
ಸಿದ್ದು ಪಿನಾಕಿ
ದಿನಕ್ಕೆ 12ರಿಂದ 14 ಗಂಟೆ ಆಫೀಸಿನಲ್ಲೇ ಕಳೆದುಹೋಗ್ತಿತ್ತು. ಮದುವೆಗೆ ಮುಂಚೆ, ಶನಿವಾರ ಬಂತೂ ಅಂದ್ರೆ ಅದೇನೋ ಖುಷಿ.
ಸದಾ ಕಾಲಿಗೆ ಚಕ್ರ ಕಟ್ಟಿಕೊಂಡೇ ಇರುವ ನನ್ನನ್ನು ಪರಸಪ್ಪ, ಜಗ್ಗಣ್ಣ ಹಿಂಬಾಲಿಸುತ್ತಲೇ ಇದ್ದರು. ಬಂಡೀಪುರ, ಬಿಳಿಗಿರಿ ರಂಗನ ಬೆಟ್ಟ, ಕೆ.ಗುಡಿ, ನಾಗರಹೊಳೆ, ಕಬಿನಿ ಬ್ಯಾಕ್ ವಾಟರ್ ಪ್ರದೇಶದ ದಟ್ಟ ಕಾನನ. ಅಬ್ಬಾ, ಆ ಕಾಡಿನ ಬಗ್ಗೆ ನನಗೆ ತಿಳಿದಷ್ಟು, ಅಲ್ಲಿನ ವಾಚರ್ ಗಳಿಗೂ ಗೊತ್ತಿಲ್ಲವೇನೋ. ಶನಿವಾರ ಸಂಜೆ ವೇಳೆಗೆ ಹೊರಟರೆ, ಮಂಡ್ಯದಲ್ಲಿ ಮನೆಗೆ ಹೋಗಿ, ಒಂದ್ಹತ್ತು ನಿಮಿಷ ಕಳೆದು, ಮತ್ತೆ ಹೈವೇಯಲ್ಲಿ ಕಾರು ಓಡಿಸುತ್ತಿದ್ದೆವು. ಕಬಿನಿಯಲ್ಲಿ ಬುಡಕಟ್ಟು ಜನರ ಮಕ್ಕಳೊಂದಿಗೆ ಕಳೆಯುವ ದಿನಗಳೇ ಅತ್ಯಮೂಲ್ಯ. ನಮಗೆ ಬೆಂಗಳೂರು ನೆನಪಾಗುತ್ತಿದುದು ಸೋಮವಾರ ಬೆಳಕು ಕಂಡಾಗಲೇ.
ಕೆಲವೊಮ್ಮೆ, ಆ ಸೋಮವಾರವನ್ನೂ ಯಾವುದೋ ಕಾರಣ ನೀಡಿ, ತಮ್ಮ ಕಾಡಿನ ಒಡಲೊಳಗೆ ಸೇರಿಸಿಕೊಂಡುಬಿಡುತ್ತಿದ್ದೆವು. ಈ ಕಾಡು ಸುತ್ತುವ, ವೈಲ್ಡ್ ಲೈಫ್ ಫೋಟೋಗ್ರಫಿಯ ಹುಚ್ಚುತನದ ಬಗ್ಗೆ ನನ್ನ ಪತ್ನಿ ರಾಜೇಶ್ವರಿಗೂ ಚೆನ್ನಾಗೇ ಗೊತ್ತಿತ್ತು. ಮದುವೆ ಆದ ಮೇಲೆ, ಆಕೆಯೂ ಕಾಲಿಗೆ ಚಕ್ರ ಕಟ್ಟಿಕೊಂಡಳು. ಅದೇ ಬಿಳಿಗಿರಿ ಬನ, ಬಂಡೀಪುರ, ಕಬಿನಿ, ಅಲ್ಲಿಂದಾಚೆ ಕೇರಳದ ವೈನಾಡು ಕಾಡು ಸುತ್ತಿದೆವು. ಮಗ ಬಂದ ಮೇಲೂ ಕಾಲಿನ ಚಕ್ರ ತಿರುಗುತ್ತಲೇ ಇದೆ.ಎರಡು ವರುಷಕ್ಕಾಗಲೇ, ಆತ ಮೂರು ರಾಜ್ಯಗಳ ಕಾಡು ಮೇಡು ಸುತ್ತಿದ್ದಾನೆ.
