ಇಂದಿರಾ
![]()
ಅಪರ್ಣ ಸೇನ್ ರ “ಮಿ. ಅಂಡ್ ಮಿಸೆಸ್ ಅಯ್ಯರ್” ಚಿತ್ರ ನೋಡಿದಾಗ ಒಂದು ಪ್ರಶ್ನೆ ನನ್ನನ್ನು ತೀವ್ರವಾಗಿ ಕಾಡಿತು. ಮಿಸೆಸ್ ಅಯ್ಯರ್ ತನ್ನ ಸಹ ಪ್ರಯಾಣಿಕ ರಾಜಾಜಹಂಗೀರ್ ನನ್ನು “ಇದ್ದಕ್ಕಿದ್ದಂತೆ” ತನ್ನ ಗಂಡನೆಂದು ಒಪ್ಪಿಕೊಂಡಿದ್ದೇಕೆ? ಆ ಕ್ಷಣಕ್ಕೆ ಮೊದಲು ಸ್ಪಷ್ಟವಾಗಿ ಹೊಳೆದ ಕಾರಣ, ತನ್ನ ಸಹ ಪ್ರಯಾಣಿಕನನ್ನು ಸಾವಿನಿಂದ (ಕಗ್ಗೊಲೆ?) ಪಾರು ಮಾಡಬೇಕೆಂಬ ಮಿಸೆಸ್ ಅಯ್ಯರ್ ಳ ಸಹಜ ಮಾನವೀಯ ಕಾಳಜಿ. ಆಕೆ ರಾಜಾನ ಬಗ್ಗೆ ಇರುವ ತನ್ನ ಎಲ್ಲ ಅಸಹನೆಗಳ ಜೊತೆಗೂ ಅವನನ್ನು ರಕ್ಷಿಸುವ ಪ್ರಯತ್ನ ಮಾಡುತ್ತಾಳೆ. ಆಕೆಯ ಅಸಹನೆಯೆಂದರೆ ಮೂಲಭೂತವಾಗಿ ಆತ ಮುಸ್ಲಿಂ ಎನ್ನುವುದು. ತಾನು ಸಂಪ್ರದಾಯಸ್ಥ ಹಿಂದೂ ಅಯ್ಯರ್ ಹೆಣ್ಣುಮಗಳಾಗಿರುವುದು (ಅವನು ಕಚ್ಚಿ ಕುಡಿದ ನೀರಿನ ಬಾಟಲಿಯಿಂದ ನೀರು ಕುಡಿಯುವಾಗ ಅವಳು ಮುಖ ಸಿಂಡರಿಸಿಕೊಳ್ಳುವುದರಿಂದ ಈ ಭಾವನೆ ಹೆಚ್ಚು ಸ್ಪಷ್ಟವಾಗುತ್ತದೆ).

ಪ್ರಯಾಣದ ನಡುವೆ ಕೋಮು ಗಲಭೆ ಭುಗಿಲೆದ್ದಾಗ ಮೂಲಭೂತವಾದಿಗಳು ಬಸ್ ನಲ್ಲಿರುವ ಗಂಡಸರನ್ನಷ್ಟೇ ಬೇರ್ಪಡಿಸಿ ಪ್ರತಿಯೊಬ್ಬರನ್ನು (ಲಿಂಗ ಪರೀಕ್ಷಣೆಯೂ ಸೇರಿದಂತೆ) ಅವರು ಮುಸ್ಲಿಂ ಹೌದೇ ಅಲ್ಲವೇ ಎಂದು ನಖಶಿಖಾಂತ ಪರೀಕ್ಷೆಗೆ ಒಳಪಡಿಸಿದಾಗ ಮಿಸೆಸ್. ಅಯ್ಯರ್ “ಪ್ರಜ್ಞೆ” ಇದ್ದಕ್ಕಿದ್ದಂತೆ ಜಾಗೃತವಾಗುತ್ತದೆ. ತನ್ನ ಕೊಂಕಳಲ್ಲಿರುವ ತನ್ನ “ಮುದ್ದು” ಕಂದ ಸಂತಾನಂನನ್ನು ರಾಜಾನ ಕೈಗೆ ತುರುಕಿ, ಆತ ತನ್ನ ಗಂಡ ಅಯ್ಯರ್ ಎಂದೂ ತನ್ನ ಮಗುವಿನ ತಂದೆಯೆಂದೂ “ಕಟುಕ”ರಿಗೆ ಹೇಳುತ್ತಾಳೆ. ಅವರು ಅವಳ ಮಾತು ನಂಬಿ ರಾಜಾನನ್ನು ಬಿಟ್ಟು, ಬದುಕಿನ ಮುಸ್ಸಂಜೆಯಲ್ಲಿರುವ ಹಣ್ಣು ಹಣ್ಣು ಮುದುಕನನ್ನು “ವಧೆ”ಗಾಗಿ ಆರಿಸಿಕೊಳ್ಳುತ್ತಾರೆ.
