗ ಪಪ್ಪನಿಗೆ ಕೊಟ್ಟರೆ ಬಡಮಕ್ಕಳಿಗೆ ಕೊಡ್ತಾನೆ ಅಂತ ಎತ್ತಿಡುವಾಗೆಲ್ಲ ಮಿಸ್ ಯೂ ಪಪ್ಪಾ.

ಅಮ್ಮ ತನ್ನ ಅವಿರತ ಚಟುವಟಿಕೆಯ ನಡುವೆ ಪುರುಸೋತ್ತಿದ್ದಷ್ಟು ಹೊತ್ತು ಊರ ಉಸಾಬರಿ ಮಾಡಿದರೆ ಇವ ತನ್ನ ಪಾಡಿಗೆ ತಾನು ಏನೇನೋ ರಿಪೇರಿ ಮಾಡುವ. ನಟ್ಟು, ಬೋಲ್ಟು, ಪಾನ, ಸ್ಕ್ರೂ ಡ್ರೈವರು ಎಂದು ಹತ್ತೆಂಟು ಹರಡಿಕೊಂಡು ಹೊಸದೇನನ್ನೋ ಕಂಡು ಹಿಡಿಯುವ. “ಮರಿ ನಾನು ಡಾಕ್ತರಾಗ್ಬಾರ್ದಿತ್ತೇನೋ, ಇಂಜಿನಿಯರಾಗಿದ್ರೆ ಒಳ್ಳೇದಿತ್ತು ನೋಡು”, ಎನ್ನುತ್ತಾ ಎನ್ನುತ್ತಾ, ನನ್ನ ಇಂಜಿನಿಯಾರಿಗಿಸಿದವ.ಮನೆಯಲ್ಲಿ ಬ್ಯಾಟರಿಚಾಲಿತ ಸ್ಕ್ರೂ ಡ್ರೈವರ್, ಚದ್ಮವೇಶ ಸ್ಪರ್ಧೆಗೆ ಎಲೆಕ್ಟ್ರಿಕ್ ವಿಷ್ಣು ಚಕ್ರ ನಿರ್ಮಿಸಿದ,ಆಸ್ಪತ್ರೆಯಲ್ಲಿನ ಗ್ಲೂಕೋಸ್/ರಕ್ತ ನೀಡುವ ಹಳೆಯ ನಾಳಗಳನ್ನೆಲ್ಲ ಒಟ್ಟು ಸೇರಿಸಿ ತೆಂಗಿನ ಮರಗಳಿಗೆ ಡ್ರಿಪ್ ಇರ್ಗೆಶನ್ ಸಿಸ್ಟಂ ತಾನೆ ತಯಾರಿಸಿ ಅಳವಡಿಸಿದ,ಅವನ ಪ್ರಧಾನ ಅಸಿಸ್ಟಂಟ್ ನಾನೀಗ ಸಲೀಸಾಗಿ ಅಡಿಗೆಮನೆ ಸಿಂಕ್, ಗ್ಯಾರೇಜಿನ ಬಾಗಿಲು, ಬಾತ್ರೂಮಿನ ಶವರ್ ರಿಪೇರಿ ಮಾಡುವಾಗೆಲ್ಲ ಮಿಸ್ ಯೂ ಪಪ್ಪಾ.
 