ನನ್ನಂತೆಯೇ, ಅವನಿಗೂ ಅರ್ಜುನ ( ದಸರಾ ಅಂಬಾರಿ )ನನ್ನು ಕಂಡರೆ, ತಬ್ಬಿಕೊಳ್ಳುವಷ್ಟು ಪ್ರೀತಿ. ನಾನು ಒಮ್ಮೆಮ್ಮೆ ಹೇಳುತ್ತಿರುತ್ತೇನೆ. ಇವನನ್ನ ಬೇಬಿ ಸಿಟ್ಟಿಂಗ್ ಗೆ ಸೇರಿಸೋದಿಲ್ಲ. ಬಳ್ಳೆ ಅರಣ್ಯದಲ್ಲಿ ಮಾವುತರೊಂದಿಗೆ ಬಿಟ್ಟು ಬರುತ್ತೇನೆ. ಒಂದೆರಡು ವರುಷ ಕಾಡಿನಲ್ಲಿರಲಿ. ಆಮೇಲೆ, ಸ್ಕೂಲು ಅಂತ. ನನ್ನ ಪತ್ನಿ ರಾಜೇಶ್ವರಿ ಗುರ್ ಅಂತಾಳೆ.
ಮೊನ್ನೆ, ಮಗನನ್ನು ಬೇಬಿ ಸಿಟ್ಟಿಂಗ್ ಸೇರಿಸೋಣ ಅಂತಾ ವಿಚಾರಿಸಲು ಹೋಗಿದ್ದೆ. ಒಂದು ಲಕ್ಷ ರೂ ಡೊನೇಷನ್ ಕೇಳಿದರು. ನಾನು ಮಾಧ್ಯಮದವನು ಎಂದು ತಿಳಿದ ಮೇಲೆ, ಕೇವಲ ಹಲ್ಲು ಗಿಂಜಿ ಕಾಫಿ ತರಿಸಿಕೊಟ್ಟಷ್ಟೇ ಲಾಭ. ಡೊನೇಷನ್ ನಲ್ಲಿ ಎಂಟಾಣೆಯೂ ಕಮ್ಮಿ ಇಲ್ಲ ಎಂಬುದು ಅಲ್ಲಿಗೆ ಹೋಗುವ ಮುನ್ನವೇ ಗೊತ್ತಿತ್ತು. ಕಬಿನಿ ಹಿನ್ನೀರಿಗೆ ಹೋಗಿ ಒಂದು ತಿಂಗಳಾಗ್ತಾ ಬಂತು. ಕಾಲು ಕೆರೆಯುತ್ತಲೇ ಇದೆ. ಅತ್ತ ಮುಖ ಮಾಡಿದ್ರೆ, ಹೆಂಡತಿ ಗುರ್ ಅಂತಾಳೆ.
ಮೊನ್ನೆ ರಾಜಾಜಿನಗರದ ನನ್ನ ಮೆಚ್ಚಿನ ಪುಸ್ತಕದದಅಂಗಡಿ ಆಕೃತಿಗೆ ಹೋಗಿ ಒಂದಷ್ಟು ಪುಸ್ತಕ ತಂದೆ. ಓದೋಕೆ ಟೈಮಿಲ್ಲ. ಮನೆಗೋದರೆ ಸಾಕು, ಮಗ, ಕಾಡಿಗೆ ಹೋಗೋಣ್ವಾ ಪಪ್ಪಾ ಅಂತಾ ತೊದಲುತ್ತಾನೆ. ನನ್ನ ಹೆಂಡತಿ ಹಣೆ ಚಚ್ಚಿಕೊಂಡು, ಅಡುಗೆ ಮನೆಗೆ ಹೋಗುತ್ತಾಳೆ. ಫೋನ್ ರಿಂಗಾಗುತ್ತೆ. ಸುಲ್ತಾನ್ ಬತ್ತೇರಿ ದಾರಿಯಲ್ಲಿರುವ ಮೂಲೆಹೊಳೆ ಅರಣ್ಯದಿಂದ ಪ್ರೀತಿಯ ಗೆಳೆಯ ಅರಣ್ಯಾಧಿಕಾರಿ ಅನಿಲ ಫೋನ್ ಮಾಡಿ, ಅಣ್ಣಾ ಒಳ್ಳೇ ಮಳೆ ಬಿದ್ದಿದೆ ಅಂತಾನೆ. ಕಾಡಿಗೆ ಹೋಗೋಕೆ, ಕಾರಣ ಹುಡುಕುತ್ತಿದ್ದೇನೆ. ನಾ ತಂದ ಪುಸ್ತಕಗಳ ವಾಸನೆ ಇನ್ನೂ ಘಮ ಘಮಿಸುತ್ತಲೇ ಇದೆ.





0 Comments