ಈ ಅನಿಸಿಕೆಯ ಬೆನ್ನಲ್ಲೇ ಮತ್ತೊಂದು ಅನುಮಾನ ಕಾಡತೊಡಗಿತು. ಮೀನಾಕ್ಷಿ (ಮಿಸೆಸ್. ಅಯ್ಯರ್) ರಾಜಾನನ್ನು ನಿಜಕ್ಕೂ ಮಾನವೀಯ ಕಾಳಜಿಯಿಂದ ರಕ್ಷಿಸಿದಳೇ? ಆಕೆ ತನ್ನ ಸ್ವಾರ್ಥಕ್ಕಾಗಿ ಹಾಗೂ ತೀರಾ ವ್ಯಾವಹಾರಿಕ ಕಾರಣಗಳಿಗಾಗಿ ರಾಜಾನನ್ನು ತನ್ನ ಗಂಡನೆಂದು ಒಪ್ಪಿಕೊಂಡಳೇ?
ಈ ನನ್ನ ಅನಿಸಿಕೆಗಳಿಗೆ ಕಾರಣ ಇಲ್ಲದಿಲ್ಲ. ತರ್ಕಕ್ಕಾಗಿಯಾದರೂ ಯೋಚಿಸಿದರೆ; ಆಕೆ ತನಗೆ ಇದುವರೆಗಿನ ಪ್ರಯಾಣದಲ್ಲಿ ಸಹಾಯ ಮಾಡಿಕೊಂಡು ಬಂದ ರಾಜಾನನ್ನು ಕಳೆದುಕೊಳ್ಳಲು ಸಿದ್ಧವಿರಲಿಲ್ಲ. ಬಸ್ ನಲ್ಲಿ ಎಲ್ಲರೂ ಸಂತಾನಂ ಅವಾಂತರದಿಂದ ಮುಖ ಸಿಂಡರಿಸಿಕೊಂಡಾಗ ಆಕೆಯ ನೆರವಿಗೆ ಒದಗುವವನು ರಾಜಾ ಮಾತ್ರ.
ಚಿತ್ರ ಮುಂದುವರಿದಂತೆ ಒಂದು ಹಂತದಲ್ಲಿ ಅರಣ್ಯ ವಸತಿಗೃಹದಲ್ಲಿ ತಂಗಿದಾಗ ಕೋಮುಗಲಭೆ ಮಿಸೆಸ್ ಅಯ್ಯರ್ ಮತ್ತು ರಾಜಾ ಅವರ ತೀರಾ ಸಮೀಪಕ್ಕೆ ಬಂದು ನಿಂತು ಬಿಡುತ್ತದೆ. ಇದಕ್ಕೆ ಮುನ್ನ ರಾಜಾ ತಾನು ಅವರಿಬ್ಬರನ್ನು ಬಿಟ್ಟು ಹೊರಡುವ ತನ್ನ ತೀರ್ಮಾನವನ್ನು ಹೇಳುತ್ತಾನೆ. ಆಕೆ ಅವನನ್ನು ತಡೆದು, ತಾನು ತನ್ನ ಮಗ ಆ ಸಂದರ್ಭದಲ್ಲಿ ರಕ್ಷಣೆಗಾಗಿ ಅವನನ್ನೇ ಅವಲಂಬಿಸಿರುವುದಾಗಿ ಹೇಳುತ್ತಾಳೆ. ಆಗ ರಾಜಾಗೆ ಅವರಿಬ್ಬರನ್ನೂ ಬಿಟ್ಟು ಹೋಗಲಾರದಂಥ ಸ್ಥಿತಿ ನಿರ್ಮಾಣವಾಗುತ್ತದೆ. ಆ ಯೋಚನೆಯನ್ನು ಅವನು ಬಿಟ್ಟು ಬಿಡುತ್ತಾನೆ.
ಈ ಮಾತುಗಳ ಮೂಲಕ ಮೀನಾಕ್ಷಿಯು ರಾಜಾನನ್ನು ಉಳಿಸಲು ನಿಜವಾದ ಕಾರಣ ಅರ್ಥವಾಗುತ್ತದೆ. (ಆದರೆ ಅನಂತರ ನಡೆದ ಬೆಳವಣಿಗೆಯಲ್ಲಿ ಅವರಿಬ್ಬರ ನಡುವಿನ ಸಂಬಂಧ ಗಾಢವಾಗುತ್ತದೆ. ಆಗ ಅವರ ನಡುವೆ ಹೆಸರಿಸಲಾಗದಂಥ ಒಂದು “ತಂತು” ರೂಪುಗೊಳ್ಳುತ್ತದೆ. ಕೊನೆಯಲ್ಲಿ ಬೇರೆಯದೇ ಬೇರೆಯದೇ ಆದ ಒಂದು ಅನುಭೂತಿ ಕೊಡುವ ಈ ಚಿತ್ರ ರೈಲ್ವೆ ನಿಲ್ದಾಣದಲ್ಲಿ ಮೀನಾಕ್ಷಿ ತನ್ನ ಗಂಡನೊಂದಿಗೆ ಸೇರಿಕೊಂಡಾಗ ರಾಜಾ-ಮೀನಾಕ್ಷಿಯಿಂದ ದೂರ ಸರಿಯುವ ದೃಶ್ಯವನ್ನು ನೋಡುವಾಗ ಪ್ರೇಕ್ಷಕನಿಗೆ ತಾನೇ ಏನನ್ನೋ ಕಳೆದುಕೊಂಡ ಗಾಢ ಭಾವ ಸಹಜವಾಗಿಯೇ ಕಾಡುತ್ತದೆ ಎನ್ನುವುದು ಬೇರೆಯದೇ ಸಂಗತಿ). ಆದರೆ ಮೀನಾಕ್ಷಿಯ ಆ ಕ್ಷಣದ ಆಯ್ಕೆ ಮಾತ್ರ ನಮ್ಮ ಸದ್ಯದ ಗೊಂದಲಗಳಿಗೆ ಕನ್ನಡಿ ಹಿಡಿದಂತಿದೆ ಎನ್ನುವುದರಲ್ಲಿ ಮಾತ್ರ ಯಾವುದೇ ಅನುಮಾನವಿಲ್ಲ. ಗೋಧ್ರಾ ಘಟನೆಯ ಹಿನ್ನೆಲೆಯಲ್ಲಿ ಗುಜರಾತ್ ನಲ್ಲಿ ನಡೆದ ಸರ್ಕಾರಿ ಪ್ರಾಯೋಜಿತ ನರಮೇಧದ ಸಂದರ್ಭದಲ್ಲಿ ಶಿಕ್ಷಿತ ಮಧ್ಯಮವರ್ಗ ನರಮೇಧ ನಡೆಸಿದವರ ಪರವಾಗಿ ನಿಂತು, ಅದನ್ನು ಸಮರ್ಥಿಸಿಕೊಂಡದ್ದಕ್ಕೂ ಮೀನಾಕ್ಷಿಯ ಆಯ್ಕೆಗೂ ಸ್ಪಷ್ಟವಾದ ಕಾರಣಗಳು ಗೋಚರವಾಗುತ್ತವೆ. ಎರಡೂ ಹೆಚ್ಚೂ ಕಡಿಮೆ ಒಂದೇ ಎನಿಸುತ್ತದೆ.
ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಇನ್ನೂ ತೀರ್ಮಾನವಾಗದ ಕಾರಣಗಳಿಗೆ ೫೮ ಜನ “ಕರಸೇವಕರ” ಮಾರಣ ಹೋಮ ನಡೆದಾಗ, ಸಂಘ ಪರಿವಾರ ತನ್ನ ಶಿಕ್ಷಿತ ಮಧ್ಯಮ ವರ್ಗದ ಸಹಕಾರದೊಂದಿಗೆ ಮುಸ್ಲಿಂ ಜನಾಂಗದ ಮೇಲೆ ರಣಹದ್ದುಗಳಂತೆ ಎರಗಿತು. ಇದು ಎಲ್ಲ ವಿಚಾರಣಾ ಆಯೋಗದಲ್ಲೂ ರುಜುವಾತಾದ ಸತ್ಯ. (ಈ ಸತ್ಯಕ್ಕೆ ಕನ್ನಡಿ ಹಿಡಿಯುವ “ಫೈನಲ್ ಸಲ್ಯೂಷನ್ಸ್”ನಂಥ ಚಿತ್ರದ ಪ್ರದರ್ಶನಕ್ಕೆ ಸಂಘ ಪರಿವಾರ ಬೆಂಗಳೂರಲ್ಲಿ ಅಡ್ಡಿ ಪಡಿಸಿದ್ದು ನೆನಪಾಗುತ್ತದೆಯೇ?) ಈ ನರಮೇಧಕ್ಕೆ ಮೋದಿ ನೇತೃತ್ವದ ಸರ್ಕಾರ ಮೂಕಪ್ರೇಕ್ಷಕನಂತೆ ವರ್ತಿಸಿತು. ಜನರ ರಕ್ಷಣೆಗೆ ಮುಂದಾಗಬೇಕಾದ ಪೊಲೀಸರು ಅವರ ಕೊಲೆಗೆ ಮುಖ ತಿರುಗಿಸಿ ನಿಂತರು. (ಗೋವಿಂದ ನಿಹಲಾನಿ ಅವರ “ದೇವ್” ನೆನಪಾಗುವುದೇ? ರಕ್ಷಣೆಗೆ ಧಾವಿಸದಂತೆ ಗೋಡೆಯಾಗಿ ನಿಲ್ಲುವ ಓಂಪುರಿ ಕಣ್ಣ ಮುಂದೆ ಪ್ರತ್ಯಕ್ಷವಾಗುವುದಿಲ್ಲವೇ?) ನರಮೇಧದ ನಂತರ ಹಿಂದೂ ವೈದ್ಯರು ಮುಸ್ಲಿಂ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರು. ಹಿಂದೂ ವಕೀಲರು ಅವರ ಪರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಸಾಧ್ಯವಿಲ್ಲ ಎಂದರು. ಈ ಕೋಮುಗಲಭೆಯಲ್ಲಿ ನೊಂದ ಮುಸ್ಲಿಂರಿಗೆ ಪರಿಹಾರ ಪಡೆದುಕೊಳ್ಳುವುದು ಕೂಡ ಕಷ್ಟವಾಯಿತು. ಆಗ ಕೇಳಿಸಿದ್ದು ಕೇವಲ ನೋವಿನ ಆಕ್ರಂದನ ಮಾತ್ರ. ಇವೆಲ್ಲ ನಡೆದ ನಂತರ ಕೆಲವು ನಾಯಕರು ಹಿಂದೂ ರಾಷ್ಟ್ರ, “ಸಾಂಸ್ಕೃತಿಕ ರಾಷ್ಟ್ರೀಯತೆ”, “ಹಿಂದೂ ಗೌರವ್” ಮುಂತಾದ ಹೇಳಿಕೆಗಳ ಮೂಲಕ ಮತಯಾಚನೆಗೆ ಮುಂದಾದಾಗ ನಮ್ಮ ಮಧ್ಯಮವರ್ಗದಲ್ಲಿ ಮಾನವೀಯ ಸಹಜವಾದ ಯಾವುದೇ ತಲ್ಲಣ ಕಾಣಿಸಲಿಲ್ಲ. ಈ ರೀತಿಯಲ್ಲಿ ಕೋಮುಭಾವನೆಗಳಿಗೆ ಕಿಚ್ಚಿಕ್ಕುವ ಮಂದಿ ಕೆಲವರು ಇರಬಹುದು. ಅವರು “ಅಲ್ಪಸಂಖ್ಯಾತರು”. ಘಟನೆಯ ನಂತರ ಅಂಥವರು ಮಂಗಮಾಯವಾಗುತ್ತಾರೆ. ಆದರೆ ಈ “ಅಲ್ಪಸಂಖ್ಯಾತರೇ” ಬಹುಸಂಖ್ಯಾತರೇನೋ ಎಂಬ ಭಾವನೆ ಮಧ್ಯಮ ವರ್ಗದಲ್ಲಿ (ದಿ ಗ್ರೇಟ್ ಇಂಡಿಯನ್ ಮಿಡ್ಲ್ ಕ್ಲಾಸ್) ದಟ್ಟವಾಗಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಮಿಸೆಸ್. ಅಯ್ಯರ್ ಳಲ್ಲಿ ಕಾಣಿಸುವ ದ್ವಂದ್ವ ನಾವು (ಇಲ್ಲಿ ನಾವು ಎನ್ನುವುದರ ಅರ್ಥ, ಶಿಕ್ಷಿತ ಮೇಲ್ಜಾತಿ ಮಂದಿ ಹಾಗೂ ಮಿಸೆಸ್ ಅಯ್ಯರ್ ಸೇರಿದ ಹಿಂದೂ ಮಧ್ಯಮವರ್ಗ) ಎದುರಿಸುತ್ತಿರುವ ಸಮಸ್ಯೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ನಾವೂ ಕೂಡ ತೀರಾ ಆತಂಕದ ಕ್ಷಣಗಳಲ್ಲಿ “ನಮ್ಮೊಳಗು” ನಮ್ಮನ್ನು ಪ್ರಶ್ನಿಸಿದಾಗ, ಈ ಫ್ಯಾಸಿಸ್ಟ್ ಶಕ್ತಿಗಳನ್ನು ವಿರೋಧಿಸುತ್ತೇವೆ. ಹಾಗಾಗೇ ಈಗಲೂ ನನ್ನನ್ನು ಕಾಡುತ್ತಿರುವ ಪ್ರಶ್ನೆ ಮಿಸೆಸ್. ಅಯ್ಯರ್ ರಾಜಾನನ್ನು ರಕ್ಷಿಸಲು ನಾನು ಕೊಟ್ಟ ಎರಡು ಕಾರಣಗಳ ಪೈಕಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದು. ಅಂಥ ಸಂದರ್ಭಗಳಲ್ಲಿ ನಮ್ಮ ನಿಲುವು ನಿಜವಾದ ಮಾನವೀಯ ಕಾಳಜಿಯಾಗಿರುವುದು ಎಷ್ಟರ ಮಟ್ಟಿಗೆ ಸತ್ಯ? (ನಿಷ್ಕಾರುಣವಾಗಿ ಯಾರನ್ನು ಯಾರೂ ರಕ್ಷಿಸಿಲ್ಲ ಎಂದು ನನ್ನ ವಾದವಲ್ಲ. ಆದರೆ ಸಾರ್ವತ್ರೀಕರಣವಾದ ದೃಷ್ಟಿಯಲ್ಲಿ ಅಂಥದ್ದು ಬೆರಳೆಣಿಕೆಯಷ್ಟು.) ಈ ಪ್ರಶ್ನೆಗೆ ಉತ್ತರಿಸಲು ನನಗೇ ನಿಜವಾಗಿ ಭಯವಾಗುತ್ತದೆ.
ಇಂದಿನ ಸಂದರ್ಭದಲ್ಲಿ “ಧರ್ಮ ನಿರಪೇಕ್ಷತೆ”, “ಸಹನೆ”, “ಮಾನವ ಹಕ್ಕುಗಳು” ಮುಂತಾದ ಪದಗಳನ್ನು ಬರೆಯಲೂ ಭಯವಾಗುತ್ತದೆ. ಇವುಗಳಿಗೆ ಸಂಘ ಪರಿವಾರ ತನ್ನದೇ ಆದ ಅರ್ಥಗಳನ್ನು ಸೃಷ್ಟಿಸಿಬಿಟ್ಟಿದೆ. ಸಂಘ ಪರಿವಾರವನ್ನು ಬೆಂಬಲಿಸದ ಬುದ್ಧಿಜೀವಿಗಳೂ ಕೂಡ ಈ “ಆಲೋಚನೆ”ಗಳೇ ಪಾಶ್ಚಿಮಾತ್ಯರಿಂದ ಕಡ ಪಡೆದುಕೊಂಡದ್ದೆಂದು ವಾದಿಸತೊಡಗಿದ್ದಾರೆ. ಈ ಪದಗಳ ಬಳಕೆ “ದೇಶ ವಿರೋಧಿ” ಅಲ್ಲದಿದ್ದರೂ ಇದರ ಬಳಕೆ ಪೆದ್ದುತನದ ಸಂಕೇತವಾಗಿ ಕಂಡರೂ ತಪ್ಪಲ್ಲ. (ಇದರ ಜೊತೆಗೆ ನಮ್ಮ ಅಥವಾ ನನ್ನ ಪೊಲಿಟಿಕಲ್ ಕರೆಕ್ಟ್ ನೆಸ್ ನ ಅಹಂನ್ನು ಮೆಚ್ಚಿಸಲು ಇಂಥ ಪದಗಳನ್ನು ಬಳಸುತ್ತಿದ್ದೇವೇನೋ ಎಂಬ ಮತ್ತೊಂದು ಭಯವೂ ಕಾಡುತ್ತದೆ). ಹಾಗಾಗಿ ನಮ್ಮೊಂದಿಗೇ ಬದುಕುತ್ತಿರುವ “ಸಹ ಜೀವಿಗಳ” ಬೆಂಬಲಕ್ಕೆ ನಿಲ್ಲಲಾರದಂಥ ಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಅವರು ಅವರ ಧರ್ಮ ಮತ್ತು ಸಂಸ್ಕೃತಿಯನ್ನು ಆಶ್ರಯಿಸಿ ಬದುಕಲಿ ಎಂದು ಹೇಳುವುದೂ ಕೂಡ ಕಷ್ಟವಾಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದು ಧರ್ಮದವರ ಸಹಬಾಳ್ವೆ ಅಸಹನೀಯ ಎನ್ನುವಂಥ ಸ್ಥಿತಿಗೆ ನಾವು ಇಂದು ತಲುಪಿದ್ದೇವೆ. “ಹಿಂದುತ್ವ” – ಇಂದು ಕಲ್ಚರಲ್ ನಾಷನಾಲಿಸಮ್ ಎಂಬ ಹೊಸ “ಅರ್ಥ”ದೊಂದಿಗೆ ಬಳಕೆಯಾಗುತ್ತಿದೆ. ಪ್ರಜಾಪ್ರಭುತ್ವದ ಮೂಲತತ್ವಗಳು ಅರ್ಥ ಕಳೆದುಕೊಳ್ಳುತ್ತಿವೆ. ಹಾಗಾಗಿ ನಮ್ಮ ಆಯ್ಕೆ ಮಿಸೆಸ್. ಅಯ್ಯರ್ ಳ ಎರಡನೇ ಆಯ್ಕೆಗೆ ಹೆಚ್ಚು ಹೊಂದಾಣಿಕೆಯಾಗುತ್ತಿದೆ. ನಮ್ಮ ಸಹಜೀವಿಗಳ ಬೆಂಬಲಕ್ಕೆ ನಿಲ್ಲುವುದರ “ಲಾಭ”ವನ್ನು ಲೆಕ್ಕ ಹಾಕುವಂಥ ಸ್ಥಿತಿ ನಮ್ಮದಾಗಿದೆ. ನಮ್ಮ ಎಲ್ಲ ಭಾವುಕತೆಯನ್ನೇ ಮಾರುಕಟ್ಟೆ ಸಂಸ್ಕೃತಿಯ ಹಿನ್ನೆಲೆಯಲ್ಲಿ ಆರ್ಥಿಕ ಉದಾರೀಕರಣದ ಮೂಲಕ ನೋಡಬೇಕಾದ ಅನಿವಾರ್ಯತೆ ಎದುರಾಗಿದೆ.
ಕೋಮುಗಲಭೆಗಳಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಕೊಲೆ ಮತ್ತು ಮಾನಭಂಗಗಳಿಂದ ದೇಶದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಕೋಮುಗಲಭೆಗಳಿಂದ ದೇಶದ ಅಭಿವೃದ್ದಿ ಕುಂಠಿತವಾಗುತ್ತದೆ. ವಿಶ್ವ ವ್ಯಾಪಾರ ಸಂಘದೊಂದಿಗೆ ವ್ಯಾಪಾರ-ವ್ಯವಹಾರ ಕುದುರಿಸಲು ತೊಂದರೆಯಾಗುತ್ತದೆ ಎಂಬ ನಂಬಿಕೆ ಚಾಟ್ಸ್, ಗ್ರಾಫ್ಸ್, ಚಿತ್ರಗಳು, ಎಕ್ಸಿಕ್ಯೂಟೀವ್ ಸಮ್ಮರಿಗಳು, ಇಂದು ಮಾನವೀಯ ಘನತೆ ಮತ್ತು ನ್ಯಾಯದ ಜಾಗವನ್ನು ಆಕ್ರಮಿಸಿಕೊಂಡು ಕೂತಿವೆ.