ಚಿಕ್ಕವರಿದ್ದಾಗ ಪಪ್ಪನೆದುರಿಗೆ ಅಳಲು ಕೂಡ ಹೆದರುತ್ತಿದ್ದ ನನಗೆ ಪಪ್ಪ ಸ್ನೇಹಿತನಾಗುತ್ತ ಹೋಗಿದ್ದು ಮಾತ್ರ ಹೇಗೋ ಏನೋ.
ಪಪ್ಪನಿಗೆ ಮನೆಯಲ್ಲಿ ಸದಾ ಹಣ್ಣುಗಳಿರಬೇಕು. ಅವನ್ನು ತಾನೇ ಹೆಚ್ಚಿ ಎಲ್ಲರಿಗು ಹಂಚಬೇಕು. ಮನೆಯಲ್ಲಿ ಸದಾ ದೀಪಾವಳಿಯಂತೆ ಎಲ್ಲ ದೀಪಗಳೂ ನಿಗಿನಿಗಿ ಉರಿಯಬೇಕು. ಯಾವುದೇ ಲೈಟ ಆರಿಸಿ ಅಭ್ಯಾಸವಿಲ್ಲ. ಬಾಗಿಲು ಹಾಕಿ ರೂಡಿಯಿಲ್ಲ.ಕರೆಂಟು ಬಿಲ್ ಜಾಸ್ತಿ ಆಗಿದೆ, ಟಿವಿ ಕಡಿಮೆ ನೋಡಿ ಎಂದು ನಮಗೆ ಬಯ್ಯಬೇಕು. ಮಾರ್ಕೆಟ್ಟಿಗೆ ಹೊಸದೇನು ಬಂದರೆ ಅದು ತಕ್ಷಣ ಮನೆಗೆ ಬಂದುಬಿಡಬೇಕು, ಅದು ಅವನಿಗೆ ಬೇಕಿರಲಿ ಇಲ್ಲದಿರಲಿ. ಆದರೆ ಪ್ರತಿಯೊಂದರ ಲೆಕ್ಕಾಚಾರ ಬರೆದಿಡಬೇಕು. ಯಾವ ಕಾಲದಲ್ಲಿ ಯಾವುದರ ರೇಟು ಎಷ್ಟಿತ್ತೆಂದು ಅಂದಾಜು ಲೆಕ್ಕ ಬಾಯಲ್ಲಿರಬೇಕು. ಅಮ್ಮ ಹೇಳಿದ ತರಕಾರಿಪಟ್ಟಿಯಲ್ಲಿದ್ದ ಒಂದೇ ಒಂದು ಒಂದು ವಸ್ತು ಮನೆಗೆ ಬರದಿದ್ದರೂ ಎರಡು ಬುಟ್ಟಿ ಮಾವಿನಹಣ್ಣು ತಂದುಬಿಡ್ಬೇಕು. ಅಮ್ಮನ ಹುಟ್ಟಿದಹಬ್ಬವನ್ನಂತು ನಮಗೆ ಆಚರಿಸಿಯೇ ನೆನಪಿಲ್ಲ, ಅದರ ದಿನಾಂಕ ಪಪ್ಪನಿಗೆ ನೆನಪಿರುವುದೇ ಇಲ್ಲ. ಆದರೆ ಅಕ್ಬರ್ ಪಟ್ಟಕ್ಕೇರಿರದ ವರ್ಷ, ಶಿವಾಜಿ ಸತ್ತ ದಿವಸ, ಎರಡನೇ ಮಹಾಯುದ್ಧದಲ್ಲಿ ಜಪಾನ್ ದಾಳಿ ಮಾಡಿದ ಸಮಯ ಎಲ್ಲದರ ಕರಾರುವಾಕ್ಕು ದಿನಾಂಕ ನಮಗೆಲ್ಲ ಗೊತ್ತು, ಅವನು ಪ್ರತಿ ಊಟದ ಸಮಯದಲ್ಲೂ ಕ್ವಿಜ್ ಕೇಳಿ ಕೇಳಿ, ಏನೇನೋ ದಿನಗಳ ಇತಿಹಾಸವೆಲ್ಲ ನೆನಪಿದೆ. ಇಂಥ ವಿಚಿತ್ರ ಪಪ್ಪ! ಕಾಲು ನೋಯುತ್ತೆ ಎಂದಾಗ ನನ್ನ ಹಾಯ್ ಹೀಲ್ಡ್ ಹಾಕಿಕೊಂಡು, ತನ್ನ ಶೂ ಬಿಚ್ಚಿ ಕೊಟ್ಟವ. ಅಮ್ಮ ಕೇಳಿದರೆ ಖಂಡಿತ ಕೊಡುತ್ತಿರಲಿಲ್ಲ, ಈ ಮಳ್ಳು ಚಪ್ಪಲಿ ಹಾಕಿಕೊಂಡು ಬಾ ಅಂದವರ್ಯಾರು, ಅನುಭವಿಸು ಈಗ ಎನ್ನುತ್ತಿದ್ದ, ಗೊತ್ತು. ಅಮ್ಮನ ಹೊದಿಕೆ ಎಳೆದು ತಾನು ಹೊದೆದುಕೊಳ್ಳುವ ಆದರೆ ಮಕ್ಕಳ ಹೊದಿಕೆ ಸರಿಪಡಿಸಿ ಹೋಗುವ.ಎಲ್ಲ ಗಂಡಸರು ಅಪ್ಪಂದಿರಾಗಿ ಮಾತ್ರ ಯಾಕೆ ಮುದ್ದು ಮುದ್ದು? ಆದರೂ ಸೇಬುಹಣ್ಣು ಹೆಚ್ಚುವಾಗೆಲ್ಲ ಮಿಸ್ ಯೂ ಪಪ್ಪಾ.
 
