ಪ್ರವರ ಕೊಟ್ಟೂರು
ಎರಡು ಮೂರು ತಾಸಿನಿಂದ ಅಲರಾಮ್ ಬಡಿದುಕೊಳ್ಳುತ್ತಿತ್ತಾದರೂ ಜಪ್ಪಯ್ಯ ಎಂದರು ಏಳುತ್ತಿರಲಿಲ್ಲ, ಅಲರಾಮ್ ಟೋನ್ ಗೆ ಹಾರ್ಡ್ ರಾಕ್ ನ ಹಾಡು ಇಟ್ಟಿದ್ದರೂ ಮುಂಜಾನೆ ನಮ್ಮ ಗಡದ್ದು ನಿದ್ದೆಗೆ ಲಾಲಿಯಂತೆ ಅನ್ನಿಸುತಿತ್ತು, ಆ ಅಲರಾಮಿನ ಸದ್ದಿಗೆ ಅಕ್ಕ ಪಕ್ಕದ ರೂಮಿನವರೂ ಸಹ ಕಿವಿ ಮುಚ್ಚಿಕೊಂಡು ಎದ್ದುಬಿಡುತ್ತಿದ್ದರು. ಬೆಳಗ್ಗೆ ಎಂಟಕ್ಕೇ ಕಾಲೇಜು ಈಗಾಗಲೇ ಏಳು ಮುಕ್ಕಾಲಾಗಿದೆ ಇನ್ನೈದು ನಿಮಿಷ ಇನ್ನೈದು ನಿಮಿಷವೆಂದು ಸ್ನೂಜ್ ಮಾಡಿ ಮಾಡಿ ಆಗಲೇ ಒಂದು ಗಂಟೆಯಾಯ್ತು ಏಳಲು ಮನಸ್ಸಾಗುತ್ತಿಲ್ಲ,…
ಹಾಸ್ಟೆಲ್ ನಲ್ಲಿ ಬೆಳಗ್ಗೆ ತುಂಬಾ ತಡವಾಗಿ ಎದ್ದಲ್ಲಿ ತಿಂಡಿ ಸಿಗುತ್ತಿರಲಿಲ್ಲ, ಅಡಿಗೆ ಮನೆಗೆ ತಟ್ಟೆ ಹಿಡಿದುಕೊಂಡು ಹೋಗಿ ಜಗಳವಾಡಿಯಾದರೂ ಹಾಕಿಸಿಕೊಂಡು ಬರುತ್ತಿದ್ದೆವು ಏನೋ ಸಾಧಿಸಿದೆವೆಂದು ಬೀಗುತ್ತಿದ್ದೆವು. ಕಾಲೇಜಿಗೆ ಹೋಗಿ ಬಂದು ಬಟ್ಟೆಗಳನ್ನು ಅಲ್ಲಲ್ಲೇ ಬಿಸಾಕಿ ತಿಪ್ಪೆಯಂತೆ ಮಾಡಿಕೊಂಡರೆ ಸಮಾಧಾನ, ಇಲ್ಲಾ ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು, ಎರಡು ದಿನಕ್ಕೊಮ್ಮೆ ಕ್ಲೀನು ಮಾಡಲೆಂದು ಬರುತ್ತಿದ್ದ ಕೆಲಸದವರು ನಮ್ಮ ರೂಮುಗಳ ನೋಡಿ ವಾಂತಿ ಮಾಡಲೆಂದು ಓಡಿದ್ದೂ ಇದೆ.
ಇಷ್ಟೊಂದು ಬಟ್ಟೆಗಳ ಹರಡಿಕೊಂಡಿದ್ದರೆ ನಾವು ಕ್ಲೀನು ಮಾಡುವುದಿಲ್ಲವೆಂದು ವಾರ್ಡನ್ ನನ್ನೂ ಕರೆದುಕೊಂಡು ಬಂದು ಬಯ್ಯಿಸುತ್ತಿದ್ದರು, ಮುಂದಿನ ಸಾರಿ ಇದೆ ಬನ್ನಿ ನಿಮ್ಗೆ ಎಂದುಕೊಳ್ಳುತ್ತಿದ್ದೆವು ಮನಸ್ಸಿನಲ್ಲಿ .
ಬಾಗಿಲು ಹಾಕಿಕೊಂಡು ಹಾಡುಗಳನ್ನ ಪ್ಲೇ ಮಾಡಿದರೆ ಕಿಟಕಿ ಬಾಗಿಲುಗಳೆಲ್ಲಾ ನಡುಗುತ್ತಿದ್ದವು, ಬರಿ ಸ್ಪೀಕರ್ರುಗಳು ಹಾಡಿದರೆ ಓಕೆ, ನಮ್ಮ ದ್ವನಿಗಳೂ ಸೇರಿ ಕೇಳಲಾಗದಷ್ಟು ಕರ್ಕಶವಾಗುತಿತ್ತು. ಅಕ್ಕಪಕ್ಕದ ರೂಮಿನವರೆಲ್ಲಾ ಆಫ್ ಮಾಡಿ ಎಂದು ಬಾಗಿಲು ಬಡಿದರೆ ಇನ್ನೂ ಜೋರು ಮಾಡಿ ನಮ್ಮದೇ ಕಿತ್ತು ಹೋದ ಸ್ಟೈಲಿನಲ್ಲಿ ಕುಣಿಯುವುದು, ಇದೇ ವಿಷಯವಾಗಿ ಜಗಳವಾಡಿದ್ದೂ ಇದೆ ಕೊನೆಗೆ ವಾರ್ಡನ್ನು ಸಂಧಾನಕ್ಕೆ ಬರುವುದು, ಮತ್ತೆ ಕೈ ಕೈ ಮಿಲಾಯಿಸಿಕೊಂಡು ಓಡಾಡುತ್ತಿದ್ದೆವು.
ರಾತ್ರಿ ಊಟಕ್ಕೆ ತಟ್ಟೆಯನ್ನು ತಮಟೆಯಂತೆ ಬಾರಿಸೊಕೊಂಡು ಬರುತ್ತಿದ್ದರೆ ಆಹಾ!, ಅದೇ ಮಾಮೂಲು ಊಟ, ಟೇಬಲ್ಲಿನ ಸುತ್ತ ಆಗಲೇ ಎಲ್ಲಾ ಹೈಕಳು ಹಾಜರ್, ತಟ್ಟೆಗೆ ಹಾಕಿಸಿಕೊಂಡು ಬರುತ್ತಿದ್ದ ಹಪ್ಪಳವನ್ನ ಯಾರಾದರೊಬ್ಬರು ಎಗರಿಸಿಬಿಡುತ್ತಿದ್ದರು, ನಾವು ಇನ್ನೊಬ್ಬರ ತಟ್ಟೆಯಲ್ಲಿ ಕೈ ಚಳಕ ತೋರಿಸುತ್ತಿದ್ದೆವು. ಎರಡು ತುತ್ತು ಸೇರಿಸುತ್ತಲೇ ಏನಾದರೊಂದು ಚರ್ಚೆ ಶುರುವಾಗುತಿತ್ತು, ಆ ದೊಡ್ಡು ಟೇಬಲ್ಲಿನಲ್ಲಿ ಸುಮಾರು ಇಪ್ಪತ್ತು ಜನರಾದರೂ ಕೂಡುತ್ತಿದ್ದೆವು, ಐದು ಜನ ವಿಷಯವಾಗಿ ಹತ್ತು ಜನ ವಿರೋಧವಾಗಿ ಇನ್ನುಳಿದವರು ಎರಡೂ ಕಡೆ ತಲೆಯಾಡಿಸಿ ಸರಿ ಮಾಡುತ್ತಿದ್ದರು,ಅಷ್ಟು ಸುಲಭವಾಗಿ ಯಾರೂ ಸೋಲುತ್ತಿರಲಿಲ್ಲ, ಊಟ ಮುಗಿದು ಎಂಜಲ ಕೈಯಿ ಒಣಗಿದರೂ ವಾದವಿವಾದಗಳೂ ನಡೆಯುತ್ತಿದ್ದವು, ಒಮ್ಮೊಮ್ಮೆ ಅಡುಗೆ ಮಾಡುವವರು ನಮ್ಮನು ಹೊರದೂಡುತ್ತಿದ್ದರು ಕೂಡ, ನೂರಕ್ಕೆ ತೊಂಭತ್ತು ಶೇಕಡ ಉಪಯೋಗವಿಲ್ಲದ್ದೇ ಚರ್ಚೆಯಾಗುತ್ತಿತ್ತು, ಹೆಸರುಗಳ ಮೇಲೆ, ನನ್ನೂರು ಚೆಂದವೋ ನಿಮ್ಮೂರು ಚೆಂದವೋ ಎಂದು ಇನ್ನೂ ಕೆಲವಕ್ಕೆ ತಲೆಬುಡವಿರುತ್ತಿರಲಿಲ್ಲ, ಇನ್ನ ಹತ್ತು ಪರ್ಸೆಂಟು ರಾಜಕೀಯ, ಭ್ರಷ್ಟಾಚಾರ, ಮದುವೆ-ಮುಂಜಿ, ದುಡಿಮೆ, ಸಾಹಿತ್ಯ ಎಂದು ತುಂಬಾ ದೊಡ್ಡ ದೊಡ್ಡ ವಿಷಯಗಳನ್ನು ಚರ್ಚಿಸಿದ್ದುಂಟು, ಸೋತದ್ದಕ್ಕೆ ನಾಳೆಗೆ ಸೇಡು ಇಟ್ಟುಕೊಂಡು, ಗೆದ್ದರೆ ಕೇಕೆ ಹಾಕಿಕೊಂಡು ತಟ್ಟೆ ತೊಳೆಯುತ್ತಿದ್ದೆವು.
ರಾತ್ರಿ ಎರಡು ಮೂರಾದರೂ ಮಲಗುತ್ತಲೇ ಇರಲಿಲ್ಲ, ಇಷ್ಟೊತ್ತು ಓದುವಂಥ ಸಾಹಸಕ್ಕೂ ಕೈ ಹಾಕುತ್ತಲೂ ಇರಲಿಲ್ಲ, ಗೆಳೆಯರ ಬಳಿ ಸಂಗ್ರಹಿಸಿಕೊಂಡಿರುತಿದ್ದ ಸಿನಿಮಾಗಳನ್ನೆಲ್ಲಾ ಒಂದರ ನಂತರ ಇನ್ನೊಂದು ನಿದ್ದೆ ಬಂದು ಬೀಳುವವರೆಗೆ ನೋಡುವುದರಲ್ಲೇ ತಲ್ಲೀನವಾಗುತ್ತಿದ್ದೆವು, ರಾತ್ರಿ ಎರಡು ಮೂರಕ್ಕೆ ನಿದ್ರೆಯಲ್ಲಿ ನಡೆಯುವವರನ್ನು, ನಿದ್ದೆಯಲ್ಲಿ ಬಡಬಡಿಸುತ್ತಿದ್ದವರನ್ನು, ಜೋರಾಗಿ ಗೊರಕೆ ಹೊಡಿಯುತ್ತಿದ್ದವರನ್ನು ನೋಡಿ ಹೊಟ್ಟೆ ಹಿಡಿದು ನಗುತ್ತಿದ್ದೆವು, ಅವನ್ನೆಲ್ಲಾ ಮೊಬೈಲಿನಲ್ಲಿ ವೀಡಿಯೊ ಮಾಡಿ ಅವರಿಗೇ ತೋರಿಸಿ ಸಿಟ್ಟು ಬರಿಸುತ್ತಿದ್ದೆವು.
ಬರಿ ಮಜವೊಂದೇ ಅಲ್ಲ ಪರೀಕ್ಷೆ ಬಂತೆದರೆ ರಾತ್ರಿಗಳನೆಲ್ಲಾ ಹಗಲಾಗಿಸಿ ಓದುತ್ತಿದ್ದೆವು, ರೂಮಿನಲ್ಲೇ ಹಾಲಿಲ್ಲದ್ದ ಚಹಾ ಮಾಡಿಕೊಂಡು ಕುಡಿದು ನಾಲಿಗೆ ಸವರಿ ಮತ್ತೆ ಓದು ಶುರು. ಮಲಗಿ ಓದುತ್ತಿದ್ದವರು, ತಿರುಗಾಡುತ್ತಾ ಓದುತ್ತಿದ್ದವರು, ಹಾಡು ಕೇಳುತ್ತಾ ಓದುತ್ತಿದ್ದವರು ನೋಡಲು ಅದೊಂಥರ ಚೆಂದ. ಲೆಕ್ಚರ್ರುಗಳು ನಾಲ್ಕು ತಿಂಗಳು ಹೇಳಿಕೊಡಲು ಕಷ್ಟಪಡುತ್ತಿದ್ದರೆ, ನಾವೆಲ್ಲಾ ಒಂದೇ ರಾತ್ರಿಯಲ್ಲಿ ಓದಿ ದಬ್ಬಾಕಿ ನಾವೇ ಗ್ರೇಟೆಂದು ಬೀಗುತ್ತಿದ್ದೆವು.
ಹಾಸ್ಟೆಲ್ ಲೈಫ್ ಒಂಥರಾ ಸ್ವರ್ಗವೆಂದೇ ಭಾವಿಸುತ್ತಿದ್ದೆವು. ನಮ್ಮದೇ ರಾಜ್ಯ ನಾವೇ ಸಾಮ್ರಾಟರು. ಅಲ್ಲಿ ನೂರಾರು ಕಥೆಗಳು, ನಕ್ಕು ಹೊಟ್ಟೆ ಹುಣ್ಣಾಗಿಸುವಷ್ಟಾದರೆ, ಕಣ್ಣು ಒದ್ದೆಯಾಗಿಸುವವೊಂದಿಷ್ಟು. ಒಬ್ಬರನ್ನೊಬ್ಬರು ಬಿಟ್ಟುಕೊಡಲಾರದಷ್ಟು ಗೆಳೆತನ.
ಓದು ಮುಗಿದು ಮನೆ ಸೇರಿದ ಮೇಲೆ ತುಂಬಾ ನೆನಪಾಗುತ್ತದೆ. ಗೆಳೆಯರ, ಆ ಲೈಫನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆಂದು ಅನ್ನಿಸದೇ ಇರದು…..








🙂 good one Pravara.
Still you have missed many things 😉 I think intentionally!!
Please cover them in next article:)
ನೆನಪುಗಳ ಝಲಕ್… ಇನ್ನೂ ವಿಸ್ತರಿಸಬಹುದಾಗಿತ್ತು ಪ್ರವರ ಜೀ… ನಾನು ಐದನೇ ತರಗತಿಯಲ್ಲಿ ಮನೆಬಿಟ್ಟು ಹಾಸ್ಟೆಲ್ ಸೇರಿದವನು, ಇನ್ನೂ ಕೂಡ ಮನೆ ಸೇರಿಲ್ಲ. ಜವಾಹರ್ ನವೋದಯ ವಿದ್ಯಾಲಯದಲ್ಲಿದ್ದಾಗಿನ ಹಾಸ್ಟೆಲ್ ಜೀವನ ಮರೆಯದ ಅನುಭವ. ಆದರೆ, ಅಲ್ಲಿನ ವ್ಯವಸ್ಥೆ ಬೇರೆಯದೇ ಆಗಿತ್ತು. ನೀವು ಹೇಳಿದಂತೆ ಅಲಾರಂ ಗೆ ಸ್ನೂಜ್ ಕೊಡುವಂತಿರಲಿಲ್ಲ. ಬೆಳಗ್ಗಿನ 5.30 ರ ಬೆಲ್(ನಂತರ ಸೈರೇನ್)ಗೆ ಎದ್ದು ಎದ್ದುಬಿದ್ದು ಗ್ರೌಂಡ್ ಗೆ ಓಡುತ್ತಿದ್ದೆವು. ಇಲ್ಲದಿದ್ದರೆ ಪಿ.ಇ.ಟಿ ಮಾಸ್ಟರ್ ಮಲಗಿದ್ದಲ್ಲಿಗೆ ಬಂದು ಒದೆಯುತ್ತಿದ್ದರು. ನಂತರ ಮೈಸೂರಿನ ಹಾಸ್ಟೆಲ್ ಗಳು. ಗೆಳೆಯರ ಗುಂಪಿನಲ್ಲಿ ಸುಂದರವಾದ ಅನುಭವ ನೀಡಿದರೂ, ಈಗಲೂ ಸಹ ಆ ಹಾಸ್ಟೆಲ್ ಗಳ ಕಡೆ ನಾನು ಮುಖ ಹಾಕುವುದಿಲ್ಲ. ಅವ್ಯವಸ್ಥೆಗಳ ಜೊತೆಗೆ ‘ಹಲ್ಕಟ್ ರಾಜಕೀಯ’. ಸರ್ಕಾರದ ಸವಲತ್ತುಗಳು ಸ್ಥಳೀಯ ರೌಡಿಗಳ ಟೆಂಡರ್ ಗಿರಿಯ ಪಾಲು. ಅವರು ಹಾಕಿದ್ದು ತಿನ್ನಬೇಕು. ವಿದ್ಯಾರ್ಥಿ ಮುಖಂಡರೆನಿಸಿಕೊಂಡವರೆಲ್ಲಾ ಅವರ ಚೇಲಾಗಳು. ಹೂ ಅಣ್ಣ, ಆ ಅಣ್ಣ ಎಂದುಕೊಂಡು ಅವರು ಹಿಂದೆ ಸುತ್ತುವ ನಾಯಿಗಳು. ಹಾಸ್ಟೆಲ್ ಗಳನ್ನು ಆಳುತ್ತಿದ್ದದ್ದು ರೌಡಿ ಶೀಟರ್ ಹಿನ್ನೆಲೆಯ ಟೆಂಡರ್ ಪಡೆದುಕೊಂಡವರು. ಕೆಲವೊಮ್ಮೆ ಅವರರಲ್ಲೇ ಹೊಡೆದಾಟ. ಸಮಾಜ ಸೇವಕರೆಂಬ ಮುಖವಾಡ, ಸ್ಥಳೀಯ ಶಾಸಕ, ಎಂ.ಪಿಗಳ ಬೇಸರತ್ ಬೆಂಬಲ. ಹೀಗಿದೆ ನೋಡಿ ಅ(ವ್ಯವಸ್ಥೆ)
Super.
ಚೆಂದದ ಲೇಖನ ಪ್ರವರ. ನಾನು ಹಾಸ್ಟೆಲ್ ನಲ್ಲಿ ಇದ್ದವನಲ್ಲ ಆದರೆ ಹಾಸ್ಟೆಲ್ ಜೀವನದ ಮಜಾ ಸವಿದಿಲ್ಲವೆಂದೇನಿಲ್ಲ. ನಾವು ಎನ್.ಐ.ಇ ಯಲ್ಲಿ ಓದುವಾಗ ಹಾಸ್ಟೆಲ್ ಗಳಲ್ಲಿ ಕಂಬೈಂಡ್ ಸ್ಟಡಿ ಮತ್ತು ನೈಟ್ ಔಟ್ ಗಳಿಗೆಲ್ಲಾ ಸೇರುತ್ತಿದ್ದುದುಂಟು. ಗೆಳೆತನದ ಮಜವನ್ನು ಕಾಲೇಜಿನಲ್ಲಿ ಸವಿದು ಹಾಸ್ಟೆಲ್ ಗಳಲ್ಲಿ ನೆಂಚಿಕೊಂಡಿದ್ದುಂಟು.
– ಪ್ರಸಾದ್.ಡಿ.ವಿ.