ಈ ಹಿನ್ನೆಲೆಯಲ್ಲಿಯೇ ಮಿಸೆಸ್. ಅಯ್ಯರ್ ಗೆ ತನ್ನ ದೀರ್ಘ ಕಷ್ಟಕರ ಪ್ರಯಾಣವನ್ನು ಪೂರ್ಣಗೊಳಿಸಲು ಮಿಸ್ಟರ್ ಅಯ್ಯರ್ ನೆರವು ಬೇಕಾಯಿತೇ? ಎಂಬ ಪ್ರಶ್ನೆ ನನ್ನನ್ನು ಕಾಡಿದ್ದು.
ಪ್ರಶ್ನೆ ಕ್ಲಿಷ್ಟ.
ಉತ್ತರವೂ ಕ್ಲಿಷ್ಟ. ಆದರೆ ನನ್ನ ಮಟ್ಟಿಗಂತೂ ಸ್ವೀಕಾರಾರ್ಹ.
———————————————–
ಹಂಗಾಮದಲ್ಲಿ ಪ್ರಕಟವಾಗಿದ್ದ ಈ ಬರಹವನ್ನು, ಇದು ಎತ್ತುವ ಭಿನ್ನ ಧ್ವನಿಯ ಪ್ರಶ್ನೆಯ ಕಾರಣಕ್ಕಾಗಿ ಇಲ್ಲಿ ಕೊಡುತ್ತಿದ್ದೇವೆ. ಚರ್ಚೆಯನ್ನು ಹೊಸ ದಿಕ್ಕಿನಲ್ಲಿ ಬೆಳೆಸುವ ಆಸೆಯಿಂದ. ಇದೇ ಚಿತ್ರಕ್ಕೆ ಇನ್ನೂ ಹೆಚ್ಚಿನ ವ್ಯಾಪ್ತಿಯಲ್ಲಿ ಪ್ರತಿಕ್ರಿಯಿಸಿರುವ ಮತ್ತೊಂದು ರಚನೆ ಇದೆ. ಅದನ್ನೂ ಇದೇ ಪುಟದಲ್ಲಿ ಕೊಡಲಿದ್ದೇವೆ. ನಿರೀಕ್ಷಿಸಿ.





ಸ್ವಾರ್ಥವಿಲ್ಲದೆ ಏನೂ ಹುಟ್ಟಲಾರದು. ಪ್ರೀತಿ ಕೂಡ.
ಬಹಳ ಬಾರಿ ಪ್ರೀತಿಗೆ ಮದುವೆ (ಅಥವಾ) ಮತ್ತದರ ಮುಂದಿನ ಸ್ವಾರ್ಥ ಇರುತ್ತದೆಯೆನ್ನುವುದು ಸ್ಪಷ್ಟ. ಮಿಸೆಸ್ ಐಯ್ಯರ್ ತನಗೆ ಸಹಕಾರ ನೀಡದೆ ಸುಮ್ಮನೆ ಕುಳಿತಿರುತ್ತಿದ್ದ ಬೇರೆ ಯಾರನ್ನೂ ಹಾಗೆ ಸೇವ್ ಮಾಡುತ್ತಿದ್ದಳು ಅಂತ ನನಗೆ ಅನಿಸುವುದಿಲ್ಲ. ಹಂಗಾಮಾದ ರೆಗ್ಯುಲರ್ ರೀಡರ್ ಆಗಿದ್ದಾಗ ಇದನ್ನ ಈ ದೃಷ್ಟಿಯಲ್ಲಿ ಓದಿದ್ದು ಮರೆತುಹೋಗಿತ್ತು. ಮೊನ್ನೆ ಎರಡನೇ ಬಾರಿಗೆ ‘….ಐಯ್ಯರ್’ ನೋಡುವಾಗ ಹೆಣ್ಣು ಮನಸ್ಸಿನ ಸೂಕ್ಷ್ಮತೆಗಳು ವಿಪರೀತ ಕಾಡಿದ್ದು ನಿಜ. ಅಚ್ಚರಿಯೆಂಬಂತೆ ಈಗ ಅವಧಿಯಲ್ಲಿ ಅದೇ ನಿಟ್ಟಿನ ಬರಹ! ಮತ್ತಷ್ಟು ಚಿಂತನೆಗೆ ಕುಮ್ಮಕ್ಕು ಕೊಟ್ಟಿದ್ದಕ್ಕೆ ಧನ್ಯವಾದ.
-ಚೇತನಾ ತೀರ್ಥಹಳ್ಳಿ.