ಪಪ್ಪ ಕಳೆದ ಬೇಸಿಗೆಯಲ್ಲಿ ಇಲ್ಲಿ ಬಂದಾಗ ಕಡಿದಿಟ್ಟು ಹೋದ ಕಳೆಗಿಡಗಳೆಲ್ಲ, ಅವನು ಜಾಗ ಖಾಲಿ ಮಾಡಿದ್ದನ್ನು ಪತ್ತೆ ಹಚ್ಚಿದವರಂತೆ ಮತ್ತೆ ತಲೆ ಎತ್ತುತ್ತಿವೆ. ಸೊಪ್ಪು ಕಡಿವ ಕತ್ತಿ, ಗುದ್ದಲಿ ಪಿಕಾಸಿಗಳಿಗೆಲ್ಲ ಜೋರು ನಿದ್ದೆ. ತರಕಾರಿ ಪಾತಿಯೊಳಗೆ ನುಸುಳುವ ಮೊಲದ ಮರಿಗೂ ನನ್ನ ಕಂಡರೆ ನಿರ್ಭೀತ ಅಸಡ್ಡೆ. ಮೂಲೆ ಕಲ್ಲಿನ ಮೇಲೆ ಸಂಜೆ ಕುಳಿತ ಹಕ್ಕಿಗಳು ಕೂಡ ನೀ ಹಾಕುತ್ತಿದ್ದ ಹಳೆ ರೊಟ್ಟಿ, ದೋಸೆ, ಅವಲಕ್ಕಿಗೆ ಕಾದು ಹಾಗೇ ಹಾರಿ ಹೋಗುತ್ತವೆ..ಪುರ್ರ್ರ್.. ನಾ ಬರುವಷ್ಟರಲ್ಲೇ. ನೀ ಅರೆಬರೆ ರಿಪೇರಿ ಮಾಡಿಟ್ಟು ಹೋಗಿರುವ ಕಪಾಟಿನ ಬಾಗಿಲು, ಇನ್ನೂ ಹಾಗೆ ಇದೆ. ಸರಿಪಡಿಸಲು ನನಗೂ ಬೇಜಾರು, ಅದು ಈಗ ಸರಿಸಲು ಬರದೆ ಸಿಕ್ಕಿಕೊಳ್ಳುವಾಗೆಲ್ಲ ನಿನ್ನ ಬೈದುಕೊಂಡರೂ ಮಿಸ್ ಯೂ ಪಪ್ಪಾ.
 
 

‍ಲೇಖಕರು G

19 June, 2014

9 Comments

  1. Aishwaryarani

    super write up akka. but probably nee sannakkirakire pappa chaha madtidnille but i would proudly say pappa first taught me to prepare tea 🙂

  2. Radhika

    Loved it Vaishali!

  3. Sarala

    tumba aptavagide nimma tandeya chitra vaishali

  4. Uma

    Lovely! Nimmappa Ammana chitra thumba sogasagide!!

  5. Palahalli Vishwanath

    very nice. one is to have a nice relationship and the next is to be able to express it

  6. Anitha

    ತುಂಬಾ ಚೆನ್ನಾಗಿದೆ.

  7. Vishwesh Bhat

    Hegde doctor chitrana cholo banju Vaishali akka 🙂 As cool as ever. I enjoyed reading it.

  8. DR SHWETA NAYAK

    Vaishalakka. ….chennagide

  9. Bhaskar Hegde

    Really good